ನಮ್ಮ ಪಕ್ಕದ ಮನೆ ಮಹಡಿಯಲ್ಲಿ ಓರ್ವ ಆಗಾಗ ಹೊರಬಂದು ದೂರ ಕುಳಿತು ಸಿಗರೇಟು ಸೇದುತ್ತಾ ನಿಂತಿರುತ್ತಾನೆ. ಸಿಗರೇಟು ಸೇದಬೇಕು ಎನ್ನುವಾಗ ಸಹಜವಾಗಿ ಹೊರಗೆ ಬಂದು ಸೇದುವುದು ವಾಡಿಕೆ. ಮನೆಯ ಒಳಗೆ ಸಂಭ್ರಮ ಸಡಗರ ಇನ್ನೂಏನೇನೋ ಚಟುವಟಿಕೆಗಳು ಇದ್ದರೂ, ಮನೆಯ ಮುಖ್ಯವಾಹಿನಿಯಿಂದ ದೂರಾ್ಗಿ, ಹೀಗೆ ಹೊಗೆ ಸೇದುವ ತವಕ ಉಂಟಾದಾಗ ಹೊರಗೆ ದೂರ ನಿಂತು ಸೇದುತ್ತ ಕುಳಿತು ಬಿಡುವುದು ಸಾಮಾನ್ಯ. ಇದು ಮನೆಯಲ್ಲಿ ಮಾತ್ರವಲ್ಲ, ಹಲವು ಕಾರ್ಯಕ್ರಮಗಳಾದಾಗ ಕೆಲವು ಮಂದಿ ಪ್ರತ್ಯೇಕವಾಗಿ ದೂರಾಗುವುದು ಎಂದರೆ ಅಲ್ಲಿ ಆ ವಾತಾವರಣಕ್ಕೆ ಅಸಹಜವಾಗಿ ಒಂದು ಸಂಭವ ನಡೆಯುತ್ತಿದೆ ಎಂದು ತಿಳಿದುಕೊಳ್ಳಬಹುದು. ತಮ್ಮದಾದ ದೌರ್ಬಲ್ಯ ಅವರನ್ನು ಮುಖ್ಯ ವಾಹಿನಿಯಿಂದ ದೂರಾಗಿ ಇರುವಂತೆ ಮಾಡುತ್ತದೆ. ತಮ್ಮ ಅಭ್ಯಾಸಗಳಿಂದ ತಾವು ದೂರವೇ ಇರಬೇಕು ಎಂದು ಅವರೇ ಸ್ವತಃ ತಿಳಿದುಕೊಂಡು ದೂರಾಗಿರುವುದು ಎಲ್ಲರಿಂದ ದೂರಾಗಿ ಒಬ್ಬರೇ ಇರುವುದು ಒಂದು ರೀತಿಯ ಅಸ್ಪೃಶ್ಯತೆಯನ್ನು ತಮ್ಮ ಮೇಲೆ ತಾವೇ ಕಂಡುಕೊಳ್ಳುತ್ತಾರೆ.
