Sunday, May 29, 2016

ಬುದ್ದಿವಂತರು ಆದರೆ.....???


ಪ್ರತಿಯೊಬ್ಬರು ಅವರವರ ಪರಿಧಿಯಲ್ಲಿ ಬುದ್ಧಿವಂತರೇ ಆಗಿರುತ್ತೇವೆ. ಹಾಗಿದ್ದರೂ ನಾವು ಹಲವು ಸಲ ತಿಳಿದೂ ಮಂದಮತಿಗಳಾಗಿ ದ್ವಂದ್ವಗಳಲ್ಲಿ ಸಿಕ್ಕಿಬಿಡುತ್ತೇವೆ. ನಮ್ಮ ಬುದ್ದಿಗೆ ಅರ್ಥವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿ ನಾವೇ ಮೂರ್ಖರೇನೋ ಎಂದು ಅನ್ನಿಸಿಬಿಡುತ್ತದೆ.
ಸಾಮಾನ್ಯವಾಗಿ ನಾನು ದಿನ ಪತ್ರಿಕೆಯನ್ನು ಅದರ ತಲೆಬರಹಕ್ಕಷ್ಟೇ ಸೀಮಿತಗೊಳಿಸುತ್ತೇನೆ. ಮುಂಜಾನೆಯ ಗಡಿಬಿಡಿಗೆ ಅದಕ್ಕೆ ಸಮಯವೂ ಇರುವುದಿಲ್ಲ ಒಂದಾದರೆ,  ನನ್ನ ಮನೋಭಾವಕ್ಕೆ ಒಪ್ಪುವ ವಿಚಾರಗಳ ಕೊರತೆ ಇನ್ನೊಂದು ಮುಖ್ಯ ಕಾರಣ.  ಆದರೂ ಕೆಲವೊಂದು ಬರಹಗಳು ನನ್ನನ್ನು ಗಾಢವಾಗಿಸುತ್ತವೆ. ಅವುಗಳಲ್ಲಿ ಒಂದು ಉದಯವಾಣಿಯ ಭಾನುವಾರದ “ಜೋಗಿ ಕಾಲಂ”. ಈ ಕಾಲಂನ ಒಳಗೆ ಒಂದಷ್ಟು ಹೊತ್ತು ಸುತ್ತಾಟ ಆದಿನದ ದಿನಚರಿ. ಕೆಲವೊಮ್ಮೆ ಈ ಸುತ್ತಾಟವೂ ಕಳೆದುಕೊಳ್ಳುವುದುಂಟು.  ಹೀಗೆ ಸುತ್ತಾಡುವಾಗ ಇಂದಿನ ಕಾಲಂ ನ ಬಗ್ಗೆ ಬರೆಯೋಣ ಅನ್ನಿಸಿತು. 
ಕಾಲಂನ ಆರಂಭವೇ ಹಾಗೆ, ಬದಲಾದ ಕಾಲದ ಕಾಲದ ನೆನಪು ಈ ಕಾಲಂ.  ನಮ್ಮ ಪರಿಸರ ನಾವುಗಳು ಸಾಕ್ಷಿಯಾಗಿದ್ದುಕೊಂಡೇ ಬದಲಾಗುತ್ತದೆ. ಅಥವಾ ಬದಲಾವಣೆಗೆ ನಾವು ಸಾಕ್ಷಿಯಾಗುತ್ತೇವೆ. ಈ ನಡುವೆ ನಾವು ಬುದ್ಧಿವಂತರೆಂಬ ಭಾವ ನಮ್ಮಲ್ಲಿರುತ್ತದೆ. ಆದರೆ ನಮ್ಮ ಬುದ್ದಿಯೂ ಒಂದು ಪ್ರಶ್ನಾರ್ಹವಾಗಿ ಭಾಸವಾಗುವುದು ಈ ಕಾಲಂ ಸುತ್ತಾಡಿದಾಗ. ನಮ್ಮೂರಿನ ತೀರ್ಥಕ್ಷೇತ್ರದ ದರ್ಶನದಿಂದ ತೊಡಗುತ್ತದೆ. ಬದಲಾದ ಈ ಪರಿಸರದಲ್ಲಿ ನಮ್ಮ ನಿಲುವನ್ನು ನಾವೇ ಮುಟ್ಟಿಯೋ ತಟ್ಟಿಯೋ ನೋಡುವಂತಾಗುತ್ತದೆ.  ನಾವು ಎಲ್ಲೆಂದರಲ್ಲಿ ಸುತ್ತಾಡಿ ಓಡಾಡಿ ಸುಸ್ತಾದಗ ವಿರಮಿಸಿ ಹೊರಳಾಡಿದ ದೇವಸ್ಥಾನದ ಪರಿಸರ ಬದಲಾಗಿಬಿಟ್ಟಿರುತ್ತದೆ. ಇಲ್ಲಿ ನಾವೇ ಪರಕೀಯರಂತೆ ನಿಂತಿರುತ್ತೇವೆ.  ನಮ್ಮ ಹರಕೆ ನಮಸ್ಕಾರಕ್ಕೂ ಲೆಕ್ಕವಿಟ್ಟು ನಮ್ಮ ಭಕ್ತಿಗೊಂದು ಮಿತಿಯನ್ನು ಎಳೆದುಬಿಡುತ್ತಾರೆ. ಕಾಲದ ಪರಿಮಿತಿಯಲ್ಲೇ ಮುಗಿಸಬೇಕಾದ ನಮ್ಮ ದೇವತಾರ್ಚನೆಯಲ್ಲಿ ನಮ್ಮ ಬುದ್ದಿಮತ್ತೆಯನ್ನು ನಾವೇ ಹುಡುಕಬೇಕಾದ ಅನಿವಾರ್ಯತೆ ಇರುತ್ತದೆ.
