Tuesday, February 14, 2023

ಏಕಮೇವಾದ್ವಿತೀಯ

ಒಂದು ಕಥಾ ಸೂಕ್ಷ್ಮದಿಂದ ಈ ಲೇಖನ ಆರಂಭಿಸಿದರೆ ಸೂಕ್ತ ಅನ್ನಿಸಿತು.  ಬಹಳ ಹಿಂದಿನ ಕಾಲದ ಕಥೆ ಇದು.  ಒಬ್ಬ ತನ್ನ ಮಿತ್ರನೊಂದಿಗೆ ಗೋವಾಕ್ಕೆ ಹೋಗುತ್ತಾನೆ. ಗೋವಾ ಎಂಬುದು ಕೇವಲ ಸಾಂಕೇತಿಕ. ಅದು ಭಾರತದಲ್ಲಿ ಎಲ್ಲಿಗಾದರೂ ಆಗಬಹುದು. ಅದು ಬಹಳ ಸಮಯದ ಕನಸು . ಆ ಮಿತ್ರನಿಗೆ ಗೋವಾದಲ್ಲಿ ಸಂಭಂಧಿಗಳಿದ್ದರು. ಯಾವುದೋ ಮದುವೆ ಸಮಾರಂಭಕ್ಕೆ ಮಿತ್ರ ಹೋಗುವಾಗ ಈತನೂ ಮಿತ್ರನ ಕೇಳಿಕೆಯಂತೆ ಜತೆಯಲ್ಲೇ ಹೊರಡುತ್ತಾನೆ.  ಅಲ್ಲಿ ಮದುವೆ ಮನೆಯಲ್ಲಿ ಮಿತ್ರನೊಂದಿಗೆ ಜತೆಯಾಗುತ್ತಾನೆ. ಅನಿವಾರ್ಯವಾಗಿ ಅಲ್ಲಿ ಫೋಟೋಗ್ರಾಫರ್ ನಂತೆ ವಿವಿಧ ಫೋಟೋಗಳನ್ನು ತೆಗೆಯುತ್ತಾ ಅಲ್ಲಿನ ಅಪರಿಚಿತರೊಂದಿಗೆ ಬೆರೆಯುತ್ತಾನೆ. ಹಾಗೆ ಇರುವಾಗ ಅಲ್ಲಿ ಚಿಗರೆಯಂತೆ ಓಡಾಡುವ ಹೆಣ್ಣೊಬ್ಬಳನ್ನು ನೋಡುತ್ತಾನೆ. ಆಕೆ ಯಾರು? ಯಾವ ಸಂಭಂಧ ? ಒಂದೂ ಅರಿವಿರುವುದಿಲ್ಲ. ಕೇವಲ ಕಿರುನಗುವಿನ ವಿನಿಮಯದೊಂದಿಗೆ ಅವರು ಆತ್ಮೀಯರಾಗಿಬಿಡುತ್ತಾರೆ. ಕಷ್ಟ ಪಟ್ಟು ಆಕೆಯೊಂದಿಗೆ ಮಾತನಾಡುತ್ತಾನೆ. ಆಕೆ ಮರಾಠಿಯಲ್ಲದೇ ಬೇರೆ ಭಾಷೆ ಬರುವುದಿಲ್ಲ. ಮರಾಠಿಯನ್ನು ಜನುಮದಲ್ಲಿ ಮೊದಲ ಬಾರಿಗೆ ಕೇಳುವ ಈತನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಆದರೆ ಪರಿಚಯ ಕಣ್ಣ ಭಾಷೆ ಎಂಬುದು ಭಾಷಾತೀತವಾಗಿ ಅಲ್ಲಿ ಮನಸ್ಸೇ ಒಂದು ಭಾಷೆಯನ್ನು ಸೃಷ್ಟಿಸುತ್ತದೆ. ಆಕೆ ಮರಾಠಿಯಲ್ಲಿ ಹೇಳಿದ್ದನ್ನು ಈತ ಕನ್ನಡದಲ್ಲಿ ಅರ್ಥವಿಸುತ್ತಾನೆ. ಕೇವಲ ಕಣ್ಣಂಚಿನ ಭಾಷೆ.  