Saturday, December 25, 2021

ಪ್ರತ್ಯೇಕತೆಯ ದಳ್ಳುರಿ

             ಅಮೇರಿಕದಲ್ಲಿ ಅಥವಾ ಲಂಡನ್ ನಲ್ಲಿ ಹೋಗಿ ನಾವು ವ್ಯಾಪಾರ ವಹಿವಾಟು ಮಾಡಬಹುದೇನೋ ಆದರೆ ಮಹಾರಾಷ್ಟ್ರಕ್ಕೆ ಹೋಗಿ ಕ್ಷೇಮವಾಗಿ ಭಯವಿಲ್ಲದೆ ಅಲ್ಲಿ ವ್ಯಾಪಾರ ಮಾಡಬಹುದೇ? ಇನ್ನು ಅನುಮಾನ.  ಮಹಾರಾಷ್ಟ್ರ ಭಾರತದಲ್ಲಿದೇಯೋ ನಾವು ಭಾರತೀಯರೋ ಎಂದು ಮುಟ್ಟಿ ಮುಟ್ಟಿ ನೋಡಬೇಕಾದ ದಿನಗಳು ಹತ್ತಿರವಾಗುತ್ತಿದೆ.  ಬೆಳ್ಳಂ ಬೆಳಿಗ್ಗೆ ಹೊತ್ತಿ ಉರಿಯುವ ಬೆಳಗಾವಿಯ ಸೀಮೆ ನೋಡಿದಾಗ ಅನಿಸುವುದಿದು. ಸದಾ ಕೆಂಡದಂತೆ ಆರದ ಬೆಂಕಿ ಇದು. ಎಂ ಇ ಎಸ್ ಪುಂಡಾಟಿಕೆ ಅಂತಲೇ ಮಾಧ್ಯಮದಲ್ಲಿ ಬರುತ್ತದೆ. ಅವರು ಕನ್ನಡ ಧ್ವಜವನ್ನು ಸುಟ್ಟು ಹಾಕುತ್ತಾರೆ, ಯಾವುದೋ ಪ್ರತಿಮೆಗೆ  ಮಸಿ ಬಳಿಯುತ್ತಾರೆ, ಕನ್ನಡ ಫಲಕಗಳನ್ನು ಒಡೆದು ಹಾಕುತ್ತಾರೆ, ಸಾರಿಗೆ ಬಸ್ಸಿಗೆ ಕಲ್ಲು ಎಸೆಯುತ್ತಾರೆ, ಅದಕ್ಕೆ ಪ್ರತಿಕಾರವಾಗಿ  ಕೂಗು ಏಳುತ್ತದೆ ಬೆಳಗಾವಿ ಗಡಿ ಮುಚ್ಚಿ ಬಿಡಿ. ಸಂಘಟನೆ ನಿಷೇಧ ಮಾಡಿ.  ಯಾಕೆ ಬೆಳಗಾವಿ ಗಡಿ ಪಾಕಿಸ್ತಾನದ ಗಡಿಯಂತಾಗುತ್ತದೆ. ದೂರದ ಪಾಕಿಸ್ತಾನದ ಗಡಿಯಾದರೂ ತೆರೆದಿಡಬಹುದು, ನಮ್ಮ ಬೆಳಗಾವಿ ಗಡಿ ಮುಚ್ಚಬೇಕು. ಅರೇ ನಾವು ಎಲ್ಲಿದ್ದೇವೆ ಭಾರತದಲ್ಲೇ? ಅನುಮಾನ ಹುಟ್ಟುವುದಿಲ್ಲವೇ? ನಮ್ಮಲ್ಲಿರುವುದು ಕಾರಕ್ಕೆ ಪ್ರತಿಕಾರ.  ಇದರ ಪರಿಣಾಮ ಏನೋ ಕಲ್ಪಿಸುವುದಕ್ಕೆ ಅಸಾಧ್ಯ. 

    ಯಾರೋ ಕಿಡಿಗೇಡಿಗಳು ಪುಂಡರು. ಧ್ವಜವನ್ನು ಸುಟ್ಟು ಹಾಕಿದ್ದಾರೆ, ರಾಯಣ್ಣ ಪ್ರತಿಮೆ ಧ್ವಂಸ ಮಾಡಿದ್ದಾರೆ,  ಸರಿ ಪ್ರತಿಯಾಗಿ ಇಲ್ಲಿ ಶಿವಾಜಿ ಪ್ರತಿಮೆ ಭಗ್ನವಾಗುತ್ತದೆ. ಯಾವುದು ಇವುಗಳೆಲ್ಲ. ನಮ್ಮದೇ ದೇಹದ ಅಂಗಗಳಲ್ಲವೇ?   ಒಡ ಹುಟ್ಟಿದ ದಾಯಾದಿಗಳು ಕೈ ಕೈ ಮಿಲಾಯಿಸಿದಾಗ ಹೆತ್ತ ಅಮ್ಮನನ್ನು ನೆನೆಯುವುದಿಲ್ಲ ನಾವು.  ಹೆಚ್ಚು ತಪ್ಪು ಯಾರದ್ದು ಅಂತ ವಿಮರ್ಶಿಸುವ ಹಂತಕ್ಕೆ ಬಂದು ಬಿಟ್ಟಿದ್ದೇವೆ. ಯಾಕೆ ನಮ್ಮಲ್ಲಿ ಸೌಹಾರ್ದತೆ ಇಲ್ಲ. ಮಾತೆತ್ತಿದರೆ ನಾವು ಭಾರತೀಯರು  ಒಂದು. ಆದರೆ ಭಾಷಾ ವಿಷಯಕ್ಕೆ ಬಂದಾಗ ಎಲ್ಲವು ಮರೆತು ಹೋಗುತ್ತದೆ. ಭಾಷೆ ಎಂದರೆ ಅಷ್ಟೊಂದು ಕಠಿಣ ಯಾಕಾಗುತ್ತದೆ? 

        ಇದೀಗ ಕೂಗು ಎಂ ಇ ಎಸ್ ಬ್ಯಾನ್ ಮಾಡಿ. ಹೌದು, ಸಮಾಜ ಘಾತುಕವಾದವುಗಳನ್ನು ಕಿತ್ತೊಗೆಯಬೇಕು. ಆದರೆ ಅದೊಂದೇ ಪರಿಹಾರವೇ? ಯಾವುದೋ ಸಂಘಟನೆಯನ್ನು ನಿಷೇಧಿಸಿದಾಗ ಕೇವಲ ಹೆಸರನ್ನಷ್ಟೇ ನಾವು ನಿಷೇಧಿಸುವುದು. ಅದರಲ್ಲಿರುವ ಮಂದಿ ಹಾಗೇ ಅದೇ ಮನೋಭಾವದಲ್ಲಿರುತ್ತಾರೆ. ನಾವು ಅಪರಾಧಿಯನ್ನು ನಾಶ ಮಾಡುತ್ತೇವೆ. ಅಪರಾಧವನ್ನಲ್ಲ. ನಿಜವಾಗಿ ಆಗಬೇಕಾಗಿರುವುದು ಏನು? ನಮ್ಮ ಮಕ್ಕಳು ತಪ್ಪು ಮಾಡುತ್ತಾರೆ, ಅವರನ್ನು ಏನು ಮಾಡುವುದಕ್ಕೆ ಪ್ರಯತ್ನಿಸುತ್ತೇವೆ? ಅವರ ಅಪರಾಧವನ್ನು ತಿದ್ದುವುದಕ್ಕೆ ಪ್ರಯತ್ನಿಸುತ್ತೇವೆ. ಕುಡುಕನಾದ ತಂದೆ ರಸ್ತೆಯ ಬದಿಗೆ ಬಿದ್ಧಿರುತ್ತಾನೆ. ಆತನ ದುರಭ್ಯಾಸ ಅಂತ ಹಾಗೆ ಬಿಟ್ಟು ಬಂದರೆ ಏನಾಗುತ್ತದೆ? ಹಾಗಾದರೆ ಇಲ್ಲಿ ಬದಲಾಗಬೇಕಾಗಿರುವುದು ಮನೋಭಾವ.  ಮನಸ್ಸು ಬದಲಾಗದೆ ಸೌಹಾರ್ದ ಮೂಡದೆ ಇದ್ದರೆ,  ಸಂಘಟನೆಯನ್ನು ನಿಷೇಧ ಮಾಡಿದಾಗ ಸಮಸ್ಯೆ ಪರಿಹಾರವೇ? ಖಂಡಿತಾ ಇಲ್ಲ. ಸಂಘಟನೆಯ ನಿಷೇಧದ ಪ್ರತಿಕಾರಕ್ಕೆ ಮತ್ತೆ ಇನ್ನೇನೋ ಪ್ರತಿಭಟನೆ ವ್ಯಕ್ತವಾಗುತ್ತದೆ.  ದ್ವೇಷ ವೈಷಮ್ಯ ಮತ್ತಷ್ಟು ಹೆಚ್ಚಾಗುತ್ತದೆ. ಶತ್ರುತ್ವದ ಕಿಡಿ ಯಾವಾಗ ಉರಿದು ಬೀಳುತ್ತದೋ ಎಂಬ ಆತಂಕ ಇದ್ದೇ ಇರುತ್ತದೆ. ನಿಷೇಧ ಮಾಡಿ ನಾವು ಚಪ್ಪಾಳೆ ತಟ್ಟಿ ಜಯಕಾರ ಹಾಕಬಹುದು. ಆದರೆ ಅದು ಶಾಶ್ವತ ಎಂದು ಭ್ರಮಿಸಿ ಖುಷಿ ಪಡುತ್ತೇವೆ.  ಒಂದು ಊರಲ್ಲಿ ಕಳ್ಳರು ಇಲ್ಲದೇ ಇದ್ದರೆ ಏನಾಗಬಹುದು. ಊರಿನ ಮನೆಗೆ ಬೀಗ ಬಾಗಿಲಿನ ಅವಶ್ಯಕತೆಯೇ ಇರುವುದಿಲ್ಲ. ಇಲ್ಲಿ ಮನುಷ್ಯರ ಕಳ್ಳತನದ ಮನೋಭಾವ ತಿದ್ದುವಂತಾಗಬೇಕು. ಕಳ್ಳನನ್ನು ಹಿಡಿದು ಹಾಕಿದರೆ ಮತ್ತೊಂದು ಕಳ್ಳತನಕ್ಕೆ ಪ್ರೇರೆಪಣೆ ಪಡೆಯುತ್ತಾನೆ. ಶಿಕ್ಷೆ ಅನುಭವಿಸಿ ಬದಲಾದ ಅಪರಾಧಿಗಳು ಎಷ್ಟಿರಬಹುದು? 

    ಸಂಘಟನೆಗಳು ನಿಯಮ ಬಾಹಿರವಾಗಿ ಸಮಾಜ ಘಾತುಕವಾದಾಗ, ಸಮಾಜದ ಐಕ್ಯತೆಗೆ ಭಂಗ ತರುವಾಗ ನಿಷೇಧ ಮಾಡಲೇಬೇಕು. ಆದರೆ ಒಂದು ಸಲ ಯೋಚಿಸುವ ಈ ದೇಶದಲ್ಲಿ ಅದೆಷ್ಟು ಭಯೋತ್ಪಾದಕ ಸಂಘಟನೆಯನ್ನು ನಿಷೇಧ ಮಾಡಿಲ್ಲ?  ಆದರೆ  ಭಯೋತ್ಪಾದನೆ ಮತ್ತಷ್ಟೂ ಕ್ರೂರವಾಗಿ ಕಾಡುತ್ತಾ ಇದೆ.  ನಾವು ಒಂದು ಸಲವೋ ಅಥವಾ ಶಾಶ್ವತವಾಗಿ ಜಯ ಗಳಿಸಬಹುದು ಎಂದಿಟ್ಟುಕೊಂಡರೂ   ನಾಶವಾದ ಸೌಹರ್ದತೆ ನೆನಪಾಗುವುದಿಲ್ಲ. ಹಗೆ ಮತ್ತಷ್ಟು ರೊಚ್ಚಿಗೇಳುತ್ತದೆ. 

    ಹೀಗೆಲ್ಲ ಯೋಚಿಸಿದರೆ ವಾಸ್ತವದಲ್ಲಿ ಕನ್ನಡ ವಿರೋಧಿಗಳಾಗಬಹುದು. ನೆಲ ಜಲ ಭಾಷೆ ಎಲ್ಲವೂ ಅಭಿಮಾನ ಗೌರವದ ವಿಷಯಗಳು. ಆದರೆ ಇದೆಲ್ಲ ಪರಸ್ಪರ ಬೆಸೆಯುವ ವಿಷಯಗಳಾಗಬೇಕು. ಯಾರೋ ವಿದೇಶಿಗ ಹುಟ್ಟಿಸಿದ ಆಂಗ್ಲವನ್ನು ದಿನಾ ಅಲ್ಲಿ ಇಲ್ಲಿ ಬಳಸುವ ನಮಗೆ ಭಾಷಾಪ್ರೇಮದ ಬಗ್ಗೆ ಯಾವ ನಿಲುವಿನಲ್ಲಿ ಇರಬೇಕು ಎನ್ನುವುದೇ ಅರಿವಾಗುವುದಿಲ್ಲ. ಹೇಳಿಕೇಳಿ ನಾನು ಕೇರಳದ ಕಾಸರಗೋಡಿನವನು. ನನ್ನೂರು ಕಾಸರಗೋಡು ಎಂದಾಕ್ಷಣ ಇಲ್ಲೆಲ್ಲ ಹೇಳುತ್ತಾರೆ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ನಾನು ಹೇಳುವುದುಂಟು, ಅದು ಭಾರತದೊಳಗೆ ಇದೆಯಲ್ಲ ಸದ್ಯ ಅಷ್ಟು ಸಮಾಧಾನ ಸಾಕು. ಮನೆಯಲ್ಲಿ ಎಲ್ಲರೂ ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತೇವೆ. ಕನ್ನಡದಲ್ಲಿ ವ್ಯವಹರಿಸುತ್ತೇವೆ. ಕನ್ನಡ ಕಥೆ ಕಾವ್ಯಗಳನ್ನು ಓದಿ ಆನಂದಿಸುತ್ತೇವೆ.  ಆದರೆ ಈಗ ಬೆಳಗಾವಿಯಲ್ಲಿ ಹಚ್ಚಿದ ಕಿಚ್ಚು ಅತ್ತ ಕಾಸರಗೋಡಿಗೂ ಹಬ್ಬಿದರೆ ಬಹುಶಃ ನಾವು ನಮ್ಮೂರಿನ ಬಾಗಿಲು ಮುಚ್ಚಿ ಬಿಡಬೇಕು. ನಮ್ಮ ಒಡಹುಟ್ಟಿದವರು ಹೆಚ್ಚೇಕೆ ನಮ್ಮ ಅಪ್ಪ ಅಮ್ಮನನ್ನೂ ಮುಂದೊಂದು ದಿನ ಮರೆಯಬೇಕಾದೀತು. ಬೆಳಗಾವಿ ಗಡಿಯ ಬಿಸಿಯಲ್ಲಿ ನಮ್ಮ ಕಾಸರಗೋಡಿನ ಕನ್ನಡಿಗರು  ಹಾಗೇಯೇ ಕರ್ನಾಟಕ ಕೇರಳದ ಗಡಿ  ಕಣ್ಣಿಗೆ ಕಾಣುವುದಿಲ್ಲ. ಭಾಷಾಭಿಮಾನದಲ್ಲೂ  ತಾರತಮ್ಯ.  ಅತ್ತ ಗೋವಾದಲ್ಲೂ ನಮ್ಮ ಒಡ ಹುಟ್ಟಿದವರಿದ್ದಾರೆ, ಸಂಬಂಧಿಗಳು ಮಿತ್ರರೂ ಇದ್ದಾರೆ ಅವರನ್ನೇಲ್ಲಾ ನಾವು ಮರೆಯಬೇಕೆ? ಮುಂಬಯಿ ಮಹಾನಗರವನ್ನು ಅವಲಂಬಿಸಿ  ನಮ್ಮ ಮಂಗಳೂರು ಕಾಸರಗೋಡು ಜನಗಳು ಜೀವನ ಕಟ್ಟಿಕೊಂಡವರಿದ್ದಾರೆ . ಇನ್ನೂ ಒಂದಷ್ಟು ಬದುಕು ಸಾಗಿಸುತ್ತಿದ್ದರೆ ಅದಕ್ಕೆ ಮುಂಬಯಿಯ  ದುಡಿಮೆಯೇ ಕಾರಣ. ಯೋಚಿಸಿ ಇದನ್ನೆಲ್ಲ ಕಳಚಿಕೊಂಡು ಬದುಕುವುದು ಸುಲಭ ಸಾಧ್ಯವೇ? ಊರಲ್ಲಿ ಒಂದು ಹೊತ್ತೂ ಗಂಜಿಗೂ ತತ್ವಾರವಾದಾಗ ದುಡಿವ ಕೈಗಳಿಗೆ ದುಡಿಮೆಯನ್ನು ಮುಂಬಯಿ ನಗರ ಕೊಟ್ಟಿದೆ.  ಪುಂಡರನ್ನು ತಿದ್ದುವುದು ಕಷ್ಟ. ಕ್ಷಮಿಸುವುದು ಸಾಧ್ಯವಿಲ್ಲ. ಹಾಗಾದರೆ ಈ ದುರಂತಗಳಿಗೆ ಪರಿಹಾರ ಹೇಗೆ. ಹೋರಾಟಕ್ಕೆ ಹೋರಾಟ. 

    ಬ್ರಿಟೀಷರು   ಭಾರತಕ್ಕೆ ಬಂದಾಗ ನಮ್ಮೊಳಗಿನ ದ್ವೇಷ ವೈಷಮ್ಯವನ್ನೇ ಉಪಯೋಗಿಸಿ ತಮ್ಮ ಸಾಮ್ರಾಜ್ಯವನ್ನು ಭಾರತದಲ್ಲಿ ವಿಸ್ತರಿಸಿಕೊಂಡರು. ನಮ್ಮೊಳಗಿನ ಗುಂಪುಗಾರಿಕೆಯ ದೌರ್ಬಲ್ಯ ಬಳಸಿಕೊಂಡರು.  ಅದೊಂದು ದುರಂತ ಇತಿಹಾಸ.  ಈ ಅನುಭವದಲ್ಲೂ ನಾವು ಪಾಠ ಕಲಿಯಬೇಕು.  ಈ ಎಲ್ಲ ಮಾತುಗಳು ಮಹಾರಾಷ್ಟ್ರವನ್ನು ಪುರಸ್ಕರಿಸುವುದೋ ಮತ್ತೊಂದೋ ಅಲ್ಲ.  ಮೊದಲು ಈ ಎಲ್ಲ ಸಮಸ್ಯೆಗಳಿಗೆ ಸೌಹಾರ್ದದ ಉತ್ತರ ಕಂಡುಕೊಳ್ಳಬೇಕು. ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೋ ಮಹಾರಾಷ್ಟ್ರಕ್ಕೋ ಎಂಬುದನ್ನು ದೇಶದ ಉಚ್ಚ ನ್ಯಾಯಾಲಯವೂ ಸುಲಭದಲ್ಲಿ ತೀರ್ಮಾನಿಸುವುದಕ್ಕೆ ಸಾಧ್ಯವಾಗುವುದಿಲ್ಲ. 

    ಈ ಸಂಘರ್ಷದಲ್ಲಿ ನಾವು ಕಳೆದುಕೊಳ್ಳುವ ಅಮೂಲ್ಯ ವಿಷಯಗಳ ನೆನಪನ್ನಷ್ಟೇ ಹೇಳುವುದು. ಹೋರಾಟ ಬೇಕು. ನೆಲ ಜಲ ಭಾಷೆ ಎಲ್ಲವೂ ಅಭಿಮಾನಿಸುವಂತಹ ವಿಚಾರಗಳು. ಆದರೆ ಅದು ದ್ವೇಷ ವೈಷಮ್ಯವನ್ನು ಬೆಳೆಸಿ ಸೌಹಾರ್ದತೆಯನ್ನು ನಾಶ ಮಾಡಿದರೆ ಮಾನವೀಯತೆ ಎಂಬ ಪ್ರಶ್ನೆಗೆ ಉತ್ತರ ಎಲ್ಲಿ ಹುಡುಕಬೇಕು?   ಈ ಎಲ್ಲ ಸಮಸ್ಯೆಗಳನ್ನು ನಿಭಾಯಿಸುವ ಮಹಾ ಪುರುಷ ಇನ್ನೂ ಹುಟ್ಟದೇ ಇರುವುದು ನಮ್ಮ ದುರ್ದೈವ ಎನ್ನಬೇಕು.  ಈ ಸಂಘರ್ಷ ಕೊನೆಯಾಗಲಿ ಎಂದು ಭಗವಂತನಲ್ಲಿ ಮೊರೆಯಿಡುವುದಷ್ಟೇ ಉಳಿದಿದೆ. ಅಪರಾಧದ ನಾಶವಾಗಲಿ. ಅಪರಾಧಿಗಳು ಬದಲಾಗಲಿ. 


Friday, December 24, 2021

ಉಸಿರೇ ಶಾಂತ ಮನಸ್ಸಿನ ಪ್ರತಿನಿಧಿ

 ಈ ಭಾವಚಿತ್ರ ನೋಡಿ ಇಷ್ಟ ಸಲ್ಲಿಸದಿರಿ. ಇದು ಕೇವಲ ಸಾಂಕೇತಿಕ. 

’ನೆಗಡಿ’  ಮೂಗಿನ ಇರವನ್ನು ನೆನಪಿಸುವ ಒಂದು ಬಾಧೆ. ನೆಗಡಿ ಔಷಧಿ ತೆಗೆದುಕೊಂಡರೆ ಒಂದುವಾರ ಇರುತ್ತದೆ, ಇಲ್ಲದೇ ಇದ್ದರೆ ಏಳು ದಿನ ಬಾಧಿಸುತ್ತದೆ ಎಂಬ ಮಾತಿದೆ. ಇದು ಏಳು ದಿನ ಯಾಕೆ ಬಾಧಿಸುತ್ತದೆ ಎಂಬುದು ತೀರ ಸರಳ. ಆದರೆ ಯಾರೂ ಗಂಭೀರ ತೆಗೆದುಕೊಂಡಿಲ್ಲ. ಔಷಧಿ ಇಲ್ಲದೆಯೂ ನೆಗಡಿಯಿಂದ ಸಂರಕ್ಷಣೆ ಪಡೇಯಬಹುದು. ಅದಕ್ಕೆ ಸ್ವಲ್ಪ ಸಹನೆ ಮೈಗೂಡಿಸಿಕೊಳ್ಳಬೇಕು. 

ಸಹಜವಾಗಿ ಶೀತ ಅಥವಾ ನೆಗಡಿ ಬರುವುದು ನಮ್ಮ ದೇಹದ ಅನಾರೋಗ್ಯದ ಸೂಚನೆ. ಅದು ನೆಗಡಿಯ ಮೂಲಕವೇ ವ್ಯಕ್ತಪಡಿಸುವುದು. ಏನೋ ಒಂದು ಬಾಧೆ ದೇಹಕ್ಕೆ ಅಂಟಿಕೊಂಡಿರುತ್ತದೆ. ದೇಹ ಅದರೊಂದಿಗೆ ಹೋರಾಡುತ್ತದೆ. ನಮ್ಮ ಉಸಿರಾಟ ಏರು ಪೇರಾಗುತ್ತದೆ. ಉಸಿರಾಟ ತುಸುವಾದರೂ ಏರು ಪೇರಾದರೆ ಶರೀರಕ್ಕೆ ಸೇರುವ ಆಮ್ಲಜನಕದ ಕೊರತೆ ಉಂಟಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ನೆಗಡಿ ಆರಂಭವಾದಾಗ ನಮ್ಮ ಉಸಿರಾಟ ಮತ್ತಷ್ಟು ಅಸಹಜ ಸ್ಥಿತಿಗೆ ಹೋಗಿ ನಾವು ಉಸಿರಾಡುವುದೇ ಕಷ್ಟವಾಗುತ್ತದೆ. ಹೀಗಾಗಿ ಎರಡು ದಿನದಲ್ಲಿ ಶಮನವಾಗಬಹುದಾದ ಶೀತ ಒಂದು ವಾರಕ್ಕೆ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ಸಹನೆಯಿಂದ ನಮ್ಮ ಬಲವಂತದಿಂದ  ಉಸಿರಾಟ ಸರಿಪಡಿಸಿಕೊಂಡರೆ ಶೀತ ಏಳು ದಿನ ಯಾಕೆ ಒಂದೇ ದಿನದಲ್ಲಿ ನೆಗಡಿ ಮಾಯವಾಗುತ್ತದೆ. ಅದು ಹೇಗೆ? 


ಶೀತ ಬರುವಾಗ ಅದರ ಸೂಚನೆ ಮೊದಲೇ ಅರಿವಾಗುತ್ತದೆ. ಗಂಟಲು ಕೆರೆತ ತಲೆನೋವು ಕಣ್ಣು ಕಿವಿ ನೋವು ಹೀಗೆ ಆರಂಭದಲ್ಲೇ ಸ್ವಲ್ಪ ಜಾಗ್ರತೆ ವಹಿಸಿದರೆ ಶೀತ ಒಂದೇ ದಿನದಲ್ಲಿ ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತದೆ. ಅದೂ ಯಾವುದೇ ಔಷಧಿ ಇಲ್ಲದೆ!  ಶೀತ ಬಂದಾಗ ದಿನಕ್ಕೆ ಮೂರು ಹೊತ್ತು  ಯಾವುದೋ ಆಂಟಿ ಬಯೋಟಿಕ್ ತೆಗೆದುಕೊಳ್ಳುವುದರ ಬದಲಾಗಿ ಮೂರು ಹೋತ್ತು ಒಂದೆಡೆ ಶಾಂತವಾಗಿ ಕುಳಿತು ದೀರ್ಘ ಶ್ವಾಸವನ್ನು  ಸರಾಗವಾಗಿ ತೆಗೆದುಕೊಳ್ಳಬೇಕು. ಕಡಿಮೆ ಎಂದರೆ ಇಪ್ಪತ್ತೊಂದು ಸಲ ದೀರ್ಘವಾದ ಶ್ವಾಸ ತೆಗೆದುಕೊಂಡಾಗ ನಮ್ಮ ದೇಹಕ್ಕೆ ಹೆಚ್ಚು ಹೆಚ್ಚು ಆಮ್ಲಜನಕ ಒದಗಿ ಬರುತ್ತದೆ. ದೇಹ ಎದುರಿಸುವುದಕ್ಕೆ ಸಜ್ಜಾಗುತ್ತದೆ. ಬಂದ ರೋಗ ಏನಿದೆಯೋ ಅದು ದುರಾಗುತ್ತದೆ. ಆದಷ್ಟು ನಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ಅನಾವಶ್ಯಕ ಉದ್ವೇಗ ಉದ್ರೇಕ ನಮ್ಮ ಉಸಿರಾಟದ ಮೇಲೆ ಸೂಕ್ಷ್ಮವಾಗಿ ಪ್ರಭಾವ ಬೀರುತ್ತದೆ.  ಉಸಿರಾಟ ಏರು ಪೇರಾದಾಗ ನಮ್ಮ ದೇಹ ಅದಕ್ಕೆ ಸ್ಪಂದಿಸುತ್ತದೆ.  ಶೀ ತ ಮತ್ತೂ ಮುಂದಕ್ಕೆ ಹೋದರೆ ಜ್ವರ ಖೆಮ್ಮುಇನ್ನಿತರ ಖಾಯಿಲೆಗಳು ಆರಂಭವಾಗುತ್ತದೆ


ಹಾಗಾಗಿ ಶೀತ ಬರುತ್ತದೆ ಎಂದು ಅರಿವಾದಾಗ,  ತಾಸಿಗೊಂದು ಸಲ ದೀರ್ಘ ಶ್ವಾಸ ತೆಗೆದುಕೊಳ್ಳಬೇಕು. ಇಲ್ಲವಾದರೆ ಮೂರು ಹೊತ್ತಾದರೂ ತೆಗೆದುಕೊಳ್ಳಬೇಕು. ಆದಷ್ಟು ಮನಸ್ಸನ್ನು ಶಾಂತವಾಗಿರಿಸಿ ಕೊಳ್ಳಬೇಕು. ಅಸಹನೆ ಉದ್ರೇಕ ಕಡಿಮೆ ಮಾಡಿಕೊಳ್ಳಬೇಕು. ಹೇಳಿಕೇಳಿ ಈಗ ಚಳಿಗಾಲ. ಸಹಜವಾಗಿ ನೆಗಡಿ ಬಂದೇ ಬರುತ್ತದೆ.ಓ ಇದೊಂದು ಶೀತ ಎಂದು ಗೊಣಗಿ ನಮ್ಮದೇ ಮೂಗನ್ನು ಶಪಿಸುತ್ತೇವೆ. ಎಲ್ಲಕ್ಕಿಂತ ಮಿಗಿಲಾಗಿ ನಿತ್ಯ ಪ್ರಾಣಾಯಾಮ ಮಾಡಿದಲ್ಲಿ ನೆಗಡಿ ಜ್ವರ ಎಂದರೆ ಏನು ಎಂಬುದೆ ಮರೆತು ಹೋಗುತ್ತದೆ. ಶಾಂತ ಮನಸ್ಸು ಎಲ್ಲ ಅಶಾಂತಿಯನ್ನು ದೂರ ಮಾಡುತ್ತದೆ. ಉಸಿರೇ ಶಾಂತ ಮನಸ್ಸಿನ ಪ್ರತಿನಿಧಿ. 