ಇಲ್ಲಿ ಬರುವ ಒಂದು ಮಾತು ಬಹಳ ಅಪ್ಯಾಯಮಾನವಾಗುತ್ತದೆ.  ’ದೈವ ಭಕ್ತಿ   ಎಂಬುದು ಆತ್ಮವಿಶ್ವಾಸವಾಗಬೇಕೇ ಹೊರತು, ಅದು ಮೂಢನಂಬಿಕೆಯಾಗಬಾರದು.”  ಹೌದು ದೇವರಲ್ಲಿ ಭಕ್ತಿ ಗೌರವ ಇರಬೇಕು ಆದರೆ ಭಯವನ್ನು ಹುಟ್ಟಿಸುವ ಮೂಢನಂಬಿಕೆ ಇರಬಾರದು.   ಯೋಚಿಸುವ ನಮ್ಮ ಅಪ್ಪ ಅಮ್ಮನಲ್ಲಿ ನಮಗೆ ಭಕ್ತಿ ಗೌರವ ಪ್ರೀತಿ ಇರಬೇಕು  ಅಲ್ಲಿ ಭಯವಿದ್ದರೆ ?  ಇವುಗಳೆಲ್ಲ ಬಲವಂತದ ಭಾವನೆಗಳಾಗಿಬಿಡುತ್ತದೆ. ಅಲ್ಲಿ ಪ್ರಾಮಾಣಿಕತೆ ಇರುವುದಿಲ್ಲ. ಅನಿವಾರ್ಯತೆ ಇರುತ್ತದೆ.
ಮತ್ತೊಂದು ಮಾತು ಗಮನೀಯವಾಗುತ್ತದೆ. ’ ಭಕ್ತರ ಸಂಖ್ಯೆ ಹೆಚ್ಚಾಗಿದೆ ಆದರೆ ದೇವರ ಸಂಖ್ಯೆ ಹೆಚಾಗಿಲ್ಲ. ಅದಕ್ಕೆ ಈ ಪರಿಯ ಒದ್ದಾಟ. ’ ಭಕ್ತರು ಜಾತಿ ಪಂಗಡ ಹೀಗೆ ಸಂಖ್ಯೆಯಲ್ಲಿ ಎಷ್ಟಿದ್ದರೂ ದೇವರೊಬ್ಬನೇ ಎಂದು ಸರಳವಾಗಿ ಸೂಚಿಸುವ ವಾಕ್ಯವಿದು. ಮಾತ್ರವಲ್ಲ  ಇಂದು ಎಲ್ಲ ದೇವಾಲಯ ಕ್ಷೇತ್ರಗಳಲ್ಲೂ ಭಕ್ತರ  ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ಹಾಗಾಗಿ ಮೊದಲು ಆಗುತ್ತಿದ್ದ ಖಾಸಗೀತನದ ಅನುಭವ ಊರಿನ ಸಣ್ಣ ಪುಟ್ಟ ಗುಡಿಗಳಲ್ಲೂ ಆಗುವುದಿಲ್ಲ.  ಯೋಚಿಸಿದರೆ ನಾವೇ ಪರಕೀಯರೇನೋ ಎಂಬ ಅನುಭವ.  ನಾವು ಊರು ಬಿಟ್ಟು ಹೋಗಿ ಒಂದಷ್ಟು ವರ್ಷ ಕಳೆದು ಬಂದರೆ  ಮನೆಯ ಕೆಲಸದಾಳು ಮನೆಯ ಮೂಲೆ ಮೂಲೆಯನ್ನೂ ಪರಿಚಯಿಸುತ್ತಾನೆ.  ಅದೂ ನಾವು ಬೆಳೆದ ಮನೆಯಬಗ್ಗೆ?!!!
