Thursday, April 16, 2009

ಹೀಗೊಂದು ಮರೆಯಲಾಗದ ಅನುಭವ

ಹೀಗೊಂದು ಮರೆಯಲಾಗದ ಅನುಭವ

ಇದೊಂದು ನಂಬಲಾಗದ ಘಟನೆ. ಬಹುಷಃ ತರ್ಕಗಳು ಏನಿದ್ದರೂ ನಾನು ನನ್ನ ಅನುಭವವನ್ನು ಮಾತ್ರವೇ ಹೇಳುವುದು. ಇದು ಪ್ರಚಾರಕ್ಕಾಗಿ ಅಗಲಿ ಅಥವಾ ಬೇರೆ ಸ್ವ ಸಾಧನೆಗಾಗಿ ಅಗಲಿ ಹೇಳಿಕೊಳ್ಳುವುದಲ್ಲ. ನಾನು ಸ್ವತಹ ಅನುಭವಿಸಿ ಮನಸ್ಸಿನ ಗೊಂದಲವನ್ನಷ್ಟೇ ಇಲ್ಲಿ ವಿವರಿಸುತ್ತ ಇದ್ದೇನೆ.

ಕಳೆದ ಮಂಗಳವಾರ ಅಂದರೆ ದಿನಾಂಕ ೧೭-೦೨-೨೦೦೯ ರಂದು ನಾನು ಮಂಗಳೂರಿನ ಬಂಧುಗಳ ಮನೆಗೆ ಚಂಡಿಕಾ ಹವನದ ನಿಮಿತ್ತ ಹೋಗಿ ಬರುವ ಸಂದರ್ಭ.ನಾನು ಹಾಗು ನನ್ನ ಸಂಬಂಧಿಗಳು ಒಟ್ಟು ನಾಲ್ಕು ಮಂದಿ ಮಾರುತಿ ಕಾರ್ ನಲ್ಲಿ ಬೆಂಗಳೂರು ಕಡೆಗೆ ಬರುತ್ತಾ ಇದ್ದೆವು. ಹೋಗುವಾಗ ಶಿರಾಡಿ ಘಾಟ್ ಮೂಲಕ ಹೋದವರು ಬರುವಾಗಲೂ ಅಲ್ಲೇ ಬರೋಣವೆಂದು ನೆಲ್ಯಾಡಿ ಕೊಕ್ಕಡ ಕ್ರಾಸ್ ತನಕ ಬಂದಾಗ ಘಟ ರಸ್ತೆ ಸಂಪೂರ್ಣ ಬ್ಲಾಕ್ ಆಗಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.ಮಾರುತಿ ಕಾರ್ ಸ್ವತಹ ನಾನೇ ಚಲಾಯಿಸುತ್ತಿದ್ದೆ. ನನ್ನ ಪಕ್ಕ ನನ್ನ ಭಾವ ಹಾಗೆ ಹಿಂದಿನ ಸೀಟಿನಲ್ಲಿ ಇಬ್ಬರು ಕುಳಿತಿದ್ದರು.ನನ್ನನ್ನು ಉಳಿದು ಅವರೆಲ್ಲ ವೃತ್ತಿಪರ ಪುರೋಹಿತರಾಗಿದ್ದರು. ರಸ್ತೆ ಬ್ಲಾಕ್ ನೋಡಿ ನಾವು ಚಾರ್ಮಾಡಿ ಮೇಲೆ ಹೋಗೋಣವೆಂದು ಧರ್ಮಸ್ಥಳ ಕಡೆಗೆ ಕಾರ್ ತಿರುಗಿಸಿ, ಚಾರ್ಮಾಡಿ ಮೇಲೆ ಬಂದೆವು.

ರಾತ್ರಿಯ ಸುಮಾರು ೧೧ ಗಂಟೆಯ ಸಮಯ .ಘಾಟಿ ತಿರುವುಗಳೆಲ್ಲ ಕಳೆದು ರಸ್ತೆ ನೇರವಾಗಿ ಹೋಗುತ್ತಾ ಇತ್ತು. ಗಾಢವಾಗಿ ಇರುಳು ಹಬ್ಬಿತ್ತು. ನಿರ್ಜನ ಪ್ರದೇಶ. ಅಲ್ಲೊಂದು ಇಲ್ಲೊಂದು ಮರ ವಿರಳವಾಗಿ ಇತ್ತು. ಕಾರು ಗಂಟೆಗೆ ೮೦ ಕಿ. ಮಿ. ವೇಗದಲ್ಲಿ ನಾನು ಚಲಾಯಿಸುತ್ತಿದ್ದೆ. ತುಂಬ ದೂರದಲ್ಲಿ ಲಾರಿಯೊಂದು ನಿಧಾನವಾಗಿ ಹೋಗುತ್ತಿತ್ತು.

