Sunday, February 26, 2023

ಸಂಪನ್ನ ಕಾಶೀಯಾನ

ಮಂತ್ರ ಹೀನಂ ಕ್ರಿಯಾ ಹೀನಂ ಭಕ್ತಿ ಹೀನಂ ಸುರೇಶ್ವರ

ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತುಮೇ

ಅಪರಾಧ ಸಹಸ್ರಂಚ ಕ್ರಿಯತೆಹರ್ನಿಶಂ ಮಯಾ

ದಾಸೋಯ ಮಿತಿ ಮಾಂ ಮತ್ವ ಕ್ಷಮಸ್ವ ಪರಮೇಶ್ವರ


        ನಾವು ಮಾಡುವ ಎಲ್ಲ ಸತ್ಕಾರ್ಯಗಳಲ್ಲಿ ಹಲವು ನ್ಯೂನ್ಯತೆಗಳು ಇದ್ದೇ  ಇರುತ್ತವೆ. ರಾತ್ರಿ ಹಗಲೆನ್ನದೆ ಅಪರಾಧವನ್ನು ಮಾಡಿದರೂ  ಪರಮಾತ್ಮ ಪದತಲದಲ್ಲಿ ಎಲ್ಲವನ್ನು ಸಮರ್ಪಿಸಿ ಕ್ಷಮಸ್ವ ಪರಮೇಶ್ವರಃ ಎಂದು ಪ್ರಾರ್ಥಿಸುತ್ತೇವೆ. 

        ಹಲವು ಏಳುಬೀಳು ನೋವು ನಲಿವು ಎಲ್ಲವನ್ನು ಅನುಭವಿಸುತ್ತಾ ಮುಗಿಸಿದ ಕಾಶೀಯಾತ್ರೆಯಲ್ಲಿ ಮನಸ್ಸು ಧನ್ಯತೆಯನ್ನು ಕಂಡಿತು.  ನಾವೇನೋ ಅಸಾಮಾನ್ಯವಾಗಿದ್ದುದನ್ನು ಸಾಧಿಸಿದ್ದೇವೆ ಎಂಬ ಅಹಂಕಾರವೂ ದೂರವಾದರೆ ಈ ಕಾಶೀ ಯಾತ್ರೆ ಸಾರ್ಥಕತೆಯನ್ನು ಕಂಡಂತೆ.


        ಒಂದು ಹಸುವನ್ನು ಕಂಡರೆ ವ್ಯಕ್ತಿರೀತ್ಯಾ ಅದನ್ನು ಕಾಣುವ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಒಬ್ಬ ಹಸುವನ್ನು ನೋಡಿ ಇದನ್ನು ಸಾಕಿದರೆ ಇದು ಹಾಲನ್ನು ಕೊಡಬಹುದು. ಓರ್ವ  ಉತ್ತಮ ಹಾಲು ಸಿಗಬಹುದು ಎಂದು ಕೊಂಡರೆ ಇನ್ನೋರ್ವ ಹಸು ಸಾಕುವುದು ಆರೋಗ್ಯಕ್ಕೆ ಒಳ್ಳೆಯದು, ಅದರ ಸೆಗಣಿಯಿಂದ ತೊಡಗಿ ಹಾಲು ಮೊಸರು ಯಥೇಚ್ಛವಾಗಿ ಸೇವಿಸಬಹುದು ವ್ಂದು ಇನ್ನೊಬ್ಬನ ಗ್ರಹಿಕೆ. ಅದರಿಂದ ಒಂದಷ್ಟು ಆದಾಯವನ್ನು ಗಳಿಸಬಹುದು ಎಂದು ಒಬ್ಬನಿಗೆ ಕಂಡರೆ,   ಮತ್ತೊಬ್ಬನಿಗೆ ಈ ಹಸುವನ್ನು ಮಾರಾಟ ಮಾಡಿದರೆ ದುಡ್ಡು  ಬರುತ್ತದೆ ಎಂದುಕೊಂಡರೆ, ಮತೆ ಕೆಲವರು ಅದನ್ನು ಸಾಕುವುದೆಂದರೆ ಅದರ ಸೆಗಣಿ, ಗಲೀಜು ಅದರ ಕೆಲಸ ಯಾರಿಗೆ ಬೇಕು ಎಂದು ತಾತ್ಸಾರದಿಂದ ಕಾಣುತ್ತಾನೆ. ಇನ್ನೊಬ್ಬ ಈ ಹಸುವನ್ನು ಕಟುಕರಿಗೆ ಮಾರಿದರೆ ಒಂದಷ್ಟು ಮಾಂಸ ಸಿಗಬಹುದು. ಹೀಗೆ ಒಂದು ಹಸು ಹಲವು ಭಾವನೆಯನ್ನು ಮನೋಭಾವಕ್ಕೆ ಹೊಂದಿಕೊಂಡು ಹುಟ್ಟು ಹಾಕಬಹುದು. ಅದರೆಂತೆ ಪವಿತ್ರವಾದ ಕಾಶಿಯಾತ್ರೆ ಒಬ್ಬೊಬ್ಬರ ಮನೋಭಾವಕ್ಕೆ ಹೊಂದಿಕೊಂಡು ಅದನ್ನು ಕಂಡರೀತಿಯೇ ಬೇರೆ ಯಾಗಿತ್ತು. ಇದು ಪ್ರವಾಸದುದ್ದಕ್ಕು ಅನುಭವಕ್ಕೆ ಬಂದು ಕಾಶೀಯಾತ್ರೆ ಅದು ಕೇವಲ ಕಾಶಿಯಾತ್ರೆಯಲ್ಲ ವ್ಯಕ್ತಿತ್ವದರ್ಶನಕ್ಕೂ ಕಾರಣವಾಗಿ ಮುಂದಿನ ಹಲವು ಘಟನೆಗಳು ಅನುಭವಗಳು ಅದಕ್ಕೆ ಸಾಕ್ಷಿಯಾಯಿತು. 

        ಪೆಬ್ರವರಿ ಹದಿನೈದಕ್ಕೆ ನಿಗದಿಯಾದ ಯಾತ್ರೆಯ ಆರಂಭ ಮುಂಚಿತವಾಗಿ ಆರಂಭವಾಗಿ ಒಂದಷ್ಟು ಗಡಿಬಿಡಿಯಾಗಿದ್ದು ಸತ್ಯ. ಆದರೂ ಅದಕ್ಕಿಂತ ಇದು ಒಳ್ಳೆದು ಅಂತ ಎಲ್ಲರೂ ಸಿದ್ದವಾಗಿದ್ದೆವು. ಜೂಮ್ ಮೀಟಿಂಗ್ ನಲ್ಲಿ ಕಂಡ ವ್ಯಕ್ತಿಗಳು ಪ್ರತ್ಯಕ್ಷವಾಗಿ ಪರಿಚಯಿಸಿಕೊಂಡದ್ದು ಮಾತ್ರವಲ್ಲ, ಹೊಸ ವ್ಯಕ್ತಿ ಪರಿಚಯಕ್ಕೆ ರಾಷ್ಟ್ರ ಜಾಗೃತಿ ಅಭಿಯಾನ ಸಾಕ್ಷಿಯಾಯಿತು. ಪ್ರವಾಸದ ಬೋನಸ್ ಎಂಬಂತೆ ಕೊಲ್ಕೊತ್ತಾ ವಿಮಾನಯಾನ ಹೊಸದಾಗಿ ಸೇರಿಕೊಂಡಿತ್ತು. ಒಂದಷ್ಟು ಹೆಚ್ಚು ಹೊತ್ತು ವಿಮಾನಯಾನ ಎಂಬುದು ಬಿಟ್ಟರೆ ಇದರಲ್ಲಿ ವಿಶೇಷವೇನೂ ಇರಲಿಲ್ಲ. ಕೊಲ್ಕೊತ್ತ ವಿಮಾನ ನಿಲ್ದಾಣವನ್ನು ನಡುರಾತ್ರಿಯ ಮಂಪರು ಕಣ್ಣಿನಲ್ಲಿ ಅಷ್ಟೋ ಇಷ್ಟು ನೋಡಿ ಉಪಹಾರ ಇಲ್ಲದೇ ಬ್ಯಾಗಿನಲ್ಲಿದ್ದುದನ್ನು ಆಷ್ಟು ಬೇಗ ತಿನ್ನುವುದಕ್ಕೆ ಸಾಧ್ಯವಿಲ್ಲದೇ ಇದ್ದರೂ ಸಹ,  ಅದನ್ನೇ ತಿನ್ನುವ ಅನಿವಾರ್ಯತೆ ಒದಗಿದ್ದಕ್ಕೆ ಯಾರನ್ನೂ ಹೊಣೆಮಾಡುವ ಹಾಗಿರಲಿಲ್ಲ. ಇದು ಯಾತ್ರೆ ಆರಂಭದಲ್ಲಿ ಒದಗಿ ಬಂದ ಸತ್ವ ಪರೀಕ್ಷೆ ಎಂದು ಪರಿಗಣಿಸುವ ಮನಸ್ಸು ಅದೇಕೊ ಸೃಷ್ಟಿಯಾಗಿತ್ತು.  ಕೊಲ್ಕೊತ್ತಾದ ಚಳಿಯ ವಿಚಿತ್ರ ಅನುಭವ ಅದರ ನಡುವೆ ವ್ಯಯಕ್ತಿಕ ಸಮಸ್ಯೆಗಳು ಬೇರೆ. 







        ಬೆಂಗಳೂರಲ್ಲಿ ಇಲ್ಲಿಂದ ಕೊಲ್ಕೊತ್ತಾ ಹೋಗುವ ನಮ್ಮಮ್ಮ ಬೋರ್ಡಿಂಗ್ ಪಾಸ್ ಕಳೆದುಕೊಂಡು ಸಾಕಷ್ಟು ತೊಂದರೆ ಅನುಭವಿಸುವಂತೆ ಮಾಡಿತ್ತು. ಅದು ವರೆಗೆ ತೀರ ಅಪರಿಚಿತರಂತೆ ಇದ್ದ ಸಹಪ್ರಯಾಣಿಕರೊಬ್ಬರು ಎಲ್ಲೊ ಹೋಗಿ ಕಾಡಿ ಬೇಡಿ ಬೋರ್ಡಿಂಗ್ ಪಾಸ ಮತ್ತೊಮ್ಮೆ ಮುದ್ರಿಸಿ ತಂದು ಕೊಟ್ಟರು. ಕೃತಜ್ಞತೆ ಸಲ್ಲಿಸುತ್ತಾ ನಾನು ಹೇಳಿದೆ, ಮಗನಾಗಿ ನಾನು ಮಾಡಬೇಕಿದ್ದನ್ನು ನೀವು ಮಾಡಿದಿರಿ. ಆಗ ಅವರು ಹೇಳಿದ ಮಾತು ಮುಂದಿನ ಪ್ರವಾಸದ ದಿಕ್ಸೂಚಿಯನ್ನು ತೋರಿಸಿದಂತಿತ್ತು. ಇದು ರಾಷ್ಟ್ರಿಯ ಸ್ವಯಂ ಸೇವಕ ಸಂಘ ಕಲಿಸಿದ್ದು. ತೊಟ್ಟ  ಬ್ಯಾಜ್ ತೋರಿಸುತ್ತಾ ಅವರು ಹೇಳಿದರು, ಇದು ಇರುವುದೇ ಇದಕ್ಕೆ. ಎಲ್ಲರೂ ನಮ್ಮವರು ಎಂಬ ಭಾವನೆಯನ್ನು ತರಿಸುತ್ತದೆ.  ಸಮಸ್ಯೆ ಇಷ್ಟಕ್ಕೆ ಮುಗಿಯಲಿಲ್ಲ. ಪತ್ನಿಯನ್ನು ಸೇರಿಸಿ ಒಂದಿಬ್ಬರಲ್ಲಿ  ವಿಮಾನ ಯಾನಕ್ಕೆ ಅಗತ್ಯವಿದ್ದ  ಅಸಲೀ ಪರಿಚಯ ದಾಖಲೆ, ( Original ID Proof)  ಇಲ್ಲವಾಗಿತ್ತು. ಬರೀ ಜೆರಕ್ಸ್ ಪ್ರತಿ ತೋರಿಸಿದರೆ ಅಲ್ಲಿ ಒಳಗೆ ಬಿಡಲಿಲ್ಲ. ಬ್ಯಾಜ್ ತೋರಿಸಿದರೂ ಕೇಳಲಿಲ್ಲ. ಮತ್ತೂ ಬೆಂಗಳೂರಲ್ಲಿ ಹೇಗೋ ಗೇಟ್ ದಾಟಿದರೂ ಕೊಲ್ಕೊತ್ತದಲ್ಲಿ ಮಾತ್ರ ಒಳಗೆ ಬಿಡಲಿಲ್ಲ. ಆಗಲೂ ಸಹ ಪ್ರಯಾಣಿಕ ಸಹಾಯಕ್ಕೆ ಬಂದರು. ಇನ್ನು ತೊಂದರೆ ಬೇಡ ಎಂದುಕೊಂಡು ಮೊಬೈಲ್ ನಲ್ಲಿ ಡಿಜಿ ಲಾಕರ್ ಹಾಕಿ ಐಡಿ ಪ್ರೂಫ್ ಸಮಸ್ಯೆಯನ್ನು  ಪರಿಹರಿಸಿಕೊಂಡೆವು. ಇದೆಲ್ಲ ಒಂದು ರೀತಿಯ ಮೊದಲ ಸತ್ವ ಪರೀಕ್ಷೆ. ಅಲ್ಲಿಂದ ಸುಲಭವಾಗಿ ಲಕ್ನೋ ಸೇರುವಾಗ ಮಧ್ಯಾಹ್ನದ ಹೊತ್ತಾಗಿತ್ತು. ಬೆಳಗಿನ ಉಪಾಹಾರ ತಡವಾಗಿಬಿಟ್ಟಿತು. 

        ಕೆಲವು ಕಡೆ ಅದ್ಭುತ ಎನ್ನಿಸುವ ವಿಶಿಷ್ಟ  ಅನುಭವಗಳು ರೋಮಾಂಚನ ತರಿಸಿದರೆ, ಕೆಲವಂತೂ ಅತೀವ ಕಠಣವಾದ ಅನುಭವವನ್ನು ತೋರಿಸಿಕೊಟ್ಟಿತು. ಮೊದಲ ದಿನದ ಬೆಳಗ್ಗಿನ ಉಪಹಾರವೇ ತಡವಾಗಿ ಮಧ್ಯಾಹ್ನ ಸೇವಿಸುವಂತೆ ಮಾಡಿದರೆ, ಮಧ್ಯಾಹ್ನ ಸಿಗಬೇಕಾದ ಊಟ ಸಾಯಂಕಾಲ ಆಯೋಧ್ಯೆಗೆ ತಲುಪಿದ ಮೇಲೆ ಸಿಕ್ಕಿತು. ಬೆಳಗ್ಗಿನ ಉಪಹಾರ ಬಸ್ಸಿನಲ್ಲೇ ಕುಳಿತು ಸೇವಿಸುವ ಅನಿವಾರ್ಯತೆ ಒದಗಿದರೂ  ಪ್ರಯಾಣಿಕರ ಹಸಿವು ನಿರ್ವಾಹವಿಲ್ಲದೆ ಹೊಂದಿಕೊಂಡಿತು. ಏನು ಬಂದರೂ ಹೊಂದಿಸಿಕೊಳ್ಳುವ ಮನೋಭಾವ ಗಟ್ಟಿಯಾಗತೊಡಗಿತು. ಹಾಗೆ ಹೀಗೆ ತಡವಾಗಿ ಅಯೋಧ್ಯೆಯನ್ನು ತಲುಪಿ ಲಕ್ನೋ ಪೈಜಾ ಬಾದ್  ರಾಷ್ಟ್ರೀಯ ಹೆದ್ದರಿಯಲ್ಲಿ ಪ್ರಯಾಣಿಸುತ್ತಿದ್ದ ಬಸ್ ನಿಂತುಬಿಟ್ಟಿತು. ಅಯೋಧ್ಯೆಯ ಒಳ ಹೋಗುವುದಕ್ಕೆ ಅನುಮತಿ ಇದ್ದರೂ ಮೊದಲಿಗೆ ಸಾಧ್ಯವಾಗಲಿಲ್ಲ. ವಾಸ್ತವದಲ್ಲಿ ಯಾವುದೇ ಹೊರಗಿನ ವಾಹನಗಳಿಗೆ ಆಯೋಧ್ಯೆಯಲ್ಲಿ ಪ್ರವೇಶವಿಲ್ಲ. ಅದಕ್ಕೆ ಕಾರಣಗಳು ಹಲವು. ಅದೇನಿದ್ದರೂ ನಂತರ ಬಹಳ ಮುತುವರ್ಜಿಯಿಂದ ಅನುಮತಿ ದೊರೆತು ಅಯೋಧ್ಯೆಯ ಒಳಗೆ ಹೋಗುವಂತಾಯಿತು. ಅಲ್ಲಿ ಸೀತಾ ರಸೋಯಿ ಘರ್ ನಲ್ಲಿ ನಮಗೆಲ್ಲ ಊಟ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. 

        ನಾವೆಲ್ಲ ಸೇರಿ ಇನ್ನೂರ ಎಪ್ಪತ್ತೈದು ಮಂದಿ ಇದ್ದು ಆರು ಬಸ್ ಗಳು ಆ ಕಿರಿದಾದ ರಸ್ತೆಯೊಳಗೆ ಹೋಗಿ ಸ್ಥಳೀಯರಿಗೆ ಒಂದಿಷ್ಟು ತೊಂದರೆಯಾದಂತೆ ಭಾಸವಾಗಿದ್ದು ಬಿಟ್ಟರೆ ಮತ್ತೆಲ್ಲವೂ ಸಸೂತ್ರವಾಗಿತ್ತು. ಎಲ್ಲಿನೋಡಿದರೂ ಗನ್ ಹಿಡಿದ ಪೋಲೀಸರು. ಮೊದಲಿಗೆ ವಿಚಿತ್ರ ಎನಿಸಿದರೂ ಅದು ಇಂದಿನ ವಾಸ್ತವದ ಪರಿಸ್ಥಿತಿಯ ಚಿತ್ರಣವಾಗಿತ್ತು. 

        ಅಯೋಧ್ಯೆಯ ಸೀತಾ ರಸೋಯಿ ಘರ್ ನಲ್ಲಿ ಅದ್ಭುತ ಎನ್ನಿಸುವಂತ ಆತಿಥ್ಯ ಲಭ್ಯವಾಯಿತು. ಒಂದಷ್ಟು ಅನ್ನ ದಾಲ್ ರಸಂ ಜತೆಗೆ ಪೂರಿ ಕಚೋರಿ ಜತೆ ಸೇವಿಸಲು ಅಲ್ಲಿನ ಸಹಜ ಖಾದ್ಯ ಆಲೂ ಸಬ್ಜಿ ಇತ್ತು. ಎಲ್ಲವೂ ಬಹಳ ರುಚಿಕರವಾಗಿತ್ತು. ಎಲ್ಲಕ್ಕಿಂತ ಮೇಲೆ  ಅಲ್ಲಿನ ಮಂದಿಯ ಸ್ನೇಹ ಉಲ್ಲೇಖಿಸಲೇ ಬೇಕು.  ಆಪ್ತ ಸಂಭಂಧಿಗಳಂತೆ ಒತ್ತಾಯ ಪೂರ್ವಕವಾಗಿ ಬಡಿಸಿದ ರೀತಿ ಆಹಾರ ತಿನ್ನದೇ ಹೊಟ್ಟೆ ತುಂಬಿದ ಅನುಭವವನ್ನು ನೀಡಿತು. ಅಲ್ಲಿ ಸಾಯಂಕಾಲದ ಬೈಟಕ್ ವ್ಯವಸ್ಥೆಯಾಗಿತ್ತು. ಒಂದಷ್ಟು ಹಾಡು ಪ್ರವಚನ ಎಲ್ಲರೂ ವಿಶ್ರಾಂತಿಯ ಮನೋಭಾವದಲ್ಲಿದ್ದರು. ರಾತ್ರೆಯಾಗುತ್ತಿದ್ದಂತೆ ಅಯೋಧ್ಯೆಯ ಚಳಿ ಹೆಚ್ಚಾಗತೊಡಗಿತು. ಮಲಗುವುದಕ್ಕೆ ಹಾಸಿಗೆ ಶೌಚಾಲಯ ಸಾಕಷ್ಟು ಸಂಖ್ಯೆಯಲ್ಲಿದ್ದರೂ ವಿಪರೀತ ಚಳಿ ತಡೆದುಕೊಳ್ಳುವುದಕ್ಕೆ ಕಷ್ಟವಾಗಿತ್ತು. ಜತೆಯಲ್ಲಿ ತೆಗೆದು ಕೊಂಡು ಹೋದ ಶಾಲು ಮತ್ತು ಸ್ವೆಟರ್ ಮಾತ್ರ ಚಳಿಯನ್ನು ದೂರಮಾಡುವುದಕ್ಕಿದ್ದರೂ ಸುಸ್ತಾದುದರಿಂದ ಎಲ್ಲರೂ ನಿದ್ದೆಗೆ ಜಾರಿದ್ದರು. ಮರುದಿನ ಮುಂಜಾನೆ ಸರಯೂ ನದಿಯಲ್ಲಿ ತೀರ್ಥ ಸ್ನಾನಕ್ಕೆ ವ್ಯವಸ್ಥೆಯಾಗಿತ್ತು. 

