Sunday, August 4, 2024

ಜಗಲಿಯಲ್ಲಿ ಒಂದು ಇರುಳು

ಬೆಂಗಳೂರಿನ ಕೇಂದ್ರ ಮಾರುಕಟ್ಟೆಯ ಗಲ್ಲಿಯೊಳಗೆ ಒಂದು ಸಂಜೆ ಸಂಚರಿಸುತ್ತಿದ್ದೆ. ಮಳೆಗಾಲದ ಗಲ್ಲಿ ಎಂದರೆ ನರಕ ದರ್ಶನ.  ಬಹುಶಃ ಧರ್ಮರಾಯನಿಗೆ ಕ್ಷಣ ಒಂದಕ್ಕಾದರೂ ಆದ ನರಕ ದರ್ಶನ ಇಷ್ಟು ಭೀಕರವಾಗಿರಲಾರದು. ಅಷ್ಟು ಭೀಕರ ಭೀಭತ್ಸ ಇನ್ನು ಏನೇನೋ ಕಲ್ಪನೆಗಳು ಬಂದು ಬಿಡುತ್ತವೆ. ಒಂದು ಸಲ ಅಲ್ಲಿಂದ ಪಲಾಯನ ಮಾಡಿಬಿಡುವ ಎಂದು ಹಾತೊರೆಯುವುದು ಎಂದರೆ ನಮಗೆ ಅದಕ್ಕೆ ಅವಕಾಶ ಇದೆ ಎಂದರ್ಥ. ಅವಕಾಶ ಅಂತ ಹೇಳುವುದಕ್ಕೆ ಕಾರಣವಿದೆ. ಯಾಕೆಂದರೆ ಈ ಅವಕಾಶ ವಂಚಿತರು ಅದೇ ನರಕದಲ್ಲಿ ಜೀವನ ಮಾಡುವುದನ್ನು ಕಣ್ಣಾರೆ ಕಾಣಬಹುದು. ಜೀವನ ಏನು ಎಂದು ಅರ್ಥವಾಗಬೇಕಾದರೆ ಒಂದು ಸಲವಾದರೂ ಇಂತಹ ಸಮಯದಲ್ಲಿ ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಗೆ ಭೇಟಿ ಕೊಡಬೇಕು. 

ಒಂದು ಸಂಜೆ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಕತ್ತಲು ಆವರಿಸುತ್ತಿದ್ದರೂ ಇಲ್ಲಿಯ ಜಗತ್ತಿಗೆ ಆ ಪರಿವೆ ಇಲ್ಲ. ವಿಶ್ರಾಂತಿ ಇಲ್ಲದ ಪರಿಸರ.  ಸೂರ್ಯನಿಲ್ಲದ ಕತ್ತಲು ಅಷ್ಟೇ, ಹೊರತು ಸುತ್ತಮುತ್ತಲಿನ ಬೀದಿ ದೀಪಗಳ ಪ್ರಖರ ಬೆಳಕು ಇದ್ದೇ ಇದೆ. ಹಾಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಮೊಣಕಾಲು ಮಟ್ಟಕ್ಕೆ ನೀರು. ಪಕ್ಕದಲ್ಲಿ ಪಾದಾಚಾರಿ ರಸ್ತೆ ಅತೀ ಇಕ್ಕಟ್ಟಾಗಿ ಇತ್ತು. ಅದರ ಒತ್ತಿನಲ್ಲೇ ಒಂದು ಪುಟ್ಟ ಮನೆ. ಪುಟ್ಟ ಎಂದರೆ ಒಬ್ಬ ಒಳಗಿದ್ದರೆ ಮತ್ತೊಬ್ಬ ಒಳಗೆ ಹೋಗುವ ಹಾಗಿಲ್ಲ. ಅಂತಹ ಮನೆ. ಅಲ್ಲಿ ಒಂದು ಸಂಸಾರ. ಅಪ್ಪ ಅಮ್ಮ ಮಕ್ಕಳು ಇನ್ನು ಯಾರು ಯಾರು ಇದ್ದಾರೋ ಗೊತ್ತಿಲ್ಲ. ಯಾಕೆಂದರೆ ಆ ಮನೆಯ ವಿಳಾಸ ಮಾಡಿಕೊಂಡವರು ಅಲ್ಲೇ ಇರಬೇಕೆಂದೇನೂ ಇಲ್ಲ. ಮಾರುಕಟ್ಟೆಯ ಯಾವುದೋ ಮೂಲೆಯಲ್ಲಿ ಏನೋ ವ್ಯವಹಾರದಲ್ಲಿ ನಿರತರಾಗಿರಬಹುದು. ಹೇಳುವುದಕ್ಕೆ ಎಲ್ಲರಿಗೂ ಒಂದು ಮನೆ ಅಷ್ಟೇ. ವಿಶಾಲವಾದ ಜಗತ್ತಿನಲ್ಲಿ ಇರುವುದಕ್ಕೆ ಭಗವಂತ ಕರುಣಿಸಿದ ಗೇಣುದ್ದದ ಜಾಗ.  ಆ ಮಳೆಗೆ ಅಲ್ಲಿ ಸಂಚರಿಸುತ್ತಿದ್ದರೆ, ಮೊಣಕಾಲೆತ್ತರದ ನೀರು ಕೆಳಗೆ ಹರಿಯುತ್ತಿದ್ದರೆ....ಅಲ್ಲೆ ಒಂದು ಎತ್ತರ ಕಲ್ಲು ಬೆಂಚಿನ ಮೇಲೆ ಒಂದು ಮಗು ಚೆನ್ನಾಗಿ ಮಲಗಿತ್ತು. ಕೊಳಚೆ ಮೆತ್ತಿದ ಚಾದರವನ್ನು ಹೊದ್ದು ಮಳೆಯ ಪರಿವೆ ಇಲ್ಲದೆ ನಿದ್ರಿಸುತ್ತಿತ್ತು. ಇನ್ನು ಕೆಲವರು ಅಲ್ಲೆ ನಿದ್ರಿಸುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಆಗ ಅನ್ನಿಸಿತು ಹಾ ಜೀವನವೇ? ನಾನು ಮನೆಗೆ ಹೋಗಿ ಅಂಗಾಂಗ ತೊಳೆದು ಬೆಚ್ಚಗೆ ಮಲಗುವ ಬಯಕೆಯಲ್ಲಿದ್ದರೆ, ಇವರಿಗೆ ಅದನ್ನು ಬಯಸುವ ಯಾವ ಅವಕಾಶವೂ ಇಲ್ಲದೇ ಅಲ್ಲೇ  ಮಲಗುವುದಕ್ಕೆ ತೊಡಗುತ್ತಾರೆ. 