ಅವರಿಬ್ಬರು ಬಹಳ ಹತ್ತಿರವಾದರೂ ಕಿರುನಗು ಬಿಟ್ಟರೆ ಅವರಲ್ಲಿ ಬೇರೆ ಸಂಭಾಷಣೆ ಸಾಧ್ಯವಾಗುವುದಿಲ್ಲ. ಮದುವೆ ಕಾರ್ಯಕ್ರಮ ಮುಗಿಯುತ್ತದೆ. ಎಲ್ಲರೂ ಚದುರಿ ಹೋಗುತ್ತಾರೆ. ಮಿತ್ರನೊಂದಿಗೆ ಈತನೂ ಅಲ್ಲಿಂದ ಹೊರಡುತ್ತಾನೆ. ಗೋವದಲ್ಲಿ ಮತ್ತೂ ಒಂದೆರಡು ದಿನ ತಂಗಿ ತಿರುಗಾಡುವ ಕಾರ್ಯಕ್ರಮ ಇರುತ್ತದೆ. ಈತ ಮಿತ್ರನಲ್ಲಿ ಆ ಹೆಣ್ಣಿನ ಬಗ್ಗೆ ವಿಚಾರಿಸುತ್ತಾನೆ. ಆತನಿಗೂ ಆಕೆ ಯಾರು ಎಂದು ಅರಿವಿಲ್ಲ. ಹಾಗಂತ ಆ ಮಿತ್ರನ ಸಂಭಂಧಿಗಳಿಗೂ ಅದು ತಿಳಿದಿರುವುದಿಲ್ಲ. ಹಾಗಾಗಿ ಆ ಹೆಣ್ಣು ನಾಪತ್ತೆ ಅಂದರೆ ವಿಳಾಸವಿಲ್ಲದ ಹೆಣ್ಣಿನಂತೆ ಇವರಿಗೆ ಭಾಸವಾಗುತ್ತದೆ.  ಎರಡು ದಿನ ಕಳೆದು ಇನ್ನೆನು ಗೋವ ಬಿಡುವ ಸನ್ನಿವೇಶ ಬರುತ್ತದೆ. ಕೊನೆ ಘಳಿಗೆಯಲ್ಲಿ ಆ ಹೆಣ್ಣು ರೈಲ್ವೇ ನಿಲ್ದಾಣದಲ್ಲಿ ಕಾಣ ಸಿಗುತ್ತಾಳೆ. ಹಲವು ಘಟನೆಗಳಿಗೆ ರೈಲು ನಿಲ್ದಾಣ ಸಾಕ್ಷಿಯಾದಂತೆ ಇಲ್ಲೂ ಮದುವೆ ಮನೆಯ ಸಿಂಗಾರದಲ್ಲಿದ್ದ ಹೆಣ್ಣು ಅಲ್ಲಿ ಬಹಳ ಸರಳ ಉಡುಗೆಯಲ್ಲಿ ಆಕರ್ಷಕವಾಗಿ ಕಾಣುತ್ತಾಳೆ. ಆಕೆಯೊಂದಿಗೆ ಮಾತನಾಡುತ್ತಾನೆ. ಈತ ಕನ್ನಡ, ಆಕೆ ಮರಾಠಿ ನಡುವೆ ಯಾವ ಭಾಷೆಯಾಗುತ್ತದೆ ಎಂಬ ಖಚಿತತೆ ಇರುವುದಿಲ್ಲ. ಹೀಗಿದ್ದೂ ಮನಸ್ಸಿನ ಭಾವನೆಯನ್ನು ಈತ ವ್ಯಕ್ತ ಪಡಿಸುತ್ತಾನೆ. ನನಗೆ ನೀನು ಬಹಳ ಇಷ್ಟವಾಗಿದ್ದಿಯಾ ಎಂದು ಹೇಳುತ್ತಾನೆ. ಆದರೆ ಅದಕ್ಕೆ ಆಕೆ ಪ್ರತಿಕ್ರಿಯೆ ಕೊಡಬೇಕಲ್ಲ.....ಕೊನೆಘಳಿಗೆಯವರೆಗೂ ಹೆಣ್ಣಾದ ಆಕೆಗೆ ಸಾಧ್ಯವಾಗುವುದಿಲ್ಲ. ಉಪಾಯವಿಲ್ಲದೇ ಈತ ತನ್ನ ವಿಳಾಸವನ್ನು ಕೊಟ್ಟು ನಾನು ಇಷ್ಟವಾದರೆ ಪತ್ರ ಬರೆ ಎಂದು ಅದು ಹೇಗೋ ಆಂಗಿಕವಾಗಿ ಹೇಳುತ್ತಾನೆ. ಒಂದು ಸಿನಿಮಾದ ಕಥೆಯಂತೆ ಭಾಸವಾಗುತ್ತಿದೆಯಲ್ಲ. ಕೊನೆಯ ಕ್ಷಣವಾದುದರಿಂದ  ಆತ ವಿದಾಯ ಹೇಳುತ್ತಾನೆ. 


