ಕೆಲವು ದಿನಗಳ ಹಿಂದೆ ನಮ್ಮೂರಿನ ಪೈವಳಿಕೆಯ ಗ್ರಾಮ ಕಛೇರಿ (ವಿಲೇಜ್ ಆಫೀಸ್) ಗೆ ಹೋಗಿದ್ದೆ. ನಮ್ಮ ಊರಿನ ಜಮೀನಿನ ತೆರಿಗೆ ಕಟ್ಟುವುದಿತ್ತು. ಹಾಗೆ ಯಾವುದೋ ದಾಖಲಾತಿ ತೆಗೆಯುವುದಕ್ಕೆ ಅಲ್ಲಿ ಕಾದು ಕುಳಿತಿದ್ದೆ. ಹೊರಗಿನ ನಮ್ಮೂರಿನ ನೀರವ ವಾತಾವರಣವನ್ನು ಆಸ್ವಾದಿಸುತ್ತಾ ತಲ್ಲೀನನಾಗಿದ್ದೆ. ಸುತ್ತಲೂ ಕರಿ ಬಣ್ಣದ ಪಾದೆ ಕಲ್ಲುಗಳು, ಅಲ್ಲೇ ಒಂದು ಗೋಳಿಮರದ ಕಟ್ಟೆ ಇತ್ತು ಅದು ಇಲ್ಲ, ಅದರ ಜತೆಗೆ ಅಲ್ಲಿ ಇಲ್ಲಿ ಉಳಿದುಕೊಂಡ ಪಳೆಯುಳಿಕೆಯಂತಹ ಮರಗಿಡಗಳು ಎಲ್ಲವೂ ಬದಲಾವಣೆಯಾದರೂ ನಮ್ಮ ಪೈವಳಿಕೆ ಇನ್ನೂ ಶಾಂತವಾಗಿದ್ದಂತೆ ಅನಿಸಿತ್ತು. ಇದೀಗ ವಿಲೇಜ್ ಆಫೀಸ್ ಎದುರಿಗೆ ಅಟೋ ಸ್ಟಾಂಡ್ ಆಗಿದೆ. ನಮ್ಮ ಬಾಲ್ಯದಲ್ಲಿ ಮೊದಲು ಆಟೋ ರಿಕ್ಷ ನೋಡಬೇಕಾದರೆ ಮಂಗಳೂರಿಗೆ ಇಲ್ಲಾ ಕಾಸರಗೋಡಿಗೆ ಹೋಗಬೇಕಿತ್ತು. ಹತ್ತಿರದ ಉಪ್ಪಳದಲ್ಲೂ ರಿಕ್ಷಾಗಳು ಇರಲಿಲ್ಲ. ಅಬ್ಬಾಸ್ ಬ್ಯಾರಿಯ ಕಪ್ಪು ಬಣ್ಣದ ಬಾಡಿಗೆ ಅಂಬಾಸಿಡರ್ ಬಿಟ್ಟರೆ ಅಲ್ಲಿ ಬೇರೆ ವಾಹನಗಳಿರಲಿಲ್ಲ. ಅದೂ ಯಾರನ್ನೂ ಕಾದು ಇರುತ್ತಿರಲಿಲ್ಲ. ಹೀಗೆ ಊರಿಗೆ ಹೋದಾಗ ಹಳೆಯ ನೆನಪುಗಳು ಕಾಡುತ್ತಿರುವಂತೆ ಈಗಲೂ ಅದೇ ನೆನಪಿನ ಹಗ್ಗ ಜಗ್ಗಾಟದಲ್ಲಿ ವಾಸ್ತವವನ್ನು ಮರೆತಂತೆ ಇದ್ದು ಬಿಟ್ಟೆ.
