Monday, December 25, 2023

ಸ್ವಾಮಿಯೇ ಶರಣಂ

    ಚೆನ್ನಪ್ಪ (ಇದು ಕೇವಲ ಸಾಂಕೇತಿಕ ಹೆಸರು)  ಬೀದಿಯ ತುದಿಯಲ್ಲಿರುವ ಮನೆಯಲ್ಲಿ ವಾಸ. ಸಾಯಂಕಾಲ ಸೂರ್ಯಾಸ್ತವಾಗುವಾಗಲೇ ಈತ ರಂಗೇರಿಸಿಕೊಳ್ಳುತ್ತಾನೆ. ಹಾಗೆ ನೋಡಿದರೆ ಹಲವು ಸಲ ಮುಂಜಾನೆ ಐದು ಘಂಟೆಗೆ  ವೈನ್ ಶಾಪ್ ಎದುರಲ್ಲಿ ನಿಂತಿರುತ್ತಿದ್ದ. ಇವನಂತೆ ಹಲವರು ಬೆಳಗ್ಗಿನ ಜಾವ ತಮ್ಮ ದೌರ್ಬಲ್ಯಕ್ಕೆ ಪರಿಹಾರವನ್ನು ಅದೇ ಹೊತ್ತಿನಲ್ಲಿ ಅಲ್ಲಿಯೇ ಕಾಣುತ್ತಾರೆ. ಚೆನ್ನಪ್ಪ ಸಾಯಂಕಾಲ ಮನೆಯ ಎದುರು ಮೆಟ್ಟಲಲ್ಲಿ ಕುಳಿತು  ಗೊಣಗುತ್ತಾ ಹಲವು ಸಲ ಕಿರುಚಾಡುತ್ತಾ ಇರುತ್ತಾನೆ. ರಸ್ತೆಯಲ್ಲಿ ನಡೆದಾಡುವವರು ಸುಮ್ಮನೇ ಈತನನ್ನು ಒಂದು ಸಲ ನೋಡಿದರೆ ಸಾಕು ಕೆಟ್ಟ ಬೈಗುಳಗಳನ್ನು ಕೇಳಬೇಕಾಗುತ್ತದೆ. ಹಾಗೆ ನೋಡಿದವರು ಅಲ್ಲಿ ಹೋಗಿ ತಾಸು ಕಳೆದರೂ ಈತನ ಬೈಗುಳ ನಿಂತಿರುವುದಿಲ್ಲ. ಇಂತಹ ಚೆನ್ನಪ್ಪ ಎರಡು ದಿನದಿಂದ  ಮನೆಯ ಮುಂದೆ ಕಾಣುತ್ತಿಲ್ಲ. ಮೊದಲ ದಿನ ಎಲ್ಲಾದರೂ ಕುಡಿದು ಬಿದ್ದಿರಬಹುದು ಎಂದುಕೊಂಡೆ. ಆದರೆ ಎರಡು ದಿನ ನಂತರ ಬೆಲಗ್ಗೆ ನೋಡುತ್ತೇನೆ  ಮೈಮೇಲೆ ಭಸ್ಮ ಬಳಿದುಕೊಂಡು ಕಪ್ಪು ವಸ್ತ್ರ ಧರಿಸಿ ಕಂಡುಬರುತ್ತಾನೆ. ದಿನದ ಬಹುಪಾಲು ಸಮಯ ನಶೆಯಲ್ಲೇ ಇರುವ ಚೆನ್ನಪ್ಪ ಈಗ ಮಾಲಾಧಾರಿಯಾಗಿ ಗುಮ್ಮನೇ ಕುಳಿತಿದ್ದ. ಎರಡು ದಿನ ಅದಾಗಲೇ ಮದ್ಯವಿಲ್ಲದೆ ಕಳೆದಿದ್ದ. ಅಯ್ಯಪ್ಪನ ಮಹಿಮೆ ಈ ಮಟ್ಟಿಗಂತೂ ಅಪಾರ ಎಂದು ಒಪ್ಪಿಕೊಳ್ಳಲೇ ಬೇಕು. 

