Sunday, August 25, 2024

ಮಲಯಾಳಿ ಹೇಳಿದ ಕಥೆ

"ಯಾವುದು ತಪ್ಪು ಅಥವಾ ಅಪರಾಧ ಅಂತ ತಿಳಿದರೂ ಉದ್ದೇಶ ಪೂರ್ವಕವಾಗಿ ಅದನ್ನೇ  ಮಾಡುತ್ತೇವೆಯೋ ಅದು ದುರಹಂಕಾರವಾಗುತ್ತದೆ. " 

        ನಮ್ಮ ದುರಹಂಕಾರದ ಪರಿಣಾಮ ನಾವೇ ಅನುಭವಿಸುವುದಾದರೆ ಒಂದು ರೀತಿಯಲ್ಲಿ ನ್ಯಾಯ ಎನ್ನಬಹುದೇನೋ. ಆದರೆ ಯಾರದೋ ತಪ್ಪಿಗೆ ನಾವು ಪರಿಣಾಮ ಎದುರಿಸುವಾಗ, ಆ ಅನ್ಯಾಯಕ್ಕೆ ನಾವೇ ಎರವಾಗುವಾಗ ಯಾರನ್ನು ಹೇಳುವುದು? ಮಾಡಿದ ಅಪರಾಧದ ಕಾರಣ ನಾವು ಭಗವಂತನ ಎದುರು ನಿಲ್ಲುವುದಕ್ಕೂ ಅರ್ಹತೆಯನ್ನು ಕಳೆದುಕೊಂಡಿರುತ್ತೇವೆ. 

ವಯನಾಡು ಇತ್ತೀಚೆಗೆ ವಿಶ್ವದ ಗಮನ ಸೆಳೆದ ಮಲಯಾಳಿ ಜಿಲ್ಲೆ. ಭೀಕರ ನೆರೆ ಪ್ರವಾಹ, ಭೂ ಕುಸಿತ, ಒಂದು ರಾಷ್ಟ್ರೀಯ ದುರಂತವಾಗಿ ಗಮನಸೆಳೆದು ಬಿಟ್ಟಿತು. ಹೆಚ್ಚು  ಮುಸ್ಲಿಂ ಜನರು  ವಾಸಿಸುವ ಪ್ರದೇಶ. ಮತ್ತು ಇಲ್ಲಿನ ಹೆಚ್ಚಿನವರು ಜೀವನ ಮಾರ್ಗಕ್ಕೆ ಪರ ಊರಿನಲ್ಲೂ ಗಲ್ಬ್ ದೇಶಗಳಲ್ಲೂ ದುಡಿಯುತ್ತಿದ್ದಾರೆ. ಬೆಂಗಳೂರಲ್ಲೂ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಮೆಜೆಸ್ಟಿಕ್ ನಲ್ಲಿ  ಹಲವು ಮಾರಾಟ ಮಳಿಗೆಗಳಲ್ಲಿ ಮಲಯಾಳಿಗಳೇ ತುಂಬಿದ್ದಾರೆ.  ವಯನಾಡಿನ ಹಲವು ಮಲಯಾಳಿ ಗ್ರಾಹಕರು ನನ್ನಿಂದ ಜಿ ಎಸ್ ಟಿ ಸಂಭಂಧಿತ ಸಲಹೆ  ಹಾಗೂ ಇತರ ಸೇವೆಯನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಒಬ್ಬನನ್ನು ಇತ್ತೀಚೆಗೆ ಭೇಟಿಯಾದೆ. ಆತ ಹೇಳಿದ ಒಂದು ಕಥೆ.   