ಊರಿಗೆ ಬಂದನಂತರ ಒಂದು ದಿನ ಆಕೆಯ ಪತ್ರ ಬರುತ್ತದೆ. ಮುದ್ದಾದ ಅಕ್ಷರದ ಆ ಪತ್ರ ಕೈ ಸೇರುತ್ತಿದ್ದಂತೆ ಈತ ರೋಮಾಂಚನಗೊಳ್ಳುತ್ತಾನೆ. ಹಲವು ಭಾವನೆಗಳು ನಿರೀಕ್ಷೆಗಳು ಕನಸುಗಳು ಹುಟ್ಟಿಕೊಳ್ಳುತ್ತವೆ. ಇನ್ನೆನು ಪತ್ರ ತೆರೆದು ಓದಬೇಕು ಎನ್ನುವಾಗ ಬಹಳ ಹತಾಶೆಯಾಗುತ್ತದೆ. ಯಾಕೆಂದರೆ ಅದು ಮರಾಠಿ ಭಾಷೆಯಲ್ಲಿ ಬರೆದಿರುತ್ತಾಳೆ!! ಛೇ ಬರೆದ ಒಂದೆರಡು ಸಾಲು....ಅದೂ ಎನೆಂದು ಅರ್ಥವಾಗುವುದಿಲ್ಲ. ಆಕೆಗೆ ಇಷ್ಟವಿರಬಹುದೇ? ಇಲ್ಲಾ...ಯಾರಲ್ಲಿ ಕೇಳುವುದು? ಮಿತ್ರನಿಗೂ ಮರಾಠಿ ಓದುವುದಕ್ಕೆ ಬರುವುದಿಲ್ಲ. ಮುದ್ರಿಸಿದ ಬರಹಕ್ಕಿಂತ ಕೈ ಬರಹ ಓದುವುದು ಬಹಳ ಕಷ್ಟ . ಯಾರಲ್ಲಿ ಕೇಳುವುದು? ಬಹಳ ನಿರಾಶೆಯಾಗುತ್ತದೆ. ಈಗಿನಂತೆ ಮೊಬೈಲ್ ಪೋನ್ ಇಲ್ಲದಂತಹ ಕಾಲ. ಏನಿದ್ದರೂ ಕಾಗದ ಒಂದೇ ಮಾಧ್ಯಮ. ಇದು ಪ್ರೇಮ ಪತ್ರವಾದುದರಿಂದ ಬೇರೆ ಯಾರಲ್ಲೂ ಓದಿಸುವಂತೆಯೂ ಇಲ್ಲ. ಸದಾ ಕನ್ನಡ ಕನ್ನಡ ಎನ್ನುವಂತಿದ್ದ ಆತನಿಗೆ ಎಲ್ಲದಕ್ಕಿಂತಲೂ ಮೀರಿದ ಭಾವನೆ ಎಂಬುದು ದೊಡ್ಡದು ಎನಿಸುತ್ತದೆ.  ಈ ಕಥೆಯ ಅಂತ್ಯವನ್ನು ಹೇಗೂ ಚಿತ್ರಿಸಬಹುದು. ಸುಂದರ ಪ್ರೇಮ ಕಥೆಯಂತೆ ಇದನ್ನು ತೋರಿಸಬಹುದು...ಭಾಷೆ,  ಅದು ಮನಸ್ಸನ್ನು ಅರಿಯುವುದಕ್ಕಿರುವ ಮನುಷ್ಯ ನಿರ್ಮಿತ ಸಾಧನ. ಅದಕ್ಕೆ ದೇಶ ಪರದೇಶದ ಸೀಮೆ ಇರುವುದಿಲ್ಲ. 

