ಆಡುಗೆ ಎಂಬುದನ್ನು ಕಲೆ ಎನ್ನುವುದಕ್ಕೂ ಬರುತ್ತದೆ, ಅನಿವಾರ್ಯ ಕೆಲಸ ಎನ್ನುವುದಕ್ಕು ಸಾಧ್ಯವಿದೆ. ಅದನ್ನು ಕಲೆ ಎಂದು ಪರಿಗಣಿಸಿದರೆ ಉಳಿದ ಕಲೆಗಳಂತೆ ಅದು ಪ್ರಚಾರಕ್ಕೆ ಸಿಗುವ ಕಲೆಯಲ್ಲ. ಅಡುಗೆ ಮಾಡುವುದು ಎಲ್ಲರಿಗೂ ಇಷ್ಟವಿರುವುದಿಲ್ಲ. ಆದರೆ ಅದನ್ನು ಇಷ್ಟಪಡದವರು ಬದುಕುವುದಕ್ಕೆ ಅರ್ಹತೆಯನ್ನು ಕಳೆದುಕೊಂಡು ಬಿಡುತ್ತಾರೆ. ಕೆಲವರಿಗೆ ಮಾಡುವುದು ಇಷ್ಟವಿರಬಹುದು. ಕೆಲವರಿಗೆ ತಿನ್ನುವುದು ಇಷ್ಟವಿರಬಹುದು. ನಮ್ಮಮ್ಮನ ಹಾಗಿದ್ದವರಿಗೆ ಮಾಡುವುದೇ ಇಷ್ಟ ಹೊರತು ತಿನ್ನುವುದಲ್ಲ. ಎಲ್ಲವನ್ನು ಮಾಡುತ್ತಾರೆ ಅವರು ಮಾತ್ರ ಒಂದಷ್ಟು ಗಂಜಿ ಉಂಡು ತೃಪ್ತಿ ಪಡುತ್ತಾರೆ. ಪಾತ್ರೆಯ ತಳದಲ್ಲಿರುವುದನ್ನು ಕೆರೆಸಿ ತಿನ್ನುವುದರಲ್ಲೇ ತೃಪ್ತಿ. ಇಂತಹವರು ಎಲ್ಲಾ ಮನೆಯಲ್ಲೂ ಇರುತ್ತಾರೆ. ಇನ್ನು ಬಿಸಿ ಮಾಡಿ ಇಡಬೇಕಲ್ಲಾ ಎಂದು ಪಾತ್ರೆಯಲ್ಲಿ ಉಳಿದದ್ದನ್ನು ತಟ್ಟೆಗೆ ಹಾಕಿ ಬೇಡದೇ ಇದ್ದರೂ ತಿಂದು ಬಿಡುತ್ತಾರೆ. ಅಡುಗೆ ಮನೆಯ ಶಾಸ್ತ್ರಗಳು ರಹಸ್ಯಗಳು ಹಲವು ಸಲ ಬಹಿರಂಗವಾಗುವುದೇ ಇಲ್ಲ. ಅದೊಂದು ವಿಶ್ವವಿದ್ಯಾನಿಲಯ ಇದ್ದಂತೆ. ಹಸಿವಾದರೂ ಅಡುಗೆ ಮನೆ, ರೋಗ ಬಂದರೂ ಅಡುಗೇ ಮನೆ.