ಕೆಲವು ವರ್ಷಗಳ ಹಿಂದೆ ಗಲ್ಪ್ ಗೆ ಉದ್ಯೋಗ ಅರಸಿ ಬಂದಿದ್ದ. ಗಲ್ಪ್ ಗೆ ಬಂದು ದುಡಿಯುವುದಕ್ಕಾರಂಭಿಸಿದಾಗಲೇ ಆತನ ಉಮ್ಮ ಮತ್ತು ಕುಟುಂಬ ಹೊಟ್ಟೆತುಂಬ ಉಣ್ಣುವುದಕ್ಕೆ ಸಾಧ್ಯವಾಗಿದ್ದು. ಊರಲ್ಲಿದ್ದಾಗ ಒಂದಷ್ಟು ದರ್ಖಾಸ್ತು ಭೂಮಿ ಇತ್ತು. ಅಪ್ಪನಿದ್ದಾಗ ಒಂದಷ್ಟು ಗುಡ್ಡ ತೋಟ ಅಂತ ಇದ್ದರೂ ಅಪ್ಪನ ಕಾಲಾನಂತರ ಅದು ಹಂಚಿ ಹೋಳಾಗಿ ಕಡು ಬಡತನ ಎಲ್ಲ ಮನೆಗಳಲ್ಲೂ ತಾಂಡವವಾಡುತ್ತಿತ್ತು. ಕೂಲಿ ಕೆಲಸಕೂಡ ಆ ಕಾಡಿನ ಅಂಚಿನಲ್ಲಿ ಸಿಗುತ್ತಿರಲಿಲ್ಲ. ಹತ್ತಿರದ ನಗರಕ್ಕೆ ಅಥವ ದೂರದ ಊರುಗಳಿಗೆ ಹೋಗಿ ದುಡಿಯಬೇಕಿತ್ತು. ಇಂತಹ ಸನ್ನಿವೇಶದಲ್ಲಿ ಆತನ ಅಕ್ಕ ತಂಗಿಯರ ಮದುವೆಗೆ ಅಪ್ಪ ಮಾಡಿದ್ದ ಸಾಲದ  ಹೊರೆ ಆತನಿಗೆ ತಾನಾಗಿಬಿದ್ದಿತ್ತು. ಹಿರಿಯ ಅಣ್ಣಂದಿರು ಅವರ ದಾರಿ ನೋಡಿ ಜವಾಬ್ದಾರಿಗಳಿಗೆ ಏನೇನೋ ಕಾರಣ ಕೊಟ್ಟು ದೂರಾದರೆ, ಮನೆಯಲ್ಲೇ ಇದ್ದ ಈತ ಕಾಲೇಜು ಮೆಟ್ಟಲು ಹತ್ತಿ ಒಂದಷ್ಟು ವಿದ್ಯಾಭ್ಯಾಸ ಗಳಿಸಿದ್ದೇ ದೊಡ್ಡಸಾಧನೆಯಾಗಿದ್ದು ಮಾತ್ರವಲ್ಲ, ಈತ ವಿದ್ಯಾವಂತ ಎಂಬ ಕಾರಣಕ್ಕೆ  ಇದ್ದ ಸಂಸಾರದ ಭಾರ ಈತನ ತಲೆ ಮೇಲೆ ಬಿದ್ದಿತ್ತು.  ಯಾರದೋ ಸಹಾಯದಿಂದ ವೀಸಾ ಗಿಟ್ಟಿಸಿ ಗಲ್ಫ್ ಗೆ ಬಂದು ತನ್ನ ಮನೆಯನ್ನು ಸುಸ್ಥಿತಿಗೆ ತಂದು ನಿಲ್ಲಿಸಿದ್ದ. ತನ್ನ ದುಡಿಮೆಯಿಂದಲೇ ಸಾಲ ಎಲ್ಲ ಮುಗಿಸಿ ಹೊಸ ಮನೆ ಕಟ್ಟಿಕೊಂಡಿದ್ದ.  ಆ ಮನೆ ಕಟ್ಟಿಕೊಳ್ಳುವುದಕ್ಕೂ ಅಣ್ಣಂದಿರು ಎನ್ನಿಸಿಕೊಂಡವರು ಬಳಿಯಲ್ಲೇ ಇದ್ದು ಸಾಕಷ್ಟು ತೊಂದರೆ ಕೊಟ್ಟಿದ್ದರು. ಹಂಚಿ ಹೋದ ಭೂಮಿಗಾಗಿ ನಿತ್ಯ ಕಲಹ. ಅಪ್ಪನಿರುವಾಗಲೇ ಜಾಗದ ಗಡಿಯ ಬಗ್ಗೆ ನಿತ್ಯ ಕಲಹ. ಕೋರ್ಟು ಕಛೇರಿ ಅಂತ ಅಲೆದಾಡಿದ್ದು ಇದೆ.   ಕೇವಲ ಹೆತ್ತ ತಾಯಿಗೆ ಬೇಕಾಗಿ ಎಲ್ಲವನ್ನೂ ಅಷ್ಟೋ ಇಷ್ಟು ಸಹಿಸಿಕೊಂಡರೂ ತುಂಡು ಭೂಮಿಗಾಗಿ ದಾಯಾದಿ ಕಲಹ ನಿತ್ಯ ಕಥೆಯಾಗಿತ್ತು. 