ಈಗ ಭಾಷೆಯಕಾರಣದಿಂದ ನಮ್ಮೊಳಗೆ ದ್ವೇಷ ಬೆಳೆಯುತ್ತದೆ. ಕನ್ನಡಿಗರು ವಾಸ್ತವದಲ್ಲಿ ಎಲ್ಲಾ ಭಾಷೆಯನ್ನು ಮುಕ್ತವಾಗಿ ಸ್ವೀಕರಿಸುವವರು. ಅದರಲ್ಲೂ ನಮ್ಮ ಮಂಗಳೂರಿಗರಿಗೆ ಅದೊಂದು ಪ್ರಕೃತಿ ದತ್ತ ಕೊಡುಗೆ. ಹಲವು ಭಾಷೆಗಳನ್ನು ತಿಳಿದವರು ಇಲ್ಲಿ ಸಹಜ.   ಮದುವೆಯಾದ ಹೊಸದರಲ್ಲಿ ನನ್ನಾಕೆಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ನನಗಾದರೋ ಐದಾರು ಭಾಷೆ. ಹಾಗಿರುವಾಗ ಆಕೆಯೆ ಎದುರು ಯಾರ ಜತೆಗಾದರೂ ತುಳುವಿನಲ್ಲಿ ಮಾತನಾಡಿದರೂ ಆಕೆಯನ್ನು ಬೇರೆ ಮಾಡಿದ ಅನುಭವ ಆಕೆಯದ್ದಾಗಿರುತ್ತಿತ್ತು. ಮನೆಯೊಳಗೆ ಸಂಭಂಧಿಗಳಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಆಕೆಯನ್ನು ಪ್ರತ್ಯೇಕಿಸಿದಂತಾಗುತ್ತಿತ್ತು. ಭಾಷೆ ಎಂಬುದು ಸೀಮಾತೀತವಾಗಿ ಮನುಷ್ಯನನ್ನು ಬೆಸೆಯಬೇಕು. ಇಲ್ಲಿ ಬೆಸೆಯುವುದಕ್ಕೆ ಭಾಷೆ ಎಂದೂ ತೊಡಕಾಗಬಾರದು. ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನ ಇರಬೇಕು. ಹಾಗೇ ಇನ್ನೊಂದು ಭಾಷೆಯ ಬಗ್ಗೆ ಗೌರವವೂ ಇರಬೇಕು. ಅದು ಜಾತಿ ಧರ್ಮದ ವಿಷಯಕ್ಕೆ ಬಂದರೂ ಅಷ್ಟೇ. ಅನ್ಯ ಧರ್ಮದವರೊಂದಿಗೆ ಊಟ ಮಾಡಿದರೆ, ಸಂಭಂಧ ಬೆಳೆಸಿದರೆ ಜಾತಿಭೇದ ನಾಶವಾಗುವುದಿಲ್ಲ. ಅದು ಎಲ್ಲೋ ಒಂದು ಕಡೆ ಭೇದ ಅರಿವಿಲ್ಲದೇ ಹುದುಗಿರುತ್ತದೆ.  ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾಗಿ ಮನೆಗೆ ಕರೆತಂದರೂ  ವಿಭಿನ್ನ ಸಂಸ್ಕಾರ ಪ್ರತ್ಯೇಕಿಸುತ್ತದೆ. ಹಾಗಿರುವಾಗ ಇಲ್ಲಿ ಬೆಸೆಯುವುದು ಯಾವುದು? ಅನ್ಯ ಧರ್ಮವನ್ನು ಕೀಳಾಗಿ ಕಾಣದಿದ್ದರೆ  ಜಾತಿ ಭೇದದ ಪ್ರಶ್ನೆಯೇ ಬರುವುದಿಲ್ಲ.  ಅನ್ಯ ಧರ್ಮದ ಬಗ್ಗೆ ತಾತ್ಸಾರವಿಲ್ಲದೇ ಗೌರವ ಇದ್ದರೆ ಯಾವುದೇ ಭೇದ ವೆತ್ಯಾಸಗಳೂ ಗೌಣವಾಗುತ್ತವೆ. ಯಾವುದೇ ಧರ್ಮ ಅಥವಾ ಭಾಷೆಯನ್ನು ಹೀನವಾಗಿ ಕಾಣುವ ಮನೋಭಾವ ದೂರವಾದರೆ ಸಾಕು ಬೇರೆ ಕುಳಿತು ಊಟಮಾಡಿದರೂ ಮನಸ್ಸು ಒಂದಾಗಿರುತ್ತದೆ. ಭಾಷೆಗೂ ಇದು ಅನ್ವಯ. 

ಯಾವುದೇ ಜಾತಿ,  ಧರ್ಮ,  ಭಾಷೆಯಾದರೂ ಅದು ಮನುಷ್ಯನನ್ನು ಪ್ರತ್ಯೇಕಿಸುವ ವಸ್ತುಗಳಲ್ಲ. ಅದರ ಹಾದಿಯ ಗಮ್ಯ ಎಲ್ಲವೂ ಒಂದೇ. ನಮ್ಮ ಮನೋಭಾವವೇ ಅದನ್ನು ಪ್ರತ್ಯೇಕಿಸುತ್ತದೆ. ಭಾರತದ ಸಂಸ್ಕೃತಿ ಇದನ್ನು ಬೆಸೆಯುವುದರಲ್ಲಿದೆ ಎಂಬುದನ್ನು ಇತಿಹಾಸವೇ ಹೇಳುತ್ತದೆ. ಯಾವುದೇ ಧರ್ಮದಲ್ಲೂ ಒಳ ಪಂಗಡಗಳಿರುತ್ತವೆ. ವಿವಿಧ ಸಂಸ್ಕೃತಿಗಳು ಇರುತ್ತವೆ. ಅಲ್ಲೆಲ್ಲ ನಮ್ಮ ಜಾತಿ ಧರ್ಮ ಎಂಬ ಅಭಿಮಾನ ಇದ್ದರೆ ತಪ್ಪಲ್ಲ. ಆದರೆ ಮತ್ತೊಂದು ಧರ್ಮ,೯ ಭಾಷೆ ಕೀಳು ಎಂದು ಕಂಡರೆ ಅದು ಅಪರಾಧ. ಈ ಮನೋಭಾವ ಸ್ನೇಹ ಪ್ರೇಮವನ್ನು ನಾಶ ಮಾಡುತ್ತದೆ. ದ್ವೇಷವನ್ನು ಮತ್ಸರವನ್ನೂ ಹುಟ್ಟು ಹಾಕುತ್ತದೆ. ಈ ಭೇದ ಭಾವ ಕೇವಲ ಮನುಷ್ಯನಿಗೆ ಮಾತ್ರ. ಪ್ರಾಣಿಗಳಿಗೆ ಯಾವ ಭಾಷೆ ಇದೆ? ಯಾವ ಧರ್ಮವಿದೆ? ತೆಂಗಿನ ಮರ ಎಲ್ಲಿ ಬೆಳೆದರೂ ಅದು ಕಲ್ಪವೃಕ್ಷ. ಅದು ಅಮೃತವನ್ನೇ ನೀಡುತ್ತದೆ. ಮನುಷ್ಯ ಮಾತ್ರ ಅದರಲ್ಲಿ ವಿಷ ಬೆರೆಸುತ್ತಾನೆ. 