ಊರು ಹಾಳು ಮಾಡಲು ಒಬ್ಬ ದೇವರು ಸಾಕು ಮಾರಾಯ..... ಇದನ್ನು ಕೇಳಿದರೆ ದೇವರು ನಗಬಹುದು. ಇಂದು ಹಾಳಾಗುತ್ತಿರುವುದು ದೇವರಿಂದ ಅಲ್ಲ. ನಮ್ಮ ನಮ್ಮ ಭಾವನೆಗಳಿಂದ. ಮನುಷ್ಯನ ಭಾವನೆ ಕಾಲ ಕಳೆದಂತೆ ಬದಲಾಗುತ್ತದೆ. ಆದರೆ ನೋಡಿ...ಸ್ವತಂತ್ರವಾಗಿ ಬದುಕುವ ಪ್ರಾಣಿಗಳು ಅಂದು ಹೇಗೆ ಬದುಕುತ್ತಿತ್ತೋ ಇಂದು ಹಾಗೇ ಬದುಕುತ್ತವೆ. ಶೈಲಿ ಬದಲಾಗಿರಬಹುದು. ಆದರೆ ಅವುಗಳ ಸ್ವಭಾವ ಬದಲಾಗಿಲ್ಲ. ಯಾಕೆಂದರೆ ಅವುಗಳ ಭಾವನೆ ಮನುಷ್ಯನಂತೆ ಬದಲಾಗುವುದಿಲ್ಲ.
ಯಾವುದೋ ಪಾಪ ಭಯದಿಂದ ದೇವಸ್ಥಾನಕ್ಕೆ ಹೋಗುತ್ತೇವೆ. ಸರ್ಪವನ್ನು ನೋಡದೇ ಇದ್ದವರೂ ನಾಗದೋಷದ ಭಯದಿಂದ ಪರಿತಪಿಸುತ್ತಾರೆ. ಆದರೆ ಕ್ಷೇತ್ರಕ್ಕೆ ಬಂದನಂತರವೇ ನಾವು ಪಾಪಗಳನ್ನು ಮಾಡುತ್ತೇವೆ. ಬಹಳ ಸತ್ಯವಾದ ಮಾತು. ದೇವಸ್ಥಾನಕ್ಕೆ ಹೋದಕೂಡಲೆ ನಮ್ಮ ಸಹನೆ ಹರಿದುಬಿಡುತ್ತದೆ. ದರ್ಶನದ  ಸರದಿ ಸಾಲಲ್ಲಿ ನಿಂತ ಒಡನೆ ಊಟದ ಸರದಿ ಸಾಲು ಕಾಣಿಸುತ್ತದೆ. ಸರದಿ ಸಾಲು ಮುಂದೆ ಹೋಗದಾಗ ಅಸಹನೆಯಿಂದ ಮುಂದಿನವರನ್ನು ಇಲ್ಲಾ ವ್ಯವಸ್ಥೆಯನ್ನು ಶಪಿಸುತ್ತೇವೆ. ನಮ್ಮ ಉದ್ವೇಗ ಉದ್ರೇಕ ಶಮನಕ್ಕಾಗಿ ದೇವಾಲಯಕ್ಕೆ ಬಂದರೆ ಇವೆರಡೂ ಅಧಿಕವಾಗಿಬಿಡುತ್ತದೆ.!!!
ನಾವು ಹೊರಟ ತಾಣಕ್ಕಿಂತ ದೇವಾಲಯ ಹೆಚ್ಚು ನೆಮ್ಮದಿ ಶಾಂತಿ ಸಮಾಧಾನ ಕೊಡುತ್ತದೆ ಎಂದು ಭಾವಿಸುತ್ತೇವೆ.  ಇದು ನಮ್ಮ ಭಾವನೆಯಷ್ಟೆ. ಆಧ್ಯಾತ್ಮದ ತತ್ವದಲ್ಲಿ ಅತರಂಗದ ಚೇತನವನ್ನು ಜಗತ್ತಿಗೇ ಸಾರಿದ ಬುದ್ದಿವಂತರು ನಾವು.  ಶಾಂತಿ ಎಲ್ಲಿಯೂ ಇಲ್ಲ ಅದು ನಮ್ಮ ಮನದಲ್ಲೆ ಇರುತ್ತದೆ. ಇದನ್ನು ಸಾರಿದವರು ನಾವು.
