ಮೊನ್ನೆ ಹೀಗೆ ಅಂತರ್ಜಾಲದ ಆರ್ಕುಟ್ ಜಾಲದಲ್ಲಿ ವಿಹರಿಸುತ್ತಿರುವಾಗ ಒಬ್ಬ ಗೆಳೆಯನ ಪರಿಚಯವಾಯಿತು. ನಿತ್ಯ ನಿಗದಿತ ಸಮಯದಲ್ಲಿ ನಮ್ಮ ಭೇಟಿ ಮುಂದುವರಿಯಿತು ಸ್ನೇಹವು ಹವ್ಯಾಸವಾದಾಗ ಇಂತಹ ಚಟುವಟಿಕೆ ಕೆಲವೊಮ್ಮೆ ಮನಸ್ಸಿಗೆ ಮುದನೀಡುತ್ತದೆ. ಮಾತನಾಡಲು ಯಾವುದೇ ಪರಿಧಿಯಾಗಲಿ ಇಲ್ಲ. ಹೀಗೆ ಸ್ನೇಹ ಸೇತು ಬಲಿಯುವ ಮೊದಲು "ಕೇಳಿದೆ ಈಗ ಎಲ್ಲಿದ್ದಿ ಮಾರಾಯ? " ಅವಾಗ ರಾತ್ರಿ ೯ ತಾಸು ಆಗಿರಬಹುದು.. ಆತ ಹೇಳಿದ " ಕ್ಯಾಲಿಪೋರ್ನಿಯದಲ್ಲಿದ್ದೇನೆ " ಅಂತ. ಅದೇ ಇಂತಹ ಉತ್ತರಗಳು ಈವಾಗ ಸಾಮಾನ್ಯವಾಗಿಬಿಟ್ಟಿದೆ. ಜಗತ್ತಿನ ಯಾವುದೇ ತಾಣದಿಂದ ಕ್ಷಣ ಮಾತ್ರದಲ್ಲಿ ಪುಕ್ಕಟೆಯಾದ ಸಂಪರ್ಕ ತಾಣಗಳು ಈಗ ಬೇಕಾದಷ್ಟಿವೆ. ಆವಾಗ ಅನ್ನಿಸಿ ಬಿಡುತ್ತದೆ ಜಗತ್ತು ತೀರ ಚಿಕ್ಕದಾಗುತ್ತಿದೆಯೇ?
ಮೊದಲು ಇಂಥಹ ಸಂಪರ್ಕಗಳು ತೀರ ದುರ್ಲಭವಾಗಿದ್ದವು. ಊರಿಗೆ ಒಂದೇ ಫೋನ್ ಇರುವುದು. ಅದುವೇ ಹಲವರಿಗೆ PP Number ಆಗಿ ಉಪಯೋಗಕ್ಕೆ ಬರುತ್ತಿದ್ದವು. ಕರೆ ಮಾಡುವವರು ಮೊದಲಾಗಿ ಸೂಚನೆ ಕೊಟ್ಟೋ ಅಥವಾ ಪೂರ್ವ ನಿಗದಿಯಂತೆ ಈ ಒಂದು ಫೋನ್ ಮುಖಾಂತರವೇ ಸಂಪರ್ಕಿಸುತ್ತಿದ್ದುದು. ಕರೆ ಮಾಡುವವರ ಕರೆಗಾಗಿ ಫೋನ್ ಮಾಲಕರಿಗೆ ಕರೆ ಕರೆ ಯಾದರೂ ಪರವಾಗಿಲ್ಲ ತಾಸುಗಟ್ಟಲೆ ಕಾದು ಕುಳಿತು ಬೇಕಾದವರನ್ನು ಸಂಪರ್ಕಿಸಿ ಹೋಗುತ್ತಿದ್ದರು. ನಾನು ಹೀಗೆ ಹಲವು ಬಾರಿ ಕಾದು ಕುಳಿತದ್ದು ಇನ್ನು ನೆನಪಿದೆ. ಅಷ್ಟು ದುಬಾರಿ ಹಾಗು ವಿಲಾಸಿಯಾದ ಸಂಪರ್ಕ ಇಂದು ಇಷ್ಟು ಸುಲಭವಾಗಿದೆ. ಬೇಕಾದ ಕ್ಷಣದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿರಲಿ ಸಂಪರ್ಕಿಸಬಹುದಾದ ಇಂದಿನ ತಾಂತ್ರಿಕತೆ ಜಗತ್ತನ್ನು ಮುಷ್ಟಿಯೊಳಗೆ ಇರುವಂತೆ ಮಾಡಿದೆ. ಜಗತ್ತು ಮಾತ್ರವೇ ಚಿಕ್ಕದಾಗಿರುವುದು? ಯೋಚಿಸಿ..
