"ಗಾಜಿನ ಲೋಟ ಅಥವಾ ಪಿಂಗಾಣಿ ತಟ್ಟೆಯನ್ನು ತಿಕ್ಕಿ ತಿಕ್ಕಿ ತೊಳೆದು ಲಕ ಲಕ ಹೊಳೆಯುವಂತೆ ಮಾಡಿ ಅದನ್ನು ಕಣ್ತುಂಬ ಖುಷಿಯಲ್ಲಿ ನೋಡಿ , ಅದರ ಜಾಗದಲ್ಲಿ ಇಡುವಾಗ ಕೈಜಾರಿ ಬಿದ್ದು ಒಡೆದರೆ ಬಹಳ ದುಃಖವಾಗಿಬಿಡುತ್ತದೆ. ಛೇ ತೊಳೆಯುವ ಮೊದಲೇ ಬಿದ್ದಿದ್ದರೆ....ತೊಳೆಯುವ ಕೆಲಸವಾದರೂ ಉಳಿಯುತ್ತಿತ್ತು. ಎಲ್ಲ ಸಾಮಾಗ್ರಿಗಳನ್ನು ತಂದು ಬಹಳ ನಿರೀಕ್ಷೆಯನ್ನಿಟ್ಟು ಒಂದು ಖಾದ್ಯವನ್ನು ಶ್ರಮವಹಿಸಿ ಮಾಡಿ , ಅದನ್ನು ಆಘ್ರಾಣಿಸುವ ಸುಖಾನುಭವದಲ್ಲಿ ಅದರ ಪಾತ್ರೆ ಕೆಳಗೆ ಬಿದ್ದು ಬಿಟ್ಟರೆ ಬಹಳ ನಿರಾಶೆಯಾಗುತ್ತದೆ. ಪಟ್ಟ ಪರಿಶ್ರಮದ ವ್ಯರ್ಥ ವಾಗುವ ನೋವು ಒಂದು ಕಡೆ ಆಶೆಗೆ ತಣ್ಣೀರು ಎರಚಿದ ನೋವು ಬೇರೆ. "
ಮೊನ್ನೆ ಒಬ್ಬ ಸ್ನೇಹಿತ ಸಿಕ್ಕಿದ. ಯಾವಾಗಲೂ ಬಹಳ ಲವಲವಿಕೆಯಲ್ಲಿ ಕಂಡು ಬರುವ ಈತ ಬಹಳ ಖಿನ್ನತೆಯಲ್ಲಿದ್ದಂತೆ ಭಾಸವಾಯಿತು. ಸದಾ ಸಿಗುವಾಗ ಅದೂ ಇದು ಅಂತ ಮಾತನಾಡುತ್ತೇವೆ. ರಾಜಕೀಯ, ಸಾಮಾಜಿಕ ಹೀಗೆ ಹಲವು ವಿಷಯಗಳನ್ನು ಚರ್ಚಿಸುತ್ತಾ ಇರುವ ಈತನ ಖಿನ್ನತೆ ವಿಚಿತ್ರವಾಗಿ ಕಂಡಿತು. ನಾನು ಕೇಳಿದೆ
"ಯಾಕೆ ಯಾವಾಗಲು ಇದ್ದಂತೆ ಇಲ್ಲ? "
ತುಸು ಹೊತ್ತು ಸುಮ್ಮನೇ ಇದ್ದ, ಮತ್ತೆ ಗಳ ಗಳ ಅಳುವುದಕ್ಕೆ ಶುರು ಮಾಡಿದ, ನನಗೆ ಇರಿಸು ಮುರುಸಾಯಿತು. ಆತ ಹೇಳಿದ,
"ನನಗೆ ಒಬ್ಬಳೇ ಮಗಳು ಗೊತ್ತಲ್ವ? ಕಳೆದ ಕೆಲವು ದಿನಗಳಿಂದ ಅವಳ ಮದುವೆ ಮಾತುಕತೆಗೆ ಓಡಾಡುತ್ತಾ ಇದ್ದೇನೆ. ಹಲವಾರು ಸಂಬಂಧಗಳನ್ನು ನೋಡಿದೆ. ಕೊನೆಗೆ ಒಬ್ಬರು ಒಳ್ಳೆ ಮನೆಯವರು ಸಿಕ್ಕಿದರು. ಇನ್ನೇನು ಎಲ್ಲ ಮಾತುಕತೆ ಆರಂಭಿಸಿ ಕೆಲಸ ಶುರು ಮಾಡುವ ಹೊತ್ತಿಗೆ , ಮಗಳು ಮದುವೆಗೆ ಒಪ್ಪುವುದಿಲ್ಲ. ಆಕೆಗೆ ಯಾರ ಜತೆಗೋ ಪ್ರೇಮವಿದೆ. ಅವನನ್ನೆ ಮದುವೆ ಆಗಬೇಕು ಅಂತ ಹೇಳುತ್ತಿದ್ದಾಳೆ. ಅವಳ ಇಷ್ಟ ಅಲ್ವ ಮಾಡಿಕೊಳ್ಳಲಿ ಆದರೆ ನನ್ನ ಅವಸ್ಥೆ ಹೇಗಾಗಬೇಕು. ಆಕೆಗೆ ಅಮ್ಮನಿಂದಲೂ ನಾನೇ ಹತ್ತಿರ. ಅಪ್ಪ ಅಪ್ಪ ಅಂತ ಯಾವಾಗಲು ಹೆಗಲಿಗೆ ಬೀಳುತ್ತಾಳೆ. ಆಕೆಗಾಗಿ ಕೇಳಿದ್ದನ್ನೇಲ್ಲಾ ಮಾಡಿದೆ. ಇಂಜಿನಿಯರ್ ಕಲಿಸಿದೆ. ಒಳ್ಳೆ ಕೆಲಸ ಸಿಕ್ಕಿತು. ಈಗ ನೋಡಿದರೆ ನನ್ನ ಕನಸು ಭಾವನೆಗೆಗಳಿಗೆ ಯಾವ ಬೆಲೆಯೂ ಇಲ್ಲ. ಈಗ ಬಂದ ಸಂಬಂಧದವರ ಉಳಿದವರ ಮುಖ ಹೇಗೆ ನೋಡುವುದು? "
ಮಕ್ಕಳು ಸಂಸಾರ ಎಂದ ಮೇಲೆ ಇದೆಲ್ಲ ಸಾಮಾನ್ಯ. ಮಕ್ಕಳ ಬಗ್ಗೆ ಹಲವು ಕನಸುಗಳನ್ನು ಬಯಕೆಗಳನ್ನು ಕಟ್ಟಿಕೊಳ್ಳುವುದು ಸಹಜ. ನಮ್ಮ ಮಕ್ಕಳಲ್ಲಿ ಇಡುವ ನಿರೀಕ್ಷೆ ಹುಸಿಯಾಗುವಾಗ ಜಿಗುಪ್ಸೆ ಆವರಿಸಿಬಿಡುತ್ತದೆ. ನಮ್ಮದೇ ಮಕ್ಕಳಾದರೂ ನಾವು ಅವರ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದು ಸೂಕ್ತವಲ್ಲ. ಬದಲಿಗೆ ಸೂಕ್ತ ನಿರ್ಧಾವನ್ನು ಅವರೆ ತೆಗೆದುಕೊಳ್ಳುವಂತೆ ಅವರನ್ನು ಪ್ರೇರೇಪಿಸಬೇಕು. ಅವರ ಬಗೆಗಿನ ನಿರ್ಧಾರ ನಾವೇ ತೆಗೆದುಕೊಂಡರೆ ನಿರ್ಧಾರಗಳಲ್ಲಿ ಅವರು ಸ್ವಾವಾಲಂಬಿಗಳಾಗುವುದು ಯಾವಾಗ? ಅವರ ಪರವಾಗಿ ನಾವು ನಮ್ಮ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡರೆ ಅವರ ಹಕ್ಕುಗಳನ್ನು ಕಸಿದುಕೊಂಡಂತೆ. ಇನ್ನು ನ್ಯಾಯಾಲಯ ದಾವೆ ಕಾನೂನು ಯಾವುದನ್ನು ನೋಡಿದರು ಅಲ್ಲಿ ಕಾನೂನು ಮಾತ್ರವೇ ಇರುತ್ತದೆ. ನೀತಿ ಎಂಬುದು ಇರುವುದಕ್ಕೆ ಸಾಧ್ಯವಿಲ್ಲ. ಮಕ್ಕಳು ಹೆತ್ತವರ ಆಶಯದಂತೆ ನಡೆಯಬೇಕಾಗಿರುವುದು ಹೌದು, ಆದರೆ ಅವರ ಆಶಯಗಳು ಅದೇ ರೂಪದಲ್ಲಿ ಬೆಳೆದು ಬರುವಂತೆ ಮಕ್ಕಳ ಮನೋಭಾವವನ್ನು ರೂಪಿಸಬೇಕು. ಇದೇ ಮಾತುಗಳಲ್ಲಿ ಆತನಿಗೆ ಸಾಂತ್ವಾನ ಹೇಳಿದೆ. ಆಗ ಆತ ಹೇಳಿದ,