ನನಗೂ ಅಡುಗೆ ಒಂದು ಹವ್ಯಾಸ. ಹಲವರು ಮೂಗು ಮುರಿಯುತ್ತಾರೆ ಇದು ನನ್ನ ಅನುಭವ. ಗಂಡಸಾಗಿ ಅಡುಗೆ ಮಾಡುವುದಾ? ಅದು ಯಾವ ನಿಯಮವೋ ಗೊತ್ತಿಲ್ಲ. ಗಂಡು ಅಡುಗೆ ಮಾಡುವುದು ಜಗತ್ತಿನ ಅತ್ಯಾಶ್ಚರ್ಯದ ವಸ್ತುವಾಗಿ ಬಿಡುತ್ತದೆ. ನನ್ನ ಪ್ರಕಾರ ಕೊನೆ ಪಕ್ಷ ಅವರವರು ತಿನ್ನುವುದನ್ನಾದರೂ ರುಚಿಕಟ್ಟಾಗಿ ಮಾಡಿ ತಿನ್ನುವ ರೂಢಿ ಇರಬೇಕು. ತನ್ನ ಹೊಟ್ಟೆಗೆ ತಿನ್ನುವುದಕ್ಕೂ ಯಾರನ್ನು ಅವಲಂಬಿಸಿರಬಾರದು. ಅದು ಇಂದಿನ ಜೀವನ ಶೈಲಿಯಲ್ಲಿಅತ್ಯಂತ ಅರೋಗ್ಯದ ಲಕ್ಷಣ. ಹಲವರು ತಮಗಾಗಿ ಮಾಡಿ ತಿನ್ನುವುದಿದ್ದರೂ ಅದು ಕಾಟಾಚಾರಕ್ಕೆ , ಏನೋ ಒಂದು ಬೇಯಿಸಿ ತಿಂದರಾಯಿತು ಎಂಬ ಭಾವನೆ.
ಹೆಣ್ಣು ನೋಡುವಾಗ ಕೇಳುವುದುಂಟು, ಅಡುಗೆ ಬರುತ್ತದಾ? ನಿಜಕ್ಕೂ ಹಾಸ್ಯಾಸ್ಪದ ವಿಡಂಬನೆಯ ಪ್ರಶ್ನೆಇದು. ಹಸು ಹಾಲು ಕೊಡುತ್ತದಾ ಎಂದು ಪ್ರಶ್ನೆ ಮಾಡಿದ ಹಾಗೆ. ಹಾಲು ಕೊಡದೇ ಇದ್ದರೆ ಅದು ಹಸು ಹೇಗಾಗುತ್ತದೆ? ತಾಯಿ ಮೊಲೆ ಉಣ್ಣಿಸದೇ ಇದ್ದರೆ ಆಕೆ ತಾಯಿ ಹೇಗಾದಾಳು? ನದಿಯಲ್ಲಿ ನೀರು ಹರಿಯದೆ ಇದ್ದರೆ ಅದು ನದಿಯಾಗುವುದಿಲ್ಲ ಬಯಲಾಗುತ್ತದೆ. ಹಾಗೆ ಅಡುಗೆ ಬರುತ್ತದಾ ಎಂದು ಕೇಳಿದಾಗ ಈಗಿನ ಹೆಣ್ಣು ಮಕ್ಕಳು ಹೇಳುವುದುಂಟು, ಅದು ಬರುತ್ತದೆ...ಜೋರಾಗಿಯೇ ಹೇಳಿಬಿಡುತ್ತಾರೆ. ಬೇಕಿದ್ದರೆ ಅದು ಉದ್ದ ಪಟ್ಟಿ, ಮಸಾಲೆ ದೋಸೆ, ಉಪ್ಪಿಟ್ಟು ಅವಲಕ್ಕಿ, ಇನ್ನು ಸಿಹಿತಿಂಡಿ, ಮಾಂಸಾಹಾರ, ಉತ್ತರ ಭಾರತ ದಕ್ಷಿಣ ಭಾರತದ ತಿನಿಸುಗಳು.....ಪಟ್ಟಿಯಲ್ಲಿರುತ್ತವೆ. ಅದನ್ನೂ ನಾಚಿಕೆಯಿಲ್ಲದೆ ದೊಡ್ಡದಾಗಿ ಹೇಳಿಬಿಡುತ್ತಾರೆ. ಯಾಕೆಂದರೆ ಗಂಡಿಗಿಂತಲೂ ಹೆಚ್ಚು ಲೋಕವನ್ನು ಕಂಡಿರುತ್ತಾರೆ. ಸರಿ ಮದುವೆ ಆದ ಮೇಲೆ ಮಸಾಲೆ ದೋಸೆ ಬೇಕು ಎಂದು ಹೇಳಿದರೆ, ಮೊಬೈಲ್ ತೆಗೆದು ಜೊಮೋಟೊ ಸ್ವಿಗ್ಗಿ ಯಲ್ಲಿ ಆರ್ಡರ್ ಮಾಡುತ್ತಾರೆ. ಹೌದು ಮಸಾಲೆ ದೋಸೆ ಬರುತ್ತದೆ, ಮನೆ ಬಾಗಿಲಿಗೇ ಬರುತ್ತದೆ !