ಈ ಚಿತ್ರದಲ್ಲಿನ ಕಟ್ಟಡದ ಕೊನೆಯಲ್ಲಿ ನಾನು ಕಲಿತ ಆರನೇ ತರಗತಿ
ತಲ್ಲೀನತೆಯಲ್ಲಿ ಎಲ್ಲವನ್ನೂ ಮರೆತಿರುವಾಗ ಹಿಂದಿನಿಂದ ಯಾರೋ ಬೆನ್ನು ತಟ್ಟಿದ ಅನುಭವವಾಗಿ ಹಿಂದೆ ತಿರುಗಿ ನೋಡಿದೆ. " ಏನು ರಾಜಕುಮಾರ್....." ಅದೇ ನೆನಪಿಗೆ ಸರಿದು ಹೋದ ಒಂದು ಧ್ವನಿ ಮತ್ತೆ ಮರುಕಳಿಸಿದಂತೆ ಭಾಸವಾಯಿತು. ಎದುರಿಗೆ ನಸು ನಗುತ್ತಾ ಬೊಚ್ಚು ಬಾಯಿಯನ್ನು ಅಗಲಿಸಿ ನಗುತ್ತಾ ವೃದ್ದರು ನಿಂತಿದ್ದರು. ಹತ್ತಿರದಲ್ಲಿ ಯುವಕನೊಬ್ಬ ಕೈ ಹಿಡಿದು ನಿಂತಿದ್ದ. ಅವರು ಬೇರೆ ಯಾರೂ ಅಲ್ಲ ಆರನೇ ತರಗತಿಯ ಲೆಕ್ಕದ ಪಾಠ ಮಾಡಿದ ಮಹಮ್ಮದ್ ಮಾಸ್ತರ್. ಸರಿ ಸುಮಾರು ಮೂವತ್ತೈದು ವರ್ಷದ ನಂತರ ನೋಡುತಿದ್ದೇನೆ. ಈಗಲೂ ನನ್ನ ಪರಿಚಯ ಹಿಡಿದು ರಾಜ ಕುಮಾರ್ ಅಂತ ಅವರು ಕರೆದು ಮಾತನಾಡಿಸಬೇಕಾದರೆ ಹಳೆಯನೆನಪುಗಳಿಗೆ ಸೇತುವೆಯಂತೆ ಈ ವಯೋವೃದ್ದ ಮಹಮ್ಮದ್ ಮಾಸ್ತರ್ ನಿಂತಿದ್ದರು. ನನ್ನಂತಹ ಎಷ್ಟೋ ಮಕ್ಕಳಿಗೆ ಲೆಕ್ಕದ ಬಾಲ ಪಾಠಗಳನ್ನು ಹೇಳಿಕೊಟ್ಟ ಮಹಮ್ಮದ್ ಮಾಸ್ತರ್ ನನ್ನನ್ನೂ ನನ್ನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ .....ಅದೂ ಈ ಇಳಿ ವಯಸ್ಸಿನಲ್ಲಿ ಆಶ್ಚರ್ಯವಾಯಿತು. ಅದಕ್ಕೆ ಕಾರಣ ನಮ್ಮ ನಡುವಿನ ಗುರುಶಿಷ್ಯ ಸಂಬಂಧ. ಕಾಯರ್ ಕಟ್ಟೆ ಹೈಸ್ಕೂಲಿನಲ್ಲಿ ಆರನೆ ತರಗತಿಯ ಆ ಕೋಣೆ ಮತ್ತೊಮ್ಮೆ ಕಣ್ಣೆದುರು ಬಂದು ನಿಂತಿತು. ಈಗಲೂ ಸರಳ ಬಡ್ಡಿ ಏನೂ ಎಂದು ಕೇಳಿಬಿಡುತ್ತಾರೋ ಎಂದು ಅವರ ಮುಖ ನೋಡಿದೆ. ವಯಸ್ಸಿನ ಭಾರಕ್ಕೆ ಅವರು ಬಹಳಷ್ಟು ಕೃಶರಾಗಿದ್ದರು. ಉತ್ಸಾಹದ ಚಿಲುಮೆಯಂತೆ ತರಗತಿ ತುಂಬ ಓಡಾಡಿಕೊಂಡಿದ್ದ ಮಹಮ್ಮದ್ ಮಾಸ್ತರ್ ಎಲ್ಲಿ? ಈ ಯುವಕನ ಕೈ ಆಧರಿಸಿ ನಿಂತು ಕೊಂಡ ಈ ವಯೋವೃದ್ದ ಎಲ್ಲಿ?
