ಮುವತ್ತಮೂರು ವರ್ಷಗಳ ಹಿಂದೆ ಮಂಗಳವಾದ್ಯಗಳ ಕಲರವದಲ್ಲಿ ಪುಣ್ಯಾಹ ಸಂಪನ್ನಗೊಳಿಸಿ ಕೈಯಲ್ಲಿ ದಂಡ, ತಲೆಗೆ ಮುಂಡಾಸು ಸೊಂಟಕ್ಕೆ ಕಚ್ಚೆ ಬಿಗಿದು ಮದುವೆ ಚಪ್ಪರದಲ್ಲಿ ನಾನು ಕಾಶಿಯಾತ್ರೆಗೆ ಹೊರಟಿದ್ದೆ. ನಾನು ಕಾಶಿಗೆ ಹೋಗುತ್ತೇನೆ. ಇದನ್ನು ಕೇಳಿ ನನ್ನಾಕೆಯ ಅಪ್ಪ, ಭಾವೀ ಮಾವ ಓಡೋಡಿ ಬಂದರು. ಕೈ ಹಿಡಿದು ಈಗ ಬೇಡ ತನ್ನ ಮಗಳನ್ನು ಧಾರೆ ಎರೆದು ಕೊಡುತ್ತೇನೆ. ಮದುವೆಯಾಗಿ ಇಬ್ಬರೂ ಜತೆಯಲ್ಲೇ ಕಾಶಿ ಯಾತ್ರೆ ಮಾಡಿ ಎಂದು ಬೇಡಿಕೊಂಡಾಗ ಆಯಿತು ಎಂಬುದು ಹಸೆಮಣೆ ಏರಿ ನನ್ನಾಕೆಯ ಕೈ ಹಿಡಿದು ಬಾಳ ಸಂಗಾತಿಯನ್ನಾಗಿ ಮಾಡಿದ್ದೆ. ಮಲೆನಾಡಿನ ಕೊಪ್ಪದ ತಲಮಕ್ಕಿ ಮನೆಯಲ್ಲಿ ಸಂಭ್ರಮ ಸಡಗರದಿಂದ ಸಡೆದ ಮದುವೆ ಇದು. ಇಲ್ಲಿನ ಮದುವೆ ಕಾರ್ಯಕ್ರಮದಲ್ಲಿ ಕಾಶಿ ಯಾತ್ರೆ ಎಂಬುದು ಸಂಪ್ರದಾಯ. ನಮ್ಮ ಕರಾವಳಿಯಲ್ಲಿ ಇದು ಉಪನಯನದ ವೇಳೆಯೆ ಪೂರೈಸಿ ವಟು ಬ್ರಹ್ಮಚಾರಿಯಾಗಿ ಭಿಕ್ಷಾಟನೆಗೆ ಹೊರಡುತ್ತಾನೆ. ಇರಲಿ. ಅಂದು ಕಾಶಿಯಾತ್ರಯ ಬಗ್ಗೆ ಪರಿಕಲ್ಪನೆಯೇ ಇರಲಿಲ್ಲ. ಹಾಗಾಗಿ ಇದು ಯಾಂತ್ರಿಕವಾಗಿ ಕಾರ್ಯಕ್ರಮದ ಅಂಗವಾಗಿ ಕಂಡಿತ್ತು. ಬದುಕು ಸವೆಸಿದಂತೆ ಗೃಹಸ್ಥಾಶ್ರಮ ಎನ್ನುವುದು ಮನುಷ್ಯ ಬದುಕಿನ ಪರಿಪಕ್ವ ಕಾಲ ಎಂಬುದು ಅರಿವಿಗೆ ಬಂತು. ಅದು ಪರಮಾತ್ಮನಿಗೆ ಪ್ರಿಯವಾದ ಕಾಲ. ಕರ್ಮಾಂಗದ ಧರ್ಮಾಚರಣೆಯಲ್ಲಿ ಸಹಧರ್ಮಿಣಿಯಾಗಿ ಅದಿಕಾರದ ಅರ್ಹತೆಯನ್ನು ಒದಗಿಸುವ ಈಕೆ ಕೇವಲ ಹೆಣ್ಣಲ್ಲ. ಮೋಕ್ಷ ಗಮನಕ್ಕೆ ದಿಕ್ಸೂಚಿ ಇವಳು. ಅದರ ಒಂದು ಪರಿಪಕ್ವ ಅಂಗವೇ ಕಾಶಿ ಯಾತ್ರೆ.
