Wednesday, August 28, 2024

ಸಿನಿಮಾ ಎಂಬ ಭ್ರಮಾ ಲೋಕ

      ಸಿನಿಮಾ ಎಂಬುದು ಭ್ರಮಾಧೀನಕ್ಕೆ ಪ್ರೇರಕವಾಗುವಂತಹುದು. ಬಹುಶಃ ಈಗ ಅದು ಉಂಟು ಮಾಡುವ ಭ್ರಮೆಯನ್ನು ಬೇರೆಯಾವುದೂ ಉಂಟು ಮಾಡುವುದಿಲ್ಲ. ಭ್ರಮೆ ಎಂಬುದು ವಾಸ್ತವದ ವಿಪರೀತ ಸ್ಥಿತಿ.  ಅಲ್ಲಿ ಸತ್ಯ ಹುಡುಕಿದರೂ ಸಿಗುವುದಕ್ಕೆ ಸಾಧ್ಯವಿಲ್ಲ. ಈ ಮಾತು ಪದೇ ಪದೇ ಸತ್ಯವಾದರೂ ಮನುಷ್ಯ ಈ ಭ್ರಮೆಗೆ ದಾಸನಾಗುವುದು ವಾಸ್ತವದ ಸತ್ಯ.

                 ಮಲಯಾಳಂ ಚಿತ್ರರಂಗ ಈ ಲೈಂಗಿಕ ದೌರ್ಜನ್ಯದ ಸುಂಟರಗಾಳಿಯಲ್ಲಿ ಸಿಕ್ಕಿದೆ ಎನ್ನಬೇಕು. ಒಂದು ಕಾಲದಲ್ಲಿ ಮಲಯಾಳಂ ಸಿನಿಮಾ  ಮಡಿವಂತಿಕೆಯನ್ನು ಬಿಟ್ಟ  ಚಿತ್ರಗಳಿಗೆ ಕುಖ್ಯಾತಿಯನ್ನು ಪಡೆದಿತ್ತು. ಅದರ ಪ್ರೇಕ್ಷಕ ಹೆಂಡದಂಗಡಿಗೆ ಹೋಗುವಂತೆ ಕದ್ದು ಮುಚ್ಚಿ ಹೋಗುವ ಪರಿಪಾಠವಿತ್ತು. ಈಗ ಸಿನಿಮಾದ ಅಂತರಂಗದ ವಿಚಾರಗಳೂ ಸಹ ಇದೇ ಮಡಿವಂತಿಕೆಯಿಂದ ದೂರಾಗಿರುವುದು ವಿಪರ್ಯಾಸ. ಮಲಯಾಳಂ ಸಿನಿಮಾರಂಗ ಈ ರೀತಿಯಲ್ಲಿ ಭ್ರಮೆಯನ್ನು ಕಳಚಿ ಕುಳಿತರೆ ಕನ್ನಡ ಸಿನಿಮಾ ಕೊಲೆಯ ಪಾತಕ ಲೋಕದ ವಿವಾದದಲ್ಲಿ ಜರ್ಝರಿತವಾಗಿದೆ. ಒಂದರ್ಥದಲ್ಲಿ ಸಿನಿಮಾ ಎಂಬುದು ಭ್ರಮೆ  ಎಂಬ ಸತ್ಯ ಬಹಿರಂಗವಾಗುತ್ತದೆ. ಎದುರು ಎನಿದೆಯೋ ಅ ನಿಜದಲ್ಲಿ ಅದು ಇಲ್ಲ. ಒಳಗೆ ಏನೋ ಇದೆ ಎಂಬ ಭ್ರಮೆಯಲ್ಲಿ ಇದ್ದರೆ ಊಹನೆಗೆ ನಿಲಕಲಾರದ್ದು ಅಲ್ಲಿರುತ್ತದೆ. ಸಿನಿಮಾ ಹೇಗೆ ಭ್ರಮೆಯನ್ನು ಸೃಷ್ಟಿ ಮಾಡುತ್ತದೆ ಎಂದರೆ, ಬಾಲ್ಯದಲ್ಲಿ ಉಪ್ಪಳದ ಸಫಾಯರ್ ಥಿಯೇಟರ್ ನಲ್ಲಿ ನಾನು ಮೊದಲ ಸಿನಿಮಾ ನೋಡಿದಾಗ ಅಲ್ಲಿನ ತೆರೆಯ ಹಿಂದಿದ್ದ ಬಾಗಿಲಲ್ಲಿ  ಇಣುಕಿ ನೋಡಿದ್ದೆ, ಒಳಗೆ ಯಾರಾದರೂ ಇರಬಹುದೇ ಅಂತ? ಅದು ಅಮಾಯಕ ಭ್ರಮೆಯಾದರೆ, ಈಗ ಭ್ರಮೆ ಅಂತ ಗೊತ್ತಿದ್ದರೂ ಅದಕ್ಕೆ ಶರಣಾಗುತ್ತಿದ್ದೇವೆ.

                 ಕೆಲವು ವರ್ಷಗಳ ಹಿಂದೆ  ಬೆಂಗಳೂರಿಗೆ ಬಂದ ಹೊಸತು. ಒಬ್ಬರು ಸಿನಿಮಾ ನಟಿಯ ಆದಾಯ ತೆರಿಗೆ ಹಾಗು ಇನ್ನಿತರ ಕಛೇರಿ ಕೆಲಸಗಳಿಗೆ ಅವರನ್ನು ಭೇಟಿಯಾಗಬೇಕಿತ್ತು. ಅವರು ಶೂಟಿಂಗ್ ನಡೆಯುವ ಸ್ಥಳಕ್ಕೆ ಬರಹೇಳಿದರು. ನನಗೂ ಬೆಂಗಳೂರಿಗೆ ಬಂದು ಸಮಯವಾಗಿದ್ದರೂ ಒಂದು ಸಿನಿಮಾ ನಟನಟಿಯರನ್ನಾಗಲೀ ಸಿನಿಮಾ ಶೂಟಿಂಗ್ ಆಗಲಿ ನಾನು ನೋಡಿರಲಿಲ್ಲ. ಸಹಜವಾಗಿ ಕುತೂಹಲದಿಂದ ಉತ್ಸಾಹದಲ್ಲಿ ಹೋದೆ.  ಅದೊಂದು ಮನೆಯಲ್ಲಿ ಟೀ ವಿ ಸೀರಿಯಲ್ ಚಿತ್ರೀಕರಣ ಆಗುತ್ತಿತ್ತು. ದೊಡ್ಡ ಮನೆ. ಬಹಳ ಜನ ಇದ್ದರು. ಆಗತಾನೆ ಟಿವಿಯಲ್ಲಿ ಸೀರಿಯಲ್ ಆರಂಭವಾಗುವ ಕಾಲ ಅದು. ಟಿವಿಯಲ್ಲಿ ನೋಡುವ ಕಲಾವಿದರು ಹಲವರು ಮೇಕಪ್ ಇಲ್ಲದೇ ಇದ್ದರು. ಅವರನ್ನು ನೋಡುವಾಗ ನಾವೆಂತಹ ಭ್ರಮೆಯಲ್ಲಿ ಇದ್ದೇವೆ ಎಂದು ಆಶ್ಚರ್ಯವಾಯಿತು. ಅವರು ಹೇಗಿದ್ದರೂ ಎಂದು ವಿವರಿಸಿ ಹೇಳುವುದಕ್ಕಿಂತ ನಾವು ವಾಸ್ತವದಲ್ಲಿ ಏನು ನೋಡುತ್ತಿದ್ದೇವೆಯೋ ಅದಕ್ಕಿಂತ ವಿಪರೀತವಾಗಿತ್ತು ಎಂದು ಹೇಳಿದರೆ ಸಾಕು. ಯಾಕೆಂದರೆ ಒಂದು ರಂಗವನ್ನು ಹೀನಾಯವಾಗಿ ಚಿತ್ರಿಸುವುದು ತಪ್ಪು. ಹೇಗೂ ಇರಲಿ ಅದು ಅವರ ಸ್ವಾತಂತ್ರ್ಯ.

                 ನಾನು ನಟಿಯೇ ಕರೆದು ಹೋಗಿದ್ದುದರಿಂದ ಅವರೇ ಒಂದು ಕಡೆಯಲ್ಲಿ ಕರೆದು ಕೂರಿಸಿದರು. ಒಂದಷ್ಟು ಆತಿಥ್ಯ ವಿಶೇಷವಾಗಿ ಸಿಕ್ಕಿತ್ತು. ನಟಿಯೂ ಹಾಗೆ ತುಂಬ ಸ್ನೇಹದಿಂದ ಮಾತನಾಡಿದರು. ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಒಳ್ಳೆ ಗೌರವಯುತವಾಗಿ ನನ್ನನ್ನು ಕಂಡರು. ಮನೆಯ ಒಳಗೆ ಶೂಟಿಂಗ್ ಆಗುತ್ತಿತ್ತು. ಪ್ರಖರವಾದ ಲೈಟ್..ಯಾವುದೋ ಮನೆಯ ದೃಶ್ಯ ಚಿತ್ರೀಕರಣವಾಗುತ್ತಿತ್ತು. ಸುತ್ತಲೂ ಬಹಳಷ್ಟು ಮಂದಿ ನೋಡುತ್ತಿದ್ದರು. ನಾನೂ ಕುತೂಹಲದಿಂದ ಹೋಗಿ ಆ ಜನಗಳ ನಡುವೆ ನಿಂತು ನೋಡುತ್ತಿದ್ದೆ. ಸಿನಿಮಾ ಅಥವಾ ಸೀರಿಯಲ್ ಎಷ್ಟು ಆಸಕ್ತಿದಾಯಕವಾಗಿರಬಹುದೋ ಅದಕ್ಕೆ ತೀರ ತದ್ವಿರುದ್ಧವಾಗಿತ್ತು. ಅದೂ ಒಂದು ಭ್ರಮೆ.  ಹತ್ತು ಹದಿನೈದು ನಿಮಿಷ ನೋಡಿದೆ. ಇಷ್ಟೇನಾ ಅಂತ ಅನ್ನಿಸಿದರೂ, ತೆರೆಯ ಮೇಲಿನ ಕಸರತ್ತಿಗೆ ಎಷ್ಟು ಶ್ರಮ ಪಡುತ್ತಿದ್ದಾರೆ ಎಂದು ಅಚ್ಚರಿಯಾಯಿತು. ಹಾಗೇ ಜನರ ನಡುವೆ ನಿಂತು ನೋಡುತ್ತಿರಬೇಕಾದರೆ ನನ್ನ ಹೆಗಲ ಮೇಲೆ ಭಾರವಾದ ಕೈ ಬಂದು ಬಿತ್ತು. ಹತ್ತಿರದ ಪರಿಚಯದವರಂತೆ ಹೆಗಲಿಗೆ ಯಾರು ಕೈ ಹಾಕಿದರೂ ಎಂದು ಗಾಬರಿಯಿಂದ ನೋಡಿದರೆ ಸೀರಿಯಲ್ ನಟಿ ಒಬ್ಬರು ನಗುತ್ತಾ ನಿಂತು ಏನೂ ಕಲ್ಪನೆಯಿಲ್ಲದೆ ಮುಜುಗರವಿಲ್ಲದೆ ಸಹಜವಾಗಿ ಚಿತ್ರೀಕರಣ ನೋಡುತ್ತಿದ್ದರು. ನನಗೇ ಒಂದಷ್ಟು ಮುಜುಗರವಾಗಿ ನಾನು ನಿಧಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡಿದೆ. ಅವರ ನಡುವೆ ಅಂತಹುದೆಲ್ಲ ಸಹಜ. ಅದರಲ್ಲಿ ತಪ್ಪೇನೂ ಇಲ್ಲ. ಹೆಗಲಿಗೆ ಕೈ ಹಾಕುವುದು, ಕೈ ಕುಲುಕುವುದು ತಬ್ಬಿಕೊಳ್ಳುವುದು ಇದೆಲ್ಲ ಮಡಿವಂತಿಕೆಯನ್ನು ಬಿಟ್ಟು ಬಹಳ ಗೌರವದಿಂದಲೇ ನಡೆಯುವ ವರ್ತನೆಗಳು. ಅದರಲ್ಲಿ ತಪ್ಪೇನು ಇದೆ? ಒಂದೇ ಮನೆಯವರಂತೆ ಈ ವ್ಯವಹಾರ. ನಾವು ಮಾತ್ರ ಭ್ರಮಾಧೀನರಾಗಿ ಯಾವುದೋ ಕಲ್ಪನೆಯಿಂದ ಇದ್ದು ಬಿಡುತ್ತೇವೆ. ತೆರೆಯ ಮೇಲೆ ದೊಡ್ಡ ಕರಿಮಣಿ ಹಾಕಿ ತಲೆತುಂಬಾ ಹೂ ಮುಡಿದು ರೇಷ್ಮೆ ಸೀರೆ ಉಟ್ಟ ಗರತಿ ಅಲ್ಲಿ ಯಾರದೋ ಹೆಗಲಿಗೆ ಕೈಹಾಕಿಯೋ ಅಥವಾ ಹೇಗೋ ಇರುವುದು ನೋಡಿ ನನ್ನ ಭ್ರಮೆಯೂ ಒಂದಷ್ಟು ಕಳಚಿಬಿತ್ತು.

             ಇದೊಂದು ಘಟನೆಯಾದರೆ, ಒಂದು ಸಲ ನಾನು ಯಾವುದೋ ಸರಕಾರಿ ಕಛೇರಿಗೆ ಹೋಗಿದ್ದೆ. ಅಲ್ಲಿಗೆ ಯಾರೋ ಒಬ್ಬ ಸಿನಿಮಾ ನಟಿ ಬಂದಿದ್ದರು. ನಾನು ಅಲ್ಲಿ ಸಂದರ್ಶಕರಿಗಿದ್ದ ಬೆಂಚ್ ಮೇಲೆ ಕುಳಿತಿದ್ದೆ. ಸ್ವಲ್ಪ ಹೊತ್ತು ಕಳೆದಾಗ ಯಾರೋ ನನ್ನ ಹತ್ತಿರ ಕುಳಿತಂತೆ ಭಾಸವಾಯಿತು. ಅಷ್ಟೆ ರಪ್ಪ್ ಅಂತ ಕೂದಲು ನನ್ನ ಮುಖಕ್ಕೆ ಬಡಿಯಿತು. ಯಾವುದೋ ಯೋಚನೆಯಲ್ಲಿ ಎಲ್ಲೋ ನೋಡುತ್ತಿದ್ದ ನಾನು ಗಾಬರಿಯಿಂದ ನೋಡಿದರೆ ಸಿನಿಮಾ ನಟಿ ನನ್ನ ಪಕ್ಕದಲ್ಲೇ ಕುಳಿತು ಜಡೆಯನ್ನು ಬೀಸಿ ಹಿಂದಕ್ಕೆ ಮಾಡುವಾಗ ನನ್ನ ಮುಖಕ್ಕೆ ಬಡಿದಿತ್ತು. ನನಗೆ ನಿಜಕ್ಕೂ ಮುಜುಗರವಾಯಿತು. ಔಚಿತ್ಯ ಸಭ್ಯತೆ ಮೀರಿದ ವರ್ತನೆ ಅಂತ ಅನ್ನಿಸಿ ಅವರನ್ನು ನೋಡಿದೆ. ಅವರು ಕಿರುನಗೆಯಿಂದಲೇ ಸಾರಿ ಅಂತ ಸಹಜವಾಗಿ  ಹೇಳಿದರು. ಅವರಿಗೆಲ್ಲ ಇದು ಸಾಮಾನ್ಯ.

