ನಮ್ಮ ಯಾತ್ರಿಕರಲ್ಲಿ ಯಾರಿಗೂ ಆಗದೇ ಇದ್ದ ಅನುಭವಕ್ಕೆ ನಾನು ಸಾಕ್ಷಿಯಾದೆ. ಹೌದು ವಾರಣಾಸಿಯಿಂದ ನಾವು ಐದು ಮಂದಿ ಬೆಂಗಳೂರಿಗೆ ಹಿಂದಿರುಗಿ ಉಳಿದವರು ದೆಹಲಿ ಅಮೃತ ಸರ ಯಾತ್ರೆಗೆ ಹೋಗುವವರಿದ್ದರು. ಹಾಗಾಗಿ ನಮ್ಮ ವಾಸ್ತವ್ಯದ ಗುಜರಾತಿ ಕೈವಲ್ಯ ಧಾಮದ ಮಂದಿರದಿಂದ ಎಲ್ಲರೂ ನಮಗೆ ವಿದಾಯ ಹೇಳಿ ಪ್ರವಾಸ ಮುಂದುವರೆಸಿದ್ದರು. ನಾವು ಮಧ್ಯಾಹ್ನದವರೆಗೂ ಇರುವ ಅವಕಾಶವಿತ್ತು.
ಶ್ರೀ ರವಿ ಹೊಯಯ್ಸಳ ರವರು ಮೊದಲು ಹೇಳಿದಂತೆ ಬಹಳ ಮುತುವರ್ಜಿ ವಹಿಸಿ ನಮಗೆ ವಿಮಾನ ಟಿಕೇಟ್ ಬುಕ್ ಮಾಡಿ, ವಿಮಾನ ನಿಲ್ದಾಣಕ್ಕೆ ಬಿಡುವುದಕ್ಕೆ ಕಾರ್ ವ್ಯವಸ್ಥೆಯನ್ನೂ ಮಾಡಿದ್ದರು. ನಿಜಕ್ಕೂ ಅವರಿಗೆ ನಾನು ಕೃತಜ್ಞತೆಯನ್ನು ಹೇಳಬೇಕು. ಉಳಕೊಳ್ಳುವುದಕ್ಕೆ ನಗರದ ಹೃದಯ ಭಾಗದಲ್ಲಿ ದೊಡ್ಡ ಮಂದಿರವನ್ನು ಒದಗಿಸಿದ ಮಹನೀಯರನ್ನು ನಾವು ಸ್ಮರಿಸಲೇ ಬೇಕು. ಯಾವುದೇ ವಾಹನಕ್ಕೂ ಪ್ರವೇಶ ಇರದ್ದಿದ್ದರೂ ನಮ್ಮ ಬಸ್ಸು ಈ ಮಂದಿರದ ಬಾಗಿಲಲ್ಲೇ ನಿಲ್ಲುವಂತಾದದ್ದು ಈ ಔದಾರ್ಯದಿಂದ. ಇನ್ನು ಅಲ್ಲಿ ವ್ಯವಸ್ಥೆ ಮತ್ತು ಆತಿಥ್ಯ. ಅದು ಅವರ ಕರ್ತವ್ಯವೆಂಬಂತೆ ಹಾರ್ದಿಕವಾಗಿ ಒದಗಿಸಿದರು. ರುಚಿಕಟ್ಟಾದ ಭೋಜನ ವ್ಯವಸ್ಥಿತವಾಗಿ ಸಿದ್ದ ಪಡಿಸಿದ ವಿಶ್ರಾಂತಿ ಸ್ಥಳ. ಮಂಚ ಹಾಸಿಗೆ ಹೊದಿಕೆ ಯನ್ನು ಹೊಂದಿಸಿ ಒಂದು ಸುಸಂಸ್ಕೃತ ಆತಿಥ್ಯವನ್ನು ಒದಗಿಸಿದರು. ಎಲ್ಲವೂ ಸರಿ ಇತ್ತು. ಕಾಶಿಗೆ ತಲುಪುವವರೆಗೆ ಉಳಕೊಳ್ಳುವುದಕ್ಕೆ ಇಂತಹ ಒಂದು ಅಪೂರ್ವ ವ್ಯವಸ್ಥೆ ಸಿಕ್ಕಿರಲಿಲ್ಲ. ಮೂನ್ನೂರು ಜನರಿಗೆ ಒಂದಿಷ್ಟು ತ್ರಾಸವಾಗದಂತೆ ಶೌಚಾಲಯ ಸ್ನಾನದ ವ್ಯವಸ್ಥೆ ಛೇ ಕಣ್ಣು ಮಿಟುಕಿಸುವುದರ ಒಳಗೆ ಸಿದ್ದವಾಗುವುದು ಸಣ್ಣವಿಚಾರವಲ್ಲ.
