Thursday, December 28, 2023

ಕಿತ್ತು ಬಂದ ನೆನಪಿನ ಬೇರುಗಳು

        ಮಂಗಳೂರಿನ ಕೆಪಿಟಿಯ ತುದಿಯಿಂದ ಕೂಳೂರು ಪಣಂಬೂರು ಕಡೆಗೆ ಹೋಗು ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯ ಪಕ್ಕದಲ್ಲೇ ದೇರೇಬೈಲುನ ನೆಕ್ಕಿಲಗುಡ್ಡೆ ಇದೆ. ಕುಂಟಿಕಾನ ಮೇಲು ಸೇತುವೆ ದಾಟಿ ಸ್ವಲ್ಪ ದೂರ ಹೋಗಬೇಕಾದರೆ ಬಲ ಬದಿಗೆ ಒಂದು ಸಪೂರ ರಸ್ತೆ ಇಳಿಯುತ್ತದೆ. ಅದೇ ನೆಕ್ಕಿಲಗುಡ್ಡೆಗೆ ಹೋಗುವ ದಾರಿ. ಆ ದಾರಿಯಲ್ಲಿ ಮುಂದೆ ಸಾಗಿದರೆ ಇರುವ ಸ್ಥಳಗಳ ಚಿತ್ರಗಳು ಇವು.  ಈ ಚಿತ್ರಗಳು ನನ್ನ ಪಾಲಿಗೆ ಸಾವಿರ ನೆನಪನ್ನು ಪುಂಖಾನು ಪುಂಖವಾಗಿ ತರುತ್ತವೆ. ಎಲ್ಲವೂ ಹೃದಯ ಸ್ಪರ್ಶಿ. ಕಳೆದ ಬಾಲ್ಯದ ಚಿನಕುರುಳಿ ದಿನಗಳು ನೆನಪಿಗೆ ಬಂದಾಗ ಹೃದಯ ಭಾರವಾಗಿ  ಕಣ್ಣಂಚಿನಲ್ಲಿ ತೇವ ಬೇಡದೇ ಇದ್ದರು ಒಸರಿಬಿಡುತ್ತದೆ. ಚಿತ್ರದಲ್ಲಿ ಒಂದು ಮರ ಬುಡ ಮಗುಚಿ ಕೇವಲ ಅಸ್ಥಿಪಂಜರವಾಗಿ ಬಿದ್ದದ್ದು ಕಾಣಬಹುದು. ಇದನ್ನು ಕಾಣುವಾಗ ಕರುಳು ಕಿತ್ತು ಬಂದ ಅನುಭವವಾಗುತ್ತದೆ. ಇದೊಂದು ದೊಡ್ಡ ಗೋಳಿ ಮರ. ಅದರ ತುದಿಯನ್ನು ನಾನು ನೋಡಿಲ್ಲ. ಆದರೆ ಈಗ ಅದರ ಬುಡವನ್ನು ಕಾಣುತ್ತೇನೆ. ಒಂದು ಗೋಲಿಯಾಕಾರದ ಹಣ್ಣಿನ ಚಿಕ್ಕ ಬೀಜದಿಂದ ಹುಟ್ಟಿದ ಈ ಮರ ನಾನು ಕಳೆದ ಇತಿಹಾಸವನ್ನೇ ಬಿಚ್ಚಿ ತೋರಿಸುತ್ತದೆ. ಬಹುಶಃ ನಾನು ಹುಟ್ಟುವ ಮೊದಲೇ ಇದರಲ್ಲಿ ಕಾಣುವ ತಾಯಿ ಬೇರು ಹುಟ್ಟಿರಬಹುದು. ಈಗ ಇದು ಜೀವ ಸೆಲೆ ಇಲ್ಲದೇ ನಿಶ್ಚಲವಾಗಿದೆ.  ಇದು ಇತ್ತೀಚೆಗಿನ ಚಿತ್ರ. ಗೂಗಲ್ ನಕ್ಷೆಯಲ್ಲಿ ಬಂದ ಉಪಗ್ರಹದ ಚಿತ್ರ.  ಯಾಕೋ ನನ್ನ ಬಾಲ್ಯದಲ್ಲಿ  ಓಡಾಡಿದ ಸ್ಥಳಗಳನ್ನು ಗೂಗಲ್ ನಕ್ಷೆಯಲ್ಲಿ ತಡಕಾಡುವಾಗ ಸಿಕ್ಕಿದ ಈ ಚಿತ್ರ ಹಲವು ನೆನಪುಗಳನ್ನು  ಮರದ ಬೇರು ಕಿತ್ತು ಬಂದಂತೆ ಕಿತ್ತು ತೋರಿಸಿತು.   