                 ಇದು ಸಿನಿಮಾ ಲೋಕ. ಇಲ್ಲಿ ನಮ್ಮ ಕಲ್ಪನೆಯಂತೆ ಯಾವುದೂ ಇರುವುದಿಲ್ಲ. ನಾವು ಮಡಿವಂತಿಕೆ ಎಂದು ಯಾವುದರಿಂದ ದೂರವಿರುತ್ತೇವೆಯೋ ಅಲ್ಲಿ ಅದು ಸಹಜ. ಟಿವಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಬರ ಮಾಡಿಕೊಳ್ಳುವ ದೃಶ್ಯ ವಿದ್ದರೆ, ಅಲ್ಲಿ ಪುರುಷರನ್ನು ಕೈ ಕುಲುಕಿ ಕರೆದರೆ ಮಹಿಳೆಯರನ್ನು ತಬ್ಬಿಯೇ ಸ್ವಾಗತಿಸುವುದು. ಅದೇನು ವಿಪರೀತ ಎಂದು ಕಾಣುವುದಲ್ಲ. ಅದೆಲ್ಲ ಸಹಜ. ಹಾಗಿರುವಾಗ ಈಗ ಲೈಂಗಿಕ ದೌರ್ಜನ್ಯ ಎನ್ನುವುದಕ್ಕೆ ಪರಿಧಿ ಯಾವುದು ಎಂದು ಅಚ್ಚರಿಯಾಗುತ್ತದೆ.  ಅದನ್ನು ಅನುಭವಿಸುವವರ ಮತ್ತು ವರ್ತಿಸುವವರ ಮನೋಭಾವದಲ್ಲಿರುತ್ತದೆ ಅಂತ ನನ್ನ ಅನಿಸಿಕೆ. ಕೆಲವೊಮ್ಮೆ ಇಂತಹ ವರ್ತನೆಗಳೂ ಎನೂ ನಡೆದಿಲ್ಲ ಎಂಬಂತೆ ಕ್ಷಮಾರ್ಹವಾಗಿರುವಾಗಇನ್ನೊಮ್ಮೆ ಅದು ದೊಡ್ಡ ಅಪರಾಧವೆಂಬಂತೆ ಬದಲಾಗಿಬಿಡಬಹುದು. ಯಾವುದು ತಪ್ಪು ಯಾವುದು ಸರಿ ಅಂತ ನಿರ್ಣಯಿಸುವುದು ಕಷ್ಟ. ಹಾಗಿದ್ದರೂ ಲೈಂಗಿಕ ದೌರ್ಜನ್ಯ ಮಾನವೀಯತೆಯನ್ನು ಮೀರಿದ್ದು. ಅಂತಹ ಮಾನಸೀಕತೆ ಅಕ್ಷಮ್ಯ ಅಪರಾಧ. ಮತ್ತೊಬ್ಬನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವ ವರ್ತನೆಯಾದರೂ ಅದು ಮಹಾಪರಾಧ. ಈ ದೌರ್ಜನ್ಯ ಮೇಲು ನೋಟಕ್ಕೆ ಮಹಿಳೆಯರಿಗೆ ಮಾತ್ರ ಸೀಮೀತವಾದರೂ ಹಲವು ಸಲ ಪುರುಷರಿಗೂ ಅನ್ಯಾಯವಾಗಿ ತಟ್ಟುವುದಿದೆ. ಹಲವು ಸಲ ಇದು ಮಹಿಳೆಯರಿಗೆ ಅಸ್ತ್ರವಾಗಿ ಪರಿಣಮಿಸಿದ್ದೂ ಇದೆ.  ಹಲವು ಘಟನೆಗಳಲ್ಲಿ ವಾಸ್ತವಾದ ಸತ್ಯ ಏನು ಅಂತ ಕೊನೆಯವರೆಗೂ ತಿಳಿದಿರುವುದಿಲ್ಲ. ನಾವು ಭ್ರಮೆಯಲ್ಲಿ ಏನೋ ಒಂದು ತಿಳಿದಿರುತ್ತೇವೆ. ಅಲ್ಲಿ ಇನ್ನೇನೋ ಸತ್ಯವಿರುತ್ತದೆ.

                 ಸತ್ಯ ಸುಳ್ಳು ಇದರೆ ವಿವೇಚನೆಗೆ ಹೋಗದೆ ಸಿನಿಮಾ ಎಂಬ ಭ್ರಮೆಯಿಂದ ಹೊರಗೆ ಬಂದು ಯೋಚಿಸುವುದು ಉತ್ತಮೆ. ಸಿನಿಮಾ ನೋಡಿದ ನಂತರ ಅದನ್ನು ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತ ಗೊಳಿಸಬೇಕು.  ನಮ್ಮ ನೈಜ ಬದುಕಿಗೆ ಅದನ್ನು ಎಳೆದು ತರುವುದು ಅತ್ಯಂತ ಮೂರ್ಖತನ. ಸಿನಿಮಾ ನಟ ನಟಿಯರ ಖಾಸಗೀ ಬದುಕು ಹೇಗಿದ್ದರೂ ಅದನ್ನು ಅಲ್ಲಿಗೇ ಬಿಟ್ಟು ಬಿಡಬೇಕು. ನಾವು ವಾಸ್ತವವನ್ನು ಒಪ್ಪಿಕೊಂಡು ಬದುಕಬೇಕು. ಮೂರ್ಖರಂತೆ ಭ್ರಮಾಧೀನರಾಗಿ ಮನುಷ್ಯರನ್ನು ದೇವರಂತೆ ಕಾಣುವುದು ನಮ್ಮ ಮಾನಸಿಕ ದೌರ್ಬಲ್ಯವಾಗುತ್ತದೆ.  ಸಿನಿಮಾ ಪ್ರಪಂಚ ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತವಾಗಬೇಕು.

               

 

                

Sunday, August 25, 2024

ಮಲಯಾಳಿ ಹೇಳಿದ ಕಥೆ

"ಯಾವುದು ತಪ್ಪು ಅಥವಾ ಅಪರಾಧ ಅಂತ ತಿಳಿದರೂ ಉದ್ದೇಶ ಪೂರ್ವಕವಾಗಿ ಅದನ್ನೇ  ಮಾಡುತ್ತೇವೆಯೋ ಅದು ದುರಹಂಕಾರವಾಗುತ್ತದೆ. " 

        ನಮ್ಮ ದುರಹಂಕಾರದ ಪರಿಣಾಮ ನಾವೇ ಅನುಭವಿಸುವುದಾದರೆ ಒಂದು ರೀತಿಯಲ್ಲಿ ನ್ಯಾಯ ಎನ್ನಬಹುದೇನೋ. ಆದರೆ ಯಾರದೋ ತಪ್ಪಿಗೆ ನಾವು ಪರಿಣಾಮ ಎದುರಿಸುವಾಗ, ಆ ಅನ್ಯಾಯಕ್ಕೆ ನಾವೇ ಎರವಾಗುವಾಗ ಯಾರನ್ನು ಹೇಳುವುದು? ಮಾಡಿದ ಅಪರಾಧದ ಕಾರಣ ನಾವು ಭಗವಂತನ ಎದುರು ನಿಲ್ಲುವುದಕ್ಕೂ ಅರ್ಹತೆಯನ್ನು ಕಳೆದುಕೊಂಡಿರುತ್ತೇವೆ. 

ವಯನಾಡು ಇತ್ತೀಚೆಗೆ ವಿಶ್ವದ ಗಮನ ಸೆಳೆದ ಮಲಯಾಳಿ ಜಿಲ್ಲೆ. ಭೀಕರ ನೆರೆ ಪ್ರವಾಹ, ಭೂ ಕುಸಿತ, ಒಂದು ರಾಷ್ಟ್ರೀಯ ದುರಂತವಾಗಿ ಗಮನಸೆಳೆದು ಬಿಟ್ಟಿತು. ಹೆಚ್ಚು  ಮುಸ್ಲಿಂ ಜನರು  ವಾಸಿಸುವ ಪ್ರದೇಶ. ಮತ್ತು ಇಲ್ಲಿನ ಹೆಚ್ಚಿನವರು ಜೀವನ ಮಾರ್ಗಕ್ಕೆ ಪರ ಊರಿನಲ್ಲೂ ಗಲ್ಬ್ ದೇಶಗಳಲ್ಲೂ ದುಡಿಯುತ್ತಿದ್ದಾರೆ. ಬೆಂಗಳೂರಲ್ಲೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಮೆಜೆಸ್ಟಿಕ್ ನಲ್ಲಿ  ಹಲವು ಮಾರಾಟ ಮಳಿಗೆಗಳಲ್ಲಿ ಮಲಯಾಳಿಗಳೇ ತುಂಬಿದ್ದಾರೆ.  ವಯನಾಡಿನ ಹಲವು ಮಲಯಾಳಿ ಗ್ರಾಹಕರು ನನ್ನಿಂದ ಜಿ ಎಸ್ ಟಿ ಸಂಭಂಧಿತ ಸಲಹೆ  ಹಾಗೂ ಇತರ ಸೇವೆಯನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಒಬ್ಬನನ್ನು ಇತ್ತೀಚೆಗೆ ಭೇಟಿಯಾದೆ. ಆತ ಹೇಳಿದ ಒಂದು ಕಥೆ.   

ಕೆಲವು ವರ್ಷಗಳ ಹಿಂದೆ ಗಲ್ಪ್ ಗೆ ಉದ್ಯೋಗ ಅರಸಿ ಬಂದಿದ್ದ. ಗಲ್ಪ್ ಗೆ ಬಂದು ದುಡಿಯುವುದಕ್ಕಾರಂಭಿಸಿದಾಗಲೇ ಆತನ ಉಮ್ಮ ಮತ್ತು ಕುಟುಂಬ ಹೊಟ್ಟೆತುಂಬ ಉಣ್ಣುವುದಕ್ಕೆ ಸಾಧ್ಯವಾಗಿದ್ದು. ಊರಲ್ಲಿದ್ದಾಗ ಒಂದಷ್ಟು ದರ್ಖಾಸ್ತು ಭೂಮಿ ಇತ್ತು. ಅಪ್ಪನಿದ್ದಾಗ ಒಂದಷ್ಟು ಗುಡ್ಡ ತೋಟ ಅಂತ ಇದ್ದರೂ ಅಪ್ಪನ ಕಾಲಾನಂತರ ಅದು ಹಂಚಿ ಹೋಳಾಗಿ ಕಡು ಬಡತನ ಎಲ್ಲ ಮನೆಗಳಲ್ಲೂ ತಾಂಡವವಾಡುತ್ತಿತ್ತು. ಕೂಲಿ ಕೆಲಸಕೂಡ ಆ ಕಾಡಿನ ಅಂಚಿನಲ್ಲಿ ಸಿಗುತ್ತಿರಲಿಲ್ಲ. ಹತ್ತಿರದ ನಗರಕ್ಕೆ ಅಥವ ದೂರದ ಊರುಗಳಿಗೆ ಹೋಗಿ ದುಡಿಯಬೇಕಿತ್ತು. ಇಂತಹ ಸನ್ನಿವೇಶದಲ್ಲಿ ಆತನ ಅಕ್ಕ ತಂಗಿಯರ ಮದುವೆಗೆ ಅಪ್ಪ ಮಾಡಿದ್ದ ಸಾಲದ  ಹೊರೆ ಆತನಿಗೆ ತಾನಾಗಿಬಿದ್ದಿತ್ತು. ಹಿರಿಯ ಅಣ್ಣಂದಿರು ಅವರ ದಾರಿ ನೋಡಿ ಜವಾಬ್ದಾರಿಗಳಿಗೆ ಏನೇನೋ ಕಾರಣ ಕೊಟ್ಟು ದೂರಾದರೆ, ಮನೆಯಲ್ಲೇ ಇದ್ದ ಈತ ಕಾಲೇಜು ಮೆಟ್ಟಲು ಹತ್ತಿ ಒಂದಷ್ಟು ವಿದ್ಯಾಭ್ಯಾಸ ಗಳಿಸಿದ್ದೇ ದೊಡ್ಡಸಾಧನೆಯಾಗಿದ್ದು ಮಾತ್ರವಲ್ಲ, ಈತ ವಿದ್ಯಾವಂತ ಎಂಬ ಕಾರಣಕ್ಕೆ  ಇದ್ದ ಸಂಸಾರದ ಭಾರ ಈತನ ತಲೆ ಮೇಲೆ ಬಿದ್ದಿತ್ತು.  ಯಾರದೋ ಸಹಾಯದಿಂದ ವೀಸಾ ಗಿಟ್ಟಿಸಿ ಗಲ್ಫ್ ಗೆ ಬಂದು ತನ್ನ ಮನೆಯನ್ನು ಸುಸ್ಥಿತಿಗೆ ತಂದು ನಿಲ್ಲಿಸಿದ್ದ. ತನ್ನ ದುಡಿಮೆಯಿಂದಲೇ ಸಾಲ ಎಲ್ಲ ಮುಗಿಸಿ ಹೊಸ ಮನೆ ಕಟ್ಟಿಕೊಂಡಿದ್ದ.  ಆ ಮನೆ ಕಟ್ಟಿಕೊಳ್ಳುವುದಕ್ಕೂ ಅಣ್ಣಂದಿರು ಎನ್ನಿಸಿಕೊಂಡವರು ಬಳಿಯಲ್ಲೇ ಇದ್ದು ಸಾಕಷ್ಟು ತೊಂದರೆ ಕೊಟ್ಟಿದ್ದರು. ಹಂಚಿ ಹೋದ ಭೂಮಿಗಾಗಿ ನಿತ್ಯ ಕಲಹ. ಅಪ್ಪನಿರುವಾಗಲೇ ಜಾಗದ ಗಡಿಯ ಬಗ್ಗೆ ನಿತ್ಯ ಕಲಹ. ಕೋರ್ಟು ಕಛೇರಿ ಅಂತ ಅಲೆದಾಡಿದ್ದು ಇದೆ.   ಕೇವಲ ಹೆತ್ತ ತಾಯಿಗೆ ಬೇಕಾಗಿ ಎಲ್ಲವನ್ನೂ ಅಷ್ಟೋ ಇಷ್ಟು ಸಹಿಸಿಕೊಂಡರೂ ತುಂಡು ಭೂಮಿಗಾಗಿ ದಾಯಾದಿ ಕಲಹ ನಿತ್ಯ ಕಥೆಯಾಗಿತ್ತು. 

