ನಿತ್ಯದಂತೆ
ಸ್ನಾನಾದಿಗಳನ್ನು ಪೂರೈಸಿ ಮನೆಯ ತಾರಸಿ ಮೇಲೆ ಬಂದೆ. ಬೆಳಗ್ಗಿನ ನೀರವ ತಣ್ಣಗಿನ ವಾತಾವರಣ. ಅಹ್ಲಾದಮಯ ಗಾಳಿ ಬೀಸುತ್ತಿದ್ದರೆ ಹಿಂದಿನ ಇರುಳ
ಬೇಸಿಗೆಯ ಧಗೆಯಿಂದ ಮುಕ್ತವಾದ ಅನುಭವ. ಪೂರ್ವದ ತುದಿಯ ಮಹಡಿಯ ಕಟ್ಟಡವೊಂದರ ಮೇಲಿದ್ದ ಮೊಬೈಲ್
ಟವರ್ ಒಂದರಲ್ಲಿ ಅದೀಗ ಸೂರ್ಯ ನೇತಾಡುತ್ತಿದ್ದಂತೆ ಕಂಡಿತು. ಕಂಕುಳಲ್ಲಿದ್ದ ಯೋಗ ಹಾಸನ್ನು ನೆಲದಲ್ಲಿ ಹರಡಿ ಸುತ್ತಲೂ
ವಿಹಂಗಮ ನೋಟ ಬೀರಿದಾಗ ಈ ಘಳಿಗೆ ಸ್ಥಾಯಿಯಾಗಿ ಉಳಿಯಬಾರದೇ ಎಂದನಿಸಿತು. ಪ್ರಕೃತಿ ಹಳ್ಳಿಯಾದರೂ ನಗರವಾದರೂ ಸುಂದರವಾಗಿಯೇ
ಇರುತ್ತದೆ. ಹಳ್ಳಿಯ ಸುಂದರಿಯಲ್ಲೂ ಪೇಟೆ
ಹುಡುಗಿಯ ಬೆಡಗಿನಲ್ಲೂ ಸ್ನಿಗ್ಧ ಸೌಂದರ್ಯ ಇಲ್ಲದಿರುತ್ತದೆಯೇ? ಅದನ್ನು ಕಾಣುವ ಕಣ್ಣಿರಬೇಕು.
ಅತ್ತಿತ್ತ ಕೈ ಬೀಸಿ ಮೈಬಾಗಿಸಿ ಒಂದಷ್ಟು ಶರೀರವನ್ನು
ಬೆಚ್ಚಗಾಗಿಸಿದೆ. ಹಾಗೇ ವಜ್ರಾಸನ ಬಲಿದು ದೂರದಲ್ಲಿನ ಕಟ್ಟಡದ ತುದಿಯ ಸೂರ್ಯನನ್ನು ಕಣ್ಣಲ್ಲಿ
ತುಂಬಿಕೊಂಡೆ. ಕಣ್ಣಲ್ಲಿ ತುಂಬಿದ ಸೂರ್ಯನ ಕೆಂಬಣ್ಣ ಹಾಗೇ ನಿಧಾನವಾಗಿ ಹೃದಯವನ್ನು ವ್ಯಾಪಿಸಿದ
ಅನುಭವವಾಗಿ ಕಣ್ಣು ಮುಚ್ಚಿಕೊಂಡು ತಟಸ್ಥನಾದೆ. ಉಸಿರ
ರಾಗಕ್ಕೆ ಎದೆಬಡಿತ ತಾಳವಾದಾಗ ಅಂತರಗದ ಕಣ್ಣು ಮಿಸುಕಾಡಿತು. ಹಾಗೇ ಎಲ್ಲವೂ ತಟಸ್ಥವಾಗಿ
ಸ್ಥಬ್ಧವಾದ ಅನುಭವ. ಹಾಗೇ ಉಸಿರು ಒಂದು ಎರಡು ಮೂರು.....ಛೇ ಜೀವನ ಪರ್ಯಂತದ ಉಸಿರು
ಲೆಕ್ಕವಿಟ್ಟವರಾರು? ಈಗ ಮೂಲಾಧಾರದಿಂದ ಸಹಸ್ರಾರದವರೆಗೆ ಕಂಪನ ವ್ಯಾಪಿಸಿದಂತೆ ವಿಸ್ತಾರವಾದ
ಬದುಕು ಸೂಜಿಮೊನೆಯಂತಾದ ಅನುಭವ.
