Monday, May 30, 2016

ಉಷ್ಟಾಸನ...ಒಂಟೆ ಭಂಗಿ


            ನಾನು ಯೋಗಾಭ್ಯಾಸಕ್ಕೆ ತೊಡಗುವಾಗ ಕೆಲವು ಆಸನಗಳು ನನ್ನಿಂದ ಸಾಧ್ಯವೇ ಇಲ್ಲವೇನೋ ಅಂತನ್ನಿಸುತ್ತಿತ್ತು. ನನ್ನ ಹಿಡಿತದಲ್ಲಿ ಇಲ್ಲದ ದೇಹದ ಬಗ್ಗೆ ಹಲವಾರು ಸಲ ವೈರಾಗ್ಯ ಮೂಡಿದ್ದಿದೆ. ರುಚಿ ಅನ್ನಿಸಿದ್ದೆಲ್ಲ ತಿನ್ನುತ್ತಾ ಒಂದು ರೀತಿಯ ಶ್ವಾನ ರೂಪದ  ಭಕ್ಷಣೆಯ  ಜೀವನ ಶೈಲಿಯಿಂದ ದೇಹವೆಂದರೆ ಮನಸ್ಸಿನ ಸಂಬಂಧವನ್ನೂ ನಿಯಂತ್ರಣವನ್ನು ಮೀರಿ ಬೆಳೆದಿದೆ ಎಂದನ್ನಿಸುತ್ತಿತ್ತು. ನನ್ನಿಂದ ಸಾಧ್ಯವೇ ಇಲ್ಲ ಎಂದು ಭಾವಿಸಿದ ಆಸನಗಳು ಯೋಗಾಭ್ಯಾಸ ಮಾಡುತ್ತಾ ಮಾಡುತ್ತ ನನ್ನಿಂದ ಆಗದೇ ಇರುವಂತಹುದು ಯಾವುದು ? ಅದರ ಅನ್ವೇಷಣೆಗೆ ಪ್ರೇರೆಪಣೆ ನೀಡಿದ್ದು ಸುಳ್ಳಲ್ಲ. ಅಂತಹ ಆತ್ಮ ಸ್ಥೈರ್ಯವನ್ನು ಕೊಟ್ಟಂತಹ ಆಸನಗಳಲ್ಲಿ ಒಂದು ’ಉಷ್ಟ್ರಾಸನ” .

ಇದು ಒಂಟೆ ಭಂಗಿ. ಉಷ್ಟ್ರ ಅಂದರೆ ಒಂಟೆ.  ಈ ಆಸನ ಧನುರಾಸನದ ವಿರುದ್ಧ ದಿಕ್ಕಿನಲ್ಲಿರುತ್ತದೆ. ಎರಡು ಮೊಣಕಾಲುಗಳ ಮೇಲೆ ನೀಂತುಕೊಂಡು ಪಾದಗಳು ನಿಂತಂಬಂದ ಕೆಳಗಿರಬೇಕು. ಹಿಂದಕ್ಕೆ ಬಾಗುತ್ತ ಎಡಕೈಯಿಂದ ಎಡಪಾದದ ಹಿಮ್ಮಡಿಯನ್ನೂ ಬಲಕೈಯಿಂದ ಬಲಪಾದದ ಹಿಮ್ಮಡಿಯನ್ನು ಹಿಡಿದು ತಲೆಯನ್ನು ಹಿಂದಕ್ಕೆ ಬಾಗಿ ಎದೆಯ ಭಾಗವನ್ನು ಅಗಲಿಸಬೇಕು. ಇದೆ ಭಂಗಿಯಲ್ಲಿ ಕೆಲವಾರು ಉಸಿರಾಟವನ್ನು ನಡೆಸಿದ ಮೇಲೆ ಮತ್ತೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರಬೇಕು. ಕಡಿಮೆ ಸಮಯದಲ್ಲಿ ಮಾಡುವ ಅತ್ಯಂತ ಸರಳವಾದ ಆಸನವಿದು.
ಸಾಮಾನ್ಯವಾಗಿ ಸ್ತ್ರೀ ಸಂಬಂಧೀ ಸಮಸ್ಯೆಗಳಿಗೆ ಈ ಆಸನ ಅತ್ಯಂತ ಉಪಯುಕ್ತವಾಗಿದೆ. ಅಸ್ತಮ ಉಬ್ಬಸದಂತಹ ಕಾಯಿಲೆ ನಿವಾರಣಗೆ ಇದು ಸಹಕಾರಿ. ಮಾತ್ರವಲ್ಲ ಸೊಂಟದ ಭಾಗದಲ್ಲಿ ಸ್ಥಿರತೆಯನ್ನೂ ಒದಗಿಸುವುದರಿಂದ ಹೊಟ್ಟೆ ಸಂಬಂಧೀ ಕ್ರಿಯೆಗಳಾದ ಜೀರ್ಣ ಆಹಾರ ಸೇವನೆ ಇವುಗಳನ್ನು ಸಂತುಲಿತವಾಗಿರಿಸುವುದಕ್ಕೆ ಸಹಕಾರಿಯಾಗುತ್ತದೆ. ಮಾನಸಿಕವಾಗಿ ನಮ್ಮಲ್ಲಿ ಆತ್ಮ ಶಕ್ತಿಯನ್ನು ವೃದ್ದಿಸುವ ಒಂದು ಉಪಯುಕ್ತ ಆಸನ. ಮತ್ತು ದೇಹದ ಚಲನೆಗಳನ್ನು ನಿಯಂತ್ರಿಸು ಭಾಗುವಿಕೆ ಬಹಳ ಸುಲಭವಾಗುತ್ತದೆ. ಉಸಿರಾಟದ ಸಮಸ್ಯೆಗಳು, ಅಲರ್ಜಿ ಮುಂತಾದ ಸಮಸ್ಯೆ ನಿವಾರಣೆಗೆ ನಿಯಮಿತವಾಗಿ ಈ ಆಸನವನ್ನು ಮಾಡಿದಲ್ಲಿ ಬಹಳ ಉಪಯುಕ್ತವಾಗಿರುತ್ತದೆ. ಪ್ರತಿಯೋಬ್ಬ ಸ್ತ್ರೀ ಯು ಮಾಡಲೇ ಬೇಕಾದ ಉತ್ತಮ ಆಸನ. 

Sunday, May 29, 2016

ಬುದ್ದಿವಂತರು ಆದರೆ.....???