ನಾನು ಮುಂದಿನ ಸೀಟಿನಲ್ಲಿ ನನ್ನ ಬಳಿಯೇ ಕುಳಿತಿದ್ದ ಬಾವನಲ್ಲಿ ಸಂಧ್ಯಾ ವಂದನೆ ಹಾಗು ಇತರ ವೈದಿಕ ಕರ್ಮ ಮಂತ್ರ ಗಳ ಬಗ್ಗೆ ಚರ್ಚಿಸುತ್ತ ಅವರ ವಿದ್ವತ್ತಿನ ಅನುಭವ ವನ್ನು ಸವಿಯುತ್ತ ಇದ್ದೆ. ಏಕಾಂತ ರಾತ್ರಿ ಮಾತಾಡುವುದಕ್ಕೆ ನನಗೆ ಅತ್ಯಂತ ಪ್ರಿಯವಾದ ವಿಷಯವೇ ಸಿಕ್ಕಿತ್ತು. ಹಾಗೆ ಚರ್ಚಿಸುತ್ತ ಒಂದು ರೀತಿಯಲ್ಲಿ ಕಾಲ ಹರಣವನ್ನು ಮಾಡುತ್ತಾ ನಿರ್ಮಾನುಷ ರಸ್ತೆಯಲ್ಲಿ ಬರುತ್ತಾ ಇದ್ದೆವು. ಅವಾಗ ನೇರವಾದ ರಸ್ತೆ ದೂರದಲ್ಲಿ ಲಾರಿ ನಿಲ್ಲದೆ ಚಲಿಸುತ್ತ ಇತ್ತು. . ರಸ್ತೆ ಬದಿಯಲ್ಲಿ ಕಡು ಹಳದಿ ಬಣ್ಣದ ಆಕೃತಿ ಮಿರ ಮಿರ ಮಿಂಚುವುದು ದೂರದಿಂದಲೇ ನನ್ನ ಗಮನಕ್ಕೆ ಬಂತು. ಹತ್ತಿರ ಬರುತ್ತಿದ್ದ ಹಾಗೆ ಆ ಆಕೃತಿ ಒಂದು ಹೆಣ್ಣಿನ ಆಕೃತಿ. ಆಶ್ಚರ್ಯ!!! ಒಂದಕ್ಕೊಂದು ತಾಳೆಯಾಗದ ವಾತವರಣ. ಗಾಢ ಕತ್ತಲು ಒಂಟಿ ಹೆಣ್ಣು ರಸ್ತೆ ಬದಿಯಲ್ಲಿ.!!!ಕಾಲಿನ ಬುಡದಲ್ಲಿ ಎರಡು ಏರ್ ಬ್ಯಾಗ್ ಇಟ್ಟುಕೊಂಡು ಬಸ್ಸಿಗೆ ಕಾದು ನಿಂತಂತೆ ಭಾಸವಾಯಿತು. ಆ ಹೊತ್ತಿನಲ್ಲಿ ಒಂಟಿ ಹೆಣ್ಣು ಅಸಹಜ ವಾತವರಣ ಎಲ್ಲವೂ ಗೊಂದಲಮಯ, ನಂಬಲಾಗಲೇ ಇಲ್ಲ . ಒಂದು ಘಳಿಗೆ ಅನ್ನಿಸಿತು ಆ ಲಾರಿಯಿಂದ ಆಕೆ ಹಾರಿದಳೆ? ಖಂಡಿತ ಸಾಧ್ಯ ಇಲ್ಲ ಯಾಕೆಂದರೆ ನಾನು ಗಮನಿಸುತ್ತಾ ಇದ್ದೆ ಲಾರಿ ನಿಲ್ಲದೆ ಸಾಗುತ್ತಿತ್ತು. ಅಸಹಜ ಸನ್ನಿವೇಶ ಕಂಡು ಒಂದು ಘಳಿಗೆ ವಿಚಲಿತವಾಯಿತು ಮನಸ್ಸು.ಕಾರು ತೀರ ಹತ್ತಿರ ಬಂದಾಗ ಒಂದು ಅರೆ ಘಳಿಗೆ ವಾಹನ ನಿಲ್ಲಿಸಿದಂತೆ ಮಾಡಿದಾಗ ಮುಖ ಸೊಟ್ಟದು ಮಾಡಿ ಆಕೆ ಕಾರಿನ ಒಳ ಇಣುಕಿದಳು. ಕಣ್ಣೆಲ್ಲ ಕೆಂಪಗೆ ಆಗಿದ್ದುದು ಅವಾಗ ಗಮನಕ್ಕೆ ಬಂತು. ಸರ್ವಾಂಗ ಕರಿ ಕಟ್ಟಿದ ಆಕೆಯ ದೇಹ., ಅದರ ಮೇಲೆ ಫಳ ಫಳ ಹೊಳೆಯುವ ಹಳದಿ ಬಣ್ಣದ ಸೀರೆಎಂದೂ ಕಾಣದಂತಹ ಕಡು ಹಳದಿ ಬಣ್ಣ. . ದಂಗಾಗಿ ಹೋದೆವು ನಾವುಗಳು. ಬಳಿ ಕುಳಿತ ಬಾವ ಒಂದೇ ಸವನೆ ಚೀರಿದರು ಹೋಗುವ ಹೋಗುವ ಎಂದು. ನಾನು ಆ ಕ್ಷಣ ಏನು ಮಾಡಬೇಕೆಂದು ತೋಚದೆ ಕಾರಿನ ವೇಗವನ್ನು ಹೆಚ್ಚಿಸಿದೆ.ಯಾರಿರಬಹುದು ಎಂಬ ಗೊಂದಲ ಇನ್ನೂ ಕಾಡುತ್ತಾ ಇದೆ. ಕೆಲವೊಮ್ಮೆ ತುಂಬ ಹಾಸ್ಯಾಸ್ಪದ ಅನ್ನಿಸಿದರೂ ನಾನು ನೋಡಿದ್ದು ಸುಳ್ಳೇ? ಭಾವ ಚೀರಿದ್ದು ಸುಳ್ಳೇ. ಅವರು ಸುಮಾರು ದೂರದವರೆಗೂ ನಡುಗುತ್ತ ಇದ್ದರು. ಎಡಭಾಗದಲ್ಲಿ ಕುಳಿತಿದ್ದ ಕಾರಣ ನನ್ನಿಂದಲೂ ಹತ್ತಿರದಿಂದ ನೋಡಿದ್ದರು.