Monday, December 20, 2021

ಉಪ್ಪಳ ಬಾಯಾರ್ ಬಸ್ಸುಗಳು

 

ಉಪ್ಪಳದಿಂದ ಬಾಯಾರು ನಮ್ಮ ಊರು ಎಂದು ಅಭಿಮಾನದಿಂದ ಹೇಳುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಒಂದು ಇಲ್ಲಿನ ಖಾಸಗೀ ಬಸ್ಸುಗಳು. ಬಾಲ್ಯದಲ್ಲಿ ಉಪ್ಪಳದಿಂದ ಬಾಯಾರಿಗೆ ಕೇವಲ ನಾಲ್ಕು ಬಿಳಿ ಬಣ್ಣದ ಶಂಕರ್ ವಿಟ್ಠಲ್ ಬಸ್ಸುಗಳು ಸಂಚರಿಸುತ್ತಿದ್ದವು.  ಎಲ್ಲವೂ ಒಂದೇ ಬಾಗಿಲಿನ ಬಸ್ಸುಗಳು. ಕುರ್ಚಿಪಳ್ಳ ವಿಟ್ಲ ಪುತ್ತೂರು ಮಂಗಳೂರು ಒಂದು ಕಾಸರಗೋಡು. ಒಂದು ಬಸ್ಸು ತಪ್ಪಿಸಿಕೊಂಡರೆ ಮತ್ತೆ ಬಸ್ಸು ಬರುವುದಕ್ಕೆ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ.  ಬಸ್ಸಲ್ಲಿ ಸಂಚರಿಸುವಾಗ  ಹೆಚ್ಚಾಗಿ ನಾವು ಡ್ರೈವರ್ ಪಕ್ಕದ ಉದ್ದ ಸೀಟಿನಲ್ಲೇ ಕುಳಿತುಕೊಳ್ಳುತ್ತಿದ್ದೆವು. ಇಲ್ಲಿ ಕುಳಿತರೆ  ಬಸ್ಸಿನ ಎದುರು ಆಚೆ ಈಚೆ ನೋಡುವುದಕ್ಕೆ ಮಾತ್ರವಲ್ಲದೇ ಡ್ರೈವರ್ ಬಸ್ಸು ಚಲಾಯಿಸುವುದನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ. ಜನ ಭರ್ತಿಯಾದರೆ ಒಂದೇ ಬಾಗಿಲು  ಅದು ಹಿಂದೆ ಇರುವುದರಿಂದ ಬಹಳ ಕಷ್ಟವಾಗುತ್ತಿತ್ತು. ಬಾಗಲಿ ಬಳಿ ಬರುವಾಗ ಕೆಲವೊಮ್ಮೆ ನಮ್ಮ ನಿಲ್ದಾಣ ಕಳೆದು ಮತ್ತೊಂದು ನಿಲ್ದಾಣಕ್ಕೆ ಬಸ್ಸು ಮುಟ್ಟಿಯಾಗುತ್ತಿತ್ತು.  ಶಂಕರ್ ವಿಟ್ಠಲ್ ಬಸ್ಸೆಂದರೆ  ಬಿಸ್ಕಿಟ್ ಡಬ್ಬಿಯ  ಬಣ್ಣದ  ಬಸ್ಸುಗಳು. ಆಗ ಕಾಯರ್ ಕಟ್ಟೆಯ ಶಾಲಾ ಪ್ರವಾಸಕ್ಕೆಂದು ಬಂದ ಬಣ್ಣ ಬಣ್ಣದ ಭಾರತ್ ಬಸ್ಸು ನೋಡಿ ಆಶ್ಚರ್ಯಗೊಂಡಿದ್ದೆವು.  ನಮ್ಮೂರ ರಸ್ತೆಯಲ್ಲಿ ಬಣ್ಣ ಬಣ್ಣದ ಬಸ್ ಯಾವಾಗ ಸಂಚರಿಸುತ್ತದೋ ಎಂದು  ನಿರೀಕ್ಷೆಯಲ್ಲಿದ್ದೆವು. ಸಹಜವಾಗಿ ಬಣ್ಣದ  ಬಸ್ಸುಗಳನ್ನು ನೋಡಬೇಕಿದ್ದರೆ ಉಪ್ಪಳಕ್ಕೆ ಬರಬೇಕಿತ್ತು. ಇಲ್ಲ ಮಂಗಳೂರಿಗೆ ಹೋಗಬೇಕಿತ್ತು. ಮಂಗಳೂರಿಗೆ ಹೋದರೆ ಎರಡು ಬಾಗಿಲಿನ ಅದ್ಭುತ ಬಣ್ಣ ಬಣ್ಣದ ಬಸ್ಸುಗನ್ನುಕಾಣಬಹುದಿತ್ತು.

 

ಪುತ್ತೂರು ಕುರ್ಚಿಪ್ಪಳ್ಳ (ಉಪ್ಪಳ) ನಡುವೆ ಓಡುತ್ತಿದ್ದ ಶಂಕರ್ ವಿಟ್ಠಲ್


ಶಂಕರ್ ವಿಟ್ಠಲ್ ಬಸ್ಸು  ಆಗ ಅದೊಂದು ಅದ್ಭುತ ಪ್ರಪಂಚ. ಪೀರ್ ಸಾಹೇಬರು, ಮಹಾಬಲ ಶೆಟ್ರು ಗೋಪಾಲಣ್ಣ, ಮಣಿಯಾಣಿ ಈ ಡ್ರೈವರ್ ಗಳು ಮಹಾ ಪುರುಷರಂತೆ ದೊಡ್ಡ ಹೀರೋ ನಂತೆ ಕಾಣುತ್ತಿದ್ದೆವು. ಸಾಮಾನ್ಯವಾಗಿ ಡ್ರೈವರ್ ಹೆಸರೇ ಬಸ್ಸಿಗೆ ಇರುತ್ತಿತ್ತು. ಈ ಡ್ರೈವರ್ ಗಳೋ ಬಹಳ ಸ್ನೇಹಪರರು. ಮಕ್ಕಳ ಬಗ್ಗೆ ಅಕ್ಕರೆ. ಅದರಲ್ಲೂ ಪೀರು ಸಾಹೇಬರು ಒರಟು ಮಾತನಾಡಿದರೂ ಬಹಳ ಸಜ್ಜನ ವ್ಯಕ್ತಿ. ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಬಸ್ಸು ಬರುವಾಗ ರಸ್ತೆಯ ಅಂಚಿನಲ್ಲಿದ್ದರೆ ಬಸ್ಸು ನಿಲ್ಲಿಸಿ ದೂರ ನಿಲ್ಲುವಂತೆ ಹೇಳುತ್ತಿದ್ದರು. ಈಗಿನ ಗಡಿಬಿಡಿಯ ಚಾಲಕರಿಗೆ ಇದಕ್ಕೆ ಪುರುಸೊತ್ತೆಲ್ಲಿದೆ. ಹಲವು ಸಲ ದೂರದ ವಿಟ್ಲ ಪುತ್ತೂರಲ್ಲಿ ಯಾರಿಗಾದರೂ ಏನಾದರೂ ಕೊಡಬೇಕಿದ್ದರೆ  ಅದನ್ನು ಕಟ್ಟಿ ಇವರಲ್ಲಿ ಕೊಟ್ಟರೆ ಸುರಕ್ಷಿತವಾಗಿ ಯಾರಿಗೆ ಸೇರಬೇಕೋ ಅವರಿಗೆ ಖರ್ಚಿಲ್ಲದೇ ಸೇರುತ್ತಿತ್ತು. ಈಗಲೂ ಅಲ್ಲೊಂದು ಇಲ್ಲೊಂದು ಈ ಬಗೆಯವರು ಇದ್ದಾರೆ.  ನನಗೆ ಈಗಲೂ ಉಪ್ಪಳ ಬಾಯಾರು ರಸ್ತೆಯ ತಿರುವುಗಳನ್ನು ನೋಡುವಾಗ ಗೋಪಾಲಣ್ಣ ಮಹಾಬಲ ಶೆಟ್ರು ಸಾಯಿಬರು ಬಸ್ಸು ತಿರುಗಿಸುತ್ತಿದ್ದದ್ದು ನೆನಪಿಗೆ ಬರುತ್ತದೆ. ಇವರೆಲ್ಲಾ ಒಂದೂ ಅವಗಢಕ್ಕೆ(ಆಕ್ಸಿಡೆಂಟ್) ಕಾರಣರಾದವರಲ್ಲ. ವಾಹನಗಳು ಕಡಿಮೆ ಇದ್ದರೂ ಇವರ ಚಾಲನೆಗೆ ಪ್ರಶಸ್ತಿ ಸಲ್ಲಬೇಕಿದೆ. ಪವರ್ ಸ್ಟೇರಿಂಗ್ ಇಲ್ಲದ ಆ ಹಳೆಯ ಬಸ್ಸುಗಳನ್ನು ಕಡಿದಾದ ತಿರುವು ರಸ್ತೆಯಲ್ಲಿ ಚಲಾಯಿಸುವುದು ಅಷ್ಟು ಸುಲಭವಲ್ಲ. ಬಾಲ್ಯದಲ್ಲಿ ಲಾರೀ ಮೂತಿಯ ಶಂಕರ್ ವಿಠಲ್ ಬಸ್ಸು ಸಂಚರಿಸುತ್ತಿದ್ದ ನೆನಪು ಈಗಲೂ ಇದೆ.

 

ಆಗಿನ ಕಾಲದಲ್ಲಿ ಬಸ್ಸುಗಳು ನಿಧಾನವಾಗಿ ಸಂಚರಿಸುತ್ತಿದ್ದವು ಬಸ್ ತುಂಬಿದ್ದರೆ ಉಪ್ಪಳದಿಂದ ಬಾಯಾರು ತಲಪುವುದಕ್ಕೆ ಒಂದು ತಾಸಿಗಿಂತಲೂ ಹೆಚ್ಚು ತೆಗೆದುಕೊಂಡ ಉದಾಹರಣೆಗಳು ಸಾಕಷ್ಟು ಇವೆ. ಆರು ಘಂಟೆಗೆ ಬರಬೇಕಾದ ಬಸ್ಸು ಏಳಾದರೂ ಬರುತ್ತಿರಲಿಲ್ಲ.  ನಮ್ಮ ಕಾಯರ್ ಕಟ್ಟೆಯ ಮಾಣಿಪ್ಪಾಡಿ ಗುಡ್ಡೆಯಲ್ಲಿ ನಿಂತರೆ ದೂರದ ಕನ್ಯಾನದಿಂದ ಬರುವ ಶಂಕರ್ ವಿಟ್ಟಲ್ ಬಸ್ಸು ಕಾಣುತ್ತಿತ್ತು. ಅಲ್ಲಿಂದ ಓಟ ಹಿಡಿದು ಚಪ್ಪಲಿ ಹೆಗಲಿಗೆ ಕಟ್ಟಿ ಪಂಚೆ ತಲೆಗೆ ಮುಂಡಾಸು ಸುತ್ತಿ ಬರೀ ಚಡ್ಡಿಯಲ್ಲೇ ಓಡುತ್ತಾ ಬಂದು   ಕಾಯರ್ ಕಟ್ಟೆಯಲ್ಲಿ ಬಸ್ಸು ಹತ್ತುವವರನ್ನು ಎಷ್ಟೋ ಸಲ ಕಂಡಿದ್ದೇನೆ. 

ಉಪ್ಪಳದಿಂದ ಬಾಯಾರು ವರೆಗೂ ಬಸ್ ಗೆ ಟಿಕೇಟ್ ಕೊಡುವುದಕ್ಕೆ ಅಲ್ಲಲ್ಲಿ ಏಜಂಟ್ ಗಳಿರುತ್ತಿದ್ದರು. ಉಪ್ಪಳದಲ್ಲಿ ಶೆಣೈಯವರು ಏಜಂಟ್ ಆಗಿದ್ದದ್ದು ಬಾಯಾರು ಪದವಿನಲ್ಲಿ ಗೋವಿಂದಣ್ಣ ಏಜಂಟ್ ಆಗಿದ್ದರು. ಪೈವಳಿಕೆ ಜೋಡುಕಲ್ಲು ಹೀಗೆ ಪ್ರತಿಯೊಂದು ಜಾಗದಲ್ಲೂ ಏಜಂಟ್ ಗಳು ಇರುತ್ತಿದ್ದರು.

 ಆಗ ತಿಂಗಳಿಗೊಮ್ಮೆಯೋ ವರ್ಷಕ್ಕೊಮ್ಮೆಯೋ ಬಸ್ಸಿನಲ್ಲಿ ದೂರದ ಮಂಗಳೂರಿಗೆ ಪಯಣಿಸುವುದೆಂದರೆ ಅದೆಷ್ಟು ಸಂಭ್ರಮ. ಸಂಜೆ ಹೋಗಬೇಕಿದ್ದರೆ ಬೆಳಗ್ಗೆಯೇ ಸ್ನಾನ ಮಾಡಿ ಪೌಡರ್  ಬಳಿದು ಕ್ರಾಪ್ ಮಾಡಿ  ಸಜ್ಜಾಗುತ್ತಿದ್ದೆವು.  ಆ ಸಂಭ್ರಮ ಈಗ  ಎಸಿ ಕಾರಲ್ಲಿ ಸಂಚರಿಸಿದರೂ ಸಿಗಲಾರದು. ಬಸ್ಸು ಹತ್ತಿ ಕಿಟಬಳಿಯಲ್ಲಿ ನಿಂತು ಹೊರಗೆ ಬೀಸುವ ಗಾಳಿಗೆ ಮುಖ ಒಡ್ಡಿ ಸಂಚರಿಸುತ್ತಿದ್ದರೆ ದಿಗ್ವಿಜಯದ ಅನುಭವ. ಮಳೆಬಂದರೆ ದಪ್ಪದ ಟರ್ಪಾಲು ಇಳಿಸಿದರೆ ಹೊರಗೆ ಕತ್ತಲೆಯೋ ಬೆಳಕೋ ಎಲ್ಲಿಗೆ ತಲುಪಿತೋ ಒಂದು ತಿಳಿಯುತ್ತಿರಲಿಲ್ಲ. ತೋರು ಬೆರಳಿಂದ ಟರ್ಪಾಲನ್ನು ತುಸು ಎತ್ತಿ ಇಣುಕುತ್ತಿದ್ದದ್ದು ಈಗಲೂ ನೆನಪಿಗೆ ಬರುತ್ತದೆ.

 ಹೆಚ್ಚಿನ ಎಲ್ಲ ಡ್ರೈವರ್ ಕಂಡಕ್ಟರ್ ಗಳಿಗೆ ನಮ್ಮ ಪರಿಚಯ ಇರುತ್ತಿತ್ತು. ಒಂದು ಸಲ ರಾತ್ರಿ ಕೊನೆಯ ಬಸ್ಸಿನಲ್ಲಿ ಉಪ್ಪಳದಿಂದ ಬಂದಾಗ ನಿದ್ರೆಗೆ ಜಾರಿದ್ದ ನಮ್ಮನ್ನು  ಪೈವಳಿಕೆ ತಲಪುವಾಗ ಕಂಡಕ್ಟರ್ ಎಬ್ಬಿಸಿ ಇಳಿಸಿದ್ದ ನೆನಪು ಮರೆಯುವುದಕ್ಕಿಲ್ಲ.  ಒಂದು ಸಲ ಶಂಕರ್ ವಿಟ್ಠಲ್ ಬಸ್ಸು ನಮ್ಮ ಮನೆಯಬಳಿಯೇ ಹಾಳಾಗಿ ಎರಡು ದಿನ ಇತ್ತು. ಆಗ ನಮ್ಮ ಮನೆಯಿಂದಲೇ ನೀರು ತಿಂಡಿ ತೆಗೆದುಕೊಂಡು ಕೊಟ್ಟದ್ದು ಒಂದು ಸಂಭ್ರಮ. ಕೆಟ್ಟು ನಿಂತ ಬಸ್ಸಿನಲ್ಲಿ ಕಣ್ಣು ಮುಚ್ಚಾಲೆ ಆಟ ಆಡಿದ್ದು...ಈಗ ಅಂತಹ ಗಮ್ಮತ್ತು ಯಾವ ಮಕ್ಕಳಿಗೆ ಸಿಗಬಹುದು?

  ಹಳ್ಳಿಯ ಬಸ್ಸುಗಳೆಂದರೆ ಗಡಿಯಾರದಂತೆ. ಜನಗಳು ಬೆಳಗಾಗುವುದನ್ನೂ ಹೊತ್ತು ಮಧ್ಯಾಹ್ನವಾಗುವುದನ್ನು ಬಸ್ಸು ಸಂಚಾರದಿಂದ ತಿಳಿಯುತ್ತಿದ್ದರು. ವಾಚ್ ಇಲ್ಲದೇ ಇದ್ದ ಜನಗಳಿಗೆ ಸಮಯ ತೋರಿಸಿಕೊಡುತ್ತಿದ್ದದ್ದು ಶಂಕರ್ ವಿಟ್ಠಲ್ ಬಸ್ಸುಗಳು.

 

ರಾತ್ರಿ ಉಪ್ಪಳದಿಂದ ಹೊರಡುವ ಬಸ್ಸಿನಲ್ಲಿ  ಡ್ರೈವರ್ ಕಂಡಕ್ಟರ್ ಗೆ ಹತ್ತಿರದ ಸತ್ಯನಾರಾಯಣ ಹೋಟೆಲಿನ ಹುಡುಗ ಊಟ ತಂದಿಡುತ್ತಿದ್ದ. ಈಗಿನ ಝೋಮೋಟೊ ಸ್ವೀಜಿ ಪಾರ್ಸೆಲ್ ಗಿಂತಲೂ  ಮೊದಲೇ ಉಪ್ಪಳದ ಸತ್ಯನಾರಾಯಣ ಹೋಟೆಲಿನವರು ಅಂದು ಪಾರ್ಸೆಲ್ ಮಾಡಿ ತೋರಿಸಿದ್ದರು. ಊಟವೂ ಚೆನ್ನಾಗಿ ಕಟ್ಟಿ ಕಳುಹಿಸಿಕೊಡುತ್ತಿದ್ದರು. 

ಮೂರು ನಾಲ್ಕು ಶಂಕರ್ ವಿಟ್ಠಲ್ ಬಸ್ಸು ಓಡುತ್ತಿದ್ದ ರಸ್ತೆಯಲ್ಲಿ ಬಣ್ಣ ಬಣ್ಣದ ಪೆರುವಡಿ ಮೋಟಾರ್ಸ್ ಎಂಬ ಬಸ್ಸು ಕನಿಯಾಲದಿಂದ ತಲಪಾಡಿಗೆ ಹೊಸದಾಗಿ ತನ್ನ ಓಡಾಟ ಆರಂಭಿಸಿತ್ತು. ಅದು ವರೆಗೆ ಮಂಗಳೂರಿಗೆ ಹೋಗುವಾಗ ಉಪ್ಪಳದಲ್ಲಿ ಇಳಿದು ತಲಪಾಡಿಗೆ ಬೇರೆ ಬಸ್ಸು ಹಿಡಿಯಬೇಕಿತ್ತು. ಹೀಗೆ ನಮ್ಮೂರಿಂದ ನೇರವಾಗಿ ತಲಪಾಡಿಗೆ ಬಸ್ಸು ಆರಂಭವಾಗಿದ್ದು ಬಾಲ್ಯದಲ್ಲಿ ಅದರಲ್ಲೆ ಸಂಚರಿಸುವುದೂ ಒಂದು ಸಂಭ್ರಮವಾಗಿತ್ತು. ಕ್ರಮೇಣ ಹಲವಾರು ಹೊಸ ಬಸ್ಸುಗಳು ಬಂದು, ತಾಸಿಗೊಂದು ಬಸ್ಸು ಇದ್ದ ರಸ್ತೆಯಲ್ಲಿ ಐದು ನಿಮಿಷಕ್ಕೊಂದು ಬಸ್ಸು ಸಂಚರಿಸಿ ಬಾಯಾರು ಉಪ್ಪಳ ರಸ್ತೆ ಒಂದು ನಗರ ಸಾರಿಗೆಯಂತೆ ಬದಲಾಗಿಬಿಟ್ಟಿತು.

 ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ಶಂಕರ್ ವಿಟ್ಠಲ್ ಬಸ್ಸುಗಳು ಕಾರಣಾಂತರದಿಂದ ಮಾಯವಾಗಿಬಿಟ್ಟಿತು. ರೂಟ್ ಸಹಿತ ಬಸ್ಸುಗಳನ್ನು ಬೇರೆಯವರಿಗೆ ಮಾರಾಟ ಮಾಡಲಾಯಿತು. ಬಸ್ಸುಗಳು ಎಷ್ಟೇ ಬಂದರೂ ಉಪ್ಪಳ ಬಾಯಾರು ಬಸ್ಸುಗಳು ತುಂಬಿದ ಪ್ರಯಾಣಿಕರಿಂದ ಸಂಚರಿಸುತ್ತಿತ್ತು.  ಕ್ರಮೇಣ ದೂರದ ಮಂಗಳೂರಿಗೂ ನೇರ ಬಸ್ಸು ಬಂತು. ತಿಂಗಳಿಗೊಮ್ಮೆ ಆಗುವ ಬಸ್ ಮುಷ್ಕರ, ಅದರೊಡನೆ ಹೋರಾಡುವ ಜನಸಾಮಾನ್ಯ ಅದೊಂದು ಕಾಲ ಎಂದಿದ್ದರೆ  ಕಾಲ ಬದಲಾದಂತೆ ಜನಜೀವನವೂ ಬದಲಾಗಿಬಿಟ್ಟಿತು. ಈಗ ಪ್ರತಿಮನೆಯಲ್ಲೂ ಒಂದೆರಡು ವಾಹನಗಳು ಬಂದಿವೆ. ಬಹಳಷ್ಟು ಮನೆ ಮುಂದೆ ಐಷಾರಾಮಿ ಕಾರುಗಳೂ ರಾರಾಜಿಸುತ್ತವೆ. ಜನಗಳಿಗೆ ಬಸ್ಸು ಅನಿವಾರ್ಯ ಎಂದೆನಿಸುವುದಿಲ್ಲ. ಏನಿದ್ದರು ನಮ್ಮ ಬಾಲ್ಯದ ಉಪ್ಪಳ ಬಾಯಾರು ಪಯಣ ಅದು ಮರೆಯುವುದಕ್ಕಿಲ್ಲ.

 

 

 

 

 


Monday, December 13, 2021

ಅಸ್ಪೃಶ್ಯತೆ ......

 

ಯಾವ ಸೀಟು ಖಾಲಿ ಇದೆ ಎಂದು ಬಸ್ ಹತ್ತಿದ ಕೂಡಲೇ ನೋಡುವುದಕ್ಕೆ ತೊಡಗುತ್ತೇವೆ. ಖಾಲಿ ಇದ್ದರೆ ಅಲ್ಲಿ ಬೇರೆ ಯಾರು ಕುಳಿತಿದ್ದಾರೆ ಎಂದು ಗಮನಿಸುತ್ತೇವೆ.ಅಲ್ಲಿ ಮೊದಲೇ ಕುಳಿತಿರುವ ವ್ಯಕ್ತಿ ಹೇಗಿದ್ದಾನೆ ಎಂದು ನೋಡುತ್ತೇವೆ. ನೋಡಿದಾಗ ಸ್ವಚ್ಛವಿಲ್ಲದ ಮೈಯೆಲ್ಲಾ ಕೊಳೆ ಇದ್ದುಕೊಂಡು ಮಲೀನ ವಸ್ತ್ರವೋ ಉಟ್ಟಿದ್ದರೆ, ಅಥವಾ ಮದ್ಯ ಸೇವಿಸಿ ವಾಸನೆ ಬರುತ್ತಿದ್ದರೆ, ಹೀಗೆ ನಮಗೆ ಅಸಹ್ಯವೆನಿಸುವ ಸ್ಥಿತಿಯಲ್ಲಿದ್ದರೆ ಆ ಸೀಟನ್ನು ಬಿಟ್ಟು ಮತ್ತೊಂದು ಸೀಟನ್ನು ಹಿಡಿಯುತ್ತೇವೆ. ಬೇರೆ ಯಾವ ಸೀಟು ಖಾಲಿ ಇಲ್ಲದೇ ಅದೊಂದೇ ಇದ್ದರೆ ಅನಿವಾರ್ಯ ಎನಿಸಿದರೆ ಕುಳಿತು ಬಿಡುತ್ತೇವೆ. ಅದೂ ಆ ಮಲೀನ ವ್ಯಕ್ತಿಯನ್ನು ಆದಷ್ಟು ಸ್ಪರ್ಶಿಸದೇ ಕುಳಿತು ಬಿಡುತ್ತೇವೆ. ಅದೂ ಸಾಧ್ಯವಾಗದಿದ್ದರೆ ಎದ್ದು ನಿಂತು ಬಿಡುತ್ತೇವೆ. ಯಾಕೆಂದರೆ ಇದು ವ್ಯಕ್ತಿಯ ಮೂಲಭೂತವಾದ ಸ್ವಾತಂತ್ರ್ಯ. ಹಲವು ಸಲ ಈ ಮೂಲಭೂತವಾದ ಸ್ವಾತಂತ್ರ್ಯ ಉಪಯೋಗಿಸುವುದೂ ಅಸ್ಪೃಶ್ಯತೆ ಎನಿಸಲ್ಪಟ್ಟರೆ ಹೇಗಿರಬಹುದು? ಈ ಚಿಂತನೆ ಮೇಲ್ನೋಟಕ್ಕೆ ಅಸ್ಪೃಶ್ಯತೆಯನ್ನು ಒಪ್ಪಿಕೊಳ್ಳುವಂತೆ ಅನಿಸಬಹುದು. 

ನಮಗೆ ಬೇಕಾದ ಆಹಾರ, ನಮಗೆ ಬೇಕಾದ ವ್ಯವಹಾರ , ನಮಗೆ ಬೇಕಾದ ಬಟ್ಟೆ ಬಂಗಾರ ಎಲ್ಲವನ್ನು ಬೇಕಾದಂತೆ ತೊಡುವ ಸ್ವಾತಂತ್ರ್ಯ ನಮಗಿದೆ. ಹಾಗೆ ನಮ್ಮನ್ನು ಯಾರು ಮುಟ್ಟಬಹುದು, ಯಾರು ಮುಟ್ಟಬಾರದು ಎಂಬ ನಿರ್ಧಾರವೂ ನಮ್ಮ ಮೂಲಭೂತ ಸ್ವಾತಂತ್ರ್ಯ. ನಮ್ಮ ಕೈ ಹಿಡಿದ ಹೆಂಡತಿಯಾದರೂ ಆಕೆಗೆ ಇಷ್ಟವಿಲ್ಲದೇ ಇದ್ದಾಗ ಮುಟ್ಟಿದರೆ ಸಿಡಿಮಿಡಿಗೊಳ್ಳುವುದಿಲ್ಲವೇ? ಇದು ವ್ಯಕ್ತಿ ಸ್ವಾತಂತ್ರ್ಯ. ಆದರೆ ಇಂದು ಅಸ್ಪೃಶ್ಯತೆ ಎಂಬ ವಾದ ಮೂಲಭೂತವಾದ ಸ್ವಾತಂತ್ರ್ಯದ ಪರಿಧಿಯನ್ನು ದಾಟುವಂತೆ ಭಾಸವಾಗುತ್ತದೆ. ನಮಗೆ ನಾವು ಸಸ್ಯಾಹಾರಿಗಳಾದರೆ ಅದೂ ಅಪಹಾಸ್ಯಕ್ಕೆ ಎರವಾಗುತ್ತದೆ. ಬಿಳಿ ಪಂಚೆ ಉಟ್ಟುಕೊಂಡು ಶಲ್ಯ ಹೊದ್ದುಕೊಂಡು ಮುಖಕ್ಕೆ ತಿಲಕವೋ ಭಸ್ಮವೋ ಬಳಿದುಕೊಂಡು ಬಂದರೆ ಅದೂ ಅಪಹಾಸ್ಯ ಮಾತ್ರವಲ್ಲ ನಿಯಮ ಬಾಹಿರವೂ ಆಗಿಬಿಡುತ್ತದೆ. ಯಾಕೆ ಇವುಗಳೆಲ್ಲ ಹಕ್ಕು ಬಾಧ್ಯತೆಯ ಉಲ್ಲಂಘನೆಯಾವುದಿಲ್ಲ? 

ನಮ್ಮ ಸಮ್ಮತಿ ಇಲ್ಲದೇ ನಮ್ಮನ್ನು ಸ್ಪರ್ಶಿಸುವ ಅಧಿಕಾರ ಒಬ್ಬನಿಗೂ ಇಲ್ಲ. ಜನಜಂಗುಳಿ ಇದ್ದಾಗ ನಾವು ನಮ್ಮನ್ನು ಸ್ಪರ್ಶಿಸಿದರೂ ಆಗಬಹುದು ಎಂದು ಒಪ್ಪಿಕೊಂಡು ಜನಜಂಗುಳಿಯೊಳಗೆ ನುಸುಳಬಹುದು. ಅದಿಲ್ಲದೇ ನನ್ನನ್ನು ಯಾರೂ ಮುಟ್ಟುವುದು ನನಗಿಷ್ಟವಿಲ್ಲ ಎಂದು ಏಕಾಂತದಲ್ಲಿ ಕುಳಿತರೆ ಅದು ಅಸ್ಪೃಶ್ಯತೆ ಎನಿಸಬಹುದೇ? ಹೀಗೆ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ನನಗೆ ಎಂದಲ್ಲ ಹಲವರಿಗೂ ಅದೊಂದು ರೀತಿಯ ಸ್ವಭಾವ ಪ್ರಜ್ಞೆ ಇರುತ್ತದೆ. ಗಲೀಜು ಇದ್ದರೆ ನಮ್ಮವರೇ ಆದರೂ  ನಾವು ಮುಟ್ಟುವುದಕ್ಕೆ ಹಿಂಜರಿಯುತ್ತೇವೆ. ಮಕ್ಕಳೋ ಆತ್ಮೀಯರೋ ಇನ್ನಾರೋ ಆದರೆ  ಹೋಗಿ ಸ್ನಾನ ಮಾಡಿ ಬಾ ಅಂತ ಗದರುತ್ತೇವೆ. ಯಾಕೆ ಈ ಹೇಸಿಕೆ ಎಂಬ ಅನಿಸಿಕೆ ಅಪರಾಧವಾಗುತ್ತದೆ? 

ನಮ್ಮೂರಿನ ಹಳ್ಳಿಯ ದೇವಸ್ಥಾನಗಳಲ್ಲಿ ಅರ್ಚಕ ನದಿಯಲ್ಲೋ ಕೆರೆಯಲ್ಲೋ ಸ್ನಾನ ಮಾಡಿ,  ಅದೇ ಮತ್ತೆ ಯಾರೂ ತನ್ನನ್ನು ಮುಟ್ಟದಂತೆ ಶುದ್ಧಾಚಾರದಿಂದ ಗರ್ಭಗುಡಿಯೊಳಗೆ ಹೋಗುತ್ತಾನೆ. ಆಧುನಿಕ ಜಗತ್ತಿನಲ್ಲಿ, ಸಾರ್ವಜನಿಕ ನಿಯಮದಲ್ಲಿ ಇದೂ ಅಸ್ಪೃಶ್ಯತೆ ಎನಿಸಲ್ಪಡಬಹುದು. ಒಂದು ಗಮನಿಸಬೇಕು. ಇಲ್ಲಿ ಅರ್ಚಕ ತನ್ನ ಮನೆಯವರೇ  ಬಂದರೂ ಸಹ ದೂರ ನಿಲ್ಲುವಂತೆ ಹೇಳುತ್ತಾನೆ. ಇಲ್ಲಿ ಜಾತಿಯಿಂದಲೋ ಧರ್ಮದಿಂದಲೋ ದೂರ ಆಗದೇ ಇರಬಹುದು. ಆದರೂ ಬೇರೆ ಧರ್ಮದವನೋ ಅನ್ಯನೋ ಸ್ನಾನ ಮಾಡಿ ಶುಧ್ಧದಲ್ಲಿ ಬಂದರೆ ಮುಟ್ಟಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇಲ್ಲೂ ಮೂಲಭೂತವಾದ ಸ್ವಾತಂತ್ರ್ಯ ಎಂಬುದಿದೆ. ನಾವು ಸಂಧ್ಯೆಗೋ ಧ್ಯಾನದಲ್ಲೂ ಕುಳಿತಿರಬೇಕಾದರೆ , ನಮ್ಮಲ್ಲಿ ಏಕಾಗ್ರತೆ ಮೂಡಬೇಕಾದರೆ ನಮ್ಮ ಪ್ರಭಾ ವಲಯ ಎಂಬುದೊಂದು ಇದೆ. ಅದರ ಒಳಗೆ ಇನ್ನೊಬ್ಬರು ಅತಿಕ್ರಮಿಸಬಾರದು. ಯೋಗಾಭ್ಯಾಸದಲ್ಲಿ ಈ ನಿಯಮ ಖಡ್ಡಾಯವಾಗಿ ಪಾಲಿಸಬೇಕು.  ಇಲ್ಲವಾದಲ್ಲಿ ಏಕಾಗ್ರತೆ  ಪರಿಪೂರ್ಣವಾಗಿ ಸಿದ್ಧಿಯಾಗುವುದಿಲ್ಲ. ಮನಸ್ಸು ಚಂಚಲವಾಗುತ್ತದೆ.    ಸೂಕ್ಷ್ಮವಾಗಿ ನಮ್ಮ ಏಕಾಗ್ರತೆಯನ್ನು ನಾವು ಕಳೆದುಕೊಳ್ಳುತ್ತೇವೆ ಎಂದಿದ್ದರೆ ಅದು ಭಗವಂತನಿಗೆ ಮಾಡಿದ ಅಪಚಾರವಾಗುತ್ತದೆ. ಯಾಕೆಂದರೆ ನಮ್ಮ ಭಾವದಲ್ಲಿ ಪರಮಾತ್ಮ ಎಂಬುದರಲ್ಲಿ  ಒಂದು ಪವಿತ್ರತೆ ಇರುತ್ತದೆ.  ಇದೆಲ್ಲ ಅಸ್ಪೃಶ್ಯತೆ ಎಂದು ಪರಿಗಣಿಸಿದರೆ ಮೂಲಭೂತವಾದ ಸ್ವಾತಂತ್ರ್ಯ ಎಂಬುದಕ್ಕೆ ಅರ್ಥ ಇರುವುದಿಲ್ಲ. 