ಹೀಗಿರುವಾಗ ಊರಿನಿಂದ  ಒಂದು ರಾತ್ರಿ ಮಿತ್ರನ ಕರೆ ಬರುತ್ತದೆ. ಮೊದಲ ದಿನವಷ್ಟೆ ಕರೆಮಾಡಿ ತನ್ನ ತಾಯಿಯ ಜತೆ ಮಾತನಾಡಿದ್ದ. ಅದಾಗಲೇ ಮಳೆ ಪ್ರವಾಹ ಶುರುವಾಗಿ ಟಿವಿಯಲ್ಲೆ ಸುದ್ದಿ ಬಿತ್ತರವಾಗುತ್ತಿತ್ತು. ಪ್ರತಿ ದಿನ ಗಾಬರಿಯಲ್ಲೇ ಕರೆ ಮಾಡುತ್ತಿದ್ದ. ಆಗ ಅಮ್ಮ ಧೈರ್ಯ ಹೇಳುತ್ತಿದ್ದಳು. ಅವರ ಊರಲ್ಲಿ ಪ್ರವಾಹದ ಭೀತಿ ಅಷ್ಟಾಗಿ ಇರಲಿಲ್ಲ. ಆದರೆ ಮಿತ್ರ  ಕರೆ ಮಾಡಿ ಊರಿಗೆ ಬರುವಂತೆ  ಕರೆದಿದ್ದ. ಗಲ್ಪ್ ನಿಂದ ಬರುವುದೆಂದರೆ ಅಷ್ಟು ಸುಲಭವಲ್ಲ. ಅದೇನು ಹತ್ತಿರದ ಕೋಯಿಕ್ಕೋಡು ತ್ರಿಶೂರ್ ನಿಂದ ಬರುವಂತೆ ಅಲ್ಲವಲ್ಲ. ಹೇಗೋ ಕಷ್ಟಪಟ್ಟು ಆತಂಕದಿಂದಲೇ ವಿಮಾನವೇರಿ ಸ್ವಂತ ಊರಿಗೆ ಧಾವಿಸಿ ಬರುತ್ತಾನೆ. ತನ್ನೂರಿಗೆ ಕಾಲಿಡುವುದಕ್ಕೂ ಮಳೆ ಪ್ರವಾಹ ಬಿಡದಂತಹ ಪರಿಸ್ಥಿತಿ. ತನ್ನಮ್ಮ ಸಂಸಾರದ ಬಗ್ಗೆ ಆತಂಕ. ತನ್ನೂರಿಗೆ ಹೋಗುವುದಕ್ಕೆ ಯಾವ ವಾಹನವೂ ಇಲ್ಲ. ಯಾವುದೋ ಜೀಪ್ ಹತ್ತಿ ಹೇಗೋ ಮನೆಯ ಹತ್ತಿರ ಬಂದು ನೋಡಿ ಕುಸಿದು ಬಿಡುತ್ತಾನೆ. ಎಲ್ಲಿದೆ ತನ್ನ ಮನೆ? ಬರೀ ಕೆಸರು ನೀರು ಮಣ್ಣು ಕಲ್ಲು ಬಂಡೆ. ದೊಡ್ಡ ಗುಡ್ಡವೇ ಕುಸಿದು ನೀರಿನ ಪ್ರವಾಹಕ್ಕೆ ಇಡೀ ಊರೇ ರಾತ್ರಿ ಬೆಳಗಾಗುವುದರೊಳಗೆ ಕೊಚ್ಚಿ ಹೋಗಿರುತ್ತದೆ. ತನ್ನಮ್ಮ ಬಂಧು ಬಳಗ ಎಲ್ಲಿ ಅಂತ ಯಾರನ್ನೂ ಕೇಳುವುದಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ. ಅಲ್ಲೇ ಓಡಾಡಲು ಸಾಧ್ಯವಾಗುವ ಎಲ್ಲ ಕಡೆ ನೀರು ಕೆಸರು ಮಣ್ಣು ಎನ್ನದೆ ಹುಡುಕುತ್ತಾನೆ. ದೂರದಲ್ಲಿ ಮನೆ ಇರುವ ಜಾಗ ಕಂಡರೂ ಅಲ್ಲಿಗೆ ಹೋಗಲಾಗದ ಸ್ಥಿತಿ. ಮನೆಯ ಕುರುಹೇ ಇಲ್ಲದ ಮೇಲೆ ಇನ್ನು ಮನೆಯವರನ್ನು ಎಲ್ಲಿ ಹುಡುಕುವುದು. ದೂರದಲ್ಲಿ ತನ್ನ ಮನೆಯ ಯಾವುದೋ ಭಾಗವನ್ನು ಕಾಣುತ್ತಾನೆ. ಸ್ವಲ್ಪ ದೂರದಲ್ಲಿ ತನ್ನಣ್ಣನ ಮನೆ ....ಛೇ ಮೊನ್ನೆ ಮೊನ್ನೆಯ ತನಕವೂ ಇದೇ ಭೂಮಿಗೆ ಕಚ್ಚಾಡಿದ್ದು ತನ್ನ ಭೂಮಿ ಅಂತ ಬಡಿದಾಡಿದ್ದು ನೆನಪಿಗೆ ಬರುತ್ತದೆ. ಈಗ ಜಗಳವಾಡಿದ ಅಣ್ಣನ ಮುಖವಾದರೂ ಕಾಣಬಹುದೇ ಎಂದು ಸಿಕ್ಕ ಸಿಕ್ಕಲ್ಲಿ ನೋಡುತ್ತಾನೆ. ಏನೂ ಕಾಣುವುದಿಲ್ಲ. ಇಡೀ ಉರೇ ಕೊಚ್ಚಿ ಹೋಗಿರುವಾಗ ಯಾರಲ್ಲಿ ಕೇಳುವುದು? ಎಲ್ಲವನ್ನು ಕಳೆದುಕೊಂಡ ಆತನ ಸ್ಥಿತಿ. ಯಾರು ಎಷ್ಟೇ ಮರುಗಿದರೂ ಕೊಚ್ಚಿ ಹೋದ ಬದುಕು ಮತ್ತೆ ಕಟ್ಟುವುದಕ್ಕೆ ಸಾಧ್ಯವಿಲ್ಲ.  ಯಾಕಾಗಿ ಕಟ್ಟಬೇಕು? ಯಾರಿಗಾಗಿ ಕಟ್ಟಬೇಕು?  ಎರಡು ದಿನ ಕರೆಮಾಡಿದಾಗ ಅಮ್ಮನ ಧ್ವನಿ ತರಂಗಗಳು ಇನ್ನೂ ಮಾರ್ದನಿಸಬಹುದೇ? ಪ್ರತೀ ಸಲ ಊರಿಗೆ ಬಂದಾಗ ಮೋನೇ ಅಂತ ಕರೆಯುವ ಉಮ್ಮನ ಮುಖ ಕಾಣಬಹುದೇ ಅಂತ ಹುಡುಕುತ್ತಾನೆ.  ಆದರೆ ಮಣ್ಣು ಎಲ್ಲವನ್ನೂ ನಿಗೂಢವಾಗಿ ಬಚ್ಚಿಡುತ್ತದೆ. ಮನುಷ್ಯ ಯಃಕಶ್ಚಿತ್ ಮನುಷ್ಯ. 

ಬದುಕಿರುವಾಗ ಇದು ನನ್ನ ಭೂಮಿ  ಎಂದು ಎಳೆದ ಗೆರೆ ಕಟ್ಟಿದ ಬೇಲಿ ಹುಡುಕುವುದು ಇರಲಿ, ಮನೆಯೇ ಉಳಿದಿಲ್ಲ ಎಂದ ಮೇಲೆ ಬೇಲಿ ಕಟ್ಟಿ ಕೊಂಡು ಮಾಡುವುದೇನು. ಬದುಕಿರುವಾಗ ಇದು ನನ್ನದು ಇದು ನನ್ನದು ಅಂತ ಹೇಳುತ್ತೇವೆ. ಆದರೆ ಪ್ರಕೃತಿ ಮಾತ್ರ ಇದು ನಿನ್ನದಲ್ಲ ನನ್ನದು ಅಂತ ಸಾರಿ ಸಾರಿ ಹೇಳುತ್ತದೆ. ಆದರೆ ಪ್ರಕೃತಿಯ ಭಾಷೆ ನಮಗೆ ಅರ್ಥವಾಗುವುದಿಲ್ಲ. ಅರ್ಥವಾದರೂ ನಮ್ಮ ದುರಹಂಕಾರ ಅದನ್ನು ಒಪ್ಪಿಕೊಳ್ಳೂವುದಿಲ್ಲ. ಬದುಕಿರುವಾಗ ತುಂಡು ಭೂಮಿಗಾಗಿ ಜಗಳ ಮಾಡುತ್ತೇವೆ. ತುಂಡು ಭೂಮಿಗಾಗಿ ಅಧಿಕಾರದಲ್ಲಿದ್ದವರೇ ಸ್ವಾರ್ಥದಿಂದ ಹಗರಣ ಮಾಡುತ್ತಾರೆ. ಆದರೆ ಒಂದು ಕ್ಷಣ ಸಾಕು ಪ್ರಕೃತಿ ತನ್ನ್ ಯಾಜಮಾನ್ಯವನ್ನು ತೋರಿಸುತ್ತದೆ. ಭೂಮಿಗಾಗಿ ಸಂಪತ್ತಿಗಾಗಿ ನಾವು ಹೋರಾಡುತ್ತಿದ್ದರೆ ಇಂತಹ ಕಥೆಗಳು ನಮ್ಮ ಹೋರಾಟಗಳನ್ನು ಅರ್ಥ ಶೂನ್ಯವಾಗಿಸುತ್ತವೆ. 


Thursday, August 22, 2024

ಹೀಗೊಂದು ಜ್ವರದ ಪ್ರವರ

ಮನೆಗೆ ಬಂದಾಗ ತಮ್ಮನ ಮಗಳು ಜ್ವರದಿಂದ ಮಲಗಿದ್ದಳು. ಸಣ್ಣದಾಗಿ ನರಳುತ್ತ ಇದ್ದಳು. ಹಣೆ ಮುಟ್ಟಿ ನೋಡಿದೆ ಸ್ವಲ್ಪ ಜ್ವರವಿತ್ತು. ಮೂಗಿನಲ್ಲಿ ಸೊರ ಸೊರ ಸದ್ದು. ಇದು ವಾತಾವರಣದ ವೆತ್ಯಾಸದಲ್ಲಿ ಬಂದ ಶೀತ ಜ್ವರ .  ಮೆತ್ತಗೆ  ಕೇಳಿದೆ ಜ್ವರವಾ? ಅಷ್ಟೆ ಅದಕ್ಕೆ ಒತ್ತು ಕೊಡುವಂತೆ ಹೇಳಿದಳು, ತಲೆ ನೋವು ಮೈಕೈ ನೋವು ಖೆಮ್ಮು...ಹಸಿವಿಲ್ಲ..ಎಲ್ಲ ಶೀತ ಜ್ವರ ಅಕ್ಕ ತಮ್ಮ ಅಣ್ಣತಂಗಿಯರು. ಜ್ವರ ಹೇಗುಂಟು? ಅಂತ ಕೇಳಿದರೆ ಜ್ವರ ಪರಿವಾರ ಸಹಿತ ಕ್ಷೇಮವಾಗಿ ಉಂಟು. ನಾವು ಮಾತ್ರ ಬಳಲಿ ಬೆಂಡಾಗಿ ಹೋಗಿದ್ದೇವೆ. 

ಮಗಳ ಜ್ವರ ನೋಡಿ ಮನೆಯವರೆಲ್ಲರೂ ತಲೆಗೊಂದರಂತೆ ಸಲಹೆ ಸೂಚನೆ ಜತೆಯಲ್ಲಿ ಒಂದಷ್ಟು ಬೈಗುಳ ಎಲ್ಲ ಹಿತೋಪದೇಶ ಮಾಡಿದರು. ಡೋಲೋ ತೆಗೆದುಕೋ? ಆಸ್ಪತ್ರೆಗೆ ಹೋಗೋಣ. ಹೀಗೆ ತಲೆ ತಿಂದು ತಲೆನೋವು ಕೊಟ್ಟರ ಆಕೆ ಮಾತ್ರ ಸುತರಾಂ ಒಪ್ಪಲಿಲ್ಲ. ದೊಡ್ಡಪ್ಪ ಬರಲಿ ಅಂತ ಮುಸುಕು ಎಳೆದು ಮಲಗಿದವಳು, ನಾನು ಬಂದಾಗ ಕಣ್ಣು ಬಿಟ್ಟು ನೋಡಿದ್ದಳು. ಅವಳ ಹಲವಾರು ಸಮಸ್ಯೆಗಳಿಗೆ ಅವಳು ಬರುವುದು ನನ್ನ ಬಳಿಗೆ. ಮಾನಸಿಕವಾದ ಗೊಂದಲಗಳು, ಹತಾಶೆ ಹೀಗೆ ಒಂದಾದರೆ ಆರೋಗ್ಯ ಸಮಸ್ಯೆ ಬಂದಾಗಲೂ ನನ್ನ ಸಲಹೆ ಸೂಚನೆಗಳು ಆಕೆಗೆ ವೇದ ವಾಕ್ಯ. ಅತೀವ ನೋವು  ದುಃಖವಾದಾಗ ನನ್ನಿಂದಲೇ  ಅದಕ್ಕೆ ಸಾಂತ್ವಾನ ಪರಿಹಾರ ಬಯಸುತ್ತಾಳೆ. ನಮ್ಮ ನಡುವೆ ಅದೊಂದು ಮಾನಸಿಕ ಭಾವನಾತ್ಮಕ ಸಂಭಂಧ ಬೆಳೆದುಬಿಟ್ಟಿದೆ. ಭಾವನಾತ್ಮಕ ಸಂಗತಿಗಳು ನಡುವೇ ಸೇತುವೆಯಂತೆ ಬಲಿದು ಬಿಟ್ಟರೆ ಅದು ಹಲವು ಸಲ ಶಿಥಿಲವಾದಂತೆ ಕಂಡರೂ ಅದು ಅಂತರಂಗದಲ್ಲಿ ಬಹಳ ಬಲಿಷ್ಠವಾಗಿರುತ್ತವೆ. ಯಾಕೆಂದರೆ ಭಾವನೆಗಳ ಅಸ್ಥಿವಾರವೇ ಅದಕ್ಕೆ ಕಾರಣ. ಸೇತುವೆಯ ಕಂಬ ಕಂಬಗಳು ಸನ್ನಿವೇಶಗಳಿಂದ ನಿರ್ಮಾಣವಾಗಿರುತ್ತವೆ. ಅದು ಸುಲಭದಲ್ಲಿ ಕುಸಿಯುವುದಿಲ್ಲ. 

