ಅಂದು ಬೆಳಗಿನ ಉಪಾಹಾರಕ್ಕೆ ಸಿದ್ದ ಮಾಡುತ್ತಿದ್ದೆ. ಅದಾಗಲೇ ನಿತ್ಯದ ಯೋಗಾಭ್ಯಾಸ ಮುಗಿಸಿ ಯಾವುದೋ ನಶೆ ಹಿಡಿದವನಂತೆ ಇದ್ದೆ. ಕಾರಣ ಎಂದೂ ಇಲ್ಲದ ಅದ್ಭುತ ಅನುಭವದ ಗುಂಗಿನಲ್ಲೇ ಇದ್ದೆ. ಇದೇನು ವಿಶೇಷವಲ್ಲ. ಅಂದು ಏನು ಮಾಡಬೇಕು ಎಂಬ ಯೋಚನೆ ಮೊದಲೇ ಯೋಚಿಸಿಲ್ಲ. ಆದರೆ ಅಡುಗೆ ಕೋಣೆ ಹೊಕ್ಕಿದಾಕ್ಷಣ ಉಪ್ಪಿಟ್ಟು ಮಾಡಿ ದೊಡ್ಡಪ್ಪ ಅಂತ ಮಗಳು ಗೋಗರೆದಾಗ ಸರಿ ಅದನ್ನೇ ಮಾಡೋಣ ಎಂದುಕೊಂಡೆ. ಯಾಕೆಂದರೆ ಒಬ್ಬರಾದರೂ ಗ್ರಾಹಕರು ಇದ್ದರೆ ಕದಮುಚ್ಚಿದ ಅಂಗಡಿಯನ್ನಾದರೂ ತೆರೆದು ಸಾಮಾಗ್ರಿ ಕೋಡೋಣ ಎಂಬ ಪ್ರಚೋದನೆ ಎಂಥವನಿಗಾದರೂ ಬಂದೆ ಬರುತ್ತದೆ. ಅದಕ್ಕೆ ಕೇವಲ ವ್ಯವಹಾರದ ಲಾಭವಲ್ಲ. ಅದು ಮನಸ್ಸಿಗೆ ಕೊಡುವ ತೃಪ್ತಿಯೇ ಬೇರೆ. ಪಾಜಕ ಕೆಲಸವನ್ನು ಹವ್ಯಾಸವಾಗಿಯೋ ಅನಿವಾರ್ಯ ವೃತ್ತಿಯಾಗಿಯೋ ಮಾಡಿಕೊಂಡವರಿಗೆ ಇದರ ಆಳ ಬಹಳ ಅರ್ಥವಾಗುತ್ತದೆ. ಒಬ್ಬರಾದರೂ ಹಪ ಹಪಿಕೆಯಲ್ಲಿ ನಿರೀಕ್ಷಿಸುತ್ತಾರೆ ಎಂದಾಕ್ಷಣ ನಾವು ಮಾಡುವ ವೃತ್ತಿಯಲ್ಲಿ ಹೆಚ್ಚು ಬದ್ದತೆ ತಾನಾಗಿ ಮೂಡಿಬರುತ್ತದೆ. ಬೇರೆ ಯಾವುದೋ ತಿಂಡಿಯನ್ನು ಇದಕ್ಕಿಂತಲೂ ರುಚಿಯಾದ ನನಗಿಷ್ಟವಾದ ತಿಂಡಿಯನ್ನು ಮಾಡಬಹುದಿತ್ತು, ಆದರೆ ಅದು ಕೇವಲ ನನಗಷ್ಟೇ ಸಂತೃಪ್ತಿಯನ್ನು ಕೊಡಬಹುದು. ಆದರೆ ಆಕೆಯ ಉಪ್ಪಿಟ್ಟಿನ ಬಹಯಕೆ ಹಾಗೇ ಉಳಿದುಬಿಟ್ಟರೆ ಅಲ್ಲಿ ನನಗಿಷ್ಟವಾದ ತಿಂಡಿ ಯಾವುದೇ ಆಗಿರಲಿ ಅದು ಪೂರ್ಣ ತೃಪ್ತಿಯನ್ನು ಒದಗಿಸಲಾರದು. ಎಂತಹ ಗಡಿಬಿಡಿಯ ಹೊತ್ತಿನಲ್ಲೂ ಆಕೆಯ ಆಶೆಗಳನ್ನುಸಹಜವಾಗಿ ಪೂರೈಸುವವ ನನಗೆ ಉಪ್ಪಿಟ್ಟು ಉತ್ತಮ ಅಂತ ಅನ್ನಿಸಿಬಿಟ್ಟಿತು. ಅಯಾರಾದರೂ ನಮ್ಮ ಕೃತಿಯ ನಿರೀಕ್ಷೆಯಲ್ಲಿ ಇದ್ದರೆ ಅದನ್ನು ಪೂರೈಸುವುದರಲ್ಲಿ ಒಂದು ಬಗೆಯ ತೃಪ್ತಿ. ಒಬ್ಬ ಪಳಗಿದ ಅಡುಗೆಯವನು ದಿನವಿಡೀ ಕೆಲಸ ಮಾಡಿ ಸುಸ್ತಾದರೂ ಯಾರದರೂ ಒಬ್ಬ ಬಂದು ಇಷ್ಟವಾದ ತಿಂಡಿಯ ಬಯಕೆಯನ್ನು ಹೇಳಿದರೆ ನಡುರಾತ್ರಿಯಾದರೂ ಅದನ್ನು ಮಾಡಿಕೊಟ್ಟು ಬಿಡುವ ಎಂಬ ಉತ್ಸಾಹ ಪುಟಿದೆದ್ದುಬಿಡುತ್ತದೆ. ಮೊದಲೇ ಬೆಳಗ್ಗಿನ ಅತ್ಯುತ್ಸಾಹದಲ್ಲಿದ್ದ ನನಗೆ ಮತ್ತೆ ಕೇಳಬೇಕೆ.
ಉಪ್ಪಿಟ್ಟು ತಯಾರಿ ನನ್ನದೇ ಒಂದು ವಿಧಾನ ಇದೆ. ಯಾವುದೇ ತಿಂಡಿಯಾದರೂ ಅತ್ಯಂತ ತ್ವರಿತವಾಗಿ ಮಾಡುವ ಶೈಲಿ ನನ್ನದು. ಸಾಮಾನ್ಯವಾಗಿ ಒಂದು ಘಂಟೆಗೆ ಊಟ ಮಾಡಬೇಕಿದ್ದರೆ ಅರ್ಧ ಘಂಟೆ ಮೊದಲು ಅಡುಗೆ ತಯಾರಿಗೆ ತೊಡಗುತ್ತೇನೆ. ಯಾವುದೇ ಮಾಡುವುದಿದ್ದರೂ ಅದಕ್ಕೊಂದು ಸಣ್ಣ ಯೋಜನೆ ಮೊದಲೇ ಸಿದ್ದವಾಗಿಬಿಡುತ್ತದೆ. ಹಾಗೇ ಉಪ್ಪಿಟ್ಟನ್ನು ಮಾಡುತ್ತಿದ್ದೆ. ಮೇಲುನೋಟಕ್ಕೆ ಉಪ್ಪಿಟ್ಟು ಒಂದು ಯಕಃಶ್ಚಿತ್ ಸಾಮಾನ್ಯ ಉಪಾಹಾರ. ಹೆಚ್ಚಿನ ಮನೆಗಳಲ್ಲಿ ಏನೂ ಮಾಡಲು ಸಾಧ್ಯವಗದೇ ಇದ್ದಾಗ, ಅಥವಾ ತುಂಬ ಕೆಲಸ ಇದ್ದಾಗ ಮಾಡಬಹುದಾದ ಉಪಾಹಾರ ತಿಂಡಿ. ಆದರೆ ನಮ್ಮಲ್ಲಿ ಇದು ಕೇವಲ ಉಪ್ಪಿಟ್ಟಲ್ಲ. ಮಾತ್ರವಲ್ಲ ಹಾಗೆ ಕಾಟಾಚಾರಕ್ಕೆ ಉಪ್ಪಿಟ್ಟು ಅಂತ ಮಾಡಿದರೆ ಅದನ್ನು ಯಾರೂ ಇಷ್ಟಪಡುವುದಿಲ್ಲ. ಉಪ್ಪಿಟ್ಟು ಎಂದಾಕ್ಷಾಣ ಉಪ್ಪಿಟ್ಟಾ... ಅಂತ ರಾಗ ಎಳೆಯುವವರೇ ಹೆಚ್ಚು. ನಮ್ಮಲ್ಲಿ ಉಪ್ಪಿಟ್ಟು ಮಾಡಿದರೆ ಅದರ ಒಂದು ಕಾಳು...