ಮಹಮ್ಮದ್ ಮಾಸ್ತರ್, ಸದಾ ಬಿಳಿ ಪಂಚೆ ಅಂಗಿ ಧರಿಸಿ ಬರುತ್ತಿದ್ದ ಶ್ವೇತ ವಸನಿ ಅಚ್ಚ ಬಿಳುಗಿನ ಉಡುಗೆಯ ಮಾಸ್ತರ್, ಸದಾ ತಲೆ ಮೇಲೆ ಒಂದು ಕಪ್ಪು ಟೊಪ್ಪಿ ಇರುತ್ತಿತ್ತು. ಅವರನ್ನು ಎಂದೂ ಬೇರೆ ವರ್ಣಮಯ ಉಡುಗೆಯಲ್ಲಿ ಕಂಡದ್ದೇ ಇಲ್ಲ. ಇಂದೂ ಅದೇ ರೀತಿ ಬಿಳಿ ಪಂಚೆ ಮತ್ತು ಬಿಳಿ ಅಂಗಿ !! ಸುತ್ತಿದ ಬಟ್ಟೆ ಹೊಸದಾಗಿರಬಹುದು, ಆದರೆ ಬಣ್ಣ ಮಾತ್ರ ಹಳೆಯದೆ, ಮಾತ್ರವಲ್ಲ ಮಾಸ್ತರೂ ಹಳೆಯವರೆ. ಮಹಮ್ಮದ್ ಮಾಸ್ತರ್ ಅನ್ವರ್ಥವಾಗಿ ಟೊಪ್ಪಿ ಮಾಸ್ತರ್ ಎಂದೇ ಕರೆಸಿಕೊಳ್ಳುತ್ತಿದ್ದ ಇವರು ನಮಗೆ ಲೆಕ್ಕದ ಮಾಸ್ತರ್. ಸದಾ ಜೇಬಿನಲ್ಲಿ ಕಬ್ಬಿಣದ ಕಡಲೆಯನ್ನೇ ತರುತ್ತಿದ್ದಾರೋ ಎಂದು ಅನ್ನಿಸುತ್ತಿತ್ತು. ಗುರು ಅಥವಾ ಅಧ್ಯಾಪಕ(ಪಿಕೆ) ಎಂದರೆ ಉರಿಯುವ ದೀಪದಂತೆ. ತಾನು ಉರಿಯುತ್ತಾ ಬೆಳಕನ್ನು ಕೊಡುತ್ತಾ ಸ್ವತಃ ಇಲ್ಲದೇ ಅಗುವುದು. ಆಗ ಇವರು ಒಂದರಿಂದ ಇಪ್ಪತ್ತರವೆರೆಗಿನ ಮಗ್ಗಿ ಪುಸ್ತಕದ ಅಷ್ಟೂ ಮಗ್ಗಿಗಳನ್ನು ಮೇಲಿಂದ ಕೆಳಗೆ ಕೆಳಗಿಂದ ಮೇಲೆ ದರ್ ದರ್ ಅಂತ ಹೇಳುತ್ತಿದ್ದುದು ಕೌತುಕಮಯವಾಗಿತ್ತು.