ಸರಿ, ಆಕೆಗೆ ಯಾವ ಅರೋಗ್ಯ ಸಮಸ್ಯೆಯಾದರೂ ಆಕೆ ಮೊದಲು ಬರುವುದು ನನ್ನ ಬಳಿಗೆ ..ದೊಡ್ಡಪ್ಪಾ ಅಂತ ರಾಗ ಎಳೆಯದೇ ಆಕೆಗೆ ಬಂದ ನೆಂಟರು ಹೋಗುವುದಿಲ್ಲ. ನಾನೂ ಅಷ್ಟೇ  ಮನೆಯಲ್ಲಿ ಇದ್ದ ವಸ್ತುಗಳಲ್ಲೇ ಕಷಾಯ ಲೇಹ್ಯ ಅಂತ ನನ್ನ ಜ್ಞಾನದ ಮಿತಿಯೊಳಗೆ  ಏನಾದರೂ ಕೊಟ್ಟು ಬಿಡುತ್ತಿದ್ದೆ. ಬಹಳಷ್ಟು ಸಮಯದಲ್ಲಿ ಆಕೆಗೆ ವಾಸಿಯಾಗುತ್ತಿತ್ತು. ಹಾಗಾಗಿ...ದೊಡ್ಡಪ್ಪ ಬರಲಿ ಎಂದು ನಿರಾಳವಾಗಿಬಿಡುತ್ತಾಳೆ.  ನಾನು ಹಲವು ಸಲ ಆಕೆಗೆ ಹೇಳಿದ್ದೆ. ಜ್ವರ ಬಂತು ಅಂತ ಗಾಬರಿಯಾಗುವುದು ಬೇಡ. ಒಂದು ದಿನ ಕಾದು ನೋಡಬೇಕು. ಆನಂತರ ಕಡಿಮೆಯಾಗಿಲ್ಲ ಎಂದಾದರೆ ವೈದ್ಯರಲ್ಲಿಗೆ ಹೋಗಬೇಕು. ಯಾಕೆಂದರೆ ಶೀತ ಜ್ವರದಂತಹ ಸಾಮಾನ್ಯ ವ್ಯಾಧಿಗೆ ದೇಹವೇ ಪ್ರತಿಕ್ರಿಯೆ ಕೊಡುತ್ತದೆ. ವ್ಯಾಧಿಗೆ ಪ್ರತಿರೋಧ ಶಕ್ತಿಯನ್ನು ದೇಹವೇ ಉತ್ಪಾದಿಸುತ್ತದೆ. ನಾವು ಅದಕ್ಕೆ ಅವಕಾಶವನ್ನು ಮಾಡಿ ಕೊಡಬೇಕು. ಜ್ವರ ಬಂದ ತಕ್ಷಣ ಮೆಡಿಕಲ್ ಗೆ ಹೋಗುವುದು ಬಹಳ ಅಪಾಯಕಾರಿ, ಅದಲ್ಲ ಎಂದಾದರೆ ಡಾಕ್ಟರಲ್ಲಿಗೆ ಹೋಗುವುದು. ಡಾಕ್ಟರ್ ಒಂದಷ್ಟು ಆಂಟಿ ಬಯಾಟಿಕ್ ಕೊಡಬಹುದು. ಚುಚ್ಚು ಮದ್ದು ಕೊಡಬಹುದು.ಜರಕ್ಕೆ ಒಂದು ಮಾತ್ರೆಯಾದರೆ, ತಲೆನೋವಿಗೆ ಇನ್ನೊಂದು ಖೆಮ್ಮು ಕಫಕ್ಕೆ ಮತ್ತೊಂದು...ಎಲ್ಲದಕ್ಕೂ ಮಾತ್ರೆಗಳು. ಕಡಿಮೆ ಎಂದರೆ ರೂಪಾಯಿ ಒಂದು ಸಾವಿರ ವ್ಯಯ. ಎರಡು ಮೂರು ದಿನ ಆ ಔಷಧಿಯ ಅಡ್ಡ ಪರಿಣಾಮ, ಈ ಬಾರಿ ಮಗಳು ಯಾವುದಕ್ಕೂ ಒಪ್ಪದೇ ನನ್ನನ್ನೆ ಕಾದು ಕುಳಿತಿದ್ದಳು. 

ನಾನು ಬಂದವನೇ ಶೀತಜ್ವರ ಎಂದು ಖಾತರಿ ಪಡಿಸಿಕೊಂಡು, ಮನೆಯಲ್ಲಿದ್ದ ತುಲಸಿ ಗಿಡದಿಂದ ಎರಡು ಮೂರು ಎಲೆಗಳನ್ನು ಕಿತ್ತುಕೊಂಡು ಅಡಿಗೆ ಮನೆಗೆ ಹೋದೆ. ಚಿಕ್ಕ ಪಾತ್ರೆಯಲ್ಲಿ ಒಂದು ಲೋಟ ನೀರು ಕುದಿಯುವುದಕ್ಕೆ ಇಟ್ಟೆ. ಅದಕ್ಕೆ ಜೀರಿಗೆ ಶುಂಠಿ ಜಜ್ಜಿ ಹಾಕಿದೆ. ನಂತರ,ತುಳಸಿ ಹಾಕಿ ಹತ್ತು ನಿಮಿಷ ಚೆನ್ನಾಗಿ ಕುದಿಸಿದೆ. ಕಷಾಯ ಸಿದ್ದ ಪಡಿಸಿ ಮಗಳಿಗೆ ಕುಡಿಯುವುದಕ್ಕೆ ಕೊಟ್ಟೆ.


ಅರ್ಧ ತಾಸು ಕಳೆದಿರಬೇಕು. ಮಲಗಿಯೇ ಇದ್ದ ಮಗಳು ಎದ್ದು ಕುಳಿತು ಮಾತನಾಡತೊಡಗಿದಳು. ಜ್ವರ ಬಿಟ್ಟಿತ್ತು.  ಮತ್ತೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದೆ. ಮರುದಿನ ಬೆಳಗ್ಗೆ ಒಂದಷ್ಟು ಗೆಲುವಿದ್ದರೂ ಮೈಕೈ ನೋವು ಅಂತ ರಾಗ ಎಳೆದಳು. ಮತ್ತದೆ ಕಷಾಯ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದಕ್ಕೆ ಕೊಟ್ಟೆ. ಆದಿನ ವಾಡಿಕೆಯಂತೆ ವಿಶ್ರಾಂತಿ, ಮತ್ತೆ ಕಾಲೇಜ್ ಗೆ ರಜೆ. ಎರಡನೇ ದಿನ ಜ್ವರ ಮೈಕೈ ನೋವು ಎಲ್ಲ ಕಳೆದು ಮಗಳು ಗೆಲುವಾಗಿಬಿಟ್ಟಳು. 

ಸಮಸ್ಯೆ ಇಲ್ಲಿಗೇ ಮುಗಿಯಲಿಲ್ಲ. ಕಾಲೇಜ್ ಗೆ ರಜ ಹಾಕಿದ್ದಳು. ರಜೆ ಅರ್ಜಿಯ ಜತೆಗೆ ಡಾಕ್ಟರ್ ಪ್ರಿಸ್ಕೃಪ್ಶನ್ ಖಡ್ಡಾಯ ಬೇಕು ಎಂದು ಹೊಸ ಸಮಸ್ಯೆ  ಎದುರಾಯಿತು. ಅದನ್ನು ಹೊಂದಿಸುವುದು ಹೇಗೆ? ಡಾಕ್ಟರ್ ಲ್ಲಿಗೆ ಹೋಗದೇ ಜ್ವರ ಮತ್ತು ಬಳಗವನ್ನು ಚೆನ್ನಾಗಿ ನೋಡಿ ಕಳುಹಿಸಿಯಾಗಿತ್ತು. ನಮ್ಮ ವ್ಯವಸ್ಥೆಗಳು ಹೇಗಿದೆ ನೋಡಿ,  ಕಾಲೇಜ್ ಗೆ ಅರ್ಜಿಯಲ್ಲಿ ಹೆತ್ತವರ ಸಹಿ ಮಾತ್ರ ಸಾಕಾಗುವುದಿಲ್ಲ. ಡಾಕ್ಟರ್ ಚೀಟಿಯೂ ಬೇಕು. ಅದೂ ಸಹ ಅಲೋಪತಿ ಡಾಕ್ಟರ್ ಚೀಟಿ. ರಜ ಒಂದೆರಡು ದಿನ ದೀರ್ಘ ಹೋದರೆ ಆಸ್ಪತ್ರೆಗೆ ಸೇರಿದ ಬಿಡುಗಡೆಯಾದ ಪತ್ರವೂ ಬೇಕು. ಹಾಗಾದರೆ ಮನೆ ಮದ್ದು ಎನ್ನುವುದಕ್ಕೆ ಅವಕಾಶ ಎಲ್ಲಿದೆ? ಯಾವುದೇ ವ್ಯಾಧಿಯಾದರೂ ನಮ್ಮ ಸಂಸ್ಕೃತಿಯಲ್ಲಿ ಮನೆಮದ್ದು ಲೇಹ್ಯ ಕಷಾಯ ಇವುಗಳಿಗೆ ಆದ್ಯತೆಯ ಸ್ಥಾನವಿರುತ್ತದೆ. ಇವರ ನಿಯಮದ ಪ್ರಕಾರ ಆಸ್ಪತ್ರೆಗೆ ಹೋಗಲೇ ಬೇಕು. ವೈದ್ಯರನ್ನು ಕಾಣುವುದು ಅನಿವಾರ್ಯವಾಗಿಬಿಡುತ್ತದೆ. ಅದೂ...ಇಂಗ್ಲಿಷ್ ಡಾಕ್ಟರ್ ! ಹಾಗಾದರೆ ನಮ್ಮ ಸಂಸ್ಕೃತಿಯ ಆಯುರ್ವೇದಕ್ಕೆ ಎಲ್ಲಿ ಸ್ಥಾನವಿದೆ?  ಇನ್ನು ಡಾಕ್ಟರ್ ಬಳಿಗೆ ಹೋಗಿ ಆ ಔಷಧ ತೆಗೆದುಕೊಂಡರೆ ಅದರ ಅಡ್ಡ ಪರಿಣಾಮ ಇದೆಯೋ ಇಲ್ಲವೋ, ದೇಹಕ್ಕೆ ಸಹಜವಾಗಿ ಒದಗುವ ಪ್ರತಿರೋಧ ಶಕ್ತಿ ನಾಶವಾಗುತ್ತದೆ. ಮನುಷ್ಯ ತನ್ನ ಜೀವನ ಶೈಲಿಯಿಂದ ಪ್ರತಿರೋಧ ಶಕ್ತಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ ಸಾಮಾನ್ಯ ಜ್ವರದ ಖಾಯಿಲೆಗೂ ಆಸ್ಪತ್ರೆಹ ಮಾತ್ರೆಗಳನ್ನು ತೆಗೆದುಕೊಂಡರೆ ಪ್ರತಿರೋಧ ಶಕ್ತಿಗೆ ಅವಕಾಶವೇ ಸಿಗುವುದಿಲ್ಲ. ಹಾಗಾಗಿ ಈಗೀಗ ಸಾಮಾನ್ಯ ಜ್ವರ ಶೀತ ಆಗಾಗ ಬರುತ್ತವೆ, ಮಾತ್ರವಲ್ಲ ಅದು ಗಂಭೀರವಾಗಿಬಿಡುತ್ತವೆ. ಇದೊಂದು ರೀತಿಯ ವಿಷ ವರ್ತುಲ ನಮ್ಮ ಸುತ್ತ ಸುತ್ತಿದೆ. 

ಮಗಳು ಕೊನೆಯ ತನಕವೂ ಆಸ್ಪತ್ರೆಗೆ ಹೋಗದೆ ಈ ಸಲ ಗುಣ ಪಡಿಸಿಕೊಂಡಳು.  ಸುಲಭದಲ್ಲಿ ಬಂದ ಖಾಯಿಲೆ ಯಾವುದೇ ಅಡ್ಡ ಪರಿಣಾಮ ಇಲ್ಲದೆ ವಾಸಿಯಾಯಿತಲ್ಲ ಎಂಬ ಸಂತೋಷದಲ್ಲಿ  ಕಾಲೇಜ್ ನಿಯಮ ಏನಿದ್ದರೂ ಅದಕ್ಕೆ ಉತ್ತರಿಸುತ್ತೇನೆ ಎಂಬ ಅವಳ ನಿರ್ಧಾರ ಮತ್ತಷ್ಟು ಗಟ್ಟಿಯಾಗಿದೆ. 


ಅಸ್ಪೃಶ್ಯರಾಗುವ ವ್ಯಸನಿಗಳು

ನಮ್ಮ ಪಕ್ಕದ ಮನೆ ಮಹಡಿಯಲ್ಲಿ ಓರ್ವ ಆಗಾಗ ಹೊರಬಂದು ದೂರ ಕುಳಿತು ಸಿಗರೇಟು ಸೇದುತ್ತಾ ನಿಂತಿರುತ್ತಾನೆ. ಸಿಗರೇಟು ಸೇದಬೇಕು ಎನ್ನುವಾಗ ಸಹಜವಾಗಿ ಹೊರಗೆ ಬಂದು ಸೇದುವುದು ವಾಡಿಕೆ. ಮನೆಯ ಒಳಗೆ ಸಂಭ್ರಮ ಸಡಗರ ಇನ್ನೂಏನೇನೋ ಚಟುವಟಿಕೆಗಳು ಇದ್ದರೂ, ಮನೆಯ ಮುಖ್ಯವಾಹಿನಿಯಿಂದ ದೂರಾ್ಗಿ,  ಹೀಗೆ ಹೊಗೆ ಸೇದುವ ತವಕ ಉಂಟಾದಾಗ  ಹೊರಗೆ ದೂರ ನಿಂತು ಸೇದುತ್ತ ಕುಳಿತು ಬಿಡುವುದು ಸಾಮಾನ್ಯ. ಇದು ಮನೆಯಲ್ಲಿ ಮಾತ್ರವಲ್ಲ, ಹಲವು ಕಾರ್ಯಕ್ರಮಗಳಾದಾಗ ಕೆಲವು ಮಂದಿ ಪ್ರತ್ಯೇಕವಾಗಿ ದೂರಾಗುವುದು ಎಂದರೆ ಅಲ್ಲಿ ಆ ವಾತಾವರಣಕ್ಕೆ ಅಸಹಜವಾಗಿ ಒಂದು ಸಂಭವ ನಡೆಯುತ್ತಿದೆ ಎಂದು ತಿಳಿದುಕೊಳ್ಳಬಹುದು.  ತಮ್ಮದಾದ ದೌರ್ಬಲ್ಯ ಅವರನ್ನು ಮುಖ್ಯ ವಾಹಿನಿಯಿಂದ ದೂರಾಗಿ ಇರುವಂತೆ ಮಾಡುತ್ತದೆ. ತಮ್ಮ ಅಭ್ಯಾಸಗಳಿಂದ ತಾವು ದೂರವೇ ಇರಬೇಕು ಎಂದು ಅವರೇ ಸ್ವತಃ ತಿಳಿದುಕೊಂಡು ದೂರಾಗಿರುವುದು ಎಲ್ಲರಿಂದ ದೂರಾಗಿ ಒಬ್ಬರೇ ಇರುವುದು ಒಂದು ರೀತಿಯ ಅಸ್ಪೃಶ್ಯತೆಯನ್ನು ತಮ್ಮ ಮೇಲೆ ತಾವೇ ಕಂಡುಕೊಳ್ಳುತ್ತಾರೆ. 

