ಇಂದು ವೈಕುಂಠ ಏಕಾದಶಿ, ಯಾವುದೋ ವಿಳಾಸ ಹುಡುಕುತ್ತಾ ಬೆಂಗಳೂರಿನ ಒಂದು ಕಡೆಯಲ್ಲಿ ರಸ್ತೆಯಲ್ಲಿ ಸುತ್ತಡುತ್ತಿರುವಾಗ ಒಂದು ದೇವಸ್ಥಾನ ಸಿಕ್ಕಿತು. ದೇವಾಲಯದ ಸುತ್ತ ಬಹಳಷ್ಟು ಜನಸಂದಣಿ ಇತ್ತು. ಕಾಲು ದಾರಿಯುದ್ದಕ್ಕೂ ಬಹಳ ದೂರದ ತನಕವು ಸರದಿ ಸಾಲಿನಲ್ಲಿ ಜನಗಳು ನಿಂತಿದ್ದರು. ದೇವಸ್ಥಾನ ಹತ್ತಿರ ಬರುತ್ತಿದ್ದಂತೆ ಅಲ್ಲಿ ಇನ್ನೊಂದು ಫಲಕವಿತ್ತು. ಅದರಲ್ಲಿ ವಿಶೇಷ ಪ್ರವೇಶ...ನೂರು ರೂಪಾಯಿ ಅಂತ ಬರೆದಿತ್ತು. ಎಲ್ಲೋ ತಿರುಪತಿಯಂತಹ ದೇವಸ್ಥಾನಗಳಲ್ಲಿ ನೋಡಿದ್ದೆ, ಅದು ಇಲ್ಲಿಯೂ ಇರುವುದು ಕಂಡು ಅಚ್ಚರಿಯಾಯಿತು. ಅಷ್ಟು ಮಾತ್ರವಲ್ಲ, ಒಳಗೆ ಕಾಣಿಕೆ ಹಾಕುತ್ತಿದ್ದಂತೆ ಮೈಕ್ ನಲ್ಲಿ ಇಂಥವರಿಂದ ಇಷ್ಟು ಹಣ ಅಂತ ಪ್ರಕಟಣೆ ಕೇಳಿಬರುತ್ತಿತ್ತು. ಭಗವಂತನ ಬಳಿಯಲ್ಲಿ ದೇವರ ಮಹಿಮೆಗಿಂತಲೂ ಕಾಂಚಾಣದ ಮಹಿಮೆ ದೊಡ್ಡದಾಯಿತೆ ಎಂದು ಕೊಂಡೆ. ದೇವಾಲಯದ ಹಣ ಸಂಗ್ರಹದ ಬಗ್ಗೆ ಅದನ್ನು ಸಲ್ಲಿಸುವ ಬಗ್ಗೆ ಆಕ್ಷೇಪವೇನೂ ಅಲ್ಲ, ಅವುಗಳೆಲ್ಲ ಅವರವರ ಖಾಸಗೀತನ ವಿಚಾರಗಳು. ನೂರು ರೂಪಾಯಿ ಸಲ್ಲಿಸಿದರೂ ಅದನ್ನು ಮೈಕ್ ನಲ್ಲಿ ಕೊಟ್ಟವರ ಹೆಸರಿನ ಜತೆಗೆ ಕೂಗಿ ಹೇಳುತ್ತಿದ್ದರು. ಅದನ್ನು ಕೇಳುವಾಗ ಕಡಿಮೆ ಕಾಣಿಕೆ ಹಾಕಿದವನಿಗೆ ಏನು ಅನ್ನಿಸಬಹುದು? ಇಲ್ಲೂ ಧನಿಕ ಬಡವ ಎಂಬ ಅಸಮಾನತೆ ದೇವಸ್ಥಾನದಲ್ಲಿದೆ. ಅದು ಸರಿಯೋ ತಪ್ಪೋ ವಿಷಯವಲ್ಲ. ದೇವಸ್ಥಾನದ ಪ್ರವೇಶದಲ್ಲಿ ಜಾತಿಯ ಅಸಮಾನತೆ, ಎಲ್ಲರಿಗೂ ಸಮಾನವಾಗಿ ಪ್ರವೇಶ ಸಿಗಬೇಕು ಎಂಬ ಕೂಗು ಹೋರಾಟ ದಿನವೂ ಕಾಣುತ್ತೇವೆ. ಆದರೆ ಈ ಅಸಮಾನತೆಯ ಬಗ್ಗೆ ಹೋರಾಟ ಯಾಕಿಲ್ಲ ಎಂಬುದು ಯೋಚಿಸುವಂತಾಗುತ್ತದೆ. ಧರ್ಮ ಜಾತಿಯ ಬಗ್ಗೆ ಹೋರಾಡುವ ಹುಮ್ಮಸ್ಸು ಈ ಅಸಮಾನತೆಯಲ್ಲಿ ವ್ಯಕ್ತವಾಗುವುದಿಲ್ಲ. ದೇವರ ಎದುರು ಎಲ್ಲರೂ ಸಮಾನರು. ಈ ತತ್ವದ ಬಗ್ಗೆ ಚಿಂತನೆ ಹರಿಸಬೇಕು. ಹಲವು ದೇವಸ್ಥಾನಗಳಲ್ಲಿ ವಿ ಐ ಪಿ ಗಳು ಬರುವಾಗ ಜನಸಾಮಾನ್ಯ ಸರದಿಯಲ್ಲೇ ಬಾಕಿಯಾಗಿಬಿಡುತ್ತಾನೆ. ಹಾಗೆ ಬಂದು ಹೀಗೆ ಹೋಗುವ ವಿ ಐ ಪಿಗಳನ್ನು ನೋಡುವಾಗ ಕೇವಲ ನಿಟ್ಟುಸಿರಿನ ಹಕ್ಕು ಮಾತ್ರ ಜನಸಾಮಾನ್ಯನಿಗೆ ಇರುತ್ತದೆ.