ಚಿತ್ರ ಕೃಪೆ ಅಂತರ್ಜಾಲದಿಂದ

ಚೆನ್ನಪ್ಪನದ್ದು ಪುಟ್ಟ ಸಂಸಾರ. ಗೂಡಿನಂತೆ ಇರುವ ಮನೆಯಲ್ಲಿ ವಾಸ. ಹೈಸ್ಕೂಲಿಗೆ ಹೋಗುವ ಹೆಣ್ಣು ಮಗಳೊಬ್ಬಳಿದ್ದಾಳೆ. ಯಾವುದೋ ಕೆಲಸಕ್ಕೆ ನಮ್ಮಲ್ಲಿಗೆ ಬಂದವಳಲ್ಲಿ ಒಂದು ದಿನ ಆಕೆಯ ಅಪ್ಪನ ಬಗ್ಗೆ ಕೇಳಿದ್ದೆ,  ಕುಡಿಯದೇ ಇದ್ದರೆ ಅಪ್ಪ ಒಳ್ಳೆಯವರು ಅಂತ ಆಕೆಯೇ ಹೇಳಿದ್ದಳು. ಏನು ಮಾಡುವ ಕುಡಿತ ಒಂದು ಇಲ್ಲದೇ ಇದ್ದರೆ ಅಪ್ಪ ಚಿನ್ನದಂತಹ ಮನುಷ್ಯ.  ಕುಡಿತಕ್ಕಾಗಿ ಒಳ್ಳೆಯತನವನ್ನು ಬಲಿಕೊಡುವ ಚೆನ್ನಪ್ಪನಂತಹ ವ್ಯಕ್ತಿಗಳು ನಮ್ಮ ಸುತ್ತ ಮುತ್ತ ಬಹಳಷ್ಟು ಮಂದಿ ಇದ್ದಾರೆ. ಅಂತಹ ಚೆನ್ನಪ್ಪ ಈಗ ಹೊಸ ಅವತಾರದಲ್ಲಿ ಕಂಡಿದ್ದಾನೆ. ಕಳೆದೆರಡು ದಿನ ಆತನ ಮನೆಯಲ್ಲಿ ಒಂದಷ್ಟು ಶಾಂತಿ ನೆಲಸಿದೆ. ದೈವ ಭಕ್ತಿ ಯಾವ ಪ್ರಚೋದನೆಯನ್ನು ಒದಗಿಸಿಬಿಡುತ್ತದೆ ಎಂದು ಅಚ್ಚರಿಯಾಗುತ್ತದೆ. 

ಈಗಿಗ ನಮ್ಮ ಸುತ್ತ ಮುತ್ತ ಬೆಳಗ್ಗೆ ಸಾಯಂಕಾಲ ಶರಣಮಯ್ಯಪ್ಪ ಎನ್ನುತ್ತಾ ಶರಣು ಕರೆಯುವುದು ಸರ್ವೇ ಸಾಮಾನ್ಯ. ಸಾಯಂಕಾಲ ಮೈಕ್ ಕಟ್ಟಿ ದೊಡ್ಡದಾಗಿ ಭಜನೆ ಮಾಡುವುದನ್ನು ಕಾಣಬಹುದು. ವಿಪರ್ಯಾಸ ಎಂದರೆ ಮಲೆಗೆ ಹೋಗಿ ಬಂದು ಮಾಲೆ ಕಳಚಿದ ಒಡನೆ ಅದುವರೆಗೆ ಇದ್ದ ಪರಮಾತ್ಮ ಎಲ್ಲಿ ಮಾಯವಾಗಿಬಿಡುತ್ತಾನೆ ಎಂದು ಅಚ್ಚರಿಯಾಗುತ್ತದೆ. ಮಾಲೆ ಧರಿಸಿ ಒಂದೆರಡು ದಿನಕ್ಕೆ ಸೀಮಿತವಾಗುವ ದೈವ ಭಕ್ತಿ ಮತ್ತೆ ಮಾಯವಾಗಿ ಯಥಾಪ್ರಕಾರ ತಾಮಸಗುಣ ತಾಂಡವವಾಗುತ್ತದೆ. ಶರಣಮಯ್ಯಪ್ಪಾ ಎಂದು ಪರಮ ಭಕ್ತಿಯಿಂದ ಶರಣು ಕರೆಯುವುದನ್ನು ಕಾಣುವಾಗ ಮನುಷ್ಯ ಬದಲಾಗಿ ಬಿಟ್ಟ ಎಂಬ ಭ್ರಮೆ ಹುಟ್ಟಿಸುತ್ತದೆ.  ಅದು ಕೇವಲ ಕ್ಷಣಿಕವಾಗಿಬಿಡುವಾಗ ಈ ಭಕ್ತಿಯಿಂದ ಏನು ಪ್ರಯೋಜನ  ಎಂದು ಚಿಂತಿಸುವಂತಾಗುತ್ತದೆ.  ಚೆನ್ನಪ್ಪ ಈಗ ಮಾಲೆ ಹಾಕಿದ್ದಾನೆ. ಕಪ್ಪು ವಸ್ತ್ರ ಧರಿಸಿದ್ದಾನೆ. ಕೆಲವು ದಿನ ಅಷ್ಟೆ ನಂತರ ಯಥಾ ಪ್ರಕಾರ ಆ ಜಗಲಿಯಲ್ಲಿ ಮತ್ತೆ ಬೈಗುಳದ  ಕಿರುಚುವಿಕೆ  ಕೇಳಿಸುತ್ತದೆ. 

ನಮ್ಮಲ್ಲಿ ಒಳ್ಳೆಯ ತನ ಎಂಬುದು ಕೇವಲ ಕೆಲವು ಘಳಿಗೆಗಳಿಗೆ ಸೀಮಿತವಾದರೆ ಸಾಕೇ? ನಮ್ಮ ಸದ್ವರ್ತನೆಗೂ ನಾವು ಅವಧಿಯನ್ನು ಮೀಸಲಿರಿಸುತ್ತೇವೆ ಎಂದರೆ ನಾವು ಕೆಟ್ಟವರಾಗಿ ಉಳಿದು ಅದೇ ನಮ್ಮ ಸಹಜಗುಣವಾಗಿ ಅದುವೇ  ಅಂತರಂಗದ ಬಯಕೆಯಾಗಿರ ಬೇಕು. ಒಳ್ಳೆಯವರಾಗುವ ಅವಕಾಶವಿದ್ದರೂ ನಾವು ಕೆಟ್ಟವರಾಗಿಯೇ ಇರುವುದನ್ನು ಬಯಸುತ್ತೇವೆ ಎಂದರೆ ಅದು ದುರ್ದೈವ.   ಇಲ್ಲವಾದರೆ ಅದಕ್ಕೆ ಅವಧಿಯಾದರು ಯಾಕೆ ಬೇಕು? ಸೂರ್ಯ ಉದಿಸಿ ಅಸ್ತಮಿಸುವಂತೆ ನಮ್ಮ ವ್ಯಕ್ತಿತ್ವವೂ ಉದಿಸಿ ಅಸ್ತಮಿಸುವ ಸ್ವಭಾವಕ್ಕೆ ಒಳಗಾಗುತ್ತದೆ. 