ಪ್ರತಿಯೊಬ್ಬರು ಅವರವರ ಪರಿಧಿಯಲ್ಲಿ ಬುದ್ಧಿವಂತರೇ ಆಗಿರುತ್ತೇವೆ. ಹಾಗಿದ್ದರೂ ನಾವು ಹಲವು ಸಲ ತಿಳಿದೂ ಮಂದಮತಿಗಳಾಗಿ ದ್ವಂದ್ವಗಳಲ್ಲಿ ಸಿಕ್ಕಿಬಿಡುತ್ತೇವೆ. ನಮ್ಮ ಬುದ್ದಿಗೆ ಅರ್ಥವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿ ನಾವೇ ಮೂರ್ಖರೇನೋ ಎಂದು ಅನ್ನಿಸಿಬಿಡುತ್ತದೆ.
ಸಾಮಾನ್ಯವಾಗಿ ನಾನು ದಿನ ಪತ್ರಿಕೆಯನ್ನು ಅದರ ತಲೆಬರಹಕ್ಕಷ್ಟೇ ಸೀಮಿತಗೊಳಿಸುತ್ತೇನೆ. ಮುಂಜಾನೆಯ ಗಡಿಬಿಡಿಗೆ ಅದಕ್ಕೆ ಸಮಯವೂ ಇರುವುದಿಲ್ಲ ಒಂದಾದರೆ,  ನನ್ನ ಮನೋಭಾವಕ್ಕೆ ಒಪ್ಪುವ ವಿಚಾರಗಳ ಕೊರತೆ ಇನ್ನೊಂದು ಮುಖ್ಯ ಕಾರಣ.  ಆದರೂ ಕೆಲವೊಂದು ಬರಹಗಳು ನನ್ನನ್ನು ಗಾಢವಾಗಿಸುತ್ತವೆ. ಅವುಗಳಲ್ಲಿ ಒಂದು ಉದಯವಾಣಿಯ ಭಾನುವಾರದ “ಜೋಗಿ ಕಾಲಂ”. ಈ ಕಾಲಂನ ಒಳಗೆ ಒಂದಷ್ಟು ಹೊತ್ತು ಸುತ್ತಾಟ ಆದಿನದ ದಿನಚರಿ. ಕೆಲವೊಮ್ಮೆ ಈ ಸುತ್ತಾಟವೂ ಕಳೆದುಕೊಳ್ಳುವುದುಂಟು.  ಹೀಗೆ ಸುತ್ತಾಡುವಾಗ ಇಂದಿನ ಕಾಲಂ ನ ಬಗ್ಗೆ ಬರೆಯೋಣ ಅನ್ನಿಸಿತು. 
ಕಾಲಂನ ಆರಂಭವೇ ಹಾಗೆ, ಬದಲಾದ ಕಾಲದ ಕಾಲದ ನೆನಪು ಈ ಕಾಲಂ.  ನಮ್ಮ ಪರಿಸರ ನಾವುಗಳು ಸಾಕ್ಷಿಯಾಗಿದ್ದುಕೊಂಡೇ ಬದಲಾಗುತ್ತದೆ. ಅಥವಾ ಬದಲಾವಣೆಗೆ ನಾವು ಸಾಕ್ಷಿಯಾಗುತ್ತೇವೆ. ಈ ನಡುವೆ ನಾವು ಬುದ್ಧಿವಂತರೆಂಬ ಭಾವ ನಮ್ಮಲ್ಲಿರುತ್ತದೆ. ಆದರೆ ನಮ್ಮ ಬುದ್ದಿಯೂ ಒಂದು ಪ್ರಶ್ನಾರ್ಹವಾಗಿ ಭಾಸವಾಗುವುದು ಈ ಕಾಲಂ ಸುತ್ತಾಡಿದಾಗ. ನಮ್ಮೂರಿನ ತೀರ್ಥಕ್ಷೇತ್ರದ ದರ್ಶನದಿಂದ ತೊಡಗುತ್ತದೆ. ಬದಲಾದ ಈ ಪರಿಸರದಲ್ಲಿ ನಮ್ಮ ನಿಲುವನ್ನು ನಾವೇ ಮುಟ್ಟಿಯೋ ತಟ್ಟಿಯೋ ನೋಡುವಂತಾಗುತ್ತದೆ.  ನಾವು ಎಲ್ಲೆಂದರಲ್ಲಿ ಸುತ್ತಾಡಿ ಓಡಾಡಿ ಸುಸ್ತಾದಗ ವಿರಮಿಸಿ ಹೊರಳಾಡಿದ ದೇವಸ್ಥಾನದ ಪರಿಸರ ಬದಲಾಗಿಬಿಟ್ಟಿರುತ್ತದೆ. ಇಲ್ಲಿ ನಾವೇ ಪರಕೀಯರಂತೆ ನಿಂತಿರುತ್ತೇವೆ.  ನಮ್ಮ ಹರಕೆ ನಮಸ್ಕಾರಕ್ಕೂ ಲೆಕ್ಕವಿಟ್ಟು ನಮ್ಮ ಭಕ್ತಿಗೊಂದು ಮಿತಿಯನ್ನು ಎಳೆದುಬಿಡುತ್ತಾರೆ. ಕಾಲದ ಪರಿಮಿತಿಯಲ್ಲೇ ಮುಗಿಸಬೇಕಾದ ನಮ್ಮ ದೇವತಾರ್ಚನೆಯಲ್ಲಿ ನಮ್ಮ ಬುದ್ದಿಮತ್ತೆಯನ್ನು ನಾವೇ ಹುಡುಕಬೇಕಾದ ಅನಿವಾರ್ಯತೆ ಇರುತ್ತದೆ.
ಇಲ್ಲಿ ಬರುವ ಒಂದು ಮಾತು ಬಹಳ ಅಪ್ಯಾಯಮಾನವಾಗುತ್ತದೆ.  ’ದೈವ ಭಕ್ತಿ   ಎಂಬುದು ಆತ್ಮವಿಶ್ವಾಸವಾಗಬೇಕೇ ಹೊರತು, ಅದು ಮೂಢನಂಬಿಕೆಯಾಗಬಾರದು.”  ಹೌದು ದೇವರಲ್ಲಿ ಭಕ್ತಿ ಗೌರವ ಇರಬೇಕು ಆದರೆ ಭಯವನ್ನು ಹುಟ್ಟಿಸುವ ಮೂಢನಂಬಿಕೆ ಇರಬಾರದು.   ಯೋಚಿಸುವ ನಮ್ಮ ಅಪ್ಪ ಅಮ್ಮನಲ್ಲಿ ನಮಗೆ ಭಕ್ತಿ ಗೌರವ ಪ್ರೀತಿ ಇರಬೇಕು  ಅಲ್ಲಿ ಭಯವಿದ್ದರೆ ?  ಇವುಗಳೆಲ್ಲ ಬಲವಂತದ ಭಾವನೆಗಳಾಗಿಬಿಡುತ್ತದೆ. ಅಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಅನಿವಾರ್ಯತೆ ಇರುತ್ತದೆ.
ಮತ್ತೊಂದು ಮಾತು ಗಮನೀಯವಾಗುತ್ತದೆ. ’ ಭಕ್ತರ ಸಂಖ್ಯೆ ಹೆಚ್ಚಾಗಿದೆ ಆದರೆ ದೇವರ ಸಂಖ್ಯೆ ಹೆಚಾಗಿಲ್ಲ. ಅದಕ್ಕೆ ಈ ಪರಿಯ ಒದ್ದಾಟ. ’ ಭಕ್ತರು ಜಾತಿ ಪಂಗಡ ಹೀಗೆ ಸಂಖ್ಯೆಯಲ್ಲಿ ಎಷ್ಟಿದ್ದರೂ ದೇವರೊಬ್ಬನೇ ಎಂದು ಸರಳವಾಗಿ ಸೂಚಿಸುವ ವಾಕ್ಯವಿದು. ಮಾತ್ರವಲ್ಲ  ಇಂದು ಎಲ್ಲ ದೇವಾಲಯ ಕ್ಷೇತ್ರಗಳಲ್ಲೂ ಭಕ್ತರ  ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ಹಾಗಾಗಿ ಮೊದಲು ಆಗುತ್ತಿದ್ದ ಖಾಸಗೀತನದ ಅನುಭವ ಊರಿನ ಸಣ್ಣ ಪುಟ್ಟ ಗುಡಿಗಳಲ್ಲೂ ಆಗುವುದಿಲ್ಲ.  ಯೋಚಿಸಿದರೆ ನಾವೇ ಪರಕೀಯರೇನೋ ಎಂಬ ಅನುಭವ.  ನಾವು ಊರು ಬಿಟ್ಟು ಹೋಗಿ ಒಂದಷ್ಟು ವರ್ಷ ಕಳೆದು ಬಂದರೆ  ಮನೆಯ ಕೆಲಸದಾಳು ಮನೆಯ ಮೂಲೆ ಮೂಲೆಯನ್ನೂ ಪರಿಚಯಿಸುತ್ತಾನೆ.  ಅದೂ ನಾವು ಬೆಳೆದ ಮನೆಯಬಗ್ಗೆ?!!!