ನಾಲ್ಕನೇ ತರಗತಿಯಿಂದ ಆರನೆ ತರಗತಿಯ ಮಧ್ಯಭಾಗದವರೆಗೂ ನಾನು ಮಂಗಳೂರಿನ ಶಾಲೆಯಲ್ಲಿ ಕಲಿತಿದ್ದೆ. ಆಮೇಲೆ ಅನಾರೋಗ್ಯ ಮತ್ತೇನೋ ಕಾರಣಗಳಿಂದ ಶಾಲೆ ಅರ್ಧಕ್ಕೆ ಮೊಟಕುಗೊಳಿಸಿದುದರಿಂದ ಮತ್ತೆ ಮೂರು ವರ್ಷ ಕಳೆದು ಪೈವಳಿಕೆಯ ಕಾಯರ್ ಕಟ್ಟೆ ಹೈಸ್ಕೂಲ್ ಗೆ ಆರನೇ ತರಗತಿಗೆ ಮತ್ತೆ ಸೇರಿಕೊಂಡೆ. ಕರ್ನಾಟಕದಿಂದ ಬಂದ ವಿದ್ಯಾರ್ಥಿಗಳಿಗೆ ಕೇರಳದಲ್ಲಿ ಒಂದು ಪ್ರವೇಶ ಪರೀಕ್ಷೆ ಇರುತ್ತಿತ್ತು. ಕ್ಲಾಸ್ ಮಾಸ್ತರುಗಳೇ ನಡೆಸುವ ಈ ಪರೀಕ್ಷೆಯಲ್ಲಿ ಪಾಸಾದರೆ ಶಾಲೆಗೆ ಸೇರಿಸಿಕೊಳ್ಳಲಾಗುತ್ತಿತ್ತು. ಅಂದು ನನಗೂ ಪ್ರವೇಶ ಪರೀಕ್ಷೆ ಇತ್ತು. ಬರೆದಾದಾದ ಮೇಲೆ ಅದು ಪರೀಕ್ಷೆ ಎಂದು ನನಗೆ ಗೊತ್ತಾಗಿದ್ದು. ಮೂರು ವರ್ಷ ಶಾಲಾಜೀವನದಿಂದ ದೂರವೇ ಉಳಿದ ನಾನು ಪರೀಕ್ಷೆಯಲ್ಲಿ ಪೈಲ್ ಆಗಿದ್ದೆ. ಆದರೆ ನನಗೆ ಎಲ್ಲವನ್ನೂ ಹೇಳಿಕೊಟ್ಟು ಪಾಸ್ ಮಾಡಿದ್ದು ಈ ಮಹಮ್ಮದ್ ಮಾಸ್ತರ್. ಅದುವರೆಗೆ ಲೆಕ್ಕದ ಭಿನ್ನ ರಾಶಿ ಎಂದರೆ ಏನೆಂದು ತಿಳಿಯದ ನನಗೆ ಒಂದಿಷ್ಟು ಗದರಿ ಅಕ್ಕರೆಯಿಂದ ಹೇಳಿಕೊಟ್ಟಿದ್ದರು. ಅಲ್ಲಿಂದ ಆರಂಭವಾದ ಮಹಮ್ಮದ್ ಮಾಸ್ತರ್ ಸಂಪರ್ಕ ಆನಂತರ ಹಲವು ನೆನಪುಗಳನ್ನು ಕಟ್ಟಿಕೊಟ್ಟಿತ್ತು.