ಇತ್ತೀಚೆಗೆ ಯಾವುದೋ ಬ್ಯಾಂಕ್ ಒಂದಕ್ಕೆ ನನ್ನ ಪರಿಚಯಸ್ಥರೊಂದಿಗೆ ಹೋಗಿದ್ದೆ. ಅವರಿಗೆ ಕನ್ನಡ ಅಲ್ಪ ಸ್ವಲ್ಪ ಇಂಗ್ಲೀಷು ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಅಲ್ಲಿ ಬ್ಯಾಂಕ್ ನ ಸಿಬ್ಬಂದಿಯಲ್ಲಿ ಒಬ್ಬರು ಉತ್ತರ ಭಾರತದಿಂದ ಬಂದ ಹಿಂದಿಯವರಾಗಿದ್ದರು. ಕೆಲವು ದಿನದ ಉದ್ಯೋಗದ ನಿಮಿತ್ತ ಬಂದವರಿಗೆ ಭಾಷೆ ಅನಿವಾರ್ಯವಾಗಿ ಕಂಡಿರಲಿಲ್ಲ. ಇಲ್ಲಿ ಇದ್ದುಕೊಂಡು ಕನ್ನಡ ಅರಿವಿರಬೇಕಾಗಿರುವುದೇನೋ ಸತ್ಯ. ಆದರೆ ಅರಿವಿಲ್ಲದೇ ಇರುವುದು ಮಹಾಪರಾಧವೇನು ಅಲ್ಲ.  ಅವರು ಹಿಂದಿಯವರು ಎಂದು ತಿಳಿದ ಕೂಡಲೆ ನನ್ನೊಂದಿಗೆ ಬಂದವರಿಗೆ ಸಹನೆ ಕಟ್ಟೆಯೊಡೆಯಿತು. ರೇಗಾಡುವುದಕ್ಕೆ ತೊಡಗಿದರು. ನಾನು ಆದಷ್ಟು ಸಾಂತ್ವನ ಮಾಡಿದೆ. ಆದರೂ ಪ್ರಯೋಜನವಿಲ್ಲ. ತನ್ನ ಪರಿಸರ ಸಂಭಂಧಿಗಳನ್ನು ಎಲ್ಲವನ್ನೂ ಹೊಟ್ಟೆ ಪಾಡಿಗೆ ಬಿಟ್ಟು ಬಂದ ಬ್ಯಾಂಕ್ ಸಿಬ್ಬಂದಿಯ ಅಸಹಾಯಕತೆ ನನಗೆ ಕಂಡಿತು. ಭಾಷೆ ಎಂಬುದು ದ್ವೇಷಕ್ಕೆ ಕಾರಣವಾಗಿಬಿಟ್ಟಿತು. ನಾನು ಅವರನ್ನು ಕರೆದುಕೊಂಡು ಸಮಾಧಾನ ಮಾಡಿದೆ. ಭಾಷೆ ದ್ವೇಷಕ್ಕೆ ಕಾರಣವಾಗಬಾರದು. ಈಗ ನಿಮ್ಮ ಭಾಷೆಯಲ್ಲೆ ನಿಮಗೆ ಕೇಳುತ್ತೇನೆ...ಏಕಮೇವಾದ್ವಿತೀಯ ಎಂದರೆ ಏನು? 