ಒಂದು ಬಾರಿ ನಾವು ನಾಲ್ಕು ಜನ ಪರಿಚಯಸ್ಥರು ಒಂದೆಡೆ ಕುಳಿತು ಹೀಗ ಸಾಮಾನ್ಯ ವಿಚಾರಗಳನ್ನು ಮಾತನಾಡುತ್ತ ಇದ್ದೆವು. ನಾವು ನಾಲ್ಕು ಜನ ಮಾತನಾಡುತ್ತಿರಬೇಕಾದರೆ ಒಬ್ಬಾತ ಜೇಬಿನಿಂದ ಸಿಗರೇಟ್ ತೆಗೆದು ಸೇದಲಾರಂಭಿಸಿದ. ಆ ಹೊಗೆಯ ಕಮಟು ವಾಸನೆ ಸಹಿಸುವುದು ನನ್ನಿಂದ ಆಗದೇ ನಾನು ದೂರ ಹೋಗಿ ನಿಂತುಕೊಂಡೆ. ಜತೆಗೆ ನನ್ನನ್ನು ಹಿಂಬಾಲಿಸಿ ಮತ್ತೊಬ್ಬನೂ ಬಂದು ನಾವೇ ಮಾತನಾಡುತ್ತಾ ನಿಂತುಕೊಂಡೆವು.  ಆಗ ನಾನು ಹೇಳಿದೆ , ದೌರ್ಬಲ್ಯಗಳು ಅಸ್ಪೃಶತೆಯನ್ನು ಸೃಷ್ಟಿಸುತ್ತವೆ. ಮೊದಲಿಗೆ ಅರ್ಥವಾಗಲಿಲ್ಲ. ನಂತರ ಕಿರುನಗೆ ಬೀರಿದ.  ಇಂತಹ ಸಂದರ್ಭಗಳಲ್ಲಿ ನಮ್ಮ ದೌರ್ಬಲ್ಯಗಳೇ ನಮಗೆ ಒಂದು ಗೋಡೆಯಾಗಿ ಬದಲಾಗಿಬಿಡುತ್ತದೆ. ಮೇಲಿನಿಂದ ಕಾಣುವುದಕ್ಕೆ ಇದು ಗಂಭೀರ ಅಂತ ಅನ್ನಿಸದೇ ಇದ್ದರೂ ಆಳವಾಗಿ ಚಿಂತಿಸಿದಾಗ, ನಮ್ಮ ದೌರ್ಬಲ್ಯಗಳು ವ್ಯಸನಗಳು ನಮ್ಮನ್ನು ಸಮಾಜದಿಂದ ದೂರ ಕೊಂಡುಹೋಗುತ್ತದೆ ಎಂದು ತಿಳಿದುಕೊಳ್ಳಬಹುದು. 

ಒಬ್ಬ ಮದ್ಯವ್ಯಸನಿಯಾದ ಕುಡುಕ, ರಾತ್ರಿ ಮನೆಗೆ ಬಂದಾಗ ಮನೆಯಲ್ಲಿ ಉಳಿದವರೆಲ್ಲ ಒಂದಾಗಿ ಬಿಡುತ್ತಾರೆ. ಈತ ಮಾತ್ರ ಪ್ರತ್ಯೇಕಿಸಲ್ಪಡುತ್ತಾನೆ. ಇವನಂತೆ ಯಾರಾದರೂ ಕುಡುಕ ಇದ್ದರೆ ಆತನಿಗೆ ಇವನು ಸಂಗಾತಿಯಾಗಬಹುದೇ ಹೊರತು, ಉಳಿದವರೊಂದಿಗೆ ಬೆರೆಯುವುದಕ್ಕೆ ಒಂದು ಪರಿಧಿ ತನ್ನಿಂತಾನಾಗಿ ನಿರ್ಮಿಸಲ್ಪಡುತ್ತದೆ.  ಆತ ಕುಡಿದಿದ್ದಾನೆ ಎಂದು ಆತನೊಂದಿಗೆ ಮಾತನಾಡುವಾಗ, ಅಥವಾ ವ್ಯವಹರಿಸುವಾಗಲೆಲ್ಲ ಒಂದು ಪ್ರತ್ಯೇಕ ಭಾವನೆ ಮೂಡಿಬಿಡುತ್ತದೆ. ಹೆಚ್ಚಾಗಿ ಇದು ಜಗಳಕ್ಕೆ ಕಾರಣವಾಗಿಬಿಡುತ್ತದೆ. ಇದೊಂದು ರೀತಿಯ ಅಸ್ಪೃಶ್ಯತೆ ಎಂದು ನನ್ನ ಭಾವನೆ. ತನ್ನ ದೌರ್ಬಲ್ಯಗಳಿಂದ ತಾನೇ ದೂರಾಗಿ ನಿಲ್ಲುವುದು ಎಂದರೆ ತನ್ನ ಸುತ್ತಲು ತಾನೇ ಅಸ್ಪೃಶ್ಯತೆಯ ಗೋಡೆಯನ್ನು ಕಟ್ಟಿದಂತೆ. 

ಮದ್ಯ ಪಾನ,  ಧೂಮ ಪಾನ ಇವುಗಳೆಲ್ಲ ಒಂದು ಗಂಭೀರವಾದ ದೌರ್ಬಲ್ಯಗಳಾದಾರೆ, ಇನ್ನು ಕೆಲವು ಅನೈತಿಕವಾದ ಚಟುವಟಿಕೆಗಳು ಇನ್ನೊಂದು ರೀತಿಯ ದೌರ್ಬಲ್ಯಗಳು ಎಲ್ಲವೂ ಸಹಜ ಜೀವನ ಶೈಲಿಯಿಂದ ದೂರವೇ ಇರುವಂತೆ ಮಾಡುತ್ತದೆ. ಇಲ್ಲವಾದರೆ ಅವರನ್ನು ದೂರವೇ ಮಾಡಿಬಿಡುತ್ತಾರೆ. ಗಂಭೀರವಾದ ದುಶ್ಚಟಗಳು ಮಾತ್ರವಲ್ಲ ಯಾವುದೇ ದೌರ್ಬಲ್ಯಗಳು ಉಳಿದವರಿಗಿಂತ ಒಂದು ಅಂತರವನ್ನು ಸೂಕ್ಷ್ಮವಾಗಿ ಸೃಷ್ಟಿ ಮಾಡುತ್ತವೆ. ಕೆಟ್ಟದಾಗಿ ಬೈಯುವುದು, ಸಿಟ್ಟಾಗುವುದು ಉದ್ರೇಕಗೊಳ್ಳುವುದು ಇವುಗಳು ಸ್ವಭಾವ ರೀತ್ಯಾ ಉಳಿದವರಿಗಿಂತ ದೂರವಾಗಿಸಿದರೆ ಅದೊಂದು ರೀತಿಯ ಅಸ್ಪೃಶ್ಯತೆಯಾಗಿಯೇ ಪರಿಗಣಿಸಬೇಕು. ದೌರ್ಬಲ್ಯಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಹುದು, ಆದರೆ ಅದಕ್ಕಿಂತ ಹೆಚ್ಚಾಗಿ ಅದು ಮನಸ್ಸಿನ ಮೇಲೆಯೂ ಪ್ರಭಾವ ಬೀರುತ್ತದೆ. 

ಮನಸ್ಸು ಭಾವರಹಿತವಾಗಿದ್ದಷ್ಟು ಮನಸ್ಸು ಸ್ಥಿರವಾಗಿರುತ್ತದೆ. ಮನಸ್ಸಿನ ಯೋಚನೆಗಳು ಸ್ಥಿರವಾಗಿರುತ್ತವೆ. ದೌರ್ಬಲ್ಯಗಳಿಗೆ ವಶವಾದ ಮನಸ್ಸು ವಸ್ತುನಿಷ್ಠವಾಗಿ ಯೋಚಿಸುವುದಿಲ್ಲ. ಅಂತಹ ಮನಸ್ಸಿನ ನಿರ್ಣಯಗಳೂ ಸಮರ್ಪಕವಾಗಿರುವುದಿಲ್ಲ. ದೌರ್ಬಲ್ಯಗಳು ಮನಸ್ಸನ್ನು ಸಹಜವಾಗಿ ಚಿಂತಿಸುವುದಕ್ಕೆ ಆಸ್ಪದವನ್ನು ಕೊಡುವುದಿಲ್ಲ. ಯಾವುದೋ ದೌರ್ಬಲ್ಯಗಳಿಗೆ  ಮನಸ್ಸು ವಶವಾದರೆ ಆ ಮನಸ್ಸು ಯೋಚನೆಯಲ್ಲಿ ದಾಸ್ಯಕ್ಕೆ ವಶವಾಗುತ್ತದೆ. ದೌರ್ಬಲ್ಯ ಎಂದರೆ ಕೇವಲ  ಮದ್ಯ ಧೂಮ ಪಾನ ಮಾತ್ರವಲ್ಲ. ಅದು ತಿನ್ನುವ ಆಹಾರ, ಕುಡಿಯುವ ಪಾನೀಯ ಚಹ ಕಾಫಿ ಹೀಗೆ ಇನ್ನು ಏನೇನೋ ಆಗಿರಬಹುದು. ಅದು ಇಲ್ಲದೆ ಆಗುವುದಿಲ್ಲ ಎಂಬುದು ಒಂದು ಇದ್ದರೆ ಅದು ದೌರ್ಬಲ್ಯವಾಗುತ್ತದೆ. ಅದು ಇಲ್ಲದೇ ಆಗುವುದಿಲ್ಲ ಎಂದು ಇದ್ದರೆ ಆ ಮನಸ್ಸು ಅದನ್ನೇ ಯೋಚಿಸುತ್ತ, ನಿಜವಾಗಿ ಯೋಚಿಸಬೇಕಾದದ್ದನ್ನು ಮರೆತು ಬಿಡುತ್ತದೆ. ಈ ದೌರ್ಬಲ್ಯಗಳಿಂದ ದೂರಾದರೆ ನಮ್ಮ ಮನಸ್ಸಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಮನಸ್ಸಿನ ಚಿಂತನೆ ವಿಶಾಲವಾಗಿ ಸ್ವತಂತ್ರವಾಗಿರುತ್ತದೆ.  ದೌರ್ಬಲ್ಯದಿಂದ ಮುಕ್ತನಾಗುವುದು ಎಂದರೆ ಮಾನಸಿಕ ದಾಸ್ಯದಿಂದ ಮುಕ್ತನಾದಂತೆ. 

ಭಗವದ್ಗೀತೆಯಲ್ಲೂ ಹೇಳಿರುತ್ತದೆ. ಯಾವ ಮನಸ್ಸು ಉದ್ವೇಗಭರಿತವಾಗಿ ಭಾವಾವೇಶಕ್ಕೆ ಒಳಗಾಗುತ್ತದೋ ಅಲ್ಲಿ ಪರಮಾತ್ಮನ ಸಾನ್ನಿಧ್ಯವಿರುವುದಿಲ್ಲ. ನಾವು ಯಾವುದೋ ಭಾವಾವೇಶಕ್ಕೆ ಒಳಗಾಗಿ ಪರಮಾತ್ಮನನ್ನು ಧ್ಯಾನಿಸಿದರೆ, ಪರಮಾತ್ಮನ ಸ್ಮರಣೆಮಾಡಿದರೆ ಅದು ಪರಿಪೂರ್ಣವಾವುದಕ್ಕೆ ಸಾಧ್ಯವಿಲ್ಲ. ಯಾವುದೋ ಭಾವಾವೇಶಕ್ಕೆ ಒಳಗಾಗಿ ಪರಮಾತ್ಮನ ಸ್ಮರಣೆ ಮಾಡಿದರೆ, ಆ ಭಾವೋನ್ಮಾದ ಕಡಿಮೆಯಾಗಿ ಅದು ಶೂನ್ಯವಾದಾಗ ಭಗವಂತನ ಸ್ಮರಣೆಯೂ ದೂರಾಗುತ್ತದೆ.  ಅಂದರೆ ಮನಸ್ಸಿನಿಂದ ಪರಮಾತ್ಮ ದೂರಾಗುತ್ತಾನೆ.   ಮದ್ಯ ವ್ಯಸನಿ ಹೇಳಿದ ಮಾತುಗಳು, ಆತನ ವರ್ತನೆಗಳು ಆತನಲ್ಲಿದ್ದ ನಶೆಯಿಂದ ಪ್ರಚೋದಿಸಲ್ಪಟ್ಟು ಇರುವಾಗ , ಅದು ವ್ಯಸನದಿಂದ ತೋರಿದ ಕ್ರಿಯೆಯಾಗಿ ಅದನ್ನು ಎಲ್ಲರೂ  ಗಂಭೀರವಾಗಿ ಪರಿಗಣಿಸುವುದಿಲ್ಲ.  ಕುಡಿದು ಹೇಳಿದ ಮಾತು ಎಂದು ಅದಕ್ಕೆ ಸಿಗಬೇಕಾದ ಗೌರವನ್ನು ಕೊಡುವುದಿಲ್ಲ. ಅದರಂತೆ ದೌರ್ಬಲ್ಯದಿಂದ ವಶವಾದ ಮನಸ್ಸಿನ ಕ್ರಿಯೆಗಳೂ ಪರಿಗಣಿಸಲ್ಪಡುತ್ತವೆ. 

