Tuesday, January 9, 2024

ಉಡುಗೊರೆ, ಆದರೂ ಬೇಡ

ಇತ್ತೀಚೆಗೆ ಒಬ್ಬರ ಮದುವೆ ಆಮಂತ್ರಣ ಸಿಕ್ಕಿತ್ತು. ಆ ಒಂದು ಆಮಂತ್ರಣದ ಪತ್ರಿಕೆ ಅಚ್ಚು ಹೊಡೆಯುವುದಕ್ಕೆ ಏನಿಲ್ಲವೆಂದರೂ ಇನ್ನೂರು ರೂಪಾಯಿ ಖರ್ಚಾಗಿರಬಹುದು. ಅರಮನೆ ಮೈದಾನದಲ್ಲಿ ಆ ವಿವಾಹ ಕಾರ್ಯಕ್ರಮ ಆಯೋಜಿಸಿದ್ದರು.  ಪತ್ರಿಕೆಯ ಕೊನೆಯಲ್ಲಿ ವಿಶೇಷವಾಗಿ ಬರೆಯಲಾಗಿತ್ತು. ಇದು ನನಗೆ ವಿಚಿತ್ರವಾಗಿ ಕಂಡಿತ್ತು. ಆಮಂತ್ರಿತರು ಯಾರೂ ಹೂವಿನ ಬೊಕ್ಕೆ ತರಬಾರದು ಎಂದು ಉಲ್ಲೇಖಿಸಿದ್ದರು. ಹೂವಿನ ಬೊಕ್ಕೆ ಒಂದು ಘಳಿಗೆ ಕಳೆದರೆ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತದೆ.  ಕೊಡುವಾಗ ಇದ್ದ ಮೌಲ್ಯ ಪಡೆದಾಗ ಇರುವುದಿಲ್ಲ. ಅದನ್ನು ಮೂಲೆಗೆ ಎಸೆದು ಬಿಡುವ ಈ ಉಡುಗೊರೆ ಕೊಡುವ ಅವಶ್ಯಕತೆಯಾದರೂ ಏನು ಎಂದು ಹಲವು ಸಲ ಯೋಚಿಸಿದ್ದಿದೆ. 

ಉಡುಗೊರೆ ಯಾರಿಗೆ ಇಷ್ಟವಿಲ್ಲ ಹೇಳಿ?  ಉಡುಗೊರೆ ಕೈಗೆ ಇಟ್ಟಾಗ ಎಷ್ಟು ಸಂಕೋಚದ ಮನಸ್ಸಾದರೂ ಮೊದಲಿಗೆ  ನಿರಾಕರಿಸುತ್ತಾ ನಂತರ ಮುಖ ಅರಳಿಬಿಡುತ್ತದೆ.  ಮೊನ್ನೆ ಮನೆಯಾಕೆ ತುಂಬಿದ ಒಂದೆರಡು ಬ್ಯಾಗ್ ತಂದಿಟ್ಟಳು. ಅದರಲ್ಲಿ ತುಂಬಾ ಉಡುಗೊರೆ ರೂಪದಲ್ಲಿ ಬಂದ ಬಟ್ಟೆಗಳಾಗಿತ್ತು. ಇಷ್ಟು ಉಡುಗೊರೆ ಮುಖ ಅರಳದೇ ಇರಬಹುದಾ? ಆದರೆ ಹಾಗೆ ಸಂಪಿಗೆಯ ಮೊಗ್ಗಿನಂತಿದ್ದ ಮುಖ ಒಮ್ಮಿಂದೊಮ್ಮೆಲೇ  ಕೆರೆಯ ತಾವರೆಯಾಗಿ ಅರಳುವುದಿಲ್ಲ.  ಅದು ಹೆಸರಿಗೆ ಶಾಸ್ತ್ರಕ್ಕೆ  ಸಿಕ್ಕ ಉಡುಗೊರೆ. 