ಏಕಮೇವಾದ್ವಿತೀಯ...ಶುದ್ದ ಕನ್ನಡದಂತೆ ಭಾಸವಾಗಿ ಅವರು ಪ್ರಪ್ರಥಮ, ಮೊದಲನೆಯದ್ದು ಹೀಗೆ ತೊದಲಿದರು. ನಾನು ಹೇಳಿದೆ ಇದು ಕನ್ನಡ ಶಬ್ದವಾ? ನೋಡುವುದಕ್ಕೆ ಅದು ಶುದ್ದ ಕನ್ನಡ ಭಾಷೆಯೇ ಆಗಿತ್ತು. ಅದನ್ನು ವಿಂಗಡಿಸಿ ಹೇಳಿದೆ..ಏಕಂ ಏವ...ಅದ್ವಿತೀಯ....ಇದರಲ್ಲಿ ಯಾವುದು ಕನ್ನಡ ಎಂದು ಕೇಳಿದೆ. ಎಲ್ಲವೂ ಸಂಸ್ಕೃತ ಪದಗಳು. ಆತ ಕಿರು ನಗೆ ನಕ್ಕ. ಆತನ ಅಹಂ ಹೋಗದಿದ್ದರೂ ವಾಸ್ತವ ಅರಿವಾಗಿತ್ತು. ಸಂಸ್ಕೃತ ಎಂದರೆ  ಅಸ್ಪೃಶ್ಯವಾಗಿ ಕಾಣುವವರು ಇದ್ದಾರೆ. ಭಾಷೆ ಎಂಬುದು ಅದು ಹೇಗೆ ಅಸ್ಪೃಶ್ಯವಾಗುತ್ತದೋ ವಿಸ್ಮಯವೆನಿಸುತ್ತದೆ. ಸಂಸ್ಕೃತ ಅರ್ಥವಾಗಬೇಕಾದರೆ....ಕನ್ನಡ ಸಂಪೂರ್ಣ ತಿಳಿದಿರಬೇಕು. ಆಗ ಅದು ಅನ್ಯ ಭಾಷೆಯಾಗುವುದಿಲ್ಲ. ನಾವು ಕನ್ನಡ ಎಂದು ಅಭಿಮಾನ ಪಟ್ಟುಕೊಳ್ಳಬಹುದು. ಹಾಗೆಂದು ಕನ್ನಡ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸುವುದಕ್ಕೆ ಸಾಧ್ಯವಿಲ್ಲ.  ಯಾಕೆಂದರೆ ಯಾವ ಜ್ಞಾನಕ್ಕೂ ಸೀಮೆ ಎಂಬುದು ನಿಗದಿಯಾಗುವುದಿಲ್ಲ. ಕನ್ನಡ, ನಡುಗನ್ನಡ, ಹಳೆಗನ್ನಡ ಹೀಗೆ ಕನ್ನಡ ಎಂಬುದು ಅನಂತ ಲೋಕ. ಆ ಲೋಕವನ್ನು ತೆರೆದಿಡುವುದೇ ಭಾಷೆಯ ಗುಣ. ಆದರೆ ಅದು ದ್ವೇಷಕ್ಕೆ ವೈಷಮ್ಯಕ್ಕೆ ಉಪಯೋಗವಾದರೆ ಅದಕ್ಕಿಂತ ದುರ್ದೈವ ಬೇರೆ ಇಲ್ಲ. ಸಂಸ್ಕೃತ ಎಂದರೆ ಅದು ಬ್ರಾಹ್ಮಣರ ಭಾಷೆ, ಉರ್ದು ಎಂದರೆ ಅದು ಇನ್ನೊಂದು ಧರ್ಮದ ಭಾಷೆ ಈ ರೀತಿಯ ಕಲ್ಪನೆಗಳು ನಿಜಕ್ಕೂ ನಮ್ಮ ಅಜ್ಞಾನವನ್ನು ಬಿಂಬಿಸುತ್ತದೆ. ಉರ್ದೂ ಭಾಷೆಯಲ್ಲೂ ಹಿಂದು ಕವಿ ಸಾಹಿತಿಗಳಿದ್ದಾರೆ ಎಂದು ಕೇಳಿದ್ದೇನೆ. ಹಾಗೆ ಸಂಸ್ಕೃತದಲ್ಲೂ.  