ವಜ್ರಾಸನ ಶರೀರದ ಶಿಥಿಲತೆಯನ್ನು ಕಡಿಮೆ ಮಾಡಿ
ಕಾಠಿಣ್ಯವನ್ನು ತುಂಬಿಬಿಡುತ್ತದೆ. ಶರೀರದಲ್ಲಿ ಸ್ಥಿರತೆ ಅನೈಚ್ಛಿಕವಾಗಿ ಪ್ರಚೋದಿತವಾಗುವ
ಅದ್ಭುತ ಆಸನವಿದು. ಮೊಣಕಾಲು ಮಡಚಿ ಪಾದದ ಹಿಮ್ಮಡಿಯ ಒಂದು ಭಾಗವನ್ನು ಪೃಷ್ಠದಂಚಿಗೆ ಒತ್ತಿ
ನಿರಾಳವಾಗಿ ಕುಳಿತುಬಿಡುವ ಆಸನವಾಗಿ ಕಾಣುವಾಗ
ಇದು ಸುಲಭ ಸಾಧ್ಯದಂತೆ ಭಾಸವಾಗುತ್ತದೆ. ಆದರೆ ಆಸನದಲ್ಲಿ ಕುಳಿತನಂತರವೇ ಅದರ ಪ್ರಭಾವ ಅರಿವಿಗೆ
ಬರುವುದು. ಪೃಷ್ಠ ಹಿಮ್ಮಡಿಯಲ್ಲಿ ವಿರಮಿಸುವಾಗ ದೇಹದ ಜಡತ್ವ ನಾಶವಾಗಿ ಚೈತನ್ಯ
ಜಾಗ್ರತವಾಗುತ್ತದೆ.
ಪೃಷ್ಠ ಎಂದಾಗ ಒಂದು ಅಸ್ಪೃಶ್ಯ ಭಾವದಲ್ಲಿ
ಮಡಿವಂತಿಕೆಯನ್ನು ಗ್ರಹಿಸುತ್ತೇವೆ. ಹೀಗೆ
ಯೋಚಿಸುವ ಮಡಿವಂತಿಕೆ ಮೂರ್ಖತನ ಎಂದೇ ಹೇಳಬೇಕು.
ಮನೆಯ ಮೂಲೆಯಲ್ಲೊಂದು ಕಸದ ಬುಟ್ಟಿ ಇರುತ್ತದೆ. ಅದನ್ನು ಕೈಗೆತ್ತಿಕೊಂಡಾಗ ಮೂಗು ಬಾಯಿ
ಸಾಧ್ಯವಾದರೆ ಕಣ್ಣು ಮುಚ್ಚಿ ದೇಹದಿಂದ ಒಂದಷ್ಟು ದೂರ ಹಿಡಿದು ಅಸ್ಪೃಶ್ಯತೆಯನ್ನು ತೋರುತ್ತೇವೆ.
ಅದು ಸಹಜ. ಆದರೆ ಈ ಕಸದ ಬುಟ್ಟಿ ಇಲ್ಲವಾದರೆ
ಮನೆಯ ಸ್ಥಿತಿ ಹೇಗಿರಬಹುದು? ಊಹಿಸಿ. ಕಸದ ಸಮಸ್ಯೆ ಕಾಣುವಾಗ ನಿಕೃಷ್ಟವಾದರೂ ಇಂದು ಮಹಾನಗರ ಏಕೆ
ಸಣ್ಣ ಹಳ್ಳಿಯೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಅಸಮರ್ಪಕ ನಿರ್ವಹಣೆಯೇ ಇದಕ್ಕೆ ಪ್ರಧಾನ ಕಾರಣ.
ಇದೇ ರೀತಿ ನಮ್ಮ ದೈಹಿಕ ಸ್ಥಿತಿ. ವಿಸರ್ಜನಾಂಗದ ಅಸಮರ್ಪಕ ನಿರ್ವಹಣೆಯಾದರೆ ದೇಹದಲ್ಲೂ ಇದೇ ರೀತಿ
ಕಸದ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಜೀರ್ಣ ಕ್ರಿಯೆ ದೇಹಾರೋಗ್ಯದ ಪ್ರಧಾನ ಅಂಗವಾಗಿದೆ.