ನನ್ನದೇ ಮನೆಯಲ್ಲಿ ಸ್ನಾನ ಮಾಡಿ ದೇವರ ಪೂಜೆಗೆ ಅಣಿಯಾಗುವಾಗ ಮನೆಯವರೇ  ಆದರೂ  ನನ್ನನ್ನು ಸ್ಪರ್ಶಿವುದನ್ನು ನಾನು ಬಯಸುವುದಿಲ್ಲ. ಏನೋ ಒಂದು ಮಲೀನವಾದ ಭಾವ ಮನಸ್ಸಿಗೆ ಬಂದು ಬಿಡುತ್ತದೆ. ಪ್ರತಿ ಪೂಜೆಯಲ್ಲಿ ಯಾವುದೇ ಕ್ರಿಯೆಯ ಆರಂಭದಲ್ಲಿ ಮತ್ತು ನಂತರ ಆಚಮನ ಎಂದು ಆಚರಿಸುತ್ತೇವೆ. ಪರಮಾತ್ಮನ ಸ್ಮರಣೆಯಲ್ಲಿ ಇದನ್ನು ಆಚರಿಸುವ ಉದ್ದೇಶವೆಂದರೆ, ನಮ್ಮನ್ನು ನಾವು ಪರಿಶುದ್ಧಗೊಳಿಸುವುದು. ಯಾವುದೇ ಪೂಜೆ ಆರಾಧನೆಯ ಆರಂಭವಾಗುವುದೇ ಆಚಮನ ಪ್ರಾಣಾಯಾಮದಿಂದ. ಯಾಕೆಂದರೆ ಮುಂದಿನ ಕ್ರಿಯೆಗೆ ನಮ್ಮನ್ನು ನಾವು ಶುಚಿಗೊಳಿಸುವುದು. ಸ್ನಾನಾದಿಗಳನ್ನು ಮಾಡಿ ಸ್ವಚ್ಛವಾಗಿದ್ದರೂ ಸಹ ಅಚಮನ ಪ್ರಾಣಾಯಾಮ ಮಾಡದೇ ಮತ್ತಿನ ಕ್ರಿಯೆ ಅಸಾಧುವಾಗುತ್ತದೆ. ಪರಮಾತ್ಮನೊಂದಿಗಿನ  ನಮ್ಮ ಸಂಬಂಧ ಅತ್ಯಂತ ಪವಿತ್ರವಾಗಿರಬೇಕಾರುತ್ತದೆ. ಇಲ್ಲಿಯ ಪಾವಿತ್ರ್ಯತೆ  ದೇಹದಿಂದಲೂ ಮನಸ್ಸಿನಿಂದಲೂ ಶುದ್ಧಿಯಾಗಿರಬೇಕೆಂಬುದೇ ಆಗಿರುತ್ತದೆ.  ವಾಸ್ತವದಲ್ಲಿ ಪರಮಾತ್ಮ ನಾಮ ಸ್ಮರಣೆಯಿಂದ ನಮ್ಮ ಜೀವಭಾವವನ್ನು ತೊರೆದು ಪರಿಶುದ್ದಾತ್ಮರಾಗಿ ಮೋಕ್ಷವನ್ನು ಸಾಧಿಸುವುದೇ ಮನುಷ್ಯನ ಜನನದ ಗುರಿಯಾಗಿರುತ್ತದೆ. ಹುಟ್ಟಿದ ಜೀವಿ ಪರಮಾತ್ಮನಲ್ಲಿ ಐಕ್ಯವಾಗಬೇಕಾದರೆ ಎಲ್ಲಾ ಪಾಪ ಕರ್ಮಂದಿದ ಮುಕ್ತರಾಗಿ ಶುಚಿಗೊಂಡು ಪಾವನರಾಗಿ ಪರಮಾತ್ಮನನ್ನು ಸೇರಬೇಕು. ಇದನ್ನೇ ಮೋಕ್ಷ ಎನ್ನುವುದು.   ಈ ಪರಿಶುದ್ಧೀ ಭಾವವೇ ನಮ್ಮನ್ನು ಕಲ್ಮಶವನ್ನು ಸ್ಪರ್ಶಿಸದಂತೆ ತಡೆಯುತ್ತದೆ. ನಾವು ಕಲ್ಮಶರಾಗುವುದೆಂದರೆ ಪಾಪವನ್ನು ಸುತ್ತಿಕೊಂಡಂತೆ.  ಇಲ್ಲೆಲ್ಲ ಇದು ಅಸ್ಪೃಶ್ಯತೆ ಎಂಬ ದೃಷ್ಟಿಯಿಂದ ಕಾಣಬಹುದೇ ಎಂಬ ಯೋಚನೆ ಸಹಜವಾಗಿ ಬರುತ್ತದೆ.

     ಅಸ್ಪೃಶ್ಯತೆ ಎಂಬುದು ಮೌಢ್ಯ ಕಂದಾಚಾರ ಎಂಬುದು ಸತ್ಯ. ಜಾತಿ ಧರ್ಮದಿಂದ ಇನ್ನೊಬ್ಬನನ್ನು ಅವಮಾನಿಸುವುದು ಮಹಾಪರಾಧ. ಜಾತಿ ಧರ್ಮ ಎಂಬುದು ಅದು ಪರಮಾತ್ಮನ ಕಡೆಗಿರುವ ಹಾದಿಗಳು ಎಂಬುದನ್ನು ತಿಳಿಯದಿರುವುದೇ ಮೌಢ್ಯವಾಗಿದೆ. ಜಾತಿ ನಿಂದನೆ ಪರೋಕ್ಷದಲ್ಲಿ ಪರಮಾತ್ಮ ನಿಂದನೆಯೇ ಆಗಿರುತ್ತದೆ. ಜಾತಿ ಧರ್ಮದ ಪರಮ ಗುರಿಯನ್ನು ತಿಳಿಯದೇ ಜಾತಿ ಭೇದ ಹುಟ್ಟಿಕೊಳ್ಳುತ್ತದೆ. ಜಾತಿ ಎಂಬುದು ಸರಿಯೆ,    ಅದು ಸರಿದರೆ ಮನುಷ್ಯ ಮಾತ್ರ ಉಳಿದುಕೊಳ್ಳುತ್ತಾನೆ. ಮಾವಿನ ಮರ ತನ್ನಲ್ಲಿ ಸೇಬು ಹಣ್ಣು ಏಕೆ ಆಗಲಿಲ್ಲ ಎಂದು ಚಿಂತಿಸುವುದಿಲ್ಲ. ಅಥವಾ ತನ್ನದೇ ಹಣ್ಣು ಶ್ರೇಷ್ಠ ಅಂತ ಹೇಳಿಕೊಳ್ಳುವುದಿಲ್ಲ. ಮನುಷ್ಯ ಮಾತ್ರ ಅದರ ಶ್ರೇಷ್ಠತೆಯನ್ನು ತನಗೆ ಬೇಕಾದಂತೆ ಗುರುತಿಸುತ್ತಾನೆ. ಜಾತಿ ಎಂಬುದು ಶ್ರೇಷ್ಠವಲ್ಲ. ಅದರಲ್ಲಿರುವ ತತ್ವ ಶ್ರೇಷ್ಠವಾಗಿರುತ್ತದೆ.  ಜಾತಿಯಿಂದ ಕೀಳಾಗಿ ಕಾಣುವುದು ವ್ಯಾಧಿ ಎನಿಸಿಕೊಳ್ಳುತ್ತದೆ. 

ಅಷ್ಟಾಂಗ ಯೋಗದಲ್ಲಿ ಶೌಚವೂ ಒಂದು ಪ್ರಧಾನ ನಿಯಮ. ಯೋಗವೆಂದರೆ ನಮ್ಮನ್ನು ನಾವು ಶುದ್ಧಿಗೊಳಿಸುವುದು. ನಮಗೆ ನಾವು ಪರಿಶುದ್ಧರಾಗಿರಬೇಕು. ಅದು ಕೇವಲ ದೇಹದಿಂದ ಮಾತ್ರ ಇದ್ದರೆ ಸಾಲದು. ನಮ್ಮ ಮನಸ್ಸೂ ಶುದ್ಧವಾಗಿರಬೇಕು. ಪರಿಶುದ್ಧವಾದ ಉಸಿರಿನಿಂದ ದೇಹವೂ ಶುದ್ಧವಾದರೆ, ಸಚ್ಚಿಂತನೆ, ಸದ್ಭಾವನೆ ಮುಂತಾದವುಗಳಿಂದ ಮನಸ್ಸು ಶುದ್ಧವಾಗುತ್ತದೆ. 

ಅಸ್ಪ್ರಶ್ಯತೆ, ಜತೆಯಲ್ಲಿ ತಿಂದುಂಡು ಮಲಗಿದರೆ ದೂರವಾಗುವುದಿಲ್ಲ. ಮನಸ್ಸು ಪ್ರಚೋದಿಸಲ್ಪಡಬೇಕು. ಆಗ ತಿಂದುಂಡು ಮಲಗುವುದು ಮುಖ್ಯವಾಗುವುದೇ ಇಲ್ಲ.  ಮನಸ್ಸು ಕಲ್ಮಶವಾಗಿದ್ದರೆ ಅಂತರ್ಜಾತಿಯ ವಿವಾಹದಿಂದಲೂ ಅಸ್ಪೃಶ್ಯತೆ ದೂರವಾಗುವುದಿಲ್ಲ.  ಹಿಂದೂ ಧರ್ಮದಲ್ಲಿ ವಿವಾಹ ಎಂಬುದು ಒಂದು ಸಂಸ್ಕಾರ ವಿಧಿ. ಸಂಸ್ಕಾರ ಎಂದರೆ ಪರಮಾತ್ಮನ ಬಳಿಗೆ ಹೋಗುವ ಹಾದಿ. ಆ ಹಾದಿಯಲ್ಲಿ ಸಹಧರ್ಮಿಣಿಯಾಗಿ ಬರುವವಳು ತಾನು ನಡೆಯುವ ಧರ್ಮವನ್ನು ಅರಿತು ಅದರಲ್ಲಿ ಜತೆಗೆ ಹೆಜ್ಜೆ ಇಡುವುದಕ್ಕೆ ಸಹಕರಿಸಬೇಕು 

ನಾವು ಸ್ವಚ್ಛವಾಗಿರುವ. ಆದರೆ ಮತ್ತೊಬ್ಬರ ಸ್ವಚ್ಛತೆಯನ್ನು ಅಳೆಯದೇ ಇರೋಣ. ನಮ್ಮಿಂದ ಯಾರಾದರೂ ಸ್ವಚ್ಛವಾಗಿದ್ದರೆ ಮತ್ಸರಿಸದೇ ಅವರ ಪಾಡಿಗೆ ಬಿಡೋಣ. ತಿನ್ನುವುದರಲ್ಲಿ ಉಣ್ಣುವುದರಲ್ಲಿ ತೊಡುವುದರಲ್ಲಿ ಅಥವಾ ಸ್ಪರ್ಶಿಸುವುದರಲ್ಲಿ ಮುಕ್ತವಾಗಿದ್ದರೆ ಅಸ್ಪೃಶ್ಯತೆ ದೂರವಾಗದು. ಮನಸ್ಸು ಸ್ವಚ್ಛವಾಗಿರಬೇಕು. ನಮ್ಮ ನಡೆ ನುಡಿಗಳು ಸ್ವಚ್ಛವಾಗಿ ಶುದ್ಧ ಸಂಸ್ಕಾರ ನೆಲೆ ನಿಲ್ಲಬೇಕು.

 

 

 

 

Sunday, November 21, 2021

ಹಂಪನಕಟ್ಟೆ ಹಳೆ ಬಸ್ ಸ್ಟಾಂಡ್ !!

     ಲ್ಲಾ ನಗರದಲ್ಲಿಯೂ ಈಗ ಹಳೆ ಬಸ್ ಸ್ಟಾಂಡ್ ಇದ್ದೇಇರುತ್ತದೆ. ಬೆಳೆಯುತ್ತಿರುವ ನಗರ ಇಂದು ಹಳೆಯದನ್ನಾಗಿಸಿ ಅದನ್ನು ನೆನಪಿನ ಬುಟ್ಟಿಗೆ ಸೇರಿಸಿಬಿಡುತ್ತದೆ.  ಆ ನೆನಪುಗಳನ್ನು ಮೆಲುಕಿಸುವುದೇ ಒಂದು ರೀತಿಯಲ್ಲಿ ಎದೆ ಹಾಲನ್ನು ಸ್ಮರಿಸಿದಂತೆ. ನಮ್ಮ ಜೀವನಾಡಿಯಾದ ನಮ್ಮ ಊರು ಅದು ಆ ಮಿಡಿತವನ್ನು ಇನ್ನೂ ಅನುಭಿಸುವಂತೆ ಮಾಡುತ್ತದೆ.

     ಹಂಪನಕಟ್ಟೆ..... ಮಂಗಳೂರು ಎಂದು ಅಧಿಕೃತವಾಗಿ ಕರೆಯುವುದೇ ಇದನ್ನು. ಅದೂ ಹಳೆ ಬಸ್ ಸ್ಟಾಂಡ್. ನಮ್ಮ‌ಬಾಲ್ಯದಲ್ಲಿ ಇದನ್ನು ಬೆರಗು ಕಣ್ಣಿಂದ ಕಂಡ ನೆನಪು ಈಗಲೂ ಇದೆ.ಹಲವರಲ್ಲಿ ಕೇಳಿ ಇದೇ ಬಸ್ ಸ್ಟಾಂಡ್ ನ ಹಲವು ನೆನಪುಗಳನ್ನು ಹೇಳಿಯಾರು. ಕಲವು ಸಂಭ್ತಮದ ಕಥೆಗಳಾದರೆ ಇನ್ನು‌ಕೆಲವು ಹತಾಶೆ ನೋವಿನ ಸಂಗತಿಗಳು.‌


ಹಂಪನಕಟ್ಟೆ ಹಳೆ ಬಸ್ ಸ್ಟಾಂಡ್.‌ಈಗಿನ ದೊಡ್ಡ ಸಿಗ್ನಲ್ ಬಳಿಯೇ ಇದೆ. ಮೊದಲು  ಅಲ್ಲಿರುವುದು ಹೊರಗೆಲ್ಲಾ ಕಂಡರೆ ಇಂದು ಕಟ್ಟಡಗಳು ಹುಲ್ಲಿನ ರಾಶಿಯಂತೆ ಬೆಳದು ಹಳೆಯದು ಅಲ್ಲಿ ಏನಿದೆ ಎಂದು ಹುಡುಕುವಂತಿದೆ. ಹಳೆ ಭಗ್ನಾವಶೇಷ ಕೂಡ ಇಲ್ಲ. ಈಗ ಏನಿದ್ದರೂ ಅಳಿಸದ ನೆನಪುಗಳು‌ಮಾತ್ರ. ಅಂದು  ನಡುವಿಗೆ ಒಂದು ದೊಡ್ಡ ಹಂಚಿನ ಕಟ್ಟಡ. ಸುತ್ತಲೂ ಬಗೆ ಬಗೆಯ   ಅಂಗಡಿಗಳು. ಖಾಸಗೀ ಬಸ್ ಕಂಡಕ್ಟರ್ ಏಜಂಟ್ ನವರ ಮೇಜು ಕುರ್ಚಿಗಳು, ಬದಿಯಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳುವ ತಿಟ್ಟೆಗಳು.   ಅಲ್ಲೊಂದು ಬಾವಿಯೂ ಇತ್ತು. ಅಲ್ಲಿನವರ ತೃಷೆ ಬಾಯಾರಿಕೆಯನ್ನು ಪರಿಹರಿಸುತ್ತಾ ಕೊನೆಗೊಮ್ಮೆ ವಯೋವೃದ್ಧ ತಾಯಿಯ ಎದೆಯಂತೆ ಎಲ್ಲಾ ಬತ್ತಿಸಿ ಬರಾಡಗಿ ಈಗ ನೆನಪೂ ಇಲ್ಲದಂತೆ ಅವಶೇಷವೂ ಮಾಯವಾಗಿದೆ.

ಕೆ ಎಸ್ ರಾವ್ ರಸ್ತೆಯಿಂದ ಒಳಬಂದ  ಖಾಸಗಿ  ಬಸ್ಸುಗಳು ಕಟ್ಟಡಕ್ಕೆ ಸುತ್ತು ಹೊಡೆದು ಉಡುಪಿ ಕುಂದಾಪುರ, ಕಾರ್ಕಳ ಕಾಸರಗೋಡು  ಕಡೆಗೆ ಹೋಗುವುದಕ್ಕೆ ಅಲ್ಲಲ್ಲಿ ನಿಲ್ಲುತ್ತಿದ್ದವು. ಬಹಳ ಹಿಂದೆ ಕೆ ಎಸ್ ಆರ್ ಟಿ ಸಿ ಬಸ್ಸುಗಳೂ ಸಹ ಇಲ್ಲೇ ಬಂದು ನಿಲ್ಲುತ್ತಿತ್ತಿದ್ದವು ಪುತ್ತೂರು ಧರ್ಮಸ್ಥಳ ಮುಂತಾದ ಕಡೆಗಲ್ಲದೆ ಹಾಸನ ಬೆಂಗಳೂರಿಗೂ ಇಲ್ಲಿಂದಲೇ ಹೊರಡುತ್ತಿತ್ತು.  1980 ರಲ್ಲಿ ಬೆಂಗಳೂರಿಗೆ ನಾನು ನಲ್ವತ್ತು ರೂಪಾಯಿ ಟಿಕೇಟ್ ಮುಂಗಡ ಖರೀದಿಸಿ ರಾತ್ರಿಯ ಬಸ್ಸಿಗೆ ಇಲ್ಲಿಂದಲೇ ಹತ್ತಿದ್ದೆ! ಆನಂತರ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ ಬಿಜೈಯ ಕಾವೂರು ಕ್ರಾಸ್ ರಸ್ತೆಯ ಗದ್ದೆ ಬಯಲಿಗೆ ವರ್ಗಾವಣೆಯಾಯಿತು.  ನಮ್ಮ ಹಂಪನಕಟ್ಟೆ ಇಕ್ಕಟ್ಟು ಅಂತ ಅನ್ನಿಸಲಿಕ್ಕೆ ತೊಡಗಿದ್ದು ಆವಾಗ. ಆದರೂ ಕೆ ಎಸ್ ರಾವ್ ರಸ್ತೆಯಿಂದ ಒಳಗೆ ಬಂದು ಬಸ್ ಸ್ಟಾಂಡ್ ಗೆ ಒಂದು ಸುತ್ತು ಬಂದು  ಆ ಇಕ್ಕಟ್ಟಿನಲ್ಲಿ ನುಗ್ಗಿ ಜನ ಹತ್ತಿಸಿಕೊಳ್ಳುತ್ತಿದ್ದ ಖಾಸಗಿ ಬಸ್ಸುಗಳ ಹೊಂದಾಣಿಕೆಯೇ ಬೇರೆ.  ಅದರ ನಡುವೆ ಆರೆಂಜ್ ಮುಸಂಬಿ ಮಾರಾಟ ಮಾಡುವ ಮಾರಾಟಗಾರರು ಬೆದ್ರ ಕಾರ್ಕಳ ಕೂಗಿ ಕರೆವ ಏಜಂಟ್ ಗಳು ಅಬ್ಬ ಬಾಲ್ಯದಲ್ಲಿ ಹಂಪನಕಟ್ಟೆಯಷ್ಟು ದೊಡ್ಡ ನಗರ ನೋಡಿಯೇ ತಿಳಿಯದು. 

        ಬಸ್ ಸ್ಟಾಂಡ್ ಕಟ್ಟಡದಲ್ಲಿದ್ದ ನಿತ್ಯಾನಂದ ಗ್ರಂಥಾಲಯ, ಬಹುಶಃ ನಾನು ಕಂಡ ವೈವಿಧ್ಯಮಯ ಪುಸ್ತಕ ಪೇಪರ್ ಅಂಗಡಿ ಎಂದರೆ ಇದುವೆ. ಇರುವ ಒಂದಿಷ್ಟು ಜಾಗದಲ್ಲಿ ಅಲ್ಲಿ ಸಿಗದ ಪುಸ್ತವೇ ಇರಲಿಲ್ಲ. ಭಜನೆ ಪುಸ್ತಕ ನಾಟಕ ಪುಸ್ತಕ ಚಿತ್ರಗೀತೆ ಹಲವು ಭಾಷೆಯ ಪತ್ರಿಕೆಗಳು ಹೀಗೆ ವೈವಿಧ್ಯಮಯ ಜಗತ್ತು ಆರಡಿ ಜಾಗದ ಜಗಲಿಯಲ್ಲಿತ್ತು.  ಕೆಲವುದರ ಹಿಂದೆ ನಿತ್ಯಾನಂದ ಗ್ರಂಥಾಲಯದ ಹೆಸರು ಇರುತ್ತಿತ್ತು. ಬಹುಶಃ ಈಗಲು ಹತ್ತಿರದ ಇನ್ನೊಂದು ಕಟ್ಟಡದಲ್ಲಿದೆ.  ಲಾಟರಿ ಅಂಗಡಿ ಹಣ್ಣಿನ ಅಂಗಡಿ ಒಂದೆಡೆಯಾದರೆ ಪ್ರಸಿದ್ಧವಾದ ಬಸ್ ಸ್ಟಾಂಡ್ ಕ್ಯಾಂಟೀನ್, ನಂತರ ಇದು ಮುಚ್ಚಿ ಹೋಗಿ ಆನಂತರ ಚಿಕ್ಕ ಕ್ಯಾಂಟೀನ್ ತೆರೆದಿತ್ತು. ಅಲ್ಲಿ ಸಾಯಂಕಾಲ ಸಿಗುತ್ತಿದ್ದ ರವಾ ದೋಸೆ ಪುಂಡಿಗಸಿಯ ಘಮ್ಮೆನ್ನುವ ಪರಿಮಳ ಬಸ್ಸಿನಲ್ಲಿದ್ದವರನ್ನು ಕೆಳಗಿಳಿವಂತೆ ಮಾಡುತ್ತಿದ್ದವು.  ದೂರದೂರಿಗೆ ಇಲ್ಲಿ ಕಾದು ಕುಳಿತು ಕತ್ತು ಉದ್ದ ಮಾಡಿ ಬರುವ ಬಸ್ಸನ್ನು ನೋಡುತ್ತಿದ್ದ ನೆನಪು. ಬಸ್ ಬಂದ ಕೂಡಲೆ ಸೀಟು ಹಿಡಿವ ಗಡಿಬಿಡಿ....ಬಸ್ಸು ಸಮಯವಾದಕೂಡಲೇ ಗದರಿ ಡಬ ಡಬ ಬಡಿದು ಹೊರಡಿಸುತ್ತಿದ್ದ ಎಜಂಟ್ ಗಳು ಕೆಲವರಾದರೆ ಲಗೇಜ್ ಸಹಿತ ಪ್ರಯಾಣಿಕರನ್ನು ಅನಾಮತ್ತಾಗಿ ಎತ್ತಿ ಹಾಕುವಂತೆ ಹೊರಡುವ ಬಸ್ಸ್ ಗೆ ತುರುಕುವ ಕಂಡಕ್ಟರ್ ಗಳು, ಛೇ ಹಂಪನ್ ಕಟ್ಟ ಒಂದು ಅದ್ಭುತ ರಮ್ಯ ಲೋಕ. 


    ಕಾಲ ಸರಿದಂತೆ ದೂರದೂರಿನಿಂದ ಹೆಚ್ಚು ಹೆಚ್ಚು ಬಸ್ಸುಗಳು ಬರುತ್ತಿದ್ದವು. ಬೇರೆಲ್ಲೂ ಕಾಣ ಸಿಗದ ಖಾಸಗೀ ಬಸ್ಸುಗಳು ಸಮಯ ಪಾಲನೆಯಲ್ಲಿ ಸೂರ್ಯನನ್ನೇ ಮೀರಿಸಿ ಚಟುವಟಿಕೆಯಲ್ಲಿರುತ್ತಿತ್ತು. ಒಂದೆರಡು ನಿಮಿಷವನ್ನೂ ಸೆಕೆಂಡು ಮುಳ್ಳಿನಲ್ಲಿ ಲೆಕ್ಕ ಹಾಕುವ ಕಂಡಕ್ಟರ್ ಗಳು ಬೇರೆಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ನಮ್ಮೂರು ಪೈವಳಿಕೆಯಿಂದ ಇಲ್ಲಿಗೆ ಬರಬೇಕೆಂದರೆ ಮೊದಲು ಮೂರು ಬಸ್ ಬದಲಾವಣೆ ಮಾಡಬೇಕಿತ್ತು. ಪೈವಳಿಕೆಯಿಂದ ಉಪ್ಪಳ, ಉಪ್ಪಳದಿಂದ ತಲಪಾಡಿ, ತಲಪಾಡಿಯಿಂದ ಮಂಗಳೂರು. ಕ್ರಮೇಣ ನಮ್ಮ ಊರು ಬೆಳೆಯಿತು ನೇರ ಬಸ್ಸ್ ಆಯಿತು. ಕಂದು ಬಣ್ಣದ ಜನಪ್ರಿಯ ಬಸ್.......ವಿನಯದುರ್ಗ ಬಸ್, ಮನೆಯ ಬಳಿಯಿಂದ ಹತ್ತಿ ಕುಳಿತರೆ ಇದೇ ಹಂಪನ್ ಕಟ್ಟೆಯಲ್ಲಿ ಇಳಿಯುತ್ತಿದ್ದೆವು. ಜನಪ್ರಿಯ ಬಸ್ ನಲ್ಲಿ ದೇಖಾ ಹೈ ಪೆಹೆಲೀ ಬಾರ್ ಅಂತ ಸಾಜನ್ ಸಿನಿಮಾಹಾಡು ದೊಡ್ಡದಾಗಿ ಹಾಕಿ ನೆತ್ರಾವತಿ ಸಂಕದ ಮೇಲೆ ಹೋಗುತ್ತಿದ್ದ ಮಜವೇ ಬೇಎ. ಹೀಗೆ ಬಾಯಾರು ಪೈವಳಿಕೆ  ಎಂಬ ಊರಿನ ಹೆಸರು ನಮ್ಮ ಹಂಪನ ಕಟ್ಟೆಯಲ್ಲಿ ಮೊಳಗುವುದಕ್ಕೆ ಆರಂಭವಾಯಿತು. ಕೊಪ್ಪ ಶ್ರಿಂಗೇರಿ ಶಿವಮೊಗ್ಗಕ್ಕೆ ರಾತ್ರಿ ಬಸ್ ನಲ್ಲಿ ಸಂಚರಿಸಬೇಕಾದರೆ ರಾತ್ರಿ ಅಲ್ಲಿ ಕಾಯುತ್ತಿದ್ದ ದಿನಗಳು ಆ ಸಂಭ್ರಮದ ನೆನಪುಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಬಾಲ್ಯದಿಂದಲೇ ಲೋಕಜ್ಞಾನವನ್ನು ಒದಗಿಸಿದ ಹಂಪನಕಟ್ಟೆ ನಿಲ್ದಾಣ ಈಗ ಒಂದರ್ಥದಲ್ಲಿ ಪಳೆಯುಳಿಕೆಯಾಗುತ್ತಿದೆ.  ಈಗಲೂ ಇಲ್ಲಿ ಸಂಚರಿಸುವಾಗ ನಾವು ಓಡಾಡಿದ ಜಾಗ ನೆನಪಾಗದೇ ಇರುವುದಿಲ್ಲ. ಹಾಗೆ ಒಂದರೆ ಘಳಿಗೆ ಅಲ್ಲಿ ಸುತ್ತಾಡಿ ನೆನಪುಗಳನ್ನು ಮೆಲುಕು ಹಾಕುವುದರಲ್ಲಿ ಏನೋ ಒಂದು ಸುಖವಿದೆ.  

    ಐದು ದಶಕದ ಹಿಂದಿನ ಹಂಪನ ಕಟ್ಟೆ ಇಂದು ಹಳೆಯದಾಗಿ ಇನ್ನೇನೊ ಹೊಸತನ್ನು ತುಂಬುವ ಆತುರದಲ್ಲಿದೆ. ಹೊಸತಾಗಿ ಮೂರಂತಸ್ತಿನ  ವಾಹನ ತಂಗುದಾಣ ಬರುವುದಕ್ಕಿದೆ. ಅಲ್ಲಿಗೆ ಹಳೆಯ ಬಸ್ ನಿಲ್ದಾಣ ಹೆಸರು ಸಂಪೂರ್ಣ ಮಾಯವಾಗಲಿದೆ. ಎನ್ನೇನೋ ಹಳೆಯದಾಗುವುದಕ್ಕೆ ಹೊಸದರ ಆಗಮನವಾಗುತ್ತದೆ.   ಏನಿದ್ದರೂ ನಮ್ಮ ಹಂಪನಕಟ್ಟೆ ನಮಗದು ಅಭಿಮಾನ. ಆ ನೆನಪುಗಳು ಮಧುರ.



Wednesday, November 3, 2021

ಉಪ್ಪಳದ ಸಫಾಯರ್ ಚಿತ್ರ ಮಂದಿರ ಒಂದು ನೆನಪು

     ಉಪ್ಪಳ, ಅತ್ತ ನಗರವೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಒಂದು ಊರು. ತನ್ನ ಮೈಮೇಲೆ ರಾಷ್ಟ್ರೀಯ ಹೆದ್ದಾರಿಯನ್ನು ಹೊದ್ದು ಮಲಗಿದ ಉಪ್ಪಳ,  ಆ ಹೆದ್ದಾರಿ ಗಡಿಬಿಡಿಯನ್ನು ಆವಾಹಿಸಿಕೊಂಡು ಸದಾ ಜಾಗೃತವಾಗಿರುತ್ತದೆ. ಬಿಡುವಿಲ್ಲದೇ ಓಡುವ ವಾಹನಗಳು ಅತ್ತ ಇತ್ತ ಹರಿದಾಡುವ ವಿವಿಧ ಜನರು ಗಿಜಿಗುಟ್ಟುವ ಅಲ್ಲದಿದ್ದರೂ ನಮ್ಮ ಉಪ್ಪಳ ನಡುರಾತ್ರಿಯಲ್ಲೂ ಎಚ್ಚರವಿರುತ್ತದೆ. ನನ್ನ ಬಾಲ್ಯದಿಂದಲೂ ಸುಮಾರು ನಲ್ವತ್ತೈದೂ ವರ್ಷಗಳಿಂದಲೂ ಉಪ್ಪಳವನ್ನು ನೋಡುತ್ತೇನೆ. ಪ್ರತಿ ಹಂತದಲ್ಲೂ ಬದಲಾಗುವು ಉಪ್ಪಳ ಒಂದು ಸೋಜಿಗದ ತಾಣವಾಗಿದೆ. ಜೀವನ ಬಹು ಪಾಲು ಘಟನೆಗಳಿಗೆ ಸುಖ ದುಃಖ ಕಷ್ಟಗಳಿಗೆ ಉಪ್ಪಳ ಸಾಕ್ಷಿಯಾಗಿದೆ. 