ಹಲವು ರೀತಿ ಯೋಚಿಸಿದೆ ಅದ್ಭುತ ಅನುಭವವನ್ನು ಹೀಗೆ ನಮೂದಿಸಿದರೆ ಸೂಕ್ತ ಅನ್ನಿಸಿತು. ಯಾರಿರಬಹುದು ಎನ್ನುವ ಗೊಂದಲಕ್ಕೆ ಉತ್ತರ ಇರಬಹುದೇ.? ಆ ಅತ್ತ ಕಾಡಿನಂತಹ ಪ್ರದೇಶದಲ್ಲಿ ಒಂಟಿ ಹೆಣ್ಣು ಗೋಚರಿಸುವ ಸನ್ನಿವೇಶ ಭಯ ಆತಂಕ ಎಲ್ಲವನ್ನೂ ಉಂಟು ಮಾಡಿದೆ. ಜತೆಯಲ್ಲಿ ತೀರದ ಕುತೂಹಲವನ್ನು ಪರಿಹರಿಸದ ಸ್ಥಿತಿ. ಈಗಿನ ಅಧುನಿಕ ಯುಗದಲ್ಲಿ ನಂಬಲಾಗದ ದೃಶ್ಯ. ಹೇಳಿದರೆ ಹಾಸ್ಯ ಮಾಡಿ ನಗಬಹುದಾದಂತ ವಿಷಯ. ಎಲ್ಲೊ ಚಿಕ್ಕವನಿರುವಾಗ ಚಂದಮಾಮದಲ್ಲಿ ಹಲವು ರಮ್ಯ ದೆವ್ವದ ಕಥೆಗಳನ್ನೂ ಓದಿದ ನೆನಪು. ಇದೂ ಹಾಗೆಯೆ? ಅಲ್ಲವಾದರೆ ಏನು? ಮನುಷ್ಯರು ಹಗಲಲ್ಲೂ ಒಂಟಿಯಾಗಿ ಹೋಗಲು ಅನುಮನಿಸುವಂತ ಸನ್ನಿವೇಶದಲ್ಲಿ ಒಂದು ಒಂಟಿ ಹೆಣ್ಣು. ಏನಿರಬಹುದು? ದೆವ್ವಗಳು ಹೆಣ್ಣಿನ ರೂಪದಲ್ಲೇ ಕಾಣುತ್ತವೆಯೇ? ಆ ಎರಡು ಬ್ಯಾಗ್ ಇನ್ನೂ ಅನುಮಾನವನ್ನು ಹೆಚ್ಚಿಸುವಂತೆ ಮಾಡಿದೆ. ಒಂದು ಒಂಟಿ ಹೆಣ್ಣು ಎಂದು ಹೇಳುವಲ್ಲಿ ಮನಸ್ಸು ಒಪ್ಪುವುದಿಲ್ಲ. ಹಾಗೆಂದು ದೆವ್ವ ಪಿಶಾಚಿ ಎನ್ನಲು ಮನಸ್ಸಿನ ವೈಚಾರಿಕತೆ ಬಿಡುವುದಿಲ್ಲ. ಏನಿರಬಹುದು? ಉತ್ತರ ಅವರವರ ಊಹೆಗೆ ಬಿಟ್ಟದ್ದು. ಏನಿದ್ದರೂ, ಒಂದು ಘಳಿಗೆ ನಕ್ಕು ಸುಮ್ಮನಾಗುವಂತಹ ವಿಚಾರ. ಘಟನೆಯನ್ನು ಯಾವ ರೀತಿ ಬೇಕಾದರೂ ಸ್ವೀಕರಿಸಬಹುದು.ಒಂದು ರೋಚಕ ಮರೆಯಲಾಗದ ಅನುಭವ ನನ್ನ ಮಟ್ಟಿಗೆ ಅದು ಅಲ್ಲಿಗೆ ಸೀಮಿತ.

No comments:

Post a Comment