ಹಿಂದೆ ಒಬ್ಬಾಕೆ ಕೇಳಿದರು
ಯೋಗ ಮಾಡಬೇಕಿದ್ದರೆ ಸ್ನಾನ ಮಾಡಿಯೇ ಮಾಡಬೇಕಾ? ಯೋಗ ಮಾಡಿದ
ಮೇಲೆ ಬೆವರಿ ಪ್ರೆಶ್ ನೆಸ್ ಹೋಗುತ್ತದೆ. ನನ್ನ ಅನಿಸಿಕೆಯಂತೆ
ಬೆಳಗ್ಗೆ ಎದ್ದು ಮೊದಲು ಸ್ನಾನ ಮಾಡುವುದೇ ಒಂದು ಯೋಗ.
ನಾನು ಆಕೆಯಲ್ಲಿ ಕೇಳಿದೆ, ಆಕೆ ಹೇಳಿದ ಆ ಪ್ರೆಶ್ ನೆಸ್ ಅಂದರೆ ಏನು? ಬಹುಶಃ
ಇಂದು ಯೋಗಾಭ್ಯಾಸ ಮಾಡುವವರು ಮೊದಲು ಪ್ರೆಶ್ ನೆಸ್ ಅಥವಾ ಪರಿಶುದ್ದತೆ, ಇದನ್ನು ಮೊದಲು ತಿಳಿಯಬೇಕು. ಯೋಗಾಭ್ಯಾಸದ ಮೂಲ ತತ್ವವೇ ಪರಿಶುದ್ಧತೆಯ ಕಡೆಗಿರುವ ಪಯಣ.
ಇದನ್ನು ತಿಳಿಯದೇ ಇಂದು ಮನಬಂದಂತೆ ಬಳಸಿ ಅದನ್ನು ಯೋಗ ಎಂದು ಕರೆಯಲಾಗುತ್ತದೆ.
ಬೆವರಿದೊಡನೆ ಪ್ರೆಶ್
ನೆಸ್ ಹೋಗುತ್ತದೆ ಎಂದಾದರೆ ನಾವು ದಿನದಯಾವ ಚಟುವಟಿಕೆಯನ್ನೂ ಮಾಡುವಂತಿಲ್ಲ. ಮಂಗಳೂರಿನಂತಹ ಪ್ರದೇಶದಲ್ಲಿ
ಸ್ನಾನ ಮಾಡಿ ಹೊರಬರಬೇಕಾದರೆ ಮತ್ತೆ ಬೆವರುವುದಕ್ಕೆ ಆರಂಭವಾಗುತ್ತದೆ. ! ಹಾಗಾದರೆ ಪ್ರೆಶ್ ನೆಸ್
ಅಂದರೆ ಏನು? ಮನಸ್ಸಿನ ಭಾವನೆ. ಇಲ್ಲಿ ಮನಸ್ಸೇ ಪರಿಶುದ್ದವಾದರೆ
ಯೋಚಿಸಿ. ನಾವು ದೇಹದ ಪರಿಶುದ್ದತೆಯನ್ನು ಬಯಸುತ್ತೇವೆ. ಸ್ನಾನಮಾಡಿದರೆ ಎಲ್ಲವೂ ಪರಿಶುದ್ದವಾದಂತೆ
ಭಾವಿಸುತ್ತೇವೆ. ಮನಸ್ಸು ಮಾತ್ರ ಮತ್ತದೇ ಭಾವನೆಗಳ ಹೊಯ್ದಾಟದಲ್ಲಿ, ತುಮುಲದಲ್ಲೇ
ಇರುತ್ತದೆ. ಇಲ್ಲಿ ಪರಿಶುದ್ದತೆಯ ಅರಿವು ಇರಬೇಕು.
ಅದರ ಪರಿಕಲ್ಪನೆ ಬದಲಾಗಬೇಕು.