ದೌರ್ಬಲ್ಯಗಳು ಎಂದರೆ ಒಂದು ಅನಿವಾರ್ಯ ಎಂದು ನಮಗನಿಸಿದರೆ ಅದು ದೌರ್ಬಲ್ಯವಾಗುತ್ತದೆ. ಅದು   ಕಾಫಿ ಚಹ ಕುಡಿಯದೇ ಆಗುವುದಿಲ್ಲ ಎಂದಿದ್ದರೂ ಅದು ದೌರ್ಬಲ್ಯ ಎಂದಾಗುತ್ತದೆ. ಅದು ಗಂಭೀರವಲ್ಲದೇ ಇದ್ದರೂ ಇಂತಹ ದೌರ್ಬಲ್ಯಗಳೂ ಸಹ ಭಗವಂತನ ಎದುರು ಅಸ್ಪೃಶ್ಯತೆಯನ್ನು ಸೃಷ್ಟಿಸುತ್ತದೆ.  ನಮ್ಮಲ್ಲಿರುವ ಕ್ರೋಧ ಮೊಹ ಮತ್ಸರ ಇವುಗಳೆಲ್ಲ ನಮ್ಮಲ್ಲಿ ಅಸ್ಪೃಶ್ಯತೆಯನ್ನು ಅಪವಿತ್ರತೆಯನ್ನು ಸೃಷ್ಟಿಸುತ್ತದೆ.  ಮಾನಸಿಕವಾದ ಒತ್ತಡವನ್ನು ಸೃಷ್ಟಿಯಾಗಿಸುವ ಎಲ್ಲ ಕ್ರಿಯೆಗಳೂ ಮನಸ್ಸಿನ ದಾಸ್ಯಕ್ಕೆ ಕಾರಣವಾಗುತ್ತವೆ.  ಎಲ್ಲಿ ದೌರ್ಬಲ್ಯಗಳಿರುತ್ತವೇಯೋ, ಅದು ಯಾವುದೇ ದೌರ್ಬಲ್ಯವಾದರೂ ಅಲ್ಲಿ ಪರಮಾತ್ಮನ ಸಾನ್ನಿಧ್ಯ ಪರಿಪೂರ್ಣವಾಗಿ ಇರುವುದಕ್ಕೆ ಸಾಧ್ಯವಿಲ್ಲ,. ನಾವು ದೌರ್ಬಲ್ಯದಿಂದ ಮುಕ್ತವಾಗಿ ಪ್ರಾರ್ಥಿಸಿದಾಗ ಅದು ಆರೋಗ್ಯವಂತ ಮನಸ್ಸಿನ ಚಿಂತನೆಯಾಗಿ ಅದು ಪರಿಪೂರ್ಣ ಚಿಂತನೆಯಾಗುತ್ತದೆ. ಪರಿಪೂರ್ಣ ಚಿಂತನೆಮಾತ್ರವೇ ಪರಮಾತ್ಮನ ಹತ್ತಿರ ಕೊಂಡೊಯ್ಯುತ್ತವೆ. 

ದೌರ್ಬಲ್ಯಗಳು ಹೇಗೆ ನಮ್ಮನ್ನು ಪರಕೀಯನನ್ನಾಗಿ ಮಾಡುತ್ತವೆಯೋ, ನಾವು ಸ್ವತಃ ಅಪವಿತ್ರವಾಗಿ ಇರುವುದು ಕೂಡ ನಮ್ಮನ್ನು ಅಸ್ಪೃಶ್ಯನನ್ನಾಗಿಸುತ್ತದೆ.   ಮನುಷ್ಯನ ಬದುಕಿನಲ್ಲಿ ಒಂದು ಪವಿತ್ರ ಇನ್ನೊಂದು ಅಪವಿತ್ರ ಇವಿಷ್ಟೇ ದಾರಿಗಳು ಇರುವುದು. ಪವಿತ್ರ ಎಂದರೆ ಅದು ಮುಕ್ತವಾಗಿರುತ್ತದೆ. ಮನಸ್ಸು ದೇಶ ಕಲ್ಮಷದಿಂದ ದೂರಾಗುವುದು ಎಂದರೆ   ಪವಿತ್ರನಾಗುವುದಾಗುತ್ತದೆ.  ಪಾವಿತ್ರ್ಯತೆ ದೂರಾದರೆ ಅಪವಿತ್ರದಿಂದ ಅಸ್ಪೃಶ್ಯದಿಂದ ದೂರಾಗುವುದು.   ಒಬ್ಬನನ್ನು ಅಸ್ಪೃಶ್ಯ ಎಂದು ದೂರ ಮಾಡುವುದಕ್ಕೂ ತಾನು ಸ್ವತಃ ಅಸ್ಪೃಶ್ಯ ಅಂತ ದೂರ ಉಳಿಯುವುದಕ್ಕೂ ವೆತ್ಯಾಸವಿರುತ್ತದೆ. ಅಪವಿತ್ರತೆ ಅಸ್ಪೃಶ್ಯತೆಯನ್ನು ಸೃಷ್ಟಿಸಿದಂತೆ ದೌರ್ಬಲ್ಯಗಳು ಅಸ್ಪೃಶ್ಯತೆಯನ್ನು ಸೃಷ್ಟಿಸುತ್ತವೆ. ಸನಾತನ ಧರ್ಮದಲ್ಲಿ ಪರಮಾತ್ಮನ ಹತ್ತಿರ ಮತ್ತು ದೂರ ಈ ಎರಡು ದೃಷ್ಟಿಕೋನದಲ್ಲಿ ಅಸ್ಪೃಶ್ಯತೆ ಇದ್ದರೆ, ಕ್ರಮೇಣ ಅದು ಧರ್ಮದ ರೂಪದಲ್ಲಿ ಬದಲಾಗಿ ಹೋದದ್ದು ಖೇದಕರ. ಎಲ್ಲಾ ಧರ್ಮಗಳ ಸಂಸ್ಕಾರಗಳು ಭಗವಂತನ ಬಳಿಗೆ ಹೋಗುವ ಹಾದಿಗಳು. ಹಾದಿ ಬೇರೆ ಬೇರೆ ಆಗಿದ್ದರೂ ಇದರ ಗುರಿ ಒಂದೇ. ಇದರಲ್ಲಿ ಅಸ್ಪೃಶ್ಯ ತತ್ವ ಭಗವಂತನ ಹಾದಿಯ ಪಾವಿತ್ರ್ಯತೆಯನ್ನು ತೋರಿಸುತ್ತದೆ ಹೊರತು ಮತೀಯ ಭೇದವನ್ನು ಹೇಳುವುದಿಲ್ಲ. ಮತೀಯ ಭೇದಗಳು ಮನುಷ್ಯನ ಸೃಷ್ಟಿ. 



Friday, August 16, 2024

ಉದ್ವಿಗ್ನತೆಯ ಹಬ್ಬ

    ಲೆಕ್ಕ ಪರಿಶೋಧನೆಯ ಕೆಲಸದಲ್ಲಿ ಸೊಸೈಟಿಯೊಂದಕ್ಕೆ ಭೇಟಿ ಕೊಟ್ಟೆ. ಲೆಕ್ಕ ಪರಿಶೋಧನೆ ಎಂದರೆ ನಾವು ಯಾವಾಗ ಹೋದರೂ  ಅದಕ್ಕೆ ಸಂಬಂಧಿಸಿದವರು ಆವಶ್ಯಕ ಕಡತಗಳನ್ನು, ದಾಖಾಲಾತಿಗಳನ್ನು ಯಾವುದೇ ಸಮಯವಾದರೂ ಒದಗಿಸಿಕೊಡಬೇಕಾದದ್ದು ಸಂಸ್ಥೆಯಲ್ಲಿ  ಸಂಬಂಧಿಸಿದವರ ಕರ್ತವ್ಯ. ಆದರೆ ಇಲ್ಲಿ ಹೋದಾಗ ಅಲ್ಲಿ ನಿರ್ವಾಹಕ ವೃತ್ತಿಯಲ್ಲಿ ಒಬ್ಬರು ಮಹಿಳೆ ಇದ್ದರು.  ನಾನು ಪರಿಶೋಧನೆಗಾಗಿ ಬರುತ್ತೇನೆ ಎನ್ನುವಾಗಲೇ ಧ್ವನಿಯಲ್ಲಿ ಸಣ್ಣ ಅಸಮಧಾನವಿತ್ತು. ಆದರೂ ಅದನ್ನು ತೋರಿಸಿಕೊಡದೆ ತುಂಬ ಸೌಹಾರ್ದದಲ್ಲಿ ಬರುವಂತೆ ಹೇಳಿದರು. ಆ ಮಹಿಳೆ ಅಷ್ಟೇನು ಪ್ರಾಯವಾಗದ ಉತ್ಸಾಹಿ ಮಹಿಳೆ. ಆದರೆ ಪರಿಶೋಧನೆಯ ಕೆಲಸ ಆರಂಭಿಸಬೇಕಾದರೆ  ಪ್ರತಿ ಕ್ಷಣವೂ ಅವಸರದ ಭಾವವನ್ನು ತೋರಿಸುತ್ತಿದ್ದರು. ನಾನು ಯಾವಾಗ ಮುಗಿಸಿ ಬಿಡುತ್ತೇನೆ ಎಂಬ ಆತುರದಲ್ಲಿದ್ದಂತೆ ಸಹಕರಿಸುತ್ತಿದ್ದರು. ಈ ಅವಸರದಲ್ಲಿ ಆಕೆ ಬಹಳಷ್ಟು ಗೊಂದಲದಲ್ಲಿ ಬಹಳಷ್ಟು ಎಡವಟ್ಟುಗಳನ್ನು ಅನುಭವಿಸಿದಾಗ ನಾನು ಕೇಳಿದೆ.,

     "ಏನು ಮೇಡಂ ಯಾಕೆ ಒತ್ತಡದಲ್ಲಿದ್ದೀರಿ?" 

    ಆಕೆ " ಏನಿಲ್ಲ ಹಬ್ಬ ಅಲ್ವ ಸರ್. ಸ್ವಲ್ಪ ಬೇಗ ಮನೆಗೆ ಹೋಗಬೇಕು. ವಿಪರೀತ ಕೆಲಸ. ಇಲ್ಲಿಯೂ ಕೆಲಸ ಮನೆಗೆ ಹೋದ ಮೇಲೆ ಅಲ್ಲಿಯೂ ಹಬ್ಬದ ಕೆಲಸ ಸಾಕಷ್ಟು ಇದೆ. ಹಬ್ಬ ಅಲ್ವಾ?  ಮಾಡದೇ ಇರೋಕೆ ಆಗುತ್ತಾ?"

        ನನಗೆ ಜೋರು ನಗು ಬಂತು. ನಾನು ಕೇಳಿದೆ. " ಹಬ್ಬ ಮಾಡುವ ಉದ್ದೇಶವಾದರೂ ಏನು?"  ಆಕೆ ನಕ್ಕು ಏನೋ ತೊದಲಿದಳು. ಹಬ್ಬ ಅಲ್ವ ದೇವರ ಅನುಗ್ರಹ ಪಡಿಬೇಕು. ಹಬ್ಬ ಅಂದರೆ ಪೂಜೆ ಪುನಸ್ಕಾರ ಇದೆಲ್ಲ ಮಾಡಬೇಕು. 

    " ನಾನು ಹೇಳಿದೆ, ದೇವರು ಎಂದರೆ ಸರ್ವ  ಒತ್ತಡವನ್ನೂ ನಿವಾರಿಸುವ ಒಂದು ಶಕ್ತಿ. ಹಾಗಿರುವಾಗ ಅಲ್ಲೂ ನಮ್ಮ ಉದ್ವಿಗ್ನ ಸ್ಥಿತಿ ಮತ್ತಷ್ಟೂ ಹೆಚ್ಚಾಗುತ್ತದೆ ಎಂದಾದರೆ ನಾವು ಮಾಡುವ ವೃತ್ತಿಗೆ ಏನು ಗೌರವ ಇದೆ?" ಆಕೆಗೆ ನನ್ನ ಮಾತಿನ ಅಂತರಂಗ ಅರ್ಥವಾದಂತೆ ಭಾಸವಾಗಲಿಲ್ಲ. ಅದನ್ನು ಕೇಳಿದರೂ ಆಗೆಯ ಗಡಿಬಿಡಿಯ ಒತ್ತಡ ಕಡಿಮೆ ಆಗುತ್ತದೆ ಎಂಬ ನಿರೀಕ್ಷೆ ನನಗಿಲ್ಲ. ಆದರೂ ಅವರ ಚಿಂತನೆಯ ದುರ್ಬಲತೆಯನ್ನು ತೋರಿಸಿಕೊಡುವುದು ನನ್ನ ಉದ್ದೇಶವಾಗಿತ್ತು. ಆದರೆ ನಮ್ಮ ಪ್ರವೃತ್ತಿ ಹೇಗೆ ಬೆಳೆದಿದೆ ಎಂದರೆ ಯಾವುದೋ ತತ್ವಗಳನ್ನು ಉನ್ನತ ಚಿಂತನೆಗಳು ಎಲ್ಲೋ ಓದುತ್ತೇವೆ, ಅಥವಾ ಕೇಳುತ್ತೇವೆ. ಕೇಳುವಾಗ ಅದು ಹೌದು ಎಂದುಕೊಂಡರೂ ಸ್ವಂತ ಬಳಕೆಯಲ್ಲಿ ಸೋತು ಬಿಡುತ್ತೇವೆ.  ಇಂದು ಸಡಗರದಿಂದ ಹಬ್ಬ ಆಚರಿಸುವ ಮಂದಿಗಳಲ್ಲಿ ಒತ್ತಡದಿಂದ ಹಬ್ಬ ಆಚರಿಸುವವರೇ ಅಧಿಕ. ಹಬ್ಬ ಆಚರಿಸದೇ ಇದ್ದರೆ ಏನೋ ಆಗಿಬಿಡುತ್ತದೆ ಎಂಬ ಆತಂಕದಲ್ಲೇ ಹಬ್ಬ ಆಚರಿಸುತ್ತಾರೆ. ಈ ಆತಂಕ ಹಬ್ಬದಲ್ಲಿ ಏನು ಸಂತೋಷವನ್ನು ನೆಮ್ಮದಿಯನ್ನು ಅನುಭವಿಸಬೇಕೋ ಅದನ್ನು ಇಲ್ಲವಾಗಿಸುತ್ತದೆ. ಈ ಒತ್ತಡದಲ್ಲಿ ಹಬ್ಬ ಆಚರಿಸುವ ಆವಶ್ಯಕತೆಯಾದರೂ ಏನು? ಹಬ್ಬ ಎಂದರೆ ಅದೊಂದು ಪರ್ವ ಕಾಲ. ಉಳಿದ ಸಮಯದಲ್ಲಿ ಜೀವನದ ಯಾವುದೋ ಅನಿವಾರ್ಯತೆಗೆ ಸಹಜವಾಗಿ ಒತ್ತಡಾವನ್ನು ಅನುಭವಿಸಬೇಕಾಗುತ್ತದೆ. ಆದರೆ ಹಬ್ಬದಲ್ಲಿ ಅದೆಲ್ಲವನ್ನು ಬಿಟ್ಟು ಮುಕ್ತವಾಗಿ ಶಾಂತಿಯಿಂದ ಇರುವ ಅವಕಾಶ ಅದು. 