ಬಿಡದೇ ನೆಕ್ಕಿ ತಿನ್ನುವುದು ಈ ಉಪ್ಪಿಟ್ಟಿನ ವೈಶಿಷ್ಟ್ಯತೆ . ಹಾಗಾಗಿ ಆಕೆ ಉಪ್ಪಿಟ್ಟು ಮಾಡಿ ಅಂತ ತನ್ನ ಬಯಕೆ ವ್ಯಕ್ತ ಪಡಿಸಿದ್ದಳು. ನಾವು ಮಾಡಿದ ತಿಂಡಿ ತಿನಸು ಹೆತ್ತವರಿಗೆ ಹೆಗ್ಗಣ ಮುದ್ದು ಅಂತ ಹಲವು ಸಲ ಹೇಗಿದ್ದರೂ ಇಷ್ಟವಾಗುವುದುಂಟು. ಆದರೆ ನಾವು ಮಾಡಿದ್ದು ಇನ್ನೊಬ್ಬರಿಗೆ ಇಷ್ಟವಾಗುವುದಿದ್ದರೆ ಅದರಲ್ಲಿರುವ ಖುಷಿಯೇ ಬೇರೆ. ಆದರೆ ವಾತಾವರಣ ಒಂದೇ ರೀತಿ ಇರುವುದಿಲ್ಲ. ಕೆಲವರು ಎಷ್ಟು ಹೊತ್ತಾದರೂ ಕಾಯುವುದಕ್ಕೆ ಸಿದ್ದವಿದ್ದರೆ ಇನ್ನು ಕೆಲವರು ಇದಕ್ಕೆ ವಿಪರೀತವಾಗಿಬಿಡುತ್ತಾರೆ.
ತಯಾರಿಸುವ ಊಟ ಉಪಹಾರಕ್ಕೆ ಯಾರಾದರೂ ಆತುರದಿಂದ ಕಾಯುತ್ತಿದ್ದರೆ ಅಡುಗೆ ಮಾಡುವವರಿಗೂ ಒಂದು ರೀತಿಯ ಒತ್ತಡವೂ ಇರುತ್ತದೆ. ಆದರೆ ಎಲ್ಲರೂ ಒಂದೇ ರೀತಿ ಆಗುವ ತನಕ ಕಾಯುವುದಿಲ್ಲ. ಕೆಲವರು ಮಾಡುವವರು ಏನೇ ಮಾಡಲಿ ತಾನು ಮಾತ್ರ ಇದ್ದುದನ್ನು ತಿಂದು ಹೋಗಿಬಿಡುತ್ತೇನೆ ಎಂಬ ಮನೋಭಾವ ಇರುತ್ತದೆ. ಅಡುಗೆಯವರು ಏನೂ ಮಾಡಲಿ ಅದರಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ. ಮಾಡುವ ತಿಂಡಿಯ ಬಗ್ಗೆ ನಿರಾಸಕ್ತಿಯೋ ಅಥವಾ ಅದರ ಬಗ್ಗೆ ಕಾಳಜಿ ಗೌರವ ಇರುವುದಿಲ್ಲ. ಮಾಡುವವರಿಗೆ ಇದು ಮತ್ತೊಂದು ರೀತಿಯ ಒತ್ತಡವನ್ನು ತರುತ್ತದೆ. ಮಾಡುವವರ ಬಗ್ಗೆ ಮಾಡುವುದರ ಬಗ್ಗೆ ಗೌರವ ಇದ್ದರೆ ಎಂತಹಾ ಸ್ಥಿತಿಯಲ್ಲೂ ತಿಂಡಿ ಆಗುವ ತನಕ ತಾಳ್ಮೆಯಿಂದ ಕಾಯುತ್ತಾರೆ. ಮೊದಲೆಲ್ಲ ಹೀಗೆ ಒತ್ತಡವಿದ್ದರೆ ನಾನು ಸಿಡಿಮಿಡಿಗೊಳ್ಳುತ್ತಿದ್ದೆ. ಹಲವು ಸಲ ಇದು ಕಲಹಕ್ಕೂ ಕಾರಣವಾಗುತ್ತಿತ್ತು. ಈಗ ಆ ಮನೋಭಾವ ಸಾಕಷ್ಟು ಬದಲಾಗಿದೆ. ನಾನು ಮಾಡುವ ತಿಂಡಿಯ ಬಗ್ಗೆ ಅಡುಗೆಯ ಬಗ್ಗೆ ಆಸಕ್ತಿ ಗೌರವ ಇದ್ದವರು ಕಾಯುತ್ತಾರೆ ಎಂದು ಯೋಚಿಸುತ್ತೇನೆ. ಅದರ ಬಗ್ಗೆ ಆಸಕ್ತಿ ಗೌರವ ಇಲ್ಲದವರು ಹೋಗಲಿ ಬಿಡಿ ಎಂದುಕೊಂಡು ನಿರಾತಂಕವಾಗಿ ಶಾಂತ ಚಿತ್ತದಿಂದ ನನ್ನ ಕಾರ್ಯದಲ್ಲಿ ಮಗ್ನನಾಗಿಬಿಡುತ್ತೇನೆ. ಇದು ಮನಸ್ಸಿಗೆ ಹೆಚ್ಚು ನೆಮ್ಮದಿಯನ್ನು ಕೊಡುತ್ತದೆ. ಕಾರಣ ಯೋಗಾಭ್ಯಾಸದಿಂದ ಬದಲಾದ ಜೀವನ ಶೈಲಿ.
ಈದಿಗ ಜೀವನ ಬಹುಪಾಲು ಅವಧಿಯನ್ನು ಯೋಗಜೀವನದಲ್ಲಿ ಕಳೆದ ಸಂತೃಪ್ತಿ ಇದೆ. ಹಾಗೊಮ್ಮೆ ಬದುಕಿನತ್ತ ತಿರುಗಿ ಸಿಂಹಾವಲೋಕನ ಮಾಡಿಕೊಂಡಾಗ ನಾನು ಸ್ವತಃ ಬದಲಾಗಿದ್ದೇನೋ ಇಲ್ಲ ಯೋಗಜೀವನ ನನ್ನನ್ನು ಬದಲಿಸಿದೆಯೋ ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ಆದರೂ ಯೋಗಾಭ್ಯಾಸ ಸಾಕಷ್ಟು ಬದಲಾವಣೆಯನ್ನು ತಂದಿದೆ ಎಂಬುದಷ್ಟು ಸತ್ಯ. ಮುಂಜಾನೆ ನಸುಕಿನಲ್ಲಿ ಪರಿಸರವೆಲ್ಲ ನಿದ್ರಾವಶದಲ್ಲಿರುವಾಗ ತಪ್ಪದೇ ಎಚ್ಚರಗೊಳ್ಳುತ್ತೇನೆ. ಮನಸ್ಸಿನ ತುಡಿತವೇ ಇದಕ್ಕೆ ಕಾರಣ. ನೀರವ ವಾತಾವರಣದಲ್ಲಿ ಧ್ಯಾನ ಮಗ್ನನಾಗಿ ವ್ಯಕ್ತವಾಗದ ಅನುಭವವನ್ನು ಪಡೆಯುವಲ್ಲಿ ಮನಸ್ಸಿನಲ್ಲಿ ಕಾತುರತೆ ತುಂಬಿರುತ್ತದೆ. ಮನೆಯ ಹೊರ ಜಗಲಿಯಲ್ಲಿ ಭಗವಂತನ ಪ್ರಾರ್ಥನೆಗೆ ಕುಳಿತುಬಿಟ್ಟರೆ ಆ ಸಮಯ ಮತ್ತೆ ಸಿಗದು ಎಂಬ ಭಾವ. ನಿರ್ಮಾನುಷ್ಯವಾದ ರಸ್ತೆ ಹೊರಗಡೆ. ಅದೆಷ್ಟು ಮೌನ ಆವರಿಸುತ್ತದೆ ಎಂದರೆ ಮೈಲು ದೂರದಲ್ಲಿ ಆಗುವ ಸಣ್ಣ ಸದ್ದೂ ಕೇಳಿಸುತ್ತದೆ. ಅಕ್ಕ ಪಕ್ಕದ ಮನೆಯಲ್ಲಿ ನಿದ್ರಿಸಿದವರ ಗೊರಕೆ ಏದುಸಿರಿನ ಸದ್ದೂ ಕೇಳಿಸುತ್ತದೆ. ಹೀಗಿದ್ದರೂ ಯಾರೋ ಒಂದಿಬ್ಬರು ಎದ್ದುಬಿಡುತ್ತಾರೆ . ದೊಡ್ಡದಾಗಿ ಮಾತನಾಡುತ್ತಾರೆ. ಇಲ್ಲ ವಸ್ತುಗಳನ್ನು ಎತ್ತಿಡುವುದೋ , ವಾಹನವನ್ನು ಚಲಾಯಿಸುವುದೋ ಏನೋ ಸದ್ದುಗಳು ನನ್ನಏಕಾಗ್ರತೆಗೆ ಪರೀಕ್ಷೆಯನ್ನು ಒಡ್ಡುತ್ತವೆ. ಆರಂಭದ ದಿನಗಳಲ್ಲಿ ಈ ಚಲವಲನ ಮತ್ತು ಸದ್ದು ಗದ್ದಲಕ್ಕೆ ಸಿಟ್ಟು ಬರುತ್ತಿತ್ತು. ದೊಡ್ಡದಾಗಿ ಮಾತನಾಡುತ್ತ ಸದ್ದು ಗದ್ದಲಕ್ಕೆ ಕಾರಣರಾದವರ ಮೇಲೆ ರೇಗಿಬಿಡುವ ಮನಸ್ಸಾಗುತ್ತಿತ್ತು. ಒಂದಿಷ್ಟೂ ಸಾಮಾನ್ಯ ಜ್ಞಾನವೂ ಇಲ್ಲದ ಜನಗಳು. ಕೊನೇ ಪಕ್ಷ ಎಲ್ಲರೂ ನಿದ್ರಿಸಿರುತ್ತಾರೆ ಎಂಬುದನ್ನು ಮರೆತ ಇವರ ಬಗ್ಗೆ ಸಿಟ್ಟು ಬರುತ್ತಿತ್ತು. ಮುಂಜಾನೆ ಏಳುವುದಲ್ಲ..ಮೊದಲು ನಾವು ಏನು ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮೊದಲಿಗೆ ಎಲ್ಲರೂ ನಿದ್ದೆಯಲ್ಲಿದ್ದಾರೆ ಎಂಬ ಪ್ರಜ್ಞೆ ಇರಬೇಕು. ಆದರೆ ನಮ್ಮಲ್ಲಿ ಮೂರ್ಖತನ ಇದ್ದೇ ಇರುತ್ತದೆ. ನಾವು ನಮಗೆ ನಿದ್ದೆ ಬರದೇ ಇರುವುದರ ಬಗ್ಗೆ ಚಿಂತಿಸುವಾಗ ಉಳಿದವರ ನಿದ್ರೆಯ ಬಗ್ಗೆ ಯೋಚಿಸುವುದಿಲ್ಲ. ನನ್ನ ಏಕಾಗ್ರತೆಗೆ ಈ ಎಲ್ಲಾ ಸದ್ದುಗಳು ಪರೀಕ್ಷೆ ಒಡ್ಡಿದಾಗ ಮೊದಲೆಲ್ಲ ಬಹಳಷ್ಟು ವ್ಯಾಕುಲತೆ ಅನುಭವಿಸುತ್ತಿದ್ದೆ. ಉದ್ವಿಗ್ನನಾಗುತ್ತಿದ್ದೆ.