ಇಂದು ಊರಿನ ಹಲವು ದೇವಾಲಯದ ಉತ್ಸವಾದಿಗಳ ಕಾರ್ಯಕ್ರಮ ಪಟ್ಟಿ ನೋಡುವಾಗ ನಗು ಬರುತ್ತದೆ.  ಇಂದು ಕ್ಷೇತ್ರ ಮಹಿಮೆ ಅಥವ ಕಾರ್ಣಿಕ ಉಳ್ಳದ್ದು ಎನಿಸಿಕೊಳ್ಳಬೇಕಾದರೆ ಅಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ವೃದ್ಧಿಯಾಗಬೇಕು. ಅದು ವೃದ್ಧಿಯಾದಷ್ಟು ಕ್ಷೇತ್ರ ಪ್ರಸಿದ್ಧವಾಗುತ್ತದೆ. ಕ್ಷೇತ್ರದ ಆದಾಯ ಹೆಚ್ಚುತ್ತದೆ. ಮಜರಾಯಿ ಇಲಾಖೆಗೂ ಆದಾಯ ವೃದ್ಧಿಯಾಗುತ್ತದೆ. ಅದೂ ಬಯಸುವುದು ಈ ಮಾರ್ಕೆಟಿಂಗ್ ತಂತ್ರವನ್ನೆ. ಆಗ ಹೋದ ನಾವುಗಳು ವ್ಯವಸ್ಥೆಯ ಕುಂದು ಕೊರತೆಯ ಬಗ್ಗೆ ದೂರಿಕೊಳ್ಳುತ್ತೇವೆ.   ಜನ ಸೇರಿಸುವ ತಂತ್ರವೆಂದರೆ ಜನಪ್ರಿಯ ವ್ಯಕ್ತಿಗಳನ್ನು (ಸೆಲೆಬ್ರಿಟಿ) ಕರೆಸುವುದು. ಹೊಸ ಹೊಸ ಕಾರ್ಯಕ್ರಮ ಸಂಗೀತ ರಸಮಂಜರಿ ನಾಟಕ ಹೀಗೆ ಕಾರ್ಯಕ್ರಮಗಳನ್ನು ಮಾಡುವುದು. ಬಂದ ಸೆಲೆಬ್ರಿಟಿಗಳು ದೇವಸ್ಥಾನದ ಮಹಿಮೆ ನೋಡಿ ಭಕ್ತಿಯಿಂದ ಬರುವುದಲ್ಲ. ಬಂದ ಮೇಲೆ ಭಕ್ತಿ ಪ್ರಕಟಿಸುತ್ತಾರೆ. ಅದೂ ಪ್ರದರ್ಶನಕ್ಕೆ.  ಹೀಗೆ ಮಾಡುವ ಕಾರ್ಯಕ್ರಮದ ಸಂಘಟಕರಲ್ಲೇ ಒಂದು ಸಲ ಕೇಳಿದೆ ....ಉತ್ತರ  ಜನ ಸೇರಬೇಕಲ್ವ.. ಹೌದು ಜನ ಸೇರಿದರೆ ಅವರ ಜೀವನ ಸಾಗುತ್ತದೆ.  ಇದೆಲ್ಲ ಬೇಡ ನಮ್ಮ ಮನೆಯಲ್ಲೇ ಕುಳಿತು ನಾವು ನಾವಾಗಿ ದೇವರ ಧ್ಯಾನವೋ ಪೂಜೆಯೋ ಮಾಡಿದರೆ.....ಎಲ್ಲೂ ಸಿಗದ ಶಾಂತಿ ಆ ಎಕಾಂತದಲ್ಲಿ ಸಿಗುತ್ತದೆ. ಇಲ್ಲಿ ಮಾರ್ಕಟಿಂಗ್ ಆಗುತ್ತಿರುವುದು ನಮ್ಮ ಭಾವನೆಗಳ ಬಲದಲ್ಲಿ.  ಅದನ್ನು ತಿಳಿಯದ ನಮ್ಮ ಬುದ್ಧಿವಂತಿಗೆ ಎಂತಹುದು?

ಸಾಧ್ಯವಾದರೆ ಈ ಕಾಲಂ ನ ಒಳಗೆ ಒಂದೆರಡು ಸುತ್ತು ಹೊಡೆಯಿರಿ. ವಿವೇಚನೆಗೆ ಹಚ್ಚುವ ಒಂದಷ್ಟು ವಿಚಾರಗಳು ಸಿಗುತ್ತವೆ. 

1 comment:

  1. ಮರಾಠಿ ಸಿನೆಮಾ ದೇವಳ್ ನೆನಪಾಯಿತು. ದೇವರೆ೦ಬ ಹೊಸ ಬುಸಿನೆಸ್ಸ್

    ReplyDelete