        ಸೀತಾ ರಸೋಯಿ ಘರ್!  ಇಲ್ಲಿ ತೀರ ಹಳ್ಳಿಯ ವಾತಾವರಣ. ಉತ್ತರ ಭಾರತದ ಹಳ್ಳಿಯ ದರ್ಶನ ನಿಜಕ್ಕೂ ರೋಮಾಂಚನ ಉಂಟು ಮಾಡಿತ್ತು. ರಾಮ ಜನ್ಮ ಭೂಮಿಯಲ್ಲಿ ರಾಮ ಸೇನೆಯ ಪ್ರತೀಕವಾಗಿದ್ದ ಮಂಗಗಳು ಅಧಿಕ ಸಂಖ್ಯೆಯಲ್ಲಿದ್ದು ಸಾಕಷ್ಟು ತೊಂದರೆಯ ಅನುಭವವಾಯಿತು. ಅಯೋಧ್ಯಯಲ್ಲಿ ಮುಂಜಾನೆ ನಾಲ್ಕುಗಂಟೆಗೆ ಎಂದಿನಂತೆ ಎಚ್ಚರವಾಯಿತು. ಸುತ್ತಲು ಮಂಜು ಮುಸುಕಿತ್ತು ತಾಪಮಾನ ಆರು ಏಳು ಡಿಗ್ರಿಯಷ್ಟು ಇತ್ತು. ಆ ತಣ್ಣನೆಯ ವಾತಾವರಣದಲ್ಲಿ ತಣ್ಣಿರ ಸ್ನಾನದ ವೈಶಿಷ್ಟ್ಯವೇ ಅದ್ಭುತ. ಅಯೋಧ್ಯಯಲ್ಲಿ ಮುಂಜಾನೆ ನಾಲ್ಕುಗಂಟೆಗೆ ಎಂದಿನಂತೆ ಎಚ್ಚರವಾಯಿತು. ಸುತ್ತಲು ಮಂಜು ಮುಸುಕಿತ್ತು ತಾಪಮಾನ ಆರು ಏಳು ಡಿಗ್ರಿಯಷ್ಟು ಇತ್ತು. ಆ ತಣ್ಣನೆಯ ವಾತಾವರಣದಲ್ಲಿ ತಣ್ಣಿರ ಸ್ನಾನದ ವೈಶಿಷ್ಟ್ಯವೇ ಅದ್ಭುತ. ಎಲ್ಲಿ ಹೋದರೂ ಮುಂಜಾನೆಯ ನನ್ನ ದಿನಚರಿ ಇಲ್ಲಿಯೂ ಸಹಜವಾಗಿ ನಡೆಯಿತು. ಉದ್ದನೆಯ ಜಗಲಿಯ   ಒಂದು ಮೂಲೆಯಲ್ಲಿ ಕುಳಿತು ಜಪ ಧ್ಯಾನ ಯೋಗಾಭ್ಯಾಸದಲ್ಲಿ ನಿರತನಾದೆ. ಆಯಾಸವಿಲ್ಲದ ಸೂರ್ಯನಮಸ್ಕಾರ ಹೊಸ ಚೈತನ್ಯವನ್ನು ತುಂಬಿದಂತೆ ಅಯೋಧ್ಯೆಯ ತಣ್ಣನೆಯ ಗಾಳಿ ದೇಹದೊಳಗೆಲ್ಲ ವ್ಯಾಪಿಸಿತು.   ಆ ದಿವ್ಯ ಅನುಭವಕ್ಕೆ ಎಣೆಯಿಲ್ಲದ ರೋಮಾಂಚನವನ್ನು ಅನುಭವಿಸಿದೆ. ಪ್ರಾಣಾಯಾಮದ ಗಾಢವಾದ ಸ್ಥಿತಿಗೆ ತಲುಪಿದಾಗ ಆ ಚಳಿಯಲ್ಲು ದೇಹ ಹಿತವಾಗಿ ಬೆವರಿದಾಗ ಆಗುವ ಅನುಭವ ವರ್ಣನಾತೀತ.  ಇಷ್ಟಾದರೂ ನಾನು ಏಕಾಂತ ಧ್ಯಾನದಲ್ಲಿರುವಾಗ ಪರಸರ ಜ್ಞಾನ ಎಂಬುದು ಹಲವರಿಗೆ ಇರುವುದಿಲ್ಲ. ಅಲ್ಲೂ ನಿಶ್ಚಲನಾಗಿ ಧ್ಯಾನದಲ್ಲಿ ಕುಳಿತ ನನ್ನಲ್ಲಿ ಬಂದು ಬಾತ್ ರೂಮ್ ಎಲ್ಲಿ ಎಂದು ವಿಚಾರಿಸಿದರು. ಅದೂ ಸ್ವಚ್ಛವಾಗಿದ್ದ ಜಾಗದಲ್ಲಿ ಚಪ್ಪಲಿ ಹಾಕಿಕೊಂಡು ಬಂದು ದೊಡ್ಡ ದನಿಯಲ್ಲಿ ವಿಚಾರಿಸುವಾಗ ಒಂದಷ್ಟು ಸಾಮಾನ್ಯ ಪ್ರಜ್ಞೆ ಇರಬೇಕಿತ್ತು. ತೀರ್ಥ ಯಾತ್ರೆ ಎಂಬುದು ಅಧ್ಯಾತ್ಮಿಕತೆಯ ಒಂದು ಮಗ್ಗುಲು. ಆದರೂ ಆಧ್ಯಾತ್ಮಿಕತೆಯ ಬಗ್ಗೆ ಇವರಿಗೆ ಗೌರವವೂ ಇಲ್ಲ, ಅದರ ಅರಿವೂ ಇಲ್ಲ. ಒಂದು ವೇಳೆ ಅನ್ಯ ಧರ್ಮದವರು ಹೀಗೆ ಅವರ ಪ್ರಾರ್ಥನೆ ಸಲ್ಲಿಸುತ್ತಿದ್ದರೆ ಇವರೆಲ್ಲರ ವರ್ತನೆ ಹೀಗಿರುತ್ತಿತ್ತೆ ಎಂಬ ಜಿಜ್ಞಾಸೆ ಹುಟ್ಟಿಕೊಂಡಿತು. 

        ಅಯೋಧ್ಯೆಯ ದರ್ಶನವೆಂದರೆ ಅದು ಭಾವನಾತ್ಮಕ ಘಳಿಗೆಗಳನ್ನು ಸೃಷ್ಟಿಸಿತ್ತು. ರಾಮ ಜನ್ಮ ಭೂಮಿ ಮಾತ್ರವಲ್ಲ ಸುತ್ತಮುತ್ತಲಿನ ಎಲ್ಲ ಪ್ರದೇಶಗಳನ್ನು ಅಗೆದು ಹಾಕಿ ಪುನರ್ ನವೀಕರಣದ ಕಾಮಗಾರಿ ನಡೇಯುತ್ತಿತ್ತು. ಮುಂಜಾನೆಯ ಸೂರ್ಯ ರಶ್ಮಿಯ ಜತೆಗೆ ರಾಮ ಮಂದಿರ, ಹನುಮಾನ್ ಮಂದಿರ, ದಶರಥ ಅರಮನೆ ಹೀಗೆ ಹಲವು ಸ್ಥಳ ದರ್ಶನ ರೋಮಾಂಚನವನ್ನು ತಂದಿತ್ತು. ರಾಮ ಜನ್ಮ ಭೂಮಿಯನ್ನು ಕಾಣುವಾಗ ಹೃದಯ ತುಂಬಿ ಬಂತು. ಅಲ್ಲಿನ ಗಾಳಿಯನ್ನು ಸೇವಿಸಿದ ನಾವು , ಅಲ್ಲಿಯ ಮಣ್ಣನ್ನು ತುಳಿದ ನಾವು ನಿಜಕ್ಕೂ ಪುಣ್ಯವಂತರು. ಕಾಶೀದರ್ಶನದ ಮೊದಲ ಮೆಟ್ಟಲು ಅಯೋಧ್ಯೆಯಲ್ಲಿ ಏರಿದ ಅನುಭವ . ರಾಮ ಜನ್ಮ ಭೂಮಿಯ ವಿವಾದಿತ ಸ್ಥಳವನ್ನು ಕಾಣುವಾಗ ಚರಿತ್ರೆಯ ಪುಟಗಳು ತೆರೆದಂತೆ ಭಾಸವಾಯಿತು.  ಹಲವು ಭಾವನೆಗಳ ತುಮುಲ ಅನುಭವಕ್ಕೆ ಬಂತು.  ನಿಜಕ್ಕೂ ಅಯೋಧ್ಯೆಯ ದರ್ಶನ ಪೂರ್ವ ಜನ್ಮದ ಸುಕೃತ ಫಲ. ಇನ್ನು ರಾಮ ಮಂದಿರ ಪೂರ್ಣವಾಗಿ ಅಯೋಧ್ಯೆ ಪುನರ್ನಿರ್ಮಾಣವಾದ ನಂತರ ಬೇಟಿಕೊಡಬೇಕು ಪ್ರಚೋದನೆಯನ್ನು ಮೂಡುವಂತೆ ಮಾಡಿತು. ರಾಮ ಜನ್ಮ ಭೂಮಿ ಕೇವಲ ಭೂಮಿಯಲ್ಲ. ಅದೊಂದು ಭಾವನಾತ್ಮಕ ಸಂಭಂಧದ ಪ್ರತೀಕ. ರಾಮ ಜನ್ಮ ಭೂಮಿ ರಾಮ ಧನ್ಯ ಭೂಮಿ.

        ಆಯೋಧ್ಯೆಯಿಂದ ತಡವಾಗಿ ಹೋರಟವರು ಬೇಲಾ ಪ್ರತಾಪ್ ಘರ್ ನ ಸಾಯಿ ನದೀ ತೀರದ  ಭೇಲಾ ದೇವಿ ದೇವಾಲಯದ ಸುಂದರ ಪರಿಸರದಲ್ಲಿ ಮಧ್ಯಾಹ್ನದ ಭೋಜನ. ಮಜ್ಜಿಗೆ ಅನ್ನ, ಶುದ್ದ ಪಶುವಿನ ಮಜ್ಜಿಗೆ ಬಿಸಿಲಿನ ಝಳಕ್ಕೂ ಹಸಿವಿಗೂ ಹಿತವಾದ ಅನುಭವ ನೀಡಿತು. ಉತ್ತರ ಭಾರತದಲ್ಲಿ ಅಕ್ಕಿಯ ಅನ್ನ ತಿನ್ನುವವರು ಕಡಿಮೆ. ನಾವು ಕೇವಲ ಅನ್ನ ತಿಂದು ಹಸಿವು ನೀಗಿಸುವುದು ಅವರಿಗೆ ವಿಚಿತ್ರ ಅನ್ನಿಸುತ್ತದೆ. ಪೂರಿ ಕಚೋರಿ ಇಲ್ಲದ ಭೋಜನ ಅದೆಂತಹ ಭೋಜನ? ಇಲ್ಲಿನ ಹಾಗೆ ನೆಲದಲ್ಲಿ ಚಕ್ಕಳ ಮಕ್ಕಳ ಹಾಕಿ ಕುಳಿತು ತಿನ್ನುವುದು ಅಲ್ಲಿ ವಾಡಿಕೆ ಇಲ್ಲ ಅನ್ನಿಸುತ್ತದೆ. ನಿಂತೇ ತಿನ್ನುವ ಹರಕೆ ತೀರಿಸುವ ಇವರಿಗೆ ಭೋಜನ ಎಂಬುದು ಕೇವಲ ’ಖಾನಾ’  ವಾಗಿ ಬದಲಾಗುತ್ತದೆ. ಅಲ್ಲಿಂದ ಊಟ ಮುಗಿಸಿ ಹೊರಟವರು ಅಲಹಾಬಾದ್ ನ ಪ್ರಯಾಗ್ ರಾಜ್ ಗೆ ಸೇರುವಾಗ ಸಾಯಂಕಾಲ ಕಳೆದಿತ್ತು. ನಮಗಾಗಿ ಆದಿನದ ಗಂಗಾ ಪೂಜೆ ಗಂಗಾರತಿಯನ್ನು ಅರ್ಧ ತಾಸು ವಿಳಂಬಿಸಿದ್ದರು. ಸ್ಥಳಿಯ ನಗರದ ಮಹಾಪೌರ (ಮೇಯರ್) ಒಬ್ಬರು ಸುಲಕ್ಷಣವಾದ ಮಹಿಳೆ, ಉತ್ತರ ಪ್ರದೇಶದ ಉಪ ಮುಖ್ಯ ಮಂತ್ರಿ ಇನ್ನು ಕೆಲವು ಮುಖಂಡರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಹೀಗೆ ಒಂದು ಹಬ್ಬದ ವಾತಾವರಣ. ಗಂಗಾರತಿ ಒಂದು ಅದ್ಭುತ ಕಾರ್ಯಕ್ರಮ. ಸಾಮಾನ್ಯವಾಗಿ ಇಲ್ಲಿ ಮಾಡುವಂತೆ ಷೋಡಷೋಪಚಾರ ಪೂಜೆ. ಅದೇ ಮಂತ್ರಗಳು ವಿಭಿನ್ನವಾಗಿ ಉಚ್ಚರಿಸಲ್ಪಟ್ಟವು. ಕಲಶ ಪೂಜೆ, ಶಂಖ ಪೂಜೆ ಘಂಟೆ ದೀಪ ಪೂಜೆ ಆನಂತರ ಆವಾಹನ, ಸ್ನಾನ, ಅರ್ಘ್ಯ,  ನೈವೇದ್ಯ ಮಂಗಳಾರತಿ ಹೀಗೆ ಪೂಜೆಯ ಕ್ರಮಗಳು ಇಲ್ಲಿನ ಹಾಗೆ ಆದರೂ ತುಂಬ ಭಿನ್ನ. ಧ್ವನಿ ವರ್ಧಕದಲ್ಲಿ ಮೊಳಗುವ ಸಂಗೀತಕ್ಕೆ ಶ್ರುತಿ ಲಯಬದ್ದವಾಗಿ ನೃತ್ಯ ರೂಪಕದಂತೆ ಗಂಗಾರತಿ ನಡೆಯುತ್ತದೆ.  ಅರ್ಚಕ ವಟು ಪುತ್ರರು ಬಣ್ಣ ಬಣ್ಣದ ಮಿರು ಮಿರುಗುವ  ಕಚ್ಚೆ ಅಂಗಿ ತೊಟ್ಟು ಪೂಜೆ ನೆರವೆಸಿದರು. ಆ ರಾತ್ರಿ ಹಲವರ್ ತ್ರಿವೇಣಿ ಸಂಗಮದಲ್ಲಿ ಮುಳುಗು ಹಾಕಿ ಕೃತಾರ್ಥರಾದರು. ಆನಂತರ ಭೋಜನ ಪೂರಿ ಅನ್ನದಾಲ ಮೊಸರನ್ನ ಸಿಹಿ ಹೀಗೆ ಅಲ್ಲಿನ ಮಟ್ಟಿಗೆ ಭರ್ಜರಿ ಭೋಜನ. ಎಲ್ಲಾ ನಾಯಕರು ಕೊನೆಯ ತನಕ ನಮ್ಮ ಜತೆಗಿದ್ದು ನಮ್ಮನ್ನು ಬೀಳ್ಕೊಟ್ಟ ಘಳಿಗೆ ಅತ್ಯಂತ ಹೃದ್ಯವಾಗಿತ್ತು. ಹರಿಯುವ ಗಂಗೆಯಷ್ಟೇ ಪರಿಶುದ್ದ ಇಲ್ಲಿ ಸಿಕ್ಕಿದ ಆತಿಥ್ಯ. 

        ಪ್ರಯಾಗದಿಂದ ನಮ್ಮ ಪ್ರಯಾಣ ಬೀಹಾರ್ ನಲ್ಲಿರುವ ಗಯಾ.....ಪಿತೃಗಳ ತವರೂರು ಎಂದರೂ ಸರಿಯೆ. ಗಯಾದಲ್ಲಿ ಉಪಾಹಾರಕ್ಕೆ ಇಡ್ಲಿ ದೋಸೆ ಸಿಕ್ಕಿದ್ದು ಅಪರೂಪ ಎನ್ನುವಂತಿತ್ತು. ಸ್ನಾನ ಜಪ ಮುಗಿಸಿ ಉಪಾಹಾರ ಸೇವಿಸಿ ಹರಿಪಾದ ದರ್ಶನ ಮಾಡಿದೆವು. ಹರಿಪಾದಕ್ಕೆ  ಶಿರ ತಾಗಿಸಿ ಪಾವನವಾದ ಅನುಭವ. ಇಲ್ಲಿ ಬೇರೆ ಏನೂ ವೈಶಿಷ್ಟ್ಯವಿಲ್ಲ. ಹಲವರು ತಮ್ಮ ಪಿತೃಗಳಿಗೆ ತರ್ಪಣ ಅರ್ಪಿಸಿದರು. ಮಧ್ಯಾಹ್ನ  ಭೋಜನ ಮುಗಿಸಿದಾಗಲೇ ಸಾಯಂಕಾಲವಾಗಿತ್ತು. ಅಂತೂ ಅಲ್ಲಿಂದ ಬಹಳ ತಡವಾಗಿತ್ತು.  ಅಲ್ಲೇ ಇದ್ದ ಬುದ್ದಗಯ ವೀಕ್ಷಣೆ ಮುಗಿದಾಗ ರಾತ್ರಿ ಹತ್ತು ಘಂಟೇ ಕಳೆದರೂ ರಾತ್ರಿಯ ಭೋಜನ ಅಲ್ಲಿನ ಡೆಲ್ಟಾ ಇಂಟರ್ನೇಶನಲ್ ಹೋಟೇಲಿನಲ್ಲಿ ಸಿಧ್ಧವಾಗಿತ್ತು. ಅಲ್ಲಿ ಸಣ್ಣ ಸಭೆ ಗಾಯನ ಮುಗಿಸಿ ಅಲ್ಲಿ ರಾತ್ರಿ ಭೋಜನ. ಬಹುಶಃ ಪ್ರವಾಸದಲ್ಲಿ ಅತ್ಯಂತ ರುಚಿಕಟ್ಟಾದ ಭೋಜನ.  ರಾತ್ರಿ ಬಹಳವಾಗಿರುವುದರಿಂದ ನಾನು ಒಂದೆರಡು ತುತ್ತು ಸೇವಿಸಿದೆ. ಮಧ್ಯರಾತ್ರಿ ಗಯಾಕ್ಕೆ ವಿದಾಯ ಹೇಳಿ ವಾರಣಾಸಿಯತ್ತ ನಮ್ಮ ಪಯಣ ಸಾಗಿತ್ತು. 

        ಮುಂಜಾನೆ ಸೂರ್ಯೋದಯದಲ್ಲಿ ವಾರಣಾಶಿ ಗಡಿಯನ್ನು ತಲುಪಿದೆವು. ಇಲ್ಲಿ ಪ್ರಯಾಣಕ್ಕೆ ಒಂದಷ್ಟು ವಿಘ್ನ ತಲೆದೋರಿತು. ಬರುವಾಗ ರಸ್ತೆಯುದ್ದಕ್ಕೂ ವಾಹನ ದಟ್ಟನೆ ಅಧಿಕವಾಗಿ ಅಲ್ಲಲ್ಲಿ ರಸ್ತೆ ತಡೆ ಉಂಟಾಗಿತ್ತು. ಕೊನೆಗೂ ನಗರದ ಅಂಚಿನ ಅಮಾರ ಚೌಕ್ ತಲಪಿದೆವು. ಅಲ್ಲಿಂದ ಮುಂದೆ ಸ್ಥಳೀಯ ಪೋಲೀಸರು ನಮ್ಮ ವಾಹನ ಮುಂದೆ ಹೋಗದಂತೆ ತಡೆದರು. ವಾಸ್ತವದಲ್ಲಿ ಅದಿನ ಹೊರಗಿನ ಯಾವುದೇ ವಾಹನ ನಗರ ಪ್ರವೇಶಿಸದಂತೆ ಜಿಲ್ಲಾಧಿಕಾರಿಯ ಆದೇಶವಿತ್ತು. ಆನಂತರ ಅಧಿಕೃತ ಅನುಮತಿ ಸಿಗುವುದು  ತಡವಾಗಿ ಅಲ್ಲಿ ಸುಮಾರು ಮೂರು ತಾಸು ನಿಲ್ಲುವಂತಾಗಿದ್ದು ಬಹಳ ಕಷ್ಟ ಪಡುವಂತಾಯಿತು. ಶೌಚಾಲಯಕ್ಕೆ ಹೋಗಬೇಕಾದವರಿಗೆ ಬೆಳಗಿನ ಔಷಧಿ ಸೇವಿಸುವವರಿಗೆ ಬಹಳ ತೊಂದರೆಯಾಯಿತು. ನನ್ನೊಂದಿಗೆ ಸಹ ಪ್ರಯಾಣಿಕರಾಗಿದ್ದ ಕಿರಣ್ ಸ್ವಾಮೀಜಿ ಉತ್ಸಾಹಿ ತರುಣನ ಜತೆಗೂಡಿ ಅಲ್ಲೊಂದು ಸಣ್ಣ ವಿದ್ಯಾಕೇಂದ್ರದ ಕಛೇರಿಯಲ್ಲಿ ಶೌಚಾಲಯ ಉಪಯೋಗಿಸುವದಕ್ಕೆ ಅನುಮತಿ ಕೇಳಿದಾಗ ಆತ ಒಪ್ಪಿಕೊಂಡದ್ದು ಬಹಳ ಆಶ್ಚರ್ಯ ತರಿಸಿತು. ಆತ ಗಲೀಜು ಮಾಡದಂತೆ ಸ್ವಚ್ಛತೆ ಪಾಲಿಸುವಂತೆ ಕೇಳಿಕೊಂಡ ನಂತರ ಬಹಳಷ್ಟು ಜನ ಅಲ್ಲಿ ದೇಹ ಬಾಧೆಯನ್ನು ತೀರಿಸುವುದಕ್ಕೆ ಅನುಕೂಲವಾಯಿತು. ನಿಜಕ್ಕೂ ಈ ಅಪರಿಚಿತನ ಆತಿಥ್ಯಕ್ಕೆ ಧನ್ಯವಾದಗಳನ್ನು ತಿಳಿಸಬೇಕು. ಇದೊಂದು ಕಾಶೀ ವಿಶ್ವನಾಥನ ಅನುಗ್ರಹವೆಂದೇ ತೋರಿತು.  ಇಲ್ಲಿ ಒಂದಷ್ಟು ಮುಂದಾಲೋಚನೆ ಇರಬೇಕಿತ್ತು. ಬಹುಶಃ ನಗರದಲ್ಲಿ ಸಾರ್ವಜನಿಕ ಶೌಚಾಲಯವಿದ್ದರೂ ಸ್ವಲ್ಪ ಸುಧಾರಿಸಬಹುದಿತ್ತು. ವಾರಣಾಶಿಯಲ್ಲಿ ಇದು ಎಲ್ಲೂ ಕಂಡು ಬರಲಿಲ್ಲ.  ನಮ್ಮ ಬಸ್ಸು ಪ್ರವೇಶಕ್ಕೆ ವಿಶೇಷ ಅನುಮತಿ ದೊರೆತ ನಂತರ ನಮಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾದ ಗುಜರಾತಿ ಕೈವಲ್ಯ ಆಶ್ರಮಕ್ಕೆ ಬಂದು ತಲುಪಿದೆವು. 