ಊರು ಹಾಳು ಮಾಡಲು ಒಬ್ಬ ದೇವರು ಸಾಕು ಮಾರಾಯ..... ಇದನ್ನು ಕೇಳಿದರೆ ದೇವರು ನಗಬಹುದು. ಇಂದು ಹಾಳಾಗುತ್ತಿರುವುದು ದೇವರಿಂದ ಅಲ್ಲ. ನಮ್ಮ ನಮ್ಮ ಭಾವನೆಗಳಿಂದ. ಮನುಷ್ಯನ ಭಾವನೆ ಕಾಲ ಕಳೆದಂತೆ ಬದಲಾಗುತ್ತದೆ. ಆದರೆ ನೋಡಿ...ಸ್ವತಂತ್ರವಾಗಿ ಬದುಕುವ ಪ್ರಾಣಿಗಳು ಅಂದು ಹೇಗೆ ಬದುಕುತ್ತಿತ್ತೋ ಇಂದು ಹಾಗೇ ಬದುಕುತ್ತವೆ. ಶೈಲಿ ಬದಲಾಗಿರಬಹುದು. ಆದರೆ ಅವುಗಳ ಸ್ವಭಾವ ಬದಲಾಗಿಲ್ಲ. ಯಾಕೆಂದರೆ ಅವುಗಳ ಭಾವನೆ ಮನುಷ್ಯನಂತೆ ಬದಲಾಗುವುದಿಲ್ಲ.
ಯಾವುದೋ ಪಾಪ ಭಯದಿಂದ ದೇವಸ್ಥಾನಕ್ಕೆ ಹೋಗುತ್ತೇವೆ. ಸರ್ಪವನ್ನು ನೋಡದೇ ಇದ್ದವರೂ ನಾಗದೋಷದ ಭಯದಿಂದ ಪರಿತಪಿಸುತ್ತಾರೆ. ಆದರೆ ಕ್ಷೇತ್ರಕ್ಕೆ ಬಂದನಂತರವೇ ನಾವು ಪಾಪಗಳನ್ನು ಮಾಡುತ್ತೇವೆ. ಬಹಳ ಸತ್ಯವಾದ ಮಾತು. ದೇವಸ್ಥಾನಕ್ಕೆ ಹೋದಕೂಡಲೆ ನಮ್ಮ ಸಹನೆ ಹರಿದುಬಿಡುತ್ತದೆ. ದರ್ಶನದ  ಸರದಿ ಸಾಲಲ್ಲಿ ನಿಂತ ಒಡನೆ ಊಟದ ಸರದಿ ಸಾಲು ಕಾಣಿಸುತ್ತದೆ. ಸರದಿ ಸಾಲು ಮುಂದೆ ಹೋಗದಾಗ ಅಸಹನೆಯಿಂದ ಮುಂದಿನವರನ್ನು ಇಲ್ಲಾ ವ್ಯವಸ್ಥೆಯನ್ನು ಶಪಿಸುತ್ತೇವೆ. ನಮ್ಮ ಉದ್ವೇಗ ಉದ್ರೇಕ ಶಮನಕ್ಕಾಗಿ ದೇವಾಲಯಕ್ಕೆ ಬಂದರೆ ಇವೆರಡೂ ಅಧಿಕವಾಗಿಬಿಡುತ್ತದೆ.!!!
ನಾವು ಹೊರಟ ತಾಣಕ್ಕಿಂತ ದೇವಾಲಯ ಹೆಚ್ಚು ನೆಮ್ಮದಿ ಶಾಂತಿ ಸಮಾಧಾನ ಕೊಡುತ್ತದೆ ಎಂದು ಭಾವಿಸುತ್ತೇವೆ.  ಇದು ನಮ್ಮ ಭಾವನೆಯಷ್ಟೆ. ಆಧ್ಯಾತ್ಮದ ತತ್ವದಲ್ಲಿ ಅತರಂಗದ ಚೇತನವನ್ನು ಜಗತ್ತಿಗೇ ಸಾರಿದ ಬುದ್ದಿವಂತರು ನಾವು.  ಶಾಂತಿ ಎಲ್ಲಿಯೂ ಇಲ್ಲ ಅದು ನಮ್ಮ ಮನದಲ್ಲೆ ಇರುತ್ತದೆ. ಇದನ್ನು ಸಾರಿದವರು ನಾವು.
ಇಂದು ಊರಿನ ಹಲವು ದೇವಾಲಯದ ಉತ್ಸವಾದಿಗಳ ಕಾರ್ಯಕ್ರಮ ಪಟ್ಟಿ ನೋಡುವಾಗ ನಗು ಬರುತ್ತದೆ.  ಇಂದು ಕ್ಷೇತ್ರ ಮಹಿಮೆ ಅಥವ ಕಾರ್ಣಿಕ ಉಳ್ಳದ್ದು ಎನಿಸಿಕೊಳ್ಳಬೇಕಾದರೆ ಅಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ವೃದ್ಧಿಯಾಗಬೇಕು. ಅದು ವೃದ್ಧಿಯಾದಷ್ಟು ಕ್ಷೇತ್ರ ಪ್ರಸಿದ್ಧವಾಗುತ್ತದೆ. ಕ್ಷೇತ್ರದ ಆದಾಯ ಹೆಚ್ಚುತ್ತದೆ. ಮಜರಾಯಿ ಇಲಾಖೆಗೂ ಆದಾಯ ವೃದ್ಧಿಯಾಗುತ್ತದೆ. ಅದೂ ಬಯಸುವುದು ಈ ಮಾರ್ಕೆಟಿಂಗ್ ತಂತ್ರವನ್ನೆ. ಆಗ ಹೋದ ನಾವುಗಳು ವ್ಯವಸ್ಥೆಯ ಕುಂದು ಕೊರತೆಯ ಬಗ್ಗೆ ದೂರಿಕೊಳ್ಳುತ್ತೇವೆ.   ಜನ ಸೇರಿಸುವ ತಂತ್ರವೆಂದರೆ ಜನಪ್ರಿಯ ವ್ಯಕ್ತಿಗಳನ್ನು (ಸೆಲೆಬ್ರಿಟಿ) ಕರೆಸುವುದು. ಹೊಸ ಹೊಸ ಕಾರ್ಯಕ್ರಮ ಸಂಗೀತ ರಸಮಂಜರಿ ನಾಟಕ ಹೀಗೆ ಕಾರ್ಯಕ್ರಮಗಳನ್ನು ಮಾಡುವುದು. ಬಂದ ಸೆಲೆಬ್ರಿಟಿಗಳು ದೇವಸ್ಥಾನದ ಮಹಿಮೆ ನೋಡಿ ಭಕ್ತಿಯಿಂದ ಬರುವುದಲ್ಲ. ಬಂದ ಮೇಲೆ ಭಕ್ತಿ ಪ್ರಕಟಿಸುತ್ತಾರೆ. ಅದೂ ಪ್ರದರ್ಶನಕ್ಕೆ.  ಹೀಗೆ ಮಾಡುವ ಕಾರ್ಯಕ್ರಮದ ಸಂಘಟಕರಲ್ಲೇ ಒಂದು ಸಲ ಕೇಳಿದೆ ....ಉತ್ತರ  ಜನ ಸೇರಬೇಕಲ್ವ.. ಹೌದು ಜನ ಸೇರಿದರೆ ಅವರ ಜೀವನ ಸಾಗುತ್ತದೆ.  ಇದೆಲ್ಲ ಬೇಡ ನಮ್ಮ ಮನೆಯಲ್ಲೇ ಕುಳಿತು ನಾವು ನಾವಾಗಿ ದೇವರ ಧ್ಯಾನವೋ ಪೂಜೆಯೋ ಮಾಡಿದರೆ.....ಎಲ್ಲೂ ಸಿಗದ ಶಾಂತಿ ಆ ಎಕಾಂತದಲ್ಲಿ ಸಿಗುತ್ತದೆ. ಇಲ್ಲಿ ಮಾರ್ಕಟಿಂಗ್ ಆಗುತ್ತಿರುವುದು ನಮ್ಮ ಭಾವನೆಗಳ ಬಲದಲ್ಲಿ.  ಅದನ್ನು ತಿಳಿಯದ ನಮ್ಮ ಬುದ್ಧಿವಂತಿಗೆ ಎಂತಹುದು?