ಪುರಾಣದಲ್ಲಿ ಜಮದಗ್ನಿ ಆಶ್ರಮಕ್ಕೆ ಮಾಹಿಷ್ಮತಿ ಅರಸ ಕಾರ್ತವೀರ್ಯಾರ್ಜುನ ಬರುತ್ತಾನೆ. ಜಮದಗ್ನಿ ಅವನಿಗೆ ಅವನ ಬೃಹತ್ ಸಂಖ್ಯೆಯ ಸೇನೆ ಪರಿವಾರಗಳಿಗೆ ಭೂರಿ ಭೋಜನದ ವ್ಯವಸ್ಥೆಯನ್ನು ಮಾಡುತ್ತಾನೆ. ಕಾಡಿನಲ್ಲಿ ಅದು ಕ್ಷಣ ಮಾತ್ರದಲ್ಲಿ ಇಷ್ಟು ಜನಕ್ಕೆ ಭೋಜನೆ ವ್ಯವಸ್ಥೆ ಅದೂ ರುಚಿಕಟ್ಟಾಗಿ ಹೇಗೆ ಸಾಧ್ಯವಾಯಿತು ಎಂದು ಅರಸನಿಗೆ ಅಚ್ಚರಿಯಾಗುತ್ತದೆ. ಆನಂತರ ತಿಳಿದು ಬರುತ್ತದೆ. ದೇವ ಧೇನು ವಾದ ಕಾಮಧೇನು ಆಶ್ರಮದಲ್ಲಿದ್ದು ಕೊಂಡು ಆ ಅನುಗ್ರಹದಿಂದ ಈ ಬೃಹತ್ ಪರಿವಾರಕ್ಕೆ ಭೋಜನದ ವ್ಯವಸ್ಥೆಯಾಗುತ್ತದೆ. ಆನಂತರ ಅರಸ ಧೇನುವನ್ನು ಅಪಹರಿಸುತ್ತಾನೆ, ಜಮದಗ್ನಿ ಪುತ್ರ ಪರಶುರಾಮ ಬಂದು ಕಾರ್ತವೀರ್ಯನನ್ನು ಸಂಹರಿಸುತ್ತಾನೆ. ಅದು ಪುರಾಣ ಕಥೆ. ಆದರೆ ಇಲ್ಲಿ ಅದರಂತೆ ಎಲ್ಲರಿಗೂ ಬೇಕಾದಂತೆ ಭೋಜನ ಮಾತ್ರವಲ್ಲ ಉಳಕೊಳ್ಳುವ ವ್ಯವಸ್ಥೆಯಾಗುತ್ತದೆ. ಸ್ವಚ್ಛಪರಿಸರ ಸ್ವಚ್ಛ ಶೌಚಾಲಯ ಹೀಗೆ ಎಲ್ಲವೂ ವ್ಯವಸ್ಥಿತ. ಆದರೆ ಇದೆಲ್ಲವನ್ನು ಕೊನೆ ಕ್ಷಣದ ಘಟನೆಯಲ್ಲಿ ಅವ್ಯವಸ್ಥೆಯನ್ನುಸೃಷ್ಟಿಸಿ ಲಜ್ಜೆಗೆಡುವಂತೆ ಮಾಡುವಲ್ಲಿ ನಮ್ಮ ಪರಿವಾರ ಕಾರ್ತವೀರ್ಯನ ಪರಿವಾರವನ್ನೂ ಮೀರಿಸಿತು ಎಂದು ಖೇದವಾಗುತ್ತದೆ. ಜಮದಗ್ನಿಗೆ ಭೋಜನ ಒದಗಿಸುವುದಕ್ಕೆ ಆಶ್ರಮದಲ್ಲಿ ಕಾಮಧೇನು ಇತ್ತು. ಇಲ್ಲಿನವರಿಗೆ ಇವರ ಇಚ್ಛಾಶಕ್ತಿಯೇ ಕಾಮಧೇನು. ಅದರ ಪರಿವೆ ಇಲ್ಲದೆ ಅನಾಗರಿಕ ವರ್ತನೆ ತೋರಿ ಅಲ್ಲಿಂದ ವಿದಾಯ ಹೇಳುವಂತಾಗಿದ್ದು ಒಂದಾದರೆ, ಎಲ್ಲರು ಹೋದನಂತರ ಖಾಲಿ ಖಾಲಿಯಾದ ಮಂದಿರವನ್ನು ನಾನು ಸುತ್ತು ಹಾಕಿದೆ. ಅಬ್ಬಾ ವಿಚಿತ್ರವಾದ ದರ್ಶನದ ಅನುಭವವಾಯಿತು.