ಎಪ್ಪತ್ತರ ದಶಕದಲ್ಲಿ ಉಪ್ಪಳದಲ್ಲಿ ಬೀದಿ ದೀಪಗಳು ಇಲ್ಲವೇ ಇಲ್ಲ ಎನ್ನಬಹುದು. ಬಹು ಪಾಲು ಅಂಗಡಿಗಳು ರಾತ್ರಿಯಾಗುತ್ತಿದ್ದಂತೆ ಪೆಟ್ರೋ ಮೇಕ್ಸ್ (ಗ್ಯಾಸ್ ಲೈಟ್) ಉರಿಸುತ್ತಿದ್ದವು. ಕೆಲವು ಬೆರಳೆಣಿಕೆಯ ಅಂಗಡಿಗಳಲ್ಲಿ ಝಗಮಗಿಸುವ ಲೈಟುಗಳಿದ್ದವು. ಇವುಗಳ ಬೆಳಕೇ ಸಾಕಷ್ಟು ಉಪ್ಪಳವನ್ನು ಅಲ್ಲಿ ಇಲ್ಲಿ ಬೆಳಗಿಸುತ್ತಿದ್ದವು. ಮಿಕ್ಕ ಜಾಗದಲ್ಲಿ ಉಪ್ಪಳ ಕತ್ತಲೆ ಕತ್ತಲೆ. ಗ್ಯಾಸ್ ಲೈಟ್ ನ್ನು ಬಾಡಿಗೆಗೆ ಕೊಡುವ ಪೊಡಿಚ್ಚನ ಅಂಗಡಿ, ಅದನ್ನುರಿಪೇರಿ ಮಾಡುವ ಮೂಕುಚಟ್ಟೆ (ಕ್ಷಮಿಸಿ ಹೆಸರು ಮರೆತು ಹೋಗಿದೆ)ಯವನ ಅಂಗಡಿ ಹಳೆಯ ಉಪ್ಪಳ ಮರೆತು ಹೋಗುವುದಕ್ಕಿಲ್ಲ. 

ಎಪ್ಪತ್ತರ ದಶಕದಲ್ಲಿ ಉಪ್ಪಳದ ಕೇಂದ್ರ ಭಾಗದಲ್ಲಿ ಒಂದು ಟಾಕೀಸ್ ಇತ್ತು. ನನಗೆ ಇನ್ನೂ ನೆನಪಿದೆ ಅದು ಆರಂಭವಾದ ಘಳಿಗೆ. ವಾರಕ್ಕೊಂದು ಸಿನಿಮ ಕನ್ನಡ ಹಿಂದಿ ಮಲಯಾಳಂ ತಮಿಳು ಹೆಚ್ಚೇಕೆ ತುಳು ಸಿನಿಮಾ ಕೂಡ ಅಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಉಪ್ಪಳದ ಕೇಂದ್ರಬಾಗದಲ್ಲಿ ಸ್ವಲ್ಪಒಳಗೆ ಈ ಥಿಯೇಟರ್ ಇತ್ತು. ಇದರ ಹೆಸರು ಸಫಾಯರ್ ಟಾಕೀಸ್. ಮುಂದಿನ ಸಾಲಿನಲ್ಲಿ ಮರದ ಬೆಂಚು ಸ್ವಲ್ಪ ಹಿಂದೆ ಬಂದರೆ ಕೆಲವು ಸ್ಟೀಲಿನ ಮತ್ತು ಮರದ ಕುರ್ಚಿಗಳು. ಫ್ಯಾನ್ ಗಳು ಇದ್ದ ನೆನಪಿಲ್ಲ.ಯಾಕೆಂದರೆ ಸಿನಿಮಾ ಶುರುವಾಗಬೇಕಿದ್ದರೆ ನಾವು ಬೆವರಿ ಒದ್ದೆಯಾಗುತ್ತಿದ್ದೆವು. ಕಿಕ್ಕಿರಿದು ಜನ ಸೇರಿದರೆ ಹತ್ತಿರದ ಹೋಟೇಲಿನಿಂದ ಬೆಂಚು ಕುರ್ಚಿ ತಂದು ಮಧ್ಯೆ ಇಡುತ್ತಿದ್ದರು. 

ರಾಜೆಶ್ ಖನ್ನಾ ನಟಿಸಿದ ಅಪ್ನಾ ದೇಶ್ ಎಂಬ ಹಿಂದಿ ಸಿನಿಮಾ ನಾನು ಮೊದಲು ನೋಡಿದ ಸಿನಿಮಾ ಅದನ್ನು ಇಲ್ಲೇ ನೋಡಿದ್ದು. ಆನಂತರ ಬಡವರ ಬಂಧು ಗಿರಿಕನ್ಯೆ, ದಾರಿ ತಪ್ಪಿದ ಮಗ, ಅದೃಷ್ಟವೋ ಅದೃಷ್ಟ, ಮುಯ್ಯಿಗೆ ಮುಯ್ಯಿ, ಕುದುರೆ ಮುಖ, ಬೊಳ್ಳಿದೋಟ ಈ ಸಿನಿಮಾಗಳನ್ನು ನೋಡಿದ ನೆನಪು ಈಗಲೂ ಇದೆ. ಆ ಕಾಲದಲ್ಲಿ ಜನುಮದಲ್ಲಿ ಸಿನಿಮಾ ನೋಡಿರದ ಮಂದಿಗೆ ಸಿನಿಮಾ ತೋರಿಸಿದ ಹೆಗ್ಗಳಿಕೆ ಈ ಸಿನಿಮಾ ಮಂದಿರಕ್ಕೆ ಇದೆ. ಮೊದಲ ಸಿನಿಮಾ ನೋಡಿದಾಗ  ಬೆರಗು ಕಣ್ಣಿಂದ ನೋಡಿದ್ದೆ. ತೆರೆಯ ಹಿಂದೇ ಯಾರಾದರೂ ಇದ್ದಾರೋ ಅಂತ ಸಿನಿಮಾ ಟಾಕಿಸಿ ಹಿಂದೆ ಹೋಗಿ ನೋಡಿದ್ದು ಈಗಲೂ ನೆನಪಿದೆ.  ಮೊದಲು ಕೇವಲ ಮ್ಯಾಟನಿ ಮಾತ್ರವೇ ಈ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳುತಿತ್ತು.  ಈ ಟಾಕೀಸ್ ನಲ್ಲಿ ಶೌಚಾಲಯ ಇದ್ದ ನೆನಪಿಲ್ಲ. ವಿರಾಮದಲ್ಲಿ ಪಕ್ಕದ ವಿಶಾಲವಾದ ಖಾಲಿಜಾಗವೆ ಟಾಯ್ಲಟ್ ಆಗಿ ಬಳಕೆಯಾಗುತ್ತಿತ್ತು! ಇನ್ನು ಟಾಕೀಸಿ ಒಳಗಡೆ ತಿಂಡಿ ಸಿಗುತ್ತಿರಲಿಲ್ಲ. ಪಕ್ಕದ ಅಂಗಡಿಯಲ್ಲಿ ಸಿಗುತ್ತಿದ್ದ ಪುರಿಕಡ್ಲೆಯೇ ವಿರಾಮದ ತಿಂಡಿ. 

ಮಧ್ಯಾನ ಒಂದು ಘಂಟೆಯ ಸಾಯಿಬರ ಶಂಕರ್ ವಿಠಲ್ ಬಸ್ಸಿಗೆ ಹೊರಟರೆ ಅದು ಸಿನೆಮಕ್ಕೆ ಹೊರಟದ್ದು ಅಂತ ಊಹೆ. ಬಸ್ಸಿನಲ್ಲಿ ಡ್ರೈವರ್ ಆದಿಯಾಗಿ ಕೇಳುತ್ತಿದ್ದರು, "ಸಿನೇಮಕ್ಕೆ ಹೋಗುದಾ?" ಇಷ್ಟಾದರೂ ಸಿನೇಮಕ್ಕೆ ಹೋಗುವುದೆಂದರೆ ಒಂದು ರೀತಿಯ ಅಪರಾಧಿ ಭಾವನೆ ಜನರಲ್ಲಿ ಇತ್ತು. ಹಾಗಾಗಿ ಕೆಲವರು ತಲೆ ಮರೆಸಿಕೊಂಡು ಸಿನಿಮಾಕ್ಕೆ ಹೋಗುತ್ತಿದ್ದುದು ಸರ್ವೆ ಸಾಮಾನ್ಯ. ಸಾಹೇಬರ ಬಸ್ಸಿನಿಂದ ಇಳಿದು ಲಗುಬಗೆಯಲ್ಲಿ ಓಡಿಕೊಂಡು ಹೋಗುತ್ತಾ ಪಕ್ಕದ ಅಂಗಡಿಯಿಂದ ಹುರಿಗಡಲೆ ಕಟ್ಟಿಸಿ ತೆಗೆದುಕೊಂಡು ಹೋಗುವುದರಲ್ಲಿದ್ದ ಆ ಸಂಭ್ರಮ ಮತ್ತೆ ಬದುಕಲ್ಲಿ ಕಾಣಲಿಲ್ಲ. 

ಕೆಲವು ವರ್ಷ ಮಾತ್ರ ಸಿನಿಮಾ ತೋರಿಸುತ್ತಿದ್ದ ಸಫಾಯರ್ ಚಿತ್ರ ಮಂದಿರ ಮತ್ತೆ ತನ್ನ ಪ್ರದರ್ಶನವನ್ನು ನಿಲ್ಲಿಸಿತ್ತು. ಸುರತ್ಕಲ್ ಮೇಳದ ರಾಣಿ ರತ್ನಾವಳಿ ಎಂಬ ಯಕ್ಷಗಾನ ಬಯಲಾಟವನ್ನು ಮಳೆಗಾಲದಲ್ಲಿ ಇಲ್ಲಿ ನೋಡಿದ ನೆನಪಿದೆ.  ಮಳೆಗಾಲದಲ್ಲಿ ಯಕ್ಷಗಾನ ನೋಡುವುದೆಂದರೆ ಅದೊಂದು ಆಶ್ಚರ್ಯದ ಸಂಗತಿಯಾಗಿತ್ತು. ಅದರೇ ಕ್ರಮೇಣ ಟಾಕೀಸ್ ನಲ್ಲಿ ಸಿನಿಮಾ ಪ್ರದರ್ಶನ ನಿಂತಿತು. ಆದರೂ ಆ ಕಟ್ಟಡ ಬಹಳ ಸಮಯದವರೆಗೂ ಇತ್ತು ಮತ್ತು ಆ ನೆನಪನ್ನು ಕೊಡುತ್ತಿತ್ತು. ಈಗ ಅಲ್ಲಿ ಕಟ್ಟಡವೂ  ಇಲ್ಲ. ಹೀಗೆ ಗತಕಾಲದ ಉಪ್ಪಳದ ಮೊದಲ ಚಿತ್ರಮಂದಿರದ ನೆನಪು ಇನ್ನೂ ಕೆಲವರಲ್ಲಿಇದ್ದರೂ ಇರಬಹುದು.

ಅದರಂತೆ ಮಂಜೇಶ್ವರದಲ್ಲಿ ಒಂದು ಟಾಕೀಸ್ ಇತ್ತು. ಎಸ್ ಎ ಟಿ ಚಿತ್ರಮಂದಿರ. ಆನಂತರ ಹೊಸಂಡಿಯಿಂದ ಸುಂಕದಕಟ್ಟೆಗೆ ಹೋಗುವ ಮಾರ್ಗದಲ್ಲಿ ಹಿಲ್ ಸೈಡ್ ಚಿತ್ರ ಮಂದಿರ ತೆರೆಯಿತು. ಇದು ಬಹಳ ಕಾಲದವರೆಗೆ ಸಿನಿಮಾ ಪ್ರದರ್ಶನ ನೀಡುತ್ತಿತ್ತು. ಮುಳಿ ಹುಲ್ಲಿನ ಛಾವಣಿಯ ಈ ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವ ಮೊದಲು ಮೈಕ್ ನಲ್ಲಿ ಗಟ್ಟಿಯಾಗಿ ಹಾಡು ಹಾಕುತ್ತಿದ್ದರು. ಇಲ್ಲಿ ಸಿನಿಮಾ ಇದ್ದರೆ ಸುತ್ತಮುತ್ತಲಿನ ಬಹುದೂರದವರೆಗು ಸಿನಿಮಾ ಡೈಲಾಗ್ ಫೈಟಿಂಗ್ ಸದ್ದು ಕೇಳಿಬರುತ್ತಿತ್ತು. ಬಹುದೂರದವರೆಗೂ ಅದು ಕೇಳಿಸುತ್ತಿತ್ತು. ಮರದ ಕುರ್ಚಿಯಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದ ಸಂಭ್ರಮವೇ ಬೇರೆ.   ಹೊಸಂಗಡಿಯಲ್ಲಿ ಬಸ್ ಇಳಿದು ಓಡಿಕೊಂಡು ಹೋಗುತ್ತಿದ್ದ ದೃಶ್ಯ ಈಗಲೂ ನೆನಪಿದೆ.  

ಪೋಟೊ ಸಹಾಯ ಅಂತರ್ಜಾಲದ ಅನಾಮಿಕರು ಅವರಿಗೂ ಧನ್ಯವಾದಗಳು
ಉಪ್ಪಳದ ಸುಂದರ ದೃಶ್ಯಫೋಟೋ ಕೃಪೆ : ಅಂತರ್ಜಾಲದ ಅನಾಮಿಕರು....ಅವರಿಗೂ ಧನ್ಯವಾದಗಳು


ಇನ್ನೂ ಅತ್ಯಂತ ಪ್ರಿಯವಾದ ಟಾಕಿಸ್ ಎಂದರೆ ಕೈಕಂಬದ ರಂಜೀತ್  ಟಾಕೀಸ್. ಹೆಚ್ಚಾಗಿ ಪರಿಚಿತರೇ ಇಲ್ಲಿದ್ದರು. ಹೊರ ಊರಿಗೆ ಹೋಗುವಾಗ ನಮ್ಮ ಸ್ಕೂಟರ್ ಇಲ್ಲೆ ಪಾರ್ಕ್ ಮಾಡಿ ಹೋಗುತ್ತಿದ್ದೆ. ಸಿನಿಮಾ ನೋಡುವುದಿದ್ದರೂ ಹಾಗೆ, ಟಿಕೇಟ್ ಪಡೆಯುವ ಮೊದಲೇ ಟಾಕೀಸ್ ಒಳಗೆ ಕುಳಿತುಕೊಳ್ಳುತ್ತಿದ್ದೆವು. ಆನಂತರ ಟಿಕೇಟ್ ಕುಳಿತಲ್ಲಿಗೇ ತಂದುಕೊಡುತ್ತಿದ್ದರು. ಈ ಸೌಲಭ್ಯ ಇಲ್ಲೇ ಇದ್ದದ್ದು ಒಂದು ವಿಚಿತ್ರ ! ಮೋಹನ್ ಲಾಲ್  ಶಿವಾಜಿ ಗಣೇಶನ್ ಅಭಿನಯದ ಯಾತ್ರಾಮೊಳಿ ಎಂಬ  ಮಲಯಾಳಂ ಸಿನಿಮಾ ತಡ ರಾತ್ರಿಯ  ಪ್ರದರ್ಶನ ನೋಡುವಾಗ ಟಾಕೀಸ್ ಬಹುತೇಕ ಖಾಲಿಯಾಗಿದ್ದು ಬಾಲ್ಕನಿಯಲ್ಲಿ ನಾನೊಬ್ಬನೇ ಕುಳಿತು ಸಿನಿಮಾ ನೋಡಿದ ಹೆಗ್ಗಳಿಕೆ ನನ್ನದು. 


ಹೀಗೆ ಗತಕಾಲದ ಉಪ್ಪಳದ ಗತಿಸಿ ಹೋದ ನೆನಪು ಬಹಳ ಮಧುರವಾಗಿದೆ. ಅದನ್ನು ಈಗ ಮೆಲುಕು ಹಾಕುವುದೇ ಒಂದು ಸಂತಸದ ವಿಚಾರ. 


Friday, October 22, 2021

ಅನುಭೂತಿ

 "ಪ್ರಾಯಶ್ಚಿತ್ತಾನ್ಯ ಶೇಷಾಣಿ ತಪಃ ಕರ್ಮಾತ್ಮಕಾನಿ ವೈ ಯಾನಿ ತೇಷಾಮಶೇಷಾಣಾಂ ಕೃಷ್ಣಾನು ಸ್ಮರಣಂ ಪರಂ "   

    ಸಂಧ್ಯಾವಂದನೆಯ ಕೊನೆಯಲ್ಲಿ ಹೇಳುವ ಶ್ಲೋಕವಿದು. ತಪಸ್ಸಿನ ಪ್ರಾಯಶ್ಚಿತ್ತ ಮಾಡಿಯೂ ಇನ್ನು ಉಳಿದಂತಹ ಪಾಪ ಶೇಷವೂ ಸಂಪೂರ್ಣ ನಾಶವಾಗುವುದಕ್ಕೆ ಕೃಷ್ಣ ಸ್ಮರಣೆಯನ್ನು ಮಾಡುವುದು.  ಭಗವಂತನ ನಾಮಸ್ಮರಣೆಯ ಶಕ್ತಿಯನ್ನು ಮತ್ತದರ ಪ್ರಯೋಜನವನ್ನು ಈ ಶ್ಲೋಕ  ಹೇಳುತ್ತದೆ. ಕೇವಲ ನಾಮ ಸ್ಮರಣೆಯಿಂದ ಪಾಪ ಪರಿಹಾರದ ಪ್ರಾಯಶ್ಚಿತ  ಸಾಧ್ಯವಾಗುತ್ತದೆ. 


ಪರಮಾತ್ಮ ಅಥವಾ ದೇವರ ಮನುಷ್ಯ ಸಂಬಂಧ ಎಂಬುದು ತಾಯಿ ಮಗುವಿನ ಸಂಬಂಧದಂತೆ, ಇನ್ನು ಕೆಲವೊಮ್ಮೆ ಗಂಡ ಹೆಂಡತಿ ಸಂಬಂಧದಂತೆ ಅನ್ನಿಸುತ್ತದೆ. ಇವೆರಡೂ ದಿವ್ಯವಾದ ಸಂಬಂಧಗಳು. ಮಕ್ಕಳು ತಾಯಿಯಲ್ಲಿ ಏನು ಬೇಕೆಂದು ಕೇಳಿದರೆ ತಾಯಿಯಾದವಳು ಹೇಳುವುದು ಒಂದೇ , ಏನೂ ಬೇಡ. ಆಕೆಗೆ ಚಿನ್ನ ಬೇಡ, ಸೀರೆ ಬೇಡ ಸಂಪತ್ತು ಬೇಡ. ಹಾಗಾದರೆ ಮಕ್ಕಳು ಏನನ್ನು ಕೊಡಬೇಕು. ಅದು ಪ್ರೀತಿ. ತಾಯಿಯನ್ನು ದೇವರು ಅಂತ ಪೂಜಿಸುವ ಕಾರಣ ಇದೂ ಒಂದು. ಗಂಡನಾದವನು ಹೆಂಡತಿಗೆ ಸೀರೆ ಕೊಡಬಹುದು ಚಿನ್ನ ಕೊಡಬಹುದು ಇನ್ನೇನೋ ಕೊಡಬಹುದು, ಆದರೆ ಪ್ರೀತಿ ಕೊಡದೇ ಇದ್ದರೆ ಇದಾವುದಕ್ಕೂ ಅಸ್ತಿತ್ವ ಇರುವುದಿಲ್ಲ. ಗಂಡ ಹೆಂಡತಿಯ ನಡುವಿನ ಸಂಬಂಧ ನಿಂತಿರುವುದೇ ಪ್ರೀತಿಯಿಂದ. ಹೆಂಡತಿಗೆ ಏನು ಕೊಡದೇ ಇದ್ದರು ಹೆಂಡತಿಯ ಅಥವಾ ಗಂಡನ ಮೇಲೆ ಪ್ರೀತಿ ಇದ್ದಾಗ ಉಳಿದ ವಿಚಾರಗಳು ಅತ್ಯಂತ ಮಹತ್ವ ಎಂದೆನಿಸುವುದಿಲ್ಲ. ಇದರಿಂದಾಗಿಯೇ ಗೃಹಸ್ಥ ಜೀವನವೂ ಮನುಷ್ಯನ ಮೋಕ್ಷಪ್ರಾಪ್ತಿಯಲ್ಲಿ ಒಂದು ಅಂಗವಾಗಿರುತ್ತದೆ.  ಇದೇ ತತ್ವ ಪರಮಾತ್ಮನಲ್ಲೂ ಹೊಂದಿಸಿಕೊಳ್ಳುವಾಗ ಧ್ಯಾನದ ಮಹತ್ವ ಅರಿವಾಗುತ್ತದೆ. ಧ್ಯಾನ ಪರಮಾತ್ಮನ ಬಳಿಗೆ ಹೋಗುವ ಸರಳ ಹಾದಿ. ಇದಕ್ಕೆ ಚಿನ್ನ ಸಂಪತ್ತು ಧನ ಕನಕ ಯಾವುದೂ ಬೇಡ. ಹೂ ಹಣ್ಣುಭಕ್ಷ್ಯ ಪೂಜೆ ಯಾವುದೂ ಬೇಡ, ಕೇವಲ ಏಕಾಗ್ರತೆ ಇರುವ ಮನಸ್ಸು ಇದ್ದರೆ ಸಾಕು. ಉಳಿದ ಯಾವ ಕ್ರಿಯಯಲ್ಲೂ ಕಾಣದ ಪರಮಾತ್ಮ ಸ್ವರೂಪ ವ್ಯಕ್ತವಾಗುತ್ತದೆ. ಭಗವದ್ಗೀತೆಯಲ್ಲಿ ಹೇಳಿದಂತೆ, ಭಗವಂತನಿಗೆ ರೂಪವಿಲ್ಲ ಭಾವವಿಲ್ಲ. ನಿರ್ವಿಕಲ್ಪ. ಧ್ಯಾನದಲ್ಲಿ ಇದೆಲ್ಲ ಅರಿವಿಗೆ ಬರುತ್ತದೆ. ಸರಳವಾದ ಮಾಧ್ಯಮ ಅತಿ ಉತ್ಕೃಷ್ಟವಾದ ಗುರಿ.  ಪರಮಾತ್ಮ ಎಂದರೆ ಭಕ್ತಿಯ ನೆನಪಾಗುತ್ತದೆ. ಭಕ್ತಿ ಎಂದರೆ ಕಣ್ಣೀರು ಸುರಿಸುವುದಲ್ಲ.  ನಮ್ಮ ದಯನೀಯ ಸ್ಥಿತಿಯನ್ನು ತೋರಿಸುವುದೂ ಅಲ್ಲ. ಕಣ್ಣೀರು ಸುರಿಸುವವರನ್ನು ಮನುಷ್ಯರೇ  ಬಯಸುವುದಿಲ್ಲ ಇನ್ನು ದೇವರು ಬಯಸುತ್ತಾನೆಯೆ. ದೇವರ ಮುಂದೆ ನಿಂತಾಗ ನಾವು ಸಂತೃಪ್ತ ಭಾವನೆಯಿಂದ ನಿಂತು ಬಿಡಬೇಕು. ಮುಖದಲ್ಲಿ ಮಂದಹಾಸ ತುಂಬಿರಬೇಕು. ಯ ಭಕ್ತಿ ಎಂದರೆ ನವರಸದ ಒಂದು ರಸವಾಗಿ ಕಾಣುತ್ತಾರೆ. ನನ್ನ ಅನಿಸಿಕೆಯಂತೆ ಭಕ್ತಿಯೂ ಒಂದು ರಸವೆಂದು ಭಾವಿಸಲಾಗುವುದಿಲ್ಲ. ಭಕ್ತಿ ಎಂದರೆ ಅದೊಂದು ಸ್ಥಿತಿ.  ಯಾರೇ ಆದರೂ ನಮಗೊಂದು ವಸ್ತುವನ್ನು ಅಥವಾ ಪಾರಿತೋಷಕವನ್ನು ಕೊಡುವಾಗ ನಾವು ಕೇಳಿ ಕೊಡುವಂತಿರಬಾರದು. ನಮ್ಮನ್ನು ಅರಿತು ಕೊಡುವುದನ್ನು ನಾವು ಬಯಸುತ್ತೇವೆ. ನಾವು ಬೇಡಿಕೆ ಸಲ್ಲಿಸಿ ಕೊಡುವಲ್ಲಿ ಒಂದು ಸಣ್ಣ ಅತೃಪ್ತ ಭಾವ ಇರುತ್ತದೆ. ಅದೇ ಭಾವ ಭಗವಂತನಲ್ಲಿ ಮೂಡಬೇಕು. ಪರಮಾತ್ಮ ನಮ್ಮನ್ನರಿಯನೇ? ನಮ್ಮನ್ನು ಅರಿತು ದಯಪಾಲಿಸನೇ ಹಾಗಿರುವಾಗ ಬೇಡಿಕೆ ಯಾಕೆ. ನಮ್ಮ ಅಭೀಷ್ಟಗಳು ಸದಾ ನೆರವೇರುತ್ತದೆ ಎಂಬ ಆತ್ಮ ವಿಶ್ವಾಸದಲ್ಲಿ ಪರಮಾತ್ಮನ ದರ್ಶನ ಮಾಡುವಾಗ ಧ್ಯಾನ ಎಂಬುದು ಸುಲಭವಾಗುತ್ತದೆ. 

ನಿತ್ಯ ಮುಂಜಾನೆ ಬ್ರಾಹ್ಮೀ ಕಾಲದಲ್ಲಿ ಮಾಡುವ ಸಂಧ್ಯಾವಂದನೆ ನನಗೆ ಅತ್ಯಂತ ಪ್ರಿಯವಾಗಿ ತೃಪ್ತಿಕರವಾಗುವುದು ಇದೇ ಭಾವದಿಂದ. ಯಾವ ಪರಿಕರವೂ ಬೇಡ. ಬೊಗಸೆಯಷ್ಟು ನೀರು ಇದ್ದರೆ ಸಾಕು, ಭಗವಂತನ ದರ್ಶನ ಸಾಧ್ಯವಾಗುತ್ತದೆ. ಶಂಖ ಊದುವ ಅವಶ್ಯಕತೆ ಇಲ್ಲ. ಘಂಟಾ ನಾದ ಬೇಕಾಗುವುದಿಲ್ಲ. ಹೂವು ನೈವೇದ್ಯ ಹೆಚ್ಚೇಕೆ ಯಾವ ಮೂರ್ತಿಯೂ ಬೇಡ. ಎಲ್ಲಿದ್ದರೂ ಆಚರಿಸಬಹುದಾದ ಸಂಧ್ಯವಂದನೆಗೆ ಮಿಗಿಲಾದ ಆರಾಧನೆ ಇಲ್ಲ. 

ನನ್ನ ಹಿರಿಯರೊಬ್ಬರು ಸಹಜವಾಗಿ ಪ್ರತಿ ಸಲ ಕೇಳುವ ಪ್ರಶ್ನೆ ಇದೆ. ಧ್ಯಾನ ಏನು ಯೋಚನೆ ಇಲ್ಲದ ಸ್ಥಿತಿಯಲ್ಲಿ ಹೇಗೆ ಸಾಧ್ಯವಾಗುತ್ತದೆ? ಬೇಡದೇ ಇದ್ದರೂ ಯಾವುದೋ ಯೋಚನೆಗಳು ಮನಸ್ಸಿನಲ್ಲಿ ಬಂದು ಹೋಗುತ್ತವೆ. ಈ ಸಮಯದಲ್ಲಿ ಏಕಾಗ್ರತೆ ಅದು ಪರಿಚಯಕ್ಕೂ ಸಿಗುವುದಿಲ್ಲ. ಯಾವುದೇ ಯೋಚನೆ ಇಲ್ಲದ ಸ್ಥಿತಿ ಇರುವುದಕ್ಕೆ ಸಾಧ್ಯವೇ? 

ಆಗತಾನೆ ಹುಟ್ಟಿದ ಮಗು ಅಳುತ್ತದೆ ನಗುತ್ತದೆ. ಯಾಕಾಗಿ? ಆ ನಗುವಿನ ಹಿಂದಿನ ಭಾವವೇನು? ಪುಟ್ಟ ಮಗು ಹಾಗೆ ನಗುವಾಗ ಹೇಳುವುದುಂಟು ಅದು ಪರಮಾತ್ಮನನ್ನು ನೋಡಿ ನಗುತ್ತದೆ.  ಹುಟ್ಟಿದ ಕೂಡಲೇ ನಗುವ ನಗು ನಿಷ್ಕಲ್ಮಶವಾಗಿರುತ್ತದೆ. ಆ ಮಗು ಬೆಳೆಯುತ್ತಾ ಬೆಳೆಯುತ್ತಾ ನಿಷ್ಕಮಲದ ಸ್ಥಿತಿಯನ್ನು ಕಳೆಯುತ್ತಾ ಬರುತ್ತದೆ. ನಾವೂ ಮಗುವಿದ್ದಾಗ ಹೀಗೆ ನಕ್ಕಿರಬಹುದು. ಆದರೆ ಬೆಳೆದು ಲೌಕಿಕ ಪ್ರಪಂಚದ ವ್ಯವಹಾರದೊಂದಿಗೆ ಸೇರಿ ಹೋದಾಗ ಆ ನಿಷ್ಕಲ್ಮಶ ಸ್ಥಿತಿ ನಮಗೆ ಸಾಧ್ಯವಾಗುವುದಿಲ್ಲ. ಆ ಸಮಸ್ಯೆಯನ್ನು ನೀಗಿಸಿಕೊಂಡರೆ ಧ್ಯಾನ ಹಾದಿ ಸುಗಮವಾಗುತ್ತದೆ.  ಯಾವುದೇ ಲೌಕಿಕ ಯೋಚನೆ ಇಲ್ಲದ ಆ ನಗುವಿನ ಪ್ರೇರಣೆಯನ್ನು ನಾವೂ ಪಡೆಯಬೇಕು. ನಾವು ಶೈಶವದ ಸ್ಥಿತಿಗೆ ಬರಬೇಕು. ನಾವೂ ಮಗುವಿನಂತಾದಾಗ ನಮ್ಮ ಮನಸ್ಸು ಯೋಚನಾ ರಹಿತವಾಗುತ್ತದೆ. ಯಾವುದೇ ಯೋಚನೆಗಳು ಇರುವುದಿಲ್ಲ. 