ಸಾಧ್ಯವಾದರೆ ಈ ಕಾಲಂ ನ ಒಳಗೆ ಒಂದೆರಡು ಸುತ್ತು ಹೊಡೆಯಿರಿ. ವಿವೇಚನೆಗೆ ಹಚ್ಚುವ ಒಂದಷ್ಟು ವಿಚಾರಗಳು ಸಿಗುತ್ತವೆ. 

Wednesday, May 25, 2016

ಭದ್ರವಾಗಿಸುವ ವೀರಭದ್ರಾಸನ


ಯೋಗಾಸನಗಳು  ಕಾಣುವಾಗ ಬಹಳ ಸರಳವಾಗಿ ಕಾಣುತ್ತದೆ. ಆದರೆ ಅದನ್ನು ಅನುಷ್ಠಾನಕ್ಕೆ ತಂದು ಮಾಡುವಾಗ ಕಠಿಣತೆಯ ಅರಿವಾಗುತ್ತದೆ. ಕಠಿಣವಾಗಿ ಕಂಡರು ನಂತರ ಅದನ್ನು ದೇಹ ರೂಢಿಸಿಕೊಂಡಾಗ ಅದು ಸರಳವಾಗಿ ಕಂಡು ದೇಹ ಮತ್ತು ಮನಸ್ಸಿಗೆ ಸುಸ್ಥಿತಿಯನ್ನು ಒದಗಿಸುತ್ತದೆ.  ಹೀಗೆ ಸರಳವಾಗಿ ಆಚರಿಸುವ ಒಂದು ಕಠಿಣ ಆಸನ ವೀರಭದ್ರಾಸನ. ದೇಹ ಮನಸ್ಸಿಗೆ ತಾದಾತ್ಮ್ಯವನ್ನು ಸ್ಥಿರತೆಯನ್ನೂ ಒದಗಿಸುವ ಆಸನವಿದು.
ಆರಂಭದಲ್ಲಿ ಸಮಸ್ಥಿತಿಯಲ್ಲಿ  ತಾಡಸನಲ್ಲಿ ನಿಂತುಕೊಳ್ಳಬೇಕು. ನಂತರ ಉಸಿರನ್ನು ಒಳಕ್ಕೆ ಎಳೆದುಕೊಳ್ಳುತ್ತಾ ಎರಡು ಪಾದಗಳನ್ನು  ಅಗಲಿಸಿ ನಿಲ್ಲಬೇಕು, ಕೈಗಳೆರಡನ್ನು ನೆಲಕ್ಕೆ ಸಮಾನಾಂತರವಾಗಿ ಚಾಚಬೇಕು. ಅಂಗೈ ನೆಲಕ್ಕೆ ಮುಖಮಾಡಿರಬೇಕು. ಆನಂತರ ಬಲಗಾಲಿನ ಪಾದವನ್ನು ಲಂಬವಾಗಿ ತಿರುಗಿಸಬೇಕು. ಬಲಪಾದ ಎಡಪಾದಕ್ಕೆ ಲಂಬವಾಗಿರಬೇಕು. ನಂತರ ಚಾಚಿರುವ ಕೈಯನ್ನು ತಲೆಯಮೇಲಕ್ಕೆ ತಂದು ದೇಹವನ್ನು ಸೊಂಟದಿಂದ ಮೇಲಕ್ಕೆ ಲಂಬವಾಗಿ ತಿರುಗಿಸಿದ ಎಡೆಗೆ ಅಂದರೆ ಬಲಗಡೆಗೆ ತಿರುಗಿಸಿ ಬಲಗಾಲಿನ ಮೇಲೆ ಭಾರವನ್ನು ಹಾಕಿ ಹಿಂದಕ್ಕೆ ಬಾಗಬೇಕು. ಹದೈನೈದರಿಂದ ಮೂವತ್ತು ಸೆಕೆಂಡ್ ಗಲ ಕಾಲ., ಹತ್ತರೀದ ಹದಿನೈದು ಎಣಿಕೆ ಎಣಿಸುವಷ್ಟು ಅವಧಿ ಅದೇಸ್ಥಿತಿಯಲ್ಲಿ ನಿಲ್ಲಬೇಕು. ತಲೆಯನ್ನು ದೇಹವನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಬಾಗಿಸಿರಬೇಕು.  ಆನಂತರ ಪೂರ್ವ ಸ್ಥಿತಿಗೆ ಬರಬೇಕು. ಇದು ವೀರಭದ್ರಾಸನ.  ಎಡಭಾಗಕ್ಕೂ ಇದೇರೀತಿ ಪುನರಾವರ್ತಿಸಬೇಕು.   ಸಮಸ್ಥಿತಿಗೆ ಬಂದು ವಿರಾಮವನ್ನು ಒಂದೆರಡು ನಿಮಿಷಗಳ ಕಾಲ ಅನುಸರಿಸಬೇಕು.  ಹೀಗೆ ನಿಯಮಿತವಾಗಿ ಈ ಆಸನವನ್ನು ಮಾಡಿದಲ್ಲಿ ಹಲವಾರು ಉಪಯೋಗಗಳು ಸಾಧ್ಯವಾಗುತ್ತದೆ.

ಉಪಯೊಗಗಳು.

ತೋಳುಗಳು ಕಾಲುಗಳಲ್ಲಿ ಬಲವನ್ನು ತುಂಬುತ್ತದೆ. ಸೊಂಟದ ಚಲಿಸುವುಕೆಯನ್ನು ಸುಲಭಗೊಳಿಸುತ್ತದೆ. ದೇಹದ ತುಕವನ್ನು ಸಮಗೊಳಿಸಿ ಬೊಜ್ಜನ್ನು ಕರಗಿಸುವಲ್ಲಿ ಸಹಾಯಕವಾಗುತ್ತದೆ.  ಏಕಾಗ್ರತೆಯನ್ನು ವೃದ್ಧಿಸುತ್ತದೆ. ದೈವಭಕ್ತಿಯಲ್ಲಿ ಏಕಾಗ್ರತೆಯನ್ನು ಮೂಡಿಸುತ್ತದೆ. ದೇಹದ ಅಂಗಾಗಳನ್ನು ಗಟ್ಟಿಗೊಳಿಸುತ್ತದೆ. ಮಂಡಿನೋವು ಕೀಲು ನೋವು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ವೀರಭದ್ರಾಸನವನ್ನು ರಕ್ತದ ಒತ್ತಡ ಅಧಿಕವಿರುವರು ಆಚರಿಸಬಾರದು. ವೈದ್ಯರ ಸಲಹೆಯಂತೆ ಈ ಆಸನವನ್ನು ಆಚರಿಸುವುದು ಸೂಕ್ತ. 

Thursday, May 19, 2016

ಹಲಸಿನ ಬೇಳೆ ರೊಟ್ಟಿ.


ಸೊಳೆ ಉಪ್ಪಿನಲ್ಲಿ ಹಾಕುವುದಕ್ಕಾಗಿ ಮೊನ್ನೆ ಹಲಸಿನಕಾಯಿ ಬಂದಿತ್ತು. ಅದರಲ್ಲಿ ಒಂದಷ್ಟು ಹಲಸಿನ ಬೀಜ ಸಿಕ್ಕಿದವು. ಬಾಲ್ಯದಲ್ಲಿ ಅದರ ಸಾಂತಾಣಿ ಪಲ್ಯ ಮುಂತಾದ ವಿಭವಗಳನ್ನು ತಿಂದ ನೆನಪು. ಆವಾಗಿನ ಬಡತನವೇ ಅಂತಹುದು. ದಿನದ ಎರಡು ಹೊತ್ತು ಅದರ ಪಲ್ಯ ತಿಂದು ಮಲಗಿದ ದಿನಗಳೆಷ್ಟೊ.  ಅಂದು ಅದನ್ನು ತರಬೇಕಾದರೆ ಯಾರದೋ ಮನೆ ತೋಟಕ್ಕೆ ಹೋಗುತ್ತಿದ್ದದ್ದು ಅನಿವಾರ್ಯ. ಆ ನೆನಪುಗಳಿಂದಾಗಿ ಈ ಹಲಸಿನ ಬೇಳೆಗಳನ್ನು ಕಸದ ಬುಟ್ಟಿಗೆ ಎಸೆಯುವುದಕ್ಕೆ ಅಮ್ಮನಿಗೆ ಮನಸ್ಸಾಗಲಿಲ್ಲ. ಪಲ್ಯ ಸಾಂಬಾರು ಎಂದು ಮಾಡಿದರೂ ಅದನ್ನು ನಮ್ಮ ಮನೆಯಲ್ಲಿ ಈಗ ತಿನ್ನುವ ಮಂದಿ ಬಹಳ ಕಡಿಮೆ. ಮತ್ತೇನು ಮಾಡುವುದು. ಆಗ ಅಮ್ಮ ಮಾಡಿದ ಒಂದು ಅದ್ಭುತ ರುಚಿಯನ್ನು  ಇಲ್ಲೀಗ ಪ್ರಸ್ತುತ ಪಡಿಸುತ್ತಿದ್ದೆನೆ.  ಸಾಧ್ಯವಾದರೆ ಮಾಡಿ ನೋಡಿ.  ಅಥವಾ ನಿಮಗೆ ಇದರ ಪರಿಚಯ ಮೊದಲೆ ಇದ್ದರೆ  ಒಂದು ಸಲ ನಕ್ಕು ಬಿಡಿ.
ಇದಕ್ಕೆ ಬೇಕಾಗುವ ಸಾಮಾನು...ಹಲಸಿನ ಬೇಳೆ..(ನಿಮಗೆ ಬೇಕಾದಷ್ಟು....!!!)  ಅಕ್ಕಿ ಹಿಟ್ಟು ಅಥವಾ ಚಿರೋಟಿ ರವೆ.  ಈರುಳ್ಳಿ, ಕರಿಬೇವು , ಮೆಣಸಿನ ಹುಡಿ,  ಹಸಿ ಮೆಣಸು ಬೇಕಾದರೆ ಶುಂಠಿ.




ಹಲಸಿನ ಬೇಳೆ ಸಿಮ್ಮೆ ತೆಗೆದು ಬೇಯಿಸಬೇಕು. ಅದರ ಕಂದು ಬಣ್ಣದ  ಸಿಪ್ಪೆಯನ್ನೂ  ತೆಗೆದರೆ ಅನುಕೂಲ.   ಆನಂತ್ರ ತುಸು ಅಕ್ಕಿ ಹಿಟ್ಟು ಸೇರಿಸಿ ಮಿಕ್ಸಿಗೆ ಹಾಕಿ  ಗಟ್ಟಿ ಹಿಟ್ಟಿನ ಹಾಗೆ ತಯಾರಿಸಿ. ಆ ಪೇಸ್ಟ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಸಿಮೆಣಸು ಕರಿಬೇವು ಮೆಣಸಿನ ಪುಡಿ ಹಾಕಿ ಕಲಸಿ ಬಾಳೆ ಎಲೆಯಲ್ಲಿ ರೊಟ್ಟಿಯನ್ನು ತಟ್ಟಿ ಕಾಯಿಸಿ.  ತಟ್ಟೆಗೆ ಹಾಕಿ  ಇದ್ದರೆ ಚಟ್ನಿ ಅಥವಾ ಚಟ್ನಿ ಪುಡಿ ಬೆರಸಿ ಬಿಸಿ ಬಿಸಿ ತಿನ್ನಿ....ಎಂತಹ ಮಧುರವಾದ ರೊಟ್ಟಿ. ಸುಮ್ಮನೇ ಎಸೆಯುವ ಹಲಸಿನ ಬೀಜ ಬೆಳಗ್ಗಿನ ಒಂದು ಸೇರು ಅಕ್ಕಿಯನ್ನು ಉಳಿಸಿದ್ದಂತು ಬಹಳ ಸತ್ಯ.  ಬೆಂಗಳೂರಿಗರು ಇದನ್ನು ಕನಸಿನಲ್ಲಿ ಊಹಿಸುವುದಕ್ಕೂ ಸಾಧ್ಯವಿಲ್ಲದ ವಿಭವ. .

Saturday, May 14, 2016

ವಜ್ರಾಸನ ಒಂದು ಅನುಭವ

ನಿತ್ಯದಂತೆ   ಸ್ನಾನಾದಿಗಳನ್ನು ಪೂರೈಸಿ ಮನೆಯ ತಾರಸಿ ಮೇಲೆ ಬಂದೆ.  ಬೆಳಗ್ಗಿನ ನೀರವ ತಣ್ಣಗಿನ ವಾತಾವರಣ.  ಅಹ್ಲಾದಮಯ ಗಾಳಿ ಬೀಸುತ್ತಿದ್ದರೆ ಹಿಂದಿನ ಇರುಳ ಬೇಸಿಗೆಯ ಧಗೆಯಿಂದ ಮುಕ್ತವಾದ ಅನುಭವ. ಪೂರ್ವದ ತುದಿಯ ಮಹಡಿಯ ಕಟ್ಟಡವೊಂದರ ಮೇಲಿದ್ದ ಮೊಬೈಲ್ ಟವರ್ ಒಂದರಲ್ಲಿ ಅದೀಗ ಸೂರ್ಯ ನೇತಾಡುತ್ತಿದ್ದಂತೆ ಕಂಡಿತು.  ಕಂಕುಳಲ್ಲಿದ್ದ ಯೋಗ ಹಾಸನ್ನು ನೆಲದಲ್ಲಿ ಹರಡಿ ಸುತ್ತಲೂ ವಿಹಂಗಮ ನೋಟ ಬೀರಿದಾಗ ಈ ಘಳಿಗೆ ಸ್ಥಾಯಿಯಾಗಿ ಉಳಿಯಬಾರದೇ ಎಂದನಿಸಿತು.  ಪ್ರಕೃತಿ ಹಳ್ಳಿಯಾದರೂ ನಗರವಾದರೂ ಸುಂದರವಾಗಿಯೇ ಇರುತ್ತದೆ. ಹಳ್ಳಿಯ  ಸುಂದರಿಯಲ್ಲೂ ಪೇಟೆ ಹುಡುಗಿಯ ಬೆಡಗಿನಲ್ಲೂ ಸ್ನಿಗ್ಧ ಸೌಂದರ್ಯ ಇಲ್ಲದಿರುತ್ತದೆಯೇ? ಅದನ್ನು ಕಾಣುವ ಕಣ್ಣಿರಬೇಕು.   

ಅತ್ತಿತ್ತ ಕೈ ಬೀಸಿ ಮೈಬಾಗಿಸಿ ಒಂದಷ್ಟು ಶರೀರವನ್ನು ಬೆಚ್ಚಗಾಗಿಸಿದೆ. ಹಾಗೇ ವಜ್ರಾಸನ ಬಲಿದು ದೂರದಲ್ಲಿನ ಕಟ್ಟಡದ ತುದಿಯ ಸೂರ್ಯನನ್ನು ಕಣ್ಣಲ್ಲಿ ತುಂಬಿಕೊಂಡೆ. ಕಣ್ಣಲ್ಲಿ ತುಂಬಿದ ಸೂರ್ಯನ ಕೆಂಬಣ್ಣ ಹಾಗೇ ನಿಧಾನವಾಗಿ ಹೃದಯವನ್ನು ವ್ಯಾಪಿಸಿದ ಅನುಭವವಾಗಿ  ಕಣ್ಣು ಮುಚ್ಚಿಕೊಂಡು ತಟಸ್ಥನಾದೆ. ಉಸಿರ ರಾಗಕ್ಕೆ ಎದೆಬಡಿತ ತಾಳವಾದಾಗ ಅಂತರಗದ ಕಣ್ಣು ಮಿಸುಕಾಡಿತು. ಹಾಗೇ ಎಲ್ಲವೂ ತಟಸ್ಥವಾಗಿ ಸ್ಥಬ್ಧವಾದ ಅನುಭವ. ಹಾಗೇ ಉಸಿರು ಒಂದು ಎರಡು ಮೂರು.....ಛೇ ಜೀವನ ಪರ್ಯಂತದ ಉಸಿರು ಲೆಕ್ಕವಿಟ್ಟವರಾರು? ಈಗ ಮೂಲಾಧಾರದಿಂದ ಸಹಸ್ರಾರದವರೆಗೆ ಕಂಪನ ವ್ಯಾಪಿಸಿದಂತೆ ವಿಸ್ತಾರವಾದ ಬದುಕು ಸೂಜಿಮೊನೆಯಂತಾದ ಅನುಭವ.