ಬಗೆ ಬಗೆಯ ಬಟ್ಟೆಗಳು ಆ ಬ್ಯಾಗ್ ತುಂಬಾ ಇದ್ದವು. ಸೀರೆ ಪಂಚೆ ಶಲ್ಯ ಒಂದಷ್ಟು ರವಕೆ ಕಣಗಳು.  ಅಷ್ಟೊಂದು ಸೀರೆಗಳು ಇದ್ದರೂ ಒಂದು ಮದುವೆಯೋ ಮತ್ತೊಂದೋ ಬಂದಾಗ ಅದಕ್ಕೆ ಹೋಗುವುದಕ್ಕೆ ಅಂತ ಒಂದು ಬಟ್ಟೆ ಬೇಕು ಅಂತ ಮಲ್ಲೇಶ್ವರಂಗೆ ಹೋಗುವುದು ತಪ್ಪುವುದಿಲ್ಲ. ಸಿಕ್ಕಿದ ಸೀರೆ ಪಂಚೆಗಳೇ ಹಾಗೆ. ಒಂದು ಪಂಚೆ ತೆಗೆದು ನೋಡಿದೆ. ಅದು ಅತ್ತ ಪಂಚೆಯಷ್ಟು ದೊಡ್ಡ ಇಲ್ಲ. ಲುಂಗಿಯಂತೆ ಉಡುವುದಕ್ಕೂ ಸಾಧ್ಯವಿಲ್ಲ. ಈಗೀಗ ಪ್ರತೀ ಮನೆಯಲ್ಲೂ ಇಂತಹ ಹಲವು ಬ್ಯಾಗ್ ಗಳು ಇರಬಹುದು. ಯಾಕೆಂದರೆ ಬೇಡದೇ ಇದ್ದ ಉಡುಗೊರೆ ಕೊಡುವುದು ವಾಡಿಕೆಯಾಗಿದೆ.  ನಮ್ಮಜ್ಜನಿಗೆ ಪೌರೋಹಿತ್ಯಕ್ಕೆ  ಹೋಗುವಾಗ   ಬೈರಾಸುಗಳು ದಾನವಾಗಿ  ಸಿಗುತ್ತಿದ್ದವು. ಅಜ್ಜ ಅದನ್ನು ತೋರಿಸಿ ಹೇಳುತ್ತಿದ್ದರು, ಇದನ್ನು ಸೊಂಟದ ಸುತ್ತ ಉಡುವುದಕ್ಕೆ ಇದು ಉದ್ದ ಇಲ್ಲ. ಹಾಗಂತ ಲಂಗೋಟಿಯಾಗಿ ಉಡುವುದಕ್ಕೆ ಇದು ದೊಡ್ಡ ಆಯಿತು.  ಒಂದು ಬಾರಿ ಯಾರೋ ಒಬ್ಬರು ದನವನ್ನು ದಾನ ಕೊಟ್ಟಿದ್ದರು. ಅದು ಯಾಕೆ ಕೊಟ್ಟಿದ್ದಾರೆ ಎಂದು ಅದರ ಹತ್ತಿರ ಹೋಗುವಾಗ ಅರಿವಾಗುತ್ತಿತ್ತು. ಹಾಯುವುದಕ್ಕೆ ಒದೆಯುವುದಕ್ಕೆ ಮಾತ್ರ ಕಲಿತಿದ್ದ ಪಶು ಹಾಲು ಕೊಡುವುದು ಹಾಗಿರಲಿ, ಅದಕ್ಕೆ ತಿನ್ನುವುದಕ್ಕೆ ಹುಲ್ಲು ಹಿಂಡಿ ಒದಗಿಸುವುದೇ ದೊಡ್ಡ ಸಮಸ್ಯೆಯಾಗಿಬಿಡುತ್ತಿತ್ತು.  ಆದರೂ ಪಶುವಲ್ಲವಾ? ಅದನ್ನು ಸಾಕುವುದೇ ಪುಣ್ಯದ ಕೆಲಸ.  ಹೀಗೆ ಉಪಯೋಗಕ್ಕೆ ಬಾರದ  ವಸ್ತುಗಳು ಹೀಗೆ ದಾನವಾಗಿ ಕೊಡುವುದಕ್ಕೆ ಯೋಗ್ಯವಾಗಿರುತ್ತವೆ. ಬ್ಯಾಗ್ ತುಂಬಾ ಇದ್ದ ಸೀರೆಗಳ ಕಥೆಯೂ ಇದುವೆ. ಅದು ಉಡುವುದಕ್ಕೂ  ಸಾಧ್ಯವಿಲ್ಲ ಮಲಗಿದಾಗ ಹಾಸಿ ಹೊದಿಯುವುದಕ್ಕೂ ಸಾಧ್ಯವಿಲ್ಲ.  ಗೋವದಲ್ಲಿ ಈ ತರ ಸಿಕ್ಕಿದ ಸೀರೆ ಪಂಚೆಗಳನ್ನು ಒಂದರ ಮೇಲೆ ಒಂದು ಇಟ್ಟು ಹೊಲಿದು ಚಳಿಗೆ ಹೊದಿಕೆಯಂತೆ ಉಪಯೋಗಿಸುವುದನ್ನು ನೋಡಿದ್ದೇನೆ. 

ಒಂದು ಸಲ ಯಾರೋ ಕೊಟ್ಟಿದ್ದ ಶರ್ಟ್ ಪೀಸ್ ನೋಡುವುದಕ್ಕೆ ಚೆನ್ನಾಗಿ ಇದೆ ಎಂದು ಟೈಲರ್ ಗೆ ಹೊಲಿಯುವುದಕ್ಕೆ ಕೊಟ್ಟಿದ್ದೆ. ಆತ ಕೈಯಲ್ಲಿ ಹಿಡಿದು ಹೇಳಿದ ಸಾರ್ ಇದು ಗಿಫ್ಟ್ ಸಿಕ್ಕಿದ್ದಾ ? ಹೊಲಿಯುವುದಕ್ಕೆ ಮಜೂರಿ ಅದರಿಂದ ಹೆಚ್ಚಾಗುತ್ತದೆ, ಏನು ಮಾಡಬೇಕು ಎಂದು ಕೇಳಿದಾಗ ಒಂದಷ್ಟು ಇರಿಸು ಮುರಿಸಾಯಿತು. ಪುಣ್ಯ ಅದನ್ನು ಯಾರು ಕೊಟ್ಟದ್ದು ಎಂದು ನೆನಪಿರಲಿಲ್ಲ. ಹೀಗೆ ನೆನಪಾಗದ ವಸ್ತುವನ್ನು ತಮ್ಮ ನೆನಪು ಮರೆಸುವಂತೆ ಯಾರೋ ಕೊಟ್ಟುಬಿಟ್ಟಿದ್ದರು. 

ಸಾಮಾನ್ಯವಾಗಿ ನಾವು ಅತ್ಮೀಯರಿಗೆ ಶುಭ ಸಂದರ್ಭದಲ್ಲಿ ಏನಾದರೂ ಕೊಡಬೇಕು ಎನ್ನುವಾಗ ಅವರಿಗೆ ಏನು ಅತ್ಯಂತ ಉಪಯೋಗಕ್ಕೆ ಬರಬಹುದು ಎಂಬುದನ್ನು ಯೋಚಿಸುತ್ತೇವೆ. ಅವರ ಮನೆಯಲ್ಲಿ ಏನು ಇಲ್ಲ ಎಂಬುದನ್ನು ಲೆಕ್ಕ ಹಾಕುತ್ತೇವೆ. ನಾವು ಕೊಟ್ಟ ವಸ್ತುವನ್ನು ಉಪಯೋಗಿಸುವಾಗ ನಮ್ಮ ನೆನಪನ್ನು ತರಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ ಇಲ್ಲಿ ಬ್ಯಾಗ್ ತುಂಬ ಇದ್ದ ಉಡುಗೊರೆ ಯಾರ ನೆನಪನ್ನೂ ತರಿಸುವುದಿಲ್ಲ. ಇದೊಂದು ಹರಿವ ನೀರಿನ ಹಾಗೆ. ಯಾವುದೋ ಅನಾಥಾಶ್ರಮಕ್ಕೂ ಕೊಡುವುದಕ್ಕೆ ಯೋಗ್ಯವಿಲ್ಲದವುಗಳು. ಹಾಗಂತ ಕಳಪೆಯಾದವುಗಳನ್ನು ಅನಾಥರಿಗೆ ಕೊಡಬೇಕೆಂದಲ್ಲ. ಏನೂ ಇಲ್ಲದವರೂ ನಿರಾಕರಿಸುವ ಈ ಉಡುಗೊರೆಗಳು ಸಿಕ್ಕರೆ ಮುಖ ಅರಳುವುದಕ್ಕೆ ಸಾಧ್ಯವೆ?  ಇಂದು ನಮಗೆ ಯಾರೋ ಕೊಟ್ಟಿದ್ದಾರೆ, ನಾಳೆ ನಾವು ಇದನ್ನು ಯಾರಿಗೋ ದಾಟಿಸಿಬಿಡುತ್ತೇವೆ. ಹೋದದ್ದಕ್ಕೆ ಏನಾದರೂ ಕೊಡಬೇಕಲ್ಲ. ಹಾಗೆ ಆಕಡೆಯಿಂದ  ಈಕಡೆಗೆ ಈ ಕಡೆಯಿಂದ ಪುಟ್ ಬಾಲಿನಂತೆ ತಳ್ಳುವ ವಸ್ತುಗಳು.  ಕೊಡುವವರಿಗೂ ಗೊತ್ತಿದೆ ಇದು ಉಪಯೋಗ ಶೂನ್ಯ. ತೆಗೆದುಕೊಳ್ಳುವವರಿಗೂ ಗೊತ್ತಿದೆ ಇದು ಏನಕ್ಕೂ ಬರುವುದಿಲ್ಲ ಎಂದು. ಹೀಗೆ ನಮಗೆ ಉಚಿತವಾಗಿ ಸಿಕ್ಕದ್ದನ್ನು ಯಾರಿಗೋ ದಾಟಿಸುತ್ತೇವೆ. ಹಲವು ಸಲ ಹರಿದ ನೋಟನ್ನು ತಿಳಿಯದಂತೆ ಯಾರಿಗೋ ಅಂಟಿಸಿದಂತೆ ಬಾಸವಾಗುತ್ತದೆ. ವಿಪರ್ಯಾಸವೆಂದರೆ ಒಂದು ಸಲ ಹೀಗೆ ಕೊಟ್ಟದ್ದು ಒಂದೆರಡು ತಿಂಗಳು ಕಳೆದನಂತರ ಇನ್ನಾರದೋ ಕೈಯಿಂದ ನಮ್ಮ ಕೈಗೆ ಪುನಃ ಸಿಗುವ ಸಂಭವವು ಇದೆ. 

ನನಗೆ ಉಡುಗೊರೆ ಕೊಡುವುದರಲ್ಲೂ ಪಡೆಯುವುದರಲ್ಲೂ ಆಸಕ್ತಿಇಲ್ಲ. ಈ ಉಡುಗೊರೆಯದ್ದು ಒಂದು ದೊಡ್ಡ ಕಥೆ,  ಪಡೆದರೆ ಸಾಲದು ಅದನ್ನು ಬರೆದಿಟ್ಟು  ನೆನಪಿಸಿಕೊಂಡು  ಪುನಹ ಅದನ್ನು ಕೊಡಬೇಕು. ಹಾಗೇ  ಯಾವುದೇ ಮದುವೆ ಉಪನಯನಕ್ಕೆ ಹೋದರೂ ಮನಸಾರೆ ಶುಭ ಹಾರೈಸುತ್ತೇನೆ. ಸಂತಸದಿಂದ ಅವರಿಗೆ ಶುಭ ಹಾರೈಸಿ ಪರಮಾತ್ಮನಲ್ಲಿ ಶುಭವಾಗಲಿ ಎಂದು ಬೇಡಿಕೊಳ್ಳುತ್ತೇನೆ.  ಯಾರೊ ನೋಡುವುದಕ್ಕೆ ಇನ್ನಾರನ್ನೋ ತೃಪ್ತಿ ಪಡಿಸುವುದಕ್ಕೆ ಹಲವು ಸಲ  ಪ್ರದರ್ಶನ ಉಡುಗೊರೆ ಬಳಕೆಯಾಗುತ್ತದೆ. ಒಂದು ರೀತಿಯ ಢಾಂಬಿಕತನವಿದು. 

ಈಗೀಗ ಉಡುಗೊರೆಗಳು ಹೀಗೆ ಅರ್ಥ ಹೀನವಾಗುತ್ತವೆ. ಅವುಗಳನ್ನು ಹೊತ್ತು ತರುವುದು ಮತ್ತು ಅದೇ ರೀತಿ ಹೊತ್ತುಕೊಂಡು ಹೋಗಿ ಇನ್ನೊಬ್ಬರಿಗೆ ಒಪ್ಪಿಸುವುದು. ಈ ಯಾಂತ್ರಿಕತೆ ಯಾವ ಪುರುಷಾರ್ಥಕ್ಕೆ?  ಕೊಡುವುದಕ್ಕೆ ಮನಸ್ಸಿಲ್ಲದೆ ಕೊಡುವ ಉಡುಗೊರೆ ಕೊಡುವ ಉದ್ದೇಶವಾದರೂ ಏನು? ಅದು ಕೊಡದೇ ಇರುವುದೇ ವಾಸಿ. ಕೊನೆ ಪಕ್ಷ ಅದನ್ನು ಹಿಡಿದುಕೊಳ್ಳುವ ಶ್ರಮವಾದರೂ ತಪ್ಪುತ್ತದೆ. 

ಉಡುಗೊರೆಗಳು ಅದಕ್ಕಿರುವ ಮೌಲ್ಯಕ್ಕಿಂತಲೂ ಅದರ ಹಿಂದಿನ ಭಾವನೆಗಳು ಮೌಲ್ಯಯುತವಾಗುತ್ತವೆ. ಅದರ ಹಿಂದೆ ಇರುವ ಪ್ರೀತಿ ಸ್ನೇಹ ಅದಕ್ಕಿರುವ ಮೌಲ್ಯದಲ್ಲಿ ಕೊಡುವ ಉಡುಗೊರೆ ಕೇವಲ ಸಾಂಕೇತಿಕವಾಗುತ್ತವೆ. ಆದರೆ ಈಗಿಗ ಕೊಡುವ ಅಥವಾ ಪಡೆಯುವ ಉಡುಗೊರೆಗಳಿಗೆ ಸ್ನೇಹ ಪ್ರೀತಿಯ ಮೌಲ್ಯ ಇರುವುದಿಲ್ಲ.  ಗುಲಾಬಿ ಮೊಗ್ಗನ್ನು ಕೈಯಲ್ಲಿ ಹಿಡಿದಾಗ ಅದು ಪಸರಿಸುವ ಪ್ರೇಮದ ಗಂಧ ದಿವ್ಯವಾಗಿರುತ್ತದೆ. ಆದರೆ ಕೊಡುವ ಮನಸ್ಸಿನಲ್ಲೂ ಪಡೆಯುವ ಮನಸ್ಸಿನಲ್ಲೂ ಪ್ರೀತಿ ಎಂಬುದು ತುಂಬಿರಬೇಕು. ಇಲ್ಲವಾದರೆ ಅದು ಕೇವಲ ಹೂವಾಗಿಬಿಡುತ್ತದೆ. 




 

No comments:

Post a Comment