"ಹುಟ್ಟಿನಿಂದ ಅವಳ ಎಲ್ಲಾ ಆಶೆಗಳನ್ನು ತೀರಿಸಿದವನು ನಾನು. ಹೆತ್ತಮ್ಮನಿಗಿಂತಲೂ ಆಕೆ ತನ್ನ ಆಶೆಗಳನ್ನು ನನ್ನಲ್ಲೇ ಹೇಳಿ ಪರಿಹರಿಸಿಕೊಳ್ಳುತ್ತಿದ್ದಳು. ಈಗ ಬದುಕಿನ ಮಹತ್ವದ ನಿರ್ಧಾರದಲ್ಲಿ ಅಕೆಗೆ ನಾನು ಬೇಡವಾದೆ. ದುಃಖವಾಗುವುದಿಲ್ಲವಾ? ಆಕೆಯ ಪ್ರೇಮ ಎರಡು ವರ್ಷದಿಂದ ಇದೆ. ಈ ಮೊದಲು ಒಂದು ದಿನ ಅದರ ಬಗ್ಗೆ ಹೇಳಿರುತ್ತಿದ್ದರೆ, ನಾನು ಬಹುಶಃ ಅವಳ ಆಶೆಗಳನ್ನು ಮೊದಲಿನಂತೆ ನೆರವೇರಿಸಿಬಿಡುತ್ತಿದ್ದೆ. "
ಅವನ ಅಳಲು ಪ್ರಾಮಾಣಿಕ. ಅದರಲ್ಲಿ ತಪ್ಪೇನಿದೆ. ಎಲ್ಲವನ್ನು ಸಲುಗೆಯಿಂದ ಪ್ರೀತಿಯಿಂದ ಹೇಳಬಲ್ಲ ಆಕೆ ....ತನ್ನ ಪ್ರೇಮವನ್ನೂ ಪ್ರಾಮಾಣಿಕವಾಗಿ ತಂದೆಯಲ್ಲಿ ಹೇಳಬಹುದಿತ್ತು. ಆದರೆ ಅದನ್ನೂ ಸಹ ಹೇಳುವಷ್ಟು ಅವರ ನಡುವಿನ ಸಂಭಂಧಕ್ಕೆ ಆ ಬಲವೇ ಇರಲಿಲ್ಲ. ಅದೇನು ನಿಯತಿಯೋ ಗೊತ್ತಿಲ್ಲ. ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಇಷ್ಟವಾಗುತ್ತಾನೆ. ಪ್ರೀತಿ ಸಲುಗೆ ಎಲ್ಲವೂ ಹೆತ್ತ ಅಮ್ಮನಿಗಿಂತಲೂ ಅಧಿಕವಾಗುತ್ತದೆ. ಬಹುಶಃ ಅಪ್ಪನಂತೆ ನಾನಾಗಲಾರೆ ಎಂಬ ಹತಾಶೆಯೋ ಏನೋ ಹಲವು ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಅದು ಎಲ್ಲದಕ್ಕೂ ಇರುವ ಅಂತಿಮ ನಿರೀಕ್ಷೆ. ಆದರೆ ಬದುಕಿನ ನಿರ್ಣಾಯಕ ಹಂತದಲ್ಲಿ ಅಪ್ಪ ಪ್ರೀತಿಯ ತೂಕ ಎಲ್ಲೋ ಕಳೆದ ಅನುಭವವಾಗುತ್ತದೆ. ಅಪ್ಪ ಅಮ್ಮನ ಪ್ರೀತಿ ಮಕ್ಕಳು ಕೊಡಬೇಕಾದ ಪ್ರತ್ಯುಪಹಾರ ಒಂದೇ ಅದು ಪ್ರಾಮಾಣಿಕತೆ. ಮಕ್ಕಳು ಹೆತ್ತವರಲ್ಲಿ ಗೌರವ ಪ್ರೀತಿ ತೋರಿಸುವುದಕ್ಕಿಂತಲು ಅವರಲ್ಲಿ ಪ್ರಾಮಾಣಿಕವಾಗಿ ಇರಬೇಕಾಗಿರುವುದು ಅವಶ್ಯ. ಪ್ರೀತಿ ಗೌರವ ಹುಟ್ಟಿನಿಂದ ಸಹಜವಾಗಿ ಬರಬಹುದು. ಆದರೆ ವಿಶ್ವಾಸ ಪ್ರಾಮಾಣಿಕತೆ ಒದಗಿ ಬಂದಾಗಲೇ ಆ ಪ್ರೀತಿ ಸಂಭಂಧಗಳಿಗೆ ಮೌಲ್ಯ ಒದಗಿ ಬರುತ್ತದೆ. ತನ್ನ ಮಕ್ಕಳು ಏನೂ ಬಚ್ಚಿಡಲಾರರು ಎಂಬ ಅದಮ್ಯ ವಿಶ್ವಾಸ ಹೆತ್ತವರಲ್ಲಿ ಇರುತ್ತದೆ. ಅದಕ್ಕೆ ಘಾತಿಯೊದಗಿದಾಗ ಜಗತ್ತಿನ ಯಾವ ನೋವು ಅದಕ್ಕೆ ಸರಿಸಮನಾಗಿ ಇರುವುದಿಲ್ಲ.
No comments:
Post a Comment