ಕಾಶಿಯಾತ್ರೆಯ ಬಹಳಷ್ಟು ಸಿದ್ದತೆಗಳು ಪೂರ್ಣಗೊಂಡಿರಬಹುದು. ತರಬೇಕಾದ ವಸ್ತುಗಳು ಕೊಂಡೊಯ್ಯಬೇಕಾದ ವಸ್ತುಗಳು ಹೀಗೆ ಸಿದ್ದತೆಯ ಮೇಲೆ ಸಿದ್ದತೆಯಾಗುತ್ತಿದ್ದರೆ ಹಲವು ವರ್ಷಗಳ ಬಯಕೆ ನಿರೀಕ್ಷೆಗಳು ಸನ್ನಿಹಿತವಾಗುವ ಸಮಯದ ಕ್ಷಣಗಣನೆ ಹತ್ತಿರವಾಗುತ್ತಿದೆ. ಮನಸ್ಸು ದೇಹ ಎಲ್ಲವೂ ಕಾಶೀಯಾತ್ರೆಯಲ್ಲಿ ಪರಮಾತ್ಮ ದರ್ಶನಕ್ಕೆ ಸಿದ್ದವಾಗುತ್ತಿದ್ದರೆ ಎಲ್ಲ ಸಿದ್ದತೆಯ ಜತೆಯಲ್ಲಿ ನಾವು ಅನಿವಾರ್ಯವಾಗಿ ಮಾಡಲೇ ಬೇಕಾದ ಸಿದ್ದತೆಯೊಂದನ್ನು ನೆನಪಿಸಬೇಕು.
ಯಾವುದೇ ಸತ್ಕಾರ್ಯಗಳು ಸದುದ್ದೇಶ ಮತ್ತು ಸತ್ಸಂಕಲ್ಪಗಳಿಂದ ಕೂಡಿದ್ದರೆ ಮಾತ್ರ ಅದು ಸತ್ಫಲವನ್ನು ಕೊಡಬಲ್ಲುದು. ಮನಸ್ಸಿನ ಪರಿಶುದ್ಧತೆಯಿಂದ ಈ ಸದುದ್ದೇಶ ಸತ್ಸಂಕಲ್ಪಗಳು ಕೂಡಿ ಬರುವುದು . ಪರಿಶುದ್ದ ಮನಸ್ಸಿನಲ್ಲಿ ಮಾತ್ರವೇ ಸತ್ಸಂಕಲ್ಪ ಹುಟ್ಟುವುದಕ್ಕೆ ಸಾಧ್ಯ. ಸಂಕಲ್ಪ ಎನ್ನುವಾಗ ಅದರ ಹಿನ್ನೆಲೆಯನ್ನು ಒಂದು ಸಲ ಯೋಚಿಸಬೇಕು. ನಾವು ಸಹಜವಾಗಿ ಕಪಟವಿಲ್ಲದ ಪ್ರೀತಿ ಮಮತೆಯನ್ನು ನಮ್ಮ ಹಿತೈಷಿ ಮಿತ್ರರಿಂದ ಬಯಸುವಾಗ, ನಾವು ಪರಮಾತ್ಮನಿಗೆ ಸಲ್ಲಿಸುವ ಪ್ರಣಾಮವು ಕಪಟವಿಲ್ಲದೇ ಇರಬೇಕಾಗುತ್ತದೆ. ಕಲುಷಿತ ಮನಸ್ಸಿನ ಭಾವನೆಗಳು ಕಪಟವಾಗಿರುತ್ತವೆ.
ಸರ್ವೇಷಾಮ ವಿರೋಧೇನ... ಎಂದು ಯಾವುದೇ ಪೂಜೆ ಪುನಸ್ಕಾರ ನಿತ್ಯ ಕರ್ಮಗಳನ್ನು ಆಚರಿಸುವಾಗ ಸಂಕಲ್ಪ ಮಂತ್ರವನ್ನು ಪುರೋಹಿತರು ಹೇಳುವುದನ್ನು ಕೇಳಬಹುದು. ಏನಿದು ಸರ್ವೇಷಾಮ ವಿರೋಧೇನ? ಸಾಮಾನ್ಯವಾಗಿ ಪುರೋಹಿತರು ಮಂತ್ರ ಹೇಳುವಾಗ, ನಾವೇ ವೆಚ್ಚ ಮಾಡಿ ಎಲ್ಲ ಪ್ರಯತ್ನ ಮಾಡಿ ಪೂಜೆ ಮಾಡುತ್ತಿದ್ದರೂ ಪುರೋಹಿತರ ಮಂತ್ರದ ಬಗ್ಗೆ ಗಮನ ಹರಿಸುವುದಿಲ್ಲ. ಸಂಸ್ಕೃತ, ಅದು ಅರ್ಥವಾಗುವುದಿಲ್ಲ ಎಂಬ ಔದಾಸಿನ್ಯ. ಇದು ಶ್ರದ್ದೆಯಕೊರತೆಗೂ ಕಾರಣವಾಗುತ್ತದೆ. ಸರ್ವೇಷಾಂ ಅವಿರೋಧೇನ...ಅಂದರೆ ಯಾರಿಗೂ ತೊಂದರೆ ಕೊಡದೆ ಯಾರ ವಿರೋಧವೂ ಇಲ್ಲದೇ ಪೂಜೆ ಅಥವಾ ಕರ್ಮವನ್ನು ಮಾಡುತ್ತೇನೆ ಎಂಬುದಾಗಿ ಸಂಕಲ್ಪ ಮಾಡುವುದಾಗಿರುತ್ತದೆ. ಹಿಂದೂ ಧರ್ಮದಲ್ಲಿರುವ ಉತ್ಕೃಷ್ಟತೆ ಇದು. ಕರ್ಮದ ಉದಾತ್ತ ಧ್ಯೇಯವನ್ನು ಅರಿಯಬೇಕು. ನಾವು ಮಾಡುವ ಕರ್ಮದಲ್ಲಿ ಒಬ್ಬರಿಗೆ ನೋವಾದರೆ ಅಸಮಾಧಾನ ತೊಂದರೆಯಾದರೆ ನಾವು ಮಾಡಿದ ಪೂಜೆ ಕರ್ಮಗಳು ಸತ್ಫಲವನ್ನು ಕೊಡುವುದಿಲ್ಲ. ನಮ್ಮ ಉದ್ದೇಶ ಸದುದ್ದೇಶವಾಗಿರುವುದಿಲ್ಲ. ಹಾಗಾಗಿ ಇಂತಹ ಕೆಲಸ ಮಾಡುವಾಗ ಮೊದಲು ನಮ್ಮ ಮನಸ್ಸು ಪರಿಶುದ್ದವಾಗಬೇಕು. ನಾವು ಸಾಗುವ ಹಾದಿ ಪರಿಶುದ್ದವಾಗಿರಬೇಕು.ಕಾಶಿ ಯಾತ್ರೆ ಎಂದರೆ ಅದೊಂದು ಕರ್ಮ. ಪರಮಾತ್ಮನ ಅನುಗ್ರಹವನ್ನು ಗಳಿಸುವ ಹಾದಿ. ಈ ಯಾತ್ರೆ ಮಾಡುವಾಗ ಕೇವಲ ನಾವು ಸ್ನಾನ ಮಾಡಿಯೋ ಇನ್ನೋಂದೋ ಆಚರಿಸಿ ಪರಿಶುದ್ದವಾಗುವುದಲ್ಲ. ನಮ್ಮ ಮನಸ್ಸು ಶುದ್ದವಾಗಬೇಕು. ನಮ್ಮ ಯಾತ್ರೆಯಲ್ಲಿ ಯಾರಿಗೂ ತೊಂದರೆಯಾಗಬಾರದು, ಮನಸ್ಸಿಗೆ ನೋವು ತರಬಾರದು. ಒಂದು ವೇಳೆ ಹಾಗೆ ನೋವುಂಟಾದರೆ ನಾವು ಮಾಡುವ ಯಾತ್ರೆ ಖಂಡಿತವಾಗಿಯೂ ಸತ್ಫಲವನ್ನು ತರುವುದಿಲ್ಲ. ನಮ್ಮ ಕ್ಷಣಿಕವಾದ ಲಾಭದ ಆಶೆಯಲ್ಲಿ ನಾವು ಇನ್ನೊಬ್ಬರನ್ನು ಹಳಿಯುತ್ತೇವೆ. ಅಥವಾ ನೋವುಂಟು ಮಾಡುತ್ತೇವೆ. ಅರಿವಿಲ್ಲದೇ ಮಾಡುವುದಾದರೂ ಇದು ಅಕ್ಷಮ್ಯ. ಯಾಕೆಂದರೆ ಕಾಶಿ ಯಾತ್ರೆ ಎಂಬುದು ಒಂದು