ವಜ್ರಾಸನದಲ್ಲಿ ಪ್ರೃಷ್ಠ ಅಥವಾ ನಿಂತಂಬ
ಮರ್ದಿಸಲ್ಪಡುತ್ತದೆ. ಹಾಗಾಗಿ ಜೀರ್ಣಾಂಗ ಪ್ರಚೋದನೆಗೆ ಒಳಗಾಗಿ ಜೀರ್ಣ ಕ್ರೀಯೆ ಮತ್ತು ವಿಸರ್ಜನೆ
ಸರಾಗವಾಗಿ ನಡೆಯುತ್ತದೆ. ದಿನದಲ್ಲಿ ಅದೂ ಆಹಾರ ಸೇವನೆಯ ನಂತರ ಒಂದಷ್ಟು ಹೊತ್ತು ವಜ್ರಾಸನದಲ್ಲಿ
ಕುಳಿತಲ್ಲಿ ತಿಂದ ಆಹಾರ ಸರಿಯಾಗಿ ಕರಗಿ ಜೀರ್ಣ ಸಂಬಂಧೀ ಬಾಧೆಗಳ ಪ್ರಭಾವ ಬಹಳಷ್ಟು
ಕಡಿಮೆಯಾಗುತ್ತದೆ. ಹಾಗಾಗಿ ಊರಿನ ಕಸದ ಸಮಸ್ಯೆಯ ಬಗ್ಗೆ ಚಿಂತಿಸುವಾಗ ನಮ್ಮ ದೇಹದ ಕಸದ ನಿರ್ವಹಣೆಯ ಬಗ್ಗೆಯೂ ಗಂಭೀರವಾಗಿ
ಯೋಚಿಸಬೇಕು. ಹಾಗಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ಯೋಗ ದಿವಸ
ಆಚರಣೆಯೂ ಅರ್ಥಪೂರ್ಣವಾಗುತ್ತದೆ. ಯಾವುದೇ ವಸ್ತುವನ್ನು ಹೊಸದಾಗಿ ಮನೆಗೆ ತಂದಾಗ ಒಂದಿಷ್ಟು
ಸಂಭ್ರಮವಿರುತ್ತದೆ. ಅದು ಹಳೆಯದಾಗಿ ಕಸವಾಗುವಾಗ ಅದನ್ನು ಕಳೆಯುವುದೇ ಒಂದು ಸಮಸ್ಯೆಯಾದಂತೆ ನಾವು
ಆಹಾರ ಸೇವಿಸುವಾಗ ಇರುವ ಸಂಭ್ರಮ ವಿಸರ್ಜಿಸುವಲ್ಲಿ ಇರುವುದಿಲ್ಲ. ಯಾಕೆಂದರೆ ಬಾಧಿಸುವ ಜೀರ್ಣ
ಸಮಸ್ಯೆ. ಹಾಗಾಗಿ ಶೌಚಕ್ಕೆ ಕುಳಿತಾಗಲೇ ತಾವೇನು
ಸೇವಿಸಿದ್ದೇವೆ ಎಂಬುದರ ಬಗ್ಗೆ ಯೋಚನೆ ಬರುವುದು. ಇಂದು ಪ್ರತಿಶತ ಎಪ್ಪತ್ತರಿಂದಲೂ ಅಧಿಕ ಮಂದಿಯ ಸಮಸ್ಯೆ
ಜೀರ್ಣಾಂಗ ಸಂಬಂಧಿಯಾಗಿರುತ್ತದೆ. ಒಂದಷ್ಟು ಸರಳ ಆಸನ ಪ್ರಾಣಾಯಾಮ ಇದಕ್ಕೆಲ್ಲ ಸೂಕ್ತ ಪರಿಹಾರ
ಎಂದು ಅರಿತರೂ ಅದನ್ನು ಹಿಂಬಾಲಿಸಲಾಗದ ಔದಾಸಿನ್ಯ ಆವರಿಸಿರುತ್ತದೆ.