ಮಂಗಳೂರಿನ ದೇರೇಬೈಲು  ಗ್ರಾಮದ ನೆಕ್ಕಿಲ ಗುಡ್ಡೆ ಎಂಬ ಸ್ಥಳ ಇದು. ಹೆಸರೇ ಹೇಳುವಂತೆ ಆ ದಿನ ಇದು ದೊಡ್ಡ ಗುಡ್ಡೆಯೇ ಆಗಿತ್ತು. ಗುಡ್ಡೆಯ ತುದಿಯಲ್ಲಿ ನಮ್ಮ ಮನೆ. ಮನೆಯ ಹಿಂಬದಿಯಲ್ಲಿ ದೊಡ್ಡ ಮೈದಾನ. ಅದರ ಒಂದು ಅಂಚಿನಲ್ಲಿ ಈ ಗೋಳಿಮರ. ಆಗ ವಿಶಾಲಾವಾಗಿ ಬೆಳೆದಿತ್ತು. ಇದರಂತೆ ಅಲ್ಲಿ ಇನ್ನೂ ಎರಡು ಮೂರು ಗೋಳಿ ಮರ ಇತ್ತು. ಮೈದಾನದಲ್ಲಿ ಊರಿನ ಮಕ್ಕಳು ಬಂದು ಕ್ರಿಕೆಟ್, ವಾಲಿಬಾಲ್ ಆಟವಾಡುತ್ತಿದ್ದರು. ಎಲ್ಲಾ ದಿನವೂ ಸಾಯಂಕಾಲ ಮಕ್ಕಳ ಗದ್ದಲ ಸರ್ವೇ ಸಾಮಾನ್ಯ. ಅದೇ ಜಾಗದಲ್ಲಿ ಈಗ ಕಟ್ಟಡ ಸಮುಚ್ಚಯ ಬೆಳೆದು ನಿಂತದ್ದನ್ನು ಕಾಣಬಹುದು. ಇದರ ಒಂದು ತುದಿಗೆ ಕಾಣುವ ಕಟ್ಟಡದ ಬಳಿಯಲ್ಲೇ ನಮ್ಮ ಮನೆ ಇತ್ತು. ನನ್ನ ಬಹಳಷ್ಟು ಬಾಲ್ಯ ಮಾತ್ರವಲ್ಲ ಶೈಶವದ ದಿನಗಳೂ ಇಲ್ಲೇ ಕಳೆದಿದ್ದವು. ಹಾಗಾಗಿ ನೆಕ್ಕಿಲಗುಡ್ಡೆ ಎಂದರೆ  ನನ್ನ ಪಾಲಿಗೆ ಅದೊಂದು ನೆನಪಿನ ಗುಡ್ಡೆಯೇ ಆಗಿಹೋಗಿದೆ. 