ವಜ್ರಾಸನ ಶರೀರದ ಶಿಥಿಲತೆಯನ್ನು ಕಡಿಮೆ ಮಾಡಿ ಕಾಠಿಣ್ಯವನ್ನು ತುಂಬಿಬಿಡುತ್ತದೆ. ಶರೀರದಲ್ಲಿ ಸ್ಥಿರತೆ ಅನೈಚ್ಛಿಕವಾಗಿ ಪ್ರಚೋದಿತವಾಗುವ ಅದ್ಭುತ ಆಸನವಿದು. ಮೊಣಕಾಲು ಮಡಚಿ ಪಾದದ ಹಿಮ್ಮಡಿಯ ಒಂದು ಭಾಗವನ್ನು ಪೃಷ್ಠದಂಚಿಗೆ ಒತ್ತಿ ನಿರಾಳವಾಗಿ ಕುಳಿತುಬಿಡುವ ಆಸನವಾಗಿ  ಕಾಣುವಾಗ ಇದು ಸುಲಭ ಸಾಧ್ಯದಂತೆ ಭಾಸವಾಗುತ್ತದೆ. ಆದರೆ ಆಸನದಲ್ಲಿ ಕುಳಿತನಂತರವೇ ಅದರ ಪ್ರಭಾವ ಅರಿವಿಗೆ ಬರುವುದು. ಪೃಷ್ಠ ಹಿಮ್ಮಡಿಯಲ್ಲಿ ವಿರಮಿಸುವಾಗ ದೇಹದ ಜಡತ್ವ ನಾಶವಾಗಿ ಚೈತನ್ಯ ಜಾಗ್ರತವಾಗುತ್ತದೆ.
ಪೃಷ್ಠ ಎಂದಾಗ ಒಂದು ಅಸ್ಪೃಶ್ಯ ಭಾವದಲ್ಲಿ ಮಡಿವಂತಿಕೆಯನ್ನು ಗ್ರಹಿಸುತ್ತೇವೆ.  ಹೀಗೆ ಯೋಚಿಸುವ ಮಡಿವಂತಿಕೆ ಮೂರ್ಖತನ ಎಂದೇ  ಹೇಳಬೇಕು. ಮನೆಯ ಮೂಲೆಯಲ್ಲೊಂದು ಕಸದ ಬುಟ್ಟಿ ಇರುತ್ತದೆ. ಅದನ್ನು ಕೈಗೆತ್ತಿಕೊಂಡಾಗ ಮೂಗು ಬಾಯಿ ಸಾಧ್ಯವಾದರೆ ಕಣ್ಣು ಮುಚ್ಚಿ ದೇಹದಿಂದ ಒಂದಷ್ಟು ದೂರ ಹಿಡಿದು ಅಸ್ಪೃಶ್ಯತೆಯನ್ನು ತೋರುತ್ತೇವೆ. ಅದು ಸಹಜ.  ಆದರೆ ಈ ಕಸದ ಬುಟ್ಟಿ ಇಲ್ಲವಾದರೆ ಮನೆಯ ಸ್ಥಿತಿ ಹೇಗಿರಬಹುದು? ಊಹಿಸಿ. ಕಸದ ಸಮಸ್ಯೆ ಕಾಣುವಾಗ ನಿಕೃಷ್ಟವಾದರೂ ಇಂದು ಮಹಾನಗರ ಏಕೆ ಸಣ್ಣ ಹಳ್ಳಿಯೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಪ್ರಧಾನ ಕಾರಣ. ಇದೇ ರೀತಿ ನಮ್ಮ ದೈಹಿಕ ಸ್ಥಿತಿ. ವಿಸರ್ಜನಾಂಗದ ಅಸಮರ್ಪಕ ನಿರ್ವಹಣೆಯಾದರೆ ದೇಹದಲ್ಲೂ ಇದೇ ರೀತಿ ಕಸದ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಜೀರ್ಣ ಕ್ರಿಯೆ ದೇಹಾರೋಗ್ಯದ ಪ್ರಧಾನ ಅಂಗವಾಗಿದೆ.
ವಜ್ರಾಸನದಲ್ಲಿ ಪ್ರೃಷ್ಠ ಅಥವಾ ನಿಂತಂಬ ಮರ್ದಿಸಲ್ಪಡುತ್ತದೆ. ಹಾಗಾಗಿ ಜೀರ್ಣಾಂಗ ಪ್ರಚೋದನೆಗೆ ಒಳಗಾಗಿ ಜೀರ್ಣ ಕ್ರೀಯೆ ಮತ್ತು ವಿಸರ್ಜನೆ ಸರಾಗವಾಗಿ ನಡೆಯುತ್ತದೆ. ದಿನದಲ್ಲಿ ಅದೂ ಆಹಾರ ಸೇವನೆಯ ನಂತರ ಒಂದಷ್ಟು ಹೊತ್ತು ವಜ್ರಾಸನದಲ್ಲಿ ಕುಳಿತಲ್ಲಿ ತಿಂದ ಆಹಾರ ಸರಿಯಾಗಿ ಕರಗಿ ಜೀರ್ಣ ಸಂಬಂಧೀ ಬಾಧೆಗಳ ಪ್ರಭಾವ ಬಹಳಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಊರಿನ ಕಸದ ಸಮಸ್ಯೆಯ ಬಗ್ಗೆ ಚಿಂತಿಸುವಾಗ ನಮ್ಮ  ದೇಹದ ಕಸದ ನಿರ್ವಹಣೆಯ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕು.  ಹಾಗಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ಯೋಗ ದಿವಸ ಆಚರಣೆಯೂ ಅರ್ಥಪೂರ್ಣವಾಗುತ್ತದೆ. ಯಾವುದೇ ವಸ್ತುವನ್ನು ಹೊಸದಾಗಿ ಮನೆಗೆ ತಂದಾಗ ಒಂದಿಷ್ಟು ಸಂಭ್ರಮವಿರುತ್ತದೆ. ಅದು ಹಳೆಯದಾಗಿ ಕಸವಾಗುವಾಗ ಅದನ್ನು ಕಳೆಯುವುದೇ ಒಂದು ಸಮಸ್ಯೆಯಾದಂತೆ ನಾವು ಆಹಾರ ಸೇವಿಸುವಾಗ ಇರುವ ಸಂಭ್ರಮ ವಿಸರ್ಜಿಸುವಲ್ಲಿ ಇರುವುದಿಲ್ಲ. ಯಾಕೆಂದರೆ ಬಾಧಿಸುವ ಜೀರ್ಣ ಸಮಸ್ಯೆ. ಹಾಗಾಗಿ  ಶೌಚಕ್ಕೆ ಕುಳಿತಾಗಲೇ ತಾವೇನು ಸೇವಿಸಿದ್ದೇವೆ ಎಂಬುದರ ಬಗ್ಗೆ ಯೋಚನೆ ಬರುವುದು.  ಇಂದು ಪ್ರತಿಶತ ಎಪ್ಪತ್ತರಿಂದಲೂ ಅಧಿಕ ಮಂದಿಯ ಸಮಸ್ಯೆ ಜೀರ್ಣಾಂಗ ಸಂಬಂಧಿಯಾಗಿರುತ್ತದೆ. ಒಂದಷ್ಟು ಸರಳ ಆಸನ ಪ್ರಾಣಾಯಾಮ ಇದಕ್ಕೆಲ್ಲ ಸೂಕ್ತ ಪರಿಹಾರ ಎಂದು ಅರಿತರೂ ಅದನ್ನು ಹಿಂಬಾಲಿಸಲಾಗದ ಔದಾಸಿನ್ಯ ಆವರಿಸಿರುತ್ತದೆ.

 ವಜ್ರಾಸನದಲ್ಲಿ ಸ್ಥಿರವಾಗುವಾಗ ಮನಸ್ಸಿನ ಬಾಗಿಲು ತೆರೆಯಲ್ಪಡುತ್ತದೆ. ದೇಹ ಮನಸ್ಸು ಒಂದಾಗುವ ಹಂತವದು. ಅದಕ್ಕೆ ಉಸಿರು ಮಾಧ್ಯಮವಾಗುತ್ತದೆ. ಉಸಿರು ದೇಹ ಮತ್ತು ಮನಸ್ಸಿನ ಸೇತುವೆಯಾದಾಗ ಅದು ಧ್ಯಾನ,  ಅತರಂಗದ ದರ್ಶನ ಹೀಗೆ ಆಧ್ಯಾತ್ಮಿಕವಾಗಿ ಹೇಳುವುದುಂಟು. ಆದರೆ ಅದರ ಅರಿವಿಲ್ಲ. ಆದರೂ ಒಂದು ಜಿಜ್ಞಾಸೆ  ಹೀಗಿರಬಹುದೇ?  ಒಂದು ಸಲ ಮನಸ್ಸು ಕೇಂದ್ರೀಕೃತವಾದ ನಂತರ ಅದರಿಂದ ಹೊರಗೆ ಬರುವುದು ಸಾಧ್ಯವಾಗುವುದಿಲ್ಲ. ಬಲವಂತವಾಗಿ ಪರಿಧಿಯನ್ನು ಮೀರಬೇಕಾಗುತ್ತದೆ. ’ಧ್ಯಾನ”  ಇದು ಮುಂಜಾನೆಯ ಮಧುರ ನೆನಪಾಗಿ ದಿನವಿಡೀ ಉಳಿದು ಬಿಡುತ್ತದೆ. ಹಾಗಾಗಿ ಸಮಯವಿಲ್ಲದ ಆತುರತೆಯಲ್ಲೂ ಈ ಕೆಲವು ನಿಮಿಷಗಳನ್ನು ಬದಲಿಸುವುದು ಸಾಧ್ಯವಾಗುವುದಿಲ್ಲ.   
ವಜ್ರಾಸನದಲ್ಲಿ ನೇರವಗಿ  ಕುಳಿತಾಗ  ದೇಹ ಕುಬ್ಜವಾಗಿ ಸೂಕ್ಷವಾದ ಅನುಭವವಾದರೆ ಅಂತರಂಗ ವಿಶಾಲವಾಗುತ್ತಾ ಹೋಗುತ್ತದೆ ಅಂತರಂಗದ ಪ್ರಪಂಚ ತೆರೆದಷ್ಟು ಧ್ಯಾನ ಅರ್ಥಪೂರ್ಣವಾಗುತ್ತದೆ. ಹೀಗೆ ಅಂತರ್ಮುಖಿಯಾದಾಗ ಏಕಾಂತ ಮೌನವನ್ನು ಸುಖವಾಗಿ ಅನುಭವಿಸುವ ಮನೋಭಾವ ಮೂಡುತ್ತದೆ. ಏಕಾಂತತೆ ಎಂಬುದು ವರವಾಗುತ್ತದೆ.  ಹೀಗೆ  ಧ್ಯಾನ ಪ್ರಾಣಾಯಾಮದ ಒಂದೊಂದು ಮಜಲುಗಳಲ್ಲೂ ವಿಭಿನ್ನ ಅನುಭವವನ್ನು ಕಂಡಾಗ ಅದನ್ನೇ ಸುಯೋಗ ಎನ್ನಬೇಕು.  ಈ ಅನುಭವಗಳಿಂದ ಪಕ್ವವಾಗುವಾಗ ಮುಂದಿನ ಚಟುವಟಿಕೆಗಳು ಉಲ್ಲಾಸದಾಯಕವಾಗಿ ಅದರಲ್ಲಿ ತಾದಾತ್ಯ್ಮವನ್ನು ಬೆಳೆಸುವ ಪ್ರಚೋದನೆಯುಂಟಾಗುತ್ತದೆ.

 ಪ್ರತಿದಿನವೂ ವಜ್ರಾಸನದ ಸ್ಥಿತಿಗೆ ಬರುವಾಗ ಮನಸ್ಸು ಹತ್ತು ವರ್ಷಗಳ ಹಿಂದಿನ ದಿನವನ್ನು ನೆನಪಿಗೆ ತರುತ್ತದೆ. ಮಂಡಿ ನೋವು ಬಾಧೆಯಲ್ಲಿ ವಜ್ರಾಸನ ಕೆಲವು ಘಳಿಗೆಗಳಿಗಷ್ಟೆ ಸೀಮಿತವಾಗುವುದಿತ್ತು.  ಎಂದಿನಿಂದ  ಯೋಗಾಭ್ಯಾಸ ತೊಡಗಿತೋ ಅಂದಿನಿಂದ ಆಸನಗಳ ಜತೆ ವಜ್ರಾಸನವೂ ಪಟ್ಟಿಯಲ್ಲಿ ಸೇರಿಕೊಂಡುಬಿಟ್ಟಿತು. ಪ್ರತೀ ದಿನ ವಜ್ರಾಸನದ ಅವಧಿ ಹೆಚ್ಚಿಸುತ್ತಾ ಈಗ ಘಳಿಗೆ ಏಕೆ ಘಂಟೆ ಕಾಲ ವಜ್ರಾಸನದಲ್ಲಿ ಸುಖವಾಗಿ ವಿರಮಿಸುತ್ತೇನೆ. ಆದರೆ  ಮನಸ್ಸು  ಮಾತ್ರಾ ಹಿಂದಕ್ಕೆ ಒಂದರೆ ಘಳಿಗೆ ಓಡುತ್ತದೆ.  ಹೇಗಿದ್ದ ದೇಹ ಅಂಗಾಂಗಗಳು ಹೇಗಾದವು? ಅಂಗಾಂಗಗಳು ಸ್ವಾವಲಂಬನೆಯನ್ನು ಪಡೆದ ಅನುಭವವಾಗುತ್ತದೆ.
ವಜ್ರಾಸನ ಅದು ಕೇವಲ ಒಂದು ಸ್ಥಿತಿಯಲ್ಲ. ಮನಸ್ಸಿಗೆ ದೇಹಕ್ಕೆ ವಜ್ರದಂತೆ ಕಾಠಿಣ್ಯವನ್ನು ಸ್ಥಿರತೆಯನ್ನು  ತರಬಲ್ಲ ಆಸನ.  ಧ್ಯಾನ ಪ್ರಾಣಾಯಾಮ ಆಸನ ಹೀಗೆ  ಎಲ್ಲದರ ನಡುವೆ ವಜ್ರಾಸನದಲ್ಲಿ ವಿರಮಿಸುತ್ತಾ ಪರಿಸರವನ್ನು ಏಕಾಂತವಾಗಿ  ಅವಲೋಕಿಸುವಾಗ ಮುಂಜಾನೆ ಎಂಬುದು ಮಧುರಸ್ಮೃತಿಯಾಗಿಬಿಡುತ್ತದೆ.  
ಯೋಗಾಭ್ಯಾಸದ ಕೊನೆಯ ಹಂತವಾಗಿ ಸೂರ್ಯನಮಸ್ಕಾರ. ನಂತರ ಶವಾಸನ. ಕಣ್ಣು ಮುಚ್ಚಿ ನಿರಾಳತೆಯ ಸುಖವನ್ನು ಅನುಭವಿಸಿ ದೇಹ ಮನಸ್ಸು ಭಾರವನ್ನು ಕಳೆದು ಎದ್ದು ಕಣ್ಣು ತೆರೆಯುತ್ತೇನೆ. ಈಗ ಪುನಃ ವಜ್ರಾಸನದದಲ್ಲಿ ಒಂದಿಷ್ಟು ಹೊತ್ತು ಆದಿನದ ಕೊನೆಯ ಅನುಭವ. ಅಲ್ಲಿ  ಮರುದಿನ ಮುಂಜಾನೆಗೆ ಬಿಟ್ಟು ಹೋಗುವ ಮಧುರ ಸ್ಮ್ಟುತಿಯನ್ನು ಕಟ್ಟಿ ಉಳಿಸುತ್ತೇನೆ.  ದೂರಲ್ಲಿ ಪ್ರಖರವಾಗುವ ಭಾಸ್ಕರ ಇದಕ್ಕೆ ಸಾಕ್ಷಿಯಾಗಿ ನಗುತ್ತಾನೆ. ಹೋಗಿ ಬಾ ಎಂದು ಹರಸಿದ ಅನುಭವವಾಗಿ ನಿಧಾನವಾಗಿ ಎದ್ದು ಲೌಕಿಕ ಪ್ರಪಂಚವನ್ನು ಪ್ರವೇಶಿಸುತ್ತೇನೆ.