ಅಂತರಜಾಲದಲ್ಲಿ ಪರಿಚಯವಾದವರು ಹೀಗೆ ಸ್ವ ಪರಿಚಯ ಹೇಳುತ್ತಾ ಕೊನೆಗೆ ನೀವು ಈಗ ಎಲ್ಲಿದ್ದೀರಾ ಎಂದು ಕೇಳುವಾಗ ಗಾಬರಿಯಾಗುತ್ತದೆ.. ಕೆನಡಾ ಅಥವಾ ಅಮೇರಿಕ ವಿಶ್ವದ ಇನ್ನಿತರ ಯಾವುದೊ ತಮಗೆ ತಿಳಿಯದ ಲೋಕವನ್ನು ಹೇಳಿ ಸಾವಿರಾರು ಮೈಲಿ ದೂರ ಇರುವುದನ್ನು ಜಂಭದಿಂದಲೋ ನೋವಿನಿಂದಲೋ ಹೇಳುವುದನ್ನೇ ಕೇಳಬಹುದು. ಇದು ಇಂದಿನ ತಾಂತ್ರಿಕತೆ ಜಗತ್ತಿನ ವೈಶಾಲ್ಯವನ್ನು ಕಡಿಮೆ ಮಾಡಿದ್ದನ್ನು ತೋರಿಸುತ್ತದೆ.
ಇಷ್ಟೇಯೇ.. ಇಂದು ಹಳ್ಳಿ ಜೀವನ ಆ ಮುಗ್ಧತನ ಎಲ್ಲ ಕಡಿಮೆಯಾಗುತ್ತಾ ಜತೆಗೆ ಹೃದಯ ವೈಶಾಲ್ಯವೂ ಕಡಿಮೆಯಾಗುದನ್ನು ಕಾಣಬಹುದು. ಮಾತಾ ಪಿತೃಗಳ ಸಂಬಂಧ ಮಕ್ಕಳೊಂದಿಗೆ ಸಂಕುಚಿತಗೊಳ್ಳುತ್ತಿದೆ. ಮೊದಲು ಕಣ್ಣೆದುರೇ ತಮ್ಮ ಮಕ್ಕಳ ಎಲ್ಲ ಚಟುವಟಿಕೆಯನ್ನು ಕಾಣುವ ಅವಕಾಶ ಇರುವಾಗ ಈಗ ಪ್ರೈಮರಿ ಶಾಲಾ ಹಂತದಲ್ಲೇ ಮಕ್ಕಳು ತಂದೆ ತಾಯಿಂದ ದೂರವಾಗಿ ಜೀವನ ಪರ್ಯಂತ ಅವರದ್ದೇ ಆದ ಪರಿಧಿಯಲ್ಲಿ ಬೆಳೆಯುವುದನ್ನು ಕಾಣಬಹುದು. ಮನೆಯೊಳಗಿನ ಕೌಟುಂಬಿಕ ಸಂಭಂಧಗಳು ಸಂಕೀರ್ಣವಾಗುತ್ತ ಸಾಗಿ ಕೇವಲ ಸಂಬಂಧಗಳು ಹೇಳಿ ತೋರಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಇದು ಜಗತ್ತಿನ ಸಂಕುಚಿತವನ್ನು ಸಾರುತ್ತಿದೆಯೇ?ಇದು ದೈಹಿಕ ಅಥವಾ ರಕ್ತ ಸಂಭಂಧವಾಗಿರಬಹುದು, ಆದರೆ ಮಾನಸಿಕ ಸಂಬಂಧಗಳೂ ಕೂಡ ಸಂಕುಚಿತತೆಯನ್ನೇ ಸಾರುವಾಗ ಜಗತ್ತು ತೀರ ಚಿಕ್ಕದಾಗುತ್ತಿದೆಯೇ ಭ್ರಮಿಸಬಹುದೇ?