ಮೈದಾನ ಅಂಚಿನಲ್ಲಿರುವ ಈ ಗೋಳಿ ಮರ ಬಾಲ್ಯದಲ್ಲಿ ನಮ್ಮ ಹಲವು ಆಟಗಳಿಗೆ ಸಾಕ್ಷಿಯಾಗಿದೆ. ಮೇಲಿನಿಂದ ಇಳಿದು ಬಿಟ್ಟ ಅದರ ಬಿಳಲುಗಳಲ್ಲಿ ನಾವು ಉಯಾಲೆಯಾಡಿದ್ದು ಮರೆಯುವುದಕ್ಕೆ ಹೇಗೆ ಸಾಧ್ಯ. ಹೆಣ್ಣು ನಾಯಿಯ ಕೆಚ್ಚಲಿಗೆ ಮರಿಗಳು ನೇತಾಡಿದಂತೆ, ಮರ ನಮಗೆ ತಾಯಿಯಂತೆ ಅದರೆ ತೋಳಿಗೆ ನಾವು ನೇತಾಡಿ ಉಂಡ ಸಂತೋಷಗಳು ಮರ ಸತ್ತು ಬಿದ್ದರೂ ನೆನಪುಗಳು ಜೀವಂತವಾಗಿದೆ. ಈ ಮರ ಬಸ್ಸು ಬಂಡಿ ಬಿಡುವ ಆಟವಾಡಿದಾಗ ಬಸ್ಸು  ನಿಲ್ದಾಣವಾಗಿದೆ, ಮನೆಯ ಆಟವಾಡುವಾಗ ಈ ಮರದ ಬುಡ ಮನೆಯಾಗಿದೆ. ಕಳ್ಳ ಪೋಲೀಸ್ ಆಟವಾಡುವಾಗ ಈ ಮರ ದೊಡ್ಡ ಕಾಡಿನಂತೆ ಉಪಯೋಗಿಸಿದ್ದೇವೆ.  ಮರದ ಬುಡದಲ್ಲಿ ಮಣ್ಣು ಸೊಪ್ಪು ಗುಡ್ಡೆ ರಾಶಿ ಹಾಕಿ ತಕ್ಕಡಿ ಕಟ್ಟಿ ಅಂಗಡಿಯ ಆಟವಾಡಿದ್ದೇವೆ.  ಮರದ ಬುಡದಲ್ಲಿ ಹಲವು ಬಗೆಯ ಆಟವಾಡಿದ್ದೇವೆಆಟದ ಮೈದಾನದಲ್ಲಿ ಆಟವಾಡಿ ದಣಿದಾಗ ಈ ಮರದ ನೆರಳಲ್ಲಿ ಹರಟೆ ಹೊಡೆದು ಕುಳಿತಿದ್ದೇವೆ. , ಆಲ್ಲಿ ಗೋಳಿಮರದ ಅಡಿಗೆ ಹೋಗಿ ಆಟವಾಡಬಾರದ ಎಂದು ಮನೆಯಲ್ಲಿ ತಂಟೆ ಜಗಳ ಮಾಡಿದಾಗ ಹಿರಿಯರು ಬೈಯ್ಯುತ್ತಿದ್ದರು. ಈ ಗೋಳಿಮರ ಎಂಬುದು ಆ ರೂಪದಲ್ಲಿ ಒಂದು ವಿಮೋಚನೆಯ ಸ್ಥಳವಾಗಿತ್ತು. .ನಮ್ಮ ಎಲ್ಲ ತಂಟೆ ಜಗಳವನ್ನೂ ಖುಷಿಯನ್ನೂ  ಸಹಿಸಿಕೊಂಡ ಈ ಮರ ಈಗ ಬದುಕುವುದಕ್ಕೆ ಸಾಧ್ಯವಿಲ್ಲದೇ ಧರಾಶಾಯಿಯಾಗಿದೆ.  ಪ್ರಪಂಚದಲ್ಲಿ ಆರಂಭವಾಗುವುದು ಅಂತ್ಯಕಾಣಲೇ ಬೇಕು. ಆದರಂತೆ ಮರವೂ ಅದಕ್ಕೆ ಎರವಾಗಿದೆ. ಆದರೆ ಆ ನೆನಪುಗಳನ್ನು ಕಿತ್ತು ಹಾಕಿ ಅದಕ್ಕೆ ಅಂತ್ಯವೇ ಇಲ್ಲದಂತೆ ಮಾಡಿದೆ. 