ಒಂದು ಬಾರಿ ನಾವು ನಾಲ್ಕು ಜನ ಪರಿಚಯಸ್ಥರು ಒಂದೆಡೆ ಕುಳಿತು ಹೀಗ ಸಾಮಾನ್ಯ ವಿಚಾರಗಳನ್ನು ಮಾತನಾಡುತ್ತ ಇದ್ದೆವು. ನಾವು ನಾಲ್ಕು ಜನ ಮಾತನಾಡುತ್ತಿರಬೇಕಾದರೆ ಒಬ್ಬಾತ ಜೇಬಿನಿಂದ ಸಿಗರೇಟ್ ತೆಗೆದು ಸೇದಲಾರಂಭಿಸಿದ. ಆ ಹೊಗೆಯ ಕಮಟು ವಾಸನೆ ಸಹಿಸುವುದು ನನ್ನಿಂದ ಆಗದೇ ನಾನು ದೂರ ಹೋಗಿ ನಿಂತುಕೊಂಡೆ. ಜತೆಗೆ ನನ್ನನ್ನು ಹಿಂಬಾಲಿಸಿ ಮತ್ತೊಬ್ಬನೂ ಬಂದು ನಾವೇ ಮಾತನಾಡುತ್ತಾ ನಿಂತುಕೊಂಡೆವು. ಆಗ ನಾನು ಹೇಳಿದೆ , ದೌರ್ಬಲ್ಯಗಳು ಅಸ್ಪೃಶತೆಯನ್ನು ಸೃಷ್ಟಿಸುತ್ತವೆ. ಮೊದಲಿಗೆ ಅರ್ಥವಾಗಲಿಲ್ಲ. ನಂತರ ಕಿರುನಗೆ ಬೀರಿದ. ಇಂತಹ ಸಂದರ್ಭಗಳಲ್ಲಿ ನಮ್ಮ ದೌರ್ಬಲ್ಯಗಳೇ ನಮಗೆ ಒಂದು ಗೋಡೆಯಾಗಿ ಬದಲಾಗಿಬಿಡುತ್ತದೆ. ಮೇಲಿನಿಂದ ಕಾಣುವುದಕ್ಕೆ ಇದು ಗಂಭೀರ ಅಂತ ಅನ್ನಿಸದೇ ಇದ್ದರೂ ಆಳವಾಗಿ ಚಿಂತಿಸಿದಾಗ, ನಮ್ಮ ದೌರ್ಬಲ್ಯಗಳು ವ್ಯಸನಗಳು ನಮ್ಮನ್ನು ಸಮಾಜದಿಂದ ದೂರ ಕೊಂಡುಹೋಗುತ್ತದೆ ಎಂದು ತಿಳಿದುಕೊಳ್ಳಬಹುದು.
ಒಬ್ಬ ಮದ್ಯವ್ಯಸನಿಯಾದ ಕುಡುಕ, ರಾತ್ರಿ ಮನೆಗೆ ಬಂದಾಗ ಮನೆಯಲ್ಲಿ ಉಳಿದವರೆಲ್ಲ ಒಂದಾಗಿ ಬಿಡುತ್ತಾರೆ. ಈತ ಮಾತ್ರ ಪ್ರತ್ಯೇಕಿಸಲ್ಪಡುತ್ತಾನೆ. ಇವನಂತೆ ಯಾರಾದರೂ ಕುಡುಕ ಇದ್ದರೆ ಆತನಿಗೆ ಇವನು ಸಂಗಾತಿಯಾಗಬಹುದೇ ಹೊರತು, ಉಳಿದವರೊಂದಿಗೆ ಬೆರೆಯುವುದಕ್ಕೆ ಒಂದು ಪರಿಧಿ ತನ್ನಿಂತಾನಾಗಿ ನಿರ್ಮಿಸಲ್ಪಡುತ್ತದೆ. ಆತ ಕುಡಿದಿದ್ದಾನೆ ಎಂದು ಆತನೊಂದಿಗೆ ಮಾತನಾಡುವಾಗ, ಅಥವಾ ವ್ಯವಹರಿಸುವಾಗಲೆಲ್ಲ ಒಂದು ಪ್ರತ್ಯೇಕ ಭಾವನೆ ಮೂಡಿಬಿಡುತ್ತದೆ. ಹೆಚ್ಚಾಗಿ ಇದು ಜಗಳಕ್ಕೆ ಕಾರಣವಾಗಿಬಿಡುತ್ತದೆ. ಇದೊಂದು ರೀತಿಯ ಅಸ್ಪೃಶ್ಯತೆ ಎಂದು ನನ್ನ ಭಾವನೆ. ತನ್ನ ದೌರ್ಬಲ್ಯಗಳಿಂದ ತಾನೇ ದೂರಾಗಿ ನಿಲ್ಲುವುದು ಎಂದರೆ ತನ್ನ ಸುತ್ತಲು ತಾನೇ ಅಸ್ಪೃಶ್ಯತೆಯ ಗೋಡೆಯನ್ನು ಕಟ್ಟಿದಂತೆ.