ಪವಿತ್ರ ಕಾರ್ಯ. ಅದರ ಪಾವಿತ್ರ್ಯವನ್ನು ನಾವು ಕಾಪಾಡದೇ ಇದ್ದರೆ ಅದನ್ನು ಮಾಡುವ ಆವಶ್ಯಕತೆಯಾದರೂ ಏನು? ಕೇವಲ ಕಾಶಿಯನ್ನು ಕಾಣುವುದೇ ? ಅಲ್ಲಿ ಭಗವಂತನ ಅನುಗ್ರಹದ ಬಯಕೆ ಇರುತ್ತದೆ. ಪರಿಶುದ್ದತೆ ಇದ್ದಲ್ಲಿ ಭಗಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಾವು ದೇವಾಲಯವನ್ನು ದೇವರನ್ನೂ ಪರಿಶುದ್ದಗೊಳಿಸಿ ಆರಾಧಿಸುತ್ತೇವೆ. ಸ್ವಚ್ಛತೆ ಇರುವಲ್ಲಿ ಭಗವಂತನ ಸಾನ್ನಿಧ್ಯ ಇರುತ್ತದೆ ಎಂಬ ನಂಬಿಕೆ ನಮ್ಮದು. ಹಾಗಾಗಿ ನಮ್ಮ ದೇಹ ಮನಸ್ಸು ಸ್ವಚ್ಛವಾಗಿದ್ದರೆ ಮಾತ್ರ ನಮ್ಮಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಮನಸ್ಸು ಸ್ವಚ್ಛವಿಲ್ಲದೇ ಇದ್ದರೆ ಭಗವಂತನ ಅನುಗ್ರಹ ಹೇಗೆ ಸಾಧ್ಯವಾಗುತ್ತದೆ. ನಾವು ಭಾರತೀಯರು ಸ್ವಚ್ಛ ಭಾರತದ ಸಂಕೇತವೇ ಇದು. ಸ್ವಚ್ಛ ಭಾರತ ಎಂದರೆ ಕೇವಲ ಬೀದಿ ಪರಿಸರವನ್ನು ಗುಡಿಸಿ ಸ್ವಚ್ಛಗೊಳಿಸುವುದಕ್ಕೆ ಸೀಮಿತವಾಗಿರುವುದಿಲ್ಲ. ಮೊದಲು ನಮ್ಮ ಮನಸ್ಸು ಸ್ವಚ್ಛವಾಗಿರಬೇಕು ಆಗ ನಮ್ಮ ಪರಿಸರದ ಸ್ವಚ್ಛತೆಯ ಪ್ರಚೋದನೆಯಾಗುತ್ತದೆ.
ಮನೆಯ ಬಳಿಯಲ್ಲೇ ಇರುವ ದೇವಸ್ಥಾನಕ್ಕೂ ಹೋಗುವುದಕ್ಕೆ ಯೋಗ ಇರಬೇಕು. ಅದಿಲ್ಲವಾದರೆ ಅದು ಸಾಧ್ಯವಾಗುವುದಿಲ್ಲ. ಲಭ್ಯವಾಗದೇ ಇರುವುದನ್ನು ಪಡೇಯುವುದೇ ಯೋಗ. ಕಾಶಿ ಯಾತ್ರೆಗೆ ಯಾರು ಎಷ್ಟೇ ನೆರವು ನೀಡಬಹುದು. ಆದರೆ ನಮಗೆ ಯೋಗ ಎಂಬುದು ಇಲ್ಲವಾದರೆ ಅದು ಪ್ರಾಪ್ತಿಯಾಗುವುದಿಲ್ಲ. ನಮ್ಮ ಪ್ರಯತ್ನಕ್ಕಿಂತ ಮೇಲೆ ಒಂದು ಅನುಗ್ರಹ ಇರುತ್ತದೆ. ಅದು ಲಭ್ಯವಾಗಬೇಕಾದರೆ ಯೋಗ ಇರಬೇಕು. ಒಂದು ವೇಳೆ ನಮಗೆ ಕಾಶಿಯಾತ್ರೆ ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಇನ್ನೊಬ್ಬರನ್ನು ಹಳಿಯುವುದು ನಿಂದಿಸುವುದನ್ನು ಮಾಡಬಾರದು. ನಮಗೆ ಯೋಗವಿಲ್ಲ ಎಂದು ತೃಪ್ತರಾಗಬೇಕು. ಅದು ಭಗವಂತನ ಮೇಲಿಡುವ ವಿಶ್ವಾಸ. ಒಳಗೆ ಎಳೆದ ಉಸಿರು ಹೊರ ಬರುವ ಭರವಸೆ ಇಟ್ಟುಕೊಂಡು ನಾವು ಬದುಕಬೇಕು. ಅದು ನಮ್ಮ ಪ್ರಯತ್ನ....