ಮೂರು ವರ್ಷದ ನಂತರ ಶಾಲೆಗೆ ಸೇರಿದ್ದುದರಿಂದ ಉಳಿದ ಎಲ್ಲ ಮಕ್ಕಳಿಗಿಂತಲೂ ನಾನು ದೊಡ್ಡವನಾಗಿದ್ದೆ. ಹಾಗಾಗಿ ಕೊನೆಯ ಬೆಂಚ್ ನಲ್ಲಿ ಲಾಸ್ಟ್ ಬೆಂಚರ್ ಸ್ಟೂಡೆಂಟ್ ನಾನಾಗಿದ್ದೆ. ಇದು ಆರಂಭದಲ್ಲಿ ಹಲವು ಅಧ್ಯಾಪಕರಿಗೆ ನನ್ನ ಬಗ್ಗೆ ತಪ್ಪು ಕಲ್ಪನೆಯನ್ನು ತರಿಸಿತ್ತು. ಕೊನೆಯ ಬೆಂಚ್ ಎಂದರೆ ....ಎಲ್ಲದರಲ್ಲೂ ಕೊನೆಯ ಬೆಂಚ್. ಮಹಮ್ಮದ್ ಮಾಸ್ತರ್ ಗೂ ನನ್ನ ಮೇಲೆ ಹೆಚ್ಚು ಆಸಕ್ತಿ ಏನೂ ಇದ್ದ ಹಾಗಿಲ್ಲ. ಶಾಲೆಯ ಹತ್ತಿರವೇ ನಮ್ಮ ಮನೆ ಇದ್ದುದರಿಂದ ಶಾಲೆಯ ಹೊರಗೆ ಅಲ್ಲಿ ಇಲ್ಲಿ ಕಾಣುತ್ತಿದ್ದ ಮಾಸ್ತರು ಇಂದು ಕ್ಲಾಸಿನಲ್ಲಿ ಲೆಕ್ಕದ ಮಾಸ್ತರ್ ಆಗಿದ್ದರು. ಅದು ವರೆಗೆ ಸೀಮಿತವಾಗಿ ಪರಿಚಯವಿತ್ತು. ಪ್ರವೇಶ ಪರೀಕ್ಷೆಯಲ್ಲಿ ನಾನು ದಡ್ಡ ಎಂದು ಶ್ರುತ ಪಟ್ಟಿತ್ತು. ಇದೆಲ್ಲ ಮೊದಲ ಎರಡು ತಿಂಗಳು ಅಷ್ಟೆ. ಮೊದಲ ಕ್ಲಾಸ್ ಪರೀಕ್ಷೆ. ಅಲ್ಲಿ ನಾನು ಮೊದಲ ಕ್ಲಾಸಿಗೆ ವಿದ್ಯಾರ್ಥಿಯಾಗಿ ಪರೀಕ್ಷೆಯಲ್ಲಿ ಅಂಕವನ್ನು ಗಳಿಸಿದಾಗ ಸ್ವತಃ ಮಹಮ್ಮದ್ ಮಾಸ್ತರ್ ಆಶ್ಚರ್ಯಗೊಂಡಿದ್ದರು. ಎಲ್ಲರಲ್ಲೂ ಆಗ ಹೇಳಿದ್ದರು ನೋಡಿದ ಹಾಗಲ್ಲ ಇವನು. ಅಂದಿನಿಂದ ನನ್ನನ್ನು ಕಾಣುವ ದೃಷ್ಟಿ ಬದಲಾಯಿತು. ಮಹಮ್ಮದ್ ಮಾಸ್ತರ್ ಮಾತ್ರವಲ್ಲದೇ ಶಾಲೆಯ ಎಲ್ಲಾ ಆಧ್ಯಾಪಕರಿಗೆ ನಾನು ಗುರುತಿಸಲ್ಪಟ್ಟೆ. ಅಂದಿನ ಹೆಚ್ಚಿನ ಎಲ್ಲಾ ಮಾಸ್ತರ್ ಗಳು ನಮ್ಮೊಂದಿಗೆ ಗುರು ಶಿಷ್ಯ ಸಂಬಂಧದಿಂದ ಕೂಡಿರದೆ ಒಳ್ಳೆ ಗೆಳೆಯರಂತೆ ನಮ್ಮೊಂದಿಗೆ ಬೆರೆಯುತ್ತಿದ್ದರು. ಅದೊಂದು ವಿಶಿಷ್ಟ ಸಂಭಂಧ. ಹಾಗಾಗಿ ಕಾಯರ್ ಕಟ್ಟೆ ಹೈಸ್ಕೂಲಿನ ವಿದ್ಯಾರ್ಥಿ ಜೀವನದ ನೆನಪುಗಳು ಇಂದಿಗೂ ಅಚ್ಚಳಿಯದೇ ಮಧುರ ನೆನಪುಗಳಾಗಿ ಉಳಿದು ಬಿಟ್ಟಿದೆ.
