ಲೆಕ್ಕ ಪರಿಶೋಧನೆಯ ಕೆಲಸದಲ್ಲಿ ಸೊಸೈಟಿಯೊಂದಕ್ಕೆ ಭೇಟಿ ಕೊಟ್ಟೆ. ಲೆಕ್ಕ ಪರಿಶೋಧನೆ ಎಂದರೆ ನಾವು ಯಾವಾಗ ಹೋದರೂ ಅದಕ್ಕೆ ಸಂಬಂಧಿಸಿದವರು ಆವಶ್ಯಕ ಕಡತಗಳನ್ನು, ದಾಖಾಲಾತಿಗಳನ್ನು ಯಾವುದೇ ಸಮಯವಾದರೂ ಒದಗಿಸಿಕೊಡಬೇಕಾದದ್ದು ಸಂಸ್ಥೆಯಲ್ಲಿ ಸಂಬಂಧಿಸಿದವರ ಕರ್ತವ್ಯ. ಆದರೆ ಇಲ್ಲಿ ಹೋದಾಗ ಅಲ್ಲಿ ನಿರ್ವಾಹಕ ವೃತ್ತಿಯಲ್ಲಿ ಒಬ್ಬರು ಮಹಿಳೆ ಇದ್ದರು. ನಾನು ಪರಿಶೋಧನೆಗಾಗಿ ಬರುತ್ತೇನೆ ಎನ್ನುವಾಗಲೇ ಧ್ವನಿಯಲ್ಲಿ ಸಣ್ಣ ಅಸಮಧಾನವಿತ್ತು. ಆದರೂ ಅದನ್ನು ತೋರಿಸಿಕೊಡದೆ ತುಂಬ ಸೌಹಾರ್ದದಲ್ಲಿ ಬರುವಂತೆ ಹೇಳಿದರು. ಆ ಮಹಿಳೆ ಅಷ್ಟೇನು ಪ್ರಾಯವಾಗದ ಉತ್ಸಾಹಿ ಮಹಿಳೆ. ಆದರೆ ಪರಿಶೋಧನೆಯ ಕೆಲಸ ಆರಂಭಿಸಬೇಕಾದರೆ ಪ್ರತಿ ಕ್ಷಣವೂ ಅವಸರದ ಭಾವವನ್ನು ತೋರಿಸುತ್ತಿದ್ದರು. ನಾನು ಯಾವಾಗ ಮುಗಿಸಿ ಬಿಡುತ್ತೇನೆ ಎಂಬ ಆತುರದಲ್ಲಿದ್ದಂತೆ ಸಹಕರಿಸುತ್ತಿದ್ದರು. ಈ ಅವಸರದಲ್ಲಿ ಆಕೆ ಬಹಳಷ್ಟು ಗೊಂದಲದಲ್ಲಿ ಬಹಳಷ್ಟು ಎಡವಟ್ಟುಗಳನ್ನು ಅನುಭವಿಸಿದಾಗ ನಾನು ಕೇಳಿದೆ.,
"ಏನು ಮೇಡಂ ಯಾಕೆ ಒತ್ತಡದಲ್ಲಿದ್ದೀರಿ?"
ಆಕೆ " ಏನಿಲ್ಲ ಹಬ್ಬ ಅಲ್ವ ಸರ್. ಸ್ವಲ್ಪ ಬೇಗ ಮನೆಗೆ ಹೋಗಬೇಕು. ವಿಪರೀತ ಕೆಲಸ. ಇಲ್ಲಿಯೂ ಕೆಲಸ ಮನೆಗೆ ಹೋದ ಮೇಲೆ ಅಲ್ಲಿಯೂ ಹಬ್ಬದ ಕೆಲಸ ಸಾಕಷ್ಟು ಇದೆ. ಹಬ್ಬ ಅಲ್ವಾ? ಮಾಡದೇ ಇರೋಕೆ ಆಗುತ್ತಾ?"