        ನಗರದ ಮಧ್ಯ ಭಾಗದಲ್ಲೇ ಇದ್ದ ಕೈವಲ್ಯಾಶ್ರಮದಲ್ಲಿ  ಶೌಚಾಲಯ ಸ್ನಾನ ಮತ್ತು ವಿಶ್ರಾಂತಿಗೆ ಸಕಲ ಸಿದ್ಧತೆಯೂ ಇತ್ತು. ಆದಿನ ಪೆಬ್ರವರಿ 18, ಶಿವರಾತ್ರಿ. ನನ್ನ ವಿವಾಹದಿನ ಎಂಬುದು ಮತ್ತೊಂದು ವಿಶೇಷ. ಎರಡೂ ಒಟ್ಟುಕೂಡಿ ಬಂದ ಒಂದು ಸುಯೋಗ ಎನ್ನಬೇಕು. ಧರ್ಮಪತ್ನಿಯೊಂದಿಗೆ ಗಂಗಾರತಿ ಮತ್ತು ಕಾಶೀ ವಿಶ್ವನಾಥನ ದರ್ಶನದ ಭಾಗ್ಯ ಜನ್ಮಾಂತರದ ಪುಣ್ಯ ಎನ್ನಬೇಕು. ಶಿವರಾತ್ರಿಯ ದಿನವಾದುದರಿಂದ ನಗರ ಎಚ್ಚರವಾಗಿತ್ತು. ರಸ್ತೆ ಎಲ್ಲವೂ ಸಿಂಗರಿಸಿತ್ತು. ಮನೆ ಮನೆ ಎಲ್ಲವೂ ಸಡಗರ ಸಂಭ್ರಮದಿಂದ ಕೂಡಿತ್ತು. ಶಿವರಾತ್ರಿಯ ಜಾಗರಣೆಯಲ್ಲಿ ನಿದ್ದೆ ಇಲ್ಲದೇ ಇರುವುದು ಅನುಭವಕ್ಕೆ ಬರಲಿಲ್ಲ. ಸಾಯಂಕಾಲ ಗಂಗಾರತಿ ವೀಕ್ಷಣೇ ಚಿತೋಹಾರಿಯಾಗಿತ್ತು. ಸುಮಾರು ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು.  ಸುತ್ತು ಮುತ್ತಲಿನ ರಸ್ತೆಗಳಲ್ಲೆಲ್ಲ ಸಂಗೀತ ನೃತ್ಯ ಕಾರ್ಯಮಗಳು, ವಿಪರೀತ ಜನಸಂದಣಿ. ನಮ್ಮ ಜತೆಗಿದ್ದ ಸಹ ಪ್ರಯಾಣಿಕರಲ್ಲಿ ಮೂರು ಜನ ಮಹಿಳೆಯರ ಚಿನ್ನದ ಒಡವೆಯನ್ನು ಕಳ್ಳರು ಅಪಹರಿಸಿದ್ದರು. ಇದೊಂದು ಬಹಳ ನೋವು ತರಿಸಿದ ಕಹಿ ಘಟನೆಯಾಗಿ ದಾಖಲಾಯಿತು. 

        ವಾರಣಾಸಿ ಕ್ಷೇತ್ರದಲ್ಲೂ ಮುಂಜಾನೆ ಸಂಧ್ಯಾವಂದನೆ ಧ್ಯಾನ ಯೋಗಕ್ಕೆ ಅವಕಾಶ ಒದಗಿಸಿಕೊಂಡೆ. ನಿಜಕ್ಕೂ ಅದೊಂದು ದಿವ್ಯ ಅನುಭೂತಿಯ ಅನುಭವ. ಬದುಕಿನಲ್ಲಿ ಅತ್ಯಂತ ವಿರಳವಾಗಿ ಲಭ್ಯವಾಗುವ ಯೋಗವಿದು. 

         ನನ್ನಮ್ಮ ಮತ್ತು ಚಿಕ್ಕಮ್ಮ ರಾತ್ರಿ ವಿಶ್ರಾಂತಿಯನ್ನು ಬಯಸಿದ್ದರಿಂದ ಅವರನ್ನು ಬಿಟ್ಟು ಗಂಗಾತೀರಕ್ಕೆ ಬಂದೆವು. ಆನಂತರ ಮಧ್ಯರಾತ್ರಿ ಗಂಗೆಯಲ್ಲಿ ಮುಳುಗಿ ಪಾವನನಾದೆ.  ಪಿತೃಗಳನ್ನು ನೆನೆದು ಬೊಗಸೆಯಲ್ಲಿ ಗಂಗಾಜಲವನ್ನು ಹಿಡಿದು ಮೂರು ಸಲ ತರ್ಪಣವನ್ನು ಬಿಟ್ಟೆ.   ಕೊರೆಯುವ ಚಳಿಯಲ್ಲಿ ಗಂಗಾ ಸ್ನಾನ ಮಾಡಿದನಂತರ ಏನೋ ಹುರುಪು ನವ ಚೈತನ್ಯ ಶರೀರದಾದ್ಯಂತ ಪಸರಿಸಿತು.  ಜನ್ಮಾಂತರದ ಪಾಪವಿಮೋಚನೆಯಾದಂತೆ ಭಾವನಾತ್ಮಕವಾಗಿ ಹೃದಯ ಹಗುರವಾಯಿತು. ವಿಶ್ವನಾಥನ ದರ್ಶನ ಮತ್ತು ಗಂಗಾ ಸ್ನಾನ ಜನ್ಮದ ಮಹತ್ತರ ಸಾಧನೆಯಂತೆ ಭಾಸವಾಯಿತು. ಒಂದರ್ಥದಲ್ಲಿ ಕಾಶೀ ಯಾತ್ರೆ ಸಂಪನ್ನವಾಯಿತು. 

        ಇಲ್ಲಿಗೆ ನಮ್ಮ ಕಾಶಿ ಯಾತ್ರೆ ಪೂರ್ಣವಾಗುವ ಹಂತಕ್ಕೆ ತಲುಪಿದೆವು. ಅಲ್ಲಿಂದ ನಂತರ ಪೂರ್ವ ನಿಗದಿಯಂತೆ ಬೆಂಗಳೂರಿಗೆ ಹಿಂತಿರಗಬೇಕು. ವಿಮಾನ ಟಿಕೆಟ್ ಎಲ್ಲವೂ ಸಿದ್ಧವಾಗಿತ್ತು. ನಮ್ಮೊಂದಿಗಿದ್ದ ಸಹ ಪ್ರಯಾಣಿಕರು  ಎಲ್ಲರೂ ಮರುದಿನ ಬೆಳಗ್ಗೆ  ದೆಹಲಿ ಅಮೃತ ಸರಕ್ಕೆ ಪ್ರಯಾಣಿಸುವವರಿದ್ದರು.  ವಯೋವೃದ್ದರಾದ ನನ್ನ ಅಮ್ಮ ಹಾಗೂ ಅವರ ಸಹೋದರಿ ಚಿಕ್ಕಮ್ಮ ಇವರನ್ನು ಕಾಶಿ ಕರೆದುಕೊಂಡು ಹೋಗುವ ಮಹತ್ತರ ಜವಾಬ್ದಾರಿ ನೆರವೇರಿತು. ಇಲ್ಲಿಂದ ಹೊರಡುವಾಗ ಜೀವದಲ್ಲಿ ಬರುವ ನಿರೀಕ್ಷೆ ಇರಲಿಲ್ಲ. ವಾಸ್ತವದಲ್ಲಿ ಕಾಶಿಯಾತ್ರೆ ಎಂದರೆ ಹಾಗೆ. ಆದರೂ ಭಗವಂತನ ಅನುಗ್ರಹ ಕಾಶೀಯಾತ್ರೆ ಬಹುತೇಕ ಸುಖಕರ ಎನ್ನಬೇಕು. ಬದುಕಿನಲ್ಲಿ ಮರೆಯಲಾಗದ ಘಳಿಗೆಗಳು. 

        ಕಾಶೀ ಯಾತ್ರೆ ಹಲವು ಸುಂದರ ಘಟನೆಗೆ ಸಾಕ್ಷಿಯಾದಂತೆ ಮರೆಯಲಾಗದ ಕಹಿ ಘಟನೆಯನ್ನು ಒದಗಿಸಿದ್ದು ವಾಸ್ತವದ ಸತ್ಯ. ಅದರಲ್ಲು ಕೊನೆಯದಿನ ವಾರಣಾಶಿಯಲ್ಲಿ ಬೆಳಗಿನ ಉಪಾಹಾರಕ್ಕೆ ಜನರು ಮುಗಿಬಿದ್ದದ್ದು ಸಹನೆಯನ್ನು ಮರೆತ ಅನಾಗರಿಕ ವರ್ತನೆ ತಲೆತಗ್ಗಿಸುವಂತೆ ಮಾಡಿತ್ತು. ಮನುಷ್ಯ ಹಸಿವಾದಾಗ ಮೃಗಗಳಿಗಿಂತ ಕಡೆಯಾಗಿ ವರ್ತಿಸಿಬಿಡುತ್ತಾನೆ. ಮೃಗ ಕೇವಲ ಹಸಿವಿಗಾಗಿ ಧಾಳಿ ಮಾಡಿದರೆ ಮನುಷ್ಯನ ವರ್ತನೆ ಇಷ್ಟಕ್ಕೇ ನಿಲ್ಲುವುದಿಲ್ಲ. ಅದೂ ಪರಮಾತ್ಮನ ಸನ್ನಿಧಿಯಲ್ಲಿ. ಇನ್ನೂರಕ್ಕಿಂತಲೂ ಹೆಚ್ಚಿನ ಜನ ಬೆಳಗಿನ ತಿಂಡಿಗೆ ಏಕಾ ಎಕಿ ಮುಗಿಬಿದ್ದು, ಸ್ಥಳೀಯ ನಿರ್ವಾಹಕರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಡೀಯೊ ಮಾಡಿ ಹರಿಬಿಟ್ಟದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಯಿತು.  

        ಹೊಟ್ಟೆ ತುಂಬಿದ ಕ್ರೂರ ಮೃಗ ಸುಮ್ಮನೆ ಇರುತ್ತದೆ. ಹಸಿವಾದರೆ ಮಾತ್ರ ತಿನ್ನುವುದಕ್ಕೆ ಹಪ ಹಪಿಸುತ್ತದೆ. ಆದರೆ ಮನುಷ್ಯನ ಹಸಿವು ದಾಹ ಹೊಟ್ಟೆ ತುಂಬಿದ ನಂತರವು ಸುಮ್ಮನಿರುವುದಿಲ್ಲ. ಆತ ಮೃಗಗಳಿಗಿಂತ ಕ್ರೂರಿಯಾಗುತ್ತಾನೆ. ಇಲ್ಲಿ ಯಾರತಪ್ಪು?  ಯಾರದ್ದು ಸರಿ ? ಈ ವಿಮರ್ಶೆಯಲ್ಲಿ ಬುದ್ಧಿವಂತನಂತೆ ವರ್ತಿಸುವಾಗ ತಾನು ಮಾಡಿದ ತಪ್ಪು ಮರೆತುಬಿಡುತ್ತಾನೆ. ಗಂಗೆಯಲ್ಲಿ ಸ್ನಾನ ಮಾಡುವುದು ಪಾಪಗಳನ್ನು ಮಾಡುವುದಕ್ಕೆ ಪರವಾನಿಗೆಯಂತೆ ಭಾವಿಸುತ್ತಾನೆ. ಗಂಗೆಯಲ್ಲಿ ಮುಳುಗುವುದಕ್ಕೆ ಇದೆ ಎಂದು ಪಾಪ ಕೃತ್ಯಗಳನ್ನು ಮಾಡುವ ಮನೋಭಾವ ನಿಜಕ್ಕೂ ಹೀನಾಯ.  ಕೇವಲ ಗರ್ಭಗುಡಿಗೆ ಮುಖ ಮಾಡಿ ಶಿವಲಿಂಗಕ್ಕೆ ನಮಸ್ಕಾರ ಮಾಡುವಾಗ ಪರಮ ಭಕ್ತನಂತೆ ಅಭಿನಿಯಿಸುತ್ತಾನೆ. ಆನಂತರ ಭಗವಂತನ  ಸಿ ಸಿ ಕ್ಯಾಮೆರ ನಮ್ಮ ಹಿಂದೆ ಸುತ್ತುತ್ತಾ ಇದೆ ಎಂಬುದನ್ನೆ ಮರೆಯುತ್ತಾನೆ. ಎಂತಹ ಶೋಚನೀಯ ಅವಸ್ಥೆ?  ಯಾತ್ರೆಯುದ್ದಕ್ಕು ಇಂತಹ ಅನುಭವ. ಕಾಶೀ ಯಾತ್ರೆಯ ಮಹತ್ವ ಏನು ಎಂಬುದರ ಅರಿವಿಲ್ಲ. ಜನ್ಮಾಂತರದಲ್ಲಿ ತಪಸ್ಸು ಮಾಡಿದರೂ ಸಿಗದ ಭಾಗ್ಯ ಇದು.  ರಿಕ್ಷಾ ಒಂದರಲ್ಲಿ ಸುತ್ತಾಡುವಾಗ ರಿಕ್ಷಾದ ಚಾಲಕನಲ್ಲಿ ಕೇಳಿದೆ...ಹೇಗಿದೆ ನಿನ್ನ ಜೀವನ? ಎಷ್ಟು ಕಮಾಯಿಸುತ್ತಿಯಾ? ಆತ ಹೇಳಿದ ಒಂದು ಮಾತು ನಿಜಕ್ಕೂ ಅರ್ಥಪೂರ್ಣ ಎನಿಸಿತು. " ಇಧರ್ ಭಗವಾನ್ ಹೈ.   ಭಗವಾನ್ ಹೈ ತೋ ಹಮಾರೆಕೋ ದಂಧಾ ಹೈ. ದಂಧಾ ಹೈ ತೋ ಹಂ ಕಮಾ ರಹೇ ಹೈಂ. ಭಗವಾನ್ ನಹೀತೋ ಇಸ್ ವಾರಣಾಶಿ ಮೆ  ಔರ್ ಕ್ಯಾ ಹೈ?"  ಮನುಷ್ಯ ತನ್ನ ಅಸ್ತಿತ್ವವನ್ನುಗುರುತಿಸಬೇಕು. ಭಗವಂತನಿಗೆ ಎಲ್ಲವೂ ತಿಳಿದಿದೆ, ನಾನು ನಿನ್ನನ್ನು ಮರೆತಿಲ್ಲ ಎಂಬುದನ್ನು ಆತನಿಗೆ ತೋರಿಸಿಕೊಡಬೇಕು. ಬೇರೆ ಎನೂ ಬೇಡ. 

        ಕಾಶೀ ಯಾತ್ರೆ ಉದ್ದಕ್ಕೂ ಹಲವರು ಹಸಿವು ನಿದ್ರೆ ವಿಶ್ರಾಂತಿ ಇಷ್ಟಕ್ಕೇ ತಲೆಕೆಡಿಸಿಕೊಂಡರು. ಭಗವಂತನ ದರ್ಶನಕ್ಕೆ  ಹೋಗುವಾಗ ಸಾಧ್ಯವಾದರೆ ಉಪವಾಸದಲ್ಲಿರಬೇಕು. ಮನುಷ್ಯನಿಗೆ ಒಂದು ಹೊತ್ತುಆಹಾರ ತಿಂದೂ ಜೀವ ಉಳಿಸಿಕೊಳ್ಳಬಹುದು. ಆದರೆ ಹಲವರು  ಆಹಾರ ಕಂಡಾಗ ಮೃಗಗಳಂತೆ ವರ್ತಿಸಿದರು. ಸಿಕ್ಕಿದ ಆಹಾರ ಸರಿಯಾಗಿಲ್ಲ ಎಂದು ಅಸಹನೆ ತೋರಿದರು. ಆಹಾರ ಕೊಟ್ಟವನ ಎದುರೇ ಇದು ನಾಯಿಯೂ ತಿನ್ನಲ್ಲ ಎಂದರೆ ಕೊಟ್ಟವನಿಗೆ ಹೇಗಾಗಬೇಕು? ಹೇಳಿ ಕೇಳಿ ಉತ್ತರ ಭಾರತ. ಅಲ್ಲಿ ಅನ್ನ ಸಿಗುವುದಿಲ್ಲ. ಆದರೂ ಸಹ ಅಲ್ಲಲ್ಲಿ ಅದರ ವ್ಯವಸ್ಥೆಯಾಯಿತು.  ಬಂದವರಿಗೆಲ್ಲ ಬಿರಿಯಾನಿ ಹಂಚುವುದಕ್ಕೆ ಇದು ರಾಜಕೀಯ ಪಕ್ಷದ ಸಮಾವೇಶವಲ್ಲ. ಇಲ್ಲಿ ಯಾವ ಸ್ವಾರ್ಥವು ಇರುವುದಿಲ್ಲ. ಇಲ್ಲಿ ಕೇವಲ ಸಾತ್ವಿಕ ಆಹಾರ. ಇದು ಮನಸ್ಸನ್ನು ಸತ್ವಯುತಗೊಳಿಸಿ ಸಾತ್ವಿಕನನ್ನಾಗಿಸುತ್ತದೆ. ಆದರೆ ನಮಗೆ ಅಸುರೀ ಪ್ರವೃತ್ತಿಯೇ ಪ್ರಧಾನವಾದರೆ ಇವುಗಳ ಮಹತ್ವ ಅರಿವಾಗುವುದಿಲ್ಲ. ನಾವು ತಿನ್ನುವುದೇ ಮುಖ್ಯ ಧ್ಯೇಯವಾದರೆ ಆ ಹಸಿವಿಗೆ ಪರಿಹಾರವಿಲ್ಲ. ಯಾತ್ರೆಯ ಮೊದಲೇ ಹೇಳಿದಂತೆ ಎಲ್ಲರಿಗೂ ಸಮಾನತೆ ಮತ್ತು ಪ್ರಸಾದ ಭೋಜನ. ಪ್ರಸಾದವೆಂದರೆ ಏನು ಎಂದು ತಿಳಿಯದವರು ಪ್ರಸಾದದಲ್ಲೂ ಕಲ್ಲು ಹೆಕ್ಕಿದರು. ಪ್ರಸಾದ ಅದು ಭಗವಂತನ ಆಯ್ಕೆ. ತನಗೆ ಇಂತಹುದೇ ಬೇಕು ಎನ್ನುವ ಆಯ್ಕೆ ಅಲ್ಲಿರುವುದಿಲ್ಲ. ನಮಗೆ ಯೋಗವಿದ್ದರೆ ಪ್ರಹ್ಲಾದನಿಗೆ ವಿಷವೂ ಅಮೃತವಾದಂತೆ ಪ್ರಸಾದ ಅಮೃತವಾಗುತ್ತದೆ. ಇಲ್ಲವಾದರೆ ನಾವು ಅಮೃತ ಕೈಗೆತ್ತಿದರೂ ಅದು ವಿಷವಾಗಬಹುದು.  ಈ ಪರಿಮಿತಿಯನ್ನು ತಿಳಿಯದವರು ಒಂದಷ್ಟು ಮಂದಿ ಇದ್ದರು.  ಎಲ್ಲ ಕಳೆಹುಲ್ಲುಗಳು ಎಲ್ಲೆಂದರಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಆದರೆ ಗರಿಕೆ ಹುಲ್ಲು ಕೆಲವು ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಬೆಳೆಯುತ್ತದೆ. ಹಾಗೆ ಮನುಷ್ಯನ ಮನಸ್ಸು. ಕೆಟ್ಟ ಭಾವನೆಗಳು ಕೆಟ್ಟವರ್ತನೆಗಳು ಎಲ್ಲೆಂದರಲ್ಲಿ ವ್ಯಕ್ತವಾಗುತ್ತದೆ. ಸದ್ಭಾವನೆ ಸನ್ಮನಸ್ಸು ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ವ್ಯಕ್ತವಾಗುತ್ತದೆ. ಕಾಶೀ ಯಾತ್ರೆ ಎಂಬುದು ಜನ್ಮಾಂತರದ ಯೋಗ. ಅದು ಲಭ್ಯವಾಗಬೇಕಾದರೆ ಭಗವಂತ ಹಲವಾರು ಪರೀಕ್ಷೆಯನ್ನು ಒಡ್ಡುತ್ತಾನೆ. ಸ ಹಾಗಾಗಿ ಅದರಲ್ಲಿ ಹಲವು ಕಷ್ಟ ನಷ್ಟಗಳನ್ನು ಅನುಭವಿಸಬೇಕು. ಸಹಯಾತ್ರಿಗಳೂ ಒಂದು ರೀತಿಯಲ್ಲಿ ಪರೀಕ್ಷೆಯ ಅಂಗವಾಗಿಬಿಡುತ್ತಾರೆ. ಸತ್ಯ ಹರಿಶ್ಚಂದ್ರನಿಗೆ ಪರೀಕ್ಷೆ ಒಡ್ಡಿದವರು ಯಾರು? ಕಾಶಿಯಲ್ಲೇ ಯಮರಾಜ ವೀರ ಬಾಹುವಾಗಿ ಪರೀಕ್ಷೆಗೆ ನಿಂತ.  ಕಥೆ ಕೇಳುವುದಕ್ಕೆ ರೋಚಕವಾಗಿರುತ್ತದೆ. ಅದರ ತಾತ್ಪರ್ಯದ ಬಗ್ಗೆ ನಮಗೆ ನಿರ್ಲಕ್ಷ್ಯ.   ಪರಮಾರ್ಥ ಸಿದ್ಧಿಸಲು ಇದು  ಪರೀಕ್ಷೆ. ಇಲ್ಲಿ ಕೇವಲ ಸಮ ಚಿತ್ತದಿಂದ ಅದನ್ನು ಎದುರಿಸಬೇಕು. ನಮಗೆ ಎದುರಾಗುವ ಕಷ್ಟನಷ್ಟಗಳಿಗೆ ಯಾರೋ ನಿಮಿತ್ತರಾಗಬಹುದು. ಅದೆಲ್ಲವೂ ಪರಮಾತ್ಮ ಸ್ವರೂಪಗಳು. ಹೀಗೆ ಸಮಾಧಾನ ಮಾಡಿ ಸಂಯಮದಿಂದ ಶಾಂತ ಚಿತ್ತದಿಂದ ಕಾಶೀಯಾತ್ರೆಯನ್ನು ಮಾಡಬೇಕು. ಆದರೆ ಇಂತಹ ದಿವ್ಯ ಉದ್ದೇಶಗಳಿಗೆ ಅರ್ಥವೇ ಇಲ್ಲದಂತೆ ಮನುಷ್ಯನ ವರ್ತನೆ ಯಾತ್ರೆಯುದ್ದಕ್ಕೂ ಅನುಭವಕ್ಕೆ ಬಂತು. ಕಾಶಿ ಯಾತ್ರೆ ಎಂಬುದು ಕಾಸಿನ ವಿಹಾರ ಯಾತ್ರೆಯಲ್ಲ. ಅದು ವಿಶಾಲ ಯಾತ್ರೆ.  ಮನಸ್ಸಿನಲ್ಲಿ ದೇಹದಲ್ಲಿ ಕಲ್ಮಷವಿಟ್ಟು ಪರಮಾತ್ಮನ ದರ್ಶನ ಮಾಡಿದರೆ ಏನು ಫಲ? ಎಲ್ಲಿ ಮನಸ್ಸು ಭಾವನಾರಹಿತವಾಗಿ ಉದ್ವೇಗಕ್ಕೆ ಒಳಗಾಗದೆ ಇರುವುದೋ ಅಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಇದು ಭಗವದ್ಗೀತೆಯ ಮಾತು.     