ಒಂದು ಗಂಡು ಮಗುವನ್ನು ಹೆತ್ತು ತಮ್ಮ ಸಮಸ್ತ ಕನಸಿನ ಸಾಕಾರ ಮೂರ್ತಿಯೋ ಎಂಬಂತೆ ಮುದ್ದಾಗಿ ಪ್ರೀತಿಯಿಂದ ಸಾಕಿ ಬೆಳೆಸುವ ಮಾತಾಪಿತ್ರ್ ಗಳು ಅವುಗಳ ಲಾಲನೆ ಪಾಲನೆ ಬೆಳವಣಿಗೆಯಲ್ಲಿ ಸುಖ ಸಂತೋಷವನ್ನು ಕಾಣುತ್ತ ಮನೆಯ ಬಹುಮುಖ್ಯ ಅಂಗ ಎಂಬಂತೆ ಜೋಪಾನದಿಂದ ನೋಡಿಕೊಳ್ಳುತ್ತಾರೆ. ಮಗು ಬೆಳೆದು ದೊಡ್ಡ ಆಗುತ್ತದೆ ತಾಯಿಯ ಕನಸನ್ನು ಸಾಕಾರಗೊಳಿಸುವನೋ ಎಂಬ ಭ್ರಮೆಯನ್ನು ಮೂಡಿಸುವಂತೆ ಅವನ ಪ್ರಕೃತಿ ಗೋಚರಿಸಿ ಮತ್ತು ಹಿರಿಯರಿಗೆ ಅಭಿಮಾನ ಪೂರ್ವಕನಾಗಿ ಬೆಳೆಯುತ್ತಾ.. ಅದು ಒಂದು ಹಂತಕ್ಕೆ ಮುಟ್ಟುತ್ತದೆ.. ಒಂದೋ ಆತನಿಗೆ ಬೆಂಗಳೂರು ಅಥವಾ ಮುಂಬಯಿಯಂತಹ ನಗರದಲ್ಲಿ ಉದ್ಯೋಗ ದೊರಕುತ್ತದೆ. ಪ್ರತಿ ತಿಂಗಳೋ ಅಥವಾ ನಿಗದಿತ ಸಮಯದಲ್ಲೋ ಆತನ ಆಗಮನ ಊರಿಗೆ ಆಗುತ್ತದೆ. ಮನೆಯ ಸಮಸ್ತ ಕಾರ್ಯದಲ್ಲೂ ಮುತುವರ್ಜಿ ಕಾಣುತ್ತದೆ. ಇಂಥ ಸಕಲಗುಣ ಸಂಪನ್ನನಿಗೆ ಒಂದು ಮದುವೆ ಆಗದಿದ್ದರೆ ಹೇಗೆ? ಸಮಸ್ತವೂ ಜಾಲಾಡಿ , ಇದರಲ್ಲಿ ತಂದೆಯಾದವನಂತು ತನ್ನ ಮದುವೆಗೂ ಇಷ್ಟು ಆಯ್ಕೆ ಎಂಬ ಗೊಂದಲದಲ್ಲಿ ಸಿಗದೇ ಇದ್ದರು ಮಗನ ಮದುವೆ, ಮುದ್ದಾಗಿ ಸಾಕಿದ್ದೇವೆ ಒಳ್ಳೆ ನೌಕರಿಯಲ್ಲಿದ್ದಾನೆ ಮನೆಗೆ ಬೇಕಾದ ಹಾಗೆ ಇದ್ದ ಚಿನ್ನದಂತ ಹುಡುಗನಿಗೆ ಸಾಮನ್ಯ ಹುಡುಗಿ ಸಾಕೇ ಎಂಬಲ್ಲಿವರೆಗೆ ಚಿಂತಿಸಿ ಒಂದು ಹುಡುಗಿಯೊಂದಿಗೆ ಮದುವೆಯೂ ಆಗಿಬಿಡುತ್ತದೆ.