ಅಡುಗೆ ಎಂಬುದು ಮನ್ನಣೆ ಅಂಗೀಕಾರವಿಲ್ಲದ ಇಲ್ಲದ ಒಂದು ಕಲೆ. ಬಂದ ನೆಂಟರು ತಿಂದು ತೇಗಿದರೂ ಅದನ್ನು ಯಾರು ಮಾಡಿದ್ದಾರೆ ಎಂಬುದೆ ಹಲವುಸಲ ಹೊರಗೆ ಬರುವುದಿಲ್ಲ. ಯಾರೋ ಮಾಡಿರುತ್ತಾರೆ ಇವರು ಪಟ್ಟಾಗಿ ತಿಂದು ಬಿಡುತ್ತಾರೆ. ಮಲಯಾಳಂ ನಲ್ಲಿ ಒಂದು ಸಿನಿಮಾ ಬಂದಿತ್ತು. ಸಾಲ್ಟ್ ಎಂಡ್ ಪೆಪ್ಪರ್, ಉಪ್ಪು ಮತ್ತು ಕರಿಮೆಣಸು. ಅಡುಗೆಯೇ ಈ ಸಿನಿಮಾದ ಮುಖ್ಯ ವಸ್ತು. ಹೆಣ್ಣು ನೋಡುವುದಕ್ಕೆ ಹೋದವನು ಅಲ್ಲಿ ಅಡುಗೆ ಮಾಡುತ್ತಿದ್ದ ಅಡುಗೆ ಭಟ್ಟನನ್ನು ತನ್ನ ಜತೆ ಕರೆದುಕೊಂಡು ಬರುತ್ತಾನೆ. ಹಾಗಾಗಿ ಹೆಣ್ಣಿನ ಸ್ಥಾನ ಏನು? ಅವಳ ಮಹತ್ವ ಏನು ಎಂದು ಪರೋಕ್ಷವಾಗಿ ಹೇಳಿದಂತೆ. ಹೆಣ್ಣು ಅಡುಗೆ ಮನೆಗೆ ಸೀಮಿತವಲ್ಲದೇ ಇದ್ದರೂ ಆಕೆ ಬದುಕಿನಲ್ಲಿ ಅನ್ನಪೂರ್ಣೆಯಾಗುವ ಆವಶ್ಯಕತೆ ಒಂದು ಅನಿವಾರ್ಯತೆಯಾಗಿದೆ.
ಎಲ್ಲವನ್ನು ಹೆಣ್ಣಿನ ತಲೆ ಮೇಲೆ ಹಾಕುವುದಕ್ಕಿಂತಲೂ ಅವರವರ ಹೊಟ್ಟೆ ತುಂಬಿಸುವುದನ್ನು ಹೆಣ್ಣು ಗಂಡು ಭೇದವಿಲ್ಲದೇ ಅರಿಯಬೇಕು. ಅಡುಗೆ ನನಗೆ ಬಾಲ್ಯದಿಂದ ಹಲವು ಕಾರಣದಿಂದ ಅಂಟಿಕೊಂಡ ಕೆಲಸ. ಮೊದಲು ಯಾವುದೋ ಅನಿವಾರ್ಯತೆಯಿಂದ ಕೈ ಸುಟ್ಟುಕೊಂಡು ಮಾಡಿದರೆ ವೆತ್ಯಾಸ ಇಷ್ಟೇ, ಈಗ ಅದೊಂದು ಹವ್ಯಾಸವಾಗಿ ಬೆಳೆದು ಬಂದಿದೆ. ಯಾರಿಗೋ ಬೇಕಾಗಿ ಮಾಡುವುದಲ್ಲ. ಅದು ಸ್ವಯಂ ತೃಪ್ತಿಗೆ ಮಾಡುವಂತಹ ಕಾರ್ಯ.