ಈಗೀಗ ದೇವಸ್ಥಾನಕ್ಕೆ ಹೋಗುವ ಆಸಕ್ತಿ ನನ್ನಲ್ಲಿ ಕಡಿಮೆಯಾಗಿದೆ. ಅದಕ್ಕೆ ಕಾರಣಗಳು ವಿಶ್ಲೇಷಿಸುತ್ತಾ ಹೋದರೆ ಸಾಕಷ್ಟು ಸಿಗುತ್ತದೆ. ಹಾಗಾಗಿ ಏನಿದ್ದರೂ ಮನೆಯಲ್ಲೇ ಜಪ ತಪ ಧ್ಯಾನ ಇಷ್ಟಕ್ಕೇ ಸೀಮಿತವಾಗಿ ದೇವರನ್ನು ನಿತ್ಯ ಕಾಣುತ್ತೇನೆ. ಇಲ್ಲಿ ಸಿಗುವ ಶಾಂತಿ ಅತ್ಯಂತ ಶ್ರೇಷ್ಠ ಎಂಬುದು ನನ್ನ ಭಾವನೆ. ದೇವಸ್ಥಾನಕ್ಕೆ ಹೋದರೆ ಮನಃ ಶಾಂತಿಗಿಂತ ಮನಸ್ಸಿನ ನೆಮ್ಮದಿಯೇ ಹಲವು ಸಲ ಕಳೆದು ಹೋಗುತ್ತದೆ. ದೇವಸ್ಥಾನಕ್ಕೆ ಹೋದರೂ ಹೆಚ್ಚು ಜನಸಂದಣಿಯಿಲ್ಲದ ಬಹಳ ಶಾಂತ ಪರಿಸರದ ದೇವಸ್ಥಾನಕ್ಕೆ ಹೋಗುವುದಕ್ಕೆ ಆದ್ಯತೆ ಕೊಡುತ್ತೇನೆ. ಊಟ ಪ್ರಸಾದ ಇದಾವುದರ ಬಗ್ಗೆಯೂ ನಿರೀಕ್ಷೆ ಇರುವುದಿಲ್ಲ. ಕೇವಲ ಶಾಂತ ಸ್ವರೂಪದ ಭಕ್ತಿ ಮಾತ್ರ. ಹಲವು ಸಲ ಊರಿನ ದೇವಸ್ಥಾನದ ಭೇಟಿಯಲ್ಲಿ ಭಕ್ತಿಗಿಂತಲೂ ಭಾವನಾತ್ಮಕ ಸಂಬಂಧಗಳೇ ನನಗೆ ಪ್ರಧಾನವಾಗುತ್ತವೆ. ಬಾಲ್ಯದಿಂದಲೂ ಸಂಬಂಧವಿರಿಸಿಕೊಂಡ ಕೆಲವೇ ಕೆಲವು ದೇವಸ್ಥಾನಗಳ ದರ್ಶನದಲ್ಲಿ ಭಕ್ತಿಗಿಂತಲು ಭಾವನೆಗಳೇ ಹತ್ತಿರವಾಗುತ್ತದೆ. ಹೀಗೆ ಹಲವು ದೇವಸ್ಥಾನಗಳಿಗೆ ಹೋದರೂ ಕಾಣಿಕೆ ಹಾಕುವುದು ತೀರ ಅಪರೂಪ. ಯಾಕೆಂದರೆ ಕಾಣಿಕೆ ತಟ್ಟೆಗೆ ಹಾಕುವುದೋ ಇಲ್ಲ ಹುಂಡಿಗೆ ಹಾಕುವುದೋ ಎಂಬ ದ್ವಂದ್ವದಲ್ಲಿ ದೇವಸ್ಥಾನದಿಂದ ಹೊರಬಂದಾಗಿರುತ್ತದೆ. ನನಗೆ ಯಾವುದೇ ಕಾರ್ಯದಲ್ಲಿ ದ್ವಂದ್ವ ಕಾಡುತ್ತಿದ್ದರೆ ...ನಾನು ಆ ಕಾರ್ಯವನ್ನು ಮಾಡದೇ ಸುಮ್ಮನಿದ್ದು ಬಿಡುತ್ತೇನೆ. ನನಗೆ ದ್ವಂದ್ವದ ತುಮುಲದಿಂದ ಹೊರಬರುವ ಸುಲಭ ದಾರಿ ಇದು. ದೇವಸ್ಥಾನಕ್ಕೆ ಹೋದದ್ದಕ್ಕೆ ಏನಾದರೂ ಸೇವೆ ಮಾಡಬೇಕು. ಇಲ್ಲಿ ನಿಶ್ಚಿತ ಉದ್ದೇಶ ಏನೂ ಇರುವುದಿಲ್ಲ. ದೈವಾನುಗ್ರಹಕ್ಕೆ ಒಂದಿಷ್ಟಾದರೂ ನಿಷ್ಠೆ ಸಲ್ಲಿಕೆಯಾಗಬೇಕಲ್ಲ? ಹಾಗೆ ಸೇವಾದರದ ಪಟ್ಟಿ ನೋಡಿ ಒಂದು ವಿಶೇಷ ಸೇವೆಯ ರಶೀದಿಯನ್ನೇ ಪಡೆಯುತ್ತೇನೆ. ಈಗ ಕಟೀಲಿಗೆ ಹೋದರೆ ಹೂಪೂಜೆ, ಮಧೂರಿಗೆ ಹೋದರೆ ಉದಯಾಸ್ತಮಾನ ಹೀಗೆ ವಿಶೇಷ ಸೇವೆಗಳ ರಶೀದಿ ಪಡೆದು ಅಲ್ಲಿ ಸಂಕಲ್ಪ ಮಾಡುವಾಗ ಅರ್ಚಕರು ಕೇಳುತ್ತಾರೆ , ಏನು ಪ್ರಾರ್ಥನೆ? ಆಗ ಏನೂ ಅಂತ ಪ್ರಾರ್ಥನೆ ಮಾಡಲಿ? ದೇವರಲ್ಲಿ ಬೇಡಿಕೆ ಸಲ್ಲಿಸುವುದಕ್ಕೆ ದೊಡ್ಡ ಪಟ್ಟಿಯೇ ಇರುತ್ತದೆ. ಆ ಪಟ್ಟಿ ಬಹಳ ಕಾಲದಿಂದಲೂ ಹಾಗೆ ಇದೆ. ಅದಕ್ಕೆ ಹಲವಾರು ಸಲ ಹರಕೆ ಸಲ್ಲಿಸಿಯಾಗಿರುತ್ತದೆ. ಆದರೆ ಬಹಳಷ್ಟು ಬೇಡಿಕೆಗಳು ಈಡೇರದೆ ಹಾಗೇ ಉಳಿದುಕೊಂಡಿದೆ. ಯಾಕೋ ಆ ಬಗ್ಗೆ ದೈವಾನುಗ್ರಹದ ಕೊರತೆಯನ್ನು ಒಪ್ಪಿಕೊಂಡು ನಮ್ಮ ಕರ್ಮ ನಾವು ಮಾಡಬೇಕು ಎಂಬ ಭಾವದಲ್ಲಿ ಸಲ್ಲಿಸಿ ಪ್ರಸಾದ ಪಡೆಯುತ್ತೇನೆ. ಹರಕೆಯ ಪಟ್ಟಿ ದೊಡ್ಡದಿದ್ದರೂ ಅವೆಲ್ಲವನ್ನು ಒಂದೇ ಸಲಕ್ಕೆ ಹೇಳುವುದಕ್ಕೆ ಸಾಧ್ಯವಿಲ್ಲ. ಕೊನೆಗೆ ಯಾವುದು ನೆನಪಾಗುತ್ತದೆ ಅದನ್ನು ಸಲ್ಲಿಸಿಬಿಡುತ್ತೇನೆ. ಈಗೀಗ ಪಟ್ಟಿಯ ಹಲವು ಬೇಡಿಕೆಗಳು ಮರೆತು ಹೋಗಿವೆ. ದೈವಾನುಗ್ರಹ ಇದ್ದರೆ ದೇವರು ಅದನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಹಾಗೆ ಉಳಿದುಕೊಂಡಿದೆ. ಈಗ ಹರಕೆ ಬೇಡಿಕೆಯ ಬಗ್ಗೆ ಚಿಂತಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ. ಪ್ರಾಮಾಣಿಕವಾದ ಭಕ್ತಿಯಷ್ಟೆ ಆಧಾರವಾಗುತ್ತದೆ. ದಿನವು ಧ್ಯಾನದಲ್ಲಿ ವೈಕುಂಠ ದರ್ಶನವಾಗುವಾಗ....ಸಿದ್ದ ಪಡಿಸಿದ ಅನ್ನ ಆಹಾರ ಮನೆಗೆ ಬಂದಂತೆ ಕೇವಲ ಭಕ್ತಿಯ ವಿನಿಯೋಗದಿಂದ ದೇವರು ಸದಾ ಮನಸ್ಸಿಗೆ ಹತ್ತಿರವಾಗಿರುತ್ತಾನೆ. ಇದಕ್ಕಿಂತ ಹೆಚ್ಚಿನ ಯಾವ ಬೇಡಿಕೆಯೂ ನಿರೀಕ್ಷೆಯು ಇರುವುದಿಲ್ಲ.
No comments:
Post a Comment