ನನಗೆ ಜೋರು ನಗು ಬಂತು. ನಾನು ಕೇಳಿದೆ. " ಹಬ್ಬ ಮಾಡುವ ಉದ್ದೇಶವಾದರೂ ಏನು?" ಆಕೆ ನಕ್ಕು ಏನೋ ತೊದಲಿದಳು. ಹಬ್ಬ ಅಲ್ವ ದೇವರ ಅನುಗ್ರಹ ಪಡಿಬೇಕು. ಹಬ್ಬ ಅಂದರೆ ಪೂಜೆ ಪುನಸ್ಕಾರ ಇದೆಲ್ಲ ಮಾಡಬೇಕು.
" ನಾನು ಹೇಳಿದೆ, ದೇವರು ಎಂದರೆ ಸರ್ವ ಒತ್ತಡವನ್ನೂ ನಿವಾರಿಸುವ ಒಂದು ಶಕ್ತಿ. ಹಾಗಿರುವಾಗ ಅಲ್ಲೂ ನಮ್ಮ ಉದ್ವಿಗ್ನ ಸ್ಥಿತಿ ಮತ್ತಷ್ಟೂ ಹೆಚ್ಚಾಗುತ್ತದೆ ಎಂದಾದರೆ ನಾವು ಮಾಡುವ ವೃತ್ತಿಗೆ ಏನು ಗೌರವ ಇದೆ?" ಆಕೆಗೆ ನನ್ನ ಮಾತಿನ ಅಂತರಂಗ ಅರ್ಥವಾದಂತೆ ಭಾಸವಾಗಲಿಲ್ಲ. ಅದನ್ನು ಕೇಳಿದರೂ ಆಗೆಯ ಗಡಿಬಿಡಿಯ ಒತ್ತಡ ಕಡಿಮೆ ಆಗುತ್ತದೆ ಎಂಬ ನಿರೀಕ್ಷೆ ನನಗಿಲ್ಲ. ಆದರೂ ಅವರ ಚಿಂತನೆಯ ದುರ್ಬಲತೆಯನ್ನು ತೋರಿಸಿಕೊಡುವುದು ನನ್ನ ಉದ್ದೇಶವಾಗಿತ್ತು. ಆದರೆ ನಮ್ಮ ಪ್ರವೃತ್ತಿ ಹೇಗೆ ಬೆಳೆದಿದೆ ಎಂದರೆ ಯಾವುದೋ ತತ್ವಗಳನ್ನು ಉನ್ನತ ಚಿಂತನೆಗಳು ಎಲ್ಲೋ ಓದುತ್ತೇವೆ, ಅಥವಾ ಕೇಳುತ್ತೇವೆ. ಕೇಳುವಾಗ ಅದು ಹೌದು ಎಂದುಕೊಂಡರೂ ಸ್ವಂತ ಬಳಕೆಯಲ್ಲಿ ಸೋತು ಬಿಡುತ್ತೇವೆ. ಇಂದು ಸಡಗರದಿಂದ ಹಬ್ಬ ಆಚರಿಸುವ ಮಂದಿಗಳಲ್ಲಿ ಒತ್ತಡದಿಂದ ಹಬ್ಬ ಆಚರಿಸುವವರೇ ಅಧಿಕ. ಹಬ್ಬ ಆಚರಿಸದೇ ಇದ್ದರೆ ಏನೋ ಆಗಿಬಿಡುತ್ತದೆ ಎಂಬ ಆತಂಕದಲ್ಲೇ ಹಬ್ಬ ಆಚರಿಸುತ್ತಾರೆ. ಈ ಆತಂಕ ಹಬ್ಬದಲ್ಲಿ ಏನು ಸಂತೋಷವನ್ನು ನೆಮ್ಮದಿಯನ್ನು ಅನುಭವಿಸಬೇಕೋ ಅದನ್ನು ಇಲ್ಲವಾಗಿಸುತ್ತದೆ. ಈ ಒತ್ತಡದಲ್ಲಿ ಹಬ್ಬ ಆಚರಿಸುವ ಆವಶ್ಯಕತೆಯಾದರೂ ಏನು? ಹಬ್ಬ ಎಂದರೆ ಅದೊಂದು ಪರ್ವ ಕಾಲ. ಉಳಿದ ಸಮಯದಲ್ಲಿ ಜೀವನದ ಯಾವುದೋ ಅನಿವಾರ್ಯತೆಗೆ ಸಹಜವಾಗಿ ಒತ್ತಡಾವನ್ನು ಅನುಭವಿಸಬೇಕಾಗುತ್ತದೆ. ಆದರೆ ಹಬ್ಬದಲ್ಲಿ ಅದೆಲ್ಲವನ್ನು ಬಿಟ್ಟು ಮುಕ್ತವಾಗಿ ಶಾಂತಿಯಿಂದ ಇರುವ ಅವಕಾಶ ಅದು.