ಮಹಮ್ಮದ್ ಮಾಸ್ತರ್ ಲೆಕ್ಕ ಪಾಠ, ಕಲಿತ ಲೆಕ್ಕದಂತೆ ಅದೂ ಮರೆಯುವ ಹಾಗಿಲ್ಲ. ಸದಾ ಹಾಸ್ಯಮಯವಾಗಿ ಮಾತನಾಡುತ್ತಿದ್ದರು. ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದರು. ಲೆಕ್ಕ ಎಂದರೆ ಅದು ಚೊಕ್ಕ ಎಂದು ಪದೇ ಪದೇ ಹೇಳುತ್ತಿದ್ದರು. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬರುವ ವಿಷಯವಿದ್ದರೆ ಅದು ಲೆಕ್ಕ ಮಾತ್ರ ಎಂದು ಪದೇ ಪದೇ ಹೇಳುತ್ತಿದ್ದರು. ಅವರು ಅಂದು ಹೇಳಿಕೊಟ್ಟ, ಸರಳ ಬಡ್ಡಿ ಚಕ್ರ ಬಡ್ಡಿ ಶೇಕಡಾ ಮಾನ ಇಂದಿಗೂ ಗಟ್ಟಿ ಅಸ್ತಿವಾರದ ಕಲ್ಲುಗಳಾಗಿವೆ. ನಾನು ಏಳನೇ ತರಗತಿಯಲ್ಲಿದ್ದಾಗ ಮಾಸ್ತರ್ ಮಗ ಆರನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದ. ಒಂದು ದಿನ ವಿರಾಮದ ವೇಳೆಯಲ್ಲಿ ನಾನು ಕ್ಲಾಸ್ ನಲ್ಲಿ ಕುಳಿತುಕೊಂಡಿದ್ದಾಗ, ಮಾಸ್ತರ್ ತನ್ನ ಮಗನನ್ನು ದರ ದರ ಎಳೆದು ಕೊಂಡು ಬಂದು ನನ್ನ ಬಳಿ ಕುಳ್ಳಿರಿಸಿ, ಸ್ವಲ್ಪ ಇವನಿಗೆ ಹೇಳಿಕೊಡು ಮಾರಾಯ. ನನಗೆ ಹೇಳಿಕೊಟ್ಟು ಸಾಕಾಯಿತು. ಲೆಕ್ಕದ ಮಾಸ್ತರ್ ಮಗನೇ ಲೆಕ್ಕದಲ್ಲಿ ಹಿಂದುಳಿದಿದ್ದ. ಲೆಕ್ಕದ ಮಾಸ್ತರ್, ಅವರ ಮಗನಿಗೆ ಲೆಕ್ಕ ಹೇಳಿಕೊಡುವುದಕ್ಕೆ ನನಗೆ ಒಪ್ಪಿಸಿದ್ದರು. ಲೆಕ್ಕದ ಮಾಸ್ತರ್ ನನಗೆ ಗುರುವಾಗಿದ್ದರೆ, ಅವರ ಮಗನಿಗೆ ತಾತ್ಕಾಲಿಕವಾಗಿ ನಾನು ಗುರುವಾದೆ. ಇಂತಹ ಆತ್ಮೀಯ ಸಂಬಂಧ ನಮ್ಮೊಳಗೆ ಇತ್ತು. ಇವರು ಎಂದಿಗೂ ನನಗೆ ಬೈದ ಹೊಡೆದ ಉದಾಹರಣೆ ಇಲ್ಲ. ಏನು ಕೆಲಸವಿದ್ದರೂ ಮೊದಲು ನನ್ನ ಮೇಲೆ ದೃಷ್ಟಿ ಬೀಳುತ್ತಿತ್ತು. ಒಂದು ಬಾರಿ ನನ್ನನ್ನೇ ಕ್ಲಾಸ್ ಲೀಡರ್ ಆಗಿ ಮಾಡಿ ಬೆನ್ನು ತಟ್ಟಿದ್ದರು. ನಾನು ಒಂಭತ್ತನೆ ತರಗತಿಯಲ್ಲಿರುವಾಗ ಇರಬೇಕು, ಇವರು ಹತ್ತಿರದ ಪೈವಳಿಕೆ ನಗರದ ಹೈಸ್ಕೂಲಿಗೆ ವರ್ಗವಾಗಿದ್ದರು. ಆಗ ಯಾವುದೋ ಕೆಲಸ ನಿಮಿತ್ತ ಆ ಶಾಲೆಗೆ ಹೋಗಿದ್ದಾಗ ಇವರು ಯಾವುದೋ ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ನನ್ನನ್ನು ಕರೆದು , ಈ ರಾಜ್ ಕುಮಾರ್ ನನ್ನ ಸ್ಟೂಡೆಂಟ್ ಅಂತ ಅಲ್ಲಿನ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದರು. ಈ ಅಭಿಮಾನ ಪ್ರೀತಿ ಎಂದೂ ಮರೆಯುವ ಹಾಗಿಲ್ಲ. ಈದೀಗ ಅದೇ ಮಾಸ್ತರ್ ವೃದ್ದರಾಗಿ ನಡುಗುತ್ತಾ ನಸು ನಗುತ್ತಾ ನಿಂತಿದ್ದಾರೆ. ನನ್ನ ಬಗ್ಗೆ ಕುಶಲ ಸಮಾಚಾರ ಕೇಳಿದರು. ಈಗಲೂ ಹೆಗಲ ಮೇಲೆ ಕೈ ಹಾಕಿ ಇನ್ನೊಂದು ಕೈಯಿಂದ ನನ್ನ ಕೈ ಹಿಡಿದು, ಏನು ಮಾಡ್ತಾ ಇದ್ದಿಯಾ? ಎಂದು ಕೇಳಿದರೆ ನನಗೆ ಕ್ಷಣಕಾಲ ಉತ್ತರ ಹೊಳೆಯಲಿಲ್ಲ. ನಾನೆಂದೆ ಬೆಂಗಳೂರಲ್ಲಿ ತೆರಿಗೆ ಸಹಾಯಕನಾಗಿ ನೀವು ಕಲಿಸಿದ ಸರಳ ಬಡ್ಡಿ ಶೇಕಡಾ ಮಾನದ ನಡುವೆ ಸುತ್ತುತ್ತಾ ಇದ್ದೇನೆ ಎಂದು ಹೇಳಿದೆ. ನಗುತ್ತಾ ಬೆನ್ನು ತಟ್ಟಿದರು.
ಆ ಹೊತ್ತಿಗೆ ಕಛೇರಿ ಒಳಗೆ ಆಫೀಸರ್ ನನ್ನನ್ನು ಕರೆದ ಕಾರಣ ನಾನು ಅವರಿಗೆ ಮತ್ತೊಮ್ಮೆ ನಮಸ್ಕರಿಸಿ ಒಳಗೆ ಹೋದೆ. ನಂತರ ಹೊರಗೆ ಬಂದಾಗ ಮಹಮ್ಮದ್ ಮಾಸ್ತರ್ ಹೊರಟು ಹೋಗಿಯಾಗಿತ್ತು. ಛೇ ಒಂದು ಸೆಲ್ಫಿ ತೆಗೆದುಕೊಳ್ಳುವುದಕ್ಕೂ ನೆನಪಾಗಿಲ್ಲವಲ್ಲಾ ಎಂದು ಕೊಂಡೆ. ಈ ಮರೆವಿನ ಬಗ್ಗೆ ನೊಂದುಕೊಂಡರೂ ಎಂದಿಗೂ ಅಚ್ಚಳಿಯದ ಶಾಲಾ ದಿನದ ನೆನಪುಗಳಲ್ಲಿ ಕೆಲವು ಪುಟಗಳು ಈ ಮಹಮ್ಮದ್ ಮಾಸ್ತರ್ ಗೆ ಮೀಸಲಾಗಿ ದಾಖಲಾಗಿ ಹೋಗಿದೆ.