ಮದ್ಯ ಪಾನ, ಧೂಮ ಪಾನ ಇವುಗಳೆಲ್ಲ ಒಂದು ಗಂಭೀರವಾದ ದೌರ್ಬಲ್ಯಗಳಾದಾರೆ, ಇನ್ನು ಕೆಲವು ಅನೈತಿಕವಾದ ಚಟುವಟಿಕೆಗಳು ಇನ್ನೊಂದು ರೀತಿಯ ದೌರ್ಬಲ್ಯಗಳು ಎಲ್ಲವೂ ಸಹಜ ಜೀವನ ಶೈಲಿಯಿಂದ ದೂರವೇ ಇರುವಂತೆ ಮಾಡುತ್ತದೆ. ಇಲ್ಲವಾದರೆ ಅವರನ್ನು ದೂರವೇ ಮಾಡಿಬಿಡುತ್ತಾರೆ. ಗಂಭೀರವಾದ ದುಶ್ಚಟಗಳು ಮಾತ್ರವಲ್ಲ ಯಾವುದೇ ದೌರ್ಬಲ್ಯಗಳು ಉಳಿದವರಿಗಿಂತ ಒಂದು ಅಂತರವನ್ನು ಸೂಕ್ಷ್ಮವಾಗಿ ಸೃಷ್ಟಿ ಮಾಡುತ್ತವೆ. ಕೆಟ್ಟದಾಗಿ ಬೈಯುವುದು, ಸಿಟ್ಟಾಗುವುದು ಉದ್ರೇಕಗೊಳ್ಳುವುದು ಇವುಗಳು ಸ್ವಭಾವ ರೀತ್ಯಾ ಉಳಿದವರಿಗಿಂತ ದೂರವಾಗಿಸಿದರೆ ಅದೊಂದು ರೀತಿಯ ಅಸ್ಪೃಶ್ಯತೆಯಾಗಿಯೇ ಪರಿಗಣಿಸಬೇಕು. ದೌರ್ಬಲ್ಯಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಹುದು, ಆದರೆ ಅದಕ್ಕಿಂತ ಹೆಚ್ಚಾಗಿ ಅದು ಮನಸ್ಸಿನ ಮೇಲೆಯೂ ಪ್ರಭಾವ ಬೀರುತ್ತದೆ.
ಮನಸ್ಸು ಭಾವರಹಿತವಾಗಿದ್ದಷ್ಟು ಮನಸ್ಸು ಸ್ಥಿರವಾಗಿರುತ್ತದೆ. ಮನಸ್ಸಿನ ಯೋಚನೆಗಳು ಸ್ಥಿರವಾಗಿರುತ್ತವೆ. ದೌರ್ಬಲ್ಯಗಳಿಗೆ ವಶವಾದ ಮನಸ್ಸು ವಸ್ತುನಿಷ್ಠವಾಗಿ ಯೋಚಿಸುವುದಿಲ್ಲ. ಅಂತಹ ಮನಸ್ಸಿನ ನಿರ್ಣಯಗಳೂ ಸಮರ್ಪಕವಾಗಿರುವುದಿಲ್ಲ. ದೌರ್ಬಲ್ಯಗಳು ಮನಸ್ಸನ್ನು ಸಹಜವಾಗಿ ಚಿಂತಿಸುವುದಕ್ಕೆ ಆಸ್ಪದವನ್ನು ಕೊಡುವುದಿಲ್ಲ. ಯಾವುದೋ ದೌರ್ಬಲ್ಯಗಳಿಗೆ ಮನಸ್ಸು ವಶವಾದರೆ ಆ ಮನಸ್ಸು ಯೋಚನೆಯಲ್ಲಿ ದಾಸ್ಯಕ್ಕೆ ವಶವಾಗುತ್ತದೆ. ದೌರ್ಬಲ್ಯ ಎಂದರೆ ಕೇವಲ ಮದ್ಯ ಧೂಮ ಪಾನ ಮಾತ್ರವಲ್ಲ. ಅದು ತಿನ್ನುವ ಆಹಾರ, ಕುಡಿಯುವ ಪಾನೀಯ ಚಹ ಕಾಫಿ ಹೀಗೆ ಇನ್ನು ಏನೇನೋ ಆಗಿರಬಹುದು. ಅದು ಇಲ್ಲದೆ ಆಗುವುದಿಲ್ಲ ಎಂಬುದು ಒಂದು ಇದ್ದರೆ ಅದು ದೌರ್ಬಲ್ಯವಾಗುತ್ತದೆ. ಅದು ಇಲ್ಲದೇ ಆಗುವುದಿಲ್ಲ ಎಂದು ಇದ್ದರೆ ಆ ಮನಸ್ಸು ಅದನ್ನೇ ಯೋಚಿಸುತ್ತ, ನಿಜವಾಗಿ ಯೋಚಿಸಬೇಕಾದದ್ದನ್ನು ಮರೆತು ಬಿಡುತ್ತದೆ. ಈ ದೌರ್ಬಲ್ಯಗಳಿಂದ ದೂರಾದರೆ ನಮ್ಮ ಮನಸ್ಸಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಮನಸ್ಸಿನ ಚಿಂತನೆ ವಿಶಾಲವಾಗಿ ಸ್ವತಂತ್ರವಾಗಿರುತ್ತದೆ. ದೌರ್ಬಲ್ಯದಿಂದ ಮುಕ್ತನಾಗುವುದು ಎಂದರೆ ಮಾನಸಿಕ ದಾಸ್ಯದಿಂದ ಮುಕ್ತನಾದಂತೆ.
ಭಗವದ್ಗೀತೆಯಲ್ಲೂ ಹೇಳಿರುತ್ತದೆ. ಯಾವ ಮನಸ್ಸು ಉದ್ವೇಗಭರಿತವಾಗಿ ಭಾವಾವೇಶಕ್ಕೆ ಒಳಗಾಗುತ್ತದೋ ಅಲ್ಲಿ ಪರಮಾತ್ಮನ ಸಾನ್ನಿಧ್ಯವಿರುವುದಿಲ್ಲ. ನಾವು ಯಾವುದೋ ಭಾವಾವೇಶಕ್ಕೆ ಒಳಗಾಗಿ ಪರಮಾತ್ಮನನ್ನು ಧ್ಯಾನಿಸಿದರೆ, ಪರಮಾತ್ಮನ ಸ್ಮರಣೆಮಾಡಿದರೆ ಅದು ಪರಿಪೂರ್ಣವಾವುದಕ್ಕೆ ಸಾಧ್ಯವಿಲ್ಲ. ಯಾವುದೋ ಭಾವಾವೇಶಕ್ಕೆ ಒಳಗಾಗಿ ಪರಮಾತ್ಮನ ಸ್ಮರಣೆ ಮಾಡಿದರೆ, ಆ ಭಾವೋನ್ಮಾದ ಕಡಿಮೆಯಾಗಿ ಅದು ಶೂನ್ಯವಾದಾಗ ಭಗವಂತನ ಸ್ಮರಣೆಯೂ ದೂರಾಗುತ್ತದೆ. ಅಂದರೆ ಮನಸ್ಸಿನಿಂದ ಪರಮಾತ್ಮ ದೂರಾಗುತ್ತಾನೆ. ಮದ್ಯ ವ್ಯಸನಿ ಹೇಳಿದ ಮಾತುಗಳು, ಆತನ ವರ್ತನೆಗಳು ಆತನಲ್ಲಿದ್ದ ನಶೆಯಿಂದ ಪ್ರಚೋದಿಸಲ್ಪಟ್ಟು ಇರುವಾಗ , ಅದು ವ್ಯಸನದಿಂದ ತೋರಿದ ಕ್ರಿಯೆಯಾಗಿ ಅದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಕುಡಿದು ಹೇಳಿದ ಮಾತು ಎಂದು ಅದಕ್ಕೆ ಸಿಗಬೇಕಾದ ಗೌರವನ್ನು ಕೊಡುವುದಿಲ್ಲ. ಅದರಂತೆ ದೌರ್ಬಲ್ಯದಿಂದ ವಶವಾದ ಮನಸ್ಸಿನ ಕ್ರಿಯೆಗಳೂ ಪರಿಗಣಿಸಲ್ಪಡುತ್ತವೆ.