ಈ ಚಿತ್ರಗಳಲ್ಲಿ ಒಂದು ಮೂರು ರಸ್ತೆ ಕೂಡುವ ಚಿತ್ರವಿದೆ .  ಹತ್ತಿರದ ಉರ್ವಸ್ಟೋರ್ ಪೇಟೆಗೆ ಇದೇ ದಾರಿಯಲ್ಲಿ ಹೋಗಬೇಕು. ಅಲ್ಲಿಂದ ಕೂಗಳತೆ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ. ಈಗ ಅದು ಚತುಷ್ಪಥವಾಗಿದೆ.    ನೆಕ್ಕಿಲ ಗುಡ್ಡೆಯ ಬುಡದಲ್ಲೇ ಇರುವ ಜಾಗವಿದು.  ಇದರ ಬುಡದಲ್ಲೆ ಒಂದು ನೀರಿನ  ನಳ್ಳಿ ಇತ್ತು. ನಗರ ಬೆಳೆಯುತ್ತಿದ್ದಂತೆ ಈ ಜಾಗದಲ್ಲಿ ನಳ್ಳಿ ಸಂಪರ್ಕ ಬಂದಿತ್ತು.  ಪೇಟೆಯಿಂದ ಬರುವಾಗ ಅಲ್ಲಿ ನೆರಳಲ್ಲಿ ಕುಳಿತು ಒಂದಷ್ಟು ನಳ್ಳಿ ನೀರು ಕುಡಿದು ದಣಿವಾರಿಸಿಕೊಳ್ಳುವ ಜಾಗವದು. ಅಲ್ಲೆ ಮೇಲೆ ಒಂದು ದೊಡ್ಡ ಬಾವಿ ಇತ್ತು. ಸದಾಕಾಲ ಅದರಲ್ಲಿ ನೀರಿದ್ದು ಸುತ್ತಮುತ್ತಲಿನವರು ಅಲ್ಲಿಗೆ ನೀರಿಗೆ ಬರುತ್ತಿದ್ದರು. ಈಗ ಅದೂ ಮುಚ್ಚಿ ಹೋಗಿರಬಹುದು. 

ನೆಕ್ಕಿಲ ಗುಡ್ಡೆ ಮೊದಲಿನ ಗುರುತೇ ಇಲ್ಲದಂತೆ ಬದಲಾಗಿ ಹೋಗಿದೆ. ನಾವುದ್ದಾಗ ಸೊಗಸಾದ ತೆಂಗಿನ ತೋಟವಿತ್ತು. ಹಲವಾರು ಕೃಷಿ ವ್ಯವಸಾಯದಿಂದ ಗುಡ್ಡೆ ಹಚ್ಚ ಹಸುರಾಗಿತ್ತು. ಈಗ ಇಲ್ಲಿ ಹಲವು ಅಂತಸ್ತುಗಳ ಬೃಹತ್ ಕಟ್ಟಡಗಳು ತಲೆ ಎತ್ತಿವೆ. ಗುಡ್ಡೆ ಹೋಗಿ ನಗರವಾಗಿ ಹೆಸರು ಕೂಡ ಬದಲಾಗಿ ಹೋಗಿದೆ.  ಬಹುಶಃ ಅಂದಿದ್ದ ಮನುಷ್ಯರೂ ಹೊಸಜನಾಂಗಕ್ಕೆ ಜಾಗ ಖಾಲಿ ಮಾಡಿಕೊಟ್ಟಿರಬಹುದು.  ಹಲವರು ಇಲ್ಲಿಂದ ಹೋಗಿರಬಹುದು. ಆದರೆ ಆ ನೆನಪುಗಳು ಇಲ್ಲೇ ಹುದುಗಿರುತ್ತವೆ. ಅದು ಈ ಮರದ ಬೇರಿನಂತೆ ಹಲವು ಸಲ ಕಿತ್ತು ಬರುತ್ತವೆ. ಒಣಗಿ ಹೋದ ಊರ ನಡುವೆ ನೆನಪುಗಳು ಹಚ್ಚ ಹಸುರಾಗಿ ಜೀವಂತವಾಗಿರುತ್ತವೆ. 


No comments:

Post a Comment