        ಕಾಶೀ ಯಾತ್ರೆಯ ನಂತರ ಮನುಷ್ಯನಿಗೆ ಬೇರೆ ಆಶೆ ಇರಬಾರದು. ಕಾಶಿ ಯಾತ್ರೆ ಎಂಬುದು ಪರಮ ಯಾತ್ರೆ. ಅಲ್ಲಿಗೆ ಹೋದನಂತರ ಬೇರೊಂದು ಯಾತ್ರೆ ಮಾಡುವ ಆಯ್ಕೆಯೂ ಇರುವುದಿಲ್ಲ. ಬಯಕೆಯೂ ಇರಬಾರದು. ಜೀವನ ಯಾತ್ರೆ ಎಂದರೆ ಅದು ಕಾಶಿ ಯಾತ್ರೆ. ಇದು ಅರ್ಥವಾಗಬೇಕಾದರೆ ಹಿಂದು ಧರ್ಮದ ಆಳವನ್ನು ಅರಿಯಬೇಕು. ಅದರ ಆಚರಣೆಯ ಅಂತರಾಳವನ್ನು ಅರಿಯಬೇಕು. ಹಾಗಿದ್ದಲ್ಲಿ ಕಾಶೀ ಯಾತ್ರೆ ಅತ್ಯಂತ ಶಾಂತಚಿತ್ತದಿಂದ ನೆರವೇರಿಸುವುದಕ್ಕೆ ಸಾಧ್ಯವಾಗುತ್ತದೆ. 

        ಕಾಶಿಯ ನಿರ್ಗಮನ ಹೃದಯವನ್ನು ಭಾರವಾಗಿಸಿತು. ಭಗವಂತನ ರೂಪವನ್ನು ಸನ್ನಿಧಿಯಲ್ಲೇ ಬಿಟ್ಟು ಕಾಶಿವಿಶ್ವನಾಥನನ್ನು ಹೃದಯದಲ್ಲಿ ಸ್ಥಾಪಿಸಿ ಇನ್ನು ಪಾಪಕರ್ಮವನ್ನು ಮಾಡದಂತೆ ಪ್ರೇರೇಪಣೆ ಕೊಡು ಭಗವಂತ ಎಂದು ಬೇಡಿಕೊಂಡೆ. ಮೊದಲೆಲ್ಲ ಕಾಶಿ ಯಾತ್ರೆ ಎಂದರೆ ಜೀವನದ ಅಂತಿಮ ಯಾತ್ರೆಯಾಗಿತ್ತು. ಹೊರಟರೆ ಪುನಹ ಬರುತ್ತೇನೆ ಎಂಬ ಅಭಿಲಾಶೆ ನಿರೀಕ್ಷೆ ಇರುವುದಿಲ್ಲ. ಅಲ್ಲಿಗೆ ಸೇರುವುದೇ ಗುರಿ. ಮನುಷ್ಯನ ಬದುಕಿನ ಮಹಾ ಪ್ರಸ್ಥಾನ. ಪರಮ ಗುರಿ. ಒಂದು ವೇಳೆ ಹಿಂದಿರುಗಿ ಬಂದರೆ ಅತನಿಗೆ ಪಾಪ ಮೋಕ್ಷವಿಲ್ಲ ಎಂದರ್ಥ. ಇನ್ನೂ ಕ್ಷಯವಾಗದ ಪಾಪ ಉಳಿದುಕೊಂಡಿದೆ. ಹಾಗಾಗಿ ಕಾಶೀ ಯಾತ್ರೆ ಮುಗಿಸಿ ಬಂದ ಮೇಲೆ ಕಾಶಿ ಸಮಾರಾಧನೆ ಎಂಬುದನ್ನು ಮಾಡುವ ಸಂಪ್ರದಾಯ ವಿಧಿ ಬೆಳೆದಿರಬೇಕು.  ಕರ್ಮದ ಕೊನೆಯ ಭಾಗದಲ್ಲಿ ಒಂದು ತತ್ವವಿದೆ,   "ಪ್ರಾಯಶ್ಚಿತ್ತಾನ್ಯ ಶೇಷಾಣಿ ತಪಃ ಕರ್ಮಾತ್ಮಕಾಣಿ ತೇಷಾಂ ಶೇಷಾಣಾಂ ಕೃಷ್ಣಾನು ಸ್ಮರಣಂ ಪರಂ"  ಎನ್ನುವಂತೆ ಅಶೇಷವಾಗಿದ್ದ ಪಾಪಗಳೆಲ್ಲವೂ ನಾಮ ಸ್ಮರಣೆಯಿಂದ ಪರಿಹಾರವಾಗಲಿ.  ಇದು ನಮ್ಮ ಪ್ರಾರ್ಥನೆ ಮಾತ್ರ. ಆದರೆ ಪಾಪ ಪರಿಹಾರ ಅದು ಪರಮಾತ್ಮನ ಇಚ್ಛೆ. 

        ಬೆಂಗಳೂರಿನಲ್ಲಿ ಎದುರುಗೊಳ್ಳುವುದಕ್ಕೆ ಮುಂದಾಗಿ ತಿಳಿಸದೇ  ಮಗ  ಕಾರು ತೆಗೆದುಕೊಂಡು ಬಂದಿದ್ದ. ಬಹಳ ಸಂತೋಷವಾಯಿತು. ಕಾಶೀಯಾತ್ರೆಯ ಅವಕಾಶವನ್ನು ಒದಗಿಸಿದ ರಾಷ್ಟ್ರ ಜಾಗೃತಿ ಅಭಿಯಾನಕ್ಕೆ ಪ್ರಣಾಮಗಳು. ಇದರ ಸಾಧಕ ಬಾಧಕಗಳು ಏನಿದ್ದರೂ ಅದು ದೈವ ನಿರ್ಣಯ. ಅದನ್ನು ಮೀರುವ ಹಾಗಿಲ್ಲ. ಯೋಗ ಇದ್ದವರಿಗಷ್ಟೇ ಸೂಕ್ತ ದರ್ಶನ. ಜಾಗೃತಿ ಎಂದರೆ ನಿದ್ದೆಯಲ್ಲಿ ಇದ್ದವನನ್ನು ಎಚ್ಚರಿಸುವುದು. ಆದರೆ ಕನವರಿಸುವವನ್ನು ಎಬ್ಬಿಸುವುದಕ್ಕೆ ಸಾಧ್ಯವಿಲ್ಲ. ನಿದ್ದೆಯಲ್ಲಿದ್ದವರನ್ನು ಎಬ್ಬಿಸುವ ಪ್ರಯತ್ನವಂತು ನಡೆದಿದೆ. ಇನ್ನು ಯಾರೆಲ್ಲ ಎಚ್ಚರಗೊಂಡಿದ್ದಾರೆ ಎಂಬುದು ಅವರವರ ಮನೋಭಾವಕ್ಕೆ ಸೀಮಿತ. ಹೊಸ ಪರಿಚಯ ಹೊಸ ವರ್ತುಲ ಅದರ ಬಾಹುಳ್ಯ ವೃದ್ಧಿಸಿದ್ದು ಯಾತ್ರೆಯ ಹೆಚ್ಚುವರಿ ಗಳಿಕೆ ಎನ್ನಬೇಕು. ಯಾತ್ರೆ ನಮ್ಮದಾದರೂ ಅದರ ಹಿಂದೆ ಹಲವರ ಪರಿಶ್ರಮವಿದೆ. ಹಣದಿಂದ ಅಳೆಯಲಾಗದ ನಿಷ್ಕಾಮ ಕರ್ಮವಿದೆ. ಪೂರ್ವ ಜನ್ಮದ ಸುಕೃತ ಫಲ. 








 





Thursday, February 23, 2023

ವಾರಣಾಸಿಯಲ್ಲಿನ ಅಂತಿಮ ಕ್ಷಣಗಳು

                   ನಮ್ಮ ಯಾತ್ರಿಕರಲ್ಲಿ ಯಾರಿಗೂ ಆಗದೇ ಇದ್ದ ಅನುಭವಕ್ಕೆ ನಾನು ಸಾಕ್ಷಿಯಾದೆ. ಹೌದು ವಾರಣಾಸಿಯಿಂದ ನಾವು ಐದು ಮಂದಿ ಬೆಂಗಳೂರಿಗೆ ಹಿಂದಿರುಗಿ ಉಳಿದವರು ದೆಹಲಿ ಅಮೃತ ಸರ ಯಾತ್ರೆಗೆ ಹೋಗುವವರಿದ್ದರು. ಹಾಗಾಗಿ ನಮ್ಮ ವಾಸ್ತವ್ಯದ ಗುಜರಾತಿ ಕೈವಲ್ಯ ಧಾಮದ ಮಂದಿರದಿಂದ ಎಲ್ಲರೂ ನಮಗೆ ವಿದಾಯ ಹೇಳಿ ಪ್ರವಾಸ ಮುಂದುವರೆಸಿದ್ದರು. ನಾವು ಮಧ್ಯಾಹ್ನದವರೆಗೂ ಇರುವ ಅವಕಾಶವಿತ್ತು.       


     

                    ಶ್ರೀ ರವಿ ಹೊಯಯ್ಸಳ ರವರು ಮೊದಲು ಹೇಳಿದಂತೆ ಬಹಳ ಮುತುವರ್ಜಿ ವಹಿಸಿ ನಮಗೆ ವಿಮಾನ ಟಿಕೇಟ್ ಬುಕ್ ಮಾಡಿ, ವಿಮಾನ ನಿಲ್ದಾಣಕ್ಕೆ ಬಿಡುವುದಕ್ಕೆ ಕಾರ್ ವ್ಯವಸ್ಥೆಯನ್ನೂ ಮಾಡಿದ್ದರು. ನಿಜಕ್ಕೂ ಅವರಿಗೆ ನಾನು ಕೃತಜ್ಞತೆಯನ್ನು ಹೇಳಬೇಕು. ಉಳಕೊಳ್ಳುವುದಕ್ಕೆ ನಗರದ ಹೃದಯ ಭಾಗದಲ್ಲಿ ದೊಡ್ಡ ಮಂದಿರವನ್ನು ಒದಗಿಸಿದ ಮಹನೀಯರನ್ನು ನಾವು ಸ್ಮರಿಸಲೇ ಬೇಕು. ಯಾವುದೇ ವಾಹನಕ್ಕೂ ಪ್ರವೇಶ ಇರದ್ದಿದ್ದರೂ ನಮ್ಮ ಬಸ್ಸು ಈ ಮಂದಿರದ ಬಾಗಿಲಲ್ಲೇ ನಿಲ್ಲುವಂತಾದದ್ದು ಈ ಔದಾರ್ಯದಿಂದ. ಇನ್ನು ಅಲ್ಲಿ ವ್ಯವಸ್ಥೆ ಮತ್ತು ಆತಿಥ್ಯ. ಅದು ಅವರ ಕರ್ತವ್ಯವೆಂಬಂತೆ ಹಾರ್ದಿಕವಾಗಿ ಒದಗಿಸಿದರು. ರುಚಿಕಟ್ಟಾದ ಭೋಜನ ವ್ಯವಸ್ಥಿತವಾಗಿ ಸಿದ್ದ ಪಡಿಸಿದ ವಿಶ್ರಾಂತಿ ಸ್ಥಳ. ಮಂಚ ಹಾಸಿಗೆ ಹೊದಿಕೆ ಯನ್ನು ಹೊಂದಿಸಿ ಒಂದು ಸುಸಂಸ್ಕೃತ ಆತಿಥ್ಯವನ್ನು ಒದಗಿಸಿದರು. ಎಲ್ಲವೂ ಸರಿ ಇತ್ತು. ಕಾಶಿಗೆ ತಲುಪುವವರೆಗೆ ಉಳಕೊಳ್ಳುವುದಕ್ಕೆ ಇಂತಹ ಒಂದು ಅಪೂರ್ವ ವ್ಯವಸ್ಥೆ ಸಿಕ್ಕಿರಲಿಲ್ಲ. ಮೂನ್ನೂರು ಜನರಿಗೆ  ಒಂದಿಷ್ಟು ತ್ರಾಸವಾಗದಂತೆ ಶೌಚಾಲಯ ಸ್ನಾನದ ವ್ಯವಸ್ಥೆ ಛೇ ಕಣ್ಣು ಮಿಟುಕಿಸುವುದರ ಒಳಗೆ ಸಿದ್ದವಾಗುವುದು ಸಣ್ಣವಿಚಾರವಲ್ಲ.

                     ಪುರಾಣದಲ್ಲಿ ಜಮದಗ್ನಿ ಆಶ್ರಮಕ್ಕೆ ಮಾಹಿಷ್ಮತಿ ಅರಸ ಕಾರ್ತವೀರ್ಯಾರ್ಜುನ ಬರುತ್ತಾನೆ. ಜಮದಗ್ನಿ ಅವನಿಗೆ ಅವನ ಬೃಹತ್ ಸಂಖ್ಯೆಯ ಸೇನೆ ಪರಿವಾರಗಳಿಗೆ ಭೂರಿ ಭೋಜನದ ವ್ಯವಸ್ಥೆಯನ್ನು ಮಾಡುತ್ತಾನೆ. ಕಾಡಿನಲ್ಲಿ ಅದು ಕ್ಷಣ ಮಾತ್ರದಲ್ಲಿ ಇಷ್ಟು ಜನಕ್ಕೆ ಭೋಜನೆ ವ್ಯವಸ್ಥೆ ಅದೂ ರುಚಿಕಟ್ಟಾಗಿ ಹೇಗೆ ಸಾಧ್ಯವಾಯಿತು ಎಂದು ಅರಸನಿಗೆ ಅಚ್ಚರಿಯಾಗುತ್ತದೆ. ಆನಂತರ ತಿಳಿದು ಬರುತ್ತದೆ. ದೇವ ಧೇನು ವಾದ ಕಾಮಧೇನು ಆಶ್ರಮದಲ್ಲಿದ್ದು ಕೊಂಡು ಆ ಅನುಗ್ರಹದಿಂದ  ಈ ಬೃಹತ್ ಪರಿವಾರಕ್ಕೆ ಭೋಜನದ ವ್ಯವಸ್ಥೆಯಾಗುತ್ತದೆ. ಆನಂತರ ಅರಸ ಧೇನುವನ್ನು ಅಪಹರಿಸುತ್ತಾನೆ, ಜಮದಗ್ನಿ ಪುತ್ರ ಪರಶುರಾಮ ಬಂದು ಕಾರ್ತವೀರ್ಯನನ್ನು ಸಂಹರಿಸುತ್ತಾನೆ. ಅದು ಪುರಾಣ ಕಥೆ.  ಆದರೆ ಇಲ್ಲಿ ಅದರಂತೆ ಎಲ್ಲರಿಗೂ ಬೇಕಾದಂತೆ ಭೋಜನ ಮಾತ್ರವಲ್ಲ ಉಳಕೊಳ್ಳುವ ವ್ಯವಸ್ಥೆಯಾಗುತ್ತದೆ. ಸ್ವಚ್ಛಪರಿಸರ ಸ್ವಚ್ಛ ಶೌಚಾಲಯ ಹೀಗೆ ಎಲ್ಲವೂ ವ್ಯವಸ್ಥಿತ. ಆದರೆ ಇದೆಲ್ಲವನ್ನು ಕೊನೆ ಕ್ಷಣದ ಘಟನೆಯಲ್ಲಿ ಅವ್ಯವಸ್ಥೆಯನ್ನುಸೃಷ್ಟಿಸಿ  ಲಜ್ಜೆಗೆಡುವಂತೆ ಮಾಡುವಲ್ಲಿ ನಮ್ಮ ಪರಿವಾರ ಕಾರ್ತವೀರ್ಯನ ಪರಿವಾರವನ್ನೂ ಮೀರಿಸಿತು ಎಂದು ಖೇದವಾಗುತ್ತದೆ. ಜಮದಗ್ನಿಗೆ ಭೋಜನ ಒದಗಿಸುವುದಕ್ಕೆ ಆಶ್ರಮದಲ್ಲಿ ಕಾಮಧೇನು ಇತ್ತು. ಇಲ್ಲಿನವರಿಗೆ ಇವರ ಇಚ್ಛಾಶಕ್ತಿಯೇ ಕಾಮಧೇನು. ಅದರ ಪರಿವೆ ಇಲ್ಲದೆ ಅನಾಗರಿಕ ವರ್ತನೆ ತೋರಿ ಅಲ್ಲಿಂದ ವಿದಾಯ ಹೇಳುವಂತಾಗಿದ್ದು ಒಂದಾದರೆ, ಎಲ್ಲರು ಹೋದನಂತರ ಖಾಲಿ ಖಾಲಿಯಾದ ಮಂದಿರವನ್ನು ನಾನು ಸುತ್ತು ಹಾಕಿದೆ. ಅಬ್ಬಾ ವಿಚಿತ್ರವಾದ ದರ್ಶನದ ಅನುಭವವಾಯಿತು.     

                    ಪ್ರಕೃತಿಯಲ್ಲಿ ಕಾಡು ಮೃಗಗಳು ಅನಾಗರಿಕೆ ಸಂಸ್ಕೃತಿಯನ್ನು ತೋರಿಸಬಹುದು. ಆದರೆ ಮನುಷ್ಯನಷ್ಟು ಅನಾಗರಿಕರು ಬೇರೆ ಇರುವುದಕ್ಕೆ ಸಾಧ್ಯವಿಲ್ಲ ಎಂದನಿಸುತ್ತದೆ. ಮಂದಿರದ ಕೆಲವು ಭಾಗಗಳಲ್ಲಿ ರಾತ್ರಿ ವಿಶ್ರಾಂತಿಗೆ  ವ್ಯವಸ್ಥೆ ಮಾಡಿದ್ದರು. ಅಲ್ಲಿ ನಿದ್ರಿಸಿದವರು ಹಾಸಿಗೆಯನ್ನು ಹೇಗೆ ಬೇಕೋ ಹಾಗೆ ಬಿಟ್ಟು ಹೋಗಿದ್ದರು. ಗೊಪ್ಪೆ ಗೊಪ್ಪೆಯಾಗಿ ಬಿದ್ದಿದ್ದ ಹಾಸಿಗೆ ತಲೆದಿಂಬು ಹೊದಿಕೆಗಳು ಛೇ ಎಷ್ಟು ಭೀಭತ್ಸವಾಗಿತ್ತು ಎಂದರೆ ಅದನ್ನು ವಿವರಿಸುವುದು ಕಷ್ಟ. ಕೆಲವು ಕಡೆ ಮಲಗುವಲ್ಲೇ ತಿಂದ ಆಹಾರ ಚೆಲ್ಲಿದ್ದರು. ಕನಿಷ್ಟ ಪಕ್ಷ ಅದನ್ನು ತೆಗೆದು ಸ್ವಚ್ಛ ಮಾಡುವ ಪ್ರಜ್ಜೆ ಕೆಲವರಿಗೆ ಇಲ್ಲದೇ ಹೋಯಿತು. ಇನ್ನು ಬೆಡ್ ಶೀಟ್ ಗಳು ಅದು ಇನ್ನೊಬ್ಬರಿಗೆ ಉಪಯೋಗಕ್ಕೆ ಬೇಕು ಎಂಬ ಪರಿವೆಯೇ ಇಲ್ಲದಂತೆ ತೀರಾ ಅಸಹ್ಯವಾಗಿ ಬಿಟ್ಟು ಹೋಗಿದ್ದರು. ರಾತ್ರಿ ಇಡಿ ನಮ್ಮ ಚಳಿಯನ್ನು ನೀಗಿಸಿ ಸುಂದರ ವಿಶ್ರಾಂತಿಯನ್ನು ಒದಗಿಸಿದ ಶಯನ ವಸ್ತುಗಳಿಗೆ ನಾವು ಕೊಡುವ ಕೃತಜ್ಞತೆ ಈ ಬಗೆಯದ್ದು. ಇದು ಕೇವಲ ಪುರುಷರು ಮಾತ್ರವಲ್ಲ ಸ್ತ್ರೀಯರೂ ಇದ್ದರು ಅಲ್ಲಲ್ಲಿ ಮುಡಿದ ಹೂವಿನ ಹಾರ, ಆಹಾರದ ಪೊಟ್ಟಣಗಳು ಎಸೆದು ಇದನ್ನು ಸ್ವಚ್ಛ ಮಾಡುವುದಕ್ಕೆ ಇದೆ ಎಂಬ ಪರಿಕಲ್ಪನೆಯೇ ಇಲ್ಲದಂತೆ ವರ್ತಿಸಿದ್ದರು. ಕಾಶೀ ಯಾತ್ರೆಗೆ ಹೊರಡುವ ಮೊದಲೇ ಸ್ವಚ್ಛತೆಯ ಬಗ್ಗೆ ಪದೇ ಪದೇ ಹೇಳಿದರೂ ತಾವು ಎಲ್ಲಾ ನಿಯಮಗಳಿಂದ ಸ್ವಚ್ಛತೆಯಿಂದ ಅತೀತರು ಎಂದು ತಿಳಿದುಕೊಂಡ ಇವರ ಆನಾಗರಿಕ ವರ್ತನೆ ನಮ್ಮ ಊರಿಗೆ ಮಾತ್ರವಲ್ಲ ಇಡೀ ಕರ್ನಾಟಕ್ಕಕ್ಕೆ ಕನ್ನಡಿಗರಿಗೆ ಕೆಟ್ಟ ಹೆಸರು ತಂದದ್ದು ಸುಳ್ಳಲ್ಲ. ಅದರಲ್ಲು ಕೊನೆಯ ಘಳಿಗೆಯಲ್ಲಿ ಬೆಳಗ್ಗಿನ ಉಪಾಹಾರ ಮತ್ತು ಭೋಜನವನ್ನು ಪೊಟ್ಟಣ ಕಟ್ಟಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಅದು ಮಾಡುತ್ತಿದ್ದಂತೆ ಎಲ್ಲರು ಪಾತ್ರೆಯ ಮೇಲೆ ಮುಗಿ ಬಿದ್ದು ಹಸಿದ ಮೃಗಗಳಂತೆ ವರ್ತಿಸಿದ್ದು ಅನಾಗರಿಕ ವರ್ತನೆ, ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಕೊನೆಗೆ ರೋಸಿ ಹೋಗಿ ಅಲ್ಲಿನ ವ್ಯವಸ್ಥಾಪಕರು ಅದನ್ನು ಸಾಮಾಜಿಕ ಜಾಲತಾಣಕ್ಕೆ ಲೈವ್ ವೀಡಿಯೋ ಮಾಡಿ ಹರಿ ಬಿಟ್ಟು ನಮ್ಮ ಕರ್ನಾಟಕದ ಮಾನವೇ ಹರಾಜಾಗಿ ಬಿಟ್ಟಿತು. ದಿಗಿಲಾದ ನಾನು ಕೊನೆಯಲ್ಲಿ ಹೋಗಿ ನಮ್ಮ ಆಯೋಜಕರಿಗೆ ತಿಳಿಸಿದಾಗ ಅವರು ಬಂದು ನಿಯಂತ್ರಣಕ್ಕೆ ತಂದು ಮತ್ತೂ ಮಾನ ಹರಾಜಾಗುವುದನ್ನು ತಪ್ಪಿಸಿದರು. ನಿಜಕ್ಕೂ ನಾನು ಕುಗ್ಗಿ ಹೋಗಿದ್ದೆ. ನನಗೆ ಉಪಾಹಾರ ತಿಂಡಿಯೇ ಬೇಡವೆಂದು ನಾವು ದೇವರ ದರ್ಶನಕ್ಕೆ ಹೋದೆವು. ಹೀಗಾಗಿ ನಾವು ಆದಿನ ಯಾವುದೇ ಆಹಾರ ತಿನ್ನದೆ ಕಳೆಯುವಂತಾಯಿತು. 