ನಮ್ಮ ಯಾವುದೇ ವ್ಯವಹಾರಗಳಲ್ಲಿ ಪರಮಾತ್ಮ ದರ್ಶನ ಸಾಧ್ಯವಾಗುವುದಿಲ್ಲ. ಯಾವುದೋ ಪೂಜೆ ಪುನಸ್ಕಾರ ಮಾಡಬಹುದು. ಮೂರ್ತಿಗೆ ಬಗೆ ಬಗೆಯ ಅಲಂಕಾರ ಮಾಡಿ ದೇವರು ಅಂತ ಆರಾಧಿಸಬಹುದು. ಇಲ್ಲ ಯಾವುದೋ ಸಧ್ಬಾವನೆಯ ಕೆಲಸದಲ್ಲಿ ತೊಡಗಿ ಸತ್ಯ ಪ್ರಾಮಾಣಿಕತೆಯನ್ನೇ ಭಗವಂತ ಎಂದುಕೊಳ್ಳಬಹುದು. ಆದರೆ ಇವುಗಳಲ್ಲಿ ಪೂರ್ಣವಾದ ಭಗವಂತನ ದರ್ಶನ ಸಾಧ್ಯವಾಗುವುದಿಲ್ಲ. ಕೇವಲ ನಮ್ಮ ಮಾನಸಿಕ ತೃಪ್ತಿ ಮತ್ತು ನಮ್ಮ ನಿರ್ಣಯ ಮಾತ್ರ ಆಗಿರುತ್ತದೆ. ಹಾಗಾಗಿ ಪರಮಾತ್ಮ ಯಾವುದು? ಹೇಗೆ ? ಏನು? ಈ ಎಲ್ಲ ಸಂದೇಹಗಳು ಪೂರ್ಣವಾಗಿ ಪರಿಹರಿಸಲ್ಪಡುವುದು ಧ್ಯಾನದಲ್ಲಿ ಮಾತ್ರ. ಈ ಧ್ಯಾನಕ್ಕೆ ಯಾವ ಆಡಂಬರವೂ ಬೇಡ. ಯಾವ ಮಂತ್ರವೂ ಬೇಡ. ಯಾವ ತಂತ್ರವೂ ಬೇಡ. ಧ್ಯಾನ ಅತ್ಯಂತ ಸರಳವಾದ ಹಾದಿ. ಮತ್ತು ಯಾವ ಖರ್ಚು ವೆಚ್ಚ ಶ್ರಮ ಇಲ್ಲದ  ಸರಳವಾದ ಅನುಷ್ಠಾನ.


ನಮ್ಮ ಮನಸ್ಸು ಕೆಲಸ ಮಾಡುವಷ್ಟು ದೇಹ ದುಡಿಯುವುದಿಲ್ಲ. ಒಂದರ್ಥದಲ್ಲಿ ಮನಸ್ಸಿನ ದುಡಿಮೆ ಹೆಚ್ಚು.  ಆದರೂ ನಾವು ದೇಹಕ್ಕೆ ವಿಶ್ರಾಂತಿಯನ್ನು ಕೊಟ್ಟು ನಾವು ದಣಿವಾರಿಸಿಕೊಂಡೇವು ಎಂದು ಭಾವಿಸುತ್ತೇವೆ. ವಾಸ್ತವದಲ್ಲಿ ಮನಸ್ಸು ಮತ್ತೂ ದಣಿದಿರುತ್ತದೆ. ದೇಹ ದುಡಿಯದೇ ಸುಮ್ಮನಿರುವಾಗ ಮನಸ್ಸು ಎರಡು ಪಟ್ಟು ಕೆಲಸ ಮಾಡುತ್ತಿರುತ್ತದೆ. 

               ನಾವು ದಿನವಿಡೀ ದುಡಿಯುತ್ತೇವೆ. ವಿರಾಮವಿಲ್ಲದೇ ದುಡಿದೇ ದಿನ ಕಳೆಯುತ್ತೇವೆ. ದುಡಿದು ದಣಿವಾದಾಗ ವಿಶ್ರಾಂತಿ ಬಯಸುತ್ತೇವೆ. ಒಂದೋ ಸುಮ್ಮನೆ ಕುಳಿತು ಬಿಡುತ್ತೇವೆ. ಇನ್ನೂ ಮುಂದೆ ಹೋಗಿ ಮಲಗಿ ನಿದ್ರಿಸುತ್ತೇವೆ. ದೇಹ ದಣಿವಾರಿಸಿಕೊಳ್ಳಬಹುದು. ದಣಿವಾರಿದ ನಂತರ ಹೊಸ ಉಲ್ಲಾಸ ಮೂಡಬಹುದು. ಆದರೆ ದಣಿವಾರಿದ್ದು ಕೇವಲ ದೇಹಕ್ಕೆ ಮಾತ್ರ. ಮನಸ್ಸು ಇನ್ನೂ ದಣಿದಿರುತ್ತದೆ. ಮನಸ್ಸು ದಣಿದಿರುವುದು ಗಮನಕ್ಕೆ ಬರುವುದೇ ಇಲ್ಲ. ಮನಸ್ಸಿನ ದಣಿವು ಕೇವಲ   ನಿದ್ರಿಸಿದರೆ ಪರಿಹರಿಸಲ್ಪಡುವುದಿಲ್ಲ. ಯಾಕೆಂದರೆ ನಿದ್ದೆಯಲ್ಲಿ ಬೀಳುವ ಕನಸು ಮನಸ್ಸನ್ನು ಬಾಧಿಸುತ್ತದೆ. 

ಧ್ಯಾನ ಎಂಬುದು ಸುಲಭ. ಆದರೆ ಅದರ ಕಡೆಗಿರುವ ಹಾದಿ ಬಹಲ ಕಠಿಣ. ನಮ್ಮ ದಿನ ನಿತ್ಯದ ಬದುಕಿನ ನಮ್ಮ ವರ್ತನೆಯ ದಟ್ಟವಾದ ಪ್ರಭಾವ ಮನಸ್ಸಿನ ಮೇಲಾಗುತ್ತದೆ. ಬೇಡವೆಂದರೂ ಆ ಪ್ರಭಾವ ಮನಸ್ಸನ್ನು ಬಿಟ್ಟು ಹೋಗುವುದಿಲ್ಲ. ಹಾಗಾಗಿ ನಮ್ಮ ದೈನಂದಿನ ಜೀವನ ವ್ಯವಹಾರಗಳಲ್ಲಿ ನಾವು ನಿರಾಳತೆಯನ್ನು ನಿಷ್ಕಲ್ಮಷ ಪ್ರಾಮಾಣಿಕತೆಯನ್ನು ಹೊಂದಿರಬೇಕು. ಪರಹಿತ ಅಲ್ಲದಿದ್ದರೂ ಅಹಿತದ ಚಿಂತನೆ ಇರಬಾರದು. ನಮ್ಮ ಸನ್ಮನಸ್ಸು ಸದ್ಭಾವನೆ ಅದು ಪರರಿಗೆ ಹಿತಕೊಡುವುದಕ್ಕಿಂತಲೂ ಅಧಿಕ ನಮಗೆ ಪ್ರಯೋಜನವನ್ನು ಕೊಡುತ್ತದೆ. ಹಾಗಾಗಿ ನಮ್ಮ ಚಿಂತನೆಗಳು ಪರಿಶುದ್ಧವಾಗಬೇಕು. ಭೂಮಿ ಮೇಲೆ ಹುಟ್ಟಿ ಬರುವ ಪ್ರತಿಯೊಂದು ಜೀವಿಯೂ ಬದುಕುವುದಕ್ಕಾಗಿ ಹುಟ್ಟಿ ಬರುತ್ತವೆ.  ಈ ಭಾವ ಜಾಗ್ರತವಾಗಿರುವಾಗ ಪರದ್ವೇಷ  ವೈಮನಸ್ಯಕ್ಕೆ ಜಾಗವಿರುವುದಿಲ್ಲ. 

ನಾನು ಸಹನಾವಂತ ಸಹನ ಶೀಲ ಹೀಗೆ ತಮ್ಮ ಬಗ್ಗೆ ತಿಳಿಯುವವರು ಹಲವರಿರಬಹುದು. ಸಹನಾ ಮೂರ್ತಿ ಅಂತ ತೋರುವುದರಲ್ಲಿ ಭಾವಿಸುವುದರಲ್ಲಿ ಒಂದು ಅನುಕಂಪದ ನಿರೀಕ್ಷೆ ಇರುತ್ತದೆ. ಆದರೆ ಕಿಂಚಿತ್ತಾದರೂ ಅಸಹನೆ ಇಲ್ಲದಿದ್ದರೆ ಅದು ಮನಸ್ಸಾಗಿರುವುದಿಲ್ಲ. ನೀವು ಬಹಳ ಸಹನಾ ಮೂರ್ತಿಯಾಗಿರಬಹುದು. ಸಾವಧಾನದಿಂದ ಚಿಂತಿಸುವವರಾಗಿರಬಹುದು. ಆದರೂ ಅರಿವಿಲ್ಲದೇ ಅಸಹನೆ ಪ್ರಕಟವಾಗುತ್ತದೆ. ಹೀಗೆ ಪ್ರಕಟವಾಗುವ, ಅಥವಾ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವ ಅವಧಿಯನ್ನು ಲೆಕ್ಕ ಹಾಕಬೇಕು. ಶಾಂತವಾಗಿದ್ದರೂ ಸುಪ್ತವಾದ ಅಶಾಂತಿಯನ್ನು ಪ್ರಾಮಾಣಿಕತೆಯಿಂದ ಕಾಣಬೇಕು. ಆಗ ನಮ್ಮ ಸಹನ ಶೀಲತೆ ಎಷ್ಟು ಅಂತ ಅರಿವಿಗೆ ಬರುತ್ತದೆ. ಸಹನೆಯಿಂದ ಕಂಡ ಅವಧಿಯನ್ನು ಬಿಟ್ಟು ಅಸಹನೆ ತುಂಬಿದ ಘಳಿಗೆಯನ್ನು ಅವಲೋಕಿಸಿದಾಗ ಆ ಅವಧಿಯನ್ನು ಕಡಿಮೆ ಮಾಡಿಕೊಳ್ಳುವ ಧ್ಯೇಯ ತಳೆಯಬೇಕು. ಆವಾಗಲೇ ಸಹನಾ ಮೂರ್ತಿಯೆಂದೆನಿಸುವುದಕ್ಕೆ ಸಾಧ್ಯವಾಗುತ್ತದೆ.  ದೈನಂದಿನ ಜೀವನದಲ್ಲಿ ಆತ್ಮವಂಚನೆಯಿಂದ ದೂರವಿದ್ದು ಮನಸ್ಸಿಗೆ ಪ್ರಾಮಾಣಿಕವಾಗಿರಬೇಕು. ಧ್ಯಾನಕ್ಕೆ ಶಕ್ತಿ ತುಂಬಬಲ್ಲ ಕ್ರಿಯೆ ಇದು. ಧ್ಯಾನದಲ್ಲಿ ಎಲ್ಲವೂ ನಾಶವಾಗಿ ಕೇವಲ ಉತ್ಕೃಷ್ಟ ಒಂದೇ ಕೊನೆಗೆ ಉಳಿದಿರುತ್ತದೆ. ಧ್ಯಾನದ ಸ್ಥಿತಿಯಲ್ಲಿ ಯಾವ ಬೇಡಿಕೆಯೂ ಇರುವುದಿಲ್ಲ. ಧನ ಬೇಕು, ಸಂಪತ್ತು ಬೇಕು, ಆಹಾರ ಬೇಕು,  ಹೀಗೆ ಯಾವ ಬೇಕುಗಳ ಉತ್ಪತ್ತಿಯಾಗುವುದಿಲ್ಲ. ನಿರಾಡಂಬರ ಸ್ಥಿತಿ. ಈ ಸಚ್ಚಿಂತನೆಯಿಂದ ಪ್ರಯತ್ನಿಸಿ ಉತ್ತಮ ಧ್ಯಾನದ ಹಾದಿ ನಮ್ಮದಾಗುತ್ತದೆ. 


Friday, August 6, 2021

ಬ್ರಹ್ಮ ತತ್ವ

 
ತತ್ವಗಳು ಓದುವುದಕ್ಕೆ ಅಥವಾ ಹೇಳುವುದಕ್ಕೆ ಚೆನ್ನಾಗಿರುತ್ತವೆ, ಆದರೆ ಆಚರಿಸುವುದಕ್ಕೆ ಕಠಿಣವಾಗಿರುತ್ತವೆ ಅಥವಾ ಅಸಾಧ್ಯವಾಗಿರುತ್ತದೆ.  ದೂರದ ಬೆಟ್ಟದಂತೆ ಅದು ಕಾಣುವುದಕ್ಕೆ ಮಾತ್ರ ,  ಏರುವುದಕ್ಕಲ್ಲ.  ಅದರಂತೆ ಬ್ರಾಹ್ಮಣ್ಯ, ಅದು ನೋಡುವುದಕ್ಕೆ ಬಹಳ ಲಘುವಾಗಿ ಭಾಸವಾಗುತ್ತದೆ. ಪುರಾಣಗಳಲ್ಲಿ ಓದಿರಬಹುದು. ಪಾಂಡವರು ಬ್ರಾಹ್ಮಣರಾಗುತ್ತಾರೆ. ಹನುಮಂತ ಮೊದಲು ರಾಮನನ್ನು ಕಾಣುವಾಗ ಬ್ರಾಹ್ಮಣನಾಗಿ ಹೋಗುತ್ತಾನೆ.  ಹೆಚ್ಚೇಕೆ ಪರಮಾತ್ಮನು ಹಲವು ಸಲ ಬ್ರಾಹ್ಮಣನಾಗಿ ವೇಷಧರಿಸಿದ್ದು  ಓದಿರಬಹುದು.  ಬ್ರಾಹ್ಮಣ ವೇಷ ಸುಲಭ ಮತ್ತು ಸರಳ. ಆದರೆ ಬ್ರಾಹ್ಮಣನಾಗಿ ಬದುಕುವುದು ಒಂದು ಸವಾಲಿನ ಕೆಲಸ. ಈಗಂತೂ ಅದು ಹೆಜ್ಜೆಯ ಅನುಭವ.  ಭಕ್ತರನ್ನು ಪರೀಕ್ಷಿಸುವುದಕ್ಕಾಗಿ ಪರಮಾತ್ಮ ಬ್ರಾಹ್ಮಣನಾಗಿ ಬಂದಿರುವುದೇ ಹೆಚ್ಚು. ವಿಪರ್ಯಾಸವೆಂದರೆ ಈಗ ಬ್ರಾಹ್ಮಣನೇ ಹೆಚ್ಚು ಪರೀಕ್ಷೆಗೆ ಒಳಗಾಗುತ್ತಾನೆ. 

ಬ್ರಾಹ್ಮಣ ಎಂದಾಕ್ಷಣ ಅದೇ ಸರಳ ವೇಷವೇ ಕಣ್ಣಿಗೆ ಬಡಿಯುತ್ತದೆ. ಆದರೂ ಅದನ್ನು ಸರಳ ಎಂದು ಹೇಳುವುದರಲ್ಲಿ ಕೆಲವೊಮ್ಮೆ ಅನುಮಾನಿಸಬೇಕಾಗುತ್ತದೆ. ಯಾಕೆಂದರೆ  ಸರಳತೆಯ ಒಳಗೆ , ಅದು ಸರಳ ವೇಷ ಎನ್ನುವುದಕ್ಕೆ ಸಾಧ್ಯವಿಲ್ಲ.  ಅದು ಗಾಂಭೀರ್ಯವನ್ನು  ಹೆಚ್ಚಿಸುತ್ತದೆ. ಮುಖದಕಳೆ ಪಾಂಡಿತ್ಯವನ್ನೂ ಪ್ರಕಾಶಿಸುತ್ತದೆ. ಹೊರಾವರಣದಂತೆ ಒಳಾವರಣದಲ್ಲಿ ಮನಸ್ಸು ಪ್ರಕಾಶಿಸಿದರೆ ಭೂಸುರ ಎನ್ನುವುದಕ್ಕೆ ಸಾರ್ಥಕವೆನಿಸುತ್ತದೆ. ನಿಜ್ಜಕ್ಕೂ ಅದು ದೇವರು. 

ಬ್ರಾಹ್ಮಣ  ಇದು ಜಾತಿ ಸೂಚಕ ಪದ ಎಂದು ಎಲ್ಲೂ ಇಲ್ಲ. ಆದರೆ ಅದು ಜಾತಿಯಾಗಿಯೇ ಬಿಂಬಿಸಲ್ಪಡುತ್ತದೆ. ಕಾರಣ ಅಷ್ಟೇ ಅದು ಸುಲಭದ ತತ್ವವಲ್ಲ. ಲೌಕಿಕತೆಯ ಗಾಢ ಅನುಭವದಲ್ಲಿ ಮುಳುಗಿರುವಾಗ ಬ್ರಹ್ಮ ಪದ ಹಾಸ್ಯಾಸ್ಪದವಾಗಿಯೇ ಭಾಸವಾಗುತ್ತದೆ. ಲೌಕಿಕವಾಗಿ ಚಿಂತಿಸುವವನಿಗೆ ಈ ಹಾದಿ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.  ಆದರೆ ಆ ಪರಮ ಅರ್ಥವನ್ನು ಅರ್ಥೈಸುವುದು ಮತ್ತು ಅದರಲ್ಲಿ ನಡೆಯುವುದು ಸೃಷ್ಟಿಯ  ಒಂದು ವೈಶಿಷ್ಟ್ಯ.  ಆ ವೈಶಿಷ್ಟ್ಯವನ್ನುಸಮಾಜ ಗುರುತಿಸುವ ರೀತಿ ಮಾತ್ರ ತೀರ ಭಿನ್ನ. ಬ್ರಾಹ್ಮಣ ಎಂಬುದನ್ನು ಸಮಾಜ ಪ್ರತ್ಯೇಕವಾಗಿ ಕಾಣುತ್ತದೆ. ಹಲವು ಸಲ ಸಮಾಜದ ಪ್ರತ್ಯೇಕ ಭಾಗವಾಗಿ ಗುರುತಿಸುತ್ತದೆ. ಯಾಕೆಂದರೆ ಬ್ರಾಹ್ಮಣ ಹಾದಿ ಅದು ಅನುಸರಣೆಗೆ ಸುಲಭವಲ್ಲ.  ಮತ್ತದು ಸಮಾಜಕ್ಕೆ ಸಹಜವಾಗಿಯೂ ಇರುವುದಿಲ್ಲ. ಬ್ರಹ್ಮ ಪದ ಬ್ರಾಹ್ಮಣ ಹಾದಿ ಇದೆಲ್ಲ ವಾಸ್ತವದಲ್ಲಿ ಅಸಹಜ ಅಂತಲೇ ಭಾಸವಾಗುತ್ತದೆ. ಹಾಗಾಗಿ ಬ್ರಾಹ್ಮಣನಾಗುವುದು ಮತ್ತು ಬದುಕುವುದು ವಾಸ್ತವದ ವಿರುದ್ದ ಅಂತಲೇ  ತಿಳಿದುಕೊಂಡಿರುತ್ತಾರೆ. 

ಜನ್ಮದಿಂದ ಬ್ರಾಹ್ಮಣ್ಯ ಲಭಿಸುವುದಿಲ್ಲ. ಹುಟ್ಟಿ ಮತ್ತೊಂದು ಜನ್ಮಕ್ಕೆ ಹೆಜ್ಜೆ ಇಟ್ಟಾಗಲೇ ಆತ ದ್ವಿಜನಾಗುವುದು. ಆನಂತರ ವೇದಾಧ್ಯಾಯನದ ನಂತರ ಆತ ಬ್ರಾಹ್ಮಣನಾಗುವುದು. ವೇದಾಧ್ಯಾಯ ಎಂದರೆ ಜ್ಞಾನ. ಜ್ಞಾನಿಯಾದವನು ಬ್ರಾಹ್ಮಣನಾದರೆ, ಉಳಿದವನು ಕೇವಲ ದ್ವಿಜನಾಗಿಯೇ ಉಳಿಯುತ್ತಾನೆ. ದ್ವಿಜತ್ವಕ್ಕೂ ಬ್ರಾಹ್ಮಣ್ಯಕ್ಕೂ ವೆತ್ಯಾಸವಿದೆ.  ಇಲ್ಲೊಂದು ಸಂಸ್ಕಾರವಿದೆ.  ಇದೊಂದು ಸುಂದರ ಅವಕಾಶ. ಗುರೂಪದೇಶವಾಗಿ ಪರಾತ್ಮರ ಪದವಿ ಎಂದರೆ ಏನು?  ಅದರ ಹಾದಿ ಯಾವುದು? ಇದುವೇ ಗುರೂಪದೇಶ. ಉತ್ತಮವಾದ ಜ್ಞಾನವನ್ನು ಪಡೆಯುವುದಕ್ಕೆ ಯಾವ ಸ್ಥಾನ ಪ್ರೇರಕವಾಗಿರುತ್ತದೋ ಅದೇ ಗುರು ಸ್ಥಾನ. ಆ ಪ್ರಚೋದನೆಯೇ ದಿವ್ಯ. ಹಾಗಾಗಿ ಆ ಹಾದಿಯೇ ಬ್ರಹ್ಮ ಪದದ ಹಾದಿ. ಬ್ರಹ್ಮನಿಗೂ ಬ್ರಾಹ್ಮಣನಾಗುವುದು ಕಠಿಣ. ಯಾಕೆಂದರೆ ಆ ತತ್ವ ಅನುಸರಿಸುವುದು ಅಷ್ಟೂ ಕಠಿಣ.  ಪ್ರಪಂಚದಲ್ಲಿ ಸರಳತೆಯೂ ಅಸಂಭವವಾಗುವುದು ವಿಪರ್ಯಾಸ ಎನ್ನಬೇಕು. ಲೌಕಿಕ ಪ್ರಪಂಚದಲ್ಲಿ ವೇಷವೇ ಪ್ರಧಾನ. 


ಇಷ್ಟೆಲ್ಲ ಇದ್ದರೂ ಅನುಸರಿಸುವುದಕ್ಕೆ ಕಠಿಣವಾಗುವಾಗ ನಾವು ಜಾಣರಾಗುವುದುಂಟು. ವೇಷದಂತೆ ತತ್ವವೂ ಸರಳೀಕೃತವಾಗುತ್ತದೆ. ನಾವು ತತ್ವದ ಕಡೆಗೆ ನೋಡುವುದಿಲ್ಲ. ಕೇವಲ ವರ್ಗಭೇದದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಭೇದದ ಕಡೆಗೆ ಗಮನ ಹರಿಸಿ ತತ್ವವನ್ನು ಮರೆಯುತ್ತೇವೆ. ಭೇದ ಎಂದರೆ ಅದು ಪ್ರಕೃತಿಯ ಧರ್ಮ.  ಹಲವು ಮಾವಿನ  ಮರಗಳಿರುತ್ತವೆ.  ಆದರೆ ಹಣ್ಣು ಬೇರೆಯದೇ ಗುಣಗಳನ್ನು ಹೊಂದಿರುತ್ತವೆ. ಎಲ್ಲ ಹಣ್ಣಿನ ಉದ್ದೇಶ ಒಂದೇ ರುಚಿಯಾಗಿರುವುದು. ತಿನ್ನುವ ಅಕ್ಕಿ ಧಾನ್ಯ ಹೀಗೆ ಪ್ರತಿಯೊಂದರಲ್ಲೂ ಒಂದು ಭೇದವಿರುತ್ತದೆ. ಆದರೆ ಎಲ್ಲವೂ ಹಸಿವನ್ನು ನೀಗಿಸುತ್ತದೆ. ವರ್ಗ ಭೇದವೆಂದರೆ ಇಷ್ಟಕ್ಕೆ ಸೀಮಿತ. ನಮ್ಮ ಅಭಿರುಚಿ ಹೇಗೋ ಅದನ್ನು ಬಳಸಿಕೊಳ್ಳುವುದು ಅಷ್ಟೇ. ಬ್ರಾಹ್ಮಣ್ಯ ಕೇವಲ ಒಂದು ವರ್ಗದ ಹಣ್ಣಿನ ಮರ. ಅವುಗಳಲ್ಲಿ ಬಗೆ ಬಗೆಯ ಹಣ್ಣಿರಬಹುದು. ಮನೋಧರ್ಮಕ್ಕೆ ಹೊಂದಿಕೊಂಡು ಬಗೆ ಬಗೆಯ ರುಚಿಯ ಅನುಭವವಾಗುತ್ತದೆ. ಹಾಗಾಗಿ ಭೇದಕ್ಕೆ ಗಮನ ಕೊಡುವ ಬದಲು ತತ್ವಕ್ಕೆ ಗಮನಕೊಡಬೇಕು. ತತ್ವ ಎಂದರೆ ಅದು ಪರಾತ್ಪರ ತತ್ವ. ಇದರ ಸತ್ಯ ಅರಿಯದಿದ್ದರೆ ನಾವು ಮೂರ್ಖರಾಗುತ್ತೇವೆ. 



Thursday, July 29, 2021

ವಾನ ಪ್ರಸ್ಥ

     ಉತ್ಕೃಷ್ಟವನ್ನು ಪ್ರೀತಿಸುವುದು ಸುಲಭ, ಎಲ್ಲರೂ ಪ್ರೀತಿಸುತ್ತಾರೆ ಆದರೆ ನಿಕೃಷ್ಣವನ್ನು ಪ್ರೀತಿಸುವುದು ಕಷ್ಟ. ಅದರ ಮೌಲ್ಯವೇ ಹೆಚ್ಚು

    ಒಂದು ಸಲ ಊರಲ್ಲಿ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಹಳ್ಳಿಯ ತೋಟದ ಮನೆಯದು. ಹೀಗೆ ಅವರ ಕೃಷಿ ಭೂಮಿ ನೋಡುತ್ತಾ ತೋಟದಲ್ಲಿ  ಸುತ್ತಾಡುವಾಗ ತೋಟದ ಬದುವಿನಲ್ಲಿದ್ದ ಒಂದು ಕಪ್ಪೆಯನ್ನು ಅನಾಮತ್ತಾಗಿ ಕೈಯ ಅಂಗೈಯಲ್ಲಿ ಇಟ್ಟು ನನಗೆ ತೋರಿಸಿದರು. ಈಗಿನ ಹಾಗೆ ಆವಾಗ ಮೊಬೈಲ್ ಇರುತ್ತಿದ್ದರೆ ಪೋಟೋ ತೆಗೆಯಬಹುದಿತ್ತು.  ನನಗೆ ಒಂದು ರೀತಿ ಅಸಹನೀಯವೆನಿಸಿತ್ತು. ವಿಕಾರವಾಗಿ ನಿಕೃಷ್ಟವಾಗಿದ್ದ ಕಪ್ಪೆ ಒಂದು ರೀತಿ ಭಯಾನಕವಾಗಿತ್ತು. ಆತನೆಂದ ನಿಜವಾದ ರೈತ ಇದನ್ನೆಲ್ಲ ಪ್ರೀತಿಸುತ್ತಾನೆ. ಎರೆ ಹುಳು ಕಪ್ಪೆ ಇವುಗಳೆಲ್ಲ ರೈತನ ಬಂಧುಗಳು. ಈ ಕಪ್ಪೆ ಅದೆಷ್ಟು ಹುಳು ಹುಪ್ಪಟೆಗಳನ್ನು ತಿಂದು ಸಹಾಯ ಮಾಡುತ್ತಿದೆ. ಮಲ್ಲಿಗೆಯನ್ನು ಯಾರೂ ಪ್ರೀತಿಸಬಹುದು ಆದರೆ ಜತೆಗೆ ನಿಕೃಷ್ಟವಾಗಿರುವ ಬಳ್ಳಿಯನ್ನು ಮಾತ್ರ ಪ್ರೀತಿಸುವವ ಪ್ರಕೃತಿಯೊಂದಿಗೆ ಇರುತ್ತಾನೆ. 

ಆ  ಘಟನೆ ನಿನ್ನೆ ಬಹಳ ನೆನಪಾಗಿಬಿಟ್ಟಿತು. ನನ್ನ ಪರಿಚಯಸ್ಥರೊಬ್ಬರು ಪ್ರತೀ ತಿಂಗಳು ಒಂದೊಂದು ವೃದ್ಧಾಶ್ರಮಕ್ಕೆ ಬೇಟಿ ನೀಡುತ್ತಾರೆ. ತಮಗೆ ಏನು ಸಾಧ್ಯವೋ ಅಕ್ಕಿ, ಆಹಾರ ಬಟ್ಟೆ ಹೀಗೆ ತೆಗೆದುಕೊಂಡು ಹೋಗಿ ಕೊಡುತ್ತಾರೆ. ಅಲ್ಲಿ ವೃದ್ಧರೊಂದಿಗೆ ಕುಶಲ ಮಾತನಾಡುತ್ತಾರೆ. ಇದವರ ಹವ್ಯಾಸ. ವೃದ್ಧಾಶ್ರಮ ಮತ್ತೆ ಅಲ್ಲಿನ ಬಿಸಿಯುಸಿರ ಹಲವು ಕಥೆಗಳನ್ನು ಹೇಳುತ್ತಾರೆ. ಅವರ ಮಾತುಗಳನ್ನು ಕೇಳುವಾಗ ಭಾವ ಪರವಶನಾಗುತ್ತೇನೆ. ನಮ್ಮ ಸಂಸ್ಕಾರದಲ್ಲಿ ವಾನ ಪ್ರಸ್ಥ ಎಂಬುದಿದೆ. ಮಕ್ಕಳು ಜವಾಬ್ದಾರಿ ಅರಿತಾಗ ಎಲ್ಲವನ್ನು ಅವರಿಗೆ ಹೊರಿಸಿ ತಾವು ಶಿವ ಶಿವಾ ಎನ್ನುತ್ತ ಕಾಡಿನತ್ತ ಮುಖಮಾಡುತ್ತಾರೆ. ಆದರೆ ಈಗ ಅರಣ್ಯವೆಲ್ಲಿದೆ? ಅದೇ ಕಾಂಕ್ರೀಟ್ ಕಾಡುಗಳು. ಆದರೂ ವೃದ್ಧಾಶ್ರಮ ನಾವು ಗೌರವದಿಂದ ಕೂಗಬಹುದು ಆಶ್ರಮ ಎಂದು.  ಆದರೆ ವಾಸ್ತವದಲ್ಲಿ ಅದು ಅನಿವಾರ್ಯ ಬಂಧನವಾಗುತ್ತದೆ. ಆಶ್ರಮದ ಮಾನಸಿಕ ಶ್ರಮ ಅರ್ಥವಾಗುವುದಿಲ್ಲ.  ಬಳ್ಳಿಯೊಂದು ಮೊಳಕೆಯೊಡೆದು ಬೆಳೆಯುತ್ತದೆ. ಎದ್ದು ನಿಲ್ಲಲು ಯತ್ನಿಸುತ್ತದೆ. ಒಂದು ಬಡಿಗೆಯೋ ಮರವೋ ಏನಿದ್ದರೂ ಎದ್ದು ನಿಲ್ಲುವುದಕ್ಕೆ ಅದನ್ನು ಅಪ್ಪಿಕೊಂಡು ಎದ್ದು ನಿಲ್ಲುತ್ತದೆ. ವೃದ್ಧರಿಗೆ ಆಶ್ರಮ ಎಂದರೆ ಅಷ್ಟೇ. 