ನಮ್ಮ ಮನೆಯ ಸುತ್ತ ಮುತ್ತ ಈ ಚಳಿಗಾಲದ ಅವಧಿಯಲ್ಲಿ ಹಲವರು ಮಾಲೆ ಹಾಕಿ ವೃತ ನಿಷ್ಠರಾಗುತ್ತಾರೆ. ಬೆಳಗ್ಗೆ ಸಾಯಂಕಾಲ ದೇವರ ಭಜನೆ ಶರಣು ಕರೆಯುವುದು ಕೇಳುತ್ತಿರುತ್ತದೆ. ಅಬ್ಬಾ ಇಷ್ಟಾದರೂ ಸತ್ಕರ್ಮ ಮಾಡುವ ಪ್ರೇರಣೆ ಬರುತ್ತದಲ್ಲ ಎಂದು ಸಹಜವಾಗಿ ಅಂದುಕೊಳ್ಳಬೇಕು. ಅದೂ ಶಬರಿ ಮಲೆಯ ಆ ಜನಸಂದಣಿ ಕಾಣುವಾಗ  ಕೇವಲ ಕೆಲವು ಘಳಿಗೆಗಳ ಸುಖಕ್ಕೆ ಮನುಷ್ಯ ಇಷ್ಟೊಂದು ಹಾತೊರೆಯುತ್ತಾನಲ್ಲಾ ಅದೊಂದು ವಿಚಿತ್ರ. ನಾನಂತೂ ಆ ಜನ ಸಂದಣಿಯಿಂದ ಆದಷ್ಟೂ ದೂರವಿದ್ದು ಏಕಾಂತದಲ್ಲೇ ಪರಮಾತ್ಮನ ಅನುಭವವನ್ನು ಅನುಭವಿಸುವುದರಲ್ಲಿ ಆಸಕ್ತ. ಹಾಗಾಗಿ ಇದೆಲ್ಲ ವಿಚಿತ್ರವಾಗಿ ಕಾಣುತ್ತೇನೆ. ಜಾತಿ ಧರ್ಮ  ಧನಿಕ ಬಡವ ಎಲ್ಲ ಭಾವವನ್ನು ಬದಿಗಿಟ್ಟು ಕೇವಲ ತತ್ವಮಸೀ ಎಂಬ ಧ್ಯೇಯದಲ್ಲಿ ಕೆಲವು ದಿನಗಳ ಮಟ್ಟಿಗೆ ಎಲ್ಲ ಲೌಕಿಕ ಚಿಂತೆಯಿಂದ ದೂರವಿದ್ದು ವೃತ ನಿಷ್ಠರಾಗುವುದು ಎಂದರೆ ಮನುಷ್ಯನ ಅಂತರಂಗದಲ್ಲಿ ಸತ್ ಎಂಬುದು ಬರಿದಾಗಲಿಲ್ಲ ಎಂಬುದರ ಸಂಕೇತ. ಆದರೆ ಇದು ಕೇವಲ ಒಂದಿಷ್ಟು ಅವಧಿಗೆ ಸೀಮಿತವಾಗುವಾಗ ಹೀಗಿದ್ದರೆ ಸಾಕೇ ಎಂಬ ಯೋಚನೆಯೂ ಬಂದು ಬಿಡುತ್ತದೆ. 

ಶಬರಿ ಮಲೆಯ ವೃತದ ಅವಧಿಯಲ್ಲಿ ಪ್ರತಿ ನಿತ್ಯ ಅಲ್ಲಲ್ಲಿ ಸ್ವಾಮಿಯ ಶರಣು ಕರೆಯುವುದನ್ನು ಕೇಳುತ್ತೇವೆ. ಮುಂಜಾನೆ ಸ್ನಾನ ಮಾಡುವುದು ಒಂದೆಡೆಯಾದರೆ ಸಾಯಂಕಾಲ ಭಜನೆ ಪೂಜೆಯಲ್ಲಿ ವ್ಯಸ್ತರಾಗುವುದು ಇನ್ನೊಂದೆಡೆ. ಆದರೆ ಇವುಗಳೆಲ್ಲ ಕೆಲವು ದಿನಗಳಿಗಷ್ಟೇ ಸೀಮಿತ. ಮತ್ತೆ ಯಥಾಪ್ರಕಾರ ದೈವಿ ಭಾವ ಮಾಯವಾಗಿ ತಾಮಸೀ ಭಾವ ನೆಲೆಯಾಗುತ್ತದೆ.  ಈಗ ಕಾಣುವ ಶಿಸ್ತು ಆ ಸಂಸ್ಕಾರದ ನೆನಪು ಇಲ್ಲದಂತೆ ಮನುಷ್ಯ ಪಾತ್ರ ಬದಲಿಸಿ ಬಿಡುತ್ತಾನೆ. ಜೀವನ ಎಂಬುದು ನಾಟಕ ಎಂದು ಹೇಳುತ್ತಾರೆ. ಇದರಲ್ಲಿ ನಾಟಕ ಯಾವುದು ಎಂದು ಪ್ರಶ್ನೆ ಮೂಡುತ್ತದೆ. 