                    ನಮಗೆ ಆಹಾರ ಇಲ್ಲದೇ ನಾವು ಕಳೆದರೆ, ಅಲ್ಲಿ ಎಂಜಲು ಎಸೆದ ಜಾಗದಲ್ಲಿ ತಟ್ಟೆಯಲ್ಲಿ ಉಳಿದ ಆಹಾರ ಹಾಗೆ ಬಿದ್ದು ನಮ್ಮ ಹಸಿವೆಯನ್ನು ಅಣಕಿಸುತ್ತಿತ್ತು. ತಮಗೆ ಬೇಕಾದಷ್ಟೇ ಹಾಕಿಸಿಕೊಳ್ಳಿ ಆಹಾರ ಎಸೆಯಬೇಡಿ ಎಂದರೂ ಕೇಳಿಸಿಕೊಳ್ಳದ ಮೃಗಗಳ ಜತೆ ನಾವು ಸಹಯಾತ್ರಿಕರಾಗಿದ್ದೇವೆ ಎನ್ನುವುದಕ್ಕೆ ನಿಜಕ್ಕೂ ಹೀನಾಯ ಎನಿಸುತ್ತದೆ.  

                    ಇಷ್ಟಾದರೂ ನನಗೆ ತೃಪ್ತಿ ತಂದ ವಿಷಯ ಇಲ್ಲಿ ಉಲ್ಲೇಖಿಸಬೇಕು. ನಾವು ಮೊದಲ ತಂಡದ  ಯಾತ್ರಿಕರು ಒಂದೈವತ್ತು ಮಂದಿಗಳು ಪ್ರಯಾಣಿಸಿದ ಬಸ್ಸಿನಲ್ಲಿದ್ದವರೆಲ್ಲರು ಒಂದೇ ಹಾಲ್ ನಲ್ಲಿ ಉಳಿಯುವಂತಾಯಿತು. ಬಹುತೇಕ ಸಹ ಯಾತ್ರಿಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಿತ್ರರು. ಹೀಗಾಗಿ  ಈ  ಹಾಲ್ ಬಹಳ ಅಚ್ಚುಕಟ್ಟಾಗಿತ್ತು. ಹಾಸಿಗೆ ಬೆಡ್ ಶೀಟ್ ಮಡಚಿ ಇಟ್ಟಿದ್ದರು. ಶೌಚಾಲಯ ಸ್ವಚ್ಛವಾಗಿತ್ತು. ಇದಕ್ಕೆ ಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಿಕ್ಕಿದ ಶುದ್ದ ಸಂಸ್ಕಾರ.  ಮಿಕ್ಕೆಲ್ಲವೂ ಅವ್ಯವಸ್ಥೆಯ ಆಗರವಾಗಿದ್ದರೆ ನಾವು ಉಳಿದುಕೊಂಡ ಕೋಣೆಯ ದೃಶ್ಯ ಮನಸ್ಸಿಗೆ ಬಹಳ ಸಮಾಧಾನವನ್ನು ತಂದಿತು. ಸಂಘ ಹೇಗೆ ಒಬ್ಬ ವ್ಯಕ್ತಿ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು ಎಂದು ಹೇಳಿದರೆ ಅದು ಅತಿಶಯವಲ್ಲ. 

                ಇಷ್ಟೆಲ್ಲಾ ಅದರೂ ನಮನ್ನು ವಿಮಾನ ನಿಲ್ದಾಣಕ್ಕೆ ಬಿಡುವುದಕ್ಕೆ ಕಾರು ವ್ಯವಸ್ಥೆ ಮಾಡಿದ್ದರು. ಕಾರು ಚಾಲಕ ಮೊದಲೇ ಹೇಳಿದ್ದ, ನೀವು ಹೊರಟಕೂಡಲೇ ಹೇಳಿ, ಯಾವ ಹೊತ್ತಿಗಾದರೂ ನಾನು ಇಲ್ಲೆ ಇರುತ್ತೇನೆ. ಕರೆದುಕೊಂಡು ಹೋಗುತ್ತೇನೆ. ಮಧ್ಯಾಹ್ನದ ತನಕವೂ ಕಾರು ತೊಳೆದು ಅಲ್ಲೇ ನಮಗಾಗಿ ಕಾದು ಕುಳಿತಿದ್ದ. ಮಾತ್ರವಲ್ಲ ಹೊರಡುತ್ತೇವೆ ಹೋಗೋಣ ಎನ್ನುವಾಗ ನಮ್ಮ ಲಗೇಜ್ ಗಳನ್ನು ತಂದು ಕಾರಿಗೆ ಇಟ್ಟು ಸಹಕರಿಸಿದ. ನಗು ಮುಖದಿಂದ ಸ್ವಂತ ಸಂಭಂಧಿಯಂತೆ ನಮ್ಮನ್ನು ವಿಮಾನ ನಿಲ್ದಾಣಕ್ಕೆ ತಂದು ಬಿಟ್ಟು. ಒಂದು ಚಿಕ್ಕಾಸು ಪಡೇಯಲಿಲ್ಲ ಎಂಬುದು ವಿಶೇಷ.  ಹಾಗಾಗಿ ಅವನ ಜತೆ ಮರೆಯದೆ ಒಂದು ಸೆಲ್ಫಿ ತೆಗೆದು ಆತನಿಗೆ ಧನ್ಯವಾದ ಹೇಳಿದೆ. ಕೊನೆ ಪಕ್ಷ ಅಲ್ಲಿ ನಡೆದು ಹೋದ ದುರ್ಘಟನೆಗಳಿಗೆ ಮುಲಾಮು ಹಚ್ಚುವ ಪ್ರಯತ್ನ ಮಾಡಿದೆ. 


 

Friday, February 17, 2023

ಬದುಕೆಂಬ ಕಾಶಿ

    ಮುವತ್ತಮೂರು ವರ್ಷಗಳ ಹಿಂದೆ  ಮಂಗಳವಾದ್ಯಗಳ ಕಲರವದಲ್ಲಿ ಪುಣ್ಯಾಹ ಸಂಪನ್ನಗೊಳಿಸಿ ಕೈಯಲ್ಲಿ ದಂಡ,  ತಲೆಗೆ ಮುಂಡಾಸು ಸೊಂಟಕ್ಕೆ ಕಚ್ಚೆ ಬಿಗಿದು  ಮದುವೆ ಚಪ್ಪರದಲ್ಲಿ ನಾನು ಕಾಶಿಯಾತ್ರೆಗೆ ಹೊರಟಿದ್ದೆ. ನಾನು ಕಾಶಿಗೆ ಹೋಗುತ್ತೇನೆ. ಇದನ್ನು ಕೇಳಿ ನನ್ನಾಕೆಯ ಅಪ್ಪ, ಭಾವೀ ಮಾವ  ಓಡೋಡಿ ಬಂದರು. ಕೈ ಹಿಡಿದು  ಈಗ ಬೇಡ ತನ್ನ ಮಗಳನ್ನು ಧಾರೆ ಎರೆದು ಕೊಡುತ್ತೇನೆ. ಮದುವೆಯಾಗಿ ಇಬ್ಬರೂ ಜತೆಯಲ್ಲೇ ಕಾಶಿ ಯಾತ್ರೆ ಮಾಡಿ ಎಂದು ಬೇಡಿಕೊಂಡಾಗ ಆಯಿತು ಎಂಬುದು ಹಸೆಮಣೆ ಏರಿ ನನ್ನಾಕೆಯ ಕೈ ಹಿಡಿದು ಬಾಳ ಸಂಗಾತಿಯನ್ನಾಗಿ ಮಾಡಿದ್ದೆ. ಮಲೆನಾಡಿನ ಕೊಪ್ಪದ ತಲಮಕ್ಕಿ ಮನೆಯಲ್ಲಿ ಸಂಭ್ರಮ ಸಡಗರದಿಂದ ಸಡೆದ ಮದುವೆ ಇದು. ಇಲ್ಲಿನ‌ ಮದುವೆ ಕಾರ್ಯಕ್ರಮದಲ್ಲಿ ಕಾಶಿ ಯಾತ್ರೆ ಎಂಬುದು ಸಂಪ್ರದಾಯ. ನಮ್ಮ ಕರಾವಳಿಯಲ್ಲಿ ಇದು ಉಪನಯನದ ವೇಳೆಯೆ ಪೂರೈಸಿ ವಟು ಬ್ರಹ್ಮಚಾರಿಯಾಗಿ ಭಿಕ್ಷಾಟನೆಗೆ ಹೊರಡುತ್ತಾನೆ. ಇರಲಿ. ಅಂದು ಕಾಶಿಯಾತ್ರಯ ಬಗ್ಗೆ ಪರಿಕಲ್ಪನೆಯೇ ಇರಲಿಲ್ಲ. ಹಾಗಾಗಿ ಇದು ಯಾಂತ್ರಿಕವಾಗಿ ಕಾರ್ಯಕ್ರಮದ ಅಂಗವಾಗಿ ಕಂಡಿತ್ತು. ಬದುಕು ಸವೆಸಿದಂತೆ  ಗೃಹಸ್ಥಾಶ್ರಮ ಎನ್ನುವುದು ಮನುಷ್ಯ ಬದುಕಿನ ಪರಿಪಕ್ವ ಕಾಲ‌ ಎಂಬುದು ಅರಿವಿಗೆ ಬಂತು.  ಅದು ಪರಮಾತ್ಮನಿಗೆ ಪ್ರಿಯವಾದ ಕಾಲ. ಕರ್ಮಾಂಗದ ಧರ್ಮಾಚರಣೆಯಲ್ಲಿ ಸಹಧರ್ಮಿಣಿಯಾಗಿ ಅದಿಕಾರದ ಅರ್ಹತೆಯನ್ನು ಒದಗಿಸುವ ಈಕೆ ಕೇವಲ ಹೆಣ್ಣಲ್ಲ. ಮೋಕ್ಷ ಗಮನಕ್ಕೆ ದಿಕ್ಸೂಚಿ ಇವಳು. ಅದರ ಒಂದು ಪರಿಪಕ್ವ ಅಂಗವೇ ಕಾಶಿ ಯಾತ್ರೆ.

              ಮಾವನಿಗೆ ಕಾಶಿಯಾತ್ರೆಯ  ವಾಗ್ದಾನ ಮಾಡಿ ಇಂದಿಗೆ ಅಂದರೆ ಫೆಬ್ರವರಿ 18ಕ್ಕೆ ಮೂರು ದಶಕಗಳು ಸಂದು ಹೋಯಿತು. ಈಗ ಮಾವನೂ ನಮ್ಮೊಂದಿಗೆ ಇಲ್ಲ. ಆದರೆ ಅವರ ಮಾತು ಇಂದು ನೆರವೇರಿಸುತ್ತ ಇರುವುದು ಒಂದು ಸುದೈವದ ಘಳಿಗೆ ಎನ್ನಬೇಕು. ವಿವಾಹ ದಿನವೇ ನಾವು ಕಾಶಿಯಲ್ಲಿ ಇರುವುದೆಂದರೆ ಅದು ಕಾಕತಾಳಿಯವಾದರೂ ಭಗವಂತನ ಅನುಗ್ರಹ ಮತ್ತು ನನ್ನ ಯೋಗ ಎನ್ನಬೇಕು. ಇದೀಗ ಮಾವನ ನೆನಪು ಒತ್ತೊತ್ತಿ ಬರುತ್ತದೆ. ಪರಲೋಕದಲ್ಲೂ ಅವರೂ ಅನುಗ್ರಹಿಸುತ್ತಾರೆ ಎಂಬ ಭಾವನೆ ‌ನನ್ನದು.

       ವಿವಾಹ ವಾರ್ಷಿಕ ದಿನ. 18.02. 1990 ರಂದು ನನ್ನಾಕೆ ನನ್ನ ಬಾಳಿಗೆ ಹಜ್ಜೆ ಇಟ್ಟಳು. ಕಳೆದ ಗೃಹಸ್ಥಾಶ್ರಮದ ದಿನಗಳು ಮಾಧುರ್ಯ ತುಂಬಿದ ದಿನಗಳು.‌ಹೆಣ್ಣು ಬದುಕಿನಲ್ಲಿ ಬರುವುದೆಂದರೆ ಅದು ಬದುಕು ಸ್ದಚ್ಚವಾದಂತೆ. ಹೆಣ್ಣು ಅರ್ಧಾಂಗಿಯಾಗಿದ್ದರೂ ನನ್ನಾಕೆ ನನ್ನ ಬದುಕಿನ ಸರ್ವಸ್ವಾಮ್ಯವಾಗಿ ಬಿಟ್ಟಳು. ಇದೀಗ ಆಕೆಯೋದಿಗಿನ ಕಾಶಿಯಾತ್ರೆ ಇದಕ್ಕೊಂದು ಮುಕುಟಮಣಿಯಂತೆ.










           ನನ್ನಾಕೆಯಲ್ಲಿ  ನನ್ನ ಬಗ್ಗೆ ಕೇಳಿದರೂ  ನನ್ನಲ್ಲಿ ಅಕೆಯಬಗ್ಗೆ ಕೇಳಿದರೂ  ಏಕ‌ಮನದ ಉತ್ತರ ಒಂದೆ  ಇದು ನನ್ನ ಭಾಗ್ಯ. ಇದು ಸಮಾಭಿರುಚಿಯ ಸಮಾಭಿಪ್ರಾಯ .‌ಈ ಸಹಬಾಳ್ವೆಯ ಹಾದಿಯಲ್ಲಿ ಎಲ್ಲವನ್ನೂ ಅನುಭವಿಸಿದ ಸಂತೃಪ್ತ ಬದುಕು. ಸರಸ ವಿರಸ ಮುಳ್ಕಿನಗಿಡದ ಗುಲಾಬಿಯಂತೆ. ಕೆಸರಿನ ಕಮಲದಂತೆ. ಇವೆರಡೂ ಇಲ್ಲದ ಬದುಕು ಇರುವುದಿಲ್ಲ.‌ಪ್ರೀತಿ ಎಂಬುದು ಇದ್ದರೆ ಎಲ್ಲದಕ್ಕೂ ಪರಿಹಾರ ಅಲ್ಲೇ ಸಿಕ್ಕಿಬಿಡುತ್ತದೆ. ಸೋತರೂ ಗೆದ್ದರು ಸಮಯ ತಟಸ್ಥವಾಗಿರುವಿದಿಲ್ಲ. ಇದು ಅರಿವಾದಾಗ  ಸಾಂಸಾರಿಕ.  ಜೀವನದ ಸೋಲು ಗೆಲುವು ಪರಿಣಾಮ ಬೀರುವುದಿಲ್ಲ. ಅನುಭವ ಮತ್ತಷ್ಟು ಮಾಗುತ್ತದೆ. ಸೋಲು ಗೆಲುವು ಎಂಬುದು ಕೇವಲ ಮಾನದಂಡಗಳು. ಅದು ಬದುಕಿನ‌ ಪರ್ಯಾಪ್ತ ಸ್ತಿತಿಯಲ್ಲ.
ಇಷ್ಟು ಸಮಯದ ಬದುಕಿನಲ್ಲಿ ಕಾಶಿ ಯಾತ್ರೆ ಎಂಬುದು ಕೇವಲ ಸಾಂಕೇತಿಕ. ಬದುಕಿನ‌ ಯಾತ್ರೆ‌ ಮತ್ತೂ ಚಲನ ಶೀಲ‌ವಾಗಿರುತ್ತದೆ. ಮುಂದುವರಿಯುತ್ತ ತನ್ನ ಗಮ್ಯವನ್ನು ತಾನೇ ನಿರ್ಣಯಿಸಿದಂತೆ ಸಾಗುತ್ತದೆ.

      ಸಾಂಸಾರಿಕ ಜೀವನ ಅವಲೋಕನ ಮಾಡಿದಾಗ. ನಾನು ಬೆರಗಾಗುತ್ತೇನೆ. ಅರೆ ನಾನು ಬದುಕಿದ ಬದುಕೇ ಇದು.? ಅಚ್ಚರಿಯಾಗುತ್ತದೆ. ಹುಟ್ಟಿದಾಗ ಬದುಕಿನ ಬಗ್ಗೆ ತಿಳಿದಿರುವುದಿಲ್ಲ ಕೇವಲ‌ ಕಲ್ಪನೆ ಮಾತ್ರ ಇರುತ್ತದೆ .‌ವಾಸ್ತವದ ಬದುಕು ತೀರ ಭಿನ್ನ. ಇದು ನಾನು ಬದುಕಿದ ನನ್ನ ಬದುಕು. ಇದಕ್ಕೆ ನನ್ನ ಭಂಡವಾಳ ಏನು ಎಂದು ಲೆಕ್ಕ ಹಾಕುತ್ತೇನೆ.  ಸಂಸಾರದಲ್ಲಿ ಯಾವಾಗಲೂ ‌ಪ್ರೀತಿಯೇ ಭಂಡವಾಳ. ಇದು ಚಲಾವಣೆಯಲ್ಲಿರುವ ತನಕವೂ ‌ವ್ಯವಹಾರ ಅಬಾಧಿತ.

     ಗಂಡಿನ ಬದುಕಿನ ಭಾರವನ್ನು ಹೊತ್ತು  ಬದುಕನ್ನು ರೂಪಿಸುವುದೇ ಹೆಣ್ಣು. ಹಾಗಾಗಿ ಹೆಣ್ಣನ್ನು ಎತ್ತಿ ದಾಗ ಅಕೆ ಹೂವಿನಂತೆ ಭಾಸವಾಗಬಹುದು. ಆದರೆ ಆಕೆ ಭಾರವನ್ನು ಹೃದಯದ ಮೇಲೆ ಒತ್ತಿಬಿಡುತ್ತಾಳೆ. ಹೃದಯ ಭಾರವಾದಂತೆ ಆಕೆ ಹಗುರವಾಗುತಗತ್ತಾಳೆ ಜತೆಗೆ ಬದುಕೂ ಹಗುರವಾಗಿಬಿಡುತ್ತದೆ.
ಬೇರೆ ಯಾರಿಗೂ ಅಪ್ರಯತ್ನವಾಗಿ ಸಿಗದ ಕಾಶಿ ಸನ್ನಿಧಾನ ಮದುವೆ ದಿನವೆ ನನಗೆ ಆಯಾಚಿತವಾಗಿ ಒದಗಿದೆ.‌ವಿವಾಹ ಬದುಕಿನ ವಿಜಯವನ್ನು ಭಗವಂತ ಅನುಗ್ರಹಿಸಿದ ರೀತಿ ಇದು. ಬದುಕೆಂಬ ಕಾಶಿಗೆ ಗಂಗೆಯಾಗಿ ಜತೆಯಾದವಳು ನನ್ನವಳು.