ನಮ್ಮ ಹೆತ್ತವರು ಅದರಲ್ಲೂ ನಮ್ಮ ತಾಯಿ, ಅಮ್ಮ ಯೋಚಿಸಿ ಜಗತ್ತಿನಲ್ಲಿ ಅತ್ಯಂತ ಉತ್ಕೃಷ್ಟ ಸ್ಥಾನವಿದ್ದರೆ ಅದು ಅಮ್ಮನದ್ದು. ಬಸುರಾದೊಡನೆ ಆಕೆ ಅನುಭವಿಸುವ ತಾಯ್ತನದ ಸುಖ ಅದು ಆಕೆಗಾಗಿ ಅಂತ ಅನಿಸಬಹುದು. ಆದರೆ ಅದರ ಪ್ರಯೋಜನ ಮಾತ್ರಾ ಗರ್ಭಸ್ಥ ಶಿಶುವಿಗೆ. ತನ್ನ ನರದ ಮಿಡಿತವನ್ನು ಎದೆಯ ಬಡಿತವನ್ನು ಆಕೆ ಗರ್ಭದಲ್ಲೇ ಪರಿಚಯಿಸುತ್ತಾಳೆ. ಜನ್ಮ ನೀಡಿದ ಮೇಲೆ ತನ್ನದೇ ದೇಹದ ಒಂದು ತುಂಡು ಎಂಬಂತೆ ಅಕ್ಕರೆಯಿಂದ ಕಾಣುತ್ತಾಳೆ. ಮುದ್ದಿಸುತ್ತಾಳೆ ಹೊಡೆಯುತ್ತಾಳೆ, ಎಲ್ಲದರಲ್ಲೂ ಸ್ಥಾಯಿಯಾಗಿರುವುದು ಪ್ರೀತಿ ಮಾತ್ರ. ಬಡಿದರೂ ದ್ವೇಷಿಸಲಾಗದ  ಆ ಮಮತೆ ಅದು ತಾಯಿಗೆ ಮಾತ್ರ ಸಾಧ್ಯ. ಹಗಲು ರಾತ್ರಿ ಎನ್ನದೆ ತನ್ನ ಎದೆಗವಚಿಕೊಳ್ಳುತ್ತಾಳೆ. ಆ ಎದೆಯ ಬಡಿತವೇ ಕಂದನಿಗೆ ಜೋಗುಳವಾಗುತ್ತದೆ. ಮಗುವಿನ ದೇಹದಲ್ಲಿ ಅಮ್ಮ ಮುದ್ದಿಸದ ಸ್ಥಳವಿಲ್ಲ.  ಆ ಮಗುವಿಗೆ ಮೊದಲ ಪ್ರೀತಿಯನ್ನು ಮೊದಲ ಭಾವನೆಯನ್ನೂ ತುಂಬಿಕೊಡುವ ಅಮ್ಮನ ಪ್ರತಿ ಚರ್ಯೆಯಲ್ಲಿ   ಕಾಣುವುದು ಮಮತೆಯನ್ನು. ಮಗುವಿನ ನಗುವಲ್ಲೂ ಅಳುವಲ್ಲೂ ಹೋಗಲಿ ಮಗುವಿನ ಸಿಟ್ಟಿನಲ್ಲೂ ಆಕೆ ಅಭಿಮಾನಿಸುತ್ತಾಳೆ. ಈ ಪ್ರೀತಿ ಮಮತೆ ಎಲ್ಲವೂ ವೃದ್ಧಾಪ್ಯದಲ್ಲಿ ಸಿಗಬೇಕಾದ ಪ್ರೀತಿಗೆ ಭಂಡವಾಳವಲ್ಲ. ಆದರೂ ತನ್ನದೇ ಮಾಂಸದ ತುಂಡು ಬೇಡ ಎಂದರೂ ಅದರಲ್ಲಿರುವ ರಕ್ತ ಆಕೆಯದ್ದೇ. ಮಗು ಬೆಳೆದು ಎಷ್ಟು ದೊಡ್ಡದಾದರೂ ಮಗುವಿಗಾಗಿ ಆಕೆಯದ್ದು ಅರೆಹೊಟ್ಟೆಯ ಪರಿಶ್ರಮ. ಆ ಅರೆಹೊಟ್ಟೆಯ ಅಳತೆ ಮಗು ಬೆಳೆದು ದೊಡ್ಡದಾದರೂ ಅರ್ಥವಾಗುವುದಿಲ್ಲ. ತನ್ನ ಬದುಕಿನ ಸಾರ್ಥಕತೆಯನ್ನು ತನ್ನ ಮಗುವಲ್ಲಿ ಕಾಣುವ ಆ ಹೃದಯ ಜಗತ್ತಿನ ಮಾರ್ದವತೆ ಎಂಬ ಭಾವನೆಗೆ ಹಿಡಿದ ಕನ್ನಡಿ.  ಈಗ ವೃದ್ಧಾಶ್ರಮ ಹೊಕ್ಕರೆ ಇಂತಹ ಹೃದಯಗಳು ಅಲ್ಲೆಷ್ಟಿರಬಹುದು? ಅವುಗಳಲ್ಲಿಇನ್ನೂ ಅದೇ ಮಿಡಿತವಿರುತ್ತದೆ. ಎದೆ ಇನ್ನೂ ಬಡಿಯುತ್ತಿರುತ್ತದೆ. ಕಣ್ಣುಗಳು ಇನ್ನೂ ಹೊಳೆಯುತ್ತದೆ. ಆದರೆ ಆ ಪ್ರೀತಿಗೆ ಮಗು ಒಂದು ತುಂಡು ಕನ್ನಡಿಯಾದರೂ ಸಾಕಿತ್ತು. ಆ ಕನ್ನಡಿಯಲ್ಲಿ ಕಾಣುವ ಪ್ರೀತಿಗೆ ಅಮ್ಮ ಖುಷಿಯಾಗುತ್ತಾಳೆ. ತನ್ನ ಮಗು ಅಂತ ಅಭಿಮಾನಿಸುತ್ತಾಳೆ.   ಆದರದು ಸಾಧ್ಯವಾಗುವುದಿಲ್ಲ. ವ್ಯಾವಹಾರಿಕ ಪ್ರಪಂಚದಲ್ಲಿ ಭಾವನೆಗಳು ಕೇವಲ ಶೋಕೇಸಿನ ವಸ್ತುಗಳಾಗಿವೆ. ಅವುಗಳು ಕೇವಲ ನೋಡುವುದಕ್ಕೆ. ಆ ವಸ್ತು ಕೇವಲ ಶೋಕೇಸಿನ ಅಲಂಕಾರಕ್ಕೆ. ಬೇಕಾದಾಗ ತೆಗೆದು ಉಪಯೋಗವಾದೊಡನೆ ಮತ್ತೆ ಅಲ್ಲೇ ಇಡುವುದು.  ಎಷ್ಟು ಸುಂದರವಿದ್ದರೆ ಏನು?


ನಾವು ನಮ್ಮ ಭಾವನೆಗಳಲ್ಲಿ ಕಾಳಜಿಯನ್ನು ತೋರುತ್ತೇವೆ. ಮತ್ತೊಬ್ಬರ ಭಾವನೆಗಳಲ್ಲಿ ಕಾಳಜಿ ತೋರಿದಾಗ ನಮ್ಮ ಭಾವನೆಗಳಿಗೆ ಮೌಲ್ಯ ಒದಗಿ ಬರುತ್ತದೆ.  ಈಗ ವಸ್ತುಗಳ ಮೌಲ್ಯಗಳು ಹೆಚ್ಚುತ್ತಾ ಹೋದರೆ ಮಾನವೀಯ ಸಂಬಂಧಗಳ ಮೌಲ್ಯಮಾತ್ರಾ ಕುಸಿಯುತ್ತಾ ಹೋಗುತ್ತದೆ. ಅಮ್ಮನಿಗೆ ಹರಯ ಹೆಚ್ಚುತ್ತಾ ಹೋದಂತೆ, ಅಮ್ಮನಿಗೆ  ತನ್ನದಾದ ಸುಖ ಯಾವುದೂ ಬೇಡ. ಆಹಾರ ಬೇಡ. ತೊಡುವುದಕ್ಕೆ ಬಟ್ಟೆ ಬೇಡ. ಅದು ಬೇಡ ಇದು, ಈ ಬೇಡಗಳ ನಡುವೆ ಬೇಕಾದುದು ಒಂದಿರುತ್ತದೆ. ಅದು ತನ್ನ ಮಗುವಿನ ಸುಂದರ ನಗು. ಕೇವಲ ಅದನ್ನು ಕೊಡುವುದಕ್ಕೆ ಮಗು ಚೌಕಾಶಿ ಮಾಡುತ್ತದೆ.  ವೃದ್ಧರಾಗುವುದೆಂದರೆ ಶಾಪಗ್ರಸ್ಥರಾಗುವುದು. ಎಲ್ಲವೂ ಇದ್ದರೂ ಯಾವುದೂ ಅನುಭವಿಸಲಾಗದ ಅಸಹಾಯಕತೆ.  ಆದರೂ ವೃದ್ಧರಾಗುವುದಕ್ಕೂ ಒಂದು ಅರ್ಹತೆ ಇದೆ. ನಮ್ಮ ಮನೆಯ ಕಥೆಗಿಂತಲೂ ಆಶ್ರಮದ ಗೊಡೆಯಿಂದ ಪ್ರತಿಧ್ವನಿಸುವ ನಿಟ್ಟುಸಿರ ಕಥೆಗಳು ಬಹಳವಿದೆ. ಹಲವನ್ನು ಕೇಳುವುದಕ್ಕೂ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಇನ್ನದನ್ನು ಅನುಭವಿಸಿ ಬದುಕು ಸವೆಸುವ ಜೀವಗಳು ಹೇಗಿರಬೇಕು. ಒಂದೊಂದು ದಿನ ಕಳೆಯುವುದಕ್ಕು ಇವತ್ತಿನ ವಿಶೇಷ ಏನು ಅಂತ ಅರಸುತ್ತಿರುವ ಇಂದಿನ ಜನಾಂಗದಲ್ಲಿ ಸಶೇಷವಾಗು ವೃದ್ದರ ದುಃಖ ದುಮ್ಮಾನಗಳಿಗೆ ಅಂತ್ಯವಿಲ್ಲ. 

ಅಮ್ಮಂದಿರ ಅಪ್ಪಂದಿರ ದಿನ ಆಚರಿಸುವ ನಾಡಿನಲ್ಲೇ ವೃದ್ಧಾಶ್ರಮ ಹುಟ್ಟಿಕೊಳ್ಳುತ್ತದೆ. ಇದು ವಿಪರ್ಯಾಸ.   ತಾನು ಹೋದಲೆಲ್ಲ ಬಗಲಿಗೆ ತನ್ನ ಕಂದನನ್ನು ಕಟ್ಟಿಕೊಳ್ಳುವ ಅಮ್ಮ ಅಪ್ಪನನ್ನು  ಮರೆಯುವುದಕ್ಕೆ ಸಾಧ್ಯವಿರುವ ಮನಸ್ಥಿತಿಗೆ ಮರುಕ ಹುಟ್ಟುತ್ತದೆ. ಹೆತ್ತ ಜೀವವನ್ನು ಅಲ್ಲಿ ಬಿಟ್ಟು ಬರುವಾಗ ನಮಗೂ ಒಂದು ಸ್ಥಾನವನ್ನು ಅಲ್ಲಿ ಮುಂಗಡವಾಗಿ ಕಾದಿರುಸುತ್ತಿದ್ದೇವೆ ಎಂಬುದನ್ನು ಮರೆಯುತ್ತೇವೆ. 



Monday, June 7, 2021

ನೆನಪಿನ ಬುಟ್ಟಿ

  ನೆನಪುಗಳು ಹಳೆಯದಾದಷ್ಟು, ಉಪ್ಪಿನ ಮಾವಿನ ಕಾಯಿಯಂತೆ ರುಚಿ ಹೆಚ್ಚು. ನನ್ನ ಶೈಶವಾಸ್ಥೆಯಲ್ಲಿ ಅಂದರೆ ಮಗುವಿದ್ದಾಗ ಆರೋಗ್ಯದಲ್ಲಿ ಬಹಳಷ್ಟು ಕ್ಷೀಣವಾಗಿದ್ದೆ. ಹೀಗಾಗಿ ನನ್ನ  ಹೆತ್ತಮ್ಮ ನನ್ನ ಅಜ್ಜಿ ನನ್ನ ಆರೈಕೆಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ನನ್ನಮ್ಮ ಎಲ್ಲೆಲ್ಲಿ ನನ್ನ ಹೊತ್ತುಕೊಂಡು ಹೋಗಿದ್ದಾರೆ ಎಂದು ಈಗ ಕಲ್ಪಿಸುವುದೂ ಕಷ್ಟ. ಕೃಶವಾಗಿದ್ದ ನಾನು ಬದುಕಿ ಉಳಿದದ್ದೇ ಸೋಜಿಗ. ಸದಾ ರೋಗಿಷ್ಠ. ಮಂಗಳೂರಲ್ಲಿ ಚಿಕ್ಕವನಿರುವಾಗ  ಕಾರ್ ಸ್ಟ್ರೀಟ್ ನಲ್ಲಿ ಒಬ್ಬರು ವೈದ್ಯರಿದ್ದರು. ನೀಲಕಂಠ ಶಾಸ್ತ್ರಿಗಳು


. ಹಳೆಯ ಕಾರ್ ಸ್ಟ್ರೀಟ್ ಅದು. ವೈದ್ಯರ ಜಗಲಿಯಲ್ಲಿ ಅಮ್ಮನೊಂದಿಗೆ ಕುಳಿತುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ವಾಹನವನ್ನು ನೋಡುತ್ತಿದ್ದುದು ಈಗಲೂ ನೆನಪಿದೆ.  ಆಗ ಕಾರ್ ಸ್ಟ್ರೀಟ್ ರಸ್ತೆಯುದ್ದಕ್ಕೂ ಕೆಲವು ಮರಗಳು ಇತ್ತು.  ಈಗ ಎಲ್ಲವೂ ಬದಾಗಿದೆ.    ಕೊನೆಗೆ ಎಷ್ಟೋ ಹೊತ್ತಾದ ಮೇಲೆ ವೈದ್ಯರು ಕರೆಯುತ್ತಿದ್ದರು. ನನ್ನ ಕೈ ಹಿಡಿದು ನಾಡಿ ನೋಡುತ್ತಿದ್ದರು.  ಹೀಗೆ ಕೈ ಹಿಡಿವಾಗ ನಾನು ಬಹಳಷ್ಟು ಆತಂಕಕ್ಕೆ ಒಳಗಾಗುತ್ತಿದ್ದೆ. ಅಮ್ಮ ಹೇಳುತ್ತಿದ್ದರು, ಬಿಸ್ಕತ್ತು ಮಿಠಾಯಿ ಎಲ್ಲ ತಿನ್ನುವಂತಿರಲಿಲ್ಲ. ಹಾಗೆ ತಿಂದರೆ ವೈದ್ಯರಿಗೆ ಕೈ ಹಿಡಿವಾಗ ತಿಳಿದುಬಿಡುತ್ತಿತ್ತು. ಹಾಗೆ ನಾನು ತಿಂದದ್ದು ಗೊತ್ತಾಗಿ ವೈದ್ಯರು ಬಯ್ದರೆ ಎಂಬ ಆತಂಕ.  ಆನಂತರ ವೈದ್ಯರು ಅದೇನೋ ಕಷಾಯ ಕೊಡುತ್ತಿದ್ದರು. ಅದನ್ನು ನೋಡುವಾಗಲೇ ಭಯವಾಗುತ್ತಿತ್ತು. ನಾನು ಕೆಟ್ಟದ್ದು ತಿಂದಷ್ಟು,  ಆ ಕಷಾಯ ಕೆಟ್ಟದಾಗಿರುತ್ತಿತ್ತು. ಇನ್ನೊಂದು ಮಾತ್ರೆ ಅದು ಮಾತ್ರ ಬಹಳ ಇಷ್ಟ. ಅದನ್ನು ತಿನ್ನುವುದಕ್ಕೆ ಸಣ್ಣ ಬಾಟಲಿ ಜೇನು ತೆಗೆದುಕೊಳ್ಳುತ್ತಿದ್ದರು. ಆ ಜೇನು ಬಾಟಲ್ ಕೂಡ ಅಷ್ಟೆ, ಅದಕ್ಕೆ ಕೆಂಫು ಮಯಣದ ಮುಚ್ಚಳವಿರುತ್ತಿತ್ತು.  ಆಗ ನಮ್ಮ ಮನೆ ಉರ್ವ ಸ್ಟೋರ್ ನಲ್ಲಿಇಳಿದು ದೂರ ನಡೆದು ಹೋಗಬೇಕಿತ್ತು. ಕಾರ್ ಸ್ಟ್ರೀಟ್ ನಿಂದ ಉರ್ವ ಸ್ಟೋರ್ ಹೋಗಬೇಕಾದರೆ 13 ನಂಬರ್ ನ ಸಿ ಪಿ ಸಿ ಬಸ್ಸು  ಇರುತ್ತಿತ್ತು.  ಸಿ ಪಿ ಸಿ ಬಸ್ ಎಂದರೆ ಅದೊಂದು ವಿಚಿತ್ರ ಮಾದರಿಯ ಬಸ್, ಪ್ರೀಮಿಯರ್ ಕಂಪೆನಿಯ ಬಸ್, ಈಗ ಮಂಗಳೂರಲ್ಲಿ ಒಂದು ಕೂಡ ಇಲ್ಲ.


ಬಾಲ್ಯದಲ್ಲಿರುವಾಗ ಇನ್ನೊಂದು ಮುಖ್ಯ ವಿಷಯ. ಅದನ್ನು ಹೇಳುವುದೇ ಈ ಲೇಖನ ಉದ್ದೇಶ. ಆಗ ಆಟವಾಡುವಾಗಲೆಲ್ಲ ಬಿದ್ದು ಗಾಯವಾದರೆ ನಮ್ಮ ಮನೆಯ ಹತ್ತಿರವೆ ಒಬ್ಬರು ಬಾಯಮ್ಮ ಇದ್ದರು. ಮೆಡ್ ಬಾಯಿ ಅಂತ ಹೇಳುತ್ತಿದ್ದರು. ಹೆರಿಗೆ ಮತ್ತು ಸಣ್ಣ ಪುಟ್ಟ ವೈದ್ಯಕೀಯ ಚಿಕಿತ್ಸೆಗೆ ಇವರು ಕರೆದಲ್ಲಿಗೆ ಹೋಗುತ್ತಿದ್ದರು. ಈ ಬಾಯಮ್ಮ ಗಾಯಕ್ಕೆ ಅದೆಂಥದೋ ಒಂದು ಔಷಧಿ ಹಾಕುತ್ತಿದ್ದರು. ದೊಡ್ಡ ಬಾಟಲಿ ಮುಚ್ಚಳಕ್ಕೆ ತೆಂಗಿನ ಚೆಪ್ಪು...(ತೆಂಗಿನ ಹುರಿ) ಅದ್ದಿ  ಮದ್ದು ಹಚ್ಚುತ್ತಿದ್ದರು. ಅಬ್ಬಾ ನಮ್ಮ ಚೀರಾಟ ಕೇಳಬೇಕು.   ಇನ್ನು ಗಾಯಕ್ಕೆ ನಮ್ಮ ಮನೆಯಲ್ಲೇ ಒಂದು ಎಣ್ಣೆ ನಮ್ಮಜ್ಜಿ ಕಾಯಿಸಿ ಇಡುತ್ತಿದ್ದರು. ಈಗ ಕೇಳಿದರೆ ನಗು ಬರಬಹುದು. ಹೌದು, ಆ ಎಣ್ಣೆ ಮಾಡುವ ವಿಧಾನವೇ ಹಾಗೆ.   ಆಡು (ಮೇಕೆ) ಹಾಕಿದ  ಬಿಟ್ಟೆ ಅಂದರೆ ಆಡಿನ ಕಕ್ಕ...ಕಪ್ಪಗೆ ಕಡಲೆ ಕಾಳಿನಂತೆ ಇರುತ್ತದೆ. ಅದನ್ನು ಗುದ್ದಿ ಪುಡಿ ಮಾಡಿ ತೆಂಗಿನ ಎಣ್ಣೆಗೆ ಹಾಗಿ ಕಾಯಿಸಿ ಇಡುತ್ತಿದ್ದರು. ಅದನ್ನು ಗಾಯಕ್ಕೆ ಹಚ್ಚಿದರೆ ಗಾಯ ಬೇಗನೆ ವಾಸಿಯಾಗುತ್ತಿತ್ತು. ಈ ಔಷಧ ಕೆಲವರಿಗೆ ನೆನಪಿರಬಹುದು. ಆಡು ಬಿಟ್ಟೆಯ ಈ ಎಣ್ಣೆ ಅದ್ಭುತ ಔಷಧಿಯುಕ್ತ. ಆಡು ಮುಟ್ಟದಿದ್ದ ಸೊಪ್ಪು ಇಲ್ಲ. ಹಾಗಾಗಿ ಆಡಿನ ಬಿಟ್ಟೆ ಕೂಡ ಔಷಧಿಯುಕ್ತ.  ಇದು ಈಗ ಎಷ್ಟು ಜನರಿಗೆ ಗೊತ್ತಿದೆಯೋ ತಿಳಿಯದು. ಆದರೆ ಬಿಟ್ಟೆ ಸಿಕ್ಕಿದರೆ ಯಾರೂ ಪ್ರಯತ್ನಿಸಿ ನೋಡಬಹುದು. ಗಾಯಕ್ಕೆ ಒಂದು ಅತ್ಯುತ್ತಮ ಔಷಧಿ. 




Friday, May 21, 2021

ಬ್ರಹ್ಮ ಕರ್ಮ

            ಪುರಾಣದಲ್ಲಿನ  ಒಂದು ಕಥೆ. ಯಜ್ಞ ಸಂರಕ್ಷಣೆಗಾಗಿ ಮಹರ್ಷಿ ವಿಶ್ವಾಮಿತ್ರರು  ದಶರಥ ಪುತ್ರ ಶ್ರೀರಾಮ ಲಕ್ಷ್ಮಣರನ್ನು ಕಾಡಿಗೆ ಕರೆದುಕೊಂಡು ಬರುತ್ತಾರೆ . ವಿಶ್ವಾಮಿತ್ರರು ಹಮ್ಮಿಕೊಂಡಿದ್ದ ಯಜ್ಞಕ್ಕೆ ರಾಕ್ಷಸರಾದ, ತಾಟಕಿ ಹಾಗೂ  ಆಕೆಯ ಮಕ್ಕಳಾದ ಮಾರೀಚ ಮತ್ತು ಸುಬಾಹು ಸದಾ ತೊಂದರೆಯನ್ನು ಕೊಡುತ್ತಿದ್ದರು. ಇವರ ವಧೆಗಾಗಿ ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದು ಕೊಂಡು ಬಂದು ಅವರಿಗೆ ತಮ್ಮಲ್ಲಿ ನೆಲೆಯಾಗಿದ್ದ ಮಂತ್ರಾಸ್ತ್ರಗಳನ್ನೂ ಉಪದೇಶ ಮಾಡುತ್ತಾರೆ. ಯಾಕೆಂದರೆ ರಾಕ್ಷಸರ ಪರಾಕ್ರಮ ಶಕ್ತಿಯನ್ನು ಅವರ ಮಾಯಾವಿದ್ಯೆಯನ್ನು ಅವರು ಅರಿತವರಾಗಿದ್ದಾರೆ. ಅದರಲ್ಲೂ ಮಾರೀಚ ಮಾಯಾವಿದ್ಯೆಗೆ ಪ್ರಸಿದ್ಧ.  ತಾಟಕಿ ಮತ್ತು ಸುಬಾಹುವನ್ನು ಶ್ರೀರಾಮ ಸ್ಥಳದಲ್ಲೇ ಸಂಹರಿಸುತ್ತಾನೆ. ಆದರೆ ಮಾರೀಚ ಮಹಾ ಮಾಯಾವಿ. ಆತ ಬ್ರಾಹ್ಮಣ ವೇಶಧರಿಸಿ ಯಜ್ಚಮಾಡುತ್ತಿದ್ದ ಬ್ರಾಹ್ಮಣರ ಜತೆಗೆ ಸೇರಿದ್ದ. ಶ್ರೀರಾಮ ಉಳಿದ ಇಬ್ಬರನ್ನು ಸಂಹಾರ ಮಾಡಿದ್ದರೆ ಬ್ರಾಹ್ಮಣ ರೂಪದಲ್ಲಿದ್ದ ಮಾರೀಚನನ್ನು ಸಂಹರಿಸದೆ ತನ್ನ ಬಾಣಗಳಿಂದ  ಯೋಚನಾಂತರ ಹಾರಿಸುತ್ತಾನೆ.  ವಾಸ್ತವದಲ್ಲಿ ಅತನನ್ನು ಸಂಹರಿಸುವುದು ಕಷ್ಟ ಸಾಧ್ಯವೇನಲ್ಲ. ಆದರೆ ಮಾರೀಚ ಜೀವ ಉಳಿಸಿಕೊಳ್ಳುವುದಕ್ಕೆ ಕಾರಣವಿದೆ. ಆತ ಬದುಕುವುದಕ್ಕೆ ಬ್ರಾಹ್ಮಣ ವೇಶದ ಮೊರೆ ಹೋಗುತ್ತಾನೆ.  ಬ್ರಾಹ್ಮಣ ವೇಶಧಾರಿಯನ್ನು ಸಂಹರಿಸದೆ ಬಿಟ್ಟದ್ದಕ್ಕೆ ಹಲವು ಕಾರಣಗಳಿರಬಹುದು. ಆದರೆ ತತ್ಕಾಲದಲ್ಲಿ ಆತನಿಗೆ ಬ್ರಾಹ್ಮಣ ವೇಶಕೂಡ ರಕ್ಷಣೆಯನ್ನು ಒದಗಿಸುತ್ತದೆ. ಅದರ ಅರ್ಥ ಬ್ರಾಹ್ಮಣ್ಯ ಅದು ಎಷ್ಟು ಶ್ರೇಷ್ಠ ಎಂಬುದನ್ನು ರಾಮ ತೋರಿಸಿಕೊಡುತ್ತಾನೆ. ಮಾರೀಚ ಪ್ರಾಣ ಉಳಿಸಿಕೊಳ್ಳುತ್ತಾನೆ.  

     ಬ್ರಾಹ್ಮಣನಾಗಿ ಹುಟ್ಟುವುದು ಮಾತ್ರವಲ್ಲ ಬ್ರಾಹ್ಮಣನ ಯಾವುದಾದರೂ ಒಂದು ರೂಪವೂ ಗುಣವೂ ಪೂಜ್ಯನಿಯವಾಗಿದೆ. ಅದು ಶಿಕ್ಷಾರ್ಹ ಅಪರಾಧದಿಂದಲೂ ಮುಕ್ಕ್ತನನ್ನಾಗಿಸುತ್ತದೆ. ಒಂದು ಕ್ಷಣದ ಬ್ರಹ್ಮತ್ವ ಹಾದಿಯೂ ಬ್ರಹ್ಮ ರೂಪಿಯಾಗುತ್ತದೆ.  ಈ ಕಥೆಯಲ್ಲಿ ಬ್ರಾಹ್ಮಣ  ವರಿಷ್ಠತೆಯನ್ನು ಅರಿಯಬೇಕು.

            ದೈವಾಧೀನಂ ಜಗತ್‌ಸರ್ವಂ ಮಂತ್ರಾಧೀನಂತು ದೈವತಂ ತನ್ಮಂತ್ರಾ ಬ್ರಾಹ್ಮಣಾಧೀನಂ ಬ್ರಾಹ್ಮಣೋ ಮಮದೇವತಾ, ಮಂತ್ರ ಯಾರ ಆಧೀನವಿದೆಯೋ ಆತ ಬ್ರಾಹ್ಮಣನಾಗುತ್ತಾನೆ. ದೇವರಾಗುತ್ತಾನೆ. ದೇವರು ಎಂದರೆ ಅದು ಶ್ರೇಷ್ಠತೆಯ ಸಂಕೇತ. ವರೇಣ್ಯಂ ಅಂತ ಉದ್ಗರಿಸುವುದೇ ಅದಕ್ಕಾಗಿ. ಜನ್ಮದಿಂದ ಎಲ್ಲರೂ ಮನುಷ್ಯರೆಅನಂತರದ ಸಂಸ್ಕಾರವೇ ಅತನನ್ನು ಶ್ರೇಷ್ಠನನ್ನಾಗಿಸುವುದು. ಪ್ರತಿಯೊಂದು ಸಂಸ್ಕಾರದ ಉದ್ದೇಶ ಒಂದೇ ಅದು ಅಮೃತತ್ವದ ಕಡೆಗಿನ ಯಾನ. ಅದಕ್ಕೆ ನಾಂದಿ ಹಾಡುವುದೇ ಬ್ರಹ್ಮೋಪದೇಶ.