ದಿನಚರಿ ಎಂಬುದು ಮನುಷ್ಯನ ಸಂಸ್ಕಾರದ ಪ್ರತಿಬಿಂಬ. ಸತ್ ಸಂಸ್ಕಾರ ರೂಪುಗೊಳ್ಳುವುದು ಉತ್ತಮ ದಿನಚರಿಯಿಂದ. ಅಲ್ಲಿ ನಾವು  ಉತ್ತಮವಾದ ಕರ್ಮಗಳನ್ನುಎಷ್ಟು  ಅನುಷ್ಠಾನ ಮಾಡುತ್ತೇವೆಯೋ ಅದುವೆ ನಮ್ಮಲ್ಲಿ ಶಾಶ್ವತವಾಗಿ ನೆಲೆಯಾಗುತ್ತದೆ. ಕೆಲವು ದಿನಕ್ಕೆ ಮಾತ್ರ ಸೀಮಿತವಾಗುವ ಭಜನೆ ಪರಮಾತ್ಮನ ಆರಾಧನೆ ನಂತರ ಅದು ಇಲ್ಲ ಎಂದರೆ ಹರಿದ ತಂತಿಯ ಶ್ರುತಿಯಾಗುತ್ತದೆ. ಯಾವಾಗಲೋ ಒಂದು ದಿನ ಆಡಂಬರದಿಂದ ಅದ್ಧೂರಿಯಿಂದ ಆಚರಿಸುವ ಸತ್ಯನಾರಾಯಣ ವೃತಕ್ಕಿಂತ, ನಿತ್ಯ ಒಂದು ದೀಪ ಹಚ್ಚಿ ನಮೋ ನಾರಾಯಣ ಎನ್ನುವುದರಲ್ಲಿ ಹೆಚ್ಚು ಪ್ರಭಾವವಿದೆ. ಹೆಚ್ಚು ಶಕ್ತಿಯಿದೆ. ನಿತ್ಯವೂ ಪರಮಾತ್ಮನ  ಬಳಿಯಲ್ಲೇ ಇರುವ ಅವಕಾಶವಿರುತ್ತದೆ. ಪರಮಾತ್ಮನ ಪ್ರಭಾವಲಯದಿಂದ ಅದು ದೂರಕ್ಕೆ ಒಯ್ಯುವುದಕ್ಕೆ ಬಿಡುವುದಿಲ್ಲ.  ಆಡಂಬರದ ಆರಾಧನೆಯಲ್ಲಿ ಕೇವಲ ಅಡಂಬರದತ್ತ ಗಮನವನ್ನು ಹರಿಯುತ್ತದೆ. ಪರಮಾತ್ಮ ದೂರವೇ ಉಳಿದು ಬಿಡುತ್ತಾನೆ. ಸರಳವಾಗಿದ್ದಷ್ಟೂ ಪರಮಾತ್ಮನ ಮೇಲೆ ಗಮನ ಗಾಢವಾಗುತ್ತದೆ. ನಿಂತ ನೀರು ಕಲ್ಮಷವನ್ನೇ ತುಂಬಿಕೊಂಡಿದ್ದರೆ ಹರಿವ ನೀರು ಸದಾ ಶುದ್ದವಾಗಿರುತ್ತದೆ. ಈ ಹರಿಯುವುದಿಕೆ ಎಂಬುದು ಚೈತನ್ಯದ ಸಂಕೇತ. 