ಅಡುಗೆ ಅದು ಯಾವುದೇ ಆಗಿರಲಿ ಒತ್ತಡ ರಹಿತವಾಗಿ ಮಾಡಬೇಕು ಇದು ನನ್ನ ಪ್ರತಿಪಾದನೆ. ಅಡುಗೆ ಯಾವುದೇ ಆಗಿರಲಿ ವೇಗವಾಗಿ ಮಾಡಿಬಿಡುವ ಧಾವಂತ ನನ್ನದು. ಬೆಳಗ್ಗೆ ಎಂಟೂ ವರೆಗೆ ಉಪಹಾರವಾದರೆ, ಎಂಟುಗಂಟೆಗೆ ಹೊರಡುತ್ತೇನೆ. ಮೊದಲೇ ಮನಸ್ಸಿನಲ್ಲಿ ಇದು ಹೀಗೆ ಹೀಗೆ ಎಂಬ ಯೋಜನೆ ಸಿದ್ದವಾಗುತ್ತದೆ. ಉದಾಹರಣೆಗೆ, ಉಪ್ಪಿಟ್ಟು ಮಾಡುವುದಿದ್ದರೆ ಮೊದಲು ಬಾಣಲೆ ಬಿಸಿಗಿಟ್ಟು ಬಿಡುತ್ತೇನೆ. ಅದರಲ್ಲಿ ರವೆ ಹುರಿಯುತ್ತಿದ್ದರೆ, ಅದನ್ನು ಹುರಿಯುವ ಜತೆಯಲ್ಲೇ ಅದಕ್ಕೆ ಹಾಕಬೇಕಾದ ನೀರು ಬಿಸಿಯಾಗಿರುತ್ತದೆ, ಬೇಕಾದ ಈರುಳ್ಳಿ ಮೆಣಸು ತರಕಾರಿ ಹೆಚ್ಚಿಯಾಗಿರುತ್ತದೆ. ಇದರಲ್ಲೂ ಯಾವುದು ಮೊದಲು ಹೆಚ್ಚಬೇಕು ಯಾವುದು ನಂತರ ಹೆಚ್ಚಿಕೊಳ್ಳಬೇಕು ಎಂಬ ಯೋಜನೆ ಮೊದಲೇ ಇರಬೇಕು. ಇಷ್ಟಾದರೆ ಮತ್ತೆ ಐದೇ ನಿಮಿಷ ಉಪ್ಪಿಟ್ಟು ಸಿದ್ದ. ಹೀಗೆ ಪ್ರತಿಯೊಂದು ಕೆಲಸಕ್ಕೂ ಒಂದು ಯೋಜನೆ ಇರುತ್ತದೆ. ಹಾಗಾಗಿ ಒತ್ತಡವಿಲ್ಲದೇ ಅಡುಗೆ ಸಿದ್ಧವಾಗುತ್ತದೆ. ಮಧ್ಯಾಹ್ನ ಹನ್ನೆರಡು ವರೆಗೆ ಹಸಿವಾಗುವುದಕ್ಕೆ ಆರಂಭವಾಗುತ್ತದೆ, ನಂತರ ಇಂತಹದ್ದು ತಿನ್ನಬೇಕು ಎಂಬ ಬಯಕೆ ಹುಟ್ಟುತ್ತದೆ. ಸರಿ ಒಂದು ಘಂಟೆಗೆ ಹೊರಡುತ್ತೇನೆ. ಒಂದು ವರೆಗೆ ಅದಷ್ಟು ಸಿದ್ದವಾಗಿ ಊಟಕ್ಕೆ ಕುಳಿತು ಬಿಡುತ್ತೇನೆ. ಅದು ಅನ್ನ ಸಾಂಬಾರ್ ಆಗಿರಬಹುದು, ಪಲಾವ್ ಬಿಸಿ ಬೇಳೆ ಬಾತ್ ಯಾವುದೇ ಆಗಿರಲಿ...ಅದಕ್ಕೊಂದು ಯೋಜನೆ ಮೊದಲೇ ಸಿದ್ಧವಾಗುತ್ತದೆ. ಅಡುಗೆ ಕೆಲಸದಲ್ಲಿ ಯಾವುದು ಮೊದಲು ಮಾಡಬೇಕು ಅದನ್ನು ಮೊದಲು ಯೋಚನೆ ಮಾಡಬೇಕು. ಆಗ ಒತ್ತಡ ರಹಿತವಾಗಿ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಯೋಜನಾ ಬದ್ಧವಾಗಿ ಅಡುಗೆ ಮಾಡುವುದಿದ್ದರೆ ಅಲ್ಲಿ ಒತ್ತಡ ಇರುವುದೇ ಇಲ್ಲ.
ಮಾಡಿದ ಅಡುಗೆ ರುಚಿಯಾಗಿರಬೇಕು, ಎಲ್ಲರಿಂದ ಮೆಚ್ಚುಗೆ ಪಡೆಯಬೇಕು, ಈ ಮನೋಭಾವ ಅಡುಗೆ ಮಾಡುವವರಲ್ಲಿ ಸಹಜವಾಗಿರುತ್ತದೆ. ಇನ್ನು ಕೆಲವರಲ್ಲಿ ತಮ್ಮ ಮನೆಯ ಅದರಲ್ಲೂ ತಾವು ಮಾಡಿದ ಅಡುಗೆ ಮಾತ್ರ ಚೆನ್ನಾಗಿ ಇರುತ್ತದೆ ಎಂಬ ಅಹಂಭಾವವೂ ಇರುತ್ತದೆ. ಹಲವು ಕಡೆಯಲ್ಲಿ ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿ ಮೊದಲು ಅವರು ಕೇಳುವುದು ಯಾವ ಅಡುಗೆ ಇಷ್ಟ. ಯಾವ ತಿಂಡಿ ಇಷ್ಟ. ಬಂದ ಅತಿಥಿಯ ಇಷ್ಟಾನಿಷ್ಟಗಳನ್ನು ನೋಡಿ ಅದರಂತೆ ಮಾಡಿ ಅತಿಥಿಯನ್ನು ತೃಪ್ತಿ ಪಡಿಸುವುದು ಮಾತ್ರವಲ್ಲ ಅತಿಥಿಯಿಂದ ಹೊಗಳಿಕೆ ಪಡೆಯುವ ಬಯಕೆ ಇರುತ್ತದೆ. ಬಂದ ಅತಿಥಿ ಹಲವು ಸಲ ದಾಕ್ಷಿಣ್ಯಕ್ಕೆ ಒಳ್ಳೆದಾಗಿದೆ ಎಂದರೂ ಅದನ್ನು ಹೆಗ್ಗಳಿಕೆಯಾಗಿ ಪರಿಗಣಿಸುವವರೂ ಇರುತ್ತಾರೆ. ಅದರೆ ನಾನು ನನಗೆ ಎನು ಇಷ್ಟ ಇದೆಯೋ ಅದನ್ನೇ ರುಚಿಯಾಗಿ ಮಾಡುವುದನ್ನು ಬಯಸುತ್ತೇನೆ. ಬಂದವರಿಗೆ ಇಷ್ಟವಾದ ವಿಭವಗಳು ಹಲವಾರು ಮಾಡುವುದಿದ್ದರೂ ಅದರಲ್ಲಿ ಯಾವುದಾದರೂ ಒಂದು ತಿಂಡಿ ನನ್ನ ಇಷ್ಟದ್ದಾಗಿರುತ್ತದೆ. ಮತ್ತು ಅದನ್ನು ಬಂದವರು ರುಚಿಯಾಗಿದೆ ಎಂದು ಹೇಳಿ ಇಷ್ಟ ಪಟ್ಟರೆ ಬಹಳ ಸಂತಸವಾಗುತ್ತದೆ. ಅತಿಥಿಯರಿಗೆ ಅವರ ಇಷ್ಟವಾದ ತಿನಿಸು ಮಾಡಿ ಹಾಕಿ ಶಹಭಾಸ್ ಗಿರಿಯನ್ನು ಪಡೆಯುವುದು ದೊಡ್ಡದಲ್ಲ, ತಮಗಿಷ್ಟವಾದದ್ದನ್ನು ಮಾಡಿ ಹಾಕಿ ಅದು ಅವರಿಗೆ ಇಷ್ಟವಾಗುವಂತೆ ಮಾಡುವುದರಲ್ಲಿ ಅಡುಗೆಯವನ ಯಶಸ್ಸು ಇರುತ್ತದೆ. ಅದೊಂದು ದೊಡ್ಡ ಅಂಗೀಕಾರ. ಎಲ್ಲರಿಗೂ ಇಷ್ಟವಾಗಿರುವುದನ್ನು ಮಾಡಿ ಮೆಚ್ಚುಗೆಯನ್ನು ಗಳಿಸುವುದು ದೊಡ್ಡದಲ್ಲ. ತಮಗೆ ಬೇಕಾದದ್ದನ್ನು ಮಾಡಿ ಮೆಚ್ಚುಗೆ ಗಳಿಸುವುದು ನಿಜವಾದ ಅಡುಗೆಯ ಚಾಕಚಕ್ಯತೆಯಾಗಿರುತ್ತದೆ.