ನಮ್ಮ ಶಾಲೆಯಲ್ಲಿ ಒಬ್ಬರು ಮುಸ್ಲಿಂ ಕನ್ನಡ ಪಂಡಿತರಿದ್ದರು. ಅವರ ಕನ್ನಡ ಭಾಷೆಯ ಪಾಠವನ್ನು ಕೇಳಬೇಕು. ಅದೆಷ್ಟು ಸುಂದರವಾಗಿತ್ತು. ಅದರಲ್ಲೂ ಹಳೆಕನ್ನಡದ ರಾಘವಾಂಕ, ನಾರಣಪ್ಪನ ಕಾವ್ಯಗಳನ್ನು ಅವರು ವಿವರಿಸುತ್ತಿದ್ದರೆ ಅವರ ಧರ್ಮ ಯಾವುದೋ ಅದು ಮುಖ್ಯವಾಗುತ್ತಿರಲಿಲ್ಲ. ಯಾವ ಭಾಷೆ ಯಾವ ಧರ್ಮವಾದರೇನು ನಾವದಕ್ಕೆ ಕೊಡುವ ದೇಣಿಗೆ ಮುಖ್ಯವಾಗಿರುತ್ತದೆ. ಕನ್ನಡಕ್ಕೆ ಸಂಸ್ಕೃತ ಬೇರೆಯಲ್ಲ, ಸಂಸ್ಕೃತಕ್ಕೆ ಕನ್ನಡ ಅನ್ಯವಲ್ಲ. ಅದು ಒಂದರೊಡನೊಂದು ಬೆಸೆದು ಗಂಗೆ ಯಮುನೆಯಂತೆ ಒಂದಾಗುವ ಸೌಂದರ್ಯವನ್ನು ಕಾಣಬೇಕು. ಅದನ್ನು ಅನುಭವಿಸಬೇಕು. ಯಾವುದೋ ಕಾರಣಕ್ಕೆ ನಮ್ಮ ದೇಶವನ್ನು ಭಾಷಾವಾರು ವಿಂಗಡನೆ ಮಾಡಿದರು. ಅದು ತಪ್ಪೋ ಸರಿಯೋ ದೇವರೇ ಬಲ್ಲ. ಅದರ ಬದುಲು ಐದಾರು ಗೆರೆ ಎಳೆದು ವಿಂಗಡಿಸುತ್ತಿದ್ದರೆ ನಾವು ಒಂದಾಗುತ್ತಿದ್ದೇವೋ ಇಲ್ಲವೋ ಹೀಗೆ ದ್ವೇಷಿಸುವ ಸ್ಥಿತಿಯಂತು ಬರುತ್ತಿರಲಿಲ್ಲ. 

ಭಾಷೆ ಅದು ದ್ವೇಷ ಸಾಧಿನೆಗೆ ಮಾಧ್ಯಮವಾಗಬಾರದು. ಅದು ಕೇವಲ ಸಂವಹನ ಸಾಧನ. ಮನಸ್ಸು ಮನಸ್ಸು ಅರಿಯುವ ಮಾಧ್ಯಮ. ಎಲ್ಲ ಭಾಷೆಯೂ ತನ್ನದೆ ಆದ ಸೌಂದರ್ಯವನ್ನು ಹೋದಿದೆ. ನಮ್ಮ ಭಾಷೆಯ ಬಗ್ಗೆ ಸ್ವಾಭಿಮಾನ ಇರಲೇಬೇಕು. ಆದರೆ ಇನ್ನೊಂದು ಭಾಷೆಯ ಬಗ್ಗೆ ಗೌರವ  ಅತ್ಯವಶ್ಯ ಇರಬೇಕು. 

 

ಲೇಖಕರು : ರಾಜಕುಮಾರ್ ಎಂ. ಪೈವಳಿಕೆ ಬೆಂಗಳೂರು. 


No comments:

Post a Comment