Thursday, May 19, 2016

ಹಲಸಿನ ಬೇಳೆ ರೊಟ್ಟಿ.


ಸೊಳೆ ಉಪ್ಪಿನಲ್ಲಿ ಹಾಕುವುದಕ್ಕಾಗಿ ಮೊನ್ನೆ ಹಲಸಿನಕಾಯಿ ಬಂದಿತ್ತು. ಅದರಲ್ಲಿ ಒಂದಷ್ಟು ಹಲಸಿನ ಬೀಜ ಸಿಕ್ಕಿದವು. ಬಾಲ್ಯದಲ್ಲಿ ಅದರ ಸಾಂತಾಣಿ ಪಲ್ಯ ಮುಂತಾದ ವಿಭವಗಳನ್ನು ತಿಂದ ನೆನಪು. ಆವಾಗಿನ ಬಡತನವೇ ಅಂತಹುದು. ದಿನದ ಎರಡು ಹೊತ್ತು ಅದರ ಪಲ್ಯ ತಿಂದು ಮಲಗಿದ ದಿನಗಳೆಷ್ಟೊ.  ಅಂದು ಅದನ್ನು ತರಬೇಕಾದರೆ ಯಾರದೋ ಮನೆ ತೋಟಕ್ಕೆ ಹೋಗುತ್ತಿದ್ದದ್ದು ಅನಿವಾರ್ಯ. ಆ ನೆನಪುಗಳಿಂದಾಗಿ ಈ ಹಲಸಿನ ಬೇಳೆಗಳನ್ನು ಕಸದ ಬುಟ್ಟಿಗೆ ಎಸೆಯುವುದಕ್ಕೆ ಅಮ್ಮನಿಗೆ ಮನಸ್ಸಾಗಲಿಲ್ಲ. ಪಲ್ಯ ಸಾಂಬಾರು ಎಂದು ಮಾಡಿದರೂ ಅದನ್ನು ನಮ್ಮ ಮನೆಯಲ್ಲಿ ಈಗ ತಿನ್ನುವ ಮಂದಿ ಬಹಳ ಕಡಿಮೆ. ಮತ್ತೇನು ಮಾಡುವುದು. ಆಗ ಅಮ್ಮ ಮಾಡಿದ ಒಂದು ಅದ್ಭುತ ರುಚಿಯನ್ನು  ಇಲ್ಲೀಗ ಪ್ರಸ್ತುತ ಪಡಿಸುತ್ತಿದ್ದೆನೆ.  ಸಾಧ್ಯವಾದರೆ ಮಾಡಿ ನೋಡಿ.  ಅಥವಾ ನಿಮಗೆ ಇದರ ಪರಿಚಯ ಮೊದಲೆ ಇದ್ದರೆ  ಒಂದು ಸಲ ನಕ್ಕು ಬಿಡಿ.
ಇದಕ್ಕೆ ಬೇಕಾಗುವ ಸಾಮಾನು...ಹಲಸಿನ ಬೇಳೆ..(ನಿಮಗೆ ಬೇಕಾದಷ್ಟು....!!!)  ಅಕ್ಕಿ ಹಿಟ್ಟು ಅಥವಾ ಚಿರೋಟಿ ರವೆ.  ಈರುಳ್ಳಿ, ಕರಿಬೇವು , ಮೆಣಸಿನ ಹುಡಿ,  ಹಸಿ ಮೆಣಸು ಬೇಕಾದರೆ ಶುಂಠಿ.




ಹಲಸಿನ ಬೇಳೆ ಸಿಮ್ಮೆ ತೆಗೆದು ಬೇಯಿಸಬೇಕು. ಅದರ ಕಂದು ಬಣ್ಣದ  ಸಿಪ್ಪೆಯನ್ನೂ  ತೆಗೆದರೆ ಅನುಕೂಲ.   ಆನಂತ್ರ ತುಸು ಅಕ್ಕಿ ಹಿಟ್ಟು ಸೇರಿಸಿ ಮಿಕ್ಸಿಗೆ ಹಾಕಿ  ಗಟ್ಟಿ ಹಿಟ್ಟಿನ ಹಾಗೆ ತಯಾರಿಸಿ. ಆ ಪೇಸ್ಟ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಸಿಮೆಣಸು ಕರಿಬೇವು ಮೆಣಸಿನ ಪುಡಿ ಹಾಕಿ ಕಲಸಿ ಬಾಳೆ ಎಲೆಯಲ್ಲಿ ರೊಟ್ಟಿಯನ್ನು ತಟ್ಟಿ ಕಾಯಿಸಿ.  ತಟ್ಟೆಗೆ ಹಾಕಿ  ಇದ್ದರೆ ಚಟ್ನಿ ಅಥವಾ ಚಟ್ನಿ ಪುಡಿ ಬೆರಸಿ ಬಿಸಿ ಬಿಸಿ ತಿನ್ನಿ....ಎಂತಹ ಮಧುರವಾದ ರೊಟ್ಟಿ. ಸುಮ್ಮನೇ ಎಸೆಯುವ ಹಲಸಿನ ಬೀಜ ಬೆಳಗ್ಗಿನ ಒಂದು ಸೇರು ಅಕ್ಕಿಯನ್ನು ಉಳಿಸಿದ್ದಂತು ಬಹಳ ಸತ್ಯ.  ಬೆಂಗಳೂರಿಗರು ಇದನ್ನು ಕನಸಿನಲ್ಲಿ ಊಹಿಸುವುದಕ್ಕೂ ಸಾಧ್ಯವಿಲ್ಲದ ವಿಭವ. .

No comments:

Post a Comment