ಅಡುಗೆ ಮಾಡುವುದಿದ್ದರು....ಇಂದು ತಿಂದ ಅಡುಗೆ ಕೊನೆ ಪಕ್ಷ ಒಂದು ವಾರದವರೆಗೆ ಪುನಃ ತಯಾರಿಸುವುದಿಲ್ಲ. ಪದೇ ಪದೇ ಮಾಡಿದ್ದನ್ನೆ ಮಾಡುವುದು ಮತ್ತು ಅದನ್ನೇ ತಿನ್ನುವುದು ನನಗೆ ಇಷ್ಟವಿರುವುದಿಲ್ಲ. ದಿನವೂ ಒಂದು ವೈಶಿಷ್ಟ್ಯತೆ ಇರಬೇಕು. ಅದು ಹಸಿವನ್ನು ಕೆರಳಿಸುತ್ತದೆ. ಊಟ ತಿಂಡಿ ತಿನ್ನುವುದರಲ್ಲಿ ಅದು ಆಸಕ್ತಿಯನ್ನು ಉತ್ಸಾಹವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆ ಎಂಬುದು ನನಗೆಂದೂ ಸಮಸ್ಯೆಯಾದದ್ದಿಲ್ಲ. ಇಂದು ಏನು ಮಾಡುವುದಪ್ಪ...? ಎಂದು ನನಗೆ ಬೇಸರವಾಗುವುದಿಲ್ಲ. ಪ್ರತಿ ದಿನವೂ ಒಂದಾದರೂ ಹೊಸತನ್ನು ಮಾಡುವ ಸೃಜನ ಶೀಲತೆ ನನ್ನಲ್ಲಿದೆ. ಅದೇ ನನಗೆ ಅಡುಗೆಯಲ್ಲಿ ಉತ್ಸಾಹವನ್ನು ತುಂಬಿಸುತ್ತದೆ. ಅಡುಗೆ ಅದೊಂದು ಕೆಲಸ ಎಂದು ತಿಳಿಯಬಾರದು. ಅದೊಂದು ಹಸಿವಿನಂತೆ ಸಹಜ ಕ್ರಿಯೆ. ಒಂದು ರೀತಿಯಲ್ಲಿ ಪ್ರಕೃತಿಯ ಧರ್ಮ.