        ನಮ್ಮಲ್ಲಿರುವ ಮಾನಸಿಕ ಒತ್ತಡ ಅಶಾಂತಿ ಇದ್ದಲ್ಲಿ ಮನಸ್ಸು ಚಂಚಲವಾಗಿರುತ್ತದೆ. ಅಲ್ಲಿ ದೇವರ ಅಸ್ತಿತ್ವ ಇರುವುದಕ್ಕೆ ಸಾಧ್ಯವಿಲ್ಲ. ಇವುಗಳೆಲ್ಲವನ್ನು ದೂರ ಮಾಡಿದಾಗ ಮಾತ್ರ ಪರಮಾತ್ಮನ ಸಾನ್ನಿಧ್ಯ ಒದಗಿಬರುತ್ತದೆ.  ನಮ್ಮಲ್ಲಿ ಋಣಾತ್ಮಕ ಭಾವವನ್ನು ಪ್ರಚೋದನೆಯನ್ನು ದೇವರು ಒದಗಿಸುತ್ತಾನೆ ಎಂದಾದರೆ ಅದು ದೇವರಾಗುವುದಕ್ಕೆ ಹೇಗೆ ಸಾಧ್ಯ? ಹಬ್ಬ ಮಾಡದೇ ಇದ್ದರೆ ದೇವರ ದುರಾಗ್ರಹಕ್ಕೆ ಒಳಗಾಗಿ ನಾವು ಶಾಪಗ್ರಸ್ಥರಾಗುತ್ತೇವೆ ಎಂಬ ಒತ್ತಡದಲ್ಲಿ ಮಾಡಿದಾಗ ಬಲವಂತದ ಮಾಘಸ್ನಾನವಾಗುತ್ತದೆ. ಮನಸ್ಸು ಸಂಪೂರ್ಣವಾಗಿ ಪರಮಾತ್ಮ ಆವರಿಸುವುದಿಲ್ಲ. ಅಲ್ಲಿ ಋಣತ್ಮಕ ಧೋರಣೆಗಳು ಮಾತ್ರವೇ ಜಾಗೃತವಾಗಿರುತ್ತದೆ. ಶಾಪ ಕೊಡುವವನು ದೇವರಾಗುವುದಕ್ಕೆ ಸಾಧ್ಯವಿಲ್ಲ. ಭವದ ಭಯವನ್ನು ನೀವಾರಿಸುವುದಕ್ಕೆ ಇರುವ ದೇವರು ಅದನ್ನು ಆತ ಸೃಷ್ಟಿಸುತ್ತಾನೆ ಎಂದರೆ ಆತ ದೇವರಾಗುವುದಕ್ಕೆ ಸಾಧ್ಯವಿಲ್ಲ. 

        ಮೊನ್ನೆ ಸಂಬಂಧಿಗಳೊಬ್ಬರಿಗೆ ಯಾವುದೋ ಆರೋಗ್ಯ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಆಗಬೇಕಿತ್ತು. ಅವರು ಈ ಹಬ್ಬಗಳ ಕಾರಣ ಕೊಟ್ಟು ಅದನ್ನು ಮುಂದೆ ಹಾಕುತ್ತಿದ್ದರು. ನಾನು ಮೊದಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳು ವಂತೆ ಹೇಳಿದೆ. ಹಬ್ಬಗಳು ಮುಂದೆಯೂ ಬರಬಹುದು. ಆದರೆ ಆರೋಗ್ಯ ಅದು ಎಲ್ಲದಕ್ಕಿಂತಲೂ ಅನಿವಾರ್ಯ. ಹಬ್ಬ ಮಾಡಲಾಗದೇ ಇದ್ದರೆ ಏನಂತೆ, ಎಲ್ಲಾ ದಿನ ಹತ್ತು ಸಲ ರಾಮ ರಾಮ ಹೇಳಿದರೆ ಆದಿನ ನೂರು ಸಲ ಹೇಳಿದರಾಯಿತು. ನಾಮ ಸ್ಮರಣೆಗಿಂತ ಮಿಗಿಲಾದ ಯಜ್ಞವಿಲ್ಲ. ರಾಮ ರಾಮ ಧ್ಯಾನ ಮಾಡುವುದು ಎಂದಿಗೂ ಪಾಪದ ಕಾರ್ಯವಾಗುವುದಕ್ಕೆ ಸಾಧ್ಯವಿಲ್ಲ. ಇದನ್ನು ಗಮನಿಸದೇ ಇಂದು ನೂರರಲ್ಲಿ ತೊಂಭತ್ತು ಮಂದಿಗಳೂ ಇದೇ ಒತ್ತಡದಲ್ಲಿ ಹಬ್ಬ ಆಚರಿಸುತ್ತಾರೆ. ಯಾವ ಉದ್ದೇಶದಲ್ಲಿ ನಾವು ಕಾರ್ಯವನ್ನು ಮಾಡುತ್ತೇವೆಯೋ ಆ ಕಾರ್ಯದ ಅದ್ದೇಶದಿಂದ ನಾವು ಈ ಒತ್ತಡವನ್ನು ಕಟ್ಟಿಕೊಂಡು ದೂರವಾಗುತ್ತಾ ಇದ್ದೇವೆ. ಇದು ಮೂರ್ಖತನ. 

        ಇಷ್ಟೇ ಅಲ್ಲ, ನಾವು ಪೂಜೆ ಆರಾಧನೆ ಮಾಡುವಾಗಲೂ ಒಂದು ಒತ್ತಡ ನಮ್ಮನ್ನು ಬಾಧಿಸುತ್ತದೆ. ಇದು ನಮಗೆ ಮಾಡಬಾರದ ಕೆಲಸಗಳಿಗೆ ಪ್ರೇರಣೆಯನ್ನು ಕೊಡುತ್ತದೆ. ಅಥವಾ ಆ ಒತ್ತಡದಲ್ಲಿ ಅದನ್ನೇ ಮಾಡುತ್ತೇವೆ. ದೇವಾಲಯಕ್ಕೆ ಹೋಗುವುದಿದ್ದರೂ ಇಂತಹ ಹಲವು ಒತ್ತಡಗಳನ್ನು ಹೊತ್ತುಕೊಂಡು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗುವ ಉದ್ದೇಶವನ್ನು ಮರೆತೆ ನಮ್ಮ ಮನಸ್ಸಿನಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತೇವೆ. 

        ಯಾವ ದೇವರೂ ಹಬ್ಬವನ್ನು ಮಾಡದೇ ಇದ್ದರೆ ಶಪಿಸಲಾರ. ನನ್ನ ದೇವರಂತು ನನಗೆ ಶಪಿಸಲಾರ ಎಂಬ ವಿಶ್ವಾಸ ಸದಾ ಕಾಲ ನನ್ನಲ್ಲಿರುತ್ತದೆ. ಒಂದು ವೇಳೆ ನಾನು ತಪ್ಪು ಮಾಡಿದರೂ. ನನ್ನಮ್ಮ ನನ್ನಗೆ ಶಿಕ್ಷಿಸುವಂತೆ ಶಿಕ್ಷಿಸಬಹುದು. ತಾಯಿ ಎಷ್ಟು ಹೊಡೆದರೂ ಮಗು ತಾಯಿಯನ್ನು ಮತ್ತಷ್ಟು ಬಿಗಿದಪ್ಪುವಂತೆ ನಾನು ದೇವರಿಗೆ ಮತ್ತು ಶರಣಾಗಿಬಿಡುತ್ತೇನೆ. ಆಗ ದೇವರು ಕೊಡುವ ಯಾವ ಶಿಕ್ಷೆಯೂ ಶಿಕ್ಷೆ ಎಂದನಿಸುವುದಿಲ್ಲ. ನಾನು ಮಾಡಿದ ತಪ್ಪಿನಿಂದ ಪಾಪ ಕಾರ್ಯದಿಂದ ಹೊರಬರುವುದಕ್ಕೆ ನನ್ನ ದೇವರು ಕೊಡುವ ದಿವ್ಯ ಅವಕಾಶ ಎಂದುಕೊಂಡು ಬಿಡುತ್ತೇನೆ. 

        ನಮ್ಮ ಕಾರ್ಯ ಪ್ರವೃತ್ತಿಗಳು ನಮ್ಮ ಮನಸ್ಸನ್ನು ಪರಿಶುದ್ದಿಯತ್ತ ಒಯ್ಯಬೇಕು.  ಮನಸ್ಸು ಸದಾ ಉದ್ವಿಗ್ನತೆ ಕ್ರೋಧ ಇವುಗಳಿಂದ ಆವರಿಸಲ್ಪಟ್ಟರೆ ಮನಸ್ಸು ಪರಿಶುದ್ಧಿಯಾಗುವುಕ್ಕೆ ಆಧ್ಯವಿಲ್ಲ. ಪರಿಶುದ್ದಿ ಇಲ್ಲದೇ ಇದ್ದಲ್ಲಿ ಪರಮಾತ್ಮನ ಸಾನ್ನಿಧ್ಯ ಇರುವುದಿಲ್ಲ.ಎರಡು ಹೊತ್ತು ಕೇವಲ  ಸ್ನಾನ ಮಾಡಿ ಜಪ ಮಾಡಿದ್ದರಲ್ಲಿ ಪರಿಶುದ್ದರಾಗುವುದಿಲ್ಲ. ಮನಸ್ಸು ಶುದ್ಧವಾದರೆ ಮಾತ್ರ ನಾವು ಪರಿಶುದ್ಧರಾಗುತ್ತೇವೆ. ಒಂದು ಉದ್ದರಣೆ ಸೌಟಿನ ನೀರಿನ ಅಚಮನ ನಮ್ಮನ್ನು ಪರಿಶುದ್ದಿಯಾಗಿಸಬಹುದು. ಆದರೆ ಮನಸ್ಸಿನಲ್ಲಿ ರಾಗ ದ್ವೇಷಗಳನ್ನು ತುಂಬಿಸಿಕೊಂಡಿದ್ದಲ್ಲಿ ನಾವು ಯಾಗ ಯಜ್ಞ ಮಾಡಿದರೂ ಪಾಪಮುಕ್ತರಾಗುವುದಿಲ್ಲ. ಭಗವದ್ಗೀತೆಯ ಉಪದೇಶ ಕೇಳಿ ಅರ್ಜುನ ನಷ್ಟೋ ಮೋಹ..ಅಂತ ಹೇಳಿದರೂ ಭಗವಂತನನ್ನು ಕಾಣುವಾಗ ಹೇಳಿದ್ದು ಮರೆತು ಹೋಗಿರುತ್ತದೆ. ಭಗವಂತ ಬೇಕಾದಾಗ ಆ ವಾಕ್ಯ ನೆನಪಾಗುವುದಿಲ್ಲ. ಎಲ್ಲಿ ಕ್ರೋಧ ಮದ ಮೋಹ ಮತ್ಸರಗಳಂತಹ ವೈರಗಳು ಇರುವುದೋ ಅಲ್ಲಿವರೆಗೆ ನಾವು ಭಗವಂತನ ಅನುಗ್ರಹವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ. 


Sunday, August 4, 2024

ಜಗಲಿಯಲ್ಲಿ ಒಂದು ಇರುಳು

ಬೆಂಗಳೂರಿನ ಕೇಂದ್ರ ಮಾರುಕಟ್ಟೆಯ ಗಲ್ಲಿಯೊಳಗೆ ಒಂದು ಸಂಜೆ ಸಂಚರಿಸುತ್ತಿದ್ದೆ. ಮಳೆಗಾಲದ ಗಲ್ಲಿ ಎಂದರೆ ನರಕ ದರ್ಶನ.  ಬಹುಶಃ ಧರ್ಮರಾಯನಿಗೆ ಕ್ಷಣ ಒಂದಕ್ಕಾದರೂ ಆದ ನರಕ ದರ್ಶನ ಇಷ್ಟು ಭೀಕರವಾಗಿರಲಾರದು. ಅಷ್ಟು ಭೀಕರ ಭೀಭತ್ಸ ಇನ್ನು ಏನೇನೋ ಕಲ್ಪನೆಗಳು ಬಂದು ಬಿಡುತ್ತವೆ. ಒಂದು ಸಲ ಅಲ್ಲಿಂದ ಪಲಾಯನ ಮಾಡಿಬಿಡುವ ಎಂದು ಹಾತೊರೆಯುವುದು ಎಂದರೆ ನಮಗೆ ಅದಕ್ಕೆ ಅವಕಾಶ ಇದೆ ಎಂದರ್ಥ. ಅವಕಾಶ ಅಂತ ಹೇಳುವುದಕ್ಕೆ ಕಾರಣವಿದೆ. ಯಾಕೆಂದರೆ ಈ ಅವಕಾಶ ವಂಚಿತರು ಅದೇ ನರಕದಲ್ಲಿ ಜೀವನ ಮಾಡುವುದನ್ನು ಕಣ್ಣಾರೆ ಕಾಣಬಹುದು. ಜೀವನ ಏನು ಎಂದು ಅರ್ಥವಾಗಬೇಕಾದರೆ ಒಂದು ಸಲವಾದರೂ ಇಂತಹ ಸಮಯದಲ್ಲಿ ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಗೆ ಭೇಟಿ ಕೊಡಬೇಕು. 