ಮಾವನಿಗೆ ಕಾಶಿಯಾತ್ರೆಯ ವಾಗ್ದಾನ ಮಾಡಿ ಇಂದಿಗೆ ಅಂದರೆ ಫೆಬ್ರವರಿ 18ಕ್ಕೆ ಮೂರು ದಶಕಗಳು ಸಂದು ಹೋಯಿತು. ಈಗ ಮಾವನೂ ನಮ್ಮೊಂದಿಗೆ ಇಲ್ಲ. ಆದರೆ ಅವರ ಮಾತು ಇಂದು ನೆರವೇರಿಸುತ್ತ ಇರುವುದು ಒಂದು ಸುದೈವದ ಘಳಿಗೆ ಎನ್ನಬೇಕು. ವಿವಾಹ ದಿನವೇ ನಾವು ಕಾಶಿಯಲ್ಲಿ ಇರುವುದೆಂದರೆ ಅದು ಕಾಕತಾಳಿಯವಾದರೂ ಭಗವಂತನ ಅನುಗ್ರಹ ಮತ್ತು ನನ್ನ ಯೋಗ ಎನ್ನಬೇಕು. ಇದೀಗ ಮಾವನ ನೆನಪು ಒತ್ತೊತ್ತಿ ಬರುತ್ತದೆ. ಪರಲೋಕದಲ್ಲೂ ಅವರೂ ಅನುಗ್ರಹಿಸುತ್ತಾರೆ ಎಂಬ ಭಾವನೆ ನನ್ನದು.
ವಿವಾಹ ವಾರ್ಷಿಕ ದಿನ. 18.02. 1990 ರಂದು ನನ್ನಾಕೆ ನನ್ನ ಬಾಳಿಗೆ ಹಜ್ಜೆ ಇಟ್ಟಳು. ಕಳೆದ ಗೃಹಸ್ಥಾಶ್ರಮದ ದಿನಗಳು ಮಾಧುರ್ಯ ತುಂಬಿದ ದಿನಗಳು.ಹೆಣ್ಣು ಬದುಕಿನಲ್ಲಿ ಬರುವುದೆಂದರೆ ಅದು ಬದುಕು ಸ್ದಚ್ಚವಾದಂತೆ. ಹೆಣ್ಣು ಅರ್ಧಾಂಗಿಯಾಗಿದ್ದರೂ ನನ್ನಾಕೆ ನನ್ನ ಬದುಕಿನ ಸರ್ವಸ್ವಾಮ್ಯವಾಗಿ ಬಿಟ್ಟಳು. ಇದೀಗ ಆಕೆಯೋದಿಗಿನ ಕಾಶಿಯಾತ್ರೆ ಇದಕ್ಕೊಂದು ಮುಕುಟಮಣಿಯಂತೆ.
ನನ್ನಾಕೆಯಲ್ಲಿ ನನ್ನ ಬಗ್ಗೆ ಕೇಳಿದರೂ ನನ್ನಲ್ಲಿ ಅಕೆಯಬಗ್ಗೆ ಕೇಳಿದರೂ ಏಕಮನದ ಉತ್ತರ ಒಂದೆ ಇದು ನನ್ನ ಭಾಗ್ಯ. ಇದು ಸಮಾಭಿರುಚಿಯ ಸಮಾಭಿಪ್ರಾಯ .ಈ ಸಹಬಾಳ್ವೆಯ ಹಾದಿಯಲ್ಲಿ ಎಲ್ಲವನ್ನೂ ಅನುಭವಿಸಿದ ಸಂತೃಪ್ತ ಬದುಕು. ಸರಸ ವಿರಸ ಮುಳ್ಕಿನಗಿಡದ ಗುಲಾಬಿಯಂತೆ. ಕೆಸರಿನ ಕಮಲದಂತೆ. ಇವೆರಡೂ ಇಲ್ಲದ ಬದುಕು ಇರುವುದಿಲ್ಲ.ಪ್ರೀತಿ ಎಂಬುದು ಇದ್ದರೆ ಎಲ್ಲದಕ್ಕೂ ಪರಿಹಾರ ಅಲ್ಲೇ ಸಿಕ್ಕಿಬಿಡುತ್ತದೆ. ಸೋತರೂ ಗೆದ್ದರು ಸಮಯ ತಟಸ್ಥವಾಗಿರುವಿದಿಲ್ಲ. ಇದು ಅರಿವಾದಾಗ ಸಾಂಸಾರಿಕ. ಜೀವನದ ಸೋಲು ಗೆಲುವು ಪರಿಣಾಮ ಬೀರುವುದಿಲ್ಲ. ಅನುಭವ ಮತ್ತಷ್ಟು ಮಾಗುತ್ತದೆ. ಸೋಲು ಗೆಲುವು ಎಂಬುದು ಕೇವಲ ಮಾನದಂಡಗಳು. ಅದು ಬದುಕಿನ ಪರ್ಯಾಪ್ತ ಸ್ತಿತಿಯಲ್ಲ.