ವಜ್ರಾಸನದಲ್ಲಿ ಸ್ಥಿರವಾಗುವಾಗ ಮನಸ್ಸಿನ ಬಾಗಿಲು
ತೆರೆಯಲ್ಪಡುತ್ತದೆ. ದೇಹ ಮನಸ್ಸು ಒಂದಾಗುವ ಹಂತವದು. ಅದಕ್ಕೆ ಉಸಿರು ಮಾಧ್ಯಮವಾಗುತ್ತದೆ. ಉಸಿರು
ದೇಹ ಮತ್ತು ಮನಸ್ಸಿನ ಸೇತುವೆಯಾದಾಗ ಅದು ಧ್ಯಾನ,
ಅತರಂಗದ ದರ್ಶನ ಹೀಗೆ ಆಧ್ಯಾತ್ಮಿಕವಾಗಿ ಹೇಳುವುದುಂಟು. ಆದರೆ ಅದರ ಅರಿವಿಲ್ಲ. ಆದರೂ ಒಂದು ಜಿಜ್ಞಾಸೆ ಹೀಗಿರಬಹುದೇ?
ಒಂದು ಸಲ ಮನಸ್ಸು ಕೇಂದ್ರೀಕೃತವಾದ ನಂತರ ಅದರಿಂದ ಹೊರಗೆ ಬರುವುದು ಸಾಧ್ಯವಾಗುವುದಿಲ್ಲ.
ಬಲವಂತವಾಗಿ ಪರಿಧಿಯನ್ನು ಮೀರಬೇಕಾಗುತ್ತದೆ. ’ಧ್ಯಾನ” ಇದು ಮುಂಜಾನೆಯ ಮಧುರ ನೆನಪಾಗಿ ದಿನವಿಡೀ ಉಳಿದು
ಬಿಡುತ್ತದೆ. ಹಾಗಾಗಿ ಸಮಯವಿಲ್ಲದ ಆತುರತೆಯಲ್ಲೂ ಈ ಕೆಲವು ನಿಮಿಷಗಳನ್ನು ಬದಲಿಸುವುದು
ಸಾಧ್ಯವಾಗುವುದಿಲ್ಲ.
ವಜ್ರಾಸನದಲ್ಲಿ ನೇರವಗಿ ಕುಳಿತಾಗ
ದೇಹ ಕುಬ್ಜವಾಗಿ ಸೂಕ್ಷವಾದ ಅನುಭವವಾದರೆ ಅಂತರಂಗ ವಿಶಾಲವಾಗುತ್ತಾ ಹೋಗುತ್ತದೆ ಅಂತರಂಗದ
ಪ್ರಪಂಚ ತೆರೆದಷ್ಟು ಧ್ಯಾನ ಅರ್ಥಪೂರ್ಣವಾಗುತ್ತದೆ. ಹೀಗೆ ಅಂತರ್ಮುಖಿಯಾದಾಗ ಏಕಾಂತ ಮೌನವನ್ನು
ಸುಖವಾಗಿ ಅನುಭವಿಸುವ ಮನೋಭಾವ ಮೂಡುತ್ತದೆ. ಏಕಾಂತತೆ ಎಂಬುದು ವರವಾಗುತ್ತದೆ. ಹೀಗೆ ಧ್ಯಾನ
ಪ್ರಾಣಾಯಾಮದ ಒಂದೊಂದು ಮಜಲುಗಳಲ್ಲೂ ವಿಭಿನ್ನ ಅನುಭವವನ್ನು ಕಂಡಾಗ ಅದನ್ನೇ ಸುಯೋಗ
ಎನ್ನಬೇಕು. ಈ ಅನುಭವಗಳಿಂದ ಪಕ್ವವಾಗುವಾಗ
ಮುಂದಿನ ಚಟುವಟಿಕೆಗಳು ಉಲ್ಲಾಸದಾಯಕವಾಗಿ ಅದರಲ್ಲಿ ತಾದಾತ್ಯ್ಮವನ್ನು ಬೆಳೆಸುವ ಪ್ರಚೋದನೆಯುಂಟಾಗುತ್ತದೆ.