ನಮ್ಮಲ್ಲಿರುವ ಮಾನಸಿಕ ಒತ್ತಡ ಅಶಾಂತಿ ಇದ್ದಲ್ಲಿ ಮನಸ್ಸು ಚಂಚಲವಾಗಿರುತ್ತದೆ. ಅಲ್ಲಿ ದೇವರ ಅಸ್ತಿತ್ವ ಇರುವುದಕ್ಕೆ ಸಾಧ್ಯವಿಲ್ಲ. ಇವುಗಳೆಲ್ಲವನ್ನು ದೂರ ಮಾಡಿದಾಗ ಮಾತ್ರ ಪರಮಾತ್ಮನ ಸಾನ್ನಿಧ್ಯ ಒದಗಿಬರುತ್ತದೆ. ನಮ್ಮಲ್ಲಿ ಋಣಾತ್ಮಕ ಭಾವವನ್ನು ಪ್ರಚೋದನೆಯನ್ನು ದೇವರು ಒದಗಿಸುತ್ತಾನೆ ಎಂದಾದರೆ ಅದು ದೇವರಾಗುವುದಕ್ಕೆ ಹೇಗೆ ಸಾಧ್ಯ? ಹಬ್ಬ ಮಾಡದೇ ಇದ್ದರೆ ದೇವರ ದುರಾಗ್ರಹಕ್ಕೆ ಒಳಗಾಗಿ ನಾವು ಶಾಪಗ್ರಸ್ಥರಾಗುತ್ತೇವೆ ಎಂಬ ಒತ್ತಡದಲ್ಲಿ ಮಾಡಿದಾಗ ಬಲವಂತದ ಮಾಘಸ್ನಾನವಾಗುತ್ತದೆ. ಮನಸ್ಸು ಸಂಪೂರ್ಣವಾಗಿ ಪರಮಾತ್ಮ ಆವರಿಸುವುದಿಲ್ಲ. ಅಲ್ಲಿ ಋಣತ್ಮಕ ಧೋರಣೆಗಳು ಮಾತ್ರವೇ ಜಾಗೃತವಾಗಿರುತ್ತದೆ. ಶಾಪ ಕೊಡುವವನು ದೇವರಾಗುವುದಕ್ಕೆ ಸಾಧ್ಯವಿಲ್ಲ. ಭವದ ಭಯವನ್ನು ನೀವಾರಿಸುವುದಕ್ಕೆ ಇರುವ ದೇವರು ಅದನ್ನು ಆತ ಸೃಷ್ಟಿಸುತ್ತಾನೆ ಎಂದರೆ ಆತ ದೇವರಾಗುವುದಕ್ಕೆ ಸಾಧ್ಯವಿಲ್ಲ.
ಮೊನ್ನೆ ಸಂಬಂಧಿಗಳೊಬ್ಬರಿಗೆ ಯಾವುದೋ ಆರೋಗ್ಯ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಆಗಬೇಕಿತ್ತು. ಅವರು ಈ ಹಬ್ಬಗಳ ಕಾರಣ ಕೊಟ್ಟು ಅದನ್ನು ಮುಂದೆ ಹಾಕುತ್ತಿದ್ದರು. ನಾನು ಮೊದಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳು ವಂತೆ ಹೇಳಿದೆ. ಹಬ್ಬಗಳು ಮುಂದೆಯೂ ಬರಬಹುದು. ಆದರೆ ಆರೋಗ್ಯ ಅದು ಎಲ್ಲದಕ್ಕಿಂತಲೂ ಅನಿವಾರ್ಯ. ಹಬ್ಬ ಮಾಡಲಾಗದೇ ಇದ್ದರೆ ಏನಂತೆ, ಎಲ್ಲಾ ದಿನ ಹತ್ತು ಸಲ ರಾಮ ರಾಮ ಹೇಳಿದರೆ ಆದಿನ ನೂರು ಸಲ ಹೇಳಿದರಾಯಿತು. ನಾಮ ಸ್ಮರಣೆಗಿಂತ ಮಿಗಿಲಾದ ಯಜ್ಞವಿಲ್ಲ. ರಾಮ ರಾಮ ಧ್ಯಾನ ಮಾಡುವುದು ಎಂದಿಗೂ ಪಾಪದ ಕಾರ್ಯವಾಗುವುದಕ್ಕೆ ಸಾಧ್ಯವಿಲ್ಲ. ಇದನ್ನು ಗಮನಿಸದೇ ಇಂದು ನೂರರಲ್ಲಿ ತೊಂಭತ್ತು ಮಂದಿಗಳೂ ಇದೇ ಒತ್ತಡದಲ್ಲಿ ಹಬ್ಬ ಆಚರಿಸುತ್ತಾರೆ. ಯಾವ ಉದ್ದೇಶದಲ್ಲಿ ನಾವು ಕಾರ್ಯವನ್ನು ಮಾಡುತ್ತೇವೆಯೋ ಆ ಕಾರ್ಯದ ಅದ್ದೇಶದಿಂದ ನಾವು ಈ ಒತ್ತಡವನ್ನು ಕಟ್ಟಿಕೊಂಡು ದೂರವಾಗುತ್ತಾ ಇದ್ದೇವೆ. ಇದು ಮೂರ್ಖತನ.
ಇಷ್ಟೇ ಅಲ್ಲ, ನಾವು ಪೂಜೆ ಆರಾಧನೆ ಮಾಡುವಾಗಲೂ ಒಂದು ಒತ್ತಡ ನಮ್ಮನ್ನು ಬಾಧಿಸುತ್ತದೆ. ಇದು ನಮಗೆ ಮಾಡಬಾರದ ಕೆಲಸಗಳಿಗೆ ಪ್ರೇರಣೆಯನ್ನು ಕೊಡುತ್ತದೆ. ಅಥವಾ ಆ ಒತ್ತಡದಲ್ಲಿ ಅದನ್ನೇ ಮಾಡುತ್ತೇವೆ. ದೇವಾಲಯಕ್ಕೆ ಹೋಗುವುದಿದ್ದರೂ ಇಂತಹ ಹಲವು ಒತ್ತಡಗಳನ್ನು ಹೊತ್ತುಕೊಂಡು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗುವ ಉದ್ದೇಶವನ್ನು ಮರೆತೆ ನಮ್ಮ ಮನಸ್ಸಿನಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತೇವೆ.
ಯಾವ ದೇವರೂ ಹಬ್ಬವನ್ನು ಮಾಡದೇ ಇದ್ದರೆ ಶಪಿಸಲಾರ. ನನ್ನ ದೇವರಂತು ನನಗೆ ಶಪಿಸಲಾರ ಎಂಬ ವಿಶ್ವಾಸ ಸದಾ ಕಾಲ ನನ್ನಲ್ಲಿರುತ್ತದೆ. ಒಂದು ವೇಳೆ ನಾನು ತಪ್ಪು ಮಾಡಿದರೂ. ನನ್ನಮ್ಮ ನನ್ನಗೆ ಶಿಕ್ಷಿಸುವಂತೆ ಶಿಕ್ಷಿಸಬಹುದು. ತಾಯಿ ಎಷ್ಟು ಹೊಡೆದರೂ ಮಗು ತಾಯಿಯನ್ನು ಮತ್ತಷ್ಟು ಬಿಗಿದಪ್ಪುವಂತೆ ನಾನು ದೇವರಿಗೆ ಮತ್ತು ಶರಣಾಗಿಬಿಡುತ್ತೇನೆ. ಆಗ ದೇವರು ಕೊಡುವ ಯಾವ ಶಿಕ್ಷೆಯೂ ಶಿಕ್ಷೆ ಎಂದನಿಸುವುದಿಲ್ಲ. ನಾನು ಮಾಡಿದ ತಪ್ಪಿನಿಂದ ಪಾಪ ಕಾರ್ಯದಿಂದ ಹೊರಬರುವುದಕ್ಕೆ ನನ್ನ ದೇವರು ಕೊಡುವ ದಿವ್ಯ ಅವಕಾಶ ಎಂದುಕೊಂಡು ಬಿಡುತ್ತೇನೆ.