ಇಷ್ಟು ಸಮಯದ ಬದುಕಿನಲ್ಲಿ ಕಾಶಿ ಯಾತ್ರೆ ಎಂಬುದು ಕೇವಲ ಸಾಂಕೇತಿಕ. ಬದುಕಿನ ಯಾತ್ರೆ ಮತ್ತೂ ಚಲನ ಶೀಲವಾಗಿರುತ್ತದೆ. ಮುಂದುವರಿಯುತ್ತ ತನ್ನ ಗಮ್ಯವನ್ನು ತಾನೇ ನಿರ್ಣಯಿಸಿದಂತೆ ಸಾಗುತ್ತದೆ.
ಸಾಂಸಾರಿಕ ಜೀವನ ಅವಲೋಕನ ಮಾಡಿದಾಗ. ನಾನು ಬೆರಗಾಗುತ್ತೇನೆ. ಅರೆ ನಾನು ಬದುಕಿದ ಬದುಕೇ ಇದು.? ಅಚ್ಚರಿಯಾಗುತ್ತದೆ. ಹುಟ್ಟಿದಾಗ ಬದುಕಿನ ಬಗ್ಗೆ ತಿಳಿದಿರುವುದಿಲ್ಲ ಕೇವಲ ಕಲ್ಪನೆ ಮಾತ್ರ ಇರುತ್ತದೆ .ವಾಸ್ತವದ ಬದುಕು ತೀರ ಭಿನ್ನ. ಇದು ನಾನು ಬದುಕಿದ ನನ್ನ ಬದುಕು. ಇದಕ್ಕೆ ನನ್ನ ಭಂಡವಾಳ ಏನು ಎಂದು ಲೆಕ್ಕ ಹಾಕುತ್ತೇನೆ. ಸಂಸಾರದಲ್ಲಿ ಯಾವಾಗಲೂ ಪ್ರೀತಿಯೇ ಭಂಡವಾಳ. ಇದು ಚಲಾವಣೆಯಲ್ಲಿರುವ ತನಕವೂ ವ್ಯವಹಾರ ಅಬಾಧಿತ.
ಗಂಡಿನ ಬದುಕಿನ ಭಾರವನ್ನು ಹೊತ್ತು ಬದುಕನ್ನು ರೂಪಿಸುವುದೇ ಹೆಣ್ಣು. ಹಾಗಾಗಿ ಹೆಣ್ಣನ್ನು ಎತ್ತಿ ದಾಗ ಅಕೆ ಹೂವಿನಂತೆ ಭಾಸವಾಗಬಹುದು. ಆದರೆ ಆಕೆ ಭಾರವನ್ನು ಹೃದಯದ ಮೇಲೆ ಒತ್ತಿಬಿಡುತ್ತಾಳೆ. ಹೃದಯ ಭಾರವಾದಂತೆ ಆಕೆ ಹಗುರವಾಗುತಗತ್ತಾಳೆ ಜತೆಗೆ ಬದುಕೂ ಹಗುರವಾಗಿಬಿಡುತ್ತದೆ.
ಬೇರೆ ಯಾರಿಗೂ ಅಪ್ರಯತ್ನವಾಗಿ ಸಿಗದ ಕಾಶಿ ಸನ್ನಿಧಾನ ಮದುವೆ ದಿನವೆ ನನಗೆ ಆಯಾಚಿತವಾಗಿ ಒದಗಿದೆ.ವಿವಾಹ ಬದುಕಿನ ವಿಜಯವನ್ನು ಭಗವಂತ ಅನುಗ್ರಹಿಸಿದ ರೀತಿ ಇದು. ಬದುಕೆಂಬ ಕಾಶಿಗೆ ಗಂಗೆಯಾಗಿ ಜತೆಯಾದವಳು ನನ್ನವಳು.
No comments:
Post a Comment