Tuesday, February 14, 2023

ಏಕಮೇವಾದ್ವಿತೀಯ

ಒಂದು ಕಥಾ ಸೂಕ್ಷ್ಮದಿಂದ ಈ ಲೇಖನ ಆರಂಭಿಸಿದರೆ ಸೂಕ್ತ ಅನ್ನಿಸಿತು.  ಬಹಳ ಹಿಂದಿನ ಕಾಲದ ಕಥೆ ಇದು.  ಒಬ್ಬ ತನ್ನ ಮಿತ್ರನೊಂದಿಗೆ ಗೋವಾಕ್ಕೆ ಹೋಗುತ್ತಾನೆ. ಗೋವಾ ಎಂಬುದು ಕೇವಲ ಸಾಂಕೇತಿಕ. ಅದು ಭಾರತದಲ್ಲಿ ಎಲ್ಲಿಗಾದರೂ ಆಗಬಹುದು. ಅದು ಬಹಳ ಸಮಯದ ಕನಸು . ಆ ಮಿತ್ರನಿಗೆ ಗೋವಾದಲ್ಲಿ ಸಂಭಂಧಿಗಳಿದ್ದರು. ಯಾವುದೋ ಮದುವೆ ಸಮಾರಂಭಕ್ಕೆ ಮಿತ್ರ ಹೋಗುವಾಗ ಈತನೂ ಮಿತ್ರನ ಕೇಳಿಕೆಯಂತೆ ಜತೆಯಲ್ಲೇ ಹೊರಡುತ್ತಾನೆ.  ಅಲ್ಲಿ ಮದುವೆ ಮನೆಯಲ್ಲಿ ಮಿತ್ರನೊಂದಿಗೆ ಜತೆಯಾಗುತ್ತಾನೆ. ಅನಿವಾರ್ಯವಾಗಿ ಅಲ್ಲಿ ಫೋಟೋಗ್ರಾಫರ್ ನಂತೆ ವಿವಿಧ ಫೋಟೋಗಳನ್ನು ತೆಗೆಯುತ್ತಾ ಅಲ್ಲಿನ ಅಪರಿಚಿತರೊಂದಿಗೆ ಬೆರೆಯುತ್ತಾನೆ. ಹಾಗೆ ಇರುವಾಗ ಅಲ್ಲಿ ಚಿಗರೆಯಂತೆ ಓಡಾಡುವ ಹೆಣ್ಣೊಬ್ಬಳನ್ನು ನೋಡುತ್ತಾನೆ. ಆಕೆ ಯಾರು? ಯಾವ ಸಂಭಂಧ ? ಒಂದೂ ಅರಿವಿರುವುದಿಲ್ಲ. ಕೇವಲ ಕಿರುನಗುವಿನ ವಿನಿಮಯದೊಂದಿಗೆ ಅವರು ಆತ್ಮೀಯರಾಗಿಬಿಡುತ್ತಾರೆ. ಕಷ್ಟ ಪಟ್ಟು ಆಕೆಯೊಂದಿಗೆ ಮಾತನಾಡುತ್ತಾನೆ. ಆಕೆ ಮರಾಠಿಯಲ್ಲದೇ ಬೇರೆ ಭಾಷೆ ಬರುವುದಿಲ್ಲ. ಮರಾಠಿಯನ್ನು ಜನುಮದಲ್ಲಿ ಮೊದಲ ಬಾರಿಗೆ ಕೇಳುವ ಈತನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಆದರೆ ಪರಿಚಯ ಕಣ್ಣ ಭಾಷೆ ಎಂಬುದು ಭಾಷಾತೀತವಾಗಿ ಅಲ್ಲಿ ಮನಸ್ಸೇ ಒಂದು ಭಾಷೆಯನ್ನು ಸೃಷ್ಟಿಸುತ್ತದೆ. ಆಕೆ ಮರಾಠಿಯಲ್ಲಿ ಹೇಳಿದ್ದನ್ನು ಈತ ಕನ್ನಡದಲ್ಲಿ ಅರ್ಥವಿಸುತ್ತಾನೆ. ಕೇವಲ ಕಣ್ಣಂಚಿನ ಭಾಷೆ.  ಅವರಿಬ್ಬರು ಬಹಳ ಹತ್ತಿರವಾದರೂ ಕಿರುನಗು ಬಿಟ್ಟರೆ ಅವರಲ್ಲಿ ಬೇರೆ ಸಂಭಾಷಣೆ ಸಾಧ್ಯವಾಗುವುದಿಲ್ಲ. ಮದುವೆ ಕಾರ್ಯಕ್ರಮ ಮುಗಿಯುತ್ತದೆ. ಎಲ್ಲರೂ ಚದುರಿ ಹೋಗುತ್ತಾರೆ. ಮಿತ್ರನೊಂದಿಗೆ ಈತನೂ ಅಲ್ಲಿಂದ ಹೊರಡುತ್ತಾನೆ. ಗೋವದಲ್ಲಿ ಮತ್ತೂ ಒಂದೆರಡು ದಿನ ತಂಗಿ ತಿರುಗಾಡುವ ಕಾರ್ಯಕ್ರಮ ಇರುತ್ತದೆ. ಈತ ಮಿತ್ರನಲ್ಲಿ ಆ ಹೆಣ್ಣಿನ ಬಗ್ಗೆ ವಿಚಾರಿಸುತ್ತಾನೆ. ಆತನಿಗೂ ಆಕೆ ಯಾರು ಎಂದು ಅರಿವಿಲ್ಲ. ಹಾಗಂತ ಆ ಮಿತ್ರನ ಸಂಭಂಧಿಗಳಿಗೂ ಅದು ತಿಳಿದಿರುವುದಿಲ್ಲ. ಹಾಗಾಗಿ ಆ ಹೆಣ್ಣು ನಾಪತ್ತೆ ಅಂದರೆ ವಿಳಾಸವಿಲ್ಲದ ಹೆಣ್ಣಿನಂತೆ ಇವರಿಗೆ ಭಾಸವಾಗುತ್ತದೆ.  ಎರಡು ದಿನ ಕಳೆದು ಇನ್ನೆನು ಗೋವ ಬಿಡುವ ಸನ್ನಿವೇಶ ಬರುತ್ತದೆ. ಕೊನೆ ಘಳಿಗೆಯಲ್ಲಿ ಆ ಹೆಣ್ಣು ರೈಲ್ವೇ ನಿಲ್ದಾಣದಲ್ಲಿ ಕಾಣ ಸಿಗುತ್ತಾಳೆ. ಹಲವು ಘಟನೆಗಳಿಗೆ ರೈಲು ನಿಲ್ದಾಣ ಸಾಕ್ಷಿಯಾದಂತೆ ಇಲ್ಲೂ ಮದುವೆ ಮನೆಯ ಸಿಂಗಾರದಲ್ಲಿದ್ದ ಹೆಣ್ಣು ಅಲ್ಲಿ ಬಹಳ ಸರಳ ಉಡುಗೆಯಲ್ಲಿ ಆಕರ್ಷಕವಾಗಿ ಕಾಣುತ್ತಾಳೆ. ಆಕೆಯೊಂದಿಗೆ ಮಾತನಾಡುತ್ತಾನೆ. ಈತ ಕನ್ನಡ, ಆಕೆ ಮರಾಠಿ ನಡುವೆ ಯಾವ ಭಾಷೆಯಾಗುತ್ತದೆ ಎಂಬ ಖಚಿತತೆ ಇರುವುದಿಲ್ಲ. ಹೀಗಿದ್ದೂ ಮನಸ್ಸಿನ ಭಾವನೆಯನ್ನು ಈತ ವ್ಯಕ್ತ ಪಡಿಸುತ್ತಾನೆ. ನನಗೆ ನೀನು ಬಹಳ ಇಷ್ಟವಾಗಿದ್ದಿಯಾ ಎಂದು ಹೇಳುತ್ತಾನೆ. ಆದರೆ ಅದಕ್ಕೆ ಆಕೆ ಪ್ರತಿಕ್ರಿಯೆ ಕೊಡಬೇಕಲ್ಲ.....ಕೊನೆಘಳಿಗೆಯವರೆಗೂ ಹೆಣ್ಣಾದ ಆಕೆಗೆ ಸಾಧ್ಯವಾಗುವುದಿಲ್ಲ. ಉಪಾಯವಿಲ್ಲದೇ ಈತ ತನ್ನ ವಿಳಾಸವನ್ನು ಕೊಟ್ಟು ನಾನು ಇಷ್ಟವಾದರೆ ಪತ್ರ ಬರೆ ಎಂದು ಅದು ಹೇಗೋ ಆಂಗಿಕವಾಗಿ ಹೇಳುತ್ತಾನೆ. ಒಂದು ಸಿನಿಮಾದ ಕಥೆಯಂತೆ ಭಾಸವಾಗುತ್ತಿದೆಯಲ್ಲ. ಕೊನೆಯ ಕ್ಷಣವಾದುದರಿಂದ  ಆತ ವಿದಾಯ ಹೇಳುತ್ತಾನೆ. 


ಊರಿಗೆ ಬಂದನಂತರ ಒಂದು ದಿನ ಆಕೆಯ ಪತ್ರ ಬರುತ್ತದೆ. ಮುದ್ದಾದ ಅಕ್ಷರದ ಆ ಪತ್ರ ಕೈ ಸೇರುತ್ತಿದ್ದಂತೆ ಈತ ರೋಮಾಂಚನಗೊಳ್ಳುತ್ತಾನೆ. ಹಲವು ಭಾವನೆಗಳು ನಿರೀಕ್ಷೆಗಳು ಕನಸುಗಳು ಹುಟ್ಟಿಕೊಳ್ಳುತ್ತವೆ. ಇನ್ನೆನು ಪತ್ರ ತೆರೆದು ಓದಬೇಕು ಎನ್ನುವಾಗ ಬಹಳ ಹತಾಶೆಯಾಗುತ್ತದೆ. ಯಾಕೆಂದರೆ ಅದು ಮರಾಠಿ ಭಾಷೆಯಲ್ಲಿ ಬರೆದಿರುತ್ತಾಳೆ!! ಛೇ ಬರೆದ ಒಂದೆರಡು ಸಾಲು....ಅದೂ ಎನೆಂದು ಅರ್ಥವಾಗುವುದಿಲ್ಲ. ಆಕೆಗೆ ಇಷ್ಟವಿರಬಹುದೇ? ಇಲ್ಲಾ...ಯಾರಲ್ಲಿ ಕೇಳುವುದು? ಮಿತ್ರನಿಗೂ ಮರಾಠಿ ಓದುವುದಕ್ಕೆ ಬರುವುದಿಲ್ಲ. ಮುದ್ರಿಸಿದ ಬರಹಕ್ಕಿಂತ ಕೈ ಬರಹ ಓದುವುದು ಬಹಳ ಕಷ್ಟ . ಯಾರಲ್ಲಿ ಕೇಳುವುದು? ಬಹಳ ನಿರಾಶೆಯಾಗುತ್ತದೆ. ಈಗಿನಂತೆ ಮೊಬೈಲ್ ಪೋನ್ ಇಲ್ಲದಂತಹ ಕಾಲ. ಏನಿದ್ದರೂ ಕಾಗದ ಒಂದೇ ಮಾಧ್ಯಮ. ಇದು ಪ್ರೇಮ ಪತ್ರವಾದುದರಿಂದ ಬೇರೆ ಯಾರಲ್ಲೂ ಓದಿಸುವಂತೆಯೂ ಇಲ್ಲ. ಸದಾ ಕನ್ನಡ ಕನ್ನಡ ಎನ್ನುವಂತಿದ್ದ ಆತನಿಗೆ ಎಲ್ಲದಕ್ಕಿಂತಲೂ ಮೀರಿದ ಭಾವನೆ ಎಂಬುದು ದೊಡ್ಡದು ಎನಿಸುತ್ತದೆ.  ಈ ಕಥೆಯ ಅಂತ್ಯವನ್ನು ಹೇಗೂ ಚಿತ್ರಿಸಬಹುದು. ಸುಂದರ ಪ್ರೇಮ ಕಥೆಯಂತೆ ಇದನ್ನು ತೋರಿಸಬಹುದು...ಭಾಷೆ,  ಅದು ಮನಸ್ಸನ್ನು ಅರಿಯುವುದಕ್ಕಿರುವ ಮನುಷ್ಯ ನಿರ್ಮಿತ ಸಾಧನ. ಅದಕ್ಕೆ ದೇಶ ಪರದೇಶದ ಸೀಮೆ ಇರುವುದಿಲ್ಲ. 

ಈಗ ಭಾಷೆಯಕಾರಣದಿಂದ ನಮ್ಮೊಳಗೆ ದ್ವೇಷ ಬೆಳೆಯುತ್ತದೆ. ಕನ್ನಡಿಗರು ವಾಸ್ತವದಲ್ಲಿ ಎಲ್ಲಾ ಭಾಷೆಯನ್ನು ಮುಕ್ತವಾಗಿ ಸ್ವೀಕರಿಸುವವರು. ಅದರಲ್ಲೂ ನಮ್ಮ ಮಂಗಳೂರಿಗರಿಗೆ ಅದೊಂದು ಪ್ರಕೃತಿ ದತ್ತ ಕೊಡುಗೆ. ಹಲವು ಭಾಷೆಗಳನ್ನು ತಿಳಿದವರು ಇಲ್ಲಿ ಸಹಜ.   ಮದುವೆಯಾದ ಹೊಸದರಲ್ಲಿ ನನ್ನಾಕೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ನನಗಾದರೋ ಐದಾರು ಭಾಷೆ. ಹಾಗಿರುವಾಗ ಆಕೆಯೆ ಎದುರು ಯಾರ ಜತೆಗಾದರೂ ತುಳುವಿನಲ್ಲಿ ಮಾತನಾಡಿದರೂ ಆಕೆಯನ್ನು ಬೇರೆ ಮಾಡಿದ ಅನುಭವ ಆಕೆಯದ್ದಾಗಿರುತ್ತಿತ್ತು. ಮನೆಯೊಳಗೆ ಸಂಭಂಧಿಗಳಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಆಕೆಯನ್ನು ಪ್ರತ್ಯೇಕಿಸಿದಂತಾಗುತ್ತಿತ್ತು. ಭಾಷೆ ಎಂಬುದು ಸೀಮಾತೀತವಾಗಿ ಮನುಷ್ಯನನ್ನು ಬೆಸೆಯಬೇಕು. ಇಲ್ಲಿ ಬೆಸೆಯುವುದಕ್ಕೆ ಭಾಷೆ ಎಂದೂ ತೊಡಕಾಗಬಾರದು. ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನ ಇರಬೇಕು. ಹಾಗೇ ಇನ್ನೊಂದು ಭಾಷೆಯ ಬಗ್ಗೆ ಗೌರವವೂ ಇರಬೇಕು. ಅದು ಜಾತಿ ಧರ್ಮದ ವಿಷಯಕ್ಕೆ ಬಂದರೂ ಅಷ್ಟೇ. ಅನ್ಯ ಧರ್ಮದವರೊಂದಿಗೆ ಊಟ ಮಾಡಿದರೆ, ಸಂಭಂಧ ಬೆಳೆಸಿದರೆ ಜಾತಿಭೇದ ನಾಶವಾಗುವುದಿಲ್ಲ. ಅದು ಎಲ್ಲೋ ಒಂದು ಕಡೆ ಭೇದ ಅರಿವಿಲ್ಲದೇ ಹುದುಗಿರುತ್ತದೆ.  ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾಗಿ ಮನೆಗೆ ಕರೆತಂದರೂ  ವಿಭಿನ್ನ ಸಂಸ್ಕಾರ ಪ್ರತ್ಯೇಕಿಸುತ್ತದೆ. ಹಾಗಿರುವಾಗ ಇಲ್ಲಿ ಬೆಸೆಯುವುದು ಯಾವುದು? ಅನ್ಯ ಧರ್ಮವನ್ನು ಕೀಳಾಗಿ ಕಾಣದಿದ್ದರೆ  ಜಾತಿ ಭೇದದ ಪ್ರಶ್ನೆಯೇ ಬರುವುದಿಲ್ಲ.  ಅನ್ಯ ಧರ್ಮದ ಬಗ್ಗೆ ತಾತ್ಸಾರವಿಲ್ಲದೇ ಗೌರವ ಇದ್ದರೆ ಯಾವುದೇ ಭೇದ ವೆತ್ಯಾಸಗಳೂ ಗೌಣವಾಗುತ್ತವೆ. ಯಾವುದೇ ಧರ್ಮ ಅಥವಾ ಭಾಷೆಯನ್ನು ಹೀನವಾಗಿ ಕಾಣುವ ಮನೋಭಾವ ದೂರವಾದರೆ ಸಾಕು ಬೇರೆ ಕುಳಿತು ಊಟಮಾಡಿದರೂ ಮನಸ್ಸು ಒಂದಾಗಿರುತ್ತದೆ. ಭಾಷೆಗೂ ಇದು ಅನ್ವಯ. 

ಯಾವುದೇ ಜಾತಿ,  ಧರ್ಮ,  ಭಾಷೆಯಾದರೂ ಅದು ಮನುಷ್ಯನನ್ನು ಪ್ರತ್ಯೇಕಿಸುವ ವಸ್ತುಗಳಲ್ಲ. ಅದರ ಹಾದಿಯ ಗಮ್ಯ ಎಲ್ಲವೂ ಒಂದೇ. ನಮ್ಮ ಮನೋಭಾವವೇ ಅದನ್ನು ಪ್ರತ್ಯೇಕಿಸುತ್ತದೆ. ಭಾರತದ ಸಂಸ್ಕೃತಿ ಇದನ್ನು ಬೆಸೆಯುವುದರಲ್ಲಿದೆ ಎಂಬುದನ್ನು ಇತಿಹಾಸವೇ ಹೇಳುತ್ತದೆ. ಯಾವುದೇ ಧರ್ಮದಲ್ಲೂ ಒಳ ಪಂಗಡಗಳಿರುತ್ತವೆ. ವಿವಿಧ ಸಂಸ್ಕೃತಿಗಳು ಇರುತ್ತವೆ. ಅಲ್ಲೆಲ್ಲ ನಮ್ಮ ಜಾತಿ ಧರ್ಮ ಎಂಬ ಅಭಿಮಾನ ಇದ್ದರೆ ತಪ್ಪಲ್ಲ. ಆದರೆ ಮತ್ತೊಂದು ಧರ್ಮ,೯ ಭಾಷೆ ಕೀಳು ಎಂದು ಕಂಡರೆ ಅದು ಅಪರಾಧ. ಈ ಮನೋಭಾವ ಸ್ನೇಹ ಪ್ರೇಮವನ್ನು ನಾಶ ಮಾಡುತ್ತದೆ. ದ್ವೇಷವನ್ನು ಮತ್ಸರವನ್ನೂ ಹುಟ್ಟು ಹಾಕುತ್ತದೆ. ಈ ಭೇದ ಭಾವ ಕೇವಲ ಮನುಷ್ಯನಿಗೆ ಮಾತ್ರ. ಪ್ರಾಣಿಗಳಿಗೆ ಯಾವ ಭಾಷೆ ಇದೆ? ಯಾವ ಧರ್ಮವಿದೆ? ತೆಂಗಿನ ಮರ ಎಲ್ಲಿ ಬೆಳೆದರೂ ಅದು ಕಲ್ಪವೃಕ್ಷ. ಅದು ಅಮೃತವನ್ನೇ ನೀಡುತ್ತದೆ. ಮನುಷ್ಯ ಮಾತ್ರ ಅದರಲ್ಲಿ ವಿಷ ಬೆರೆಸುತ್ತಾನೆ. 

ಇತ್ತೀಚೆಗೆ ಯಾವುದೋ ಬ್ಯಾಂಕ್ ಒಂದಕ್ಕೆ ನನ್ನ ಪರಿಚಯಸ್ಥರೊಂದಿಗೆ ಹೋಗಿದ್ದೆ. ಅವರಿಗೆ ಕನ್ನಡ ಅಲ್ಪ ಸ್ವಲ್ಪ ಇಂಗ್ಲೀಷು ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಅಲ್ಲಿ ಬ್ಯಾಂಕ್ ನ ಸಿಬ್ಬಂದಿಯಲ್ಲಿ ಒಬ್ಬರು ಉತ್ತರ ಭಾರತದಿಂದ ಬಂದ ಹಿಂದಿಯವರಾಗಿದ್ದರು. ಕೆಲವು ದಿನದ ಉದ್ಯೋಗದ ನಿಮಿತ್ತ ಬಂದವರಿಗೆ ಭಾಷೆ ಅನಿವಾರ್ಯವಾಗಿ ಕಂಡಿರಲಿಲ್ಲ. ಇಲ್ಲಿ ಇದ್ದುಕೊಂಡು ಕನ್ನಡ ಅರಿವಿರಬೇಕಾಗಿರುವುದೇನೋ ಸತ್ಯ. ಆದರೆ ಅರಿವಿಲ್ಲದೇ ಇರುವುದು ಮಹಾಪರಾಧವೇನು ಅಲ್ಲ.  ಅವರು ಹಿಂದಿಯವರು ಎಂದು ತಿಳಿದ ಕೂಡಲೆ ನನ್ನೊಂದಿಗೆ ಬಂದವರಿಗೆ ಸಹನೆ ಕಟ್ಟೆಯೊಡೆಯಿತು. ರೇಗಾಡುವುದಕ್ಕೆ ತೊಡಗಿದರು. ನಾನು ಆದಷ್ಟು ಸಾಂತ್ವನ ಮಾಡಿದೆ. ಆದರೂ ಪ್ರಯೋಜನವಿಲ್ಲ. ತನ್ನ ಪರಿಸರ ಸಂಭಂಧಿಗಳನ್ನು ಎಲ್ಲವನ್ನೂ ಹೊಟ್ಟೆ ಪಾಡಿಗೆ ಬಿಟ್ಟು ಬಂದ ಬ್ಯಾಂಕ್ ಸಿಬ್ಬಂದಿಯ ಅಸಹಾಯಕತೆ ನನಗೆ ಕಂಡಿತು. ಭಾಷೆ ಎಂಬುದು ದ್ವೇಷಕ್ಕೆ ಕಾರಣವಾಗಿಬಿಟ್ಟಿತು. ನಾನು ಅವರನ್ನು ಕರೆದುಕೊಂಡು ಸಮಾಧಾನ ಮಾಡಿದೆ. ಭಾಷೆ ದ್ವೇಷಕ್ಕೆ ಕಾರಣವಾಗಬಾರದು. ಈಗ ನಿಮ್ಮ ಭಾಷೆಯಲ್ಲೆ ನಿಮಗೆ ಕೇಳುತ್ತೇನೆ...ಏಕಮೇವಾದ್ವಿತೀಯ ಎಂದರೆ ಏನು? 