             ಬಾಲ್ಯದಲ್ಲಿ ಒಂದಷ್ಟು ಸಮಯ ನಾನು ಅಜ್ಜನೊಂದಿಗೆ ಪೌರೋತ್ಯದ ಸಹಾಯಕನಾಗಿ ಹೋಗುತ್ತಿದೆ. ಕೇವಲ ಹತ್ತರ ಹರಯದ ಬಾಲಕ. ಅಜ್ಜ ಹೇಳಿಕೊಟ್ಟದ್ದು ಉರು ಹೊಡೆಯುವುದು ಅಷ್ಟೇ ಗೊತ್ತಿರುವುದು. ಆದರೆ ಅಜ್ಜನ ಜತೆಯಲ್ಲಿ ಕ್ರಿಯಾತ್ಮಕವಾಗಿ ಕಲಿತದ್ದು ಹಲವು. ಅಜ್ಜ ಅಖಂಡ ಋಗ್ವೇದಿ. ಅಷ್ಟಕವಷ್ಟೂ ನಾಲಗೆಯಲ್ಲಿ ನೆಲೆ ನಿಂತು ಸರಸ್ವತೀ ಅನುಗ್ರಹ ಸದಾ ಇರುತ್ತಿತ್ತು. ಸ್ಫಟಿಕದಂತಾ ಮಂತ್ರೋಚ್ಚಾರ. ಆ ಬೀಜ ನನ್ನಲ್ಲೂ ಬಿತ್ತಿದ್ದರು. ಆದರೆ ಅದೃಷ್ಟ ನನಗಿಲ್ಲ. ಬೀಜ ಚಿಗುರಿದ್ದು ಮಾತ್ರ ಮರವಾಗಲಿಲ್ಲ.  ಯಾವುದೇ ಕ್ರಿಯಾಭಾಗವಿರಲಿ ಅಜ್ಜ ಪುಸ್ತಕ ನೋಡಿ ಮಂತ್ರ ಹೇಳಿದ್ದು ನಾನು ಕಂಡಿಲ್ಲ. ಮಂತ್ರ ಬಾಯಿಯ ತುದಿಯಲ್ಲಿರಬೇಕು. ದೃಷ್ಟಿ ಕ್ರಿಯೆಯಲ್ಲಿರಬೇಕು.  ಪುಸ್ತಕ ನೋಡಿ ಮಂತ್ರ ಹೇಳಿದರೆ  ಕಲಿಸಿದ ಗುರುವಿನ ಸ್ಥಾನ ಚ್ಯುತಿಯಾದಂತೆ.  ಈ ತತ್ವವೆಲ್ಲ ಅಜ್ಜನಿಂದ ಕಲಿತದ್ದು. ಆಗ ಹರಯ ಸಣ್ಣದು ಇದರ ವೈಶಾಲ್ಯತೆ ಅರ್ಥವಾಗಲಿಲ್ಲ. ಈಗ ಪುಸ್ತಕವಿಲ್ಲದ ಪುರೋಹಿತರನ್ನು ಕಾಣುವುದು ಅಪರೂಪ.  ಇಲ್ಲಿ ವಿಮರ್ಶೆಯಲ್ಲ ವಿಶೇಷತೆಯನ್ನಷ್ಟೇ ಉಲ್ಲೆಖಿಸುವುದು.   ನಾವು ಮಂತ್ರಾಭ್ಯಾಸದಲ್ಲಿ ವರ್ಗಸಂತೆ ಹಾಕುತ್ತ ಇದ್ದರೆ ಒಂದು ಸ್ವರ ವಿಸರ್ಗವೋ, ಅಲ್ಪಪ್ರಾಣ ಮಹಾಪ್ರಾಣಗಳೋ  ಒಂದಕ್ಷರದ ಉಚ್ಚಾರದಲ್ಲಿ ದೋಷ ಕೇಳಿದರೆ ಅಜ್ಜ ಎಲ್ಲೇ ಇದ್ದರೂ ಎಚ್ಚರಿಸುತ್ತಿದ್ದರು. ತಪ್ಪು ಸರಿಯಾಗದೆ ಮುಂದೆ ಹೋಗುವ ಹಾಗಿಲ್ಲ. ಇಂತಹ ಅಜ್ಜನೊಂದಿಗೆ ಪೌರೋಹಿತ್ಯ ಎಂದರೆ ಅದು ಶಾಲೆಯ ಪ್ರಯೋಗಾಲಯವನ್ನು ಹೊಕ್ಕಂತೆ. ನಮ್ಮಜ್ಜ ಪೌರೋಹಿತ್ಯದಲ್ಲಿ ದಕ್ಷಿಣೆಯ ಮುಖ ಕಂಡವರಲ್ಲ, ತೀರ ಬಡವನೋ ಶ್ರೀಮಂತನೋ ಮಾಡುವ ಕರ್ಮಕ್ಕೆ ವೆತ್ಯಾಸವಿಲ್ಲ.

            ಇಂತಹ ಆದರ್ಶ ಮಯ ಅಜ್ಜ ಪೌರೋಹಿತ್ಯಕ್ಕೆ ಹೋಗಿ ಕ್ರಿಯಾಭಾಗದ ಆರಂಭದಲ್ಲೇ ಕರ್ತ್ರುವಿನಲ್ಲಿ ಕೇಳುತ್ತಾರೆ ಸಂಧ್ಯಾವಂದನೆಯಾಗಿದೆಯೋಹೀಗೆ ಎಷ್ಟು ಜನ ಪುರೋಹಿತರು ವಿಚಾರಿಸುತ್ತಾರೋ ತಿಳಿಯದು. ಆದರೆ ಪುರೋಹಿತ ಧರ್ಮ ಅದು. ಹಲವು ಕಡೆ ಪುರೋಹಿತರೇ ಸ್ವತಃ ಗಡಿಬಿಡಿಗೆ ಸಂಧ್ಯಾವಂದನೆ ಮಾಡಿರುವುದಿಲ್ಲ. ಮಾಡಿದರೂ ಶಾಸ್ತ್ರಕ್ಕೆ ಎಷ್ಟು ಬೇಕೋ ಅಷ್ಟೇ.  ಅದಿರಲಿ ಗುರು ಸ್ಥಾನ ಪ್ರಶ್ನಾತೀತ. ಸಂಧ್ಯಾವಂದನೆ ಮಾಡಲೇ ಬೇಕು. ಹೀಗೆ ಕೇಳುವುದು ಕೂಡ ಸರಿಯಲ್ಲ. ಆದರೆ ವಸ್ತುಸ್ಥಿತಿ ತೀರ ಭಿನ್ನವಾಗಿರುತ್ತದೆ. ಪುರೋಹಿತ ಎಂದರೆ ಪುರು ಅಂದರೆ ದೇಹ ದೇಹಕ್ಕೆ ಹಿತವನ್ನು ಬಯಸುವವನು. ಅರ್ಥಾತ್ ಬ್ರಹ್ಮತ್ವದ ಕಡೆಗೆ ಸಂಚರಿಸುವುದಕ್ಕೆ ಗುರುಸ್ಥಾನದಲ್ಲಿರುವವನು. ಅಯೋಧ್ಯೆಯಲ್ಲಿ ಸೂರ್ಯವಂಶಜರಿಗೆ  ವಸಿಷ್ಠ ಮುನಿವರ್ಯ ಹೇಗೋ ಹಾಗೆ. ಶಿಷ್ಯ ತಪ್ಪಿದರೆ ಎಚ್ಚರಿಸುತ್ತಿರಬೇಕು. ಎಚ್ಚರಿಕೆ ಎಂದರೆ ಬಡಿದೆಬ್ಬಿಸುವುದು ಎಂದರ್ಥ. ಇಲ್ಲವಾದರೆ ಹೋಗುವ ಹಾದಿ ಸಮರ್ಪಕವಾಗುವುದಿಲ್ಲ. ಯಾವುದೇ ಯಜ್ಞ ಯಾಗಾದಿಗಳನ್ನು ಮಾಡುವುದರಲ್ಲಿ ಯಜಮಾನ ಕರ್ಮಭ್ರಷ್ಠನಾಗಿರಬಾರದು. ಹಾಗಿದ್ದರೆ ಆಚರಿಸುವ ಕ್ರಿಯೆ ನಿಷ್ಫಲವಾಗುತ್ತದೆ. ಅಥವ ಅದರ ಉದ್ದೇಶ ಏನೋ ಅದು ವಿಕಲ್ಪವಾಗುತ್ತದೆ. ವಿಚಿತ್ರ ಎಂದರೆ ಹಲವು ಸಲ ಮಧ್ಯಾಹ್ನದ ಪೂಜೆಗೆ ಕುಳಿತರೆ ಯಜಮಾನ ಸಂಧ್ಯಾವಂದನೆಯನ್ನೇ ಮಾಡಿರುವುದಿಲ್ಲ. ಹಾಗಾಗಿ ಪುರೋಹಿತನಾದವನು ಯಜಮಾನನಿಗೆ ಎಚ್ಚರಿಸಲೇ ಬೇಕು. ನಿತ್ಯಕರ್ಮಕ್ಕಿಂತ ಬೇರೆ ಯಜ್ಞವಿಲ್ಲ. 


            ಸಂಧ್ಯಾವಂದನೆ, ಸಂಕಲ್ಪವಿಲ್ಲದೇ ಮಾಡುವ ಕರ್ಮ. ಮಮೋಪಾತ್ತ ದುರಿತ ಕ್ಷಯ ದ್ವಾರ, ಅಂತಲೇ ಆರಂಭಿಸುವಲ್ಲಿ ಸಂಧ್ಯಾವಂದನೆಯ ಮಹತ್ವ ಅರಿವಾಗುತ್ತದೆ. ಕೇವಲ ದುರಿತವನ್ನು ಕಳೆಯುವುದಕ್ಕಾಗಿ. ಅದು ಜನ್ಮಾಂತರದ ದುರಿತವೇ ಆಗಿರಬಹುದು. ಸಂಧ್ಯಾವಂದನೆ ಸಂಧಿಕಾಲದಲ್ಲಿ ಆಚರಿಸುವ ಕರ್ಮ. ಎಲ್ಲೂ ಹೇಗೂ ಆಚರಿಸಬಹುದು. ಇದರ ವಿಶೇಷ ಒಂದೇ ಇಲ್ಲಿ ಆವಾಹನೆ ಪ್ರತಿಷ್ಠೆ ಯಾವುದೂ ಇಲ್ಲ. ದೇವರ ವಿಗ್ರಹವಿಲ್ಲ.ಯಾವ ದೇವರ ರೂಪವೂ ಇಲ್ಲ. ದೊಡ್ಡದಾಗಿ ಮಂತ್ರಗಳನ್ನು ಹೇಳುವ ಹಾಗೂ ಇಲ್ಲ. ಇದರಲ್ಲಿ ಅಷ್ಟೂ ಖಾಸಗೀತನವಿದೆ.   ಕೇವಲ ನಮ್ಮ ಆತ್ಮದ ಸ್ವರೂಪ ಮಾತ್ರ.  ದೊಡ್ಡದಾಗಿ ಮಂತ್ರಗಳನ್ನು ಹೇಳುವ ಹಾಗೂ ಇಲ್ಲ. ಇದರಲ್ಲಿ ಅಷ್ಟೂ ಖಾಸಗೀತನವಿದೆ.     ಹಾಗಾಗಿ  ಇದು ಜನ್ಮಾಂತರದ ದುರಿತ ನಿವಾರಕ. ಅಂಗೈಯಲ್ಲಿರುವ ಜಲವೇ ಇಲ್ಲಿ ಎಲ್ಲವೂ ಆಗಿರುತ್ತದೆ. ನಿರಾಕಾರ ನಿರ್ಗುಣ ಹೀಗೆ ಭಗವದ್ಗೀತೆಯಲ್ಲಿ ಹೇಳಿದ ಪರಮಾತ್ಮ ಸ್ವರೂಪ. ಪರಮಾತ್ಮನಿಗೆ ನಾವೇನು ಕಲ್ಪಿಸುತ್ತೇವೋ ಅದಾವುದೂ ಇಲ್ಲ.  ಎಲ್ಲದಕ್ಕೂ ಅತೀತನು. ದೇವತೆಗಳು ಅಗ್ನಿ ಮುಖರು ಅಂತ ಹೇಳುವುದಿದೆ. ಯಾವುದೇ ದೇವರು ಏನು ಸ್ವೀಕರಿಸುವುದಿದ್ದರೂ ಅಗ್ನಿಮುಖೇನ ಆಗಿರುತ್ತದೆ. ಅಗ್ನಿ ವಾಯು ಜಲ ಹೀಗೆ ಭೂತಗಳಿಗೆ ಯಾವುದೇ ಘನವಾದ ರೂಪವಿಲ್ಲ. ಇದೇ ಭಗವಂತನ ತತ್ವ. ರೂಪವಿಲ್ಲ ಗುಣವಿಲ್ಲ ಭಾವವಿಲ್ಲ. ಭಗವಂತನ ಎದುರು ನಿಂತಾಗಲೂ ನಾವೂ ಅದೇ ಭಾವದಲ್ಲಿರಬೇಕು. ದುಃಖ ನಗು ಉದ್ರೇಕ ದ್ವೇಷ ಯಾವುದೇ ಭಾವವಿಲ್ಲದೆ ಭಗವಂತನೆದುರು ನಿಂತಾಗ ಮಾತ್ರವೇ ಭಗವಂತನ ಸಾನ್ನಿಧ್ಯದ ಅರಿವಾಗುತ್ತದೆ. ಅದೆಲ್ಲವೂ ಒದಗಿ ಬರುವುದು ಸಂಧ್ಯಾವಂದನೆಯಲ್ಲಿ. ಸಂಧ್ಯಾವಂದನೆಯ ಶ್ರೇಷ್ಠತೆ ಗರಿಷ್ಠತೆಯದು.  ಎಷ್ಟು ಸೂಕ್ಷ್ಮವೋ ಅಷ್ಟೇ ಅಗಾಧವಾಗಿರುತ್ತದೆ.

             ಸಂಧ್ಯಾವಂದನೆ ಎಂಬ ಕ್ರಿಯೆ ಅದು ಆಪೋಶನ ಅರ್ಘ್ಯ ಜಪ ಹೀಗೆ ವರ್ಗಿಕರಿಸುವುದಕ್ಕಿಂತ ಸಂಧ್ಯಾಕಾಲದ ಕರ್ಮ ಎಂದೇ ಕಾಣಬೇಕು ಸಂಸ್ಕಾರ ರೀತ್ಯಾ ಸಂಧ್ಯಾವಂದನೆ ಬೇರೆ ಬೇರೆಯಾಗಿರುತ್ತದೆ.  ಕೆಲವರಿಗೆ ಅದು ಮನೆ ದೇವರಿಗೆ ದೀಪ ಹಚ್ಚಿ ನಮಸ್ಕರಿಸುವುದಕ್ಕೆ ಸೀಮಿತವಾಗಿರಬಹುದು. ಇನ್ನು ಕೆಲವರಿಗೆ ಕೇವಲ ನಾಮ ಸ್ಮರಣೆಗೆ ಸೀಮಿತವಾಗಿರಬಹುದು. ಬ್ರಹ್ಮೋಪದೇಶ ಸಂಸ್ಕಾರ ಪಡೆದವನು ಜಪತಪ ಅಂತ ಕರ್ಮನಿಷ್ಠನಾಗಿರುತ್ತಾನೆ. ಏನಿದ್ದರೂ ಈ ಸಂಧ್ಯಾವಂದನೆಯಿಂದ  ನಂತರ ಉಳಿದೆಲ್ಲವೂ ದ್ವಿತೀಯಗಳಾಗಿಬಿಡುತ್ತವೆ. ಈ ಆಚರಣೆಯನ್ನು ಬಿಟ್ಟಲ್ಲಿ ಉಳಿದೆಲ್ಲ ಆಚರಣೆಗಳೂ ಅರ್ಥಹೀನವಾಗುತ್ತವೆ. ಆತ್ಮ ಜಾಗೃತಿ ಇಲ್ಲದವನು ಏನು ಮಾಡಿದರೂ ಸತ್ಫಲವನ್ನು ಕೊಡುವುದಿಲ್ಲ. ಒಂದು ವೇಳೆ ಸಿಕ್ಕಿದ ಫಲವೂ ಅದು ಸತ್ಫಲ ಎನಿಸುವುದಿಲ್ಲ.  ಸಂಧ್ಯಾವಂದನೆ ಜನ್ಮವನ್ನು ಪರಿಶುದ್ಧಗೊಳಿಸುತ್ತದೆ. ಹಾಗಾಗಿ ಬ್ರಾಹ್ಮಣ ಎಂದರೆ ಆತ ಪರಿಶುದ್ದತೆಯ ಸಂಕೇತ. ಆತ ಎಂದಿಗೂ ಸ್ವಚ್ಛ.  

       ಪಾಯಸ  ಎಂದರೆ ಸಿಹಿ.  ಸಪ್ಪೆ ಪಾಯಸ ಎಂಬುದಿಲ್ಲ. ಅಥವಾ ಸಿಹಿ ಪಾಯಸ ಅಂತ ವಿಶೇಷಣ ಹೇಳುವುದಿಲ್ಲ. ಬ್ರಾಹ್ಮಣನಿಗೆ ಸ್ವಚ್ಛ ಎಂಬ ವಿಶೇಷಣದ ಅಗತ್ಯವಿರುವುದಿಲ್ಲ. ಆದರೂ ಇಂದು ಸ್ವಚ್ಛ ಎಂದು ಉಲ್ಲೇಖಿಸುವಂತೆ ಆಗಿರುವುದು ಸುಳ್ಳಲ್ಲಒಂದು ವಿಪರ್ಯಾಸ. 

            ನನ್ನ ಸಂಬಂಧಿ ಯೊಬ್ಬರು ಶಬರಿಮಲೆ ಹೋಗುವುದಕ್ಕೆ ವೃತ ದೀಕ್ಷೆಯನ್ನು ತೊಟ್ಟಿದ್ದರು. ವೃತ ನಿಯಮದಂತೆ ಮುಂಜಾವಿನಲ್ಲಿ ಸ್ನಾನ ಮಾಡಿ ಶರಣು ಕರೆಯುವುದು ವೃತದ ನಿಯಮದಲ್ಲಿ ಒಂದು. ಇದು ಸಂಧ್ಯಾವಂದನೆಯ ನಂತರ ಮಾಡಬೇಕೆಮೊದಲು ಮಾಡಬೇಕೇ? ಒಂದು ಚರ್ಚೆ. ಸಂಶಯ ಬೇಡ ಸಂಧ್ಯೆಯೇ ಮೊದಲು ಆಚರಿಸಲ್ಪಡಬೇಕು. ಶಬರಿಮಲೆ ಯಾತ್ರೆ ಅದೊಂದು ವೃತ. ಅದರ ಸಂಕಲ್ಪಕ್ಕೆ ಕಾರಣಗಳಿರಬಹುದು. ವೃತಕ್ಕಿಂತ ಮೊದಲು ಕರ್ಮ ಅಂದರೆ ಕರ್ತವ್ಯ. ವೃತ ಅನಿವಾರ್ಯವಲ್ಲ. ಆದರೆ ಕರ್ಮ ಅನಿವಾರ್ಯವಾಗುತ್ತದೆ. ಇದೇ ರೀತಿ ಉಳಿದೆಲ್ಲವೂ. ಯಜ್ಞಯಾಗಾದಿಗಳಾಗಿರಬಹುದು, ದೇವರ ದರ್ಶನವೋ ಉತ್ಸವವೋ ಏನು ಆಗಿರಬಹುದು ಸಂಧ್ಯಾವಂದನೆ ಅನುಷ್ಠಾನ ಇಲ್ಲವಾದರೆ ಅದೆಲ್ಲವೂ ವ್ಯರ್ಥ.

             ನಮ್ಮ ಸಂಸ್ಕಾರಗಳಲ್ಲಿ ದೈನಂದಿನ ಕಾರ್ಯಗಳಿಗೆ ಹೆಚ್ಚು ಮಹತ್ವವಿದೆ. ನಾಳೆಯದು ಹೇಗೋ ವರ್ತಮಾನದಲ್ಲಿ ನಾವು ಜೀವಿಸಲ್ಪಟ್ಟಿದ್ದೇವೆ ಎಂಬುದೇ ಮುಖ್ಯ. ದಿನ ನಿತ್ಯ ಮನೆಯಲ್ಲಿ ನಾವು ಆಚರಿಸುವ ನಿತ್ಯ ಕರ್ಮಗಳೇ ಪ್ರಧಾನ. ಹಾಗಾಗಿ ನಮ್ಮಲ್ಲಿ ದೇವಸ್ಥಾನಕ್ಕೆ ಹೋಗುವುದಕ್ಕೆ ಬಲವಾದ ನಿಯಮವಿಲ್ಲ. ಆತ್ಮ ಶುದ್ದಿಯೇ ಪ್ರಧಾನ. ಅದಕ್ಕೆ ನಮಗೆ  ಸಾಧನ ಈ ಸಂಧ್ಯಾವಂದನ.

     ಬಹಳ ಸರಳವಾಗಿ ಸುಲಭವಾಗಿ ಆಚರಿಸಲ್ಪಡುವ ಸಂಧ್ಯಾವಂದನೆ ನಮ್ಮ ದೈನಂದಿನ ಕಾರ್ಯಗಳಿಂದ ದೂರವಾಗುತ್ತದೆ. ಯಾವೂದೋ ವಿಜ್ರಂಭಣೆಯ ಅಡಂಬರದ ಆರಾಧನೆ ಇರುತ್ತದೆ. ಹಲವು ಸಲ ಇದು ಪರ್ಮಾತ್ಮ ಅನುಗ್ರಹಕ್ಕೆ ಬದಲಾಗಿ ಯಾರನ್ನೋ ಮೆಚ್ಚಿಸುವುದಕ್ಕೆ ಮತ್ತು ಕೇವಲ ಪ್ರದರ್ಶನಕ್ಕೆ ಬಳಕೆಯಾಗುತ್ತದೆ. ಖಾಸಗಿಯಾಗಿ ಆಚರಿಸಲೇ ಬೇಕಾದ ಅನಿವಾರ್ಯ ಕಾರ್ಯ ಮಹತ್ವವನ್ನು ಕಳೆದುಕೊಳ್ಳುತ್ತದೆ. ಅದಕ್ಕೆ ಬೆಳೆದು ಬಂದ ವಾತಾವಾರಣ , ಬಿಡುವಿಲ್ಲದ ಕೆಲಸ, ಜೀವನ ಕ್ರಮಗಳು ಹೀಗೆ ಹಲವಾರು ವ್ಯರ್ಥ ಕಾರಣಗಳಿರುತ್ತವೆ. ಇದೆಲ್ಲ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವ ಹುಂಬ ಕಾರಣಗಳು. ರಾಮಾಯಣದ ದುಷ್ಟ ರಾವಣನೂ ಬಿಡದೆ ಸಂಧ್ಯಾವಂದನೆ ಮಾಡುತ್ತಿದ್ದ. ಸಂಸ್ಕಾರ ಹೀನ ವಾನರ ವಾಲಿಯೂ ಸಂಧ್ಯಾವಂದನೆ ಮಾಡುತ್ತಿದ್ದ. ಪುರಾಣವನ್ನೂ  ದೇವರನ್ನೂ  ಅತಿಯಾಗಿ ನಂಬುವ ನಾವು ರಾವಣನಿಂದಲೂ ಕೆಟ್ಟವರಾಗಿಬಿಡುವುದು ವಿಚಿತ್ರ.

         ಒಂದು ಸಲ ನಾನು ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಹಾಗೆ ಹೊತ್ತು ಕಳೆದು ಹೊರಡುವಾಗ ಸಾಯಂಕಾಲವಾಯಿತು. ಸಾಯಂಕಾಲವಾದೊಡನೆ ನನ್ನ ಮನಸ್ಸಿನ ತುಡಿ ಆರಂಭವಾಗುತ್ತದೆ. ಒಂದು ಮುಷ್ಠಿ ನೀರು ನೆನಪಾಗುತ್ತದೆ. ಸರಿ ಮಿತ್ರರ ಮನೆಯಲ್ಲೇ ಹೇಳಿದೆ ಒಂದು ಸಂಧ್ಯಾವಂದನೆ ಮಾಡಬೇಕು. ಅಷ್ಟೇ ಆ ಮನೆಯ ಹೆಂಗಸು ಸ್ನಾನಕ್ಕೆ ಬಿಸಿ ನೀರು ಕಾಯಿಸುವುದಕ್ಕೆ ಬಚ್ಚಲಿನ ಒಲೆಗೆ ಬೆಂಕಿ ಹಚ್ಚಿದಳು. (ವಾಸ್ತವದಲ್ಲಿ ನಾನು ತಣ್ಣೀರ ಸ್ನಾನ ಮಾಡುವವನು) ನಾನು ಸ್ನಾನ ಮಾಡಿ ಬರಬೇಕಾದರೆ ದೇವರ ಕೋಣೆ ಗುಡಿಸಿ ಸಾರಿಸಿ ಸ್ವಚ್ಚ ಮಾಡಿ ಎಲ್ಲೋ ಇದ್ದ ಕವಳಿಗೆ ಸೌಟು ಫಳ ಫಳ ಹೊಳೆವಂತೆ ತೊಳೆದು ಸ್ವಚ್ಛಗೊಳಿಸಿ ಸಿದ್ಧ ಮಾಡಿ ಇಟ್ಟಿದ್ದಳು. ನಮ್ಮಲ್ಲಿ ಗಣ ಹೋಮವಾದರೂ ಅಷ್ಟು ಸ್ವಚ್ಛವಾಗುತ್ತದೆ ಎಂಬ ಭರವಸೆ ಇಲ್ಲ. ಉಡುವುದಕ್ಕೆ ಮಡಿ ವಸ್ತ್ರ ಎಲ್ಲವೂ ಸಿದ್ಧ. ನಾನು ಸಂಕೋಚದಲ್ಲಿ ಹೇಳಿದೆ  ಇಷ್ಟೇಲ್ಲಾ ಬೇಡಿತ್ತು.  ಹೆಂಗಸು ಹೇಳಿದ ಒಂದು ಮಾತು, " ಇಲ್ಲಿ ಯಾರೂ ಜಪ ಮಾಡುವವರು ಇಲ್ಲ. ನೀವು ಒಂದು ಹೊತ್ತಾದರೂ ಮಾಡುತ್ತೀರಿ  ಎಂದರೆ ಅಷ್ಟಾದರೂ ಈ ಮನೆ ಪಾವನವಾಗಲಿ. "  ಒಂದು ಹೊತ್ತಿನ ಸಂಧ್ಯಾವಂದನೆಯ ಪ್ರಭಾವ ಇದು.

            ಇಂದು ಬ್ರಾಹ್ಮಣ್ಯದ ಅಥವಾ ಸಂಧ್ಯಾವಂದನೆಯ ವಿಚಾರ ಹೇಳುವಾಗ     ಕಾಲ ಬದಲಾಗಿದೆ ಅಂತ ಹೇಳುವುದು ಸ್ವಾಭಾವಿಕ. ಹಗಲು ರಾತ್ರಿ ಮೊದಲಿನಂತೇ ಇದೆ.  ಪ್ರತಿಯೊಂದು ನಿಮಿಷವೂ ಸೇರಿ ಕಾಲವಾಗುತ್ತದೆ. ಅದು ಬದಲಾಗುವುದು ಹೊಸತೇನಲ್ಲ. ಹೊಸತಾಗಿರುವುದು ಮನುಷ್ಯನ ಜೀವನ ಶೈಲಿ. ಇದು ಅನಿವಾರ್ಯವೂ ಹೌದು. ಆದರೆ ಇವೆಲ್ಲ ಲೌಕಿಕ ಬದಲಾವಣೆಗಳು. ಇವುಗಳನ್ನು ಎಲ್ಲಾ ಅಲ್ಲದೇ ಇದ್ದರೂ ಕೆಲವನ್ನು ಬದಲಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಅನಿವಾರ್ಯ ಎನಿಸುವಾಗ ನಾವು  ನಮ್ಮಲ್ಲಿ ಏನೆಲ್ಲ ಬದಲಾವಣೆಗಳನ್ನು ಮಾಡುತ್ತೇವೆ. ಇಲ್ಲಿ  ಒಂದಷ್ಟು ಬದಲಾವಣೆಯನ್ನು ತಂದರೆ ನಾವು ಕನಸಿನಲ್ಲೂ ಊಹಿಸದೇ ಇರುವ ಪರಿವರ್ತನೆ ಸಾಧ್ಯವಿದೆ.

            ಬಾಲ್ಯದಲ್ಲಿ ಎಷ್ಟು ಕಷ್ಟವಾದರೂ ಹೆತ್ತವರು ಬ್ರಹ್ಮೋಪದೇಶ ಮಾಡುತ್ತಾರೆ. ಅಮ್ಮ ಮಡಿಲಲ್ಲಿ ಕೂರಿಸಿ ಕೊನೆಯ ಬಾರಿಗೆ ತುತ್ತನ್ನವನ್ನು ತಿನ್ನಿಸುತ್ತಾಳೆ. ಅಪ್ಪ ಮಡಿಲಲ್ಲಿ ಕೂರಿಸಿ ಗಾಯತ್ರೀ ಮಂತ್ರೋಪದೇಶವನ್ನು ಮಾಡುತ್ತಾನೆ. ಎಲ್ಲ ಮಂತ್ರಗಳು ಗುರುವಿನ ಉಪದೇಶವಾದರೆ ಗಾಯತ್ರೀ ಮಂತ್ರ ಅಪ್ಪನಿಂದ ಉಪದೇಶಿಸಲ್ಪಡುತ್ತದೆ. ಗಾಯತ್ರೀ ಮಂತ್ರದ ಮಹತ್ವ ಬೇರೆ.  ಗಾಯತ್ರೀ ಮಂತ್ರ ಎಂಬುದು ಬೀದಿ ಸರಕಿನಂತೆ ವಿಕ್ರಯವಾಗುತ್ತದೆ. ಆ ಮಂತ್ರದಿಂದ ಏನೋ ಒಂದು ಸಾಧನೆ ಆಗಬಹುದು ಎಂಬ ವಿಶ್ವಾಸ ಇರುತ್ತದೆ. ಆದರೆ ಅದನ್ನು ಉಚ್ಚರಿಸುವುದಕ್ಕೆ ಇರುವ ನಿಯಮಗಳ ಬಗ್ಗೆ ವಿಶ್ವಾಸವಿಲ್ಲ. ಆ ಮಂತ್ರದ ದೃಷ್ಟಾರನ ಬಗ್ಗೆ ಸ್ಮರಣೆ ಇಲ್ಲ. ಅದರ ಸ್ವರಭಾರವಾಗಲಿ ಪ್ರಸ್ತಾರವಾಗಲಿ ಯಾವುದೂ ಬೇಕೆನಿಸುವುದಿಲ್ಲ. ಕೇವಲ ಮಂತ್ರ ಉಚ್ಚರಿಸಬೇಕು. ನಮ್ಮ ಬೀದಿಯ ತುದಿಯಲ್ಲಿ ಒಂದು ಮಾಂಸದ ಅಂಗಡಿ ಇದೆ. ವಾರಾಂತ್ಯದಲ್ಲಿ ಮುಂಜಾನೆ ಐದು ಗಂಟೆಗೆ ಅದರ ಬಾಗಿಲು ತೆರೆಯುತ್ತದೆ. ಪ್ರಾಣಿಗಳ ಚೀತ್ಕಾರ ಆ ಮುಂಜಾನೆ ಕೇಳಿಸುತ್ತದೆ. ಅಷ್ಟು ಹೊತ್ತಿಗೆ ಮಾಂಸಕೊಳ್ಳುವುದಕ್ಕೆ ಜನ ಸರದಿ ನಿಂತಿರುತ್ತಾರೆ.  ಒಂದು ದಿನ ಯಾರದೋ ಮೊಬೈಲ್ ನ ರಿಂಗ್ ಟೋನ್ ಕೇಳಿಸುತ್ತದೆ. ಅದೇ ಗಾಯತ್ರೀ ಮಂತ್ರ!!! ಯಾವ ಪುಣ್ಯ ಸಾಧನೆಗೆ ಇದು ಅಂತ ಖೇದವಾಗುತ್ತದೆ.  ಇಲ್ಲಿ ಜನಗಣ ಮನ ಅಂತ ರಾಷ್ಟ್ರಗೀತೆ ಹೇಳುವುದಕ್ಕೆ ನಿಯಮವಿದೆ. ಇರಲೇ ಬೇಕು. ಆದರೆ ಪವಿತ್ರವಾದ ಮಂತ್ರಕ್ಕೆ ಇದಾವುದೂ ಪರಿವೆ ಇಲ್ಲ.  ಎಲ್ಲೆಂದರೆಲ್ಲಿ ಅದು ಮೊಳಗುವಾಗ ಖೇದವೆನಿಸುತ್ತದೆ.  ನಾವು ಊಟ ಮಾಡಿ ಹಸಿವು ನೀಗುವುದಕ್ಕೆ ಶುಭ್ರವಾದ ಜಾಗ ಹುಡುಕುತ್ತೇವೆ. ಹೋಗಲಿ ವಿಸರ್ಜನೆಗೂ ಅಷ್ಟೇ....ಗಲೀಜು ಸಾಧ್ಯವೇ ಇಲ್ಲ.     ಇಂತಹ ವಿಚಾರಗಳೆಲ್ಲ ಈಗ ವಿಮರ್ಶಾತೀತ ಎನಿಸಲ್ಪಡುತ್ತದೆ. ಆ ಬಗ್ಗೆ ವಿಶ್ಲೇಷಣೆಯಲ್ಲ.  ಬಾಲ್ಯದಲ್ಲಿ ಅಪ್ಪನಿಂದ ಉಪದೇಶಿಸಲ್ಪಟ್ಟ ಮಂತ್ರೋಪದೇಶದ ಅನುಷ್ಠಾನ ನಮ್ಮಲ್ಲಿ ಆಗಬೇಕು.  ಉಪನಯನ ಅಂದರೆ ದ್ವಿಜನ್ಮ ಅಲ್ಲಿಂದ ಆಗಿರುತ್ತದೆ. ಜನ್ಮ ಎತ್ತಿದ ನಂತರ ಅಪ್ಪನನ್ನು ಅಪ್ಪನ ಮಾತುಗಳನ್ನು ಮರೆಯುವಾಗ ಒಂದು ಮಂತ್ರ ಮರೆಯುವುದು ಸ್ವಾಭಾವಿಕ. ಉಪನಯನ ಆದ ಒಂದೆರಡು ದಿವಸ ಇಲ್ಲ ಒಂದೆರಡು ತಿಂಗಳು ಶ್ರದ್ಧೆಯಿಂದ ಸಂಧ್ಯಾವಂದನೆ ಅನುಷ್ಠಾನವಾದರೆ ಆನಂತರ ಜೀವನ ಶೈಲಿಗೆ ಅದು ಒಪ್ಪಿಕೊಳ್ಳುವುದಿಲ್ಲ. ಹಲವಾರು ಕಾರಣಗಳು ಹುಟ್ಟಿಕೊಳ್ಳುತ್ತವೆ. ಯಾವುದೂ ಬದಲಾವಣೆಯಲ್ಲಿ ಪೂರ್ಣ ಅಪರಾಧ ಅಂತ ಅನ್ನಿಸುವುದಿಲ್ಲ. ಮೊದಲು ಹೊಟ್ಟೆಗೆ ಕೊಡು ಆಮೇಲೆ ಪರಮಾತ್ಮನ ಬಗ್ಗೆ ಹೇಳು ಈ ಕ್ರಮದಲ್ಲಿ ಹೊಟ್ಟೆ ತುಂಬಿದ ಮೇಲೆ ಪರಮಾತ್ಮ ಅನಿವಾರ್ಯವಾಗುವುದಿಲ್ಲ.  ಶಾಲೆ ಟ್ಯೂಷನ್ ಓದು ಈ ಚಕ್ರ ಸುಳಿಯಲ್ಲಿ ಸಂಧ್ಯಾವಂದನೆ ಮೊದಲು ಕಾಣೆಯಾಗುತ್ತದೆ. 