ಮೊದಲು ಅವನಿಗಾಗಿ ಒಂದು ಕೋಣೆ ಮತ್ತಿತರ ಕೆಲವು ವಸ್ತುಗಳು ಮೀಸಲಾಗಿರುತ್ತವೆ. ಹೆತ್ತವರು ಅದರಲ್ಲಿ ಅವನನ್ನೇ ಕಂಡು ಪ್ರೀತಿಯಿಂದ ಜೋಪಾನ ಮಾಡಿ ಇಡುತ್ತಾರೆ. ನಿತ್ಯ ಶುಭ್ರಗೊಳಿಸಿ ಒಪ್ಪ ಓರಣವಾಗಿ ನೋಡಿಕೊಳ್ಳುತ್ತಾರೆ. ಯಾವುದೊ ಒಂದು ವಸ್ತು ವರ್ಷದಲ್ಲಿ ಕೇವಲ ಮೂರು ಸಲ ಉಪಯೋಗವಾದರೂ ಅವನಿಗೋಸ್ಕರ ಪ್ರತಿ ದಿನ ಎದಿರು ನೋಡುವಂತೆ ಇರುತ್ತದೆ.ಅದೆಲ್ಲ ಮೊದಲಿನಂತೆ ಇದ್ದರೂ ಮದುವೆಯಾಯಿತೋ ಅಲ್ಲಿಂದ ಚಿತ್ರಣವೇ ಬದಲಾಗಿ ಬಿಡುತ್ತದೆ. ಮೊದಲೇ ನೆಂಟನ ಹಾಗೆ ಇದ್ದ ಮಗ, ಅದರ ತೀರ ಮೂರ್ತ ಸ್ವರೂಪವಾಗಿಬಿಡುತ್ತಾನೆ.ಮೊದಲು ನಗರದಿಂದ ಊರಿಗೆ ಹೋಗುವಾಗ ನೇರವಾಗಿ ತನ್ನ ಮನೆಗೆ ಹೋಗುತ್ತಿದ್ದವ ಅಲ್ಲಿಂದ ದೂರವಾದರು ಪರವಾಗಿಲ್ಲ ಹೆಂಡತಿಯೊಂದಿಗೆ ಮಾವನ ಮನೆಗೆ ಹೋಗಿ ಅಲ್ಲಿ ತಂಗಿದ್ದು, ಅವನ ಸರ್ವ ವಸ್ತುಗಳು ಮಾವನ ಮನೆಯಲ್ಲೇ ಶಾಶ್ವತ ಜಾಗವನ್ನು ನಿಗದಿಗೊಳಿಸುವಂತೆ ಮಾಡುತ್ತದೆ. ಆನಂತರ ತನ್ನ ಮನೆಗೆ ತಾಯಿಯಿದ್ದಲ್ಲಿಗೆ ಬರುತ್ತಾನೆ.ಅದೂ ವಿಧೇಯ ಮಗನಂತೆ. ಮಹಾ ತಾಯಿಯದರೋ ಅದೇ ದೊಡ್ಡ ಸೌಭಾಗ್ಯವೆಂಬಂತೆ ಮಗನನ್ನು ಪ್ರೀತಿಯಿಂದ ಕಾಣುತ್ತಲೇ. ಇತ್ತ ಮಗನ ಮನಸ್ಸು ಮಾವನ ಮನೆಯನ್ನೇ ಶಾಶ್ವತ ಎಂಬಂತೆ ತಿಳಿದುಕೊಂಡಿರುವ ವಿಷಯ ತಾಯಿಗೆ ನಗಣ್ಯವಾಗಿಬಿಡುತ್ತದೆ. ಮಗ ಬಂದಿದ್ದ ಎಂಬುದೇ ಪ್ರಾಮುಖ್ಯವಾಗಿಬಿಡುತ್ತದೆ. ಇಂತಹ ಮಹಾ ಮನಸ್ಕ ತಾಯಿಯನ್ನು ನೋಡುವ ಅಥವಾ ಮಾತನಾಡುವ ಆವಶ್ಯಕತೆ ತನ್ನ ಪತ್ನಿಗೆ ಉಂಟು ಮಾಡುವಲ್ಲಿ ಮಗ ತೀರ ವಿಫಲನಾಗಿಬಿಡುತ್ತಾನೆ. ಅವನ ಮಟ್ಟಿಗೆ ಜಗತ್ತು ಚಿಕ್ಕದಾಗಿಬಿಡುವ ಸಂಗತಿ ಅವನಿಗೆ ಗಮನಕ್ಕೆ ಬರುವುದಿಲ್ಲ. ತನ್ನ ಬಾಳಸಂಗತಿಯನ್ನು ಹೆತ್ತು ಸಲಹಿ ಕೊಟ್ಟ ಮಹಾ ತಾಯಿಯನ್ನು ನೋಡುವ ಮನಸ್ಸು ಸ್ವತಹ ಆ ಹೆಣ್ಣಿಗೆ ಬಂದರೆ ಜಗತ್ತಿನ ವೈಶಾಲ್ಯ ಅವಳ ಅರಿವಿಗೆ ಬರುತ್ತದೆ. ಆದರೆ ಅಂತಹ ಮನಸ್ಸು ಹೊಂದದೆ ಇರುವುದು ಯಾವುದರ ಸಂಕೇತ?ಯಾವುದೇ ತಾಯಿ ತಂದೆಯರು ಮಕ್ಕಳಿಂದ ಏನೂ ಬಯಸುವುದಿಲ್ಲ. ಕೇವಲ ಅವರ ಸುಖ ಸಂತೋಷವನ್ನೇ ಕಾಣುತ್ತಾರೆ. ಮಕ್ಕಳ ಮನಸ್ಸು ಒಂದಿಷ್ಟು ನೊಂದುಕೊಂಡರು ಅದರ ಪರಿಹಾರಕ್ಕೆ ತುಡಿಯುತ್ತದೆ. ಸೀರೆ , ಚಿನ್ನ ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ತಾಯಿಯಾದವಳು ಬಯಸುವುದಿಲ್ಲ. ಮಗನನ್ನು ಹಸನ್ಮುಖಿಯಾಗಿ ನೋಡುವುದೇ ಆಕೆಯ ಪರಮ ಧ್ಯೇಯವಾಗಿಬಿಡುತ್ತದೆ. ಇದು ಅರ್ಥೈಸುವ ಮನೋಭಾವ ಮಕ್ಕಳಿಗೆ ಇರುವುದೇ ಇಲ್ಲ. ಜಗತ್ತು ಚಿಕ್ಕದಾದರೂ ಮನಸ್ಸು ಚಿಕ್ಕದಾಗುವಾಗ ಹೃದಯ ವೈಶಾಲ್ಯ ಕುಗ್ಗಿದಾಗ ತಾಯಿ ತಂದೆಯರು ಗೌಣವಾಗಿಬಿಡುತ್ತಾರೆ .ಸ್ನೇಹ ಸಂಬಂಧಗಳು ನಮ್ಮ ವರ್ತನೆಯ ಸಂಕೇತ. ಪರರ ಮನಸ್ಸಿನಲ್ಲಿ ತಮ್ಮನ್ನು ಆವಾಹಿಸಿ ನೋಡಿದಾಗ ಮಾತ್ರ ಮುಕ್ತ ಸ್ನೇಹದ ಸಿಂಚನ ಅನುಭವಿಸಲು ಸಾಧ್ಯ. ಇಂದಿನ ಯಾಂತ್ರಿಕ ಬದುಕಿನಲ್ಲಿ ಈ ಸ್ನೇಹ ಸಲುಗೆ ಎಂಬುದು ಒಂದು ಪ್ರದರ್ಶನದ ಭಾವನೆಯಗುತ್ತಿದೆ. ಕೈಹಿಡಿದ ಹೆಣ್ಣು ಇದನ್ನು ತುಸುವಾದರೂ ಗಂಡನ ತಾಯಿಬಗ್ಗೆ ಯೋಚಿಸಿ ಒಂದು ಘಳಿಗೆ ತಾಯಿಯ ಕ್ಷೇಮವನ್ನು ತಿಳಿಯಲು ಸ್ಪಂದಿಸಿದರೆ ಸಾಕು ನಿಜವಾದ ಸ್ವರ್ಗ ಸುಖ ಅನುಭವಿಸಲು ಸಾಧ್ಯ.ಇದು ಏಕ ಪಕ್ಷಿಯವಾದ ಪ್ರಸ್ತಾವನೆ ಯಲ್ಲ ಹಲವು ಅಪವಾದಗಳು ಇರಬಹುದು ಆದರೆ ಅದು ತುಂಬಾ ಕ್ಷೀಣ. ಬಹುಶಃ ಅದು ಜಗತ್ತಿನ ಗಾತ್ರ ಚಿಕ್ಕದಾದ ಲಕ್ಷಣ.