ಪ್ರತಿದಿನವೂ ವಜ್ರಾಸನದ ಸ್ಥಿತಿಗೆ ಬರುವಾಗ ಮನಸ್ಸು
ಹತ್ತು ವರ್ಷಗಳ ಹಿಂದಿನ ದಿನವನ್ನು ನೆನಪಿಗೆ ತರುತ್ತದೆ. ಮಂಡಿ ನೋವು ಬಾಧೆಯಲ್ಲಿ ವಜ್ರಾಸನ
ಕೆಲವು ಘಳಿಗೆಗಳಿಗಷ್ಟೆ ಸೀಮಿತವಾಗುವುದಿತ್ತು. ಎಂದಿನಿಂದ ಯೋಗಾಭ್ಯಾಸ ತೊಡಗಿತೋ ಅಂದಿನಿಂದ ಆಸನಗಳ ಜತೆ ವಜ್ರಾಸನವೂ
ಪಟ್ಟಿಯಲ್ಲಿ ಸೇರಿಕೊಂಡುಬಿಟ್ಟಿತು. ಪ್ರತೀ ದಿನ ವಜ್ರಾಸನದ ಅವಧಿ ಹೆಚ್ಚಿಸುತ್ತಾ ಈಗ ಘಳಿಗೆ ಏಕೆ
ಘಂಟೆ ಕಾಲ ವಜ್ರಾಸನದಲ್ಲಿ ಸುಖವಾಗಿ ವಿರಮಿಸುತ್ತೇನೆ. ಆದರೆ ಮನಸ್ಸು
ಮಾತ್ರಾ ಹಿಂದಕ್ಕೆ ಒಂದರೆ ಘಳಿಗೆ ಓಡುತ್ತದೆ. ಹೇಗಿದ್ದ ದೇಹ ಅಂಗಾಂಗಗಳು ಹೇಗಾದವು? ಅಂಗಾಂಗಗಳು
ಸ್ವಾವಲಂಬನೆಯನ್ನು ಪಡೆದ ಅನುಭವವಾಗುತ್ತದೆ.
ವಜ್ರಾಸನ ಅದು
ಕೇವಲ ಒಂದು ಸ್ಥಿತಿಯಲ್ಲ. ಮನಸ್ಸಿಗೆ ದೇಹಕ್ಕೆ ವಜ್ರದಂತೆ ಕಾಠಿಣ್ಯವನ್ನು ಸ್ಥಿರತೆಯನ್ನು ತರಬಲ್ಲ ಆಸನ.
ಧ್ಯಾನ ಪ್ರಾಣಾಯಾಮ ಆಸನ ಹೀಗೆ ಎಲ್ಲದರ
ನಡುವೆ ವಜ್ರಾಸನದಲ್ಲಿ ವಿರಮಿಸುತ್ತಾ ಪರಿಸರವನ್ನು ಏಕಾಂತವಾಗಿ ಅವಲೋಕಿಸುವಾಗ ಮುಂಜಾನೆ ಎಂಬುದು
ಮಧುರಸ್ಮೃತಿಯಾಗಿಬಿಡುತ್ತದೆ.
ಯೋಗಾಭ್ಯಾಸದ
ಕೊನೆಯ ಹಂತವಾಗಿ ಸೂರ್ಯನಮಸ್ಕಾರ. ನಂತರ ಶವಾಸನ. ಕಣ್ಣು ಮುಚ್ಚಿ ನಿರಾಳತೆಯ ಸುಖವನ್ನು ಅನುಭವಿಸಿ
ದೇಹ ಮನಸ್ಸು ಭಾರವನ್ನು ಕಳೆದು ಎದ್ದು ಕಣ್ಣು ತೆರೆಯುತ್ತೇನೆ. ಈಗ ಪುನಃ ವಜ್ರಾಸನದದಲ್ಲಿ
ಒಂದಿಷ್ಟು ಹೊತ್ತು ಆದಿನದ ಕೊನೆಯ ಅನುಭವ. ಅಲ್ಲಿ
ಮರುದಿನ ಮುಂಜಾನೆಗೆ ಬಿಟ್ಟು ಹೋಗುವ ಮಧುರ ಸ್ಮ್ಟುತಿಯನ್ನು ಕಟ್ಟಿ ಉಳಿಸುತ್ತೇನೆ. ದೂರಲ್ಲಿ ಪ್ರಖರವಾಗುವ ಭಾಸ್ಕರ ಇದಕ್ಕೆ ಸಾಕ್ಷಿಯಾಗಿ
ನಗುತ್ತಾನೆ. ಹೋಗಿ ಬಾ ಎಂದು ಹರಸಿದ ಅನುಭವವಾಗಿ ನಿಧಾನವಾಗಿ ಎದ್ದು ಲೌಕಿಕ ಪ್ರಪಂಚವನ್ನು
ಪ್ರವೇಶಿಸುತ್ತೇನೆ.
No comments:
Post a Comment