Friday, April 17, 2009

ನೋವಿನ ಚೀಲಗಳು......

ನೋವು ಎಂಬ ಶಬ್ದವೇ ಅಪ್ಯಾಯಮಾನವಾದದ್ದು ಎಂದೆ ನನ್ನ ಅನಿಸಿಕೆ. ಸುಖ ಸಂತೋಷ ಇಲ್ಲದಿದ್ದ ವ್ಯಕ್ತಿ ಸಿಗಬಹುದು ಆದರೆ ನೋವಿಲ್ಲದ ವ್ಯಕ್ತಿ ಬಹುಶ: ಸಿಗಲಾರ. ಸ್ನೇಹಿತರ ನೋವು ಹಂಚಿಕೊಳ್ಳುವುದೇ ಒಂದು ಹಿತವಾದ ಅನುಭವ. ಒಬ್ಬ ಸ್ನೇಹಿತ ತಮ್ಮಲ್ಲಿ ನೋವು ತೋಡಿಕೊಂಡರೆ ನಾವೇ ಏನೋ ಮಹಾನ್ ವ್ಯಕ್ತಿ ಅದ ಅನುಭವ ಅಲ್ಲವೇ? ಮಾತ್ರವಲ್ಲ ಅದರಿಂದಲೇ ಸ್ನೇಹ ಸಂಬಂಧ ಬಲಗೊಳ್ಳುವುದು. ಹೀಗೆ ನೋವು ಎಂಬ ಭಾವನೆಗೆ ಹಾಗು ಪರರು ನೀಡಿದ ನೋವಿಗೆ ಹೃದಯದಲ್ಲಿ ತುಸುವಾದರೂ ಮೀಸಲಿಡುವ ಜಾಗವೇ ನೋವಿನ ಚೀಲಗಳು ಎಂದು ಹೇಳಬಹುದೇನೋ.

ಒಂದು ಹೊಸ ವ್ಯಕ್ತಿ ಪರಿಚಯವಾದಾಗ ಪರಿಚಯ ಸ್ನೇಹಕ್ಕೆ ತಿರುಗಿದಾಗ ಸ್ನೇಹದ ಜತೆಗೆ ನೋವಿನ ಚೀಲ ತುಂಬಿಕೊಳ್ಳಲು ಶುರುವಾಗಿಬಿಡುತ್ತದೆ. ಈ ನೋವಿನ ಚೀಲ ಎಷ್ಟು ದೊಡ್ಡದಿದೆಯೋ ಅಥವಾ ಗಾತ್ರವನ್ನು ಎಷ್ಟು ಹಿಗ್ಗಿಸಬಹುದೋ ಅಷ್ಟು ನಿಮ್ಮ ಸ್ನೇಹ ವಲಯ ವಿಕಸನ ಗೊಳ್ಳುತ್ತದೆ. ಸಾಂಸಾರಿಕವಾಗಿಯು ಅಸ್ಟೆ. ಜೀವನದಲ್ಲಿ ಪ್ರತಿಶತ ಸುಖವೇ ತುಂಬಿರಲು ಸಾಧ್ಯವೇ?ತಮ್ಮ ಆಪ್ತರಿಗೊಸ್ಕರ ನೋವು ಸಹಿಸಿಕೊಳ್ಳುವುದು ಒಂದು ಹಿತವಾದ ಅನುಭವ. ತಾಯಿಗೆ ತನ್ನ ಮಗುವಿನ ಜತೆಗಿನ ಸಂಬಂಧದ ತಳಹದಿಯೇ ನೋವು. ಎಂಥ ಹಿತಕರ ನೋವನ್ನು ಅನುಭವಿಸಿ ತನ್ನದ್ದಾದ ಮಗುವಿನ ಜನ್ಮಕ್ಕೆ ಕಾರಣಳಾಗುತ್ತಾಳೆ. ಜಗತ್ತಿನ ಆಗು ಹೋಗುಗಳಲ್ಲಿ ಇಂಥಹ ನೋವುಗಳು ಪ್ರಧಾನ ಪತ್ರವಹಿಸುತ್ತವೆಯಲ್ಲವೇ?ಉದರದಲ್ಲಿ ಭ್ರೂಣ ಬೆಳೆದಂತೆ ನೋವಿನ ಚೀಲದಲ್ಲಿ ನೋವಿನ ಪದರ ಕೂಡ ಬೆಳೆಯುತ್ತಾ ಹೋಗುತ್ತದೆ. ಹುಟ್ಟಿದ ಮಗುವಿನಿಂದ ಮುಂದೆ ನೋವೋ ಸುಖವೋ ದೇವರೇ ಬಲ್ಲ.. ಅದರೂ ಈ ನೋವನ್ನು ಎಷ್ಟು ಹಿತವಾಗಿ ಅನುಭವಿಸುತ್ತಾಳೆ. ಈ ಹೆಣ್ಣಿನ ಸ್ಥಾನ ನೋವಿನಲ್ಲಿ ವಿಶೇಷ ಮಹತ್ವ ಪಡೆದಿದೆ. ಹುಟ್ಟಿದ ಮನೆಯಲ್ಲಿ ತಿಳುವಳಿಕೆ ಬರುವವರೆಗೆ ತನ್ನದೇ ಮನೆ ಎಂಬ ಬಾಂಧವ್ಯದ ಸಂವೇದನೆ ಅನುಭವಿಸುತ್ತಾ ಬೆಳೆಯುತ್ತಾಳೆ. ಬೆಳೆಯುತ್ತಿದ್ದಂತೆ ಪರಿಸರ ಪರಿಸ್ಥಿತಿಗೆ ಬದಲಿಸಿಕೊಂಡು ಇನ್ನೊಂದು ಮನೆಯ ಅವಿಭಾಜ್ಯ ಅಂಗವಾಗಿ ಬಿಡುತ್ತಲೇ.. ಅವಳ ಅಂತರಂಗದ ನೋವಿನ ಚೀಲ ಅವಾಗಲೇ ತುಂಬಿ ಕೊಳ್ಳಲು ಶುರುವಾಗಿಬಿಡುತ್ತದೆ. ಗಂಡು ಜೀವಕ್ಕೆ ಈ ನೋವಿನ ಅನುಭವ ತುಂಬ ವಿರಳ. ಇನ್ನೊಂದು ಮನೆಯಲ್ಲಿ ನೋವೋ ನಲಿವೋ ಬೆಳದು ಬರುತ್ತಾಳೆ ತನ್ನ ಇನಿಯನ ನೋವಿಗೆ ಸ್ಪಂದನೆ ತೋರಿಸುವಳೋ ಇಲ್ಲವೊ, ಒಡನಾಡಿಯ ನೋವಿನಲ್ಲಿ ಭಾಗಿಯಾಗುವಳೋ ಇಲ್ಲವೊ ಆದರೆ ತನ್ನ ಸ್ವಂತ ನೋವಿನ ಚೀಲವನ್ನು ತುಂಬಿಸಿಕೊಳ್ಳುತ್ತಾ ಇನ್ನೊಂದು ಪರಿಸರದ ಅಂಗವಾಗಿಬಿಡುತ್ತಾಳೆ.
ಹೆತ್ತ ಮಗು ದೊಡ್ಡದಾಗಿ..ಗಂಡಾದರೆ ಒಂದು ವಿಧ ಹೆಣ್ಣಾದರೆ ಒಂದು ವಿಧ ಎಲ್ಲೊ ಅವಳ ನೋವಿನ ಚೀಲ ಖಾಲಿ ಅಂಥ ಅನಿಸೋದೇ ಇಲ್ಲ. ಹೆತ್ತ ಕರುಳ ಕುಡಿಯ ನೋವಿಂದ ತನ್ನ ಚೀಲವನ್ನು ಭರ್ತಿಗೊಳಿಸಿ ತನ್ನ ನೋವನ್ನು ತನ್ನಲ್ಲೇ ಐಕ್ಯಗೊಳಿಸಿಬಿಡುತ್ತಾಳೆ.