ಒಂದು ಸಂಜೆ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಕತ್ತಲು ಆವರಿಸುತ್ತಿದ್ದರೂ ಇಲ್ಲಿಯ ಜಗತ್ತಿಗೆ ಆ ಪರಿವೆ ಇಲ್ಲ. ವಿಶ್ರಾಂತಿ ಇಲ್ಲದ ಪರಿಸರ.  ಸೂರ್ಯನಿಲ್ಲದ ಕತ್ತಲು ಅಷ್ಟೇ, ಹೊರತು ಸುತ್ತಮುತ್ತಲಿನ ಬೀದಿ ದೀಪಗಳ ಪ್ರಖರ ಬೆಳಕು ಇದ್ದೇ ಇದೆ. ಹಾಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಮೊಣಕಾಲು ಮಟ್ಟಕ್ಕೆ ನೀರು. ಪಕ್ಕದಲ್ಲಿ ಪಾದಾಚಾರಿ ರಸ್ತೆ ಅತೀ ಇಕ್ಕಟ್ಟಾಗಿ ಇತ್ತು. ಅದರ ಒತ್ತಿನಲ್ಲೇ ಒಂದು ಪುಟ್ಟ ಮನೆ. ಪುಟ್ಟ ಎಂದರೆ ಒಬ್ಬ ಒಳಗಿದ್ದರೆ ಮತ್ತೊಬ್ಬ ಒಳಗೆ ಹೋಗುವ ಹಾಗಿಲ್ಲ. ಅಂತಹ ಮನೆ. ಅಲ್ಲಿ ಒಂದು ಸಂಸಾರ. ಅಪ್ಪ ಅಮ್ಮ ಮಕ್ಕಳು ಇನ್ನು ಯಾರು ಯಾರು ಇದ್ದಾರೋ ಗೊತ್ತಿಲ್ಲ. ಯಾಕೆಂದರೆ ಆ ಮನೆಯ ವಿಳಾಸ ಮಾಡಿಕೊಂಡವರು ಅಲ್ಲೇ ಇರಬೇಕೆಂದೇನೂ ಇಲ್ಲ. ಮಾರುಕಟ್ಟೆಯ ಯಾವುದೋ ಮೂಲೆಯಲ್ಲಿ ಏನೋ ವ್ಯವಹಾರದಲ್ಲಿ ನಿರತರಾಗಿರಬಹುದು. ಹೇಳುವುದಕ್ಕೆ ಎಲ್ಲರಿಗೂ ಒಂದು ಮನೆ ಅಷ್ಟೇ. ವಿಶಾಲವಾದ ಜಗತ್ತಿನಲ್ಲಿ ಇರುವುದಕ್ಕೆ ಭಗವಂತ ಕರುಣಿಸಿದ ಗೇಣುದ್ದದ ಜಾಗ.  ಆ ಮಳೆಗೆ ಅಲ್ಲಿ ಸಂಚರಿಸುತ್ತಿದ್ದರೆ, ಮೊಣಕಾಲೆತ್ತರದ ನೀರು ಕೆಳಗೆ ಹರಿಯುತ್ತಿದ್ದರೆ....ಅಲ್ಲೆ ಒಂದು ಎತ್ತರ ಕಲ್ಲು ಬೆಂಚಿನ ಮೇಲೆ ಒಂದು ಮಗು ಚೆನ್ನಾಗಿ ಮಲಗಿತ್ತು. ಕೊಳಚೆ ಮೆತ್ತಿದ ಚಾದರವನ್ನು ಹೊದ್ದು ಮಳೆಯ ಪರಿವೆ ಇಲ್ಲದೆ ನಿದ್ರಿಸುತ್ತಿತ್ತು. ಇನ್ನು ಕೆಲವರು ಅಲ್ಲೆ ನಿದ್ರಿಸುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಆಗ ಅನ್ನಿಸಿತು ಹಾ ಜೀವನವೇ? ನಾನು ಮನೆಗೆ ಹೋಗಿ ಅಂಗಾಂಗ ತೊಳೆದು ಬೆಚ್ಚಗೆ ಮಲಗುವ ಬಯಕೆಯಲ್ಲಿದ್ದರೆ, ಇವರಿಗೆ ಅದನ್ನು ಬಯಸುವ ಯಾವ ಅವಕಾಶವೂ ಇಲ್ಲದೇ ಅಲ್ಲೇ  ಮಲಗುವುದಕ್ಕೆ ತೊಡಗುತ್ತಾರೆ. 

ಆ ಮಗುವಿನ ನಿದ್ರೆಯನ್ನು ನೋಡಿ, ನನಗೆ  ನಾಲ್ಕು ದಶಕಗಳ ಹಿಂದಿನ ಒಂದು ದಿನದ ರಾತ್ರಿಯ ನೆನಪಾಯಿತು. ಹೌದು ಇದೇ ರೀತಿ ಬೀದಿ ಬದಿಯ ಜಗಲಿಯಲ್ಲಿ ಮಲಗಿದ್ದೆ. ಆದರೆ ಅದು ಈ ಬಗೆಯ ನರಕವಲ್ಲ. ಆದರೆ ಅದು ಒಂದು ಹಳ್ಳಿಯ ಅಂಗಡಿ ಜಗಲಿ ಎಂಬುದಷ್ಟೇ ಸಾಮ್ಯತೆ.  ನನಗಾಗ ಹನ್ನೆರಡರ ವಯಸ್ಸಿರಬಹುದು. ಪುಟ್ಟ ಬಾಲಕ ನಾನು. ಪೈವಳಿಕೆಯ ಹಳ್ಳಿಯ ಮನೆಯಲ್ಲಿ ವಾಸಿಸುತ್ತಿದ್ದ ಸಮಯ. ನಮ್ಮ ಮನೆಯೂ ಅಷ್ಟೇ ಒಂದು ಕೋಣೆಯ ಪುಟ್ಟಗುಡಿಸಲು. ಆಗ ಚಕ್ಕುಲಿ ವ್ಯಾಪಾರವಿತ್ತು. ಶಾಲೆಯಿಂದ ಬಂದು  ಸಾಯಂಕಾಲ ಚಕ್ಕುಲಿಯ ಚೀಲ ಹಿಡಿದು ಅಂಗಡಿ ಅಂಗಡಿ ಸುತ್ತಿದರೆ ಮರುದಿನದ ಹಸಿವೆಗೆ ಪರಿಹಾರವಾಗುತ್ತಿತ್ತು. ಆ ಸಮಯದಲ್ಲಿ ನಮ್ಮ ಮನೆಯಿಂದ ಹತ್ತು ಮೈಲಿ ದೂರ ಒಂದು ಕುಗ್ರಾಮ ವಿತ್ತು. ಈಗ ಒಂದಷ್ಟು ಸುಧಾರಿಸಿದೆ. ಆಗ ಅದು ತೀರಾ ಕುಗ್ರಾಮ. ವಿದ್ಯುತ್ ಇಲ್ಲ, ಸರಿಯಾದ ರಸ್ತೆ ರಸ್ತೆ ಇಲ್ಲ. ಇದ್ದ ಒಂದು ಮಣ್ಣಿನ ರಸ್ತೆ  ಎಂದರೆ ಅದು ರಸ್ತೆಯ ಗುರುತು ಮಾತ್ರ ಇಲ್ಲದೇ ಇದ್ದರೆ ಅದು ಬರೀ  ಹೊಂಡ ಗುಂಡಿಯ ಮಣ್ಣಿನ ರಸ್ತೆ. ಮಳೆಗಾಲದಲ್ಲಿ ಕೆಸರಾದರೆ, ಬೇಸಗೆಯಲ್ಲಿ ಧೂಳು. ಆ ರಸ್ತೆಯಲ್ಲಿ  ಒಂದೆರಡು ಬಸ್ಸು ಬೆಳಗ್ಗೆ ಮಧ್ಯಾಹ್ನ ಸಾಯಂಕಾಲ ಓಡುವುದು ಬಿಟ್ಟರೆ ನಾಗರೀಕ ಸಮಾಜದ ಯಾವ ಸಂಪರ್ಕವೂ ಇಲ್ಲದ ಕನಿಯಾಲ ಎಂಬ ಅದ್ಭುತ ಕುಗ್ರಾಮ. 

ಆಗ ಎರಡು ಬಸ್ಸು  ಸಂಚರಿಸುತ್ತಿತ್ತು. ಸಾಯಂಕಾಲ ಐದು ಘಂಟೆ ಕಳೆದರೆ ಆ ಊರಿನಿಂದ ಹೊರ ಹೊಗುವುದಕ್ಕೆ ಯಾವ ಬಸ್ಸೂ ಇರಲಿಲ್ಲ. ಒಂದು ಬಾರಿ ಐದು ಘಂಟೆಗೆ ಬಿಡುವ ಬಸ್ಸು ಸ್ವಲ್ಪ ಸಮಯ ತನ್ನ ಸಂಚಾರವನ್ನು ನಿಲ್ಲಿಸಿತ್ತು. ಸಾಮಾನ್ಯವಾಗಿ  ನಾವು ಅದೇ ಅಲ್ಲಿದ್ದ ಕೆಲವು ಅಂಗಡಿಗಳ ವ್ಯಾಪಾರ ಮುಗಿಸಿ ಅದೇ ಬಸ್ಸಿನಲ್ಲಿ ಮನೆಗೆ ವಾಪಾಸಾಗುತ್ತಿದ್ದುದರಿಂದ, ಆ ಬಸ್ಸು ಇಲ್ಲದೇ ಇದ್ದುದರಿಂದ ಅಲ್ಲಿಯ ವ್ಯಾಪಾರ ನಿಂತೇ ಹೋಗಿತ್ತು. ಆಗ ವ್ಯಾಪಾರ ಎಂದರೆ ಬಹಳ ಕಷ್ಟಕರವಾಗಿತ್ತು. ಎಲ್ಲ ಕಡೆಯೂ ವ್ಯಾಪಾರ ಕಡಿಮೆಯಾದಾಗ ಒಂದು ಬಾರಿ ಅಲ್ಲಿಗೆ ಹೋಗಲೇ ಬೇಕಾಗುವ ಅನಿವಾರ್ಯತೆ ಬಂದು ಬಿಟ್ಟಿತು. ಆದರೆ ಹೋದರೂ ಬರುವುದು ಹೇಗೆ? ಒಂದು ದಿನ ಶಾಲೆಯಿಂದ ಬಂದವನೆ ಚಕ್ಕುಲಿ ಚೀಲ ಹಿಡಿದು ಸಂಜೆಯ ಕೊನೆಯ ಬಸ್ಸು ಹತ್ತಿದೆ. ಆ ಬಸ್ಸು ಕನಿಯಾಲ ತಲುಪುವಾಗ ಕತ್ತಲೆಯಾಗಿತ್ತು. ನಂತರ ಅಲ್ಲಿಂದ ಆ ರಾತ್ರಿ ಬರುವುದು ಸಾಧ್ಯವಿರಲಿಲ್ಲ.  ಅದೊಂದು ವಿದ್ಯುತ್ ಇಲ್ಲದ  ಕುಗ್ರಾಮ.  ಒಂದೆರಡು ಅಂಗಡಿ ಒಂದು ಜೋಪಡಿಯಂತಹ ಹೋಟೇಲು.  ಸುತ್ತಲೂ ಎಲ್ಲವೂ ಕತ್ತಲು ಮಾತ್ರವಲ್ಲ, ಧೋ ಎಂದು ಸುರಿವ ಮಳೆ.  ಎಂಟು ಗಂಟೆಯಾಗಬೇಕಾದರೆ ಅಂಗಡಿಗಳೆಲ್ಲವೂ ಬಾಗಿಲು ಹಾಕಿ ಜನರು ಎಲ್ಲರೂ ಒಬ್ಬೊಬ್ಬರಾಗಿ  ತಮ್ಮ ತಮ್ಮ ಮನೆಯ ಕಡೆಗೆ ಹೋದರು. ಚಕ್ಕುಲಿ ಮಾರಿದ ಹಣ ಜೋಬಿನಲ್ಲಿ ಮನೆಯಿಂದ ತಂದ ತಂದ ಒಂದು ಬೈರಾಸು ಬಿಟ್ಟರೆ  ಚೀಲ ಮತ್ತೇ ಏನೂ ಇರಲಿಲ್ಲ. ಪುಟ್ಟ ಬಾಲಕ. ಅದೊಂದು ಬಗೆಯ ಹುಂಬ ಧೈರ್ಯ. 

ಹೋಟೇಲಿನಲ್ಲಿ ಉಳಿದ ಅನ್ನ ಮಜ್ಜಿಗೆ ಊಟ ಸಿಕ್ಕಿದ್ದು ನನ್ನ ಹಸಿವನ್ನು ನೀಗಿಸಿತ್ತು. ಹೋಟೆಲು ಬಾಗಿಲು ಹಾಕಿದ ಮೇಲೆ ನಾನು ಯಃಕಶ್ಚಿತ್ ಏಕಾಂಗಿಯಾದೆ. ಯಾರಾದರೂ ಅಂಗಡಿಯವರು ಮನೆಗೆ ಕರೆಯಬಹುದು ಎಂದು ಒಂದು ಸಲ ನಿರೀಕ್ಷಿಸಿದ್ದೆ. ಆದರೆ ಹಾಗಾಗಾಗಲಿಲ್ಲ. ಎಲ್ಲರೂ ಹೋದ ಮೇಲೆ  ಅಂಗಡಿಯ ಜಗಲಿಯಲ್ಲಿ ಒಂದು ಮರದ ಬೆಂಚು ಇತ್ತು. ಅದರಲ್ಲೇ ಮಲಗಿದೆ. ಬಹಳ ಹೊತ್ತು ನಿದ್ದೆ ಬರಲಿಲ್ಲ. ಜೋರಾದ ಮಳೆಯ ಸದ್ದಿಗೆ ಸುತ್ತ ಮುತ್ತಲಿನ ಪರಿಸರ ಏನೂ ಕಾಣುತ್ತಿರಲಿಲ್ಲ. ಹಳೆಯ ಮಲಯಾಳಂ ಸಿನಿಮಾದ ಹಳ್ಳಿಯ ದೃಶ್ಯದಂತೆ ಪರಿಸರ. ಚಿತ್ರ ವಿಚಿತ್ರ ಶಬ್ದಗಳು, ಕಪ್ಪೆಗಳ ವಟ ಗುಟ್ಟುವಿಕೆ, ಜೀರುಂಡೆಯ ಸದ್ದು...ಆ ಹಳ್ಳಿಯಲ್ಲಿ ಇದಲ್ಲದೆ ಬೇರೇನು ಇರುವುದಕ್ಕೆ ಸಾಧ್ಯ?  ವಿದ್ಯುತ್ ಇಲ್ಲದ ಕಾರಣ ಕಣ್ಣು ತೆರೆದರೂ ಎನೂ ಕಾಣಿಸದ ಕಪ್ಪು ಕತ್ತಲು. ಹಾಗೇ ಮಲಗಿದವನಿಗೆ ಅದಾವಾಗ ನಿದ್ದೆ ಬಂತೋ ತಿಳಿಯದು ಮುಂಜಾನೆ ಹೋಟೆಲಿನ ಭಟ್ಟರು ಬಾಗಿಲು ತೆಗೆದ ಸದ್ದಿಗೆ ಎಚ್ಚರವಾಯಿತು. ಅಂತೂ ಆ ರಾತ್ರಿ ಒಂದು ಜೀವಮಾನದಲ್ಲಿ ಬಹಳ ಸ್ಮರಣೀಯವಾಯಿತು. ಈಗ ಕನಿಯಾಲ ಕುಗ್ರಾಮ ಎನ್ನುವ ಹಾಗಿಲ್ಲ.ಅಲ್ಲಿಯ ತನಕ ರಸ್ತೆಗೆ ಟಾರು ಹಾಕಲಾಗಿದೆ. ಬಹಳಷ್ಟು ವಾಹನಗಳು ಓಡಾಡುತ್ತವೆ. ಅಕ್ಕ ಪಕ್ಕದ ಊರುಗಳಿಗೆ ಅಲ್ಲಿಂದ ಸಂಪರ್ಕ ರಸ್ತೆಗಳಿವೆ.  ಕನಿಯಾಲ ಎಂಬ ಹೆಸರು ಕೇಳಿದರೆ ಈಗಲೂ ಆ ರಾತ್ರಿ ನೆನಪಿಗೆ ಬರುತ್ತದೆ