ಹೆಣ್ಣು ಹೆತ್ತ ತಾಯಿ ತಂದೆಯರು ಇದರ ಬಗ್ಗೆ ಆಸಕ್ತಿ ವಹಿಸಿ ತಾವು ಹೆತ್ತ ಮಕ್ಕಳಿಗೆ ಅರುಹಬೇಕು. ಅದು ಅರುಹಿ ಕೇಳದಿದ್ದರೆ ಅದು ಯಾವುದರ ತಪ್ಪು.ಮಾವನ ಮನೆ ಕ್ಷಣಿಕವಾದರೂ ತನ್ನದೆಂಬ ಅಭಿಮಾನ ಅಲ್ಲಿ ಹಿರಿದಾಗುತ್ತದೆ. ಅತ್ತೆ ಮಾವನ ಮನ ಗೆಲ್ಲುವುದಕ್ಕೆ ಯೋಚಿಸುವ ಮಗನ ಮನಸ್ಸು ನಿಸ್ವಾರ್ಥಿ ತಾಯಿ ತಂದೆಯ ಮನಸ್ಸುಗೆಲ್ಲುವ ಯೋಚನೆಯನ್ನೇ ಮಾಡುವುದಿಲ್ಲ. ಇಂದಿನ ತಾಂತ್ರಿಕತೆಯಲ್ಲಿ ಜಗತ್ತಿನ ಯಾವ ಮೂಲೆಯೂ ಕೈಗೆ ಎಟುಕುವಂತೆ ಇದ್ದರು, ತಮ್ಮದೆಂಬ ಮನಸ್ಸಿನ ಮೂಲೆ ಕೈಗೆ ಸಿಗದೇ ದೂರವಾಗುವುದು ಎಂತಹ ದುರಂತ. ಹೃದಯ ವೈಶಾಲ್ಯತೆ ಮೆರೆದು ಜತೆಗೆ ಬಾಳುವವರ ಮನಸ್ಸು ಗೆಲ್ಲುವುದು ಕೇವಲ ಶ್ರೀಮಂತಿಕೆಯ ಕೊಡುಗೆಯಿಂದಲ್ಲ, ತಮ್ಮ ಮನ್ನಸ್ಸಿನ ವೈಶಾಲ್ಯದ ವ್ಯವಹಾರದಿಂದ. ಮನಸ್ಸನ್ನು ಗೆಲ್ಲುವುದಕ್ಕೆ ಬಳುವಳಿಯ ಕೊಡುಗೆಗಿಂತಲೂ ಮಾನಸಿಕ ಕೊಡುಗೆಯೇ ಮುಖ್ಯ. ಒಂದು ಯಂತ್ರದ ಯಾವುದೊ ದೋಷಕ್ಕೆ ಯಾವುದೊ ಸ್ಕ್ರೂ ಬೋಲ್ಟ್ ಗಟ್ಟಿ ಮಾಡುವಾಗ ಅವಶ್ಯ ಇದ್ದ ಭಾಗವನ್ನೇ ಗಟ್ಟಿ ಮಾಡುವುದು ಬಿಟ್ಟು ಇನ್ನಾವುದೋ ಭಾಗಕ್ಕೆ ಮನ ಮಾಡುವುದು ಎಸ್ಟೊಂದು ಗೊಂದಲವನ್ನು ಉಂಟು ಮಾಡುತ್ತದೆ.
ಸಹಜವಾದ ಸರಳ ಬದುಕು ಇಂದಿನ ಈ ಜಗತ್ತಿನಲ್ಲಿ ವಿರಳವಾಗಿ ಮನಸ್ಸು ಮನಸ್ಸನ್ನು ದೂರ ಮಾಡುತ್ತಿದೆ. ಜಗತ್ತು ತೀರ ಚಿಕ್ಕದಾದರೂ ಮನಸ್ಸಿನ ನಡುವಿನ ಅಂತರ ಬೆಳೆಯುತ್ತಾ ಹೋಗುತ್ತಿದೆ.
olleya baraha sir.nimmella vicharagalu nijakkoo oppale beku.
ReplyDelete