ಹೀಗಿರುವಾಗ ಊರಿನಿಂದ  ಒಂದು ರಾತ್ರಿ ಮಿತ್ರನ ಕರೆ ಬರುತ್ತದೆ. ಮೊದಲ ದಿನವಷ್ಟೆ ಕರೆಮಾಡಿ ತನ್ನ ತಾಯಿಯ ಜತೆ ಮಾತನಾಡಿದ್ದ. ಅದಾಗಲೇ ಮಳೆ ಪ್ರವಾಹ ಶುರುವಾಗಿ ಟಿವಿಯಲ್ಲೆ ಸುದ್ದಿ ಬಿತ್ತರವಾಗುತ್ತಿತ್ತು. ಪ್ರತಿ ದಿನ ಗಾಬರಿಯಲ್ಲೇ ಕರೆ ಮಾಡುತ್ತಿದ್ದ. ಆಗ ಅಮ್ಮ ಧೈರ್ಯ ಹೇಳುತ್ತಿದ್ದಳು. ಅವರ ಊರಲ್ಲಿ ಪ್ರವಾಹದ ಭೀತಿ ಅಷ್ಟಾಗಿ ಇರಲಿಲ್ಲ. ಆದರೆ ಮಿತ್ರ  ಕರೆ ಮಾಡಿ ಊರಿಗೆ ಬರುವಂತೆ  ಕರೆದಿದ್ದ. ಗಲ್ಪ್ ನಿಂದ ಬರುವುದೆಂದರೆ ಅಷ್ಟು ಸುಲಭವಲ್ಲ. ಅದೇನು ಹತ್ತಿರದ ಕೋಯಿಕ್ಕೋಡು ತ್ರಿಶೂರ್ ನಿಂದ ಬರುವಂತೆ ಅಲ್ಲವಲ್ಲ. ಹೇಗೋ ಕಷ್ಟಪಟ್ಟು ಆತಂಕದಿಂದಲೇ ವಿಮಾನವೇರಿ ಸ್ವಂತ ಊರಿಗೆ ಧಾವಿಸಿ ಬರುತ್ತಾನೆ. ತನ್ನೂರಿಗೆ ಕಾಲಿಡುವುದಕ್ಕೂ ಮಳೆ ಪ್ರವಾಹ ಬಿಡದಂತಹ ಪರಿಸ್ಥಿತಿ. ತನ್ನಮ್ಮ ಸಂಸಾರದ ಬಗ್ಗೆ ಆತಂಕ. ತನ್ನೂರಿಗೆ ಹೋಗುವುದಕ್ಕೆ ಯಾವ ವಾಹನವೂ ಇಲ್ಲ. ಯಾವುದೋ ಜೀಪ್ ಹತ್ತಿ ಹೇಗೋ ಮನೆಯ ಹತ್ತಿರ ಬಂದು ನೋಡಿ ಕುಸಿದು ಬಿಡುತ್ತಾನೆ. ಎಲ್ಲಿದೆ ತನ್ನ ಮನೆ? ಬರೀ ಕೆಸರು ನೀರು ಮಣ್ಣು ಕಲ್ಲು ಬಂಡೆ. ದೊಡ್ಡ ಗುಡ್ಡವೇ ಕುಸಿದು ನೀರಿನ ಪ್ರವಾಹಕ್ಕೆ ಇಡೀ ಊರೇ ರಾತ್ರಿ ಬೆಳಗಾಗುವುದರೊಳಗೆ ಕೊಚ್ಚಿ ಹೋಗಿರುತ್ತದೆ. ತನ್ನಮ್ಮ ಬಂಧು ಬಳಗ ಎಲ್ಲಿ ಅಂತ ಯಾರನ್ನೂ ಕೇಳುವುದಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ. ಅಲ್ಲೇ ಓಡಾಡಲು ಸಾಧ್ಯವಾಗುವ ಎಲ್ಲ ಕಡೆ ನೀರು ಕೆಸರು ಮಣ್ಣು ಎನ್ನದೆ ಹುಡುಕುತ್ತಾನೆ. ದೂರದಲ್ಲಿ ಮನೆ ಇರುವ ಜಾಗ ಕಂಡರೂ ಅಲ್ಲಿಗೆ ಹೋಗಲಾಗದ ಸ್ಥಿತಿ. ಮನೆಯ ಕುರುಹೇ ಇಲ್ಲದ ಮೇಲೆ ಇನ್ನು ಮನೆಯವರನ್ನು ಎಲ್ಲಿ ಹುಡುಕುವುದು. ದೂರದಲ್ಲಿ ತನ್ನ ಮನೆಯ ಯಾವುದೋ ಭಾಗವನ್ನು ಕಾಣುತ್ತಾನೆ. ಸ್ವಲ್ಪ ದೂರದಲ್ಲಿ ತನ್ನಣ್ಣನ ಮನೆ ....ಛೇ ಮೊನ್ನೆ ಮೊನ್ನೆಯ ತನಕವೂ ಇದೇ ಭೂಮಿಗೆ ಕಚ್ಚಾಡಿದ್ದು ತನ್ನ ಭೂಮಿ ಅಂತ ಬಡಿದಾಡಿದ್ದು ನೆನಪಿಗೆ ಬರುತ್ತದೆ. ಈಗ ಜಗಳವಾಡಿದ ಅಣ್ಣನ ಮುಖವಾದರೂ ಕಾಣಬಹುದೇ ಎಂದು ಸಿಕ್ಕ ಸಿಕ್ಕಲ್ಲಿ ನೋಡುತ್ತಾನೆ. ಏನೂ ಕಾಣುವುದಿಲ್ಲ. ಇಡೀ ಉರೇ ಕೊಚ್ಚಿ ಹೋಗಿರುವಾಗ ಯಾರಲ್ಲಿ ಕೇಳುವುದು? ಎಲ್ಲವನ್ನು ಕಳೆದುಕೊಂಡ ಆತನ ಸ್ಥಿತಿ. ಯಾರು ಎಷ್ಟೇ ಮರುಗಿದರೂ ಕೊಚ್ಚಿ ಹೋದ ಬದುಕು ಮತ್ತೆ ಕಟ್ಟುವುದಕ್ಕೆ ಸಾಧ್ಯವಿಲ್ಲ.  ಯಾಕಾಗಿ ಕಟ್ಟಬೇಕು? ಯಾರಿಗಾಗಿ ಕಟ್ಟಬೇಕು?  ಎರಡು ದಿನ ಕರೆಮಾಡಿದಾಗ ಅಮ್ಮನ ಧ್ವನಿ ತರಂಗಗಳು ಇನ್ನೂ ಮಾರ್ದನಿಸಬಹುದೇ? ಪ್ರತೀ ಸಲ ಊರಿಗೆ ಬಂದಾಗ ಮೋನೇ ಅಂತ ಕರೆಯುವ ಉಮ್ಮನ ಮುಖ ಕಾಣಬಹುದೇ ಅಂತ ಹುಡುಕುತ್ತಾನೆ.  ಆದರೆ ಮಣ್ಣು ಎಲ್ಲವನ್ನೂ ನಿಗೂಢವಾಗಿ ಬಚ್ಚಿಡುತ್ತದೆ. ಮನುಷ್ಯ ಯಃಕಶ್ಚಿತ್ ಮನುಷ್ಯ. 