Sunday, May 1, 2016

ಮುಳ್ಳು ಸೌತೆ ಕರ್ಮಣೆ (ಎಳೇ ಸೌತೆ ತಂಬುಳಿ)





ಮುಳ್ಳು ಸೌತೆ ಕರ್ಮಣೆ (ಎಳೇ ಸೌತೆ  ತಂಬುಳಿ)

ಬೇಸಿಗೆ ಬಿರು ಬಿಸಿಲ ತಾಪಕ್ಕೆ ಮಧ್ಯಾಹ್ನದ ಭೋಜನವೆಂದರೆ ಹಲವು ಸಲ ಶಿಕ್ಷೆಯಂತೆ ತೋರುವುದುಂಟು. “ ಅಬ್ಬಾಅ ಈ ಸೆಕೆ ಎಂತದೂ ಬೇಡಪ್ಪಾ  ನೀರು ಕುಡಿದೇ ಹೊಟ್ಟೆ ತುಂಬಿತು ಹಸಿವಿಲ್ಲ”  ಎಂಬ ರಾಗದ ನಡುವೆ ಮಧ್ಯಾಹ್ನ ಊಟದ ತಟ್ಟೆಯ ಹತ್ತಿರ ಕುಳಿತಾಗ ಬಹಳ ಖಾರವಾದ ಬಿಸಿಯಾದ ಸಾಂಬಾರ್ ಅಥವಾ ಇನ್ನಿತರ ಖಾದ್ಯಗಳನ್ನು ಕಂಡು ಮತ್ತಷ್ಟು ನಿರುತ್ಸಾಹ ಮೂಡುತ್ತದೆ. ಹೇಗಾದರೂ ಊಟದ ಶಾಸ್ತ್ರ ಮುಗಿಸಿ ಎದ್ದರಾಯಿತು ಎಂದು ಹಸಿದಿರದ ಹೊಟ್ಟೆಗೆ ಮತ್ತಷ್ಟು ತುಂಬಿಸಿ ಹೊಟ್ಟೆ ಮೇಲೆ ಕೈಯಾಡಿಸಿ ಏಳುವುದಿದೆ.  ಇಂತಹ ಸಮಯದಲ್ಲಿ ಕಣ್ಣನ್ನೂ ಮನಸ್ಸನ್ನೂ ತಂಪಾಗಿಸುವ ವಿಭವ ಮಧ್ಯಾಹ್ನದ ಭೋಜನಕ್ಕೆ ಇದ್ದರೆ ಹಸಿವಿಲ್ಲದ ಹೊಟ್ಟೆಯಲ್ಲು ತೃಪ್ತಿಯ ತೇಗು ಬರಿಸಬಹುದು. ಅಂತಹ ಒಂದು ಖಾದ್ಯವೇ “ ತವಶಾ ಕರ್ಮಣೆ.....ಮುಳ್ಳು ಸೌತೆ ಕರ್ಮಣೆ”
ಇದೊಂದು ಕರಾಡ ಬ್ರಾಹ್ಮಣರ ವಿಶೇಷ ಪಾಕಗಗಳಲ್ಲಿ ಒಂದು. ಈಗ ಎಲ್ಲ ಮನೆಗಳಲ್ಲೂ ಇದು ಊಟದ ಒಂದು ಅಂಗವಾಗಿದೆ.  ಕೇವಲ ಹತ್ತಿಪ್ಪತ್ತು ನಿಮಿಷದಲ್ಲಿ ಬೆಂಕಿಇಲ್ಲದೇ ತಯಾರಿಸಬಲ್ಲ ಈ ಅದ್ಭುತ ಖಾದ್ಯ ಮೆಚ್ಚದವರು ಇಲ್ಲ. ಈ ಬಿಸಿಲ ಝಳಕ್ಕೆ ಹೇಳಿ ಮಾಡಿಸಿದಂತಹ ಭೋಜನವಸ್ತುವಿದು. ಇದನ್ನು ಮಾಡುವ ವಿಧಾನ.
ಒಂದು ಮುಳ್ಳು ಸೌತೆ (ಎಳೆ ಸೌತೆ) ತುರಿಯಬೇಕು. ತುರಿಯುವುದರಿಂದಲೂ ಇದನ್ನು ಸೂಕ್ಷ್ಮವಾಗಿ ಕೊಚ್ಚುವುದು ರುಚಿಗೆ ಅತಿ ಸೂಕ್ತ. ತುರಿದಾಗ ನೀರು ಬೇರೆ ಯಾಗಿಬಿಡುವುದರಿಂದ ರುಚಿಗೆ ಅದು ಸೂಕ್ತವಲ್ಲ. ಆದರೂ ಅಭಿರುಚಿ ಮತ್ತು ಸಮಯಕ್ಕೆ ಅನುಸಾರವಾಗಿ ಮಾಡಿಕೊಳ್ಳಬಹುದು.
ಹೀಗೆ ಕೊಚ್ಚಿದ ಸೌತೆಗೆ ರುಚಿಗೆ ತಕ್ಕ  ಉಪ್ಪು ಮತ್ತು ಕಾಯಿ ಮೆಣಸು ಹಿಸುಕಿ  ಮಿಶ್ರಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಸಾಧಾರಣ ಗಾತ್ರದ ಸೌತೆಗೆ ಒಂದು ಅರ್ಧ ತೆಂಗಿನಕಾಯಿ ನುಣ್ಣಗೆ ಅರೆದು ಅದಕ್ಕೆ ಒಂದಷ್ಟು ಹುಳಿ ಮಜ್ಜಿಗೆ ಯನ್ನು ಸೇರಿಸಿ ಎಲ್ಲವನ್ನು ಸೌತೆ ಮಿಶ್ರಣಕ್ಕೆ ಬೆರಸಬೇಕು. ನಂತರ ಇದಕ್ಕೆ ಒಗ್ಗರಣೆ ಹಾಕಬೇಕು. ಒಗ್ಗರಣೆಗೆ ಸಾಸಿವೆ ಒಣಮೆಣಸು ಒಂದೆರಡು ತುಂಡು ಹಾಕಿ ಸಾಸಿವೆ ಸಿಡಿದ ಸ್ವಲ್ಪ ಮೇಲೆ ಕರಿಬೇವು ಹಾಕಬೇಕು. ತಣ್ಣಗಿನ ತಂಪಾದ   ಈಗ ತವಶಾ ಕರ್ಮಣೆ......ಸಿದ್ದ. ಮಧ್ಯಾಹ್ನದ ಬಿಸಿಲ ಬಿಸಿಗೆ ತಂಪಾದ ಈ ಊಟ ಸವಿಯುವುದೇ ಒಂದು ಮಜ. ಇದಕ್ಕೆ ಮಿಡಿ ಉಪ್ಪಿನಕಾಯಿ,  ಬೆಂಡೆಕಾಯಿ ಅಥವಾ ಅಲಸಂಡೆ ಪಲ್ಯ ವಿದ್ದರೆ ಕೇಳುವುದೇ ಬೇಡ ಒಂದು ಸೇರು ಅನ್ನ ಖಾಲಿ ಸಂಶಯವಿಲ್ಲ. 

ಇದನ್ನು ತೆಂಗಿನ ಕಾಯಿ ಹಾಲಿನಿಂದಲೇ ತಯಾರಿಸುತ್ತಿದ್ದರು . ಅದನ್ನು ನೆನಸಿಕೊಂಡರೆ ಬಾಯಿಯಲ್ಲಿ ನೀರು ಸುರಿಯುತ್ತದೆ.