ಮನಸ್ಸಿನ ಉದ್ವಿಗ್ನತೆಯನ್ನು ಯಾರು ಜಯಿಸುತ್ತಾನೋ ಆತನಿಗೆ ಯಾವ ಪರೀಕ್ಷೆಯೂ ಇರುವುದಿಲ್ಲ. ಉದ್ವಿಗ್ನ ಉದ್ರೇಕ ಎದುರಾದಾಗ ಅರೇ ನಾನೇಕೆ ಮುಂಜಾನೆ ಏಳುತ್ತಿದ್ದೇನೆ? ಎಂದು ನನಗೆ ನಾನೇ ಪ್ರಶ್ನಿಸುತ್ತೇನೆ. ಯಾವುದೋ ಸದ್ದಿನ ಬಗ್ಗೆ, ಯಾರದೋ ಮನೋಭಾವದ ಕುರಿತು ಯೋಚಿಸುವುದರಲ್ಲಿ ನನ್ನ ಅಮೂಲ್ಯ ಘಳಿಗೆಗಳು ಕಳೆದು ಹೋಗುತ್ತವೆ. ಯಾರೋ ನಮ್ಮ ಏಕಾಗ್ರತೆಗೆ ತೊಂದರೆ ಕೊಡುತ್ತಾರೆ ಎಂದಾಕ್ಷಣ ಅವರಲ್ಲಿ ಹೋಗಿ ಹೇಳಬಹುದು. ಕೆಲವರು ಅದನ್ನು ಮನ್ನಿಸಿ ನಮಗಾಗಿ ಸದ್ದು ಗದ್ದಲಮಾಡದೇ ಬಲವಂತವಾಗಿ ನಿಶ್ಯಬ್ದರಾಗಿ ಇರಬಹುದು. ಅದರಿಂದ ನಮ್ಮ ಮನಸ್ಸಿಗೆ ಮತ್ತಷ್ಟು ಅಸಹನೆಯಾಗುತ್ತದೆ. ನಮ್ಮಿಂದಾಗಿ ಅವರಿಗೂ ತೊಂದರೆ. ನಮ್ಮ ಕಾರ್ಯದ ಬಗ್ಗೆ ಅವರಿಗೆ ಗೌರವ ಇದ್ದರೆ ಅವರಾಗಿಯೇ ಸುಮ್ಮನೆ ಕುಳಿತುಬಿಡಬಹುದು. ಗೌರವ ಇಲ್ಲ ಎಂದಿದ್ದರೆ ಅವರಿಂದ ಬಲವಂತವಾಗಿ ಗೌರವವನ್ನು ಬಯಸಿ ಕಿತ್ತುಕೊಳ್ಳುವುದು ನಮ್ಮ ಮೂರ್ಖತನ. ಸದ್ದು ಗದ್ದಲ ಅವರ ಮೂರ್ಖತನವಾದರೆ, ಇನ್ನೊಬ್ಬರ ಮೂರ್ಖತನ ಅಳೆಯುವಲ್ಲಿ ನಮ್ಮ ಮೂರ್ಖತನ ನಮಗೆ ಅರಿವಾಗುವುದಿಲ್ಲ. ಹಾಗಾಗಿ ಈಗ ಯಾರೋ ಮಾಡಿದ ಸದ್ದು ಗದ್ದಲಕ್ಕೆ ನನ್ನ ಮನಸ್ಸು ವಿಚಲಿತವಾಗುವುದಿಲ್ಲ. ಆ ಸದ್ದು ನನ್ನ ಹೃದಯದ ಬಡಿತದ ಸದ್ದಿನ ಎದುರು ಕರಗಿ ಹೋಗುತ್ತದೆ. ಯಾರೋ ಮಾಡಿದ ಸದ್ದಿನ ಬಗ್ಗೆ ಯೋಚಿಸುವುದು ವ್ಯರ್ಥ. ಹಲವು ಸಲ ಮೊದಲ ತಿಂದ ಆಹಾರ ಪಚನವಾಗದೇ ನಮ್ಮ ಹೊಟ್ಟೆಯೇ ಸದ್ದು ಮಾಡಬಹುದು. ಹಾಗಾಗಿ ನಿಶ್ಯಬ್ದ ಇದ್ದರೆ ಮನಸ್ಸು ಅನುಭವಿಸುತ್ತದೆ. ಇಲ್ಲಾ ಅದರಿಂದ ದೂರವಾಗುವುದಕ್ಕೆ ಪ್ರಯತ್ನಿಸುತ್ತದೆ. ಪ್ರತಿಭಟನೆಯಂತೂ ಇಲ್ಲ. ಪ್ರತಿಭಟನೆ ಇದ್ದರೆ ಅದು ನಮ್ಮ ಮನಸ್ಸಿನ ಉದ್ವಿಗ್ನತೆಗೆ ಕಾರಣವಾಗಬಹುದು.
ನನ್ನಲ್ಲಿನ ಯೋಗ ಜೀವನಕ್ಕೆ ಈಗ ಹೆಚ್ಚುಕಡಿಮೆ ಯೌವನಾವಸ್ಥೆ. ಎರಡು ದಶಕಗಳು ಕಳೆದುವು. ಈಗ ಅದೂ ಪ್ರೌಢವಾಗಿದೆ. ಬದುಕಿನಲ್ಲಿ ಯೌವನ ಎಂದರೆ ತನಗೆ ಬೇಕಾಗಿರುವುದನ್ನು ತಾನು ಸಂಪಾದಿಸಿ ಸ್ವಾವಲಂಬಿಯಾಗುವುದು. ಹೀಗಿ ಯೋಚಿಸುವಾಗ ನನಗೆ ಬೇಕಾದ ಮೌನವನ್ನು ನಿಶ್ಯಬ್ದವನ್ನು ನಾನು ಸಂಪಾದಿಸಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸ ಜಾಗೃತವಾಗುತ್ತದೆ. ಶಂ ಎಂದರೆ ಸಂಸ್ಕೃತದಲ್ಲಿ ಆನಂದ ಎನ್ನುವುದನ್ನು ಕೇಳಿದ್ದೆನೆ. ಆ ಆನಂದವೇ ಶಾಂತಿಗೆ ಕಾರಣವಾಗುತ್ತದೆ. ಎಚ್ಚರ ನಿದ್ರೆ ಮತ್ತು ಸ್ವಪ್ನ ಈ ಮೂರು ಅವಸ್ಥೆಗಳು. ಹಾಗಾಗಿ ಮೂರು ಬಾರಿ ಉಚ್ಚರಿಸುವ ಓಂ ಶಾಂತಿ.. ಎಂಬ ಶಾಂತಿ ಮಂತ್ರ ಎಚ್ಚರದಲ್ಲು ಸ್ವಪ್ನ ನಿದ್ರಾವಸ್ಥೆಯಲ್ಲೂ ನಮಗೆ ಆನಂದವಿರಲಿ ಎಂದು ಬಯಸುವುದು. ನಮ್ಮ ಆನಂದ ನಮ್ಮ ಕೈಯಲ್ಲೇ ಇದೆ. ಅದನ್ನು ಇನ್ನೊಬ್ಬರು ಕಸಿಯುವುದಕ್ಕೆ ಸಾಧ್ಯವಿಲ್ಲ. ಹೀಗೆ ತಿಳಿದಾಗ ಯಾವ ಸದ್ದು ಗದ್ದಲವೂ ಪರಿಣಾಮ ಬೀರುವುದಿಲ್ಲ. ಮನಸ್ಸು ಉದ್ವಿಗ್ನವಾಗುವುದಿಲ್ಲ. ಹಾಗಾಗಿ ಅಡುಗೆ ಮಾಡುವಾಗ ಹೇಗೆ ನಿರ್ವಿಕಲ್ಪ ಭಾವದಿಂದ ಆನಂದವನ್ನು ಅನುಭವಿಸುತ್ತೇನೋ ಅದೇ ರೀತಿ ಮುಂಜಾನೆ ಧ್ಯಾನದಲ್ಲೂ ಅದೇ ರೀತಿ ಆನಂದವನ್ನು ಅನುಭವಿಸುತ್ತೇನೆ. ಯಾರಲ್ಲೂ ಬೇಡಿಕೆಯೂ ಬೇಡ ಆಗ್ರಹವೂ ಬೇಡದ ಒಂದು ವೈರಾಗ್ಯ. ಯೋಗದಲ್ಲಿ ವೈರಾಗ್ಯ ಅಥವ ಸನ್ಯಾಸ ಎಂದರೆ ಎಲ್ಲವನ್ನೂ ಬಿಟ್ಟು ಪಲಾಯನ ಮಾಡುವುದಲ್ಲ. ಎಲ್ಲವೂ ಇದ್ದುಕೊಂಡೇ ಅದರಿಂದ ದೂರವಾಗಿ ನಿರ್ವಿಕಲ್ಪ ಭಾವದಿಂದ ಇದ್ದು ಬಿಡುವುದು. ಸಿಕ್ಕಿದರೆ ಅನುಭವಿಸುವುದು, ಸಿಗದಿದ್ದರೆ ಅದಕ್ಕೆ ಹತಾಶರಾಗದೇ ಅದನ್ನು ಬಯಸದೇ ತಟಸ್ಥವಾಗಿರುವುದು. ಇದು ಮನಸ್ಸಿನ ಆತಂಕವನ್ನು ದೂರ ಮಾಡುತ್ತದೆ.
ಯೋಗ ಎಂದರೆ ಚಿತ್ತವೃತ್ತಿಯಿಂದ ದೂರ ಇರುವುದು. ಮನಸ್ಸು ಬುದ್ಧಿಯ ನಿಯಂತ್ರಣದಲ್ಲಿರುವುದು. ಮನಸ್ಸು ಎಂದರೆ ಮರ್ಕಟನಂತೆ. ಅದನ್ನು ಎಷ್ಟು ಅವಧಿ ನಾವು ಕಟ್ಟಿ ಹಾಕುತ್ತೇವೆಯೋ ಅಷ್ಟು ಹೊತ್ತು ನಾವು ಆನಂದವನ್ನು ಅನುಭವಿಸಬಹುದು. ನಮ್ಮ ಆತ್ಮ ರಥಿಕನಾದರೆ, ನಮ್ಮ ಪಂಚೇದ್ರಿಯಗಳು ಆ ರಥದ ಕುದ್ರೆಗಳು. ಬುದ್ದಿ ಸಾರಥಿಯ ಸ್ಥಾನದಲ್ಲಿರುತ್ತದೆ. ವಿಚಲಿತಕ್ಕೆ ಕಾರಣವಾಗುವ ಇಂದ್ರಿಯ ಅನುಭವವನ್ನು ನಿಯಂತ್ರಣದಲ್ಲಿರಿಸುವುದೇ ಜೀವನ ಯಜ್ಞ. ಇಂದ್ರಿಯಗಳೇ ಈ ಯಜ್ಞದ ಅಶ್ವಗಳು. ಅದನ್ನುನಿಯಂತ್ರಿಸಿದರೆ ಬದುಕೆಂಬ ಅಶ್ವಮೇಧದ ಪೂರ್ಣಾಹುತಿಯನ್ನು ಕೊಡುವ ಸಾಮಾರ್ಥ್ಯ ನಮ್ಮಲ್ಲಿ ಮೂಡುತ್ತದೆ. ಇದುವೆ ಬದುಕಿನ ಅಶ್ವಮೇಧ.
No comments:
Post a Comment