ಬದುಕಿರುವಾಗ ಇದು ನನ್ನ ಭೂಮಿ  ಎಂದು ಎಳೆದ ಗೆರೆ ಕಟ್ಟಿದ ಬೇಲಿ ಹುಡುಕುವುದು ಇರಲಿ, ಮನೆಯೇ ಉಳಿದಿಲ್ಲ ಎಂದ ಮೇಲೆ ಬೇಲಿ ಕಟ್ಟಿ ಕೊಂಡು ಮಾಡುವುದೇನು. ಬದುಕಿರುವಾಗ ಇದು ನನ್ನದು ಇದು ನನ್ನದು ಅಂತ ಹೇಳುತ್ತೇವೆ. ಆದರೆ ಪ್ರಕೃತಿ ಮಾತ್ರ ಇದು ನಿನ್ನದಲ್ಲ ನನ್ನದು ಅಂತ ಸಾರಿ ಸಾರಿ ಹೇಳುತ್ತದೆ. ಆದರೆ ಪ್ರಕೃತಿಯ ಭಾಷೆ ನಮಗೆ ಅರ್ಥವಾಗುವುದಿಲ್ಲ. ಅರ್ಥವಾದರೂ ನಮ್ಮ ದುರಹಂಕಾರ ಅದನ್ನು ಒಪ್ಪಿಕೊಳ್ಳೂವುದಿಲ್ಲ. ಬದುಕಿರುವಾಗ ತುಂಡು ಭೂಮಿಗಾಗಿ ಜಗಳ ಮಾಡುತ್ತೇವೆ. ತುಂಡು ಭೂಮಿಗಾಗಿ ಅಧಿಕಾರದಲ್ಲಿದ್ದವರೇ ಸ್ವಾರ್ಥದಿಂದ ಹಗರಣ ಮಾಡುತ್ತಾರೆ. ಆದರೆ ಒಂದು ಕ್ಷಣ ಸಾಕು ಪ್ರಕೃತಿ ತನ್ನ್ ಯಾಜಮಾನ್ಯವನ್ನು ತೋರಿಸುತ್ತದೆ. ಭೂಮಿಗಾಗಿ ಸಂಪತ್ತಿಗಾಗಿ ನಾವು ಹೋರಾಡುತ್ತಿದ್ದರೆ ಇಂತಹ ಕಥೆಗಳು ನಮ್ಮ ಹೋರಾಟಗಳನ್ನು ಅರ್ಥ ಶೂನ್ಯವಾಗಿಸುತ್ತವೆ. 


No comments:

Post a Comment