ಪ್ರಕೃತಿಯಲ್ಲಿ ಕಾಡು ಮೃಗಗಳು ಅನಾಗರಿಕೆ ಸಂಸ್ಕೃತಿಯನ್ನು ತೋರಿಸಬಹುದು. ಆದರೆ ಮನುಷ್ಯನಷ್ಟು ಅನಾಗರಿಕರು ಬೇರೆ ಇರುವುದಕ್ಕೆ ಸಾಧ್ಯವಿಲ್ಲ ಎಂದನಿಸುತ್ತದೆ. ಮಂದಿರದ ಕೆಲವು ಭಾಗಗಳಲ್ಲಿ ರಾತ್ರಿ ವಿಶ್ರಾಂತಿಗೆ ವ್ಯವಸ್ಥೆ ಮಾಡಿದ್ದರು. ಅಲ್ಲಿ ನಿದ್ರಿಸಿದವರು ಹಾಸಿಗೆಯನ್ನು ಹೇಗೆ ಬೇಕೋ ಹಾಗೆ ಬಿಟ್ಟು ಹೋಗಿದ್ದರು. ಗೊಪ್ಪೆ ಗೊಪ್ಪೆಯಾಗಿ ಬಿದ್ದಿದ್ದ ಹಾಸಿಗೆ ತಲೆದಿಂಬು ಹೊದಿಕೆಗಳು ಛೇ ಎಷ್ಟು ಭೀಭತ್ಸವಾಗಿತ್ತು ಎಂದರೆ ಅದನ್ನು ವಿವರಿಸುವುದು ಕಷ್ಟ. ಕೆಲವು ಕಡೆ ಮಲಗುವಲ್ಲೇ ತಿಂದ ಆಹಾರ ಚೆಲ್ಲಿದ್ದರು. ಕನಿಷ್ಟ ಪಕ್ಷ ಅದನ್ನು ತೆಗೆದು ಸ್ವಚ್ಛ ಮಾಡುವ ಪ್ರಜ್ಜೆ ಕೆಲವರಿಗೆ ಇಲ್ಲದೇ ಹೋಯಿತು. ಇನ್ನು ಬೆಡ್ ಶೀಟ್ ಗಳು ಅದು ಇನ್ನೊಬ್ಬರಿಗೆ ಉಪಯೋಗಕ್ಕೆ ಬೇಕು ಎಂಬ ಪರಿವೆಯೇ ಇಲ್ಲದಂತೆ ತೀರಾ ಅಸಹ್ಯವಾಗಿ ಬಿಟ್ಟು ಹೋಗಿದ್ದರು. ರಾತ್ರಿ ಇಡಿ ನಮ್ಮ ಚಳಿಯನ್ನು ನೀಗಿಸಿ ಸುಂದರ ವಿಶ್ರಾಂತಿಯನ್ನು ಒದಗಿಸಿದ ಶಯನ ವಸ್ತುಗಳಿಗೆ ನಾವು ಕೊಡುವ ಕೃತಜ್ಞತೆ ಈ ಬಗೆಯದ್ದು. ಇದು ಕೇವಲ ಪುರುಷರು ಮಾತ್ರವಲ್ಲ ಸ್ತ್ರೀಯರೂ ಇದ್ದರು ಅಲ್ಲಲ್ಲಿ ಮುಡಿದ ಹೂವಿನ ಹಾರ, ಆಹಾರದ ಪೊಟ್ಟಣಗಳು ಎಸೆದು ಇದನ್ನು ಸ್ವಚ್ಛ ಮಾಡುವುದಕ್ಕೆ ಇದೆ ಎಂಬ ಪರಿಕಲ್ಪನೆಯೇ ಇಲ್ಲದಂತೆ ವರ್ತಿಸಿದ್ದರು. ಕಾಶೀ ಯಾತ್ರೆಗೆ ಹೊರಡುವ ಮೊದಲೇ ಸ್ವಚ್ಛತೆಯ ಬಗ್ಗೆ ಪದೇ ಪದೇ ಹೇಳಿದರೂ ತಾವು ಎಲ್ಲಾ ನಿಯಮಗಳಿಂದ ಸ್ವಚ್ಛತೆಯಿಂದ ಅತೀತರು ಎಂದು ತಿಳಿದುಕೊಂಡ ಇವರ ಆನಾಗರಿಕ ವರ್ತನೆ ನಮ್ಮ ಊರಿಗೆ ಮಾತ್ರವಲ್ಲ ಇಡೀ ಕರ್ನಾಟಕ್ಕಕ್ಕೆ ಕನ್ನಡಿಗರಿಗೆ ಕೆಟ್ಟ ಹೆಸರು ತಂದದ್ದು ಸುಳ್ಳಲ್ಲ. ಅದರಲ್ಲು ಕೊನೆಯ ಘಳಿಗೆಯಲ್ಲಿ ಬೆಳಗ್ಗಿನ ಉಪಾಹಾರ ಮತ್ತು ಭೋಜನವನ್ನು ಪೊಟ್ಟಣ ಕಟ್ಟಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ಅದು ಮಾಡುತ್ತಿದ್ದಂತೆ ಎಲ್ಲರು ಪಾತ್ರೆಯ ಮೇಲೆ ಮುಗಿ ಬಿದ್ದು ಹಸಿದ ಮೃಗಗಳಂತೆ ವರ್ತಿಸಿದ್ದು ಅನಾಗರಿಕ ವರ್ತನೆ, ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಕೊನೆಗೆ ರೋಸಿ ಹೋಗಿ ಅಲ್ಲಿನ ವ್ಯವಸ್ಥಾಪಕರು ಅದನ್ನು ಸಾಮಾಜಿಕ ಜಾಲತಾಣಕ್ಕೆ ಲೈವ್ ವೀಡಿಯೋ ಮಾಡಿ ಹರಿ ಬಿಟ್ಟು ನಮ್ಮ ಕರ್ನಾಟಕದ ಮಾನವೇ ಹರಾಜಾಗಿ ಬಿಟ್ಟಿತು. ದಿಗಿಲಾದ ನಾನು ಕೊನೆಯಲ್ಲಿ ಹೋಗಿ ನಮ್ಮ ಆಯೋಜಕರಿಗೆ ತಿಳಿಸಿದಾಗ ಅವರು ಬಂದು ನಿಯಂತ್ರಣಕ್ಕೆ ತಂದು ಮತ್ತೂ ಮಾನ ಹರಾಜಾಗುವುದನ್ನು ತಪ್ಪಿಸಿದರು. ನಿಜಕ್ಕೂ ನಾನು ಕುಗ್ಗಿ ಹೋಗಿದ್ದೆ. ನನಗೆ ಉಪಾಹಾರ ತಿಂಡಿಯೇ ಬೇಡವೆಂದು ನಾವು ದೇವರ ದರ್ಶನಕ್ಕೆ ಹೋದೆವು. ಹೀಗಾಗಿ ನಾವು ಆದಿನ ಯಾವುದೇ ಆಹಾರ ತಿನ್ನದೆ ಕಳೆಯುವಂತಾಯಿತು.
ನಮಗೆ ಆಹಾರ ಇಲ್ಲದೇ ನಾವು ಕಳೆದರೆ, ಅಲ್ಲಿ ಎಂಜಲು ಎಸೆದ ಜಾಗದಲ್ಲಿ ತಟ್ಟೆಯಲ್ಲಿ ಉಳಿದ ಆಹಾರ ಹಾಗೆ ಬಿದ್ದು ನಮ್ಮ ಹಸಿವೆಯನ್ನು ಅಣಕಿಸುತ್ತಿತ್ತು. ತಮಗೆ ಬೇಕಾದಷ್ಟೇ ಹಾಕಿಸಿಕೊಳ್ಳಿ ಆಹಾರ ಎಸೆಯಬೇಡಿ ಎಂದರೂ ಕೇಳಿಸಿಕೊಳ್ಳದ ಮೃಗಗಳ ಜತೆ ನಾವು ಸಹಯಾತ್ರಿಕರಾಗಿದ್ದೇವೆ ಎನ್ನುವುದಕ್ಕೆ ನಿಜಕ್ಕೂ ಹೀನಾಯ ಎನಿಸುತ್ತದೆ.