ಪರಿಶುದ್ದ ಮನಸ್ಸು
ಅಂದರೆ ಏನು? ಪರಿಶುದ್ದ
ಮನಸ್ಸಿಗೆ ಯಾವುದೇ ಹೊರಾವರಣ ಇರುವುದಿಲ್ಲ.ಅಲ್ಲಿ ಅಸಹನೆ ಇರುವುದಿಲ್ಲ, ಕ್ರೋಧ ಮತ್ಸರ ಇತ್ಯಾದಿ ಬಾಧೆಗಳು ಇರುವುದಿಲ್ಲ. ಎಲ್ಲಾ ಭಾವನೆಗಳಿಂದ ಮುಕ್ತವಾಗುವಾಗ ಮನಸ್ಸು
ಪರಿಶುದ್ದವಾಗುತ್ತದೆ. ಮನಸ್ಸಿನಲ್ಲಿ ಕಲ್ಮಶ ತುಂಬಿಕೊಂಡು ಹೊರಗೆ ಶಾಂತತೆಯನ್ನು ತೋರಿದಲ್ಲಿ ಅದು
ಪರಿಶುದ್ಧ ಮನಸ್ಸಾಗುವುದಿಲ್ಲ. ದೇಹದ ಒಳಗಿನ ಗಾಯಕ್ಕೆ ಹೊರಗೆ ಔಷಧಿ ಲೇಪಿಸಿದಂತೆ
ಮನಸ್ಸು ಪರಿಶುದ್ದವಾಗುವುದು ಧ್ಯಾನದಲ್ಲಿ. ಧ್ಯಾನ ಎಂದರೆ
ಮನಸ್ಸನ್ನು ಖಾಲಿಗೊಳಿಸುವುದು. ಎಲ್ಲಾ ಭಾವನೆಗಳನ್ನು ಹೊರ ಹಾಕಿ ಮನಸ್ಸು ನಿರ್ಮಲದ ಕಡೆಗೆ ಹೋಗುವುದು.
ಮನುಷ್ಯ ಈ ಭೂಮಿಮೇಲೆ ಜನ್ಮ ಎತ್ತುವುದೆಂದರೆ ಕಲ್ಮಶಗಳನ್ನು ಹೊತ್ತುಕೊಳ್ಳುವುದೇ ಆಗಿದೆ. ಎಲ್ಲಾ ದುರಿತಗಳನ್ನು
ದೂರವಾಗಿಸಿದಾಗ ಅಮೃತತ್ವದ ಕಡೆಗೆ ಸಾಗುವುದೇ ಯೋಗ ಮಾರ್ಗ. ಮೃತ್ಯುಂಜಯ ಮಹಾ ಮಂತ್ರದಲ್ಲಿ ಹೇಳುವಂತೆ
ಮೃತ್ಯೋರ್ ಮುಕ್ಷೀ ಯಮಾಮೃತಾತ್...ಅಮೃತತ್ವದ ಕಡೆಗೆ ಸಾಗಬೇಕು. ಅಲ್ಲಿ ದೇಹ ನಾಶವಾಗುತ್ತದೆ, ಆತ್ಮ ಪರಿಶುದ್ದವಾಗಿ ಅಮೃತತ್ವದ ಕಡೆಗೆ ಸಾಗುತ್ತದೆ. ಹಾಗಾಗಿ ಯೋಗಾಭ್ಯಾಸ
ಎಂಬುದು ಪರಿಶುದ್ದಿಯ ಕಡೆಗೆ ಒಯ್ಯುತ್ತದೆ. ದಿನದ ಅರ್ಧ ತಾಸು ಧ್ಯಾನಕ್ಕಾಗಿ ಮೀಸಲಿಡಬೇಕು. ಮನಸ್ಸನ್ನು
ಎಲ್ಲಾ ಭಾವನೆಗಳಿಂದ ಮುಕ್ತಗೊಳಿಸುವಾಗ ಧ್ಯಾನ ಸಾಧ್ಯವಾಗುತ್ತದೆ. ಎಲ್ಲ ಕ್ರಿಯೆಯ ಬಗ್ಗೆ ನಿರಾಸಕ್ತನಾಗಿ
ಮನಸ್ಸಿನ ಅಂತರಂಗಕ್ಕೆ ಇಳಿಯುತ್ತಾ ಹೋಗುವುದು ಒಂದು ಅದ್ಭುತ ರಮ್ಯ ಪ್ರಯಾಣದಂತೆ.