ಆದರೆ ಆ ಉಸಿರು ಹೊರ ಬರಬೇಕಾದರೆ ಭಗವಂತನ ಅನುಗ್ರಹ ಇರಬೇಕು. ಹೃದಯದಲ್ಲಿ ಭಗವಂತನ ಅಸ್ತಿತ್ವ ಇಲ್ಲದೇ ಹೋದರೆ ಆ ಉಸಿರು ಹೊರಬರಲಾರದು. ಹೃದಯದಲ್ಲಿ ಭಗವಂತ ನೆಲೆ ನಿಲ್ಲಬೇಕಾದರೆ ಅಲ್ಲಿ ಸದ್ಭಾವನೆ, ಸನ್ಮಮನಸ್ಸು ಸಂಕಲ್ಪ ಶುದ್ದಿ ಇರಬೇಕು. ಪರಿಶುದ್ದತೆ ಇಲ್ಲದೇ ಇರುವಲ್ಲಿ ನಾವು ನಮ್ಮ ಭಗವಂತನನ್ನು ಕಾಣಬಹುದೇ? ಸಾಧ್ಯವಿಲ್ಲ. ಎಲ್ಲ ಸತ್ಕಾರ್ಯಗಳಿಗೂ ವಿಘ್ನ ಬರುವುದು ಸ್ವಾಭಾವಿಕ. ನಮ್ಮ ಪ್ರವೃತ್ತಿಯಿಂದ ವಿಘ್ನ ಬರದಂತೆ ಯತ್ನಿಸುವುದಷ್ಟೇ ನಮ್ಮ ಕೆಲಸ. ಕಾಶೀ ವಿಶ್ವನಾಥ ಮೊದಲು
ನಮ್ಮ ಮನಸ್ಸಿನಲ್ಲಿ ನೆಲೆಯಾಗಬೇಕು. ಆಗ ಹೊರಗೆಲ್ಲ ಆ ವಿಶ್ವಾನಾಥನ ಸಾನ್ನಿಧ್ಯ ದರ್ಶನವಾಗುತ್ತದೆ. ಕಾಶೀ ಯಾತ್ರೆ ಅರ್ಥ ಪೂರ್ಣವಾಗುತ್ತದೆ.
ನಮ್ಮ ಪ್ರಯತ್ನಗಳಲ್ಲಿ ವಿಘ್ನಗಳು ಒದಗದೆ ಇರಲಿ ಎಂದು ಪ್ರಾರ್ಥಿಸುವ. ಯಾರಿಗೂ ನೋವುಂಟು ಮಾಡದೇ, ತೊಂದರೆಯನ್ನು ನೀಡದೆ ಭಗವಂತನ ಅನುಗ್ರಹಕ್ಕೆ ನಾವು ಪಾತ್ರರಾಗೋಣ. ಇಷ್ಟಿದ್ದು ಲಭ್ಯವಾಗದೆ ಇದ್ದಲ್ಲಿ ಆ ಅಲಭ್ಯತೆ ನಮ್ಮಯೋಗ ಎಂದು ಭಗವಂತನಿಗೆ ಅರ್ಪಿಸೋಣ. ಯಾತ್ರೆಗೆ ಟಿಕೆಟ್ ತೆಗೆಯುವುದಷ್ಟೇ ನಮ್ಮ ಪ್ರಯತ್ನ, ಅಲ್ಲಿ ದರ್ಶನವಾಗಬೇಕಾದರೆ ಯೋಗವಿರಬೇಕು. ಅದಕ್ಕೆ ನಾವು ಅರ್ಹರಾಗಬೇಕು. ಪರರನ್ನು ನಿಂದಿಸಿ, ನೋವುಂಟು ಮಾಡಿ ಆ ಅರ್ಹತೆಯನ್ನು ಕಳೆಯದೇ ಇರೋಣ. ಭಗವಂತನ ಅನುಗ್ರಹಕ್ಕೆ ಅರ್ಹತೆಯನ್ನು ಪಡೆಯುವುದಕ್ಕೆ ನಾವು ಎಲ್ಲಾ ಅಹಂಕಾರ ಅಹಮಿಕೆಯಿಂದ ದೂರವಾಗಬೇಕು. ಆವಾಗ ಯೋಗ ಲಭ್ಯವಾಗುತ್ತದೆ. ಇದಕ್ಕೆ ನೆರವು ನೀಡುವ ಹಸ್ತಗಳಿಗೆ ಕೃತಜ್ಞರಾದರೆ ಅಲ್ಲಿ ಭಗವಂತನ ಸಾನ್ನಿದ್ಧ್ಯವಿದೆ. ಬದಲಿಗೆ ಅವರು ಮರುಗಿದರೆ ನಮ್ಮ ಹಾದಿ ಮಲಿನವಾದಂತೆ. ನಮ್ಮ ಹೆಜ್ಜೆಗಳು ಅಪವಿತ್ರವಾಗಿ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದಿಲ್ಲ.
ಲೇಖಕರು ರಾಜಕುಮಾರ್ ಎಂ ಪೈವಳಿಕೆ.
No comments:
Post a Comment