ನಮ್ಮ ಕಾರ್ಯ ಪ್ರವೃತ್ತಿಗಳು ನಮ್ಮ ಮನಸ್ಸನ್ನು ಪರಿಶುದ್ದಿಯತ್ತ ಒಯ್ಯಬೇಕು. ಮನಸ್ಸು ಸದಾ ಉದ್ವಿಗ್ನತೆ ಕ್ರೋಧ ಇವುಗಳಿಂದ ಆವರಿಸಲ್ಪಟ್ಟರೆ ಮನಸ್ಸು ಪರಿಶುದ್ಧಿಯಾಗುವುಕ್ಕೆ ಆಧ್ಯವಿಲ್ಲ. ಪರಿಶುದ್ದಿ ಇಲ್ಲದೇ ಇದ್ದಲ್ಲಿ ಪರಮಾತ್ಮನ ಸಾನ್ನಿಧ್ಯ ಇರುವುದಿಲ್ಲ.ಎರಡು ಹೊತ್ತು ಕೇವಲ ಸ್ನಾನ ಮಾಡಿ ಜಪ ಮಾಡಿದ್ದರಲ್ಲಿ ಪರಿಶುದ್ದರಾಗುವುದಿಲ್ಲ. ಮನಸ್ಸು ಶುದ್ಧವಾದರೆ ಮಾತ್ರ ನಾವು ಪರಿಶುದ್ಧರಾಗುತ್ತೇವೆ. ಒಂದು ಉದ್ದರಣೆ ಸೌಟಿನ ನೀರಿನ ಅಚಮನ ನಮ್ಮನ್ನು ಪರಿಶುದ್ದಿಯಾಗಿಸಬಹುದು. ಆದರೆ ಮನಸ್ಸಿನಲ್ಲಿ ರಾಗ ದ್ವೇಷಗಳನ್ನು ತುಂಬಿಸಿಕೊಂಡಿದ್ದಲ್ಲಿ ನಾವು ಯಾಗ ಯಜ್ಞ ಮಾಡಿದರೂ ಪಾಪಮುಕ್ತರಾಗುವುದಿಲ್ಲ. ಭಗವದ್ಗೀತೆಯ ಉಪದೇಶ ಕೇಳಿ ಅರ್ಜುನ ನಷ್ಟೋ ಮೋಹ..ಅಂತ ಹೇಳಿದರೂ ಭಗವಂತನನ್ನು ಕಾಣುವಾಗ ಹೇಳಿದ್ದು ಮರೆತು ಹೋಗಿರುತ್ತದೆ. ಭಗವಂತ ಬೇಕಾದಾಗ ಆ ವಾಕ್ಯ ನೆನಪಾಗುವುದಿಲ್ಲ. ಎಲ್ಲಿ ಕ್ರೋಧ ಮದ ಮೋಹ ಮತ್ಸರಗಳಂತಹ ವೈರಗಳು ಇರುವುದೋ ಅಲ್ಲಿವರೆಗೆ ನಾವು ಭಗವಂತನ ಅನುಗ್ರಹವನ್ನು ಪಡೆಯುವುದಕ್ಕೆ ಸಾಧ್ಯವಿಲ್ಲ.
No comments:
Post a Comment