      ಎಲ್ಲಾ ಬದಲಾವಣೆಯೂ  ಒಂದು ಕಾಲಕ್ಕೆ ಸರಿ ಅಂತ ಅಪ್ಪಿಕೊಂಡರು ಮತ್ತೊಂದು ದಿನ ಅದು ಅನಿವಾರ್ಯವಾಗುತ್ತದೆ.  ಅ ಸಮಯದಲ್ಲಿ ಹಲವರಿಗೆ ಅದನ್ನು ತೊಡಗಿಸಿಕೊಳ್ಳುವುದಕ್ಕೆ ಒಂದು ಹಿಂಜರಿಕೆ. ಮಧ್ಯವಯಸ್ಸು ದಾಟಿದೆ ಇನ್ನು ಸೌಟು ಕೊಳಗಿ ಹಿಡಿದು ಮರೆತೇ ಹೋಗಿರುವುದನ್ನು ಮತ್ತೆ ಸ್ಮರಣೆಗೆ ತರುವುದು ಕಷ್ಟವಾಗುತ್ತದೆ. ಮಂತ್ರದ ಪಾವಿತ್ರ್ಯತೆ ಅದು. ಅದು ನಿತ್ಯ ಪಠಣವಿದ್ದರೆ ಉಳಿಯುತ್ತದೆ. ಇಲ್ಲವಾದರೆ ಮೊದಲು ಅದೆಷ್ಟು ಸಲ ಹೇಳಿದ್ದರೂ ಅದು ನಾಮಾವಶೇಷವಾಗುತ್ತದೆ. ಸರಸ್ವತಿ ಲಕ್ಷ್ಮಿಗಿಂತ ಚಂಚಲೆ !! ಇಂತಹಾ ಸನ್ನಿವೇಶದಲ್ಲಿ ಸಂಧ್ಯಾವಂದನೆಯ ಬಗ್ಗೆ ಒಂದು ಅಭಿಯಾನವಾಗಬೇಕು. ಮನೆ ಮನೆಯಲ್ಲಿ ಅದರ ಅನುಷ್ಠಾನವಾಗಬೇಕು.  ಹಲವರಿಗೆ ಅದು ಮರೆತು ಹೋಗಿರುತ್ತದೆ. ಅಥವಾ ಅದನ್ನು ಆರಂಭಿಸುವುದಕ್ಕೆ ಯಾವುದೋ ಹಿಂಜರಿಕೆ ಇರುತ್ತದೆ. ಇನ್ನು ಕೆಲವರಿಗೆ ಅದರ ಮಹತ್ವದ ಅರಿವಿರುವುದಿಲ್ಲ. ಈ ಎಲ್ಲ ಪರಿಸ್ಥಿತಿಯಲ್ಲಿ ಸಂಧ್ಯಾವಂದನೆಯಬಗ್ಗೆ ಒಂದು ಅಭಿಯಾನವಾಗಬೇಕು. ಒಂದೊಂದು ಮನೆಯಲ್ಲೂ ಇದರ ಬಳಕೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಅನಿವಾರ್ಯ ಕಾರಣಗಳಿಂದ ಇದನ್ನು ಬಿಟ್ಟವರಲ್ಲಿ ಪ್ರೇರಣೆ ಹುಟ್ಟಿಸುವಂತೆ ಈ ಅಭಿಯಾನ ಕೆಲಸ ಮಾಡಬೇಕು.  ಸಂಧ್ಯಾವಂದನೆ ಪೂರ್ಣವಾಗಿಯಲ್ಲದೇ ಇದ್ದರೂ ಒಂದು ಐದು ನಿಮಿಷದ ಅವಧಿಗೆ ಸೂಕ್ಷ್ಮಗೊಳಿಸಿ, ಅಚಮನ ಅರ್ಘ್ಯ ಜಪ ಅಂತ ಮಾಡಿಕೊಂಡು ಕರ್ಮ ಭಾಜನರಾಗಬಹುದು. ಕರ್ಮಿಷ್ಠನಾದವನಿಗೆ ಈ ಭೂಮಿಯ ಪ್ರಕೃತಿಯನ್ನು ಅನುಭವಿಸುವ ಹಕ್ಕು ಇರುವುದು.  ಸರಳಾತಿ ಸರಳವಾಗಿಯಾದರೂ ಈ ಅಭಿಯಾನ ತೊಡಗಬೇಕು. ಸಂಧ್ಯಾವಂದನೆಯಿಂದ ದಿನಾರಂಭವಾಗಬೇಕು.  ಒಂದು ಸಲ ನಾನು ಬ್ರಾಹ್ಮಣ ಸಂಸ್ಥೆಯ ಮಹನೀಯರಲ್ಲಿ ಹೀಗೆ ಅಭಿಯಾನದ ಬಗ್ಗೆ ಹೇಳಿದೆ. ಅವರು ಆಸಕ್ತಿತೋರಲಿಲ್ಲ.    ಈಗಿನ ಸಂಘ ಸಂಸ್ಥೆಗಳು ಸರಕಾರದಿಂದ ಸಿಗುವ ಸೌಲಭ್ಯದತ್ತ ನೋಡುತ್ತವೆ. ಬ್ರಾಹ್ಮಣರಿಗೂ ಮೀಸಲಾತಿ ಕೊಡುವಲ್ಲಿ ಹೋರಾಟ ಮಾಡುತ್ತವೆ. ಸಾಮಾಜಿಕವಾಗಿ ಗುರುತಿಸುಕೊಳ್ಳುವುದೇ ಅನಿವಾರ್ಯ ಎಂದು ತಿಳಿದುಕೊಂಡಂತೆ ಇದೆ. ಅದು ತಪ್ಪು ಎಂದು ಹೇಳುವುದಿಲ್ಲ. ಹಲವು ಸಲ ಎದ್ದು ನಿಲ್ಲುವುದಕ್ಕೆ ಕತ್ತೆಯ ಬಾಲವನ್ನು ಹಿಡಿಯುವ ಅನಿವಾರ್ಯತೆ ಇದೆ.  ಇಲ್ಲಿ ಯಾವುದನ್ನು ಆಕ್ಷೇಪಿಸುವ ಪ್ರವೃತ್ತಿಯಲ್ಲ. ಆದರೆ   ಒಬ್ಬ ಭಿಕ್ಷುಕನಾದರು ಭಿಕ್ಷೆ ಬೇಡಬೇಕಿದ್ದರೆ ಹಲವು ಸಲ ವೇಷ ಹಾಕುತ್ತಾನೆ. ಯಾಕೆಂದರೆ ಭಿಕ್ಷುಕನ ಹಾಗೆ ಕಾಣದೇ ಇದ್ದರೆ ಭಿಕ್ಷೆ ಸಿಗುವುದಿಲ್ಲ.  ಹಾಗಾಗಿ ಕೊನೆ ಪಕ್ಷ ಮಾರೀಚನ ಹಾಗಾದರೂ ನಾವು ವೇಷ ತೊಡುವ ಅನಿವಾರ್ಯತೆ ಇದೆ.

 

 

 

 

  

Wednesday, May 19, 2021

ಸಮಾಚಾರವೇ ವ್ಯಾಪಾರ

  ಯಾವುದೇ ಒಂದು ವಿಚಾರ ಹೇಳುವಾಗ ಒಂದು ಘಟನೆಯಿಂದ ತೊಡಗಿಸುವುದು ಅತ್ಯಂತ ಸೂಕ್ತ ಎನಿಸುತ್ತದೆ. ಹಾಗೆ ಇದೂ ಒಂದು ಘಟನೆಯಿಂದ ತೊಡಗಿಸುವ. ಬಹಳ ಹಿಂದೆ  ಬಾಲ್ಯದ ಒಂದು ಘಟನೆ, ಒಂದು ದಿನ  ನಮ್ಮ ಪೈವಳಿಕೆಯ ಕಾಯರ್ ಕಟ್ಟೆ ಹೈಸ್ಕೂಲಿನ ಮೈದಾನದಲ್ಲಿ ಒಂದು ಹೆಲಿಕಾಪ್ಟರ್ ಬಂದಿಳಿಯಿತು. ಅದರ ರೆಕ್ಕೆಯ ಗಾಳಿಗೆ ಶಾಲೆಯ ಒಂದಷ್ಟು ಹಂಚುಗಳು ಹಾರಿ ಹೋದವು. ಕಾಯರ್ ಕಟ್ಟೆ ಶಾಲೆ ಎಂದರೆ ಗುಡ್ಡದ ಮೇಲಿರುವ ಶಾಲೆ. ಬಹಳ ಪ್ರಶಾಂತವಾದ ಪ್ರದೇಶ. ಒಂದು ಶಾಲೆಗೆ ಮಾದರಿ ಎನ್ನುವ ಪರಿಸರ ಇದ್ದರೆ ಅದು ನಮ್ಮ ಕಾಯರ್ ಕಟ್ಟೆ ಹೈಸ್ಕೂಲಿನ ಪರಿಸರ. ರಸ್ತೆಯಿಂದ ತುಸು ದೂರ ವಿಶಾಲವಾದ ಮೈದಾನು ಅತ್ಯಂತ ಪ್ರಶಾಂತವಾದ ಪರಿಸರದಲ್ಲಿ ಹೀಗೆ ಒಂದು ದಿನ ಹೆಲಿಕಾಪ್ಟರ್ ಇಳಿದು ಕಲರವ ಸೃಷ್ಟಿಯಾದರೆ ಕೇಳಬೇಕೆ. ಸುದ್ದಿ ಜಿಲ್ಲೆಯಾದ್ಯಂತ ಹಬ್ಬಿತು.ಒಂದು ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಇಳಿದರೆ, ಮತ್ತೆ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಇಳಿಯಿತು. ಯಾವುದೋ ಕೆಲವು ಜನ ಅಪರಿಚಿತರು, ಅವರೇನು ಮಾತನಾಡುತ್ತಾರೆ ಅಲ್ಲಿದ್ದವರಲ್ಲಿ ಯಾರಿಗೂ ಅರ್ಥವಾಗುತ್ತಿಲ್ಲ. ಹಾಗೆ ಇಳಿದು ಬಂದ ಹೆಲಿಕಾಪ್ಟರ್ ಎರಡು ದಿನ ಮೈದಾನದಲ್ಲೇ ಹಗಲು ರಾತ್ರಿ ಕಳೆಯಿತು. ಊರೆಲ್ಲ ಅನಿರೀಕ್ಷಿತ ಸಡಗರ. ಆಕಾಶದಲ್ಲಿ ಸದ್ದು ಮಾಡುತ್ತಿದ್ದ ವಿಮಾನವನ್ನು ಅಷ್ಟೇ ಕಂಡ ಊರವರಿಗೆ ಹೆಲಿ ಕಾಪ್ಟರ್ ನೋಡುವ ಅವಕಾಶ.  ಕೇವಲ ಹಳ್ಳಿ ಜನಗಳು.   ತಮ್ಮ ಮನೆ ಮಂದಿಯನ್ನು ಕರೆತಂದು ಹೆಲಿಕಾಪ್ಟರ್  ತೋರಿಸುವ ತವಕ ಹಲವರಿಗೆ


ಸರಿ ಜನರ ಪ್ರವಾಹ ನಮ್ಮ ಕಾಯರ್ ಕಟ್ಟೆ ಮೈದಾನಕ್ಕೆ ಲಗ್ಗೆ ಇಟ್ಟಿತು. ಗಂಟೆಗೊಂದರಂತೆ ಓಡುತ್ತಿದ್ದ ಬಸ್ಸುಗಳು ಸ್ಪೆಷಲ್ ಟ್ರಿಪ್ ಹಾಕತೊಡಗಿದವು. ಕೆಲವು ಬಾಡಿಗೆ ಕಾರು ಜೀಪುಗಳು ಜನ ಹೊತ್ತುಕೊಂಡು ಬಂದು ಹೋಗುತ್ತಿದ್ದವು. ಅಂತೂ ಎರಡು ದಿನ ಜನ ಜಾತ್ರೆ. ಎಲ್ಲರೂ ಹೆಲಿಕಾಪ್ಟರ್ ನೋಡುವುದಕ್ಕೆ ಬರುವವರು. ಜನ ಹೀಗೆ ಬರುತ್ತಿದ್ದರೆ ಕೆಲವರು ತಾತ್ಕಾಲಿಕ ಅಂಗಡಿ ಹೋಟೇಲ್  ಗಳನ್ನು ತೆರೆದರು. ಈ ನಡುವ ಅವರದ್ದೂ ಒಂದು ವ್ಯಾಪಾರ. ನಮ್ಮ ರೀತಿಗಳೇ ಹೀಗೆ.   ಜಗದ ನಿಯಮ. ಎಲ್ಲಿ ಗ್ರಾಹಕರು ಇರುತ್ತಾರೋ ಅಲ್ಲಿ ವ್ಯಾಪಾರಿಗಳು ಸಿಗುತ್ತಾರೆ. ಇನ್ನು ವ್ಯಾಪಾರಿಗಳು ಗ್ರಾಹಕರ ಸೃಷ್ಟಿ ಮಾಡಿಬಿಡುತ್ತಾರೆ. ಗ್ರಾಹಕರನ್ನು ಸೃಷ್ಟಿ ಮಾಡುವವನೇ ಯಶಸ್ವೀ ವ್ಯಾಪಾರಿ. 

ನಮ್ಮ ವಾರ್ತಾ ಮಾಧ್ಯಮಗಳನ್ನು ಅದರಲ್ಲೂ ನ್ಯೂಸ್ ಗಳನ್ನು ಸೃಷ್ಟಿಸಿ ಇಲ್ಲ ಕೆದಕಿ ವಾರ್ತೆಯನ್ನು ಒದಗಿಸುವುದು ಕೂಡ ಒಂದು ವ್ಯಾಪಾರವಾಗಿ ಭಾಸವಾಗುತ್ತದೆ. ಕೆಲವು ವಾರ್ತೆಗಳನ್ನು, ಅದಕ್ಕೆ ಸಂಭಂಧಿಸಿದ ಕಾರ್ಯಕ್ರಮಗಳನ್ನು ನೋಡಿದಾಗ ಮೇಲೆ ಹೇಳಿದ ಹೆಲಿಕಾಪ್ಟರ್ ಆ ಸಂತೆ ಸ್ಪೆಷಲ್ ಬಸ್ಸುಗಳು ನೆನಪಾಗುತ್ತವೆ. ಪ್ರತೀ ವ್ಯಾಪಾರದ ಹಿಂದೆ ಒಂದು ಹೊಟ್ಟೆಪಾಡಿನ ಕಥೆ ಇರುವುದರಿಂದ ಅದನ್ನು ಪೂರ್ಣವಾಗಿ ಅಪರಾಧವಾಗಿ ಪರಿಗಣಿಸುವ ಹಾಗಿಲ್ಲ.  ಮುಖವನ್ನು ತೋರಿಸದ ಕೇವಲ ವಾರ್ತೆಯಷ್ಟನ್ನೇ ತಿಳಿಸುವ ನಿಸ್ವಾರ್ಥ ಸೇವೆಯ ನಮ್ಮ ಬಾಲ್ಯದ  ರೇಡಿಯೋಗಳು,  ಆ ವಾರ್ತೆಗಳು ಈಗ ತುಕ್ಕು ಹಿಡಿದಿವೆ.  ಕಾಲ ಎಂದರೆ ಪರಿವರ್ತನೆಯ ಸಂಕೇತ. ವಾರ್ತೆಗಳು ಮನುಷ್ಯನ ವಿಚಾರಗಳೂ ವ್ಯಾಪಾರದ ಸರಕಾಗುವುದು ಜಗತ್ತು ವ್ಯಾಪಾರದ ಹಿಂದೆ ಇದೆ ಎಂದನ್ನು ತೋರಿಸುತ್ತದೆ. ಏನೂ ತಿಳಿಯದಿದ್ದ ಬೇಸಾಯಗಾರ ಕೂಡ ಬದುಕಬೇಕಿದ್ದರೆ ವ್ಯಾಪಾರವನ್ನು ತಿಳಿಯಬೇಕಾಗುತ್ತದೆ. ತಪ್ಪಲ್ಲ. ಆದರೆ ನಾವು ಮಾಡುವ ವೃತ್ತಿಯಲ್ಲಿ ವೃತ್ತಿ ಧರ್ಮ ಎಂಬುದನ್ನು ಸೇರಿಸುವಾಗ ವಿಶ್ಲೇಷಣೆ ಆರಂಭವಾಗುತ್ತದೆ. ಹೀಗೂ ಹೌದೆ?  ಹಾಗೂ ಹೌದೇ? ಎಂಬ ಚಿಂತನೆಗಳು. ವಿಮರ್ಷೆಗಳು. ನಿಜಕ್ಕಾದರೆ ವಿಮರ್ಶೆಯ ಮೇಲೆ ವಿಶ್ವಾಸ ಇಲ್ಲ. ಯಾಕೆಂದರೆ ಇಲ್ಲಿ ಸೃಷ್ಟಿಯಾಗುವ ವಾರ್ತೆಗಳು ವಿಮರ್ಶೆಗೆ ಒಳಗಾಗುವುದಕ್ಕಿಂತಲೂ ವಿಶ್ಲೇಷಣೆಗೆ ಒಳಗಾಗಬೇಕು. ವಿಮರ್ಶೆ ವಿಶ್ಲೇಷಣೆ ಬೇರೆ ಬೇರೆ ಅಂತ ನನ್ನ ಅನಿಸಿಕೆ. ವಿಮರ್ಶೆಗಳು ಸತ್ಯವನ್ನು ಹುಡುಕುವುದಿಲ್ಲ. ವಿಶ್ಲೇಷಣೆಯಲ್ಲಿ ಸತ್ಯ ಹೊರಬರುತ್ತದೆ. ವಿಶ್ಲೇಷಣೆ ಸೂಕ್ತ ಅನ್ನಿಸುವುದು ಯಾಕೆಂದರೆ ಹೊಟ್ಟೆ ಪಾಡು ಎಂಬುದರಿಂದ. ಇಲ್ಲಿ ಯಾವುದೂ ಅಪರಾಧವಲ್ಲ.  ಸರಿಯೋ ತಪ್ಪೋ ನೀವು ವಿಶ್ಲೇಷಿಸಿ ನಿಮಗೆ ಬೇಕಾದ ನಿಲುವನ್ನು ತೆಗೆದುಕೊಳ್ಳಬಹುದು. ಈ ನ್ಯೂಸ್ ಚಾನಲ್ ನೋಡುವಾಗ ಈ ರೀತಿಯ ಯೋಚನೆಗಳು ಬರುವುದಿಲ್ಲವೇ? 


ನ್ಯೂಸ್ ಚಾನಲ್ ಗಳು ಮನರಂಜನಾ ಚಾನಲ್ ಗಳಾಗಿ ಬದಲಾಗುತ್ತವೆ. ಹಾಗಾಗಿ ಸುಮ್ಮನೆ ಆದರೂ ನ್ಯೂಸ್ ಚಾನಲ್ ಹಾಕಿ ಅಗತ್ಯ ಇಲ್ಲದೇ ಇದ್ದರೂ ಬ್ರೇಕಿಂಗ್ ನ್ಯೂಸ್ ನ ಬ್ರೇಕ್ ಗೆ  ನಾವು ಬ್ರೇಕ್ ಪೈಲ್ ಆಗುವುದುಂಟು. ಸೀರಿಯಲ್ ಅಥವಾ ಇನ್ನಿತರ ಮನರಂಜನಾ ಸಂಕಲೆಯಿಂದ ಹಾಗೆ ಬಂದು ಹೀಗೆ ಹೋಗುವ ನ್ಯೂಸ್ ಚಾನಲ್ ಗಳೇ ಆಪ್ಯಾಯಮಾನವಾಗುತ್ತದೆ. ಹಿಡಿಶಾಪ ಹಾಕಿದರೂ ರಿಮೋಟ್ ಅದುಮುವುದು ನ್ಯೂಸ್ ಚಾನಲ್ ನೋಡುವುದಕ್ಕಾಗಿ.  ಯಾವಾಗ ಬೇಕು ಆವಾಗ ನೋಡಿ ಬೇಡದೇ ಇದ್ದರೆ ಆಫ್ ಮಾಡಿ ಸುಮ್ಮನಿದ್ದರಾಯಿತು. ಪ್ರತೀ ನ್ಯೂಸ್ ಚಾನಲ್ ಗಳನ್ನು ಗಮನಿಸಿ,  ಬ್ರೇಕಿಂಗ್ ನ್ಯೂಸ್ ಇಲ್ಲದ ಚಾನಲ್ ಇಲ್ಲವೇ ಇಲ್ಲ. ಕುಂಬಳ ಗಾತ್ರದ ಅಕ್ಷರದಲ್ಲಿ ಕಣ್ಣಿಗೆ ರಾಚುವಂತೆ ಬ್ರೇಕ್ ಒತ್ತಿಬಿಡುತ್ತಾರೆ. ನರ್ಸರಿ ಶಾಲೆಯ ಟೀಚರಂತೆ ಹೇಳಿದ್ದನ್ನೇ ಪದೆ ಪದೇ ಹೇಳಿ ನಾವೆಷ್ಟು ತಟಸ್ಥರಾಗಿದ್ದೇವೆ ಎಂಬುದನ್ನು ಪರೀಕ್ಷೆಗೆ ಇಟ್ಟುಬಿಡುತ್ತಾರೆ. ಇಲ್ಲದಿದ್ದರೆ ಅದು ಬ್ರೇಕಿಂಗ್ ನ್ಯೂಸ್ ಆಗುವುದು ಹೇಗೆ? " ಇಂದು ಹೊಸದಾಗಿ ಸಾವಿರ ಜನರಿಗೆ ಕೊರೋನ ಸೋಂಕು ಕಂಡಿದೆ" ಅಂತ ಒಂದು ಸಲ ಹೇಳಿದರೆ  " ಇಂದು ಕೊರೋನ   ಹೊಸದಾಗಿ ಸಾವಿರ ಜನರಲ್ಲಿ ಕಂಡಿದೆ" ಹೀಗೆ ಶಬ್ದಗಳನ್ನು ತಿರುವುಮರುವಾಗಿ ಹೇಳಿ ವ್ಯಾಕರಣ ಪಾಠ ಮಾಡಿಬಿಡುತ್ತಾರೆ. ರೈಲಿನಲ್ಲಿ ಕೀರಲಾಗಿ ಕೇಳುವ ಭಿಕ್ಷುಕನ ಹಾಡಿನಂತೆ ನಾವು ಸುಮ್ಮನೇ ಇದ್ದುಬಿಡುತ್ತೇವೆ. ಯಾಕೆಂದರೆ ಇದೊಂದು ವ್ಯಾಪಾರ. ಸಂತೆಯಲ್ಲಿನ ಗದ್ದಲದಂತೆ ಅದೂ ಇದು ಎಲ್ಲವೂ ಹೊಟ್ಟೆಪಾಡು. ಟೀವಿಯಲ್ಲಿನ ಸಾಬೂನಿನ ಜಾಹಿರಾತನ್ನು ನಂಬದೇ ಇರುವಂತೆ ಇದಕ್ಕೂ ಅದೇ  ಪ್ರತಿಕ್ರಿಯೆ. ನ್ಯೂಸ್ ಬೇಕೋ ಬೇಡವೋ ಎಲ್ಲವೂ ಈಗ ಅನಿವಾರ್ಯ ಅಂಗಗಳಾಗಿವೆ. 


ಆದರೂ ನ್ಯೂಸ್ ಚಾನಲ್ ಗಳಿಗೆ ಕರ್ತವ್ಯವಿದೆ.  ಇದು ಸಮಾಜದ ಒಂದು ಬಗೆಯ ಕನ್ನಡಿ. ಅದನ್ನು ಮುಖದ ಯಾವ ಭಾಗ ಕಾಣಬೇಕೋ ಅಲ್ಲಿಗೆ ಹಿಡಿಯಬೇಕು. ಮೊನ್ನೆ ಮೊನ್ನೆ ಒಂದು ತಿಂಗಳ ಮೊದಲು ನ್ಯೂಸ್ ಚಾನಲ್ ನೋಡಿದರೆ ಕೋರೋನ ಸ್ಕೋರು ಏನಿದೆಯೋ ಅದನ್ನು ತೋರಿಸುತ್ತಲೇ ಇರಲಿಲ್ಲ. ನೆನಪಾಗುವಾಗ ಒಂದು ಸಲ ತೋರಿಸಿಬಿಡುತ್ತಿದ್ದರು. ಯಾಕೆಂದರೆ ಇನ್ನೂರು ಮೂನ್ನೂರರ ಆಸುಪಾಸಿನಲ್ಲಿದ್ದರೆ ಯಾರಿಗೂ ಆ ಬ್ರೇಕಿಂಗ್ ಬೇಕಾಗಲಿಲ್ಲ.  ದಿವ್ಯ ನಿರ್ಲಕ್ಷ್ಯ. ಆಗಲೂ ವಾಸ್ತವದಲ್ಲಿ ಕೊರೋನ ಮುಕ್ತ ಅಂತ ಆಗಲೇ ಇಲ್ಲ. ಆದರೂ ಕೊರೋನ ಸುದ್ದಿಗೆ ಮಹತ್ವವೇ ಇಲ್ಲದಂತೆ ಆಗಿತ್ತು. ಬಹುಶಃ ಈಗ ಬಗೆ ಬಗೆಯಲ್ಲಿ ಕೊರೋನ ಕಥೆಯನ್ನು ತೋರಿಸುವಂತೆ ಆಗಲೂ ತೋರಿಸುತ್ತಿದ್ದರೆ, ಎರಡನೆ ಅಲೆಯ ಆಘಾತ ಇಷ್ಟು ರಭಸವನ್ನು ತಾಳುತ್ತಿರಲಿಲ್ಲ. ಜನ ಕೊರೋನವನ್ನು ಮರೆತವರಂತೆ ಇದ್ದುಬಿಟ್ಟರು. ಇದೇ ಅವಧಿಯಲ್ಲಿ ಮಂಗಳೂರಿಗೆ ಹೋಗಿದ್ದೆ. ನಾನು ಮಾಸ್ಕ್ ಧರಿಸಿ ಸುತ್ತಾಡಿದರೆ , ಅಲ್ಲಿನವರು ಕೇಳುತ್ತಿದ್ದರು  " ಬೆಂಗಳೂರಿನಿಂದ ಯಾವಾಗ ಬಂದದ್ದು ಮಾರಾಯರೆ?  " ಯಾಕೆಂದರೆ ಅಲ್ಲಿನವರ ಮಾಸ್ಕ್ ಎಲ್ಲೋ ಹಾರಿ ಹೋಗಿತ್ತು. ಸಾಮಾಜಿಕ ಅಂತರದ ಕಥೆ ಹೇಳುವುದೇ ಬೇಡ, ಸಿಟಿ ಬಸ್ ಗಳಲ್ಲಿ ಒಳ್ಳೆ ಸಾಮಾಜಿಕ ಅಂತರ, ಕಂಡಕ್ಟರ್ ಗೆ ಮಾತ್ರ ಬಸ್ ಒಳಗೆ ಹೋಗುವುದಕ್ಕೆ ಜಾಗವೇ ಇಲ್ಲ. ಇಂತಹ ಸಮಯದಲ್ಲಿ ಚಾನಲ್ ಗಳು ತಮ್ಮ ಕರ್ತವ್ಯವನ್ನು ಮರೆತಿದ್ದರು. ಈಗ ಬೊಬ್ಬಿರಿವ ಹತ್ತನೆಯ ಒಂದು ಪಾಲು ಆಗ ಬೊಬ್ಬೆ ಹೊಡೆಯಬೇಕಿತ್ತು ಅಂತ ಅನ್ನಿಸುವುದಿಲ್ಲವೇ?  ಎಲ್ಲಾ ಚಾನಲ್ ಗಳು ಈಗ ಜನರಿಗೆ ಕರ್ತವ್ಯವನ್ನು ಬೋಧಿಸುತ್ತವೆ. ಮಾಸ್ಕ್ ಇಲ್ಲದೇ ಓಡಾಡುವವರ ಜನ್ಮ ಜಾಲಾಡುತ್ತವೆ.  ಯಾಕೆಂದರೆ ಹೊಟ್ಟೆಪಾಡು ಎಂದು ನಾವು ಸುಮ್ಮನಾಗಬೇಕು. ಜನ ಹೊಟ್ಟೆಪಾಡಿಗಾಗಿ ಹಪ ಹಪಿಸುವಾಗ  ಇವರಿಗೆ ಭರ್ಜರಿ ವ್ಯಾಪಾರ.  ಗಿರಾಕಿಗಳು ಎಲ್ಲಿರುತ್ತಾರೋ ಅಲ್ಲೆ ವ್ಯಾಪಾರದವರೂ ಇರುತ್ತಾರೆ. ನಾವೆಲ್ಲ ಸಮಾಚಾರದ ಗಿರಾಕಿಗಳು.