ನೇರವಾಗಿ ಕುಳಿತು ಕಣ್ಣು ಮುಚ್ಚಿ, ಅಂದರೆ ಹೊರ ಪ್ರಪಂಚದಿಂದ ವಿಮುಖನಾಗುವುದು. ದೀರ್ಘವಾದ ಉಸಿರಾಟ ಶ್ವಾಸ ನಿಶ್ವಾಸದಲ್ಲಿ ಗಮನ
ಕೊಡುವುದು, ಒಂದು ಬಾರಿ ಉಸಿರಾಡಿದಾಗ ದೇಹದಲ್ಲಿ ಏನೆಲ್ಲ ಪರಿಣಾಮ ಉಂಟಾಗುತ್ತದೆ
ಎಂಬುದನ್ನು ಗಮನಿಸುವುದು ಅದರಲ್ಲೇ ತಲ್ಲೀನ ನಾಗುತ್ತಿದ್ದಂತೆ ಹೊರಗಿನ ಸದ್ದುಗದ್ದಲಗಳ ಬಗ್ಗೆ ಗಮನ
ಕಡಿಮೆಯಾಗುತ್ತದೆ. ಮನಸ್ಸು ಅಂತರಂಗದ ಬಗ್ಗೆ ಯೋಚಿಸುತ್ತದೆ. ಅಂತರಂಗದಲ್ಲಿ ಉಂಟಾಗುವ ಆ ಭಾವವೇ ಪರಬ್ರಹ್ಮ
ಸ್ವರೂಪ. ಇದು ಒಮ್ಮೆ ಅನುಭವಕ್ಕೆ ಬಂತೋ ನಾವು ಗೆದ್ದು ಬಿಟ್ಟೆವು. ಕೇವಲ ಕೆಲವು ಕ್ಷಣಗಳನ್ನು ಈಸ್ಥಿತಿಯಲ್ಲಿ
ಕಳೆದರೆ ಸಾಕು, ಮತ್ತೆ ನಿಮ್ಮ ಎಲ್ಲ ಆಗುಹೋಗುಗಳನ್ನು, ನಮ್ಮ ಮನಸ್ಸಿನ ಭಾವಗಳನ್ನು ಇದು ನಿಯಂತ್ರಿಸುತ್ತದೆ. ನನಗೆ ಪ್ರತಿ ಬಾರಿ ಸಿಟ್ಟು ಬಂದಾಗ
ನನ್ನ ಮನಸ್ಸು ಯೋಚಿಸುತ್ತದೆ ನನ್ನ ಮನಸ್ಸು ಪರಿಶುದ್ದತೆಯನ್ನು ಕಳೆದುಕೊಳ್ಳುತ್ತದೆ. ಒಂದು ಬಾರಿ
ಮನಸ್ಸು ಪರಿಶುದ್ದತೆಯನ್ನು ಕಳೆದುಕೊಂಡರೆ ಮತ್ತೆ ಮನಸ್ಸು ಪರಬ್ರಹ್ಮವನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಹಾಗಾಗಿ ಪ್ರತಿ ಬಾರಿ ಸಿಟ್ಟು ಕ್ರೋಧ ಉಂಟಾಗುವ ಸಂದರ್ಭ ಬಂದಾಗ ಅದರಿಂದ ದೂರ ಹೋಗುವಂತೆ ಮನಸ್ಸಿನ
ಅಂತರಂಗದಲ್ಲಿ ಪ್ರೇರೇಪಣೆ ಉಂಟಾಗುತ್ತದೆ. ಪರಿಶುದ್ದತೆ
ನಮ್ಮ ಮನಸ್ಸಿನ ಭಾವನೆಯನ್ನು ಹೊಂದಿಕೊಂಡಿರುತ್ತದೆ. ಸ್ನಾನ ಮಾಡಿ ದೇಹದ ಕೊಳೆಯನ್ನೆಲ್ಲಾ ತಿಕ್ಕಿ
ತಿಕ್ಕಿ ತೊಳೆದರೆ ನಾವು ಪರಿಶುದ್ದವಾಗಿದ್ದೇವೆ ಎನ್ನುವ ಕಲ್ಪನೆ ಏನೋ ಬರಬಹುದು, ಮನಸ್ಸು ಅಸಹನೆ ಅತೃಪ್ತಿ ಚಿಂತೆಯಿಂದ ಮುಳುಗಿದ್ದರೆ ನಾವು ಶುದ್ದರಾಗುವುದು ಕೇವಲ ಭ್ರಮೆಯಾಗಿರುತ್ತದೆ.
ಇವತ್ತು ಅಧಿಕ ಮಂದಿ
ದೇಹದ ತೂಕ ಜಾಸ್ತಿಯಾದರೆ, ಬೊಜ್ಜು ಬೆಳೆದರೆ ಯೋಗಾಭ್ಯಾಸದತ್ತ ಮುಖ ಮಾಡುತ್ತಾರೆ.
ಯಾವುದೋ ಪ್ರೇರಣೆ ಪಡೆದು ಅವೈಜ್ಞಾನಿಕವಾಗಿ ಆಸನಗಳನ್ನು ವ್ಯಾಯಾಮಗಳನ್ನು ಮಾಡುತ್ತಾರೆ. ಪ್ರತಿದಿನ
ದೇಹದ ಭಾರ ನೋಡಿ ದೇಹ ಭಾರ ಕಡಿಮೆಯಾಯಿತೇ ಎಂದು ನೋಡುತ್ತಾರೆ. ಆದರೆ ಒಂದು ಅವರಿಗೆ ಅರಿವಾಗುವುದಿಲ್ಲ,
ಈ ಸಂದರ್ಭಗಳಲ್ಲಿ ಮನಸ್ಸು ಒಂದು ಅಸಹನೆ ಅಸೌಕರ್ಯವನ್ನು ಅತೃಪ್ತಿಯನ್ನು ಅನುಭವಿಸುತ್ತದೆ.
ಮನಸ್ಸಿನ ಮೂಲೆಯಲ್ಲಿ ಒಂದು ಬಗೆಯ ಆತಂಕ ಮನೆ ಮಾಡಿರುತ್ತದೆ. ನನ್ನ ಅನುಭವದಿಂದ ಹಲವು ಸಲ ಹೇಳಿದ್ದೇನೆ,
ಯೋಗಾಭ್ಯಾಸ ಇರುವುದು ಅರೋಗ್ಯಕ್ಕಾಗಿ
ಅಲ್ಲ. ಅದು ಜೀವನ ಪರಿಶುದ್ದತೆಗಾಗಿ. ಅದರಲ್ಲಿ ಆರೋಗ್ಯ ಎಂಬುದು ಸಣ್ಣ ಅಂಗ. ಆದರೆ ಈಗ ಆರೋಗ್ಯವೆ ಪ್ರಧಾನವಾಗಿ ಯೋಗಾಭ್ಯಾಸದ ಮೂಲ ತತ್ವವೇ
ಅಲಕ್ಷಿಸಲಾಗುತ್ತದೆ.
ತನ್ನ ಮನಸ್ಸು ಪರಿಶುದ್ಧವಾಗಿದೆ,
ನನ್ನಲ್ಲಿ ಯಾವುದೇ ಆತ್ಮವಂಚನೆಗಳಿಲ್ಲ ಎಂದು ತಿಳಿದುಕೊಂಡವರಿಗೆ ಕೆಲವು ಘಳಿಗೆಗೂ ಧ್ಯಾನದಲ್ಲಿ ಕುಳಿತುಕೊಳ್ಳುವುದು
ಸಾಧ್ಯವಾಗುವುದಿಲ್ಲ. ಯಾಕೆಂದರೆ ಮನಸ್ಸಿನ ಸೆಳೆತ. ಹುಳುಗಳು ಕ್ರಿಮಿಗಳು ಕಲ್ಮಷದಲ್ಲೇ ಹುಟ್ಟಿಕೊಳ್ಳುವಂತೆ
ನಮ್ಮ ಯೋಚನೆಗಳು ಕಲ್ಮಷ ಮನಸ್ಸಿನಲ್ಲೇ ಹುಟ್ಟಿಕೊಳ್ಳುತ್ತವೆ.
ಯೋಗಾಭ್ಯಾಸದಲ್ಲಿ
ಪ್ರಾಣಾಯಾಮ ಎನ್ನುವುದು ಅತ್ಯಂತ ಪ್ರಧಾನ. ನಮ್ಮ ಅನಿಯಮಿತ ಅಸಹಜ ಉಸಿರಾಟವನ್ನು ಸಮರ್ಪಕ ಗೊಳಿಸುವುದೇ ಪ್ರಾಣಾಯಾಮ. ಮನುಷ್ಯನ
ದೇಹದ ಶ್ವಾಸ ನಿಶ್ವಾಸ ಎಂಬ ಕ್ರಿಯೆ ದೇಹವನ್ನು ಶುದ್ದಿಗೊಳಿಸುವ ಕ್ರಿಯೆ. ಬಿಂದಿಗೆ ತೊಳೆದು ಅದರಲ್ಲಿ
ಶುದ್ದ ನೀರು ಹಾಕುವಂತೆ. ಇದು ದೇಹವನ್ನು ಶುದ್ದಗೊಳಿಸುತ್ತದೆ. ಹಾಗಾಗಿಯೇ ನಾಡಿ ಶೋಧನ ಎಂಬ ಕ್ರಿಯೆಗೆ
ಇಲ್ಲಿ ಮಹತ್ವ ಸಿಗುತ್ತದೆ. ದೇಹ ನಾಡಿಗಳನ್ನೆಲ್ಲ ಈ ಸೂಕ್ಷ್ಮ ಕ್ರಿಯೆ ಶುದ್ದ ಗೊಳಿಸುತ್ತದೆ. ಒಂದು
ಉಸಿರಾಟದಲ್ಲಿ ಪರಿಶುದ್ದ ವಾಯು ದೇಹಕ್ಕೆ ಸೇರಿ ಅಲ್ಲಿದ್ದ ಅಶುದ್ದ ವಾಯು ಹೊರ ಹಾಕಲ್ಪಡುತ್ತದೆ. ಸಾಮಾನ್ಯ
ಉಸಿರಾಟದಲ್ಲಿ ದೇಹ ಸಂಪೂರ್ಣ ಶುದ್ದಿಯಾಗುವುದಿಲ್ಲ.
ಅದಕ್ಕಾಗಿ ಪ್ರಾಣಾಯಾಮ ಮಾಡಬೇಕು. ಸ್ವಚ್ಛವಾದ ತಂಬಿಗೆಯಲ್ಲಿ
ಅಮೃತ ಸದೃಶವಾದ ಹಾಲನ್ನು ಹಾಕುವಾಗ ಅದನ್ನು ಸ್ವಚ್ಛಗೊಳಿಸುವಂತೆ ಪ್ರಾಣಾಯಾಮ. ಆನಂತರ ನಾವು ಏನು ವ್ಯಾಯಾಮ
ಮತ್ತೀತರ ಚಟುವಟಿಕೆಯನ್ನು ಮಾಡುತ್ತೇವೆಯೋ ಅದು ಹಾಲಿನಂತೆ. ಪರಿಶುದ್ದವಿಲ್ಲದ ದೇಹದಲ್ಲಿ ವ್ಯಾಯಾಮ
ಎಂಬ ಚೈತನ್ಯವನ್ನು ತುಂಬಿದರೆ ಅದರ ಪರಿಣಾಮ ಸಮರ್ಪಕವಾಗಿರುವುದಿಲ್ಲ. ಹಾಗಾಗಿ ಪ್ರಾಣಾಯಾಮ ಉಳಿದ ಎಲ್ಲ
ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ. ನಾವು ದೇಹದಿಂದ
ಸ್ವಚ್ಛವಾಗುವುದು ಬಹಳ ಸುಲಭ, ಆದರೆ ಮನಸ್ಸಿನಿಂದ ಸ್ವಚ್ಚವಾಗುವುದು ಬಹಳ ಕಠಿಣ. ಕಠಿಣ
ಮಾತ್ರವಲ್ಲ ಅದು ಸಾಧ್ಯವಾಗುವುದೇ ಇಲ್ಲ. ಮನಸ್ಸು ಸ್ವಚ್ಛ ಇಲ್ಲವಾದರೆ ನಾವು ಪರಿಶುದ್ದರಾಗಿದ್ದೇವೆ
ಎಂದು ತಿಳಿದುಕೊಳ್ಳುವುದು ಮೂರ್ಖತನವಾಗುತ್ತದೆ. ನಾವು ಶುದ್ದಾತ್ಮರಾಗುವುದು ಬದುಕಿನ ಲಕ್ಷ್ಯವಾಗಿದೆ.
ಒಂದು ಪರಿಶುದ್ದ ಭಾವ ಬಂದರೆ ಮತ್ತೆ ನಮ್ಮ ಮನಸ್ಸು ಮಾಲಿನ್ಯದತ್ತ ಮುಖ ಮಾಡುವುದಿಲ್ಲ. ಕ್ರೋಧ ಅಸಹನೆ
ಅತೃಪ್ತಿ ಇದು ಯಾವುದೂ ಇಲ್ಲದ ಮನಸ್ಸು ಸದಾ ಶಾಂತವಾಗಿರುತ್ತದೆ. ಶಾಂತವಾಗಿರುವುದೇ ಪರಿಶುದ್ಧತೆಯ
ಸಂಕೇತ.
No comments:
Post a Comment