ದೌರ್ಬಲ್ಯಗಳು ಎಂದರೆ ಒಂದು ಅನಿವಾರ್ಯ ಎಂದು ನಮಗನಿಸಿದರೆ ಅದು ದೌರ್ಬಲ್ಯವಾಗುತ್ತದೆ. ಅದು ಕಾಫಿ ಚಹ ಕುಡಿಯದೇ ಆಗುವುದಿಲ್ಲ ಎಂದಿದ್ದರೂ ಅದು ದೌರ್ಬಲ್ಯ ಎಂದಾಗುತ್ತದೆ. ಅದು ಗಂಭೀರವಲ್ಲದೇ ಇದ್ದರೂ ಇಂತಹ ದೌರ್ಬಲ್ಯಗಳೂ ಸಹ ಭಗವಂತನ ಎದುರು ಅಸ್ಪೃಶ್ಯತೆಯನ್ನು ಸೃಷ್ಟಿಸುತ್ತದೆ. ನಮ್ಮಲ್ಲಿರುವ ಕ್ರೋಧ ಮೊಹ ಮತ್ಸರ ಇವುಗಳೆಲ್ಲ ನಮ್ಮಲ್ಲಿ ಅಸ್ಪೃಶ್ಯತೆಯನ್ನು ಅಪವಿತ್ರತೆಯನ್ನು ಸೃಷ್ಟಿಸುತ್ತದೆ. ಮಾನಸಿಕವಾದ ಒತ್ತಡವನ್ನು ಸೃಷ್ಟಿಯಾಗಿಸುವ ಎಲ್ಲ ಕ್ರಿಯೆಗಳೂ ಮನಸ್ಸಿನ ದಾಸ್ಯಕ್ಕೆ ಕಾರಣವಾಗುತ್ತವೆ. ಎಲ್ಲಿ ದೌರ್ಬಲ್ಯಗಳಿರುತ್ತವೇಯೋ, ಅದು ಯಾವುದೇ ದೌರ್ಬಲ್ಯವಾದರೂ ಅಲ್ಲಿ ಪರಮಾತ್ಮನ ಸಾನ್ನಿಧ್ಯ ಪರಿಪೂರ್ಣವಾಗಿ ಇರುವುದಕ್ಕೆ ಸಾಧ್ಯವಿಲ್ಲ,. ನಾವು ದೌರ್ಬಲ್ಯದಿಂದ ಮುಕ್ತವಾಗಿ ಪ್ರಾರ್ಥಿಸಿದಾಗ ಅದು ಆರೋಗ್ಯವಂತ ಮನಸ್ಸಿನ ಚಿಂತನೆಯಾಗಿ ಅದು ಪರಿಪೂರ್ಣ ಚಿಂತನೆಯಾಗುತ್ತದೆ. ಪರಿಪೂರ್ಣ ಚಿಂತನೆಮಾತ್ರವೇ ಪರಮಾತ್ಮನ ಹತ್ತಿರ ಕೊಂಡೊಯ್ಯುತ್ತವೆ.