ಏಕಮೇವಾದ್ವಿತೀಯ...ಶುದ್ದ ಕನ್ನಡದಂತೆ ಭಾಸವಾಗಿ ಅವರು ಪ್ರಪ್ರಥಮ, ಮೊದಲನೆಯದ್ದು ಹೀಗೆ ತೊದಲಿದರು. ನಾನು ಹೇಳಿದೆ ಇದು ಕನ್ನಡ ಶಬ್ದವಾ? ನೋಡುವುದಕ್ಕೆ ಅದು ಶುದ್ದ ಕನ್ನಡ ಭಾಷೆಯೇ ಆಗಿತ್ತು. ಅದನ್ನು ವಿಂಗಡಿಸಿ ಹೇಳಿದೆ..ಏಕಂ ಏವ...ಅದ್ವಿತೀಯ....ಇದರಲ್ಲಿ ಯಾವುದು ಕನ್ನಡ ಎಂದು ಕೇಳಿದೆ. ಎಲ್ಲವೂ ಸಂಸ್ಕೃತ ಪದಗಳು. ಆತ ಕಿರು ನಗೆ ನಕ್ಕ. ಆತನ ಅಹಂ ಹೋಗದಿದ್ದರೂ ವಾಸ್ತವ ಅರಿವಾಗಿತ್ತು. ಸಂಸ್ಕೃತ ಎಂದರೆ  ಅಸ್ಪೃಶ್ಯವಾಗಿ ಕಾಣುವವರು ಇದ್ದಾರೆ. ಭಾಷೆ ಎಂಬುದು ಅದು ಹೇಗೆ ಅಸ್ಪೃಶ್ಯವಾಗುತ್ತದೋ ವಿಸ್ಮಯವೆನಿಸುತ್ತದೆ. ಸಂಸ್ಕೃತ ಅರ್ಥವಾಗಬೇಕಾದರೆ....ಕನ್ನಡ ಸಂಪೂರ್ಣ ತಿಳಿದಿರಬೇಕು. ಆಗ ಅದು ಅನ್ಯ ಭಾಷೆಯಾಗುವುದಿಲ್ಲ. ನಾವು ಕನ್ನಡ ಎಂದು ಅಭಿಮಾನ ಪಟ್ಟುಕೊಳ್ಳಬಹುದು. ಹಾಗೆಂದು ಕನ್ನಡ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದಕ್ಕೆ ಸಾಧ್ಯವಿಲ್ಲ.  ಯಾಕೆಂದರೆ ಯಾವ ಜ್ಞಾನಕ್ಕೂ ಸೀಮೆ ಎಂಬುದು ನಿಗದಿಯಾಗುವುದಿಲ್ಲ. ಕನ್ನಡ, ನಡುಗನ್ನಡ, ಹಳೆಗನ್ನಡ ಹೀಗೆ ಕನ್ನಡ ಎಂಬುದು ಅನಂತ ಲೋಕ. ಆ ಲೋಕವನ್ನು ತೆರೆದಿಡುವುದೇ ಭಾಷೆಯ ಗುಣ. ಆದರೆ ಅದು ದ್ವೇಷಕ್ಕೆ ವೈಷಮ್ಯಕ್ಕೆ ಉಪಯೋಗವಾದರೆ ಅದಕ್ಕಿಂತ ದುರ್ದೈವ ಬೇರೆ ಇಲ್ಲ. ಸಂಸ್ಕೃತ ಎಂದರೆ ಅದು ಬ್ರಾಹ್ಮಣರ ಭಾಷೆ, ಉರ್ದು ಎಂದರೆ ಅದು ಇನ್ನೊಂದು ಧರ್ಮದ ಭಾಷೆ ಈ ರೀತಿಯ ಕಲ್ಪನೆಗಳು ನಿಜಕ್ಕೂ ನಮ್ಮ ಅಜ್ಞಾನವನ್ನು ಬಿಂಬಿಸುತ್ತದೆ. ಉರ್ದೂ ಭಾಷೆಯಲ್ಲೂ ಹಿಂದು ಕವಿ ಸಾಹಿತಿಗಳಿದ್ದಾರೆ ಎಂದು ಕೇಳಿದ್ದೇನೆ. ಹಾಗೆ ಸಂಸ್ಕೃತದಲ್ಲೂ.  ನಮ್ಮ ಶಾಲೆಯಲ್ಲಿ ಒಬ್ಬರು ಮುಸ್ಲಿಂ ಕನ್ನಡ ಪಂಡಿತರಿದ್ದರು. ಅವರ ಕನ್ನಡ ಭಾಷೆಯ ಪಾಠವನ್ನು ಕೇಳಬೇಕು. ಅದೆಷ್ಟು ಸುಂದರವಾಗಿತ್ತು. ಅದರಲ್ಲೂ ಹಳೆಕನ್ನಡದ ರಾಘವಾಂಕ, ನಾರಣಪ್ಪನ ಕಾವ್ಯಗಳನ್ನು ಅವರು ವಿವರಿಸುತ್ತಿದ್ದರೆ ಅವರ ಧರ್ಮ ಯಾವುದೋ ಅದು ಮುಖ್ಯವಾಗುತ್ತಿರಲಿಲ್ಲ. ಯಾವ ಭಾಷೆ ಯಾವ ಧರ್ಮವಾದರೇನು ನಾವದಕ್ಕೆ ಕೊಡುವ ದೇಣಿಗೆ ಮುಖ್ಯವಾಗಿರುತ್ತದೆ. ಕನ್ನಡಕ್ಕೆ ಸಂಸ್ಕೃತ ಬೇರೆಯಲ್ಲ, ಸಂಸ್ಕೃತಕ್ಕೆ ಕನ್ನಡ ಅನ್ಯವಲ್ಲ. ಅದು ಒಂದರೊಡನೊಂದು ಬೆಸೆದು ಗಂಗೆ ಯಮುನೆಯಂತೆ ಒಂದಾಗುವ ಸೌಂದರ್ಯವನ್ನು ಕಾಣಬೇಕು. ಅದನ್ನು ಅನುಭವಿಸಬೇಕು. ಯಾವುದೋ ಕಾರಣಕ್ಕೆ ನಮ್ಮ ದೇಶವನ್ನು ಭಾಷಾವಾರು ವಿಂಗಡನೆ ಮಾಡಿದರು. ಅದು ತಪ್ಪೋ ಸರಿಯೋ ದೇವರೇ ಬಲ್ಲ. ಅದರ ಬದುಲು ಐದಾರು ಗೆರೆ ಎಳೆದು ವಿಂಗಡಿಸುತ್ತಿದ್ದರೆ ನಾವು ಒಂದಾಗುತ್ತಿದ್ದೇವೋ ಇಲ್ಲವೋ ಹೀಗೆ ದ್ವೇಷಿಸುವ ಸ್ಥಿತಿಯಂತು ಬರುತ್ತಿರಲಿಲ್ಲ. 

ಭಾಷೆ ಅದು ದ್ವೇಷ ಸಾಧಿನೆಗೆ ಮಾಧ್ಯಮವಾಗಬಾರದು. ಅದು ಕೇವಲ ಸಂವಹನ ಸಾಧನ. ಮನಸ್ಸು ಮನಸ್ಸು ಅರಿಯುವ ಮಾಧ್ಯಮ. ಎಲ್ಲ ಭಾಷೆಯೂ ತನ್ನದೆ ಆದ ಸೌಂದರ್ಯವನ್ನು ಹೋದಿದೆ. ನಮ್ಮ ಭಾಷೆಯ ಬಗ್ಗೆ ಸ್ವಾಭಿಮಾನ ಇರಲೇಬೇಕು. ಆದರೆ ಇನ್ನೊಂದು ಭಾಷೆಯ ಬಗ್ಗೆ ಗೌರವ  ಅತ್ಯವಶ್ಯ ಇರಬೇಕು. 

 

ಲೇಖಕರು : ರಾಜಕುಮಾರ್ ಎಂ. ಪೈವಳಿಕೆ ಬೆಂಗಳೂರು. 


Tuesday, February 7, 2023

ಪರಿಶುದ್ಧಿ

             ಹಿಂದೆ ಒಬ್ಬಾಕೆ ಕೇಳಿದರು ಯೋಗ ಮಾಡಬೇಕಿದ್ದರೆ ಸ್ನಾನ ಮಾಡಿಯೇ ಮಾಡಬೇಕಾ? ಯೋಗ ಮಾಡಿದ ಮೇಲೆ ಬೆವರಿ ಪ್ರೆಶ್ ನೆಸ್ ಹೋಗುತ್ತದೆ.  ನನ್ನ ಅನಿಸಿಕೆಯಂತೆ ಬೆಳಗ್ಗೆ ಎದ್ದು ಮೊದಲು  ಸ್ನಾನ ಮಾಡುವುದೇ ಒಂದು ಯೋಗ. ನಾನು ಆಕೆಯಲ್ಲಿ ಕೇಳಿದೆಆಕೆ ಹೇಳಿದ  ಆ  ಪ್ರೆಶ್ ನೆಸ್ ಅಂದರೆ ಏನು? ಬಹುಶಃ ಇಂದು ಯೋಗಾಭ್ಯಾಸ ಮಾಡುವವರು ಮೊದಲು ಪ್ರೆಶ್ ನೆಸ್ ಅಥವಾ ಪರಿಶುದ್ದತೆಇದನ್ನು ಮೊದಲು ತಿಳಿಯಬೇಕು.  ಯೋಗಾಭ್ಯಾಸದ ಮೂಲ ತತ್ವವೇ ಪರಿಶುದ್ಧತೆಯ ಕಡೆಗಿರುವ ಪಯಣ. ಇದನ್ನು ತಿಳಿಯದೇ ಇಂದು ಮನಬಂದಂತೆ ಬಳಸಿ ಅದನ್ನು ಯೋಗ ಎಂದು ಕರೆಯಲಾಗುತ್ತದೆ.

         ಬೆವರಿದೊಡನೆ ಪ್ರೆಶ್ ನೆಸ್ ಹೋಗುತ್ತದೆ ಎಂದಾದರೆ ನಾವು ದಿನದಯಾವ ಚಟುವಟಿಕೆಯನ್ನೂ ಮಾಡುವಂತಿಲ್ಲ. ಮಂಗಳೂರಿನಂತಹ ಪ್ರದೇಶದಲ್ಲಿ ಸ್ನಾನ ಮಾಡಿ ಹೊರಬರಬೇಕಾದರೆ ಮತ್ತೆ ಬೆವರುವುದಕ್ಕೆ ಆರಂಭವಾಗುತ್ತದೆ. ! ಹಾಗಾದರೆ ಪ್ರೆಶ್ ನೆಸ್ ಅಂದರೆ ಏನು? ಮನಸ್ಸಿನ ಭಾವನೆ. ಇಲ್ಲಿ ಮನಸ್ಸೇ ಪರಿಶುದ್ದವಾದರೆ ಯೋಚಿಸಿ. ನಾವು ದೇಹದ ಪರಿಶುದ್ದತೆಯನ್ನು ಬಯಸುತ್ತೇವೆ. ಸ್ನಾನಮಾಡಿದರೆ ಎಲ್ಲವೂ ಪರಿಶುದ್ದವಾದಂತೆ ಭಾವಿಸುತ್ತೇವೆ. ಮನಸ್ಸು ಮಾತ್ರ ಮತ್ತದೇ ಭಾವನೆಗಳ ಹೊಯ್ದಾಟದಲ್ಲಿ, ತುಮುಲದಲ್ಲೇ ಇರುತ್ತದೆ.   ಇಲ್ಲಿ ಪರಿಶುದ್ದತೆಯ ಅರಿವು ಇರಬೇಕು. ಅದರ ಪರಿಕಲ್ಪನೆ ಬದಲಾಗಬೇಕು.

        ಪರಿಶುದ್ದ ಮನಸ್ಸು ಅಂದರೆ ಏನು?  ಪರಿಶುದ್ದ ಮನಸ್ಸಿಗೆ ಯಾವುದೇ ಹೊರಾವರಣ ಇರುವುದಿಲ್ಲ.ಅಲ್ಲಿ ಅಸಹನೆ ಇರುವುದಿಲ್ಲ, ಕ್ರೋಧ ಮತ್ಸರ ಇತ್ಯಾದಿ ಬಾಧೆಗಳು ಇರುವುದಿಲ್ಲ. ಎಲ್ಲಾ ಭಾವನೆಗಳಿಂದ ಮುಕ್ತವಾಗುವಾಗ ಮನಸ್ಸು ಪರಿಶುದ್ದವಾಗುತ್ತದೆ. ಮನಸ್ಸಿನಲ್ಲಿ ಕಲ್ಮಶ ತುಂಬಿಕೊಂಡು ಹೊರಗೆ ಶಾಂತತೆಯನ್ನು ತೋರಿದಲ್ಲಿ ಅದು ಪರಿಶುದ್ಧ ಮನಸ್ಸಾಗುವುದಿಲ್ಲ. ದೇಹದ ಒಳಗಿನ ಗಾಯಕ್ಕೆ ಹೊರಗೆ ಔಷಧಿ ಲೇಪಿಸಿದಂತೆ

     ಮನಸ್ಸು ಪರಿಶುದ್ದವಾಗುವುದು ಧ್ಯಾನದಲ್ಲಿ. ಧ್ಯಾನ ಎಂದರೆ ಮನಸ್ಸನ್ನು ಖಾಲಿಗೊಳಿಸುವುದು. ಎಲ್ಲಾ ಭಾವನೆಗಳನ್ನು ಹೊರ ಹಾಕಿ ಮನಸ್ಸು ನಿರ್ಮಲದ ಕಡೆಗೆ ಹೋಗುವುದು. ಮನುಷ್ಯ ಈ ಭೂಮಿಮೇಲೆ ಜನ್ಮ ಎತ್ತುವುದೆಂದರೆ ಕಲ್ಮಶಗಳನ್ನು ಹೊತ್ತುಕೊಳ್ಳುವುದೇ ಆಗಿದೆ. ಎಲ್ಲಾ ದುರಿತಗಳನ್ನು ದೂರವಾಗಿಸಿದಾಗ ಅಮೃತತ್ವದ ಕಡೆಗೆ ಸಾಗುವುದೇ ಯೋಗ ಮಾರ್ಗ. ಮೃತ್ಯುಂಜಯ ಮಹಾ ಮಂತ್ರದಲ್ಲಿ ಹೇಳುವಂತೆ ಮೃತ್ಯೋರ್ ಮುಕ್ಷೀ ಯಮಾಮೃತಾತ್...ಅಮೃತತ್ವದ ಕಡೆಗೆ ಸಾಗಬೇಕು. ಅಲ್ಲಿ ದೇಹ ನಾಶವಾಗುತ್ತದೆ, ಆತ್ಮ ಪರಿಶುದ್ದವಾಗಿ ಅಮೃತತ್ವದ ಕಡೆಗೆ ಸಾಗುತ್ತದೆ. ಹಾಗಾಗಿ ಯೋಗಾಭ್ಯಾಸ ಎಂಬುದು ಪರಿಶುದ್ದಿಯ ಕಡೆಗೆ ಒಯ್ಯುತ್ತದೆ. ದಿನದ ಅರ್ಧ ತಾಸು ಧ್ಯಾನಕ್ಕಾಗಿ ಮೀಸಲಿಡಬೇಕು. ಮನಸ್ಸನ್ನು ಎಲ್ಲಾ ಭಾವನೆಗಳಿಂದ ಮುಕ್ತಗೊಳಿಸುವಾಗ ಧ್ಯಾನ ಸಾಧ್ಯವಾಗುತ್ತದೆ. ಎಲ್ಲ ಕ್ರಿಯೆಯ ಬಗ್ಗೆ ನಿರಾಸಕ್ತನಾಗಿ ಮನಸ್ಸಿನ ಅಂತರಂಗಕ್ಕೆ ಇಳಿಯುತ್ತಾ ಹೋಗುವುದು ಒಂದು ಅದ್ಭುತ ರಮ್ಯ ಪ್ರಯಾಣದಂತೆ.

         ನೇರವಾಗಿ ಕುಳಿತು   ಕಣ್ಣು ಮುಚ್ಚಿ, ಅಂದರೆ ಹೊರ ಪ್ರಪಂಚದಿಂದ ವಿಮುಖನಾಗುವುದು. ದೀರ್ಘವಾದ ಉಸಿರಾಟ ಶ್ವಾಸ ನಿಶ್ವಾಸದಲ್ಲಿ ಗಮನ ಕೊಡುವುದು, ಒಂದು ಬಾರಿ ಉಸಿರಾಡಿದಾಗ ದೇಹದಲ್ಲಿ ಏನೆಲ್ಲ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಗಮನಿಸುವುದು ಅದರಲ್ಲೇ ತಲ್ಲೀನ ನಾಗುತ್ತಿದ್ದಂತೆ ಹೊರಗಿನ ಸದ್ದುಗದ್ದಲಗಳ ಬಗ್ಗೆ ಗಮನ ಕಡಿಮೆಯಾಗುತ್ತದೆ. ಮನಸ್ಸು ಅಂತರಂಗದ ಬಗ್ಗೆ ಯೋಚಿಸುತ್ತದೆ. ಅಂತರಂಗದಲ್ಲಿ ಉಂಟಾಗುವ ಆ ಭಾವವೇ ಪರಬ್ರಹ್ಮ ಸ್ವರೂಪ. ಇದು ಒಮ್ಮೆ ಅನುಭವಕ್ಕೆ ಬಂತೋ ನಾವು ಗೆದ್ದು ಬಿಟ್ಟೆವು. ಕೇವಲ ಕೆಲವು ಕ್ಷಣಗಳನ್ನು ಈಸ್ಥಿತಿಯಲ್ಲಿ ಕಳೆದರೆ ಸಾಕು, ಮತ್ತೆ ನಿಮ್ಮ ಎಲ್ಲ ಆಗುಹೋಗುಗಳನ್ನು, ನಮ್ಮ ಮನಸ್ಸಿನ ಭಾವಗಳನ್ನು ಇದು ನಿಯಂತ್ರಿಸುತ್ತದೆ. ನನಗೆ ಪ್ರತಿ ಬಾರಿ ಸಿಟ್ಟು ಬಂದಾಗ ನನ್ನ ಮನಸ್ಸು ಯೋಚಿಸುತ್ತದೆ ನನ್ನ ಮನಸ್ಸು ಪರಿಶುದ್ದತೆಯನ್ನು ಕಳೆದುಕೊಳ್ಳುತ್ತದೆ. ಒಂದು ಬಾರಿ ಮನಸ್ಸು ಪರಿಶುದ್ದತೆಯನ್ನು ಕಳೆದುಕೊಂಡರೆ ಮತ್ತೆ ಮನಸ್ಸು ಪರಬ್ರಹ್ಮವನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿ ಬಾರಿ ಸಿಟ್ಟು ಕ್ರೋಧ ಉಂಟಾಗುವ ಸಂದರ್ಭ ಬಂದಾಗ ಅದರಿಂದ ದೂರ ಹೋಗುವಂತೆ ಮನಸ್ಸಿನ ಅಂತರಂಗದಲ್ಲಿ ಪ್ರೇರೇಪಣೆ ಉಂಟಾಗುತ್ತದೆ.  ಪರಿಶುದ್ದತೆ ನಮ್ಮ ಮನಸ್ಸಿನ ಭಾವನೆಯನ್ನು ಹೊಂದಿಕೊಂಡಿರುತ್ತದೆ. ಸ್ನಾನ ಮಾಡಿ ದೇಹದ ಕೊಳೆಯನ್ನೆಲ್ಲಾ ತಿಕ್ಕಿ ತಿಕ್ಕಿ ತೊಳೆದರೆ ನಾವು ಪರಿಶುದ್ದವಾಗಿದ್ದೇವೆ ಎನ್ನುವ ಕಲ್ಪನೆ ಏನೋ ಬರಬಹುದು, ಮನಸ್ಸು ಅಸಹನೆ ಅತೃಪ್ತಿ ಚಿಂತೆಯಿಂದ ಮುಳುಗಿದ್ದರೆ ನಾವು ಶುದ್ದರಾಗುವುದು ಕೇವಲ ಭ್ರಮೆಯಾಗಿರುತ್ತದೆ.

         ಇವತ್ತು ಅಧಿಕ ಮಂದಿ ದೇಹದ ತೂಕ ಜಾಸ್ತಿಯಾದರೆ, ಬೊಜ್ಜು ಬೆಳೆದರೆ ಯೋಗಾಭ್ಯಾಸದತ್ತ ಮುಖ ಮಾಡುತ್ತಾರೆ. ಯಾವುದೋ ಪ್ರೇರಣೆ ಪಡೆದು ಅವೈಜ್ಞಾನಿಕವಾಗಿ ಆಸನಗಳನ್ನು ವ್ಯಾಯಾಮಗಳನ್ನು ಮಾಡುತ್ತಾರೆ. ಪ್ರತಿದಿನ ದೇಹದ ಭಾರ ನೋಡಿ ದೇಹ ಭಾರ ಕಡಿಮೆಯಾಯಿತೇ ಎಂದು ನೋಡುತ್ತಾರೆ. ಆದರೆ ಒಂದು ಅವರಿಗೆ ಅರಿವಾಗುವುದಿಲ್ಲ, ಈ ಸಂದರ್ಭಗಳಲ್ಲಿ ಮನಸ್ಸು ಒಂದು ಅಸಹನೆ ಅಸೌಕರ್ಯವನ್ನು ಅತೃಪ್ತಿಯನ್ನು ಅನುಭವಿಸುತ್ತದೆ. ಮನಸ್ಸಿನ ಮೂಲೆಯಲ್ಲಿ ಒಂದು ಬಗೆಯ ಆತಂಕ ಮನೆ ಮಾಡಿರುತ್ತದೆ. ನನ್ನ ಅನುಭವದಿಂದ ಹಲವು ಸಲ ಹೇಳಿದ್ದೇನೆ, ಯೋಗಾಭ್ಯಾಸ ಇರುವುದು  ಅರೋಗ್ಯಕ್ಕಾಗಿ ಅಲ್ಲ. ಅದು ಜೀವನ ಪರಿಶುದ್ದತೆಗಾಗಿ. ಅದರಲ್ಲಿ ಆರೋಗ್ಯ ಎಂಬುದು ಸಣ್ಣ ಅಂಗ.  ಆದರೆ ಈಗ ಆರೋಗ್ಯವೆ ಪ್ರಧಾನವಾಗಿ ಯೋಗಾಭ್ಯಾಸದ ಮೂಲ ತತ್ವವೇ ಅಲಕ್ಷಿಸಲಾಗುತ್ತದೆ.     

    ತನ್ನ ಮನಸ್ಸು ಪರಿಶುದ್ಧವಾಗಿದೆ, ನನ್ನಲ್ಲಿ ಯಾವುದೇ ಆತ್ಮವಂಚನೆಗಳಿಲ್ಲ ಎಂದು ತಿಳಿದುಕೊಂಡವರಿಗೆ ಕೆಲವು ಘಳಿಗೆಗೂ ಧ್ಯಾನದಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಮನಸ್ಸಿನ ಸೆಳೆತ. ಹುಳುಗಳು ಕ್ರಿಮಿಗಳು ಕಲ್ಮಷದಲ್ಲೇ ಹುಟ್ಟಿಕೊಳ್ಳುವಂತೆ ನಮ್ಮ ಯೋಚನೆಗಳು ಕಲ್ಮಷ ಮನಸ್ಸಿನಲ್ಲೇ ಹುಟ್ಟಿಕೊಳ್ಳುತ್ತವೆ.