ಶಬರಿಮಲೆಗೆ ಹೋಗಿ ಬಂದು ವೃತ ಸಮಾಪ್ತಿ ಮಾಡಿ ಮಾಲೆ ಕಳಚಿದರೂ ಆ ಜೀವನ ಶೈಲಿಯಿಂದ ಹೊರ ಬಾರದ ಎಷ್ಟೋ ವ್ಯಕ್ತಿಗಳಿದ್ದಾರೆ. ಅವರು ಆ ಜೀವನದ ಮೌಲ್ಯವನ್ನು ಅರ್ಥಮಾಡಿಕೊಂಡಿರುತ್ತಾರೆ. ಆದರೆ ವೃತ ಎಂಬುದು ಹರಕೆ ಸಲ್ಲಿಸುವುದಕ್ಕೆ ಸೀಮಿತವಾಗುವಾಗ ಉತ್ತಮವಾದ ಅಂಶಗಳನ್ನು ನಾವು ಬದಿಗಿಟ್ಟು ಅದಕ್ಕೆ ತುಕ್ಕು ಹಿಡಿಸಿದಂತೆ, ಮತ್ತೆ ಅದು ಸವಕಲಾಗಿಯೆ ಇರುತ್ತದೆ. ವಾಸ್ತವದಲ್ಲಿ ಉತ್ತಮ ಕಾರ್ಯಗಳು ಅಷ್ಟಾದರೂ ನೆರವೇರುತ್ತದಲ್ಲಾ ಎಂಬ ಅಲ್ಪ ತೃಪ್ತಿಯಲ್ಲೇ  ಉಳಿದು ಬಿಡುತ್ತದೆ. ಆದರೆ ಆಡಂಬರ ಎಂಬುದು ಅಷ್ಟಾದರೂ ಎಂಬ ಪರಿಧಿಯಲ್ಲಿ ನಿಲ್ಲುವುದಿಲ್ಲ. ಅದಕ್ಕೆ ಪರಿಶ್ರಮ ಹೆಚ್ಚು ವಿನಿಯೋಗಿಸಲ್ಪಡುತ್ತದೆ. 

ಕೆಲವು ದಿನ ಕಳೆದು ನೋಡಿದರೆ ಚೆನ್ನಪ್ಪ ಮತ್ತೆ ನಶೆಯ ತೀರ್ಥಕ್ಕೆ ಶರಣಾಗುತ್ತಾನೆ, ವೃತದಲ್ಲಿ ಸೇವಿಸಿದ ತೀರ್ಥ ಮರೆತೇ ಹೋಗಿರುತ್ತದೆ. ಹಲವರು ಶಬರಿ ಮಲೆಗೆ ಹೋಗಿ ಬರುವಾಗ ಮಾಹೆ ಯಲ್ಲಿ ಒಂದು ಘಳಿಗೆ ವಿರಮಿಸಿದಂತೆ ಭಕ್ತಿ ಎಂಬುದು ಬೇಕಾದಾಗ ಚಲಾಯಿಸುವ ಯಂತ್ರದಂತೆ, ಅದು ಯಾಂತ್ರಿಕವಾಗಿಯೇ ಇರುತ್ತದೆ. ಅದು ಸಹಜವಾಗಿ ಹೃದಯಕ್ಕೆ ಹತ್ತಿರವಾಗುವುದಿಲ್ಲ. ಅಪ್ಪ ಹೊಸ ಉಡುಗೆಯನ್ನು ತಂದು ಕೊಟ್ಟಂತೆ ಭಗವಂತ ನಮಗ ಒಳ್ಳೆಯದಾಗುವ ಅವಕಾಶವನ್ನು ಕೊಡುತ್ತಾನೆ, ಆದರೆ ನಾವು ಅಪ್ಪ ಕೊಟ್ಟ ಅಂಗಿಯನ್ನು ವಿಶೇಷ ದಿನಕ್ಕೆ ತೆಗೆದು ಮೀಸಲಿರಿಸಿದಂತೆ...ಈ ಒಳ್ಳೆಯದಾಗುವ ಅವಕಾಶವನ್ನೂ ಮೀಸಲಿರಿಸಿಬಿಡುತ್ತೇವೆ. ನಿತ್ಯ ಮತ್ತೆ ಹರಿದ ಅಂಗಿಯನ್ನು ತೊಟ್ಟುಕೊಳ್ಳುತ್ತೇವೆ. ನಮಗೆ ಅದೇ ಸಹಜವಾಗಿ ಸೌಕರ್ಯವನ್ನು ಒದಗಿಸಿಬಿಡುತ್ತದೆ.  


No comments:

Post a Comment