ದೌರ್ಬಲ್ಯಗಳು ಹೇಗೆ ನಮ್ಮನ್ನು ಪರಕೀಯನನ್ನಾಗಿ ಮಾಡುತ್ತವೆಯೋ, ನಾವು ಸ್ವತಃ ಅಪವಿತ್ರವಾಗಿ ಇರುವುದು ಕೂಡ ನಮ್ಮನ್ನು ಅಸ್ಪೃಶ್ಯನನ್ನಾಗಿಸುತ್ತದೆ. ಮನುಷ್ಯನ ಬದುಕಿನಲ್ಲಿ ಒಂದು ಪವಿತ್ರ ಇನ್ನೊಂದು ಅಪವಿತ್ರ ಇವಿಷ್ಟೇ ದಾರಿಗಳು ಇರುವುದು. ಪವಿತ್ರ ಎಂದರೆ ಅದು ಮುಕ್ತವಾಗಿರುತ್ತದೆ. ಮನಸ್ಸು ದೇಶ ಕಲ್ಮಷದಿಂದ ದೂರಾಗುವುದು ಎಂದರೆ ಪವಿತ್ರನಾಗುವುದಾಗುತ್ತದೆ. ಪಾವಿತ್ರ್ಯತೆ ದೂರಾದರೆ ಅಪವಿತ್ರದಿಂದ ಅಸ್ಪೃಶ್ಯದಿಂದ ದೂರಾಗುವುದು. ಒಬ್ಬನನ್ನು ಅಸ್ಪೃಶ್ಯ ಎಂದು ದೂರ ಮಾಡುವುದಕ್ಕೂ ತಾನು ಸ್ವತಃ ಅಸ್ಪೃಶ್ಯ ಅಂತ ದೂರ ಉಳಿಯುವುದಕ್ಕೂ ವೆತ್ಯಾಸವಿರುತ್ತದೆ. ಅಪವಿತ್ರತೆ ಅಸ್ಪೃಶ್ಯತೆಯನ್ನು ಸೃಷ್ಟಿಸಿದಂತೆ ದೌರ್ಬಲ್ಯಗಳು ಅಸ್ಪೃಶ್ಯತೆಯನ್ನು ಸೃಷ್ಟಿಸುತ್ತವೆ. ಸನಾತನ ಧರ್ಮದಲ್ಲಿ ಪರಮಾತ್ಮನ ಹತ್ತಿರ ಮತ್ತು ದೂರ ಈ ಎರಡು ದೃಷ್ಟಿಕೋನದಲ್ಲಿ ಅಸ್ಪೃಶ್ಯತೆ ಇದ್ದರೆ, ಕ್ರಮೇಣ ಅದು ಧರ್ಮದ ರೂಪದಲ್ಲಿ ಬದಲಾಗಿ ಹೋದದ್ದು ಖೇದಕರ. ಎಲ್ಲಾ ಧರ್ಮಗಳ ಸಂಸ್ಕಾರಗಳು ಭಗವಂತನ ಬಳಿಗೆ ಹೋಗುವ ಹಾದಿಗಳು. ಹಾದಿ ಬೇರೆ ಬೇರೆ ಆಗಿದ್ದರೂ ಇದರ ಗುರಿ ಒಂದೇ. ಇದರಲ್ಲಿ ಅಸ್ಪೃಶ್ಯ ತತ್ವ ಭಗವಂತನ ಹಾದಿಯ ಪಾವಿತ್ರ್ಯತೆಯನ್ನು ತೋರಿಸುತ್ತದೆ ಹೊರತು ಮತೀಯ ಭೇದವನ್ನು ಹೇಳುವುದಿಲ್ಲ. ಮತೀಯ ಭೇದಗಳು ಮನುಷ್ಯನ ಸೃಷ್ಟಿ.
No comments:
Post a Comment