ನಮಗೆ ಏನಿದ್ದರೂ, ವಿಪುಲ ಸಂಪತ್ತಿನ ಅನುಭೋಗಿಗಳಾಗಿ ಜೀವನ ಸವೆಸುತ್ತಿದ್ದರೂ ತಮ್ಮ ಆಂತರ್ಯದ ನೋವು ಹಂಚಿಕೊಳ್ಳಲು ಯಾರು ಸಿಗದಿದ್ದರೆ ಎಲ್ಲವೂ ಗೌಣವಾಗಿಬಿಡುತ್ತದೆ. ಹಂಚಿಕೊಳ್ಳಲಾಗದ ಈ ನೋವಿಂದ ವಿಲಿವಿಲಿ ಒದ್ದಾಡುವ ಮನಸ್ಸಿನ ತುಮುಲ ಏನಿದ್ದರೂ ತುಂಬಿಕೊಂಡ ನೋವಿನ ಚೀಲದ ಸಂವೇದನೆಯಾಗಿಬಿಡುತ್ತದೆ. ನೋವಿನ ಚೀಲದ ಗಾತ್ರ ದೊಡ್ದದಾದಷ್ಟು ವ್ಯಕ್ತಿ ತ್ಯಾಗಮಯಿ ಆಗಿಬಿಡುತ್ತಾನೆ.ಮಹಾನ್ ಚಿಂತಕರ ಚಿಂತನೆಯಲ್ಲಿ ಈ ನೋವಿನ ಚೀಲ ಪ್ರಧಾನ ಪಾತ್ರವಹಿಸಿದೆ.

ತನ್ನ ಒಡನಾಡಿಗಳಿಂದ ನೋವು, ತಾನು ಜನ್ಮ ಕೊಟ್ಟವರಿಂದ ನೋವು, ಸ್ನೇಹಿತರಿಂದ ನೋವು ಹೀಗೆ ನೋವಿನ ಈ ಚೀಲ ಸದಾ ಕ್ರಿಯಾ ಶೀಲವಾಗಿರುತ್ತದೆ.

No comments:

Post a Comment