"ದ ಗ್ರೇಟ್ ಇಂಡಿಯನ್ ಕಿಚನ್" ಎಂಬ ಮಲಯಾಳಂ ಸಿನಿಮಾ ...ಅಡುಗೆ ಕೋಣೆಯ ಕೆಲಸವನ್ನು ಸವಿಸ್ತಾರವಾಗಿ ತೋರಿಸುತ್ತದೆ. ಅಡುಗೆ ಯಾರೂ ಮಾಡಬಹುದು. ಆದರೆ ಅಡುಗೆ ಕೋಣೆಯನ್ನು ಅಚ್ಚುಕಟ್ಟಾಗಿ ಇರಿಸುವುದು ಅತೀ ಮುಖ್ಯ. ಅಡುಗೆ ಮಾಡಿ ತಿಂಡಿ ತಿನಸು ತಯಾರಿಯಾದಂತೆ ಜತೆಗೆ ಕಸವೂ ಸೃಷ್ಟಿಯಾಗುತ್ತದೆ. ಅಡುಗೆ ಕೋಣೆಯಲ್ಲಿ ಅದು ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದರೆ ಅದು ಮನಸ್ಸಿಗೆ ಬಹಳ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಕೆಲಸದ ಶ್ರಮವನ್ನು ಆಯಾಸವನ್ನು ಹೆಚ್ಚಿಸುತ್ತದೆ. ನಾನು ಅಡುಗೆ ಮಾಡುವುದಿದ್ದರೆ ಇದರ ಬಗ್ಗೆ ಮೊದಲು ಗಮನ ಹರಿಸುತ್ತೇನೆ. ಯಾವುದು ಎಲ್ಲಿಡಬೇಕೋ ಕೆಲಸವಾದ ಕೂಡಲೇ ಅಲ್ಲಿಟ್ಟು ಬಿಡುತ್ತೇನೆ. ಚಾಕೂ ಪಾತ್ರೆ ಇತ್ಯಾದಿ. ತರಕಾರಿ ಹೆಚ್ಚಿದ ಕೂಡಲೆ ಅದರ ಸಿಪ್ಪೆ ಮತ್ತೀತರ ಎಸೆಯುವುದನ್ನು ಆಗಲೇ ಕಸದ ಬುಟ್ಟಿಗೆ ಎಸೆದು ಬಿಡುತ್ತೇನೆ. ಅಡುಗೆ ಆಗುವ ತನಕ ಅದನ್ನು ಉಳಿಸುವುದಿಲ್ಲ. ಆಡುಗೆ ಸಿದ್ಧವಾದ ಕೂಡಲೇ ಅಡುಗೆ ಮನೆಯೂ ಜತೆಯಲ್ಲೇ ಸ್ವಚ್ಛವಾಗಿ ಬಿಡಬೇಕು. ನನ್ನ ಪ್ರಯತ್ನ ಅದರಲ್ಲಿರುತ್ತದೆ. ಹಲವು ಸಲ ನಾನು ಏನು ಮಾಡಿದ್ದೇನೆ ಎಂದು ತಿಳಿಯಬೇಕಾದರೆ ಪಾತ್ರೆಯ ಮುಚ್ಚಳ ತೆಗೆದು ನೋಡಬೇಕು. ಆ ರೀತಿಯಲ್ಲಿ ಸ್ವಚ್ಛವಾಗಿರುತ್ತದೆ. ಸ್ವಚ್ಛವಾದ ಅಚ್ಚುಕಟ್ಟಾದ ಅಡುಗೆ ಮನೆ ಉತ್ತಮ ಅಡುಗೆಯ ಸಂಕೇತ.
ಶಿಸ್ತುಬದ್ಧವಾಗಿ ಮಾಡಿದಾಗ ಅಡುಗೆ ಒಂದು ಕಲೆಯಾಗುತ್ತದೆ. ಅದೆಂದೂ ಪರಿಶ್ರಮದ ಕೆಲಸವಾಗುವುದಿಲ್ಲ. ಶಿಲ್ಪಿ ಶಿಲೆಯೆನ್ನು ಕೆತ್ತಿ ಪರಿಪೂರ್ಣ ಗೊಳಿಸಿ ಒಂದು ನಿಟ್ಟುಸಿರುಬಿಟ್ಟಂತೆ, ಅಡುಗೆ ಮಾಡಿ ಮುಗಿಸಿದಾಗ ಸಿಗುವ ತೃಪ್ತಿ ಯಾವ ಕಲಾವಿದನಿಗೂ ಕಡಿಮೆ ಇಲ್ಲ. ಅದೊಂದು ವಿಶಿಷ್ಟ ಅನುಭವ.
No comments:
Post a Comment