        ಯೋಗಾಭ್ಯಾಸದಲ್ಲಿ ಪ್ರಾಣಾಯಾಮ ಎನ್ನುವುದು ಅತ್ಯಂತ ಪ್ರಧಾನ. ನಮ್ಮ ಅನಿಯಮಿತ ಅಸಹಜ  ಉಸಿರಾಟವನ್ನು ಸಮರ್ಪಕ ಗೊಳಿಸುವುದೇ ಪ್ರಾಣಾಯಾಮ. ಮನುಷ್ಯನ ದೇಹದ ಶ್ವಾಸ ನಿಶ್ವಾಸ ಎಂಬ ಕ್ರಿಯೆ ದೇಹವನ್ನು ಶುದ್ದಿಗೊಳಿಸುವ ಕ್ರಿಯೆ. ಬಿಂದಿಗೆ ತೊಳೆದು ಅದರಲ್ಲಿ ಶುದ್ದ ನೀರು ಹಾಕುವಂತೆ. ಇದು ದೇಹವನ್ನು ಶುದ್ದಗೊಳಿಸುತ್ತದೆ. ಹಾಗಾಗಿಯೇ ನಾಡಿ ಶೋಧನ ಎಂಬ ಕ್ರಿಯೆಗೆ ಇಲ್ಲಿ ಮಹತ್ವ ಸಿಗುತ್ತದೆ. ದೇಹ ನಾಡಿಗಳನ್ನೆಲ್ಲ ಈ ಸೂಕ್ಷ್ಮ ಕ್ರಿಯೆ ಶುದ್ದ ಗೊಳಿಸುತ್ತದೆ. ಒಂದು ಉಸಿರಾಟದಲ್ಲಿ ಪರಿಶುದ್ದ ವಾಯು ದೇಹಕ್ಕೆ ಸೇರಿ ಅಲ್ಲಿದ್ದ ಅಶುದ್ದ ವಾಯು ಹೊರ ಹಾಕಲ್ಪಡುತ್ತದೆ. ಸಾಮಾನ್ಯ ಉಸಿರಾಟದಲ್ಲಿ  ದೇಹ ಸಂಪೂರ್ಣ ಶುದ್ದಿಯಾಗುವುದಿಲ್ಲ. ಅದಕ್ಕಾಗಿ ಪ್ರಾಣಾಯಾಮ ಮಾಡಬೇಕು.  ಸ್ವಚ್ಛವಾದ ತಂಬಿಗೆಯಲ್ಲಿ ಅಮೃತ ಸದೃಶವಾದ ಹಾಲನ್ನು ಹಾಕುವಾಗ ಅದನ್ನು ಸ್ವಚ್ಛಗೊಳಿಸುವಂತೆ ಪ್ರಾಣಾಯಾಮ. ಆನಂತರ ನಾವು ಏನು ವ್ಯಾಯಾಮ ಮತ್ತೀತರ ಚಟುವಟಿಕೆಯನ್ನು ಮಾಡುತ್ತೇವೆಯೋ ಅದು ಹಾಲಿನಂತೆ. ಪರಿಶುದ್ದವಿಲ್ಲದ ದೇಹದಲ್ಲಿ ವ್ಯಾಯಾಮ ಎಂಬ ಚೈತನ್ಯವನ್ನು ತುಂಬಿದರೆ ಅದರ ಪರಿಣಾಮ ಸಮರ್ಪಕವಾಗಿರುವುದಿಲ್ಲ. ಹಾಗಾಗಿ ಪ್ರಾಣಾಯಾಮ ಉಳಿದ ಎಲ್ಲ ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ.  ನಾವು ದೇಹದಿಂದ ಸ್ವಚ್ಛವಾಗುವುದು ಬಹಳ ಸುಲಭ, ಆದರೆ ಮನಸ್ಸಿನಿಂದ ಸ್ವಚ್ಚವಾಗುವುದು ಬಹಳ ಕಠಿಣ. ಕಠಿಣ ಮಾತ್ರವಲ್ಲ ಅದು ಸಾಧ್ಯವಾಗುವುದೇ ಇಲ್ಲ. ಮನಸ್ಸು ಸ್ವಚ್ಛ ಇಲ್ಲವಾದರೆ ನಾವು ಪರಿಶುದ್ದರಾಗಿದ್ದೇವೆ ಎಂದು ತಿಳಿದುಕೊಳ್ಳುವುದು ಮೂರ್ಖತನವಾಗುತ್ತದೆ. ನಾವು ಶುದ್ದಾತ್ಮರಾಗುವುದು ಬದುಕಿನ ಲಕ್ಷ್ಯವಾಗಿದೆ. ಒಂದು ಪರಿಶುದ್ದ ಭಾವ ಬಂದರೆ ಮತ್ತೆ ನಮ್ಮ ಮನಸ್ಸು ಮಾಲಿನ್ಯದತ್ತ ಮುಖ ಮಾಡುವುದಿಲ್ಲ. ಕ್ರೋಧ ಅಸಹನೆ ಅತೃಪ್ತಿ ಇದು ಯಾವುದೂ ಇಲ್ಲದ ಮನಸ್ಸು ಸದಾ ಶಾಂತವಾಗಿರುತ್ತದೆ. ಶಾಂತವಾಗಿರುವುದೇ ಪರಿಶುದ್ಧತೆಯ ಸಂಕೇತ.

Sunday, February 5, 2023

ಯಾತ್ರಾ ಸನ್ನಾಹ ೪

        ಕಾಶಿಯಾತ್ರೆಯ ಬಹಳಷ್ಟು ಸಿದ್ದತೆಗಳು ಪೂರ್ಣಗೊಂಡಿರಬಹುದು. ತರಬೇಕಾದ ವಸ್ತುಗಳು ಕೊಂಡೊಯ್ಯಬೇಕಾದ ವಸ್ತುಗಳು ಹೀಗೆ ಸಿದ್ದತೆಯ ಮೇಲೆ ಸಿದ್ದತೆಯಾಗುತ್ತಿದ್ದರೆ ಹಲವು ವರ್ಷಗಳ ಬಯಕೆ ನಿರೀಕ್ಷೆಗಳು ಸನ್ನಿಹಿತವಾಗುವ ಸಮಯದ  ಕ್ಷಣಗಣನೆ ಹತ್ತಿರವಾಗುತ್ತಿದೆ. ಮನಸ್ಸು ದೇಹ ಎಲ್ಲವೂ ಕಾಶೀಯಾತ್ರೆಯಲ್ಲಿ ಪರಮಾತ್ಮ ದರ್ಶನಕ್ಕೆ ಸಿದ್ದವಾಗುತ್ತಿದ್ದರೆ ಎಲ್ಲ ಸಿದ್ದತೆಯ ಜತೆಯಲ್ಲಿ ನಾವು ಅನಿವಾರ್ಯವಾಗಿ ಮಾಡಲೇ ಬೇಕಾದ ಸಿದ್ದತೆಯೊಂದನ್ನು ನೆನಪಿಸಬೇಕು.

        ಯಾವುದೇ ಸತ್ಕಾರ್ಯಗಳು ಸದುದ್ದೇಶ ಮತ್ತು ಸತ್ಸಂಕಲ್ಪಗಳಿಂದ ಕೂಡಿದ್ದರೆ ಮಾತ್ರ ಅದು ಸತ್ಫಲವನ್ನು ಕೊಡಬಲ್ಲುದು.  ಮನಸ್ಸಿನ ಪರಿಶುದ್ಧತೆಯಿಂದ ಈ ಸದುದ್ದೇಶ ಸತ್ಸಂಕಲ್ಪಗಳು ಕೂಡಿ ಬರುವುದು . ಪರಿಶುದ್ದ ಮನಸ್ಸಿನಲ್ಲಿ ಮಾತ್ರವೇ ಸತ್ಸಂಕಲ್ಪ ಹುಟ್ಟುವುದಕ್ಕೆ ಸಾಧ್ಯ.  ಸಂಕಲ್ಪ ಎನ್ನುವಾಗ ಅದರ ಹಿನ್ನೆಲೆಯನ್ನು ಒಂದು ಸಲ ಯೋಚಿಸಬೇಕು. ನಾವು ಸಹಜವಾಗಿ ಕಪಟವಿಲ್ಲದ ಪ್ರೀತಿ ಮಮತೆಯನ್ನು ನಮ್ಮ ಹಿತೈಷಿ ಮಿತ್ರರಿಂದ ಬಯಸುವಾಗ, ನಾವು ಪರಮಾತ್ಮನಿಗೆ ಸಲ್ಲಿಸುವ ಪ್ರಣಾಮವು ಕಪಟವಿಲ್ಲದೇ ಇರಬೇಕಾಗುತ್ತದೆ. ಕಲುಷಿತ ಮನಸ್ಸಿನ ಭಾವನೆಗಳು ಕಪಟವಾಗಿರುತ್ತವೆ. 

        ಸರ್ವೇಷಾಮ ವಿರೋಧೇನ... ಎಂದು ಯಾವುದೇ ಪೂಜೆ ಪುನಸ್ಕಾರ ನಿತ್ಯ ಕರ್ಮಗಳನ್ನು ಆಚರಿಸುವಾಗ  ಸಂಕಲ್ಪ ಮಂತ್ರವನ್ನು ಪುರೋಹಿತರು ಹೇಳುವುದನ್ನು ಕೇಳಬಹುದು. ಏನಿದು ಸರ್ವೇಷಾಮ ವಿರೋಧೇನ? ಸಾಮಾನ್ಯವಾಗಿ ಪುರೋಹಿತರು ಮಂತ್ರ ಹೇಳುವಾಗ,  ನಾವೇ ವೆಚ್ಚ ಮಾಡಿ ಎಲ್ಲ ಪ್ರಯತ್ನ ಮಾಡಿ ಪೂಜೆ ಮಾಡುತ್ತಿದ್ದರೂ ಪುರೋಹಿತರ ಮಂತ್ರದ ಬಗ್ಗೆ ಗಮನ ಹರಿಸುವುದಿಲ್ಲ. ಸಂಸ್ಕೃತ,  ಅದು ಅರ್ಥವಾಗುವುದಿಲ್ಲ ಎಂಬ ಔದಾಸಿನ್ಯ. ಇದು ಶ್ರದ್ದೆಯಕೊರತೆಗೂ ಕಾರಣವಾಗುತ್ತದೆ.  ಸರ್ವೇಷಾಂ ಅವಿರೋಧೇನ...ಅಂದರೆ   ಯಾರಿಗೂ ತೊಂದರೆ ಕೊಡದೆ ಯಾರ ವಿರೋಧವೂ ಇಲ್ಲದೇ ಪೂಜೆ ಅಥವಾ ಕರ್ಮವನ್ನು  ಮಾಡುತ್ತೇನೆ ಎಂಬುದಾಗಿ ಸಂಕಲ್ಪ ಮಾಡುವುದಾಗಿರುತ್ತದೆ. ಹಿಂದೂ ಧರ್ಮದಲ್ಲಿರುವ ಉತ್ಕೃಷ್ಟತೆ ಇದು. ಕರ್ಮದ ಉದಾತ್ತ ಧ್ಯೇಯವನ್ನು ಅರಿಯಬೇಕು.   ನಾವು ಮಾಡುವ ಕರ್ಮದಲ್ಲಿ ಒಬ್ಬರಿಗೆ ನೋವಾದರೆ ಅಸಮಾಧಾನ ತೊಂದರೆಯಾದರೆ ನಾವು ಮಾಡಿದ ಪೂಜೆ ಕರ್ಮಗಳು ಸತ್ಫಲವನ್ನು ಕೊಡುವುದಿಲ್ಲ. ನಮ್ಮ ಉದ್ದೇಶ ಸದುದ್ದೇಶವಾಗಿರುವುದಿಲ್ಲ. ಹಾಗಾಗಿ ಇಂತಹ ಕೆಲಸ ಮಾಡುವಾಗ ಮೊದಲು ನಮ್ಮ ಮನಸ್ಸು ಪರಿಶುದ್ದವಾಗಬೇಕು. ನಾವು ಸಾಗುವ ಹಾದಿ ಪರಿಶುದ್ದವಾಗಿರಬೇಕು.  

        ಕಾಶಿ ಯಾತ್ರೆ ಎಂದರೆ ಅದೊಂದು ಕರ್ಮ. ಪರಮಾತ್ಮನ ಅನುಗ್ರಹವನ್ನು ಗಳಿಸುವ ಹಾದಿ. ಈ ಯಾತ್ರೆ ಮಾಡುವಾಗ ಕೇವಲ ನಾವು ಸ್ನಾನ ಮಾಡಿಯೋ ಇನ್ನೋಂದೋ ಆಚರಿಸಿ ಪರಿಶುದ್ದವಾಗುವುದಲ್ಲ. ನಮ್ಮ ಮನಸ್ಸು ಶುದ್ದವಾಗಬೇಕು. ನಮ್ಮ ಯಾತ್ರೆಯಲ್ಲಿ ಯಾರಿಗೂ ತೊಂದರೆಯಾಗಬಾರದು, ಮನಸ್ಸಿಗೆ ನೋವು ತರಬಾರದು. ಒಂದು ವೇಳೆ ಹಾಗೆ ನೋವುಂಟಾದರೆ ನಾವು ಮಾಡುವ ಯಾತ್ರೆ ಖಂಡಿತವಾಗಿಯೂ ಸತ್ಫಲವನ್ನು ತರುವುದಿಲ್ಲ. ನಮ್ಮ ಕ್ಷಣಿಕವಾದ ಲಾಭದ ಆಶೆಯಲ್ಲಿ ನಾವು ಇನ್ನೊಬ್ಬರನ್ನು ಹಳಿಯುತ್ತೇವೆ. ಅಥವಾ ನೋವುಂಟು ಮಾಡುತ್ತೇವೆ. ಅರಿವಿಲ್ಲದೇ ಮಾಡುವುದಾದರೂ ಇದು ಅಕ್ಷಮ್ಯ. ಯಾಕೆಂದರೆ ಕಾಶಿ ಯಾತ್ರೆ ಎಂಬುದು ಒಂದು ಪವಿತ್ರ ಕಾರ್ಯ. ಅದರ ಪಾವಿತ್ರ್ಯವನ್ನು ನಾವು ಕಾಪಾಡದೇ ಇದ್ದರೆ ಅದನ್ನು ಮಾಡುವ ಆವಶ್ಯಕತೆಯಾದರೂ ಏನು? ಕೇವಲ ಕಾಶಿಯನ್ನು ಕಾಣುವುದೇ ? ಅಲ್ಲಿ ಭಗವಂತನ ಅನುಗ್ರಹದ ಬಯಕೆ ಇರುತ್ತದೆ. ಪರಿಶುದ್ದತೆ ಇದ್ದಲ್ಲಿ ಭಗಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ನಾವು ದೇವಾಲಯವನ್ನು ದೇವರನ್ನೂ ಪರಿಶುದ್ದಗೊಳಿಸಿ ಆರಾಧಿಸುತ್ತೇವೆ. ಸ್ವಚ್ಛತೆ ಇರುವಲ್ಲಿ ಭಗವಂತನ ಸಾನ್ನಿಧ್ಯ ಇರುತ್ತದೆ ಎಂಬ ನಂಬಿಕೆ ನಮ್ಮದು. ಹಾಗಾಗಿ ನಮ್ಮ ದೇಹ ಮನಸ್ಸು ಸ್ವಚ್ಛವಾಗಿದ್ದರೆ ಮಾತ್ರ ನಮ್ಮಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಮನಸ್ಸು ಸ್ವಚ್ಛವಿಲ್ಲದೇ ಇದ್ದರೆ ಭಗವಂತನ ಅನುಗ್ರಹ ಹೇಗೆ ಸಾಧ್ಯವಾಗುತ್ತದೆ. ನಾವು ಭಾರತೀಯರು ಸ್ವಚ್ಛ ಭಾರತದ ಸಂಕೇತವೇ ಇದು. ಸ್ವಚ್ಛ ಭಾರತ ಎಂದರೆ ಕೇವಲ ಬೀದಿ ಪರಿಸರವನ್ನು ಗುಡಿಸಿ ಸ್ವಚ್ಛಗೊಳಿಸುವುದಕ್ಕೆ ಸೀಮಿತವಾಗಿರುವುದಿಲ್ಲ.  ಮೊದಲು ನಮ್ಮ ಮನಸ್ಸು ಸ್ವಚ್ಛವಾಗಿರಬೇಕು ಆಗ ನಮ್ಮ ಪರಿಸರದ ಸ್ವಚ್ಛತೆಯ ಪ್ರಚೋದನೆಯಾಗುತ್ತದೆ. 

        ಮನೆಯ ಬಳಿಯಲ್ಲೇ ಇರುವ ದೇವಸ್ಥಾನಕ್ಕೂ ಹೋಗುವುದಕ್ಕೆ ಯೋಗ ಇರಬೇಕು. ಅದಿಲ್ಲವಾದರೆ ಅದು ಸಾಧ್ಯವಾಗುವುದಿಲ್ಲ. ಲಭ್ಯವಾಗದೇ ಇರುವುದನ್ನು ಪಡೇಯುವುದೇ ಯೋಗ. ಕಾಶಿ ಯಾತ್ರೆಗೆ ಯಾರು ಎಷ್ಟೇ ನೆರವು ನೀಡಬಹುದು. ಆದರೆ ನಮಗೆ ಯೋಗ ಎಂಬುದು ಇಲ್ಲವಾದರೆ ಅದು ಪ್ರಾಪ್ತಿಯಾಗುವುದಿಲ್ಲ. ನಮ್ಮ ಪ್ರಯತ್ನಕ್ಕಿಂತ ಮೇಲೆ ಒಂದು ಅನುಗ್ರಹ ಇರುತ್ತದೆ. ಅದು ಲಭ್ಯವಾಗಬೇಕಾದರೆ ಯೋಗ ಇರಬೇಕು. ಒಂದು ವೇಳೆ ನಮಗೆ ಕಾಶಿಯಾತ್ರೆ ಸಾಧ್ಯವಿಲ್ಲ ಎಂದಾದರೆ ಅದಕ್ಕೆ ಇನ್ನೊಬ್ಬರನ್ನು ಹಳಿಯುವುದು ನಿಂದಿಸುವುದನ್ನು ಮಾಡಬಾರದು. ನಮಗೆ ಯೋಗವಿಲ್ಲ ಎಂದು ತೃಪ್ತರಾಗಬೇಕು. ಅದು ಭಗವಂತನ ಮೇಲಿಡುವ ವಿಶ್ವಾಸ. ಒಳಗೆ ಎಳೆದ ಉಸಿರು ಹೊರ ಬರುವ ಭರವಸೆ ಇಟ್ಟುಕೊಂಡು ನಾವು ಬದುಕಬೇಕು. ಅದು ನಮ್ಮ ಪ್ರಯತ್ನ....ಆದರೆ ಆ ಉಸಿರು ಹೊರ ಬರಬೇಕಾದರೆ ಭಗವಂತನ ಅನುಗ್ರಹ ಇರಬೇಕು. ಹೃದಯದಲ್ಲಿ ಭಗವಂತನ ಅಸ್ತಿತ್ವ ಇಲ್ಲದೇ ಹೋದರೆ ಆ ಉಸಿರು ಹೊರಬರಲಾರದು. ಹೃದಯದಲ್ಲಿ ಭಗವಂತ ನೆಲೆ ನಿಲ್ಲಬೇಕಾದರೆ ಅಲ್ಲಿ ಸದ್ಭಾವನೆ, ಸನ್ಮಮನಸ್ಸು ಸಂಕಲ್ಪ ಶುದ್ದಿ ಇರಬೇಕು. ಪರಿಶುದ್ದತೆ ಇಲ್ಲದೇ ಇರುವಲ್ಲಿ ನಾವು ನಮ್ಮ ಭಗವಂತನನ್ನು ಕಾಣಬಹುದೇ? ಸಾಧ್ಯವಿಲ್ಲ.  ಎಲ್ಲ ಸತ್ಕಾರ್ಯಗಳಿಗೂ ವಿಘ್ನ ಬರುವುದು ಸ್ವಾಭಾವಿಕ. ನಮ್ಮ ಪ್ರವೃತ್ತಿಯಿಂದ ವಿಘ್ನ ಬರದಂತೆ ಯತ್ನಿಸುವುದಷ್ಟೇ ನಮ್ಮ ಕೆಲಸ. ಕಾಶೀ ವಿಶ್ವನಾಥ ಮೊದಲು
ನಮ್ಮ ಮನಸ್ಸಿನಲ್ಲಿ ನೆಲೆಯಾಗಬೇಕು. ಆಗ ಹೊರಗೆಲ್ಲ ಆ ವಿಶ್ವಾನಾಥನ ಸಾನ್ನಿಧ್ಯ ದರ್ಶನವಾಗುತ್ತದೆ. ಕಾಶೀ ಯಾತ್ರೆ ಅರ್ಥ ಪೂರ್ಣವಾಗುತ್ತದೆ. 

            ನಮ್ಮ ಪ್ರಯತ್ನಗಳಲ್ಲಿ ವಿಘ್ನಗಳು ಒದಗದೆ ಇರಲಿ ಎಂದು ಪ್ರಾರ್ಥಿಸುವ. ಯಾರಿಗೂ ನೋವುಂಟು ಮಾಡದೇ,  ತೊಂದರೆಯನ್ನು  ನೀಡದೆ ಭಗವಂತನ ಅನುಗ್ರಹಕ್ಕೆ ನಾವು ಪಾತ್ರರಾಗೋಣ. ಇಷ್ಟಿದ್ದು ಲಭ್ಯವಾಗದೆ ಇದ್ದಲ್ಲಿ ಆ ಅಲಭ್ಯತೆ ನಮ್ಮಯೋಗ ಎಂದು ಭಗವಂತನಿಗೆ ಅರ್ಪಿಸೋಣ. ಯಾತ್ರೆಗೆ ಟಿಕೆಟ್ ತೆಗೆಯುವುದಷ್ಟೇ ನಮ್ಮ ಪ್ರಯತ್ನ,  ಅಲ್ಲಿ ದರ್ಶನವಾಗಬೇಕಾದರೆ ಯೋಗವಿರಬೇಕು. ಅದಕ್ಕೆ ನಾವು ಅರ್ಹರಾಗಬೇಕು. ಪರರನ್ನು ನಿಂದಿಸಿ, ನೋವುಂಟು ಮಾಡಿ ಆ ಅರ್ಹತೆಯನ್ನು ಕಳೆಯದೇ ಇರೋಣ. ಭಗವಂತನ ಅನುಗ್ರಹಕ್ಕೆ ಅರ್ಹತೆಯನ್ನು ಪಡೆಯುವುದಕ್ಕೆ ನಾವು ಎಲ್ಲಾ ಅಹಂಕಾರ ಅಹಮಿಕೆಯಿಂದ ದೂರವಾಗಬೇಕು. ಆವಾಗ ಯೋಗ ಲಭ್ಯವಾಗುತ್ತದೆ. ಇದಕ್ಕೆ ನೆರವು ನೀಡುವ ಹಸ್ತಗಳಿಗೆ ಕೃತಜ್ಞರಾದರೆ ಅಲ್ಲಿ ಭಗವಂತನ ಸಾನ್ನಿದ್ಧ್ಯವಿದೆ. ಬದಲಿಗೆ ಅವರು ಮರುಗಿದರೆ ನಮ್ಮ ಹಾದಿ ಮಲಿನವಾದಂತೆ. ನಮ್ಮ ಹೆಜ್ಜೆಗಳು ಅಪವಿತ್ರವಾಗಿ ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದಿಲ್ಲ. 


ಲೇಖಕರು ರಾಜಕುಮಾರ್ ಎಂ ಪೈವಳಿಕೆ.