ಇಷ್ಟಾದರೂ ನನಗೆ ತೃಪ್ತಿ ತಂದ ವಿಷಯ ಇಲ್ಲಿ ಉಲ್ಲೇಖಿಸಬೇಕು. ನಾವು ಮೊದಲ ತಂಡದ ಯಾತ್ರಿಕರು ಒಂದೈವತ್ತು ಮಂದಿಗಳು ಪ್ರಯಾಣಿಸಿದ ಬಸ್ಸಿನಲ್ಲಿದ್ದವರೆಲ್ಲರು ಒಂದೇ ಹಾಲ್ ನಲ್ಲಿ ಉಳಿಯುವಂತಾಯಿತು. ಬಹುತೇಕ ಸಹ ಯಾತ್ರಿಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಿತ್ರರು. ಹೀಗಾಗಿ ಈ ಹಾಲ್ ಬಹಳ ಅಚ್ಚುಕಟ್ಟಾಗಿತ್ತು. ಹಾಸಿಗೆ ಬೆಡ್ ಶೀಟ್ ಮಡಚಿ ಇಟ್ಟಿದ್ದರು. ಶೌಚಾಲಯ ಸ್ವಚ್ಛವಾಗಿತ್ತು. ಇದಕ್ಕೆ ಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಿಕ್ಕಿದ ಶುದ್ದ ಸಂಸ್ಕಾರ. ಮಿಕ್ಕೆಲ್ಲವೂ ಅವ್ಯವಸ್ಥೆಯ ಆಗರವಾಗಿದ್ದರೆ ನಾವು ಉಳಿದುಕೊಂಡ ಕೋಣೆಯ ದೃಶ್ಯ ಮನಸ್ಸಿಗೆ ಬಹಳ ಸಮಾಧಾನವನ್ನು ತಂದಿತು. ಸಂಘ ಹೇಗೆ ಒಬ್ಬ ವ್ಯಕ್ತಿ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಯಿತು ಎಂದು ಹೇಳಿದರೆ ಅದು ಅತಿಶಯವಲ್ಲ.
ಇಷ್ಟೆಲ್ಲಾ ಅದರೂ ನಮನ್ನು ವಿಮಾನ ನಿಲ್ದಾಣಕ್ಕೆ ಬಿಡುವುದಕ್ಕೆ ಕಾರು ವ್ಯವಸ್ಥೆ ಮಾಡಿದ್ದರು. ಕಾರು ಚಾಲಕ ಮೊದಲೇ ಹೇಳಿದ್ದ, ನೀವು ಹೊರಟಕೂಡಲೇ ಹೇಳಿ, ಯಾವ ಹೊತ್ತಿಗಾದರೂ ನಾನು ಇಲ್ಲೆ ಇರುತ್ತೇನೆ. ಕರೆದುಕೊಂಡು ಹೋಗುತ್ತೇನೆ. ಮಧ್ಯಾಹ್ನದ ತನಕವೂ ಕಾರು ತೊಳೆದು ಅಲ್ಲೇ ನಮಗಾಗಿ ಕಾದು ಕುಳಿತಿದ್ದ. ಮಾತ್ರವಲ್ಲ ಹೊರಡುತ್ತೇವೆ ಹೋಗೋಣ ಎನ್ನುವಾಗ ನಮ್ಮ ಲಗೇಜ್ ಗಳನ್ನು ತಂದು ಕಾರಿಗೆ ಇಟ್ಟು ಸಹಕರಿಸಿದ. ನಗು ಮುಖದಿಂದ ಸ್ವಂತ ಸಂಭಂಧಿಯಂತೆ ನಮ್ಮನ್ನು ವಿಮಾನ ನಿಲ್ದಾಣಕ್ಕೆ ತಂದು ಬಿಟ್ಟು. ಒಂದು ಚಿಕ್ಕಾಸು ಪಡೇಯಲಿಲ್ಲ ಎಂಬುದು ವಿಶೇಷ. ಹಾಗಾಗಿ ಅವನ ಜತೆ ಮರೆಯದೆ ಒಂದು ಸೆಲ್ಫಿ ತೆಗೆದು ಆತನಿಗೆ ಧನ್ಯವಾದ ಹೇಳಿದೆ. ಕೊನೆ ಪಕ್ಷ ಅಲ್ಲಿ ನಡೆದು ಹೋದ ದುರ್ಘಟನೆಗಳಿಗೆ ಮುಲಾಮು ಹಚ್ಚುವ ಪ್ರಯತ್ನ ಮಾಡಿದೆ.
No comments:
Post a Comment