ಆ ಮಗುವಿನ ನಿದ್ರೆಯನ್ನು ನೋಡಿ, ನನಗೆ  ನಾಲ್ಕು ದಶಕಗಳ ಹಿಂದಿನ ಒಂದು ದಿನದ ರಾತ್ರಿಯ ನೆನಪಾಯಿತು. ಹೌದು ಇದೇ ರೀತಿ ಬೀದಿ ಬದಿಯ ಜಗಲಿಯಲ್ಲಿ ಮಲಗಿದ್ದೆ. ಆದರೆ ಅದು ಈ ಬಗೆಯ ನರಕವಲ್ಲ. ಆದರೆ ಅದು ಒಂದು ಹಳ್ಳಿಯ ಅಂಗಡಿ ಜಗಲಿ ಎಂಬುದಷ್ಟೇ ಸಾಮ್ಯತೆ.  ನನಗಾಗ ಹನ್ನೆರಡರ ವಯಸ್ಸಿರಬಹುದು. ಪುಟ್ಟ ಬಾಲಕ ನಾನು. ಪೈವಳಿಕೆಯ ಹಳ್ಳಿಯ ಮನೆಯಲ್ಲಿ ವಾಸಿಸುತ್ತಿದ್ದ ಸಮಯ. ನಮ್ಮ ಮನೆಯೂ ಅಷ್ಟೇ ಒಂದು ಕೋಣೆಯ ಪುಟ್ಟಗುಡಿಸಲು. ಆಗ ಚಕ್ಕುಲಿ ವ್ಯಾಪಾರವಿತ್ತು. ಶಾಲೆಯಿಂದ ಬಂದು  ಸಾಯಂಕಾಲ ಚಕ್ಕುಲಿಯ ಚೀಲ ಹಿಡಿದು ಅಂಗಡಿ ಅಂಗಡಿ ಸುತ್ತಿದರೆ ಮರುದಿನದ ಹಸಿವೆಗೆ ಪರಿಹಾರವಾಗುತ್ತಿತ್ತು. ಆ ಸಮಯದಲ್ಲಿ ನಮ್ಮ ಮನೆಯಿಂದ ಹತ್ತು ಮೈಲಿ ದೂರ ಒಂದು ಕುಗ್ರಾಮ ವಿತ್ತು. ಈಗ ಒಂದಷ್ಟು ಸುಧಾರಿಸಿದೆ. ಆಗ ಅದು ತೀರಾ ಕುಗ್ರಾಮ. ವಿದ್ಯುತ್ ಇಲ್ಲ, ಸರಿಯಾದ ರಸ್ತೆ ರಸ್ತೆ ಇಲ್ಲ. ಇದ್ದ ಒಂದು ಮಣ್ಣಿನ ರಸ್ತೆ  ಎಂದರೆ ಅದು ರಸ್ತೆಯ ಗುರುತು ಮಾತ್ರ ಇಲ್ಲದೇ ಇದ್ದರೆ ಅದು ಬರೀ  ಹೊಂಡ ಗುಂಡಿಯ ಮಣ್ಣಿನ ರಸ್ತೆ. ಮಳೆಗಾಲದಲ್ಲಿ ಕೆಸರಾದರೆ, ಬೇಸಗೆಯಲ್ಲಿ ಧೂಳು. ಆ ರಸ್ತೆಯಲ್ಲಿ  ಒಂದೆರಡು ಬಸ್ಸು ಬೆಳಗ್ಗೆ ಮಧ್ಯಾಹ್ನ ಸಾಯಂಕಾಲ ಓಡುವುದು ಬಿಟ್ಟರೆ ನಾಗರೀಕ ಸಮಾಜದ ಯಾವ ಸಂಪರ್ಕವೂ ಇಲ್ಲದ ಕನಿಯಾಲ ಎಂಬ ಅದ್ಭುತ ಕುಗ್ರಾಮ. 

ಆಗ ಎರಡು ಬಸ್ಸು  ಸಂಚರಿಸುತ್ತಿತ್ತು. ಸಾಯಂಕಾಲ ಐದು ಘಂಟೆ ಕಳೆದರೆ ಆ ಊರಿನಿಂದ ಹೊರ ಹೊಗುವುದಕ್ಕೆ ಯಾವ ಬಸ್ಸೂ ಇರಲಿಲ್ಲ. ಒಂದು ಬಾರಿ ಐದು ಘಂಟೆಗೆ ಬಿಡುವ ಬಸ್ಸು ಸ್ವಲ್ಪ ಸಮಯ ತನ್ನ ಸಂಚಾರವನ್ನು ನಿಲ್ಲಿಸಿತ್ತು. ಸಾಮಾನ್ಯವಾಗಿ  ನಾವು ಅದೇ ಅಲ್ಲಿದ್ದ ಕೆಲವು ಅಂಗಡಿಗಳ ವ್ಯಾಪಾರ ಮುಗಿಸಿ ಅದೇ ಬಸ್ಸಿನಲ್ಲಿ ಮನೆಗೆ ವಾಪಾಸಾಗುತ್ತಿದ್ದುದರಿಂದ, ಆ ಬಸ್ಸು ಇಲ್ಲದೇ ಇದ್ದುದರಿಂದ ಅಲ್ಲಿಯ ವ್ಯಾಪಾರ ನಿಂತೇ ಹೋಗಿತ್ತು. ಆಗ ವ್ಯಾಪಾರ ಎಂದರೆ ಬಹಳ ಕಷ್ಟಕರವಾಗಿತ್ತು. ಎಲ್ಲ ಕಡೆಯೂ ವ್ಯಾಪಾರ ಕಡಿಮೆಯಾದಾಗ ಒಂದು ಬಾರಿ ಅಲ್ಲಿಗೆ ಹೋಗಲೇ ಬೇಕಾಗುವ ಅನಿವಾರ್ಯತೆ ಬಂದು ಬಿಟ್ಟಿತು. ಆದರೆ ಹೋದರೂ ಬರುವುದು ಹೇಗೆ? ಒಂದು ದಿನ ಶಾಲೆಯಿಂದ ಬಂದವನೆ ಚಕ್ಕುಲಿ ಚೀಲ ಹಿಡಿದು ಸಂಜೆಯ ಕೊನೆಯ ಬಸ್ಸು ಹತ್ತಿದೆ. ಆ ಬಸ್ಸು ಕನಿಯಾಲ ತಲುಪುವಾಗ ಕತ್ತಲೆಯಾಗಿತ್ತು. ನಂತರ ಅಲ್ಲಿಂದ ಆ ರಾತ್ರಿ ಬರುವುದು ಸಾಧ್ಯವಿರಲಿಲ್ಲ.  ಅದೊಂದು ವಿದ್ಯುತ್ ಇಲ್ಲದ  ಕುಗ್ರಾಮ.  ಒಂದೆರಡು ಅಂಗಡಿ ಒಂದು ಜೋಪಡಿಯಂತಹ ಹೋಟೇಲು.  ಸುತ್ತಲೂ ಎಲ್ಲವೂ ಕತ್ತಲು ಮಾತ್ರವಲ್ಲ, ಧೋ ಎಂದು ಸುರಿವ ಮಳೆ.  ಎಂಟು ಗಂಟೆಯಾಗಬೇಕಾದರೆ ಅಂಗಡಿಗಳೆಲ್ಲವೂ ಬಾಗಿಲು ಹಾಕಿ ಜನರು ಎಲ್ಲರೂ ಒಬ್ಬೊಬ್ಬರಾಗಿ  ತಮ್ಮ ತಮ್ಮ ಮನೆಯ ಕಡೆಗೆ ಹೋದರು. ಚಕ್ಕುಲಿ ಮಾರಿದ ಹಣ ಜೋಬಿನಲ್ಲಿ ಮನೆಯಿಂದ ತಂದ ತಂದ ಒಂದು ಬೈರಾಸು ಬಿಟ್ಟರೆ  ಚೀಲ ಮತ್ತೇ ಏನೂ ಇರಲಿಲ್ಲ. ಪುಟ್ಟ ಬಾಲಕ. ಅದೊಂದು ಬಗೆಯ ಹುಂಬ ಧೈರ್ಯ. 

ಹೋಟೇಲಿನಲ್ಲಿ ಉಳಿದ ಅನ್ನ ಮಜ್ಜಿಗೆ ಊಟ ಸಿಕ್ಕಿದ್ದು ನನ್ನ ಹಸಿವನ್ನು ನೀಗಿಸಿತ್ತು. ಹೋಟೆಲು ಬಾಗಿಲು ಹಾಕಿದ ಮೇಲೆ ನಾನು ಯಃಕಶ್ಚಿತ್ ಏಕಾಂಗಿಯಾದೆ. ಯಾರಾದರೂ ಅಂಗಡಿಯವರು ಮನೆಗೆ ಕರೆಯಬಹುದು ಎಂದು ಒಂದು ಸಲ ನಿರೀಕ್ಷಿಸಿದ್ದೆ. ಆದರೆ ಹಾಗಾಗಾಗಲಿಲ್ಲ. ಎಲ್ಲರೂ ಹೋದ ಮೇಲೆ  ಅಂಗಡಿಯ ಜಗಲಿಯಲ್ಲಿ ಒಂದು ಮರದ ಬೆಂಚು ಇತ್ತು. ಅದರಲ್ಲೇ ಮಲಗಿದೆ. ಬಹಳ ಹೊತ್ತು ನಿದ್ದೆ ಬರಲಿಲ್ಲ. ಜೋರಾದ ಮಳೆಯ ಸದ್ದಿಗೆ ಸುತ್ತ ಮುತ್ತಲಿನ ಪರಿಸರ ಏನೂ ಕಾಣುತ್ತಿರಲಿಲ್ಲ. ಹಳೆಯ ಮಲಯಾಳಂ ಸಿನಿಮಾದ ಹಳ್ಳಿಯ ದೃಶ್ಯದಂತೆ ಪರಿಸರ. ಚಿತ್ರ ವಿಚಿತ್ರ ಶಬ್ದಗಳು, ಕಪ್ಪೆಗಳ ವಟ ಗುಟ್ಟುವಿಕೆ, ಜೀರುಂಡೆಯ ಸದ್ದು...ಆ ಹಳ್ಳಿಯಲ್ಲಿ ಇದಲ್ಲದೆ ಬೇರೇನು ಇರುವುದಕ್ಕೆ ಸಾಧ್ಯ?  ವಿದ್ಯುತ್ ಇಲ್ಲದ ಕಾರಣ ಕಣ್ಣು ತೆರೆದರೂ ಎನೂ ಕಾಣಿಸದ ಕಪ್ಪು ಕತ್ತಲು. ಹಾಗೇ ಮಲಗಿದವನಿಗೆ ಅದಾವಾಗ ನಿದ್ದೆ ಬಂತೋ ತಿಳಿಯದು ಮುಂಜಾನೆ ಹೋಟೆಲಿನ ಭಟ್ಟರು ಬಾಗಿಲು ತೆಗೆದ ಸದ್ದಿಗೆ ಎಚ್ಚರವಾಯಿತು. ಅಂತೂ ಆ ರಾತ್ರಿ ಒಂದು ಜೀವಮಾನದಲ್ಲಿ ಬಹಳ ಸ್ಮರಣೀಯವಾಯಿತು. ಈಗ ಕನಿಯಾಲ ಕುಗ್ರಾಮ ಎನ್ನುವ ಹಾಗಿಲ್ಲ.ಅಲ್ಲಿಯ ತನಕ ರಸ್ತೆಗೆ ಟಾರು ಹಾಕಲಾಗಿದೆ. ಬಹಳಷ್ಟು ವಾಹನಗಳು ಓಡಾಡುತ್ತವೆ. ಅಕ್ಕ ಪಕ್ಕದ ಊರುಗಳಿಗೆ ಅಲ್ಲಿಂದ ಸಂಪರ್ಕ ರಸ್ತೆಗಳಿವೆ.  ಕನಿಯಾಲ ಎಂಬ ಹೆಸರು ಕೇಳಿದರೆ ಈಗಲೂ ಆ ರಾತ್ರಿ ನೆನಪಿಗೆ